Wednesday, August 17, 2022

ಶಿವಮೊಗ್ಗದ ಈ ನಾಲ್ಕು ಅದ್ಭುತಗಳಿಗೆ ವೋಟ್ ಮಾಡಿ ಭರದಿಂದ ಸಾಗಿದೆ ಕರ್ನಾಟಕದ ಏಳು ಅದ್ಭುತ ಅಭಿಯಾನ

ಇದರಲ್ಲಿ ನೀವು ಪಾಲ್ಗೊಳ್ಳಿ

ಶಿವಮೊಗ್ಗ:  ವಿಶ್ವದ ಏಳು ಅದ್ಭುತಗಳ ಮಾದರಿಯಲ್ಲಿ ಕರ್ನಾಟಕದ ಏಳು ಅದ್ಭುತಗಳನ್ನು ಗುರುತಿಸಲು ಈಗ ರಾಜ್ಯವ್ಯಾಪಿ ಅಭಿಯಾನ ನಡೆಯುತ್ತಿದೆ. ಈ ವಿಶೇಷ ಅಭಿಯಾನದಲ್ಲಿ ನೀವು ಪಾಲ್ಗೊಂಡು ಶಿವಮೊಗ್ಗದ ಅದ್ಭುತಗಳನ್ನು ಕರುನಾಡಿನ ಏಳು ಅದ್ಭುತಗಳ ಸಾಲಿನಲ್ಲಿ ನಿಲ್ಲಿಸುವ ಸುವರ್ಣಾವಕಾಶವಿದೆ.
ಶಿವಮೊಗ್ಗ ಜಿಲ್ಲೆಯ ನಾಲ್ಕು ಸ್ಥಳಗಳು ಈಗಾಗಲೇ ಕರ್ನಾಟಕದ ನೂರು ಅದ್ಭುತಗಳ ಪಟ್ಟಿಯಲ್ಲಿ ಸ್ಥಾನ ಪಡೆದಿವೆ. ಈ ನಾಲ್ಕು ಸ್ಥಳಗಳಿಗೆ ವೋಟ್ ಮಾಡುವ ಮೂಲಕ ನೀವು ಇವುಗಳನ್ನು ರಾಜ್ಯದ ಅದ್ಭುತವನ್ನಾಗಿ ಮಾಡಬಹುದು.
ಶಿವಮೊಗ್ಗದ ನಾಮ ನಿರ್ದೇಶನಗಳು :
ರಾಜ, ರಾಕೆಟ್‌, ರೋರರ್‌, ಲೇಡಿ ಎಂಬ ಶರಾವತಿಯ ನಾಲ್ಕು ಧಾರೆಗಳು ಅಬ್ಬರಿಸಿ ಭೋರ್ಗರೆಯುವ ಜಗತ್ಪ್ರಸಿದ್ಧ ಜೋಗ ಜಲಪಾತ. ಸಹ್ಯಾದ್ರಿ ಶ್ರೇಣಿಯ ಮಳೆಕಾಡಿನಲ್ಲಿರುವ ಸಮುದ್ರಮಟ್ಟದಿಂದ ೧೩೫೪ ಮೀಟರ್‌ ಎತ್ತರದಲ್ಲಿರುವ ಚಾರಣಿಗರ ನೆಚ್ಚಿನ ತಾಣ ಕೊಡಚಾದ್ರಿ ಬೆಟ್ಟ. ದಕ್ಷಿಣದ ಚಿರಾಪುಂಜಿ ಎಂಬ ಹಿರಿಮೆ ಹೊಂದಿದ್ದ ಅದ್ಭುತ ಪ್ರಕೃತಿ ಸೌಂದರ್ಯದ, ಸೂರ್ಯಾಸ್ತ ವೀಕ್ಷಣೆಗೂ ಪ್ರಸಿದ್ಧವಾದ ತಾಣ ಆಗುಂಬೆ ಘಾಟಿ. ೧೫೦೦ ವರ್ಷ ಹಳೆಯ, ಹಲ್ಮಿಡಿಗಿಂತಲೂ ಪುರಾತನವಾದ ಶಾಸನ ತಾಳಗುಂದ ಶಿಲಾ ಶಾಸನ.
