Wednesday, July 20, 2022

ಕ್ರೆಡಿಟ್ ಆಕ್ಸಿಸ್ ಗ್ರಾಮೀಣ್ ಲಿಮಿಟೆಡ್ ವತಿಯಿಂದ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ

ವಿವಿಧ ಪೊಲೀಸ್ ಠಾಣೆಗಳಿಗೆ ಲೈವ್‌ಪ್ಯೂರ್ ವಾಟರ್ ಫ್ಯೂರಿಫೈಯರ್ ಅಳವಡಿಕೆ


ಭದ್ರಾವತಿ ನಗರಸಭೆ ವ್ಯಾಪ್ತಿಯ ಜನ್ನಾಪುರ ಕಿತ್ತೂರು ಚನ್ನಮ್ಮ ಬಡಾವಣೆ(ಕೆ.ಸಿ ಬ್ಲಾಕ್)ಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕ್ರೆಡಿಟ್ ಆಕ್ಸಿಸ್ ಗ್ರಾಮೀಣ್ ಲಿಮಿಟೆಡ್ ವತಿಯಿಂದ ಸಾಮಾಜಿಕ ಅಭಿವೃದ್ಧಿ ಕಾರ್ಯಕ್ರಮದಡಿ ನಗರದ ವಿವಿಧ ಪೊಲೀಸ್ ಠಾಣೆಗಳಿಗೆ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಿ ಕೊಡಲಾಯಿತು.
    ಭದ್ರಾವತಿ, ಜು. ೨೧: ನಗರಸಭೆ ವ್ಯಾಪ್ತಿಯ ಜನ್ನಾಪುರ ಕಿತ್ತೂರು ಚನ್ನಮ್ಮ ಬಡಾವಣೆ(ಕೆ.ಸಿ ಬ್ಲಾಕ್)ಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕ್ರೆಡಿಟ್ ಆಕ್ಸಿಸ್ ಗ್ರಾಮೀಣ್ ಲಿಮಿಟೆಡ್ ವತಿಯಿಂದ ಸಾಮಾಜಿಕ ಅಭಿವೃದ್ಧಿ ಕಾರ್ಯಕ್ರಮದಡಿ ನಗರದ ವಿವಿಧ ಪೊಲೀಸ್ ಠಾಣೆಗಳಿಗೆ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಿ ಕೊಡಲಾಯಿತು.
      ಪ್ರಮುಖ ಮೈಕ್ರೋ ಪೈನಾನ್ಸ್ ಹಣಕಾಸು ಸಂಸ್ಥೆಗಳಲ್ಲಿ ಒಂದಾಗಿರುವ ಕ್ರೆಡಿಟ್ ಆಕ್ಸಿಸ್ ಗ್ರಾಮೀಣ್ ಲಿಮಿಟೆಡ್ ವ್ಯವಹಾರದ ಜೊತೆಗೆ ಹಲವಾರು ಸಾಮಾಜಿಕ ಸೇವಾ ಕಾರ್ಯಗಳನ್ನು ಸಹ ಕೈಗೊಳ್ಳುತ್ತಿದ್ದು, ಸಾಮಾಜಿಕ ಅಭಿವೃರ್ದಧಿ ಕಾರ್ಯಕ್ರಮದಡಿ(ಸಿಎಸ್‌ಆರ್) ನಗರ ಪೊಲೀಸ್ ವೃತ್ತ ನಿರೀಕ್ಷಕರ ಕಛೇರಿ, ಹಳೇನಗರ ಪೊಲೀಸ್ ಠಾಣೆ, ಸಂಚಾರಿ ಠಾಣೆ ಮತ್ತು ನ್ಯೂಟೌನ್ ಪೊಲೀಸ್ ಠಾಣೆಗಳಿಗೆ ಉಚಿತವಾಗಿ ಲೈವ್‌ಪ್ಯೂರ್ ವಾಟರ್ ಫ್ಯೂರಿಫೈಯರ್ ಅಳವಡಿಸುವ ಮೂಲಕ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಿ ಕೊಟ್ಟಿದೆ.
      ಪೊಲೀಸ್ ಉಪಾಧೀಕ್ಷಕ, ಐಪಿಎಸ್ ಅಧಿಕಾರಿ ಜಿತೇಂದ್ರಕುಮಾರ್ ದಯಾಮಾ ಕ್ರೆಡಿಟ್ ಆಕ್ಸಿಸ್ ಗ್ರಾಮೀಣ್ ಲಿಮಿಟೆಡ್ ಸೇವಾ ಕಾರ್ಯವನ್ನು ಪ್ರಶಂಸಿ ಲೈವ್‌ಪ್ಯೂರ್ ವಾಟರ್ ಫ್ಯೂರಿಫೈಯರ್ ಸ್ವೀಕರಿಸಿದರು.
      ಲಿಮಿಟೆಡ್ ಕ್ಷೇತ್ರ ವ್ಯವಸ್ಥಾಪಕ ಎಂ.ಎಸ್ ನಟರಾಜ್, ಶಾಖಾ ವ್ಯವಸ್ಥಾಪಕ ಎಂ. ರಂಗಸ್ವಾಮಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.


ಜಯಕರ್ನಾಟಕ ಜನಪರ ವೇದಿಕೆ ಅಧ್ಯಕ್ಷರಾಗಿ ಜಗದೀಶ್

ಜಗದೀಶ್ ಅವರನ್ನು ಜಯಕರ್ನಾಟಕ ಜನಪರ ವೇದಿಕೆ ಭದ್ರಾವತಿ ತಾಲೂಕು ಘಟಕದ ನೂತನ ಅಧ್ಯಕ್ಷರಾಗಿ ನೇಮಕಗೊಳಿಸಿ ಜಿಲ್ಲಾಧ್ಯಕ್ಷ ಎಸ್.ಕೆ ರಘುವೀರ್ ಸಿಂಗ್ ಆದೇಶ ಪತ್ರ ವಿತರಿಸಿದರು.
    ಭದ್ರಾವತಿ, ಜು. ೨೦: ನಗರದ ಬಿ.ಎಚ್ ರಸ್ತೆ ೧ನೇ ತಿರುವಿನ ನಿವಾಸಿ ಜಗದೀಶ್ ಅವರನ್ನು ಜಯಕರ್ನಾಟಕ ಜನಪರ ವೇದಿಕೆ ತಾಲೂಕು ಘಟಕದ ನೂತನ ಅಧ್ಯಕ್ಷರಾಗಿ ನೇಮಕಗೊಳಿಸಲಾಗಿದೆ.
      ಮಿಲ್ಟ್ರಿಕ್ಯಾಂಪ್‌ನಲ್ಲಿರುವ ಲೋಕೋಪಯೋಗಿ ಪ್ರವಾಸಿ ಮಂದಿರದ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಜಿಲ್ಲಾಧ್ಯಕ್ಷ ಎಸ್.ಕೆ ರಘುವೀರ್ ಸಿಂಗ್ ಜಗದೀಶ್ ಅವರನ್ನು ನೇಮಕಗೊಳಿಸಿ ಆದೇಶ ಪತ್ರ ವಿತರಿಸಿ ಮಾತನಾಡಿದರು.
      ಸಾಮಾಜಿಕ ಕಳಕಳಿಯೊಂದಿಗೆ ಅಶಕ್ತ ಜನರ ಧ್ವನಿಯಾಗಿ ಹೋರಾಟ ನಡೆಸುವ ಜೊತೆಗೆ ಸಂಘಟನೆಯನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ವೇದಿಕೆಯಲ್ಲಿರುವ ಪ್ರತಿಯೊಬ್ಬರು ಶ್ರಮಿಸಬೇಕೆಂದರು.
      ವೇದಿಕೆ ರಾಜ್ಯ ಯುವ ಸಂಸ್ಥಾಪಕರಾದ ಬಿ. ಗುಣರಂಜನ್ ಶೆಟ್ಟಿ ಹಾಗು ರಾಜ್ಯಾಧ್ಯಕ್ಷ ಆರ್. ಚಂದ್ರಪ್ಪನವರ ಸಲಹೆ ಮೇರೆಗೆ ತಾಲೂಕು ಅಧ್ಯಕ್ಷರ ಜವಾಬ್ದಾರಿಯನ್ನು ವಹಿಸಿಕೊಡಲಾಗುತ್ತಿದೆ. ಎಲ್ಲರ ಸಹಕಾರ ಪಡೆದು ವೇದಿಕೆಯನ್ನು ಯಶಸ್ವಿಯಾಗಿ ಮುನ್ನಡೆಸಿಕೊಂಡು ಹೋಗುವಂತೆ ಸಲಹೆ ನೀಡಿದರು.
      ವೇದಿಕೆ ಪ್ರಮುಖರಾದ ಜಿಲ್ಲಾ ಮುಖಂಡ, ನಗರಸಭೆ ಮಾಜಿ ಸದಸ್ಯ ಫ್ರಾನ್ಸಿಸ್, ಜಿಲ್ಲಾ ಕಾರ್ಯದರ್ಶಿ ಪ್ರಮೋದ್, ಪ್ರಸನ್ನ, ಸುಬ್ಬು, ಶಶಿಕುಮಾರ್, ಪ್ರವೀಣ್, ರಘು, ರಾಜೇಶ್, ಮದನ್, ಪ್ರಮೋದ್, ಪ್ರಸನ್ನ ಸೇರಿದಂತೆ ವೇದಿಕೆ ಕಾರ್ಯಕರ್ತರು ಉಪಸ್ಥಿತರಿದ್ದರು.

ಮಣಿಪಾಲ ಆರೋಗ್ಯಕಾರ್ಡ್ ನೋಂದಣಿ ಆರಂಭ : ಸದುಪಯೋಗಪಡೆದುಕೊಳ್ಳಿ

ಕಸ್ತೂರ್ಬಾ ಆಸ್ಪತ್ರೆ ಮಣಿಪಾಲದ ಮಾರುಕಟ್ಟೆ ವಿಭಾಗದ ವ್ಯವಸ್ಥಾಪಕರಾದ ಮೋಹನ್ ಶೆಟ್ಟಿ

ಪ್ರಸಕ್ತ ಸಾಲಿನ ಮಣಿಪಾಲ್‌ ಆರೋಗ್ಯಕಾರ್ಡ್‌ ನೋಂದಣಿ ಪ್ರಾರಂಭ ಕುರಿತು ಭದ್ರಾವತಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಕಸ್ತೂರ್ಬಾ ಆಸ್ಪತ್ರೆ ಮಣಿಪಾಲದ ಮಾರುಕಟ್ಟೆ ವಿಭಾಗದ ವ್ಯವಸ್ಥಾಪಕ ಮೋಹನ್ ಶೆಟ್ಟಿ ಮಾಹಿತಿ ನೀಡಿದರು.
    ಭದ್ರಾವತಿ, ಜು. ೨೦: ಸಾರ್ವಜನಿಕರಿಗೆ ಗುಣಮಟ್ಟದ ಆರೋಗ್ಯ ಚಿಕಿತ್ಸೆಯನ್ನು ಕೈಗೆಟುಕುವಂತೆ ಮಾಡುವ ಉದ್ದೇಶದಿಂದ ಮಣಿಪಾಲ್‌ ಆರೋಗ್ಯಕಾರ್ಡ್‌ ಪ್ರಾರಂಭಿಸಲಾಗಿದೆ.  "ಸಂಪೂರ್ಣ ಕುಟುಂಬಕ್ಕಾಗಿ ಶ್ರೇಷ್ಠ ಮೌಲ್ಯ ಮತ್ತು ವಿಶ್ವಾಸಾರ್ಹ ಸೇವೆ" ಎಂಬುದು ಇದರ ಧ್ಯೇಯ ವಾಕ್ಯವಾಗಿದ್ದು, ಪ್ರಸಕ್ತ ಸಾಲಿನ ನೋಂದಣಿ ಪ್ರಾರಂಭವಾಗಿದೆ. ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಕಸ್ತೂರ್ಬಾ ಆಸ್ಪತ್ರೆ ಮಣಿಪಾಲದ ಮಾರುಕಟ್ಟೆ ವಿಭಾಗದ ವ್ಯವಸ್ಥಾಪಕ ಮೋಹನ್ ಶೆಟ್ಟಿ ಮನವಿ ಮಾಡಿದರು.
      ಅವರು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಮಣಿಪಾಲ್ ಆರೋಗ್ಯಕಾರ್ಡ್(ಎಂಎಸಿ) ಆಸ್ಪತ್ರೆಯ ಎಲ್ಲಾ ಆರೋಗ್ಯ ಸೇವೆಗಳ ಮೇಲೆ ರಿಯಾಯಿತಿ ನೀಡುತ್ತದೆ. ಈ ಕಾರ್ಡ್‌ ಪಡೆಯುವ ಮೂಲಕ ಯಾರಾದರೂ ಸದಸ್ಯರಾಗಬಹುದು ಮತ್ತು ಪ್ರಯೋಜನಗಳನ್ನು ಪಡೆಯಬಹುದು. ಅವಿಭಾಜಿತ ದಕ್ಷಿಣ ಕನ್ನಡ ಜಿಲ್ಲೆಯ ಜನರಿಗಾಗಿ ಆರಂಭಿಸಿದ ಈ ಸೇವೆ ಪ್ರಸ್ತುತ ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಹಾವೇರಿ, ದಾವಣಗೆರೆ, ಚಿತ್ರದುರ್ಗ, ಶಿವಮೊಗ್ಗ, ಚಿಕ್ಕಮಗಳೂರು, ಉತ್ತರ ಕನ್ನಡ, ಬಳ್ಳಾರಿ ಸೇರಿದಂತೆ ಕರಾವಳಿ ಕರ್ನಾಟಕದ ಮತ್ತು ಮಧ್ಯ ಕರ್ನಾಟಕದ ಸುಮಾರು 12ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಹಾಗು ಕೇರಳ, ಗೋವಾದಂತಹ ನೆರೆ ರಾಜ್ಯಗಳಲ್ಲೂ ಸೇವೆ ವಿಸ್ತರಿಸಿ ಕೊಂಡಿದೆ ಎಂದರು.
      ಒಂದು  ವರ್ಷದ ಅವಧಿಯ ಕಾರ್ಡ್‌ ಸದಸ್ಯತ್ವ ಒಬ್ಬರಿಗೆ ರು. 300,  ಕೌಟಂಬಿಕ ಕಾರ್ಡ್ ಅಂದರೆ ಕಾರ್ಡುದಾರ, ಅವರ ಸಂಗಾತಿ, 25 ವರ್ಷದ ಒಳಗಿನ ಮಕ್ಕಳಿಗೆ ರು. 600 ಮತ್ತು ಕುಟುಂಬ ಪ್ಲಸ್ ಕಾರ್ಡ್ ಅಂದರೆ ಕಾರ್ಡುದಾರ, ಅವರ ಸಂಗಾತಿ, 25 ವರ್ಷದ ಒಳಗಿನ ಮಕ್ಕಳು ಮತ್ತು 4 ಪೋಷಕರು (ತಂದೆ, ತಾಯಿ, ಅತ್ತೆ ಮತ್ತು ಮಾವ) ರು. 750 ನಿಗದಿಪಡಿಸಲಾಗಿದೆ.  2 ವರ್ಷದ ಅವಧಿಗೆ ಒಬ್ಬರಿಗೆ ರು. 500, ಕುಟುಂಬಕ್ಕೆ ರು. 800 ಮತ್ತು ಕೌಟಂಬಿಕ ಪ್ಲಸ್ ಕಾರ್ಡ್‌ಗೆ ರು. 950 ಆಗಿರುತ್ತದೆ ಎಂದರು.
      ಮಣಿಪಾಲ ಆರೋಗ್ಯಕಾರ್ಡ್ ಹೊಂದಿರುವವರು ತಜ್ಞ ಅಥವಾ ಸೂಪರ್ ಸ್ಪೆಷಲಿಸ್ಟ್ ವೈದ್ಯರ ಸಮಾಲೋಚನೆಯಲ್ಲಿ ಶೇ. 50, ಪ್ರಯೋಗಾಲಯ ಪರೀಕ್ಷೆಯಲ್ಲಿ ಶೇ. 30, ಸಿಟಿ, ಎಂಆರ್ಐ, ಅಲ್ಟ್ರಾಸೌಂಡ್ ಗಳಲ್ಲಿ  ಶೇ. 20, ಹೊರರೋಗಿ ವಿಧಾನಗಳಲ್ಲಿ ಮತ್ತು ಮಧುಮೇಹ ಪಾದ ತಪಾಸಣೆಯಲ್ಲಿ ಶೇ.20, ಔಷಧಾಲಯಗಳಲ್ಲಿ ಶೇ. 12, ಸಾಮಾನ್ಯ ವಾರ್ಡಿನಲ್ಲಿ ಒಳರೋಗಿಯಾದಲ್ಲಿ ಉಪಯೋಗವಾಗುವ ವಸ್ತುಗಳನ್ನು ಹೊರತುಪಡಿಸಿ ಶೇ. 25 ಮತ್ತು ಕೋವಿಡ್ ರೋಗಿಗಳಿಗೆ ಜನರಲ್ ವಾರ್ಡ್ ನಲ್ಲಿ ರೋಗಿಗಳಿಗೆ ಸರ್ಕಾರದ ಅನುಮೋದಿತ ಪ್ಯಾಕೇಜ್ ಮೇಲೆ ಶೇ. 10ರಷ್ಟು ರಿಯಾಯಿತಿ ಪಡೆಯಬಹುದಾಗಿದೆ ಎಂದರು.
      ಮಣಿಪಾಲ್‌ ಆರೋಗ್ಯಕಾರ್ಡ್‌ ಪಡೆಯಲಿಚ್ಛಿಸುವವರು ನಗರದ ವಿ.ಪ್ರ ಸೌಹರ್ದ ಮೊ: 9739080599, ಎಂ ಜಿ ಸುರೇಶ್ ಮೊ: 9845681363, ಡಿ ಶಬರಿವಾಸನ್, ಮೊ : 9035616188, ರಾಜೇಶ್ ಮೊ: 9448062523 ಮತ್ತು ಮಧು, ಮೊ: 9731247134 ಹಾಗು ಶಿವಮೊಗ್ಗದಲ್ಲಿ ಎ ಎನ್ ವಿಜೇಂದ್ರ ರಾವ್ ಮೊ: 9448790127. ಅವರನ್ನು ಹಾಗು ಕಾರ್ಡಿನ ಪ್ರತಿನಿಧಿಯಾಗಬೇಕಾದಲ್ಲಿ ಅನಿಲ್ ನಾಯ್ಕ್ ಮೊ: 9740618912 ಅವರನ್ನು ಸಂಪರ್ಕಿಸಬಹುದಾಗಿದೆ.
      ಪತ್ರಿಕಾಗೋಷ್ಟಿಯಲ್ಲಿ ಕಸ್ತೂರ್ಬಾ ಆಸ್ಪತ್ರೆ ಮಣಿಪಾಲದ ಮಾರುಕಟ್ಟೆ ವಿಭಾಗದ ಪ್ರತಿನಿಧಿ ಶ್ರೀನಿವಾಸ್ ಭಾಗವತ್, ಡಿ. ಶಬರಿವಾಸನ್‌, ರಾಜೇಶ್‌, ಆದರ್ಶ್‌ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.  

Tuesday, July 19, 2022

‎ಮಣ್ಣು ಕುಸಿತಗೊಂಡ ಭದ್ರಾ ಜಲಾಶಯ ಮುಖ್ಯ ಕಾಲುವೆ ಸ್ಥಳಕ್ಕೆ ಪವಿತ್ರ ರಾಮಯ್ಯ ಭೇಟಿ

ಸರ್ಕಾರದಿಂದ 2.15 ಕೋಟಿ ಬಿಡುಗಡೆ ಮಳೆ ಕಾಲ ಮುಕ್ತಾಯಗೊಂಡ ನಂತರ ಕಾಮಗಾರಿ ಆರಂಭ

ಭದ್ರಾವತಿ, ಜು. 19: ಭದ್ರಾ ಜಲಾಶಯ ಸಮೀಪ ಮುಖ್ಯ ಕಾಲುವೆಯಲ್ಲಿ ಮಣ್ಣು ಕುಸಿತಗೊಂಡಿರುವ ಸ್ಥಳಕ್ಕೆ ಮಂಗಳವಾರ ಭದ್ರಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷೆ ಪವಿತ್ರ ರಾಮಯ್ಯ ಸಂಬಂಧ ಪಟ್ಟ ಅಧಿಕಾರಿಗಳೊಂದಿಗೆ  ಭೇಟಿ ನೀಡಿ ಪರಿಶೀಲನೆ ನಡೆಸಿದರು.
     ದುರಸ್ತಿ   ಕಾಮಗಾರಿಗೆ ಸರಕಾರದಿಂದ 2.15 ಕೋ. ರು. ಬಿಡುಗಡೆಯಾಗಿದ್ದು, ಜಲಾಶಯದ ಕ್ರಸ್ಟ್ ಗೇಟ್ ಗಳ ಮೂಲಕ  ಹೆಚ್ಚಿನ ನೀರು ನದಿಗೆ ಹರಿಯುತ್ತಿರುವುದರಿಂದ ತಕ್ಷಣ ಕಾಮಗಾರಿಯನ್ನು ಪ್ರಾರಂಭಿಸಲು ಸಾಧ್ಯವಾಗುತ್ತಿಲ್ಲ.  ಮಳೆಗಾಲ ಕಳೆದ ಕೂಡಲೇ ಕಾಮಗಾರಿಯನ್ನು ಪ್ರಾರಂಭಿಸುವುದರಿಂದ ತಿಳಿಸಿದರು. 
      ಜಲಾಶಯ ತುಂಬಿ ಹರಿಯುತ್ತಿರುವ ಹಿನ್ನೆಲೆಯಲ್ಲಿ ಪ್ರವಾಸಿಗರು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದು,  ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಮಣ್ಣು ಕುಸಿತಗೊಂಡಿರುವ ಸ್ಥಳದಲ್ಲಿ ಬ್ಯಾರಿಕೇಡ್ ಅಳವಡಿಕೆ ಸೇರಿದಂತೆ ಸೂಚನಾ ಫಲಕ ಹಾಗೂ ಸಿಬ್ಬಂದಿಯನ್ನು ನೇಮಕ ಮಾಡಲು ಅಗತ್ಯ ಮುನ್ನೆಚ್ಚರಿಕೆ ಕ್ರಮಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.
      ಭದ್ರಾ ಜಲಾಶಯದ  ಕಾರ್ಯಪಾಲಕ ಅಭಿಯಂತರ ಜಗದೀಶ್  ಸೇರಿದಂತೆ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.

ಸರ್ಕಾರಿ ಅಧಿಕಾರಿಗಳು, ಸಿಬ್ಬಂದಿಗಳು ತಮ್ಮ ಕೆಲಸಗಳನ್ನು ನಿಗದಿತ ಸಮಯದಲ್ಲಿ ಮುಕ್ತಾಯಗೊಳಿಸಿ

ಅರಿವು ಕಾರ್ಯಕ್ರಮದಲ್ಲಿ ಲೋಕಾಯುಕ್ತ ಪೊಲೀಸ್ ಉಪಾಧೀಕ್ಷಕ ಮೃತ್ಯುಂಜಯ

ಭದ್ರಾವತಿ ರೋಟರಿ ಕ್ಲಬ್  ಸಭಾಂಗಣದಲ್ಲಿ ಆಯೋಜಿಸಲಾಗಿದ್ದ  ಕರ್ನಾಟಕ ಲೋಕಸೇವಾ ಆಯೋಗ ೧೯೮೪ ಕಾಯ್ದೆ ಅರಿವು ಕಾರ್ಯಕ್ರಮ   ಜೆಎಂಎಫ್‌ಸಿ ನ್ಯಾಯಾಲಯದ ನ್ಯಾಯಾಧೀಶರಾದ ಉಜ್ವಲ ವೀರಣ್ಣ ಸಿದ್ದಣ್ಣನವರ್ ಉದ್ಘಾಟಿಸಿದರು.
    ಭದ್ರಾವತಿ, ಜು. ೧೯: ಸರ್ಕಾರಿ ಅಧಿಕಾರಿಗಳು, ಸಿಬ್ಬಂದಿಗಳು ತಮ್ಮ ಕೆಲಸಗಳನ್ನು ವಿಳಂಬ ಮಾಡದೆ ನಿಗದಿತ ಸಮಯದಲ್ಲಿ ಮುಕ್ತಾಯಗೊಳಿಸಬೇಕೆಂದು ಲೋಕಾಯುಕ್ತ ಪೊಲೀಸ್ ಉಪಾಧೀಕ್ಷಕ ಮೃತ್ಯುಂಜಯ ಹೇಳಿದರು.
      ಅವರು ನ್ಯೂಟೌನ್ ಉಂಬ್ಳೆಬೈಲು ರಸ್ತೆಯಲ್ಲಿರುವ ರೋಟರಿ ಕ್ಲಬ್ ಸಭಾಂಗಣದಲ್ಲಿ ಕರ್ನಾಟಕ ಕಾನೂನು ಸೇವೆಗಳ ಪ್ರಾಧಿಕಾರ, ವಕೀಲರ ಸಂಘ, ಲೋಕಾಯುಕ್ತ ಕಚೇರಿ ಹಾಗೂ ಕಂದಾಯ ಇಲಾಖೆ ಸಹಯೋಗದೊಂದಿಗೆ ಹಮ್ಮಿಕೊಳ್ಳಲಾಗಿದ್ದ  ಕರ್ನಾಟಕ ಲೋಕಸೇವಾ ಆಯೋಗ ೧೯೮೪ ಕಾಯ್ದೆ ಕುರಿತು ವಿವಿಧ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿಗಳಿಗೆ ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.  
      ಅಧಿಕಾರಿಗಳು, ಸಿಬ್ಬಂದಿಗಳು ಕೆಸಿಎಸ್‌ಆರ್ ಪ್ರಕಾರ ಕರ್ತವ್ಯ ನಿರ್ವಹಿಸಬೇಕು. ಯಾವದೇ ಕೆಲಸವನ್ನು ಕೊನೆಯ ದಿನದವರೆಗೂ ಕಾಯ್ದಿರಿಸಬಾರದು. ತಮ್ಮ ಕರ್ತವ್ಯದಲ್ಲಿ ಎಲ್ಲೂ ಸಹ ಲೋಪವಾಗದಂತೆ ಎಚ್ಚರವಹಿಸಬೇಕು. ಇತ್ತೀಚಿನ ಆಡಳಿತ ಸಾಕಷ್ಟು ಸುಧಾರಣೆಯಾಗಿದೆ ಎಂದರು.
      ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ನಗರದ ಜೆಎಂಎಫ್‌ಸಿ ನ್ಯಾಯಾಲಯದ ನ್ಯಾಯಾಧೀಶರಾದ ಉಜ್ವಲ ವೀರಣ್ಣ ಸಿದ್ದಣ್ಣನವರ್,  ಇತ್ತೀಚಿನ ದಿನಗಳಲ್ಲಿ ಸರ್ಕಾರಿ ನೌಕರಿ ಸಿಗುವುದೇ ಕಷ್ಟವಾಗಿದೆ. ಇಂತಹ ಸಂದರ್ಭದಲ್ಲಿ ಆ ನೌಕರಿಗೆ ಚ್ಯುತಿ ಬರದಂತೆ ಜವಾಬ್ದಾರಿಯುತವಾಗಿ, ಕಾನೂನಿನ ಚೌಕಟ್ಟಿನಲ್ಲಿ, ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸಬೇಕೆಂದರು.
      ತಾಲೂಕು ಪಂಚಾಯತಿ ಕಾರ್ಯನಿರ್ವಹಣಾಧಿಕಾರಿ ರಮೇಶ್ ಅಧ್ಯಕ್ಷತೆ ವಹಿಸಿದ್ದರು. ಪೌರಾಯುಕ್ತ ಮನುಕುಮಾರ್, ವಕೀಲರ ಸಂಘದ ಉಪಾಧ್ಯಕ್ಷ ಡಿ.ಎಂ ವಿಶ್ವನಾಥ್, ರೋಟರಿ ಕ್ಲಬ್ ಅಧ್ಯಕ್ಷ ಅಡವೀಶಯ್ಯ, ತಹಸೀಲ್ದಾರ್ ಗ್ರೇಡ್-೨ ರಂಗಮ್ಮ, ಸರ್ಕಾರಿ ಅಭಿಯೋಜಕ ತ್ಯಾಗರಾಜ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
      ದಾಸರಕಲ್ಲಹಳ್ಳಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಶಿವಾಜಿ ನಿರೂಪಿಸಿದರು. ತಾಲೂಕು ಪಂಚಾಯಿತಿ ಅಧಿಕಾರಿ ಉಪೇಂದ್ರ ಸ್ವಾಗತಿಸಿ, ಬಾರಂದೂರು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಪ್ರಕಾಶ್ ವಂದಿಸಿದರು.  ವಿವಿಧ ಇಲಾಖಾ ಅಧಿಕಾರಿಗಳು, ಸಿಬ್ಬಂದಿಗಳು ಪಾಲ್ಗೊಂಡಿದ್ದರು.  


‎ ಮುಂಗಾರು ಸಂಭ್ರಮ : 26 ಕವಿಗಳಿಂದ ಸ್ವ ರಚಿತ ಕವನ ವಾಚನ



ಭದ್ರಾವತಿ, ಜು. 19: ಸಿದ್ದಾರೂಢ ನಗರದ ಹೆಬ್ಬೂರು ಮಹಾವಿದ್ಯಾಲಯದ  ಡಿ ಕೆ ಶಿವಕುಮಾರ್ ಬಿ.ಎಡ್ ಕಾಲೇಜಿನಲ್ಲಿ ಮಂಗಳವಾರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಆಯೋಜಿಸಲಾಗಿದ್ದ ಮುಂಗಾರು ಸಂಭ್ರಮ ಕವಿಗೋಷ್ಠಿಯಲ್ಲಿ 26 ಕವಿಗಳು ಪಾಲ್ಗೊಳ್ಳುವ ಮೂಲಕ ಗಮನ ಸೆಳೆದರು.
       ಮುಂಗಾರು ಮಳೆ, ಪ್ರವಾಹ,  ಮಾತೃ ಮಮತೆ ಮತ್ತು ಪ್ರಕೃತಿ ಸೊಬಗು ಕುರಿತ  ತಮ್ಮ ಸ್ವ ರಚಿತ ಕವನ ವಾಚಿಸಿದರು.  ಕನ್ನಡ ಸಾಹಿತ್ಯ ಪರಿಷತ್ತು ನಿರಂತರವಾಗಿ ಶಾಲಾ ಕಾಲೇಜುಗಳಲ್ಲಿ ಸಾಹಿತ್ಯ ಚಟುವಟಿಕೆಗಳನ್ನು  ಆಯೋಜಿಸಿಕೊಂಡು ಬರುತ್ತಿದೆ. ವಿದ್ಯಾರ್ಥಿಗಳಲ್ಲೂ ಸಾಹಿತ್ಯ ಚಟುವಟಿಕೆಗಳ ಕುರಿತು ಆಸಕ್ತಿ ಮೂಡಿಸುವುದು ಪರಿಷತ್ ಉದ್ದೇಶವಾಗಿದೆ. 
      ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ ನಾಗೇಂದ್ರಪ್ಪ  ಚುಟುಕು ಕವನ ವಾಚಿಸುವ ಮೂಲಕ ಕವಿಗೋಷ್ಠಿ ಉದ್ಘಾಟಿಸಿದರು. ಪರಿಷತ್ ತಾಲೂಕು ಅಧ್ಯಕ್ಷ ಕೋಗಲೂರು ತಿಪ್ಪೇಸ್ವಾಮಿ ಅಧ್ಯಕ್ಷತೆ ವಹಿಸಿದ್ದರು.
     ಹೆಬ್ಬೂರು ಮಹಾವಿದ್ಯಾಲಯದ ಸಲಹಾ ಮಂಡಳಿ ಅಧ್ಯಕ್ಷ  ಮೋಹನ್, ಪ್ರಾಂಶುಪಾಲ ಪಾಲಾಕ್ಷ,  ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ ಅಧ್ಯಕ್ಷೆ ಎಂ.ಎಸ್  ಸುಧಾಮಣಿ, ಪರಿಷತ್ ಕಾರ್ಯದರ್ಶಿಗಳಾದ ಟಿ. ತಿಮ್ಮಪ್ಪ, ಜಗದೀಶ್, ಮಾಯಮ್ಮ, ಕಮಲಕರ, ಹಿರಿಯ ಸಾಹಿತಿಗಳಾದ ಜೆ. ಎನ್ ಬಸವರಾಜಪ್ಪ, ಕಾಂತಪ್ಪ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.  

‎ ನಿರಂತರ ಮಳೆಗೆ ಗ್ಯಾರೇಜ್ ಕ್ಯಾಂಪ್ನಲ್ಲಿ ಮನೆಗಳ ಗೋಡೆ ಕುಸಿತ : ತಹಶೀಲ್ದಾರ್ ನೇತೃತ್ವದ ತಂಡ ಪರಿಶೀಲನೆ

ಭದ್ರಾವತಿ, ಜು. 19: ಕಳೆದ ಸುಮಾರು ಒಂದು ವಾರದಿಂದ ನಿರಂತರವಾಗಿ ಸುರಿದ ಮಳೆಯಿಂದಾಗಿ ತಾಲೂಕಿನ ಸಿಂಗಮನೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಗ್ಯಾರೇಜ್ ಕ್ಯಾಂಪ್ ಗ್ರಾಮದಲ್ಲಿ ಕೆಲವು ಮನೆಗಳ ಗೋಡೆಗಳು ಕುಸಿದು ಬಿದ್ದಿವೆ. 
    ಗ್ರಾಮದ ಕುಲಮೆ ಗಣೇಶ್,  ತಂಗರಾಜ್ ಹಾಗೂ ಸುಲೇಮಾನ್ ರವರ ಮನೆಗಳ ಗೋಡೆಗಳು ಕುಸಿದು ಬಿದ್ದಿವೆ.    ತಹಸೀಲ್ದಾರ್  ಆರ್ ಪ್ರದೀಪ್, ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಕವಿತಾ ರುದ್ರೇಶ್  ಹಾಗೂ ವಾರ್ಡ್ ಸದಸ್ಯೆ ಮಂಜುಳಾ ಮಂಜುನಾಥ್, ಗ್ರಾಮ ಲೆಕ್ಕಾಧಿಕಾರಿ ಹಾಗೂ ರಾಜಸ್ವ ನಿರೀಕ್ಷಕರನ್ನೊಳಗೊಂಡ ತಂಡ  ಭೇಟಿ ನೀಡಿ ಪರಿಶೀಲನೆ ನಡೆಸಿತು.