ರಾಜ್ಯದಲ್ಲಿರುವ ಒಕ್ಕಲಿಗ ಸಮಾಜದ ಆರ್ಥಿಕ ಹಿಂದುಳಿದ ಕಡುಬಡವರ ಕಲ್ಯಾಣಕ್ಕಾಗಿ ರಾಜ್ಯ ಸರ್ಕಾರ ಒಕ್ಕಲಿಗರ ಅಭಿವೃದ್ಧಿ ನಿಗಮ ಸ್ಥಾಪಿಸಿದ್ದು, ವಿವಿಧ ಯೋಜನೆಗಳ ಸಹಾಯಧನ ಬಿಡುಗಡೆಗೊಳಿಸಿದೆ. ಅರ್ಹ ಬಡವರು ಇದರ ಸದುಪಯೋಗಪಡೆದುಕೊಳ್ಳುವಂತೆ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ, ಭದ್ರಾವತಿ ಬಿಜೆಪಿ ಮುಖಂಡ ಎಸ್. ಕುಮಾರ್ ಮನವಿ ಮಾಡುವ ಮೂಲಕ ಅರ್ಹರಿಗೆ ಅರ್ಜಿಗಳನ್ನು ವಿತರಿಸಿದರು.
ಭದ್ರಾವತಿ, ಆ. ೧೦: ರಾಜ್ಯದಲ್ಲಿರುವ ಒಕ್ಕಲಿಗ ಸಮಾಜದ ಆರ್ಥಿಕ ಹಿಂದುಳಿದ ಕಡುಬಡವರ ಕಲ್ಯಾಣಕ್ಕಾಗಿ ರಾಜ್ಯ ಸರ್ಕಾರ ಒಕ್ಕಲಿಗರ ಅಭಿವೃದ್ಧಿ ನಿಗಮ ಸ್ಥಾಪಿಸಿದ್ದು, ವಿವಿಧ ಯೋಜನೆಗಳ ಸಹಾಯಧನ ಬಿಡುಗಡೆಗೊಳಿಸಿದೆ. ಅರ್ಹ ಬಡವರು ಇದರ ಸದುಪಯೋಗಪಡೆದುಕೊಳ್ಳುವಂತೆ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ, ಬಿಜೆಪಿ ಮುಖಂಡ ಎಸ್. ಕುಮಾರ್ ಮನವಿ ಮಾಡಿದರು.
ಗಂಗಾ ಕಲ್ಯಾಣ ಯೋಜನೆಯಡಿ ಸಾಮೂಹಿಕ ಅಥವಾ ವೈಯಕ್ತಿಕ ಕೊಳವೆಬಾವಿ ನಿರ್ಮಿಸಿಕೊಳ್ಳಲು, ನಿರುದ್ಯೋಗಿಗಳಿಗೆ ಟೂರಿಸ್ಟ್ ಟ್ಯಾಕ್ಸಿ ಅಥವಾ ಸರಕು ಸಾಗಾಣಿಕ ವಾಹನ ಖರೀದಿಸಲು ಹಾಗು ಸ್ವಯಂ ಉದ್ಯೋಗ ಸಾಲ ಮತ್ತು ಸಹಾಯ ಧನ ಸೌಲಭ್ಯ ಪಡೆಯಲು ಅರ್ಹ ಫಲಾನುಭವಿಗಳು ಅರ್ಜಿ ಸಲ್ಲಿಸಬಹುದಾಗಿದೆ ಎಂದರು.
ಒಕ್ಕಲಿಗ ಸಮಾಜದವರು ಅರ್ಜಿ ಸಲ್ಲಿಸಲು ಬೆಂಗಳೂರು ಅಥವಾ ಶಿವಮೊಗ್ಗದಲ್ಲಿರುವ ದೇವರಾಜ ಅರಸು ನಿಗಮಕ್ಕೆ ಅಳೆದಾಡುವುದನ್ನು ತಪ್ಪಿಸುವ ಉದ್ದೇಶದಿಂದ ಹಾಗು ಸಾಮಾಜಿಕ ಮನೋಭಾವನೆಯೊಂದಿಗೆ ಅರ್ಜಿಗಳನ್ನು ನಾವೇ ವಿತರಿಸುವ ಮೂಲಕ ಅವುಗಳನ್ನು ಪುನಃ ಸಂಗ್ರಹಿಸಿ ನಿಗಮಕ್ಕೆ ತಲುಪಿಸಲಾಗುವುದು. ಈ ಹಿನ್ನಲೆಯಲ್ಲಿ ಅರ್ಹರು ಅರ್ಜಿಗಳನ್ನು ಪಡೆದು ಆ.೧೮ರೊಳಗೆ ಭರ್ತಿ ಮಾಡಿ ಅಗತ್ಯ ದಾಖಲೆಗಳೊಂದಿಗೆ ನೀಡುವುದು. ಇದರ ಸದುಪಯೋಗ ಪಡೆದುಕೊಳ್ಳುವಂತೆ ಮನವಿ ಮಾಡಿದರು.
ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ.ಕೆ ಶ್ರೀನಾಥ್, ಜಿಲ್ಲಾ ಕಾರ್ಯದರ್ಶಿ ಎಂ. ಪ್ರಭಾಕರ್, ಆರ್. ಕೃಷ್ಣಮೂರ್ತಿ, ಮಣಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಭದ್ರಾವತಿ, ಆ. ೧೦: ನಗರದ ಹೃದಯ ಭಾಗದಲ್ಲಿ ಹರಿಯುತ್ತಿರುವ ಭದ್ರಾ ನದಿಯಲ್ಲಿ ಬುಧವಾರ ಪ್ರವಾಹ ಬಹುತೇಕ ಇಳಿಮುಖವಾಗಿದ್ದು, ತಗ್ಗು ಪ್ರದೇಶದ ನಿವಾಸಿಗಳು ನಿಟ್ಟುಸಿರು ಬಿಡುವಂತಾಗಿದೆ.
ಭದ್ರಾ ಜಲಾಶಯ ವ್ಯಾಪ್ತಿಯಲ್ಲಿ ವ್ಯಾಪಕ ಮಳೆಯಾಗುತ್ತಿದ್ದ ಕಾರಣ ಜಲಾಶಯದಿಂದ ಹೆಚ್ಚುವರಿ ನೀರನ್ನು ಅಧಿಕ ಪ್ರಮಾಣದಲ್ಲಿ ನದಿಗೆ ಹರಿಸಿದ ಹಿನ್ನಲೆಯಲ್ಲಿ ಭದ್ರಾ ನದಿಯಲ್ಲಿ ಭಾನುವಾರ ರಾತ್ರಿಯಿಂದ ಮಂಗಳವಾರ ರಾತ್ರಿವರೆಗೂ ಪ್ರವಾಹ ಉಂಟಾಗಿ ಹೊಸಸೇತುವೆ ಸೇರಿದಂತೆ ತಗ್ಗು ಪ್ರದೇಶದಲ್ಲಿನ ಮನೆಗಳು ಜಲಾವೃತಗೊಂಡಿದ್ದವು. ಬುಧವಾರ ಬೆಳಿಗ್ಗೆ ಸೇತುವೆ ಮೇಲಿನ ತ್ಯಾಜ್ಯ ತೆರವುಗೊಳಿಸಿ ವಾಹನಗಳ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿತ್ತು.
ಈ ಬಾರಿ ಸಹ ಪ್ರವಾಹದಿಂದ ಸೇತುವೆ ಮತ್ತಷ್ಟು ಹಾಳಾಗಿದ್ದು, ಮೊದಲನೇ ಬಾರಿ ಮುಳುಗಡೆಗೊಂಡಾಗ ಸೇತುವೆ ಎರಡು ಬದಿಯ ತಡೆಗೋಡೆಗಳು ನೀರಿನಲ್ಲಿ ಕೊಚ್ಚಿ ಹೋಗಿದ್ದವು. ಈ ಹಿನ್ನಲೆಯಲ್ಲಿ ಎರಡು ದಿನದ ಮಟ್ಟಿಗೆ ಸಂಚಾರ ಸ್ಥಗಿತಗೊಳಿಸಿ ತಡೆಗೋಡೆ ಕೊಚ್ಚಿ ಹೋಗಿರುವ ಸ್ಥಳಗಳಲ್ಲಿ ಮರಳಿನ ಚೀಲಗಳನ್ನು ಇಡಲಾಗಿತ್ತು. ಇದೀಗ ಮರಳಿನ ಚೀಲಗಳು ಸಹ ನೀರಿನಲ್ಲಿ ಕೊಚ್ಚಿ ಹೋಗಿವೆ. ಮಳೆಗಾಲ ಮುಕ್ತಾಯಗೊಂಡ ನಂತರ ತಡೆಗೋಡೆ ನಿರ್ಮಾಣದ ಕಾಮಗಾರಿ ಆರಂಭಗೊಳ್ಳುವ ಲಕ್ಷಣಗಳು ಕಂಡು ಬರುತ್ತಿವೆ.
ಭದ್ರಾವತಿ ನಗರಸಭೆ ವಾರ್ಡ್ ನಂ.೨೦ರ ವ್ಯಾಪ್ತಿಯ ಸುರಗಿತೋಪಿನಲ್ಲಿ ಭಾರಿ ಮಳೆಯಿಂದಾಗಿ ಸುಮಾರು ೧೦ಕ್ಕೂ ಹೆಚ್ಚು ಮನೆಗಳ ಗೋಡೆಗಳು ಕುಸಿದು ಬಿದ್ದಿದ್ದವು. ಸಂತ್ರಸ್ಥರ ಒತ್ತಾಯದ ಮೇರೆಗೆ ಬುಧವಾರ ಗ್ರಾಮ ಲೆಕ್ಕಾಧಿಕಾರಿ ಶಿವಣ್ಣ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಗೋಡೆ ಕುಸಿದ ಮನೆಗಳ ಪರಿಶೀಲನೆ :
ನಗರಸಭೆ ವಾರ್ಡ್ ನಂ.೨೦ರ ವ್ಯಾಪ್ತಿಯ ಸುರಗಿತೋಪಿನಲ್ಲಿ ಭಾರಿ ಮಳೆಯಿಂದಾಗಿ ಸುಮಾರು ೧೦ಕ್ಕೂ ಹೆಚ್ಚು ಮನೆಗಳ ಗೋಡೆಗಳು ಕುಸಿದು ಬಿದ್ದಿದ್ದವು. ಸಂತ್ರಸ್ಥರ ಒತ್ತಾಯದ ಮೇರೆಗೆ ಬುಧವಾರ ಗ್ರಾಮ ಲೆಕ್ಕಾಧಿಕಾರಿ ಶಿವಣ್ಣ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ವಾರ್ಡಿನ ನಗರಸಭೆ ಸದಸ್ಯೆ ಹಾಗು ಸ್ಥಳೀಯ ಮುಖಂಡರು ಉಪಸ್ಥಿತರಿದ್ದರು. ತಕ್ಷಣ ಸರ್ಕಾರದಿಂದ ಪರಿಹಾರ ಕೊಡಿಸುವಂತೆ ಸಂತ್ರಸ್ಥರು ಮನವಿ ಮಾಡಿದ್ದಾರೆ.
ಇದೆ ರೀತಿ ನಗರಸಭೆ ವಾರ್ಡ್ ನಂ.೨೭ರ ಆಂಜನೇಯ ಅಗ್ರಹಾರದ ೪ನೇ ರಸ್ತೆಯಲ್ಲಿರುವ ದಿವಂಗತ ಶಂಕರ್ ಎಂಬುವರ ಬಡ ಕುಟುಂಬದವರ ಹಂಚಿನ ಮನೆಯ ಗೋಡೆ ಸಂಪೂರ್ಣವಾಗಿ ಕುಸಿದು ಬಿದ್ದಿದೆ.
ಇದರಿಂದಾಗಿ ಪತ್ನಿ ನಂದಿನಿ ತನ್ನ ೨ ಮಕ್ಕಳೊಂದಿಗೆ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಸ್ಥಳಕ್ಕೆ ನಗರಸಭೆ ಮಾಜಿ ಅಧ್ಯಕ್ಷ ಬಿ.ಕೆ ಮೋಹನ್, ಗ್ರಾಮ ಲೆಕ್ಕಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಬಡ ಕುಟುಂಬಕ್ಕೆ ತಕ್ಷಣ ಸರ್ಕಾರದಿಂದ ಸೂಕ್ತ ಪರಿಹಾರ ನೀಡುವ ಮೂಲಕ ಸಂಕಷ್ಟಕ್ಕೆ ಮುಂದಾಗುವಂತೆ ಸ್ಥಳೀಯ ಮುಖಂಡ ರವಿಕುಮರ್ ಒತ್ತಾಯಿಸಿದ್ದಾರೆ.
ಭದ್ರಾವತಿ ನಗರಸಭೆ ವಾರ್ಡ್ ನಂ.೨೭ರ ಆಂಜನೇಯ ಅಗ್ರಹಾರದ ೪ನೇ ರಸ್ತೆಯಲ್ಲಿರುವ ದಿವಂಗತ ಶಂಕರ್ ಎಂಬುವರ ಬಡ ಕುಟುಂಬದವರ ಹಂಚಿನ ಮನೆಯ ಗೋಡೆ ಸಂಪೂರ್ಣವಾಗಿ ಕುಸಿದು ಬಿದ್ದಿದೆ.
ಭದ್ರಾವತಿ ತಾಲೂಕಿನ ಹುಣಸೇಕಟ್ಟೆ ಗ್ರಾಮದಲ್ಲಿ ರಾಷ್ಟ್ರೀಯ ಯುವ ಕಾಂಗ್ರೆಸ್ ಸಂಸ್ಥಾಪನ ದಿನ ಆಚರಿಸಲಾಯಿತು.
ಭದ್ರಾವತಿ, ಆ. ೧೦: ತಾಲೂಕಿನ ಹುಣಸೇಕಟ್ಟೆ ಗ್ರಾಮದಲ್ಲಿ ರಾಷ್ಟ್ರೀಯ ಯುವ ಕಾಂಗ್ರೆಸ್ ಸಂಸ್ಥಾಪನ ದಿನ ಆಚರಿಸಲಾಯಿತು.
ಬೂತ್‌ಮಟ್ಟದ ಕಮಿಟಿ ರಚಿಸಲಾಯಿತು ಈ ಸಂದರ್ಭದಲ್ಲಿ ಗ್ರಾಮದ ೫೦ಕ್ಕೂ ಹೆಚ್ಚು ಯುವಕರು ಯುವ ಕಾಂಗ್ರೆಸ್‌ಗೆ ಸೇರ್ಪಡೆಯಾದರು
ಗ್ರಾಮಾಂತರ ಯುವ ಕಾಂಗ್ರೆಸ್ ಅಧ್ಯಕ್ಷ ಅಫ್ತಾಬ್ ಅಹ್ಮದ್, ಯುವ ಕಾಂಗ್ರೆಸ್ ರಾಜ್ಯ ವಕ್ತಾರ ಆಮೋಸ್, ಗ್ರಾಮಾಂತರ ಯುವ ಕಾಂಗ್ರೆಸ್ ಉಪಾಧ್ಯಕ್ಷರಾದ ತಬ್ರೇಜ್ ಖಾನ್ ಹಾಗೂ ಅಭಿಷೇಕ್, ಪ್ರಧಾನ ಕಾರ್ಯದರ್ಶಿ ವಾಸೀಮ್ ಅಕ್ರಮ್, ಯುವ ಮುಖಂಡ ಟಿ.ಬಿ ರಘು ಮುಂತಾದವರು ಉಪಸ್ಥಿತರಿದ್ದರು.
ಭದ್ರಾವತಿಯಲ್ಲಿ ಬುಧವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ತಾಲೂಕು ಮಂಡಲ ಅಧ್ಯಕ್ಷ ಜಿ. ಧರ್ಮಪ್ರಸಾದ್ ಮಾತನಾಡಿದರು.
ಭದ್ರಾವತಿ, ಆ. ೧೦: ದೇಶದ ೭೫ನೇ ಸ್ವಾತಂತ್ರ್ಯೋತ್ಸದ ಅಮೃತ ಮಹೋತ್ಸವದ ಅಂಗವಾಗಿ ಆ.೧೪ರ ರಾತ್ರಿ ೮.೩೦ ರಿಂದ ಮಧ್ಯ ರಾತ್ರಿ ೧೨ ಗಂಟೆ ವರೆಗೆ ೩೭೫ ಅಡಿ ತಿರಂಗ ಧ್ವಜ ಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ಬಿಜೆಪಿ ತಾಲೂಕು ಮಂಡಲ ಅಧ್ಯಕ್ಷ ಜಿ. ಧರ್ಮಪ್ರಸಾದ್ ಹೇಳಿದರು.
ಅವರು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿಯವರು ದೇಶದ ೭೫ನೇ ಸ್ವಾತಂತ್ರ್ಯೋತ್ಸವ ಈ ಬಾರಿ ವಿಶಿಷ್ಟವಾಗಿ, ವಿಭಿನ್ನವಾಗಿ ಆಚರಿಸಬೇಕೆಂಬ ಉದ್ದೇಶದೊಂದಿಗೆ ಪ್ರತಿಯೊಂದು ಮನೆ ಮನೆಗಳಲ್ಲಿ ರಾಷ್ಟ್ರ ಧ್ವಜ ಹಾರಾಡಬೇಕೆಂಬ ಆಶಯದೊಂದಿಗೆ ಹರ್ ಘರ್ ತಿರಂಗಾ ಅಭಿಯಾನ ದೇಶಾದಾದ್ಯಂತ ಕೈಗೊಂಡಿದ್ದಾರೆ. ಇದಕ್ಕೆ ಪೂರಕವೆಂಬಂತೆ ಆ.೧೪ರಂದು ರಾತ್ರಿ ೮.೩೦ಕ್ಕೆ ೩೭೫ ಅಡಿ ತಿರಂಗ ಧ್ವಜ ಯಾತ್ರೆ ಹಮ್ಮಿಕೊಳ್ಳಲಾಗಿದೆ.
ನಗರದ ಬಿ.ಎಚ್ ರಸ್ತೆ, ಹುತ್ತಾ ಬಸ್ ನಿಲ್ದಾಣದಿಂದ ಯಾತ್ರೆ ಆರಂಭಗೊಳ್ಳಲಿದ್ದು, ಸಂಸದ ಬಿ.ವೈ ರಾಘವೇಂದ್ರ ಚಾಲನೆ ನೀಡಲಿದ್ದಾರೆ. ರಾತ್ರಿ ೧೦ ಗಂಟೆಗೆ ಹಳೇನಗರದ ಬಸವೇಶ್ವರ ವೃತ್ತದಲ್ಲಿ ಸುಮಾರು ೭೫ ಮಂದಿ ದೇಶ ಭಕ್ತರಿಂದ ಗೀತ ನಮನ ನಡೆಯಲಿದೆ. ವಿಧಾನ ಪರಿಷತ್ ಮಾಜಿ ಸದಸ್ಯ ಎಂ.ಬಿ ಭಾನುಪ್ರಕಾಶ್ ನುಡಿ ನಮನ ನಡೆಸಿಕೊಡಲಿದ್ದು, ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ ಮೇಘರಾಜ್ ಉಪಸ್ಥಿತರಿರುವರು. ರಾತ್ರಿ ೧೨ ಗಂಟೆಗೆ ರಾಷ್ಟ್ರ ಗೀತೆ ನಮನ, ಯೋಗ ನಮನ ನಂತರ ತಾಯಿ ಭಾರತಿಯ ಪಾದ ಪದ್ಮಗಳಿಗೆ ಪುಷ್ಪಾರ್ಚನೆ, ಸಿಡಿಮದ್ದು ಪ್ರದರ್ಶನ, ನಮನ-ವಾದ್ಯ, ನಮನ-ಪ್ರಸಾದ ವಿತರಣೆ ನಡೆಯಲಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಪಕ್ಷದ ಪ್ರಮುಖರಾದ ಬಿ.ಕೆ ಶ್ರೀನಾಥ್, ಬಿ.ಎಸ್ ನಾರಾಯಣಪ್ಪ, ವಿ. ಕದಿರೇಶ್, ಎಂ. ಪ್ರಭಾಕರ್, ಮಂಗೋಟೆ ರುದ್ರೇಶ್, ಎಂ.ಎಸ್ ಸುರೇಶಪ್ಪ, ಕರೀಗೌಡ, ಎಂ. ಮಂಜುನಾಥ್, ಚನ್ನೇಶ್, ಬಿ.ಎಸ್ ಶ್ರೀನಾಥ್, ಕೆ. ಮಂಜುನಾಥ್, ಮಲ್ಲೇಶ್, ಚಂದ್ರು ದೇವರನರಸೀಪುರ, ಅನುಪಮ, ಅನ್ನಪೂರ್ಣ, ಮಂಜುನಾಥ್, ಶಶಿಕಲಾ, ಅನಿತಾ, ಕವಿತಾ ರಾವ್, ರಂಗಸ್ವಾಮಿ, ಅವಿನಾಶ್, ಆನಂದ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಭದ್ರಾವತಿ ನಗರಸಭೆ ೨ನೇ ವಾರ್ಡಿನ ಕವಲಗುಂದಿ ಗ್ರಾಮದಲ್ಲಿ ಭದ್ರಾ ನದಿ ಪ್ರವಾಹದಿಂದಾಗಿ ಮನೆಗಳು ಸಂಪೂರ್ಣವಾಗಿ ಜಲಾವೃತಗೊಂಡಿರುವುದು.
ಭದ್ರಾವತಿ, ಆ. ೯: ಭದ್ರಾ ಜಲಾಶಯದಿಂದ ಹೆಚ್ಚುವರಿ ನೀರು ನದಿಗೆ ಬಿಟ್ಟಿರುವ ಹಿನ್ನಲೆಯಲ್ಲಿ ನಗರ ವ್ಯಾಪ್ತಿಯಲ್ಲಿ ೨ನೇ ಬಾರಿಗೆ ಪ್ರವಾಹ ಉಂಟಾಗಿದ್ದು, ನದಿ ತೀರದ ತಗ್ಗು ಪ್ರದೇಶದಲ್ಲಿನ ಸುಮಾರು ೧೦೦ಕ್ಕೂ ಹೆಚ್ಚು ಮನೆಗಳು ಜಲಾವೃತಗೊಂಡಿವೆ.
ಭದ್ರಾ ಜಲಾಶಯ ವ್ಯಾಪ್ತಿಯಲ್ಲಿ ವ್ಯಾಪಕವಾಗಿ ಮಳೆಯಾಗುತ್ತಿರುವ ಹಿನ್ನಲೆಯಲ್ಲಿ ಸೋಮವಾರ ರಾತ್ರಿ ಹೆಚ್ಚಿನ ಪ್ರಮಾಣದ ನೀರು ನದಿಗೆ ಬಿಡಲಾಗಿದ್ದು, ಇದರಿಂದಾಗಿ ನಗರ ವ್ಯಾಪ್ತಿಯಲ್ಲಿ ಭದ್ರಾ ನದಿಯಲ್ಲಿ ಪ್ರವಾಹ ಉಂಟಾಗಿ ತಗ್ಗು ಪ್ರದೇಶದಲ್ಲಿನ ಮನೆಗಳು ಜಲಾವೃತಗೊಂಡಿವೆ. ಪ್ರವಾಹ ನಿಯಂತ್ರಿಸುವಲ್ಲಿ ನಗರಸಭೆ, ತಾಲೂಕು ಪಂಚಾಯಿತಿ ಮತ್ತು ತಾಲೂಕು ಆಡಳಿತಗಳು ಕಾರ್ಯಾಚರಣೆಯಲ್ಲಿ ತೊಡಗಿವೆ.
ಸೋಮವಾರ ಮಧ್ಯ ರಾತ್ರಿಯಿಂದಲೇ ನೀರಿನ ಮಟ್ಟ ಏರಿಕೆಯಾದ ಹಿನ್ನಲೆಯಲ್ಲಿ ತಗ್ಗು ಪ್ರದೇಶದಲ್ಲಿನ ನಿವಾಸಿಗಳನ್ನು ತಕ್ಷಣ ಸುರಕ್ಷಿತ ಸ್ಥಳಗಳಿಗೆ ಕಾಳಜಿ ಕೇಂದ್ರಗಳಿಗೆ ಸ್ಥಳಾಂತರಿಸಲಾಯಿತು.
೧೦೦ಕ್ಕೂ ಹೆಚ್ಚು ಮನೆಗಳು ಜಲಾವೃತ್ತ :
ಗುಂಡೂರಾವ್ ಶೆಡ್‌ನಲ್ಲಿ ಸುಮಾರು ೧೦, ಎಕಿನ್ಸಾ ಕಾಲೋನಿಯಲ್ಲಿ ಸುಮಾರು ೨೫, ಅಂಡರ್ ಬ್ರಿಡ್ಜ್ ಬಳಿ ಅಂಬೇಡ್ಕರ್ ನಗರದಲ್ಲಿ ಸುಮಾರು ೩೫ ಹಾಗು ಕವಲಗುಂದಿ ಎ.ಕೆ ಕಾಲೋನಿಯಲ್ಲಿ ಸುಮಾರು ೩೨ ಮನೆಗಳು ಸೇರಿದಂತೆ ಒಟ್ಟು ಸುಮಾರು ೧೦೦ಕ್ಕೂ ಹೆಚ್ಚು ಮನೆಗಳು ಜಲಾವೃತಗೊಂಡಿವೆ.
೨ ಕಾಳಜಿ ಕೇಂದ್ರ, ೧೫೦ಕ್ಕೂ ಹೆಚ್ಚು ಮಂದಿ ಆಶ್ರಯ :
ಸದ್ಯದ ಪರಿಸ್ಥಿತಿಯಲ್ಲಿ ನಗರಸಭೆ ವ್ಯಾಪ್ತಿಯ ತರೀಕೆರೆ ರಸ್ತೆಯಲ್ಲಿರುವ ವಳ್ಳುವರ್ ಕಲ್ಯಾಣ ಮಂಟಪ ಮತ್ತು ಕವಲಗುಂದಿಯಲ್ಲಿರುವ ಬಿಸಿಎಂ ವಿದ್ಯಾರ್ಥಿ ನಿಲಯ ೨ ಕಡೆ ಕಾಳಜಿ ಕೇಂದ್ರಗಳನ್ನು ತೆರೆಯಲಾಗಿದೆ. ಅಗತ್ಯ ಬಿದ್ದಲ್ಲಿ ಇನ್ನೂ ಹೆಚ್ಚಿನ ಕಾಳಜಿ ಕೇಂದ್ರಗಳನ್ನು ತೆರೆಯಲು ತೀರ್ಮಾನಿಸಲಾಗಿದೆ.
ವಯೋವೃದ್ಧರು, ಮಹಿಳೆಯರು, ಮಕ್ಕಳು ಸೇರಿದಂತೆ ಸುಮಾರು ೧೫೦ಕ್ಕೂ ಹೆಚ್ಚು ಮಂದಿ ತಾತ್ಕಾಲಿಕ ಕಾಳಜಿ ಕೇಂದ್ರಗಳಲ್ಲಿ ಆಶ್ರಯ ಪಡೆದುಕೊಂಡಿದ್ದಾರೆ. ಈ ನಡುವೆ ಬಿಸಿಎಂ ವಿದ್ಯಾರ್ಥಿ ನಿಲಯದ ಕಾಳಜಿ ಕೇಂದ್ರದಲ್ಲಿ ನವಜಾತ ಶಿಶುವಿನೊಂದಿಗೆ ಬಾಣಂತಿ ಮಹಿಳೆ ಇದ್ದು, ಇವರ ಪರದಾಟ ಹೇಳತಿಹದು. ಈ ನಡುವೆ ಅಂಬೇಡ್ಕರ್ ನಗರದ ಸಂತ್ರಸ್ಥರು ಕಾಳಜಿ ಕೇಂದ್ರಗಳಿಗೆ ತೆರಳಲು ನಿರಾಕರಿಸಿದ್ದು, ಇವರಿಗೆ ಇಲ್ಲಿಯೇ ಊಟ ನೀಡುವ ವ್ಯವಸ್ಥೆ ಕಲ್ಪಿಸಲಾಗಿದೆ. ಕಾಳಜಿ ಕೇಂದ್ರಗಳಲ್ಲಿ ಆರೋಗ್ಯ ಸಿಬ್ಬಂದಿಗಳನ್ನು ನಿಯೋಜನೆಗೊಳಿಸಲಾಗಿದೆ.
ಭದ್ರಾವತಿ ನಗರಸಭೆ ೨ನೇ ವಾರ್ಡಿನ ಕವಲಗುಂದಿ ಗ್ರಾಮದಲ್ಲಿ ಭದ್ರಾ ನದಿ ಪ್ರವಾದಿಂದಾಗಿ ಸಂತ್ರಸ್ಥರಾದವರು ಬಿಸಿಎಂ ವಿದ್ಯಾರ್ಥಿ ನಿಲಯದ ಕಾಳಜಿ ಕೇಂದ್ರದಲ್ಲಿ ಆಶ್ರಯ ಪಡೆದಿರುವುದು.
ಶಾಸಕರ ವಿರುದ್ಧ ಸಂತ್ರಸ್ಥರ ಆಕ್ರೋಶ :
ಗುಂಡೂರಾವ್ ಶೆಡ್ ಸಂತ್ರಸ್ಥರು ಶಾಸಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಭದ್ರಾ ನದಿಗೆ ತಡೆಗೋಡೆ ನಿರ್ಮಿಸುವಂತೆ ಹಲವಾರು ವರ್ಷಗಳಿಂದ ಒತ್ತಾಯಿಸಿಕೊಂಡು ಬರಲಾಗುತ್ತಿದೆ. ಆದರೂ ಸಹ ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ. ಚುನಾವಣೆ ಸಂದರ್ಭದಲ್ಲಿ ಮಾತ್ರ ಭರವಸೆ ನೀಡಿ ಹೋಗುತ್ತಾರೆ. ಪುನಃ ಈ ಕಡೆ ತಿರುಗಿ ನೋಡುವುದಿಲ್ಲ. ಪ್ರತಿ ವರ್ಷ ಮನೆಗಳು ಜಲಾವೃತಗೊಳ್ಳುತ್ತಿವೆ. ಇದರಿಂದಾಗಿ ಸಾಕಷ್ಟು ಸಂಕಷ್ಟ ಎದುರಿಸುವಂತಾಗಿದೆ. ನಮಗೆ ಬೇರೆ ಕಡೆ ನಿವೇಶನ ನೀಡಿ ತೆರವುಗೊಳಿಸಬಹುದು. ಆದರೆ ಮನೆ ನಿರ್ಮಿಸಿಕೊಳ್ಳುವಷ್ಟು ಹಣ ನಮ್ಮ ಬಳಿ ಇಲ್ಲ ಎಂದು ತಮ್ಮ ಅಳಲು ತೋರ್ಪಡಿಸಿಕೊಳ್ಳುವ ಜೊತೆಗೆ ತಕ್ಷಣ ತಡೆಗೋಡೆ ನಿರ್ಮಿಸುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಮುಳುಗಡೆಗೊಂಡ ಹೊಸ ಸೇತುವೆ ವೀಕ್ಷಿಸಲು ಜನರ ದಂಡು :
ನಗರದ ಕೆಎಸ್‌ಆರ್‌ಟಿಸಿ ಮುಖ್ಯ ಬಸ್ ನಿಲ್ದಾಣದ ಸಮೀಪದಲ್ಲಿರುವ ಹೊಸಸೇತುವೆ ೩ನೇ ಬಾರಿಗೆ ಪುನಃ ಮುಳುಗಡೆಗೊಂಡಿದ್ದು, ಸೇತುವೆಯನ್ನು ವೀಕ್ಷಿಸಲು ನಗರದ ವಿವಿಧೆಡೆಗಳಿಂದ ಜನರ ದಂಡು ಆಗಮಿಸುತ್ತಿದೆ. ಕೆಲವರು ಮೊಬೈಲ್‌ನಲ್ಲಿ ವಿಡಿಯೋ ರೆಕಾರ್ಡ್ ಮಾಡಿಕೊಳ್ಳುವುದು ಕಂಡು ಬಂದರೇ, ಮತ್ತೆ ಕೆಲವರು ಸೆಲ್ಫಿ ತೆಗೆದುಕೊಳ್ಳುವುದು ಕಂಡು ಬಂದಿತು.
ಜನರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡುವಂತಾಗಿದ್ದು, ಸೇತುವೆ ಎರಡು ಬದಿಯಲ್ಲೂ ಬ್ಯಾರಿಗೇಡ್‌ಗಳನ್ನು ಅಳವಡಿಸಲಾಗಿದೆ.
ವಾಹನ ದಟ್ಟಣೆ :
ಪ್ರವಾಹದಿಂದ ಹೊಸಸೇತುವೆ ಮುಳುಗಡೆಗೊಂಡಿರುವ ಹಿನ್ನಲೆಯಲ್ಲಿ ನಗರದಲ್ಲಿ ವಾಹನ ದಟ್ಟಣೆ ಅಧಿಕವಾಗಿದ್ದು, ಎಲ್ಲಾ ವಾಹನಗಳು ಹಳೇ ಸೇತುವೆ ಮೇಲೆ ಸಂಚರಿಸುವಂತಾಗಿದೆ. ಬಿ.ಎಚ್ ರಸ್ತೆ ಹಾಗು ಸಿ.ಎನ್ ರಸ್ತೆ ಗಳಲ್ಲಿ ವಾಹನ ದಟ್ಟಣೆ ಅಧಿಕವಾಗಿದೆ.
ಭದ್ರಾವತಿ ಹೃದಯ ಭಾಗದಲ್ಲಿರುವ ಹೊಸ ಸೇತುವೆ ಸಂಪೂರ್ಣವಾಗಿ ಮುಳುಗಡೆಗೊಂಡಿದ್ದು, ಭದ್ರಾ ನದಿಯಲ್ಲಿ ಪ್ರವಾಹ ಉಂಟಾಗಿರುವುದು.
ಭದ್ರಾವತಿ ನಗರಸಭೆ ವಾರ್ಡ್ ನಂ.೨೦ರ ವ್ಯಾಪ್ತಿಯ ಸುರಗಿತೋಪಿನಲ್ಲಿ ಭಾರಿ ಮಳೆಯಿಂದಾಗಿ ಮನೆಯೊಂದರ ಗೋಡೆ ಕುಸಿದು ಹೆಚ್ಚಿನ ಪ್ರಮಾಣದಲ್ಲಿ ಹಾನಿ ಸಂಭವಿಸಿರುವುದು.
ಭದ್ರಾವತಿ, ಆ. ೯: ನಗರಸಭೆ ವಾರ್ಡ್ ನಂ.೨೦ರ ವ್ಯಾಪ್ತಿಯ ಸುರಗಿತೋಪಿನಲ್ಲಿ ಭಾರಿ ಮಳೆಯಿಂದಾಗಿ ಸುಮಾರು ೧೦-೧೨ ಹಂಚಿನ ಮನೆಗಳ ಗೋಡೆಗಳು ಕುಸಿದು ಬಿದ್ದಿರುವ ಘಟನೆ ನಡೆದಿದೆ.
ಸುರಗಿತೋಪಿನ ೨, ೩ ಮತ್ತು ೪ನೇ ರಸ್ತೆಯಲ್ಲಿರುವ ಹಂಚಿನ ಮನೆಗಳ ಗೋಡೆಗಳು ಕುಸಿದು ಬಿದ್ದಿವೆ. ಸುಂದ್ರಮ್ಮ, ಸಂತೋಷ್, ವೆಂಕಟೇಶ್ ಮತ್ತು ರಮೇಶ್ ಎಂಬುವರ ಮನೆಗಳ ಗೋಡೆಗಳು ಹೆಚ್ಚಿನ ಪ್ರಮಾಣದಲ್ಲಿ ಕುಸಿದಿದ್ದು, ಉಳಿದಂತೆ ಕೆಲವು ಮನೆಗಳಿಗೆ ಸಣ್ಣ ಪ್ರಮಾಣದ ಹಾನಿಗಳಾಗಿವೆ.
ಇದುವರೆಗೂ ಯಾರು ಬಂದಿಲ್ಲ :
ಇಲ್ಲಿನ ಸುಮಾರು ೮೦ರಷ್ಟು ಮನೆಗಳಿಗೆ ಇನ್ನೂ ಹಕ್ಕು ಪತ್ರ ನೀಡಿಲ್ಲ. ಮೇಲಾಧಿಕಾರಿಗಳು ಹಕ್ಕು ಪತ್ರ ನೀಡುವುದನ್ನು ತಡೆ ಹಿಡಿದಿದ್ದಾರೆ ಎನ್ನುವ ಮಾಹಿತಿ ಇದ್ದು, ಇದೀಗ ಮನೆಗಳು ಕುಸಿದು ಬಿದ್ದಿದ್ದರೂ ಸಹ ಯಾವ ಅಧಿಕಾರಿಯೂ ಈ ಕಡೆ ತಿರುಗಿ ನೋಡಿಲ್ಲ. ತಕ್ಷಣ ಸಂಬಂಧಪಟ್ಟ ಅಧಿಕಾರಿಗಳು ಪರಿಶೀಲನೆ ನಡೆಸಿ ಸಂಕಷ್ಟಕ್ಕೆ ಸ್ಪಂದಿಸುವಂತೆ ಸಂತ್ರಸ್ಥರು ಅಳಲು ವ್ಯಕ್ತಪಡಿಸಿದ್ದಾರೆ.
ಸರ್ಕಾರದಿಂದ ಸೂಕ್ತ ಪರಿಹಾರ ನೀಡಿ:
ವಾರ್ಡ್ ಸದಸ್ಯೆ ಜಯಶೀಲ, ಶ್ರೀ ಚೌಡೇಶ್ವರಿ ದೇವಸ್ಥಾನ ಟ್ರಸ್ಟ್ ಗೌರವ ಅಧ್ಯಕ್ಷ ರಾಮಕೃಷ್ಣಪ್ಪ, ಜೆಡಿಎಸ್ ಪಕ್ಷದ ಮುಖಂಡರಾದ ಸುರೇಶ್(ಕ್ಲಬ್), ನಿರ್ಲಮಕುಮಾರಿ, ಉಮೇಶ್ ಸುರಗಿತೋಪು ಸೇರಿದಂತೆ ಇನ್ನಿತರರು, ಸಂತ್ರಸ್ಥರ ಮನೆಗಳಿಗೆ ತಕ್ಷಣ ಹಕ್ಕು ಪತ್ರ ನೀಡುವ ಜೊತೆಗೆ ಸರ್ಕಾರದಿಂದ ಸೂಕ್ತ ಪರಿಹಾರ ನೀಡುವಂತೆ ಆಗ್ರಹಿಸಿದ್ದಾರೆ.
ಭದ್ರಾವತಿ, ಆ. ೯: ತಾಲೂಕಿನಾದ್ಯಂತ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಸೋಮವಾರ ನಗರಸಭೆ ವ್ಯಾಪ್ತಿಯ ಕಾಚಗೊಂಡನಹಳ್ಳಿ ಗ್ರಾಮದ ನಿವಾಸಿ ಭಾಗ್ಯಮ್ಮ(೬೨) ಸ್ಥಳದಲ್ಲಿಯೇ ಮೃತಪಟ್ಟಿದ್ದು, ಇವರ ಅಂತ್ಯಕ್ರಿಯೆ ಮಂಗಳವಾರ ನಡೆಯಿತು.
ಸೋಮವಾರ ರಾತ್ರಿ ನಡೆದ ದುರ್ಘಟನೆಯಲ್ಲಿ ಮನೆಯಲ್ಲಿದ್ದ ಕೃಷ್ಣಮೂರ್ತಿ ಎಂಬುವರು ಗಾಯಗೊಂಡಿದ್ದು, ಶಿವಮೊಗ್ಗದ ಮ್ಯಾಕ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಭಾರಿ ಮಳೆ ಹಿನ್ನಲೆಯಲ್ಲಿ ಭದ್ರಾವತಿ ನಗರಸಭೆ ವ್ಯಾಪ್ತಿಯ ಕಾಚಗೊಂಡನಹಳ್ಳಿ ಗ್ರಾಮದ ಭಾಗ್ಯಮ್ಮ ಎಂಬುವರ ಮನೆ ಗೋಡೆ ಕುಸಿದಿರುವುದು.
ಮೃತಪಟ್ಟ ಭಾಗ್ಯಮ್ಮನವರ ಅಂತ್ಯಸಂಸ್ಕಾರ ಮಧ್ಯಾಹ್ನ ಸುಮಾರು ೧೨.೩೦ಕ್ಕೆ ಗ್ರಾಮದ ಸ್ಮಶಾನ ಭೂಮಿಯಲ್ಲಿ ನೆರವೇರಿತು. ಶಾಸಕ ಬಿ.ಕೆ ಸಂಗಮೇಶ್ವರ್, ವಿಧಾನ ಪರಿಷತ್ ಪರಿಷತ್ ಸದಸ್ಯ ಡಿ.ಎಸ್ ಅರುಣ್, ತಹಸೀಲ್ದಾರ್ ಆರ್. ಪ್ರದೀಪ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎಸ್. ಕುಮಾರ್, ಬಿಜೆಪಿ ಮಂಡಲ ಅಧ್ಯಕ್ಷ ಜಿ. ಧರ್ಮಪ್ರಸಾದ್, ಜಿಲ್ಲಾ ಕಾರ್ಯದರ್ಶಿ ಎಂ. ಪ್ರಭಾಕರ್, ಗ್ರಾಮದ ಮುಖಂಡ ಮಂಜುನಾಥ್, ರಾಜಸ್ವ ನಿರೀಕ್ಷಕರು, ಗ್ರಾಮ ಲೆಕ್ಕಾಧಿಕಾರಿಗಳು, ವಿವಿಧ ಪಕ್ಷಗಳ ಸೇರಿದಂತೆ ಇನ್ನಿತರರು ಅಂತಿಮ ದರ್ಶನ ಪಡೆದು ಕುಟುಂಬಸ್ಥರಿಗೆ ಸಾಂತ್ವಾನ ಹೇಳಿದರು.
ಗೋಡೆ ಕುಸಿದು ಬಿದ್ದ ಪರಿಣಾಮ ಮೃತಪಟ್ಟ ಮಹಿಳೆ ಭಾಗ್ಯಮ್ಮನವರ ಅಂತ್ಯ ಸಂಸ್ಕಾರ ಮಂಗಳವಾರ ನಡೆಯಿತು. ವಿಧಾನಪರಿಷತ್ ಸದಸ್ಯ ಡಿ.ಎಸ್ ಅರುಣ್ ಅಂತಿಮ ದರ್ಶನ ಪಡೆದು ಕುಟುಂಬಸ್ಥರಿಗೆ ಸಾಂತ್ವಾನ ಹೇಳಿದರು.
ಪ್ರವಾಹ ಸಂತ್ರಸ್ಥರ ನಿಧಿಯಿಂದ ಹಾನಿಯಾದ ಮನೆ ಪುನರ್ ನಿರ್ಮಾಣಕ್ಕೆ ೫ ಲಕ್ಷ ರು. ಹಾಗು ಮೃತಪಟ್ಟ ಮಹಿಳೆಗೆ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ೨ ಲಕ್ಷ ರು. ಒಟ್ಟು ೭ ಲಕ್ಷ ರು. ಈ ಪೈಕಿ ಸ್ಥಳದಲ್ಲಿಯೇ ೫ ಲಕ್ಷ ರು. ಪರಿಹಾರದ ಚೆಕ್ ಕುಟುಂಬಸ್ಥರಿಗೆ ವಿತರಿಸಲಾಯಿತು.