ಈಗಾಗಲೇ https://www.7wondersofkarnataka.com ನಲ್ಲಿ ನಾಮನಿರ್ದೇಶನಗೊಂಡಿರುವ ನೂರು ಅದ್ಭುತಗಳ ಸಾಲಿನಲ್ಲಿ ನಿಂತಿರುವ ಶಿವಮೊಗ್ಗದ ಈ ನಾಲ್ಕು ಸ್ಥಳಗಳ ಪೈಕಿ ನಿಮ್ಮ ಆಯ್ಕೆಯ ಸ್ಥಳಕ್ಕೆ ತಲಾ 10 ವೋಟ್ ಮಾಡಿ ಇವನ್ನು ರಾಜ್ಯದ ಏಳು ಅದ್ಭುತಗಳನ್ನಾಗಿಸಬಹುದು.
ಪ್ರಸ್ತುತ 100 ಅದ್ಭುತಗಳ ಪಟ್ಟಿಯಲ್ಲಿರುವ ಸ್ಥಳಗಳಲ್ಲಿ ಅತಿ ಹೆಚ್ಚು ವೋಟ್ ಪಡೆದ ಸ್ಥಳಗಳು ಮುಂದಿನ ಹಂತದಲ್ಲಿ ಅಂತಿಮ 49ರ ಪಟ್ಟಿಗೆ ಬರಲಿವೆ. ತದನಂತರ ಅಂತಿಮ 21ರ ಪಟ್ಟಿಯಲ್ಲಿ ಉಳಿದು ಬಳಿಕ ಪ್ರವಾಸೋದ್ಯಮ ಇಲಾಖೆ ತಜ್ಞರ ಸಮಿತಿಯ ಆಯ್ಕೆಯಂತೆ ಕರ್ನಾಟಕದ ಏಳು ಅದ್ಭುತಗಳ ಸಾಲಿನಲ್ಲಿ ನಿಲ್ಲಬಹುದು. ಹೀಗಾಗಿ ಶಿವಮೊಗ್ಗ ಜಿಲ್ಲೆಯ ಪ್ರತಿಯೊಬ್ಬರೂ ತಮ್ಮ ಪಾಲಿನ ಹತ್ತು ವೋಟ್‌ಗಳನ್ನು ತಮ್ಮ ನೆಚ್ಚಿನ ಸ್ಥಳಕ್ಕೆ ನೀಡಬಹುದು. ಜತೆಗೆ ಸ್ನೇಹಿತರು, ಕುಟುಂಬ ಸದಸ್ಯರೂ ಅಭಿಯಾನದಲ್ಲಿ ಪಾಲ್ಗೊಳ್ಳುವಂತೆ ಪ್ರೇರೇಪಿಸಬಹುದು.
ಏನಿದು ಅಭಿಯಾನ?:
ಪ್ರಪಂಚದ ಏಳು ಅದ್ಭುತಗಳನ್ನು ಎಂದೋ ಹುಡುಕಿಯಾಗಿದೆ. ಅದೇ ಮಾದರಿಯಲ್ಲಿ ಕರ್ನಾಟಕದ ಏಳು ಅದ್ಭುತಗಳನ್ನು ಗುರುತಿಸಲು 'ಕನ್ನಡಪ್ರಭ ಮತ್ತು ಏಷ್ಯಾನೆಟ್ ಸುವರ್ಣ ನ್ಯೂಸ್' ಸಂಸ್ಥೆಯು ಪ್ರವಾಸೋದ್ಯಮ ಇಲಾಖೆಯ ಸಹಭಾಗಿತ್ವದಲ್ಲಿ ಈ ವಿಶಿಷ್ಟ ಅಭಿಯಾನ ಹಮ್ಮಿಕೊಂಡಿದೆ.
'ಕರ್ನಾಟಕ ಒಂದು ರಾಜ್ಯ ಹಲವು ಜಗತ್ತು' ಎಂದೇ ಪ್ರಸಿದ್ಧಿ. ಇಂತಹ ಕರ್ನಾಟಕದ ಸುಂದರ ಕರಾವಳಿತೀರ, ದುರ್ಗಮ ಕಾನನಗಳು, ರಮಣೀಯ ಜಲಪಾತಗಳು, ಸಮುದ್ರ ತೀರಗಳು, ಐತಿಹಾಸಿಕ ಸ್ಥಳಗಳನ್ನು ಇಂತಹ ಹಲವು ಜಗತ್ತುಗಳನ್ನು ಒಳಗೊಂಡಿದೆ. ಈ ಪೈಕಿ ಏಳು ಅದ್ಭುತಗಳನ್ನು ಸಾರ್ವಜನಿಕರೇ ಗುರುತಿಸಲು ರೂಪಿಸಿರುವ ವೇದಿಕೆಯೇ 'ಬನ್ನಿ ಹುಡುಕೋಣ ಕರ್ನಾಟಕದ ಏಳು ಅದ್ಭುತಗಳನ್ನು' ಎಂಬ ಈ ಅಭಿಯಾನ.



ಯಾವ ಹಂತದಲ್ಲಿದೆ ಅಭಿಯಾನ?:
ಮೇ ತಿಂಗಳಲ್ಲಿ ಚಾಲನೆ ದೊರೆತಿರುವ ಆರು ಹಂತದ ಈ ಅಭಿಯಾನ ಎರಡನೇ ಹಂತಕ್ಕೆ ತಲುಪಿದೆ. ಮೊದಲ ಹಂತದಲ್ಲಿ ಸಾರ್ವಜನಿಕರು ವೆಬ್‌ಸೈಟ್ ಮೂಲಕ ತಮ್ಮ ನೆಚ್ಚಿನ ಊರು, ಜಿಲ್ಲೆ, ತಾಲೂಕು ಸೇರಿ ರಾಜ್ಯದ ಯಾವುದೇ ಜಾಗದಲ್ಲಿ ತಾವು ನೋಡಿದ ಅದ್ಭುತ ಪ್ರವಾಸೀ ಸ್ಥಳ, ಪಾರಂಪರಿಕ ತಾಣ, ಅತ್ಯಾಧುನಿಕ ಕಟ್ಟಡ, ರಸ್ತೆ ಹೀಗೆ ಅದ್ಭುತ ಎನಿಸುವ ಸ್ಥಳದ ಫೋಟೊ ಅಪ್‌ಲೋಡ್ ಮಾಡಿ ಆ ಸ್ಥಳದ ವೈಶಿಷ್ಟ್ಯವನ್ನು ದಾಖಲು ಮಾಡಿ ನಾಮನಿರ್ದೇಶನ ಮಾಡಿದ್ದಾರೆ.
ಇದೀಗ, ಎರಡನೇ ಹಂತದಲ್ಲಿ ಸಾರ್ವಜನಿಕರಿಂದ ನಾಮನಿರ್ದೇಶನಗೊಂಡ ಅದ್ಭುತಗಳಲ್ಲಿ 100 ಸ್ಥಳಗಳನ್ನು ಆಯ್ಕೆ ಮಾಡಿ, ಅತ್ಯದ್ಭುತ ತಾಣಗಳು ಯಾವುವು ಎಂಬ ಬಗ್ಗೆ ವೋಟಿಂಗ್‌ ನಡೆಯುತ್ತಿದೆ.
ವೋಟಿಂಗ್ ನಿಯಮ:
- ಆಯ್ಕೆಯಾಗಿರುವ ನೂರು ಅದ್ಭುತಗಳಿಗೂ ವೋಟ್ ಹಾಕಬಹುದು.
- ಪ್ರತಿಯೊಂದು ಅದ್ಭುತಕ್ಕೂ ಹತ್ತು ವೋಟ್ ಮಾಡಲು ಅವಕಾಶವಿರುತ್ತದೆ.
- ಈ ಮೆಗಾ ಅಭಿಯಾನದ ಬಗ್ಗೆ ನಿಮ್ಮ ಸ್ನೇಹಿತರು ಹಾಗೂ ಕುಟುಂಬದವರಿಗೂ ತಿಳಿಸಿ.
-ತನ್ಮೂಲಕ ನಿಮ್ಮ ಜಿಲ್ಲೆಯ ಸ್ಥಳವನ್ನು ಅದ್ಭುತವನ್ನಾಗಿಸಿ.

ಭಾರತೀಯ ಜನತಾ ಪಕ್ಷ ಪ್ರತಿಯೊಬ್ಬರ ಸಂಕಷ್ಟಗಳಿಗೆ ಸ್ಪಂದಿಸುವ ಪಕ್ಷ : ಜಿ. ಧರ್ಮಪ್ರಸಾದ್

ಭದ್ರಾವತಿಯಲ್ಲಿ ಬುಧವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಮಂಡಲ ಅಧ್ಯಕ್ಷ ಜಿ. ಧರ್ಮಪ್ರಸಾದ್ ಮಾತನಾಡಿದರು.
    ಭದ್ರಾವತಿ, ಆ. ೧೭: ಭಾರತೀಯ ಜನತಾ ಪಕ್ಷ ಪ್ರತಿಯೊಬ್ಬರ ಸಂಕಷ್ಟಕ್ಕೆ ಸ್ಪಂದಿಸುವ ಪಕ್ಷವಾಗಿದ್ದು, ಸಂದರ್ಭಗಳನ್ನು ದುರ್ಬಳಕೆ ಮಾಡಿಕೊಂಡು ರಾಜಕೀಯ ನಡೆಸುವುದಿಲ್ಲ. ಇದನ್ನು ಶಾಸಕ ಬಿ.ಕೆ ಸಂಗಮೇಶ್ವರ್ ಅರ್ಥ ಮಾಡಿಕೊಳ್ಳಬೇಕೆಂದು ಪಕ್ಷದ ತಾಲೂಕು ಮಂಡಲ ಅಧ್ಯಕ್ಷ ಜಿ. ಧರ್ಮಪ್ರಸಾದ್ ಹೇಳಿದರು.
    ಅವರು ಬುಧವಾರ ಪಕ್ಷದ ಕಛೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಶಾಸಕರು ಕ್ಷೇತ್ರದಲ್ಲಿ ಕಳೆದ ೨ ದಿನಗಳ ಹಿಂದೆ ಹಿಂದೂ ಸಮಾಜದ ಯುವಕನೋರ್ವನ ಮೇಲೆ ನಡೆದಿರುವ ಹಲ್ಲೆಗೆ ಸಂಬಂಧಿಸಿದಂತೆ ಅಲ್ಪಸಂಖ್ಯಾತರನ್ನು ಓಲೈಸಿಕೊಳ್ಳುವ ನಿಟ್ಟಿನಲ್ಲಿ ಒಂದು ಜವಾಬ್ದಾರಿಯುತ ಸ್ಥಾನದಲ್ಲಿರುವ ಶಾಸಕರು ಬಿಜೆಪಿ ಪಕ್ಷ ಹಾಗು ನಾಯಕರ ವಿರುದ್ಧ ವಿನಾಕಾರಣ ಮಾತನಾಡುವುದು ಸರಿಯಲ್ಲ ಎಂದರು.
    ಬಿಜೆಪಿ ಪಕ್ಷ ಎಂದಿಗೂ ಸಂದರ್ಭಗಳನ್ನು ದುರುಪಯೋಗಪಡಿಸಿಕೊಳ್ಳುವುದಿಲ್ಲ. ಆದರೆ ಪಕ್ಷ ಹಾಗು ನಾಯಕರು ಎಂದಿಗೂ ಹಿಂದೂ ಸಮಾಜದ ಪರವಾಗಿ ಹಾಗು ಏಳಿಗಾಗಿ ಶ್ರಮಿಸುತ್ತಾರೆ. ಹಿಂದೂ ಸಮಾಜದಲ್ಲಿ ಯಾರೇ ಸಂಕಷ್ಟಕ್ಕೆ ಒಳಗಾದರೂ ಸಹ ಅವರ ಪರವಾಗಿ ಇರುತ್ತಾರೆ. ಪಕ್ಷದ ತತ್ವ ಸಿದ್ದಾಂತಗಳು  ಪಕ್ಷದ ಪ್ರತಿಯೊಬ್ಬರಲ್ಲೂ ಯಾರೇ ಸಂಕಷ್ಟಕ್ಕೆ ಒಳಗಾದರೂ ಸ್ಪಂದಿಸುವ ಮನೋಭಾವ ಬೆಳೆಸಿಕೊಳ್ಳುವಂತೆ ಮಾಡಿವೆ. ಮಾಜಿ ಉಪಮುಖ್ಯಮಂತ್ರಿಗಳಾದ ಕೆ.ಎಸ್ ಈಶ್ವರಪ್ಪ ಅವರು ಹಿಂದೂ ಸಮಾಜದ ಏಳಿಗಾಗಿ ಹಗಲಿರುಳು ಶ್ರಮಿಸುತ್ತಿದ್ದಾರೆ. ಇಂತಹ ನಾಯಕರು ಮಂಗಳವಾರ ನಗರದ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ ಹಲ್ಲೆಗೊಳಗಾಗಿ ಚಿಕಿತ್ಸೆ ಪಡೆಯುತ್ತಿರುವ ಸುನಿಲ್ ಆರೋಗ್ಯ ವಿಚಾರಿಸಿ ಹೆಚ್ಚಿನ ಚಿಕಿತ್ಸೆ ಅಗತ್ಯವಿದ್ದಲ್ಲಿ ಎಲ್ಲಾ ರೀತಿಯ ವ್ಯವಸ್ಥೆ ಕಲ್ಪಿಸಿಕೊಡುವುದಾಗಿ ಭರವಸೆ ನೀಡಿದ್ದಾರೆ. ಇಲ್ಲಿ ಯಾವುದೇ ರಾಜಕೀಯ ದುರುದ್ದೇಶವಿಲ್ಲ ಎಂದರು.
    ಶಾಸಕರು ಈಶ್ವರಪ್ಪನವರ ಭೇಟಿಯನ್ನು ರಾಜಕೀಯ ದುರುದ್ದೇಶಕ್ಕೆ ಬಳಕೆ ಮಾಡಿಕೊಳ್ಳುತ್ತಿದ್ದಾರೆ. ವಿನಾಕಾರಣ ಪಕ್ಷ ಹಾಗು ನಾಯಕರ ವಿರುದ್ಧ ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಿದ್ದಾರೆ. ಇಂತಹ ಆರೋಪಗಳಿಗೆ ಕ್ಷೇತ್ರದ ನಾಗರೀಕರು ಕಿವಿ ಕೊಡಬಾರದು. ಕ್ಷೇತ್ರದಲ್ಲಿ ಈ ರೀತಿಯ ಘಟನೆ ನಡೆದಿರುವುದು ನಮ್ಮ ಮನಸ್ಸಿಗೂ ನೋವಾಗಿದೆ. ಎಲ್ಲೆಡೆ ಶಾಂತಿ ನೆಲೆಸಬೇಕು. ಈ ನಿಟ್ಟಿನಲ್ಲಿ ಎಲ್ಲರೂ ಸಹಕಾರ ನೀಡುವಂತೆ ಮನವಿ ಮಾಡಿದರು.
    ಒಂದು ಜವಾಬ್ದಾರಿಯುತ ಸ್ಥಾನದಲ್ಲಿರುವ ಶಾಸಕರು ಹಲ್ಲೆಗೊಳಗಾದವರು ಯಾರೇ ಇರಲಿ ಅವರು ಮೊದಲು ಆಸ್ಪತ್ರೆಗೆ ತೆರಳಿ ಸಾಂತ್ವನ ಹೇಳಬೇಕು. ಅದು ಬಿಟ್ಟು ಇಲ್ಲ ಸಲ್ಲದ ಆರೋಪ ಮಾಡುವುದು ಸರಿಯಲ್ಲ.
    ಪತ್ರಿಕಾಗೋಷ್ಠಿಯಲ್ಲಿ ಮಂಡಲ ಪ್ರಧಾನ ಕಾರ್ಯದರ್ಶಿ ಚನ್ನೇಶ್, ಜಿಲ್ಲಾ ಮುಖಂಡ ಎಂ. ಮಂಜುನಾಥ್, ಚಂದ್ರು ದೇವರನರಸೀಪುರ, ಅನ್ನಪೂರ್ಣ ಸಾವಂತ್, ಆನಂದ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಕ್ಷೇತ್ರದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಲು ಸಾರ್ವಜನಿಕರ ಸಹಕಾರ ಅಗತ್ಯ : ಅಲೋಕ್ ಕುಮಾರ್


ಪೊಲೀಸ್ ಇಲಾಖೆ ವತಿಯಿಂದ ಸಾರ್ವಜನಿಕರಲ್ಲಿ ವಿಶ್ವಾಸ ಮೂಡಿಸುವ ಉದ್ದೇಶದಿಂದ ಬುಧವಾರ ರಾಜ್ಯ ಪೊಲೀಸ್ ಕಾನೂನು ಮತ್ತು ಸುವ್ಯವಸ್ಥೆ ಹೆಚ್ಚುವರಿ ಮಹಾನಿರ್ದೇಶಕ(ಎಡಿಜಿಪಿ) ಅಲೋಕ್ ಕುಮಾರ್ ನೇತೃತ್ವದಲ್ಲಿ ಭದ್ರಾವತಿಯಲ್ಲಿ ಪಥಸಂಚಲನ ಹಮ್ಮಿಕೊಳ್ಳಲಾಗಿತ್ತು.
    ಭದ್ರಾವತಿ, ಆ. ೧೭ : ಕ್ಷೇತ್ರದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಲು ಸಾರ್ವಜನಿಕರು ಹೆಚ್ಚಿನ ಸಹಕಾರ ನೀಡಬೇಕೆಂದು ರಾಜ್ಯ ಪೊಲೀಸ್ ಕಾನೂನು ಮತ್ತು ಸುವ್ಯವಸ್ಥೆ ಹೆಚ್ಚುವರಿ ಮಹಾನಿರ್ದೇಶಕ(ಎಡಿಜಿಪಿ) ಅಲೋಕ್ ಕುಮಾರ್ ಮನವಿ ಮಾಡಿದರು.
ಅವರು ನಗರದಲ್ಲಿ ಬುಧವಾರ ಪೊಲೀಸ್ ಇಲಾಖೆ ವತಿಯಿಂದ ಸಾರ್ವಜನಿಕರಲ್ಲಿ  ವಿಶ್ವಾಸ ಮೂಡಿಸುವ ಉದ್ದೇಶದಿಂದ ಹಮ್ಮಿಕೊಳ್ಳಲಾಗಿದ್ದ ಪಥಸಂಚಲನದಲ್ಲಿ ಪಾಲ್ಗೊಂಡು ಮಾತನಾಡಿದರು.
    ಪೊಲೀಸ್ ಇಲಾಖೆ ಸದಾ ಕಾಲ ನಿಮ್ಮ ರಕ್ಷಣೆಗೆ ಇದೆ ಎಂಬ ಭಾವನೆಯನ್ನು ಸಾರ್ವಜನಿಕರಲ್ಲಿ ಮೂಡಿಸುವ ಉದ್ದೇಶದಿಂದ ಶಿವಮೊಗ್ಗ ಮತ್ತು ಭದ್ರಾವತಿ ನಗರಗಳಲ್ಲಿ ಪಥಸಂಚಲನ ನಡೆಸಲಾಗುತ್ತಿದೆ. ಇದು ೩ನೇ ಪಥಸಂಚಲನವಾಗಿದ್ದು, ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ, ವ್ಯಾಪಾರಸ್ಥರಿಗೆ, ಎಲ್ಲಾ ವರ್ಗದ ನೌಕರರಿಗೆ ಹಾಗು ಸಮಸ್ತ ನಾಗರೀಕರಿಗೆ ಯಾವುದೇ ರೀತಿ ತೊಂದರೆಯಾಗಬಾರದು. ಈ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಎಚ್ಚರವಹಿಸಿದ್ದು, ಅಗತ್ಯವಿರುವ ಸಿಬ್ಬಂದಿಗಳನ್ನು ಸಹ ನಿಯೋಜನೆಗೊಳಿಸಿದೆ. ಇದಕ್ಕೆ ಪೂರಕವೆಂಬಂತೆ ಸಾರ್ವಜನಿಕರು ಹೆಚ್ಚಿನ ಸಹಕಾರ ನೀಡಬೇಕೆಂದರು.  


    ತಪ್ಪು ಮಾಡಿದವರು ಯಾರೇ ಇರಲಿ ಅವರನ್ನು ಬಿಡುವುದಿಲ್ಲ :
    ನಗರದಲ್ಲಿ ಶಾಂತಿ ಸುವ್ಯವಸ್ಥೆಗೆ ಭಂಗ ಉಂಟುಮಾಡಿರುವ ಯಾರೇ ಇರಲಿ, ಯಾವುದೇ ಸಂಘಟನೆಗೆ ಸೇರಿದವರಾಗಿರಲಿ ಅವರನ್ನು ಪೊಲೀಸರು ಬಿಡುವುದಿಲ್ಲ. ಅಲ್ಲದೆ ತಪ್ಪು ಮಾಡದವರಿಗೆ ವಿನಾಕಾರಣ ