ಮಂಗಳವಾರ, ಜುಲೈ 26, 2022

ಅಂಗಡಿ ಮುಂಗಟ್ಟುಗಳ ಮೇಲೆ ದಾಳಿ : ನಿಷೇಧಿತ ಪ್ಲಾಸ್ಟಿಕ್ ವಶ

ಭದ್ರಾವತಿ ನಗರಸಭೆ ವ್ಯಾಪ್ತಿಯಲ್ಲಿ ಅಂಗಡಿ ಮುಂಗಟ್ಟುಗಳ ಮೇಲೆ ದಾಳಿ ನಡೆಸಿ ನಿಷೇಧಿತ ಪ್ಲಾಸ್ಟಿಕ್ ವಶಪಡಿಸಿಕೊಂಡು ದಂಡ ವಿಧಿಸಿರುವ ಘಟನೆ ನಡೆದಿದೆ.
    ಭದ್ರಾವತಿ, ಜು. ೨೬: ನಗರಸಭೆ ವ್ಯಾಪ್ತಿಯಲ್ಲಿ ಅಂಗಡಿ ಮುಂಗಟ್ಟುಗಳ ಮೇಲೆ ದಾಳಿ ನಡೆಸಿ ನಿಷೇಧಿತ ಪ್ಲಾಸ್ಟಿಕ್ ವಶಪಡಿಸಿಕೊಂಡು ದಂಡ ವಿಧಿಸಿರುವ ಘಟನೆ ನಡೆದಿದೆ.
    ಶಿವಮೊಗ್ಗ ಪರಿಸರ ಇಲಾಖೆ ಅಧಿಕಾರಿಗಳೊಂದಿಗೆ ಮಂಗಳವಾರ ನಗರದ ಸಿ.ಎನ್ ರಸ್ತೆ, ಭೂತನಗುಡಿ ವ್ಯಾಪ್ತಿಯಲ್ಲಿ ಅಂಗಡಿ ಮುಂಗಟ್ಟುಗಳ ಮೇಲೆ ದಾಳಿ ನಡೆಸಲಾಯಿತು.
    ನಗರಸಭೆ ಪರಿಸರ ಅಭಿಯಂತರ ಪ್ರಭಾಕರ್, ಹಿರಿಯ ಆರೋಗ್ಯ ನಿರೀಕ್ಷಕರಾದ ಆರ್.ಬಿ ಸತೀಶ್, ಆಶಾಲತಾ ಸೇರಿದಂತೆ ಇನ್ನಿತರರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. ಸರ್ಕಾರ ಜು.೧ರಿಂದ ರಾಜ್ಯಾದ್ಯಂತ ಪ್ಲಾಸ್ಟಿಕ್ ಸಂಪೂರ್ಣವಾಗಿ ನಿಷೇಧಿಸಿ ಆದೇಶ ಹೊರಡಿಸಿದ್ದು, ನಗರಸಭೆ ಅಧಿಕಾರಿಗಳು ಪ್ರತಿದಿನ ದಾಳಿ ಕಾರ್ಯಾಚರಣೆ ಕೈಗೊಳ್ಳುತ್ತಿದ್ದಾರೆ. ಆದರೂ ಸಹ ಪ್ಲಾಸ್ಟಿಕ್ ಬಳಕೆ ಮುಂದುವರೆದಿದೆ.

ಸೋಮವಾರ, ಜುಲೈ 25, 2022

ಜು.೨೬ರಂದು ವಿದ್ಯುತ್ ವ್ಯತ್ಯಯ

    ಭದ್ರಾವತಿ, ಜು. ೨೫: ಮೆಸ್ಕಾಂ ನಗರ ಉಪವಿಭಾಗ ಘಟಕ-೨ರ ವ್ಯಾಪ್ತಿಯಲ್ಲಿ ತುರ್ತು ನಿರ್ವಹಣಾ ಕಾರ್ಯ ಹಮ್ಮಿಕೊಂಡಿರುವುದರಿಂದ ಜು.೨೬ರಂದು ಬೆಳಿಗ್ಗೆ ೯ ಗಂಟೆಯಿಂದ ಸಂಜೆ ೬.೩೦ರ ವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.
    ಹಳೇನಗರ, ಬಸವೇಶ್ವರ ವೃತ್ತ, ಖಾಜಿ ಮೊಹಲ್ಲಾ, ಭೂತನಗುಡಿ, ನಗರಸಭೆ ಕಛೇರಿ ಸುತ್ತಮುತ್ತಲ ಪ್ರದೇಶ, ಸಿ.ಎನ್ ರಸ್ತೆ, ಗಾಂಧಿನಗರ, ಕೋಡಿಹಳ್ಳಿ, ಮಾಧವಚಾರ್ ವೃತ್ತ, ಸರ್ಕಾರಿ ಅಸ್ಪತ್ರೆ, ಮಾಧವ ನಗರ, ಗೌರಾಪುರ, ಎನ್.ಎಸ್.ಟಿ ರಸ್ತೆ ಸೇರಿದಂತೆ ಇತ್ಯಾದಿ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ಸಾರ್ವಜನಿಕರು ಸಹಕರಿಸುವಂತೆ ಮೆಸ್ಕಾಂ ನಗರ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಕೋರಿದ್ದಾರೆ.

ಸಮಾಜದ ಅಭಿವೃದ್ಧಿಯಲ್ಲಿ ಪತ್ರಕರ್ತರ ಪಾತ್ರ ಪ್ರಮುಖ : ಬಿ.ಕೆ ಸಂಗಮೇಶ್ವರ್

ಭದ್ರಾವತಿ ನ್ಯೂಟೌನ್ ಸರ್.ಎಂ.ವಿ ಸರ್ಕಾರಿ ಕಲಾ ಮತ್ತು ವಾಣಿಜ್ಯ ಕಾಲೇಜಿನಲ್ಲಿ ಐ.ಕ್ಯೂ.ಎ.ಸಿ ಅಡಿಯಲ್ಲಿ ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘ ತಾಲೂಕು ಶಾಖೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಪತ್ರಿಕಾ ದಿನಾಚರಣೆಯಲ್ಲಿ ಹಿರಿಯ ಪತ್ರಕರ್ತ ಶೈಲೇಶ್ ಕೋಠಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
    ಭದ್ರಾವತಿ, ಜು. ೨೫: ಸಮಾಜವನ್ನು ಎಚ್ಚರಿಸುವ ಕೆಲಸ ಪತ್ರಕರ್ತರು ಮಾಡುತ್ತಿದ್ದು, ಅಲ್ಲದೆ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆಂದು ಶಾಸಕ ಬಿ.ಕೆ ಸಂಗಮೇಶ್ವರ್ ಹೇಳಿದರು.
    ಅವರು ಸೋಮವಾರ ನಗರದ ನ್ಯೂಟೌನ್ ಸರ್.ಎಂ.ವಿ ಸರ್ಕಾರಿ ಕಲಾ ಮತ್ತು ವಾಣಿಜ್ಯ ಕಾಲೇಜಿನಲ್ಲಿ ಐ.ಕ್ಯೂ.ಎ.ಸಿ ಅಡಿಯಲ್ಲಿ ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘ ತಾಲೂಕು ಶಾಖೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಪತ್ರಿಕಾ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.
    ೪ನೇ ಅಂಗವಾಗಿ ಗುರುತಿಸಿಕೊಂಡಿರುವ ಪತ್ರಿಕಾರಂಗ ತನ್ನದೇ ಆದ ಮೌಲ್ಯಗಳನ್ನು ಹೊಂದುವ ಜೊತೆಗೆ ಸಮಾಜದಲ್ಲಿನ ಅಂಕು ಡೊಂಕುಗಳನ್ನು ತಿದ್ದುವಲ್ಲಿ ಇಂದಿಗೂ ಬದ್ದತೆ ಕಾಯ್ದುಕೊಂಡು ಬಂದಿದೆ ಎಂದರು.
    ಸಂಘದ ಜಿಲ್ಲಾಧ್ಯಕ್ಷ ಕೆ.ವಿ ಶಿವಕುಮಾರ್ ಮಾತನಾಡಿ, ದೇಶದಲ್ಲಿ ಮುದ್ರಣ ಮಾದ್ಯಮದ ಕೊಡುಗೆ ಅಪಾರವಾಗಿದೆ. ಪ್ರಸ್ತುತ ದೃಶ್ಯ ಮಾಧ್ಯಮ ಹಾಗು ಸಾಮಾಜಿಕ ಜಾಲತಾಣಗಳ ಪೈಪೋಟಿ ನಡುವೆಯೂ ಮುದ್ರಣ ಮಾದ್ಯಮ ತನ್ನ ತನವನ್ನು ಉಳಿಸಿಕೊಂಡು ಮುನ್ನಡೆಯುತ್ತಿದೆ. ಇಂದಿನ ಯುವ ಪೀಳಿಗೆ ಸಾಮಾಜಿಕ ಜಾಲತಾಣಗಳಲ್ಲಿ ಅನಗತ್ಯವಾಗಿ ಕಾಲ ಕಳೆಯುವ ಬದಲು ಪತ್ರಿಕೆಗಳನ್ನು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕೆಂದು ಕರೆ ನೀಡಿದರು.
    ಕಾಲೇಜಿನ ಪ್ರಾಂಶುಪಾಲ ಡಾ. ಧನಂಜಯ ಅಧ್ಯಕ್ಷತೆ ವಹಿಸಿದ್ದರು. ಸಂಘದ ತಾಲೂಕು ಅಧ್ಯಕ್ಷ ಕೆ.ಎನ್ ಶ್ರೀಹರ್ಷ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಹಿರಿಯ ಪತ್ರಕರ್ತ ಶೈಲೇಶ್ ಕೋಠಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
    ಜಿಲ್ಲಾ ಉಪಾಧ್ಯಕ್ಷ ಆರ್.ಎಸ್ ಹಾಲಸ್ವಾಮಿ, ಪತ್ರಿಕಾಭವನ ಟ್ರಸ್ಟ್ ಅಧ್ಯಕ್ಷ ಕಣ್ಣಪ್ಪ, ಉಪನ್ಯಾಸಕ ಮಹಮದ್ ನಜೀಬ್, ಉದ್ಯಮಿ ಬಿ.ಕೆ ಜಗನ್ನಾಥ್, ಎಸ್.ಎಸ್ ಭೈರಪ್ಪ, ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರು ಸೇರಿದಂತೆ ಇನ್ನಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
    ಪತ್ರಿಕಾ ದಿನಾಚರಣೆ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನಗಳನ್ನು ವಿತರಿಸಲಾಯಿತು. ಸ್ಪರ್ಧೆಯಲ್ಲಿ ಸುಮಾರು ೪೦ ವಿದ್ಯಾರ್ಥಿಗಳು ಭಾಗವಹಿಸಿದ್ದರು. ವಿದ್ಯಾರ್ಥಿಗಳಾದ ತೋಹಿದ್ ಅಹಮದ್ ಭಾಷಣ, ಐಶ್ವಯ್ಯ ವೀಣಾವಾದನ ಮತ್ತು ಮಂಜುನಾಥ ಕಮಲಕರ್ ನಾಯ್ಕ ಗೀತಾ ಗಾಯನ ನಡೆಸಿಕೊಟ್ಟರು.
    ಸಂಘದ ಪ್ರಧಾನ ಕಾರ್ಯದರ್ಶಿ ಬಸವರಾಜ ಸ್ವಾಗತಿಸಿದರು. ಸಹಾಯಕ ಪ್ರಾಧ್ಯಾಪಕರಾದ ಡಾ. ವರದರಾಜ ಮತ್ತು ಗುರುಪ್ರಸಾದ್ ಕಾರ್ಯಕ್ರಮ ನಿರೂಪಿಸಿದರು. ಖಜಾಂಚಿ ಅನಂತಕುಮಾರ್ ವಂದಿಸಿದರು. ಪತ್ರಕರ್ತರು, ಕಾಲೇಜಿನ ಅಧ್ಯಾಪಕ, ಅಧ್ಯಾಪಕೇತರ ಸಿಬ್ಬಂದಿ ವರ್ಗದವರು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ಗ್ರಾಮಠಾಣಾ ಜಾಗ ನಿಯಮಬಾಹಿರವಾಗಿ ಖಾಸಗಿ ವ್ಯಕ್ತಿಗಳಿಗೆ ಹಂಚಿಕೆ : ಅಭಿವೃದ್ಧಿ ಅಧಿಕಾರಿ ಕೆ. ಮಧುಸೂಧನ್ ಅಮಾನತ್ತು

ಕೆ. ಮಧುಸೂಧನ್
    ಭದ್ರಾವತಿ, ಜು. ೨೫ : ತಾಲೂಕಿನ ಹಿರಿಯೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಳೇ ಹಿರಿಯೂರು ಗ್ರಾಮದ ಗ್ರಾಮಠಾಣಾ ಜಾಗವನ್ನು ನಿಯಮಬಾಹಿರವಾಗಿ ಖಾಸಗಿ ವ್ಯಕ್ತಿಗಳಿಗೆ ಹಂಚಿಕೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಅಭಿವೃದ್ಧಿ ಅಧಿಕಾರಿ ಕೆ. ಮಧುಸೂಧನ್ ಅವರನ್ನು ಸೇವೆಯಿಂದ ಅಮಾನತ್ತುಗೊಳಿಸಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ಎಲ್ ವೈಶಾಲಿ ಆದೇಶ ಹೊರಡಿಸಿದ್ದಾರೆ.
    ಪ್ರಸ್ತುತ ತಾಲೂಕಿನ ಸೈದರಕಲ್ಲಹಳ್ಳಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯಾಗಿ ನಿಯೋಜನೆ ಮೇರೆಗೆ ಕರ್ತವ್ಯ ನಿರ್ವಹಿಸುತ್ತಿರುವ ಕೆ. ಮಧುಸೂಧನ್ ಹಿರಿಯೂರು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯಾಗಿದ್ದ ಸಂದರ್ಭದಲ್ಲಿ ಹಳೇ ಹಿರಿಯೂರು ಗ್ರಾಮದ ಗ್ರಾಮ ಠಾಣಾ ಜಾಗವನ್ನು ನಿಯಮಬಾಹಿರವಾಗಿ ಒಟ್ಟು ೧೪ ಜನ ಖಾಸಗಿ ವ್ಯಕ್ತಿಗಳಿಗೆ ಸ್ವತ್ತಿನ ಸೃಜನೆ ಮಾಡಿ ಕೈ ಬರಹದಲ್ಲಿ ನಮೂನೆ ೯ ಮತ್ತು ೧೧ ಎಗಳನ್ನು ವಿತರಿಸಿ, ಖಾತೆಗಳಿಗೆ ಕಂದಾಯ ರಶೀದಿಗಳನ್ನು ನೀಡಿದ್ದರು. ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ ೧೯೯೩ರ ಪ್ರಕರಣ ೨೦೦೯ ಮತ್ತು ೨೧೦ಗಳನ್ನು ಉಲ್ಲಂಘಿಸಿರುವ ಕುರಿತು ದೂರುಗಳು ಸಲ್ಲಿಕೆಯಾಗಿದ್ದವು. ಅಲ್ಲದೆ ಈ ಸಂಬಂಧ ಕರ್ನಾಟಕ ದಲಿತ ಸಂಘರ್ಷ ಸಮಿತಿ ನಿರಂತರವಾಗಿ ಹೋರಾಟ ನಡೆಸಿಕೊಂಡು ಬಂದಿತ್ತು.
    ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ರಮೇಶ್‌ರವರು ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ಎಲ್ ವೈಶಾಲಿ ಅವರಿಗೆ ಪರಿಶೀಲನಾ ವರದಿ ಸಲ್ಲಿಸಿದ್ದರು.

ಭಾನುವಾರ, ಜುಲೈ 24, 2022

ಕರ್ನಾಟಕ ರಾಜ್ಯ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷರಾಗಿ ಬಿ. ಸಿದ್ದಬಸಪ್ಪ

ಭದ್ರಾವತಿ, ಜು. 25:  ಕರ್ನಾಟಕ ರಾಜ್ಯ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷರಾಗಿ ಹಳೇನಗರದ ಸಂಚಿಹೊನ್ನಮ್ಮಸರ್ಕಾರಿ ಬಾಲಕಿಯರ ಪದವಿಪೂರ್ವ ಕಾಲೇಜಿನ ಸಹ ಶಿಕ್ಷಕ ಬಿ. ಸಿದ್ದಬಸಪ್ಪ ಆಯ್ಕೆಯಾಗಿದ್ದಾರೆ.
        ಸಿದ್ದಬಸಪ್ಪ ಅವರು ಪ್ರಸ್ತುತ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷರಾಗಿದ್ದು, ಅಲ್ಲದೆ 2 ಬಾರಿ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
      ಸಂಘಟನಾ ಚತುರರಾಗಿರುವ ಸಿದ್ದಬಸಪ್ಪ ಇದೀಗ ಕಡಿಮೆ ಅವಧಿಯಲ್ಲಿ ರಾಜ್ಯಾಧ್ಯಕ್ಷರಾಗಿ ಆಯ್ಕೆಯಾಗುವ ಮೂಲಕ ಸಾಧನೆ ಮೆರೆದಿದ್ದಾರೆ. 
       ಇವರಿಗೆ  ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ, ವಿಶ್ವೇಶ್ವರಾಯ ವಿದ್ಯಾಸಂಸ್ಥೆ, ತಾಲೂಕಿನ ಸಮಸ್ತ ಸರ್ಕಾರಿ ನೌಕರರು, ಶಿಕ್ಷಕ ವೃಂದದವರು, ಗಣ್ಯರು ಅಭಿನಂದಿಸಿದ್ದಾರೆ.

ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಎಟಿಎಲ್ ಲ್ಯಾಬ್ ಉದ್ಘಾಟನೆ


ಭದ್ರಾವತಿ ತಾಲೂಕಿನ ದೇವರನರಸೀಪುರ ಗ್ರಾಮದ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ನೂತನವಾಗಿ ಅಟಲ್ ಟಿಂಕರಿಂಗ್ ಲ್ಯಾಬ್ ಉದ್ಘಾಟಿಸಲಾಯಿತು.
    ಭದ್ರಾವತಿ, ಜು. ೨೪: ತಾಲೂಕಿನ ದೇವರನರಸೀಪುರ ಗ್ರಾಮದ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ನೂತನವಾಗಿ ಅಟಲ್ ಟಿಂಕರಿಂಗ್ ಲ್ಯಾಬ್ ಉದ್ಘಾಟಿಸಲಾಯಿತು.
    ಆಟ-ಪಾಠದ ಜೊತೆಯಲ್ಲಿ ನವೀನ ಕೌಶಲ್ಯ, ವೈಜ್ಞಾಜಿಕ ತಂತ್ರಜ್ಞಾನ, ಉದ್ಯೋಗ ಸೃಷ್ಟಿ, ನೂತನ ಅವಿಷ್ಕಾರದ ಜೊತೆ ವೈಜ್ಞಾನಿಕ ಮನೋಭಾವ ಬೆಳವಣಿಗೆಯ ಮೂಲಕ ನವೀನ ಭಾರತ ನಿರ್ಮಾಣಕ್ಕಾಗಿ ಎಟಿಎಲ್ ಲ್ಯಾಬ್ ಸಹಕಾರಿ ಆಗಿವೆ.
    ಎರೇಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶ್ವೇತಾ ಮತ್ತು ಅಂತರಗಂಗೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಕವಿತಾ ಲ್ಯಾಬ್ ಉದ್ಘಾಟಿಸಿದರು. ವಸತಿ ಶಾಲೆಯ ಪ್ರಾಂಶುಪಾಲ ಬಿ. ಬಸವರಾಜಪ್ಪ ಅಧ್ಯಕ್ಷತೆ ವಹಿಸಿದ್ದರು.
    ಅಂತರಗಂಗೆ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಶೋಭಾ, ಸದಸ್ಯರಾದ ನಾಗೇಶ್, ರವಿ, ಆನಂದ್, ಕರ್ನಾಟಕ ಪಬ್ಲಿಕ್ ಶಾಲೆಯ ಮುಖ್ಯೋಪಾಧ್ಯಾಯರು, ದೇವರನರಸೀಪುರ ಗ್ರಾಮ ಪಂಚಾಯಿತಿ ಸದಸ್ಯರು, ವಸತಿ ಶಾಲೆಯ ಶಿಕ್ಷಕ, ಸಿಬ್ಬಂದಿ ವರ್ಗದವರು, ಪೋಷಕರು ಉಪಸ್ಥಿತರಿದ್ದರು. ಸಹ ಶಿಕ್ಷಕರಾದ ಬಿಂದು ನಿರೂಪಿಸಿದರು. ಕೆ. ರಂಗನಾಥ್ ಸ್ವಾಗತಿಸಿ ಕೃಷ್ಣಪ್ರಸಾದ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ನಿಲಯಪಾಲಕ ಶಿವಕುಮಾರ್ ವಂದಿಸಿದರು.

ಅಸಂಘಟಿತ ಕಾರ್ಮಿಕರು ಸರ್ಕಾರದ ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಳ್ಳಿ : ಕೆ.ಎನ್ ಶ್ರೀಹರ್ಷ

ಭಾರತೀಯ ಮಜ್ದೂರ್ ಸಂಘ, ಶಿವಮೊಗ್ಗ ಮತ್ತು ಕರ್ನಾಟಕ ರಾಜ್ಯ ಕಟ್ಟಡ ನಿರ್ಮಾಣ ಮತ್ತು ಕಾಮಗಾರಿ ಮಜ್ದೂರು ಸಂಘದ ವತಿಯಿಂದ ಭದ್ರಾವತಿಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ಹಾಗು ಗುರುತಿನ ಚೀಟಿ ವಿತರಣೆ ಕಾರ್ಯಕ್ರಮದಲ್ಲಿ ಹಮ್ಮಿಕೊಳ್ಳಲಾಗಿತ್ತು.
    ಭದ್ರಾವತಿ, ಜು. ೨೪: ಅಸಂಘಟಿತ ಕಾರ್ಮಿಕರು ಸರ್ಕಾರದ ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕೆಂದು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ಎನ್ ಶ್ರೀಹರ್ಷ ಹೇಳಿದರು.
    ಅವರು ಭಾನುವಾರ ಭಾರತೀಯ ಮಜ್ದೂರ್ ಸಂಘ, ಶಿವಮೊಗ್ಗ ಮತ್ತು ಕರ್ನಾಟಕ ರಾಜ್ಯ ಕಟ್ಟಡ ನಿರ್ಮಾಣ ಮತ್ತು ಕಾಮಗಾರಿ ಮಜ್ದೂರು ಸಂಘದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ನೂತನ ಪದಾಧಿಕಾರಿಗಳ ಆಯ್ಕೆ ಹಾಗು ಗುರುತಿನ ಚೀಟಿ ವಿತರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
    ದೇಶದಲ್ಲಿ ಶ್ರಮ ಜೀವಿಗಳಾದ ಅಸಂಘಟಿತ ಕಾರ್ಮಿಕರು ಕೊನೆಯವರೆಗೂ ಬಡತನದಲ್ಲಿಯೇ ಬದುಕು ಸಾಗಿಸುವಂತಾಗಿದೆ. ಪ್ರಸ್ತುತ ಸರ್ಕಾರ ಅಸಂಘಟಿತ ಕಾರ್ಮಿಕರ ಕಲ್ಯಾಣಕ್ಕಾಗಿ ಕೋಟ್ಯಾಂತರ ರು. ಹಣ ಮೀಸಲಿಡುತ್ತಿದೆ. ಈ ಹಿನ್ನಲೆಯಲ್ಲಿ ಕಾರ್ಮಿಕರು ಸರ್ಕಾರದಿಂದ ಕಡ್ಡಾಯವಾಗಿ ಗುರುತಿನ ಪಡೆದುಕೊಳ್ಳಬೇಕು. ಆ ಮೂಲಕ ಸರ್ಕಾರದ ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕೆಂದರು.
    ಭಾರತೀಯ ಮಜ್ದೂರು ಸಂಘದ ಎಚ್.ಎಲ್ ವಿಶ್ವನಾಥ್ ಮಾತನಾಡಿ,  ಅಸಂಘಟಿತ ಕಾರ್ಮಿಕರು ಕೇವಲ ಸರ್ಕಾರದ ಸೌಲಭ್ಯಗಳನ್ನು ಪಡೆಯುವ ಉದ್ದೇಶದಿಂದ ಸಂಘಟಿತರಾಗಬಾರದು. ನಾವು ಮಾಡುವ ಕೆಲಸ ದೇಶಕ್ಕಾಗಿ ಎಂಬ ಅಭಿಮಾನದ ಮೇಲೆ ಸಂಘಟಿತರಾಗುವ ಮೂಲಕ ದೇಶ ಸೇವೆಗೂ ಸಿದ್ದ ಎಂಬುದನ್ನು ಎತ್ತಿ ಹಿಡಿಯಬೇಕೆಂದರು.
    ನೂತನ ಪದಾಧಿಕಾರಿಗಳು :
    ಭಾರತೀಯ ಮಜ್ದೂರು ಸಂಘ ತಾಲೂಕು ಶಾಖೆಯ ನೂತನ ಅಧ್ಯಕ್ಷರಾಗಿ ಮಂಜುನಾಥ್, ಉಪಾಧ್ಯಕ್ಷರಾಗಿ ರಘು, ಪ್ರಧಾನ ಕಾರ್ಯದರ್ಶಿಯಾಗಿ ಪಚ್ಚಪ್ಪ, ಖಜಾಂಚಿಯಾಗಿ ಫ್ಯಾಟ್ರಿಕ್, ಕಾರ್ಯದರ್ಶಿಯಾಗಿ ಪ್ರವೀಣ್‌ಕುಮಾರ್, ಸಂಘಟನಾ ಕಾರ್ಯದರ್ಶಿಗಳಾಗಿ ರಂಗಸ್ವಾಮಿ ಮತ್ತು ಡಿ. ಜೈರಾಮು ಆಯ್ಕೆಯಾದರು.
    ಕಾರ್ಯಕ್ರಮದಲ್ಲಿ ಅಸಂಘಟಿತ ಕಾರ್ಮಿಕರಿಗೆ ಗುರುತಿನ ಚೀಟಿಗಳನ್ನು ವಿತರಿಸಲಾಯಿತು. ವೇದಿಕೆಯಲ್ಲಿ ಮಂಜುನಾಥ್, ಪಚ್ಚಪ್ಪ, ಫ್ಯಾಟ್ರಿಕ್, ರಘು ಮತ್ತು ರಾಜು ಸೇರಿದಂತೆ ಇನ್ನಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಜಗದೀಶ್ ನಿರೂಪಿಸಿದರು.