ಮುಂದುವರೆದ ಭದ್ರಾ ನದಿ ಪ್ರವಾಹ : ಆತಂಕದಲ್ಲಿ ತಗ್ಗು ಪ್ರದೇಶದ ನಿವಾಸಿಗಳು
ಭದ್ರಾವತಿ ತಾಲೂಕಿನ ಆನವೇರಿ ವ್ಯಾಪ್ತಿಯಲ್ಲಿ ಮಳೆಯಿಂದ ಮನೆಗಳು ಹಾನಿಗೊಳಗಾಗಿರುವುದು.
ಭದ್ರಾವತಿ, ಜು. ೧೬ : ಕಳೆದ ಕೆಲವು ದಿನಗಳಿಂದ ತಾಲೂಕಿನಾದ್ಯಂತ ಮಳೆಯಾಗುತ್ತಿದ್ದು, ಇದುವೆರೆಗೂ ಒಟ್ಟು ೬ ಮನೆಗಳು ಸಂಪೂರ್ಣವಾಗಿ ನೆಲಸಮಗೊಂಡಿವೆ. ೧೩೭ ಮನೆಗಳು ಭಾಗಶಃ ಹಾನಿಯಾಗಿದ್ದು, ಯಾವುದೇ ಜೀವ ಹಾನಿ ಸಂಭವಿಸಿಲ್ಲ.
ಈ ಕುರಿತು ತಹಸೀಲ್ದಾರ್ ಆರ್. ಪ್ರದೀಪ್ ಮಾಹಿತಿ ನೀಡಿದ್ದು, ಮಳೆಯಿಂದ ಕಸಬಾ ಹೋಬಳಿ ವ್ಯಾಪ್ತಿಯಲ್ಲಿ ೨ ಮತ್ತು ಹೊಳೆಹೊನ್ನೂರು ಭಾಗದಲ್ಲಿ ೪ ಮನೆಗಳು ಸಂಪೂರ್ಣವಾಗಿ ಹಾನಿಯಾಗಿವೆ. ಉಳಿದಂತೆ ಕಸಬಾ ಹೋಬಳಿ ವ್ಯಾಪ್ತಿಯಲ್ಲಿ ೪೫, ಕೂಡ್ಲಿಗೆರೆ ೨೦, ಹೊಳೆಹೊನ್ನೂರು ೨೪, ಶಿವಮೊಗ್ಗ ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಆನವೇರಿಯಲ್ಲಿ ೧೬ ಮತ್ತು ಕಲ್ಲಿಹಾಳ್‌ನಲ್ಲಿ ೩೨ ಮನೆಗಳು ಭಾಗಶಃ ಹಾನಿಯಾಗಿವೆ.
ತಾಲೂಕಿನಲ್ಲಿ ಒಟ್ಟು ೪ ಕಾಳಜಿ ಕೇಂದ್ರ :
ಭದ್ರಾ ಜಲಾಶಯದಿಂದ ಹೆಚ್ಚುವರಿ ನೀರು ನದಿಗೆ ಬಿಟ್ಟಿರುವ ಹಿನ್ನಲೆಯಲ್ಲಿ ಕಳೆದ ೨ ದಿನಗಳಿಂದ ನಗರಸಭೆ ವ್ಯಾಪ್ತಿ ಹಾಗು ಗ್ರಾಮಾಂತರ ಭಾಗದ ತಗ್ಗು ಪ್ರದೇಶದಲ್ಲಿನ ಮನೆಗಳಿಗೆ ನೀರು ನುಗ್ಗಿದ್ದು, ಪ್ರವಾಹ ಪೀಡಿತ ಸಂತ್ರಸ್ಥರನ್ನು ಸುರಕ್ಷಿತ ಸ್ಥಳಗಳಿಗೆ, ಕಾಳಜಿ ಕೇಂದ್ರಗಳಿಗೆ ಸ್ಥಳಾಂತರಿಸಲಾಗಿದೆ. ಈ ಸಂಬಂಧ ತಂಡಗಳನ್ನು ರಚನೆ ಮಾಡಲಾಗಿದೆ.
ನಗರಸಭೆ ವಾರ್ಡ್ ನಂ.೨ರ ವ್ಯಾಪ್ತಿಯ ಕವಲಗುಂದಿ ತಗ್ಗು ಪ್ರದೇಶದ ೪೦ ಕುಟುಂಬದ ಒಟ್ಟು ೧೮೪ ಮಂದಿಯನ್ನು ಅಪ್ಪರ್‌ಹುತ್ತಾದಲ್ಲಿರುವ ಒಕ್ಕಲಿಗರ ಸಮುದಾಯ ಭವನದಲ್ಲಿ ತೆರೆಯಲಾಗಿರುವ ಕಾಳಜಿ ಕೇಂದ್ರಕ್ಕೆ, ಎಕಿನ್ಷಾ ಕಾಲೋನಿ ಮತ್ತು ಗುಂಡೂರಾವ್ ಶೆಡ್ ತಗ್ಗು ಪ್ರದೇಶದ ೫೦ ಕುಟುಂಬಗಳ ಒಟ್ಟು ೧೨೦ ಮಂದಿಯನ್ನು ನಗರಸಭೆ ಸಮೀಪದ ತರೀಕೆರೆ ರಸ್ತೆಯಲ್ಲಿರುವ ವಳ್ಳುವರ್ ಕಲ್ಯಾಣ ಮಂಟದಲ್ಲಿ ತೆರೆಯಲಾಗಿರುವ ಕಾಳಜಿ ಕೇಂದ್ರಕ್ಕೆ, ಹೊಳೆಹೊನ್ನೂರು ಭಾಗದ ತಗ್ಗು ಪ್ರದೇಶದ ೨೫ ಕುಟುಂಬಗಳ ಒಟ್ಟು ೧೧೦ ಮಂದಿಯನ್ನು ಬಿಸಿಎಂ ವಿದ್ಯಾರ್ಥಿ ನಿಲಯದಲ್ಲಿ ತೆರೆಯಲಾಗಿರುವ ಕಾಳಜಿ ಕೇಂದ್ರಕ್ಕೆ ಹಾಗು ಬಿ.ಎಚ್ ರಸ್ತೆ ಅಂಡರ್ ಬ್ರಿಡ್ಜ್ ಸಮೀಪದ ನಗರಸಭೆ ವಾರ್ಡ್ ನಂ.೩ರ ಅಂಬೇಡ್ಕರ್ ನಗರದ ತಗ್ಗು ಪ್ರದೇಶದ ೬೦ ಕುಟುಂಬಗಳ ಒಟ್ಟು ೨೩೦ ಮಂದಿಯನ್ನು ಹಾಲಪ್ಪ ವೃತ್ತದ ಸಮೀಪದಲ್ಲಿರುವ ಭದ್ರ ಪ್ರೌಢಶಾಲೆಯಲ್ಲಿ ತೆರೆಯಲಾಗಿರುವ ಕಾಳಜಿ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ. ಕಾಳಜಿ ಕೇಂದ್ರಗಳಲ್ಲಿ ಒಟ್ಟು ೧೭೫ ಕುಟುಂಬಗಳ ೬೪೪ ಮಂದಿ ಆಶ್ರಯ ಪಡೆದುಕೊಂಡಿದ್ದಾರೆ.
ಭದ್ರಾ ಜಲಾಶಯದಿಂದ ಹೆಚ್ಚುವರಿ ನೀರು ನದಿಗೆ ಬಿಟ್ಟಿರುವ ಹಿನ್ನಲೆಯಲ್ಲಿ ನಗರದ ಹೃದಯ ಭಾಗದಲ್ಲಿ ಪ್ರವಾಹ ಉಂಟಾಗಿದ್ದು, ಅಪಾಯದ ಮಟ್ಟ ಮೀರಿ ಹರಿಯುತ್ತಿದೆ.
ಮುಂದುವರೆದ ಪ್ರವಾಹ :
ಭದ್ರಾ ಜಲಾಶಯದಲ್ಲಿ ಹೆಚ್ಚುವರಿ ನೀರು ನದಿಗೆ ಬಿಟ್ಟ ಹಿನ್ನಲೆಯಲ್ಲಿ ಗುರುವಾರ ರಾತ್ರಿಯಿಂದ ಉಂಟಾಗಿರುವ ಪ್ರವಾಹ ಶನಿವಾರ ಸಹ ಮುಂದುವರೆದಿದ್ದು, ತಗ್ಗು ಪ್ರದೇಶದಲ್ಲಿನ ನಿವಾಸಿಗಳು ಕಾಳಜಿ ಕೇಂದ್ರಗಳಲ್ಲಿ ೨ನೇ ದಿನ ಕಾಲ ಕಳೆಯುವಂತಾಗಿದೆ.
೨ ದಿನಗಳಿಂದ ಪ್ರವಾಹ ಎದುರಾಗಿರುವ ಹಿನ್ನಲೆಯಲ್ಲಿ ಮನೆಗಳು ಕುಸಿಯುವ ಭೀತಿ ಒಂದೆಡೆ ಎದುರಾಗಿದೆ. ಮತ್ತೊಂದೆಡೆ ಜಲಾಶಯದಿಂದ ಇನ್ನೂ ಅಧಿಕ ಪ್ರಮಾಣದ ನೀರನ್ನು ಹೊರ ಬಿಟ್ಟಲ್ಲಿ ಪ್ರವಾಹ ಮತ್ತಷ್ಟು ಏರಿಕೆಯಾಗುವ ಲಕ್ಷಣಗಳು ಕಂಡು ಬರುತ್ತಿವೆ. ನಗರಸಭೆ, ತಾಲೂಕು ಪಂಚಾಯಿತಿ ಮತ್ತು ತಾಲೂಕು ಆಡಳಿತಗಳು ಪ್ರವಾಹ ಪರಿಸ್ಥಿತಿಯನ್ನು ಸಮರ್ಥವಾಗಿ ಎದುರಿಸುವಲ್ಲಿ ಯಶಸ್ವಿಯಾಗಿವೆ.
ಭದ್ರಾವತಿ ತಾಲೂಕಿನ ಆನವೇರಿ ವ್ಯಾಪ್ತಿಯಲ್ಲಿ ಮಳೆಯಿಂದ ಮನೆಗಳು ಹಾನಿಗೊಳಗಾಗಿರುವುದು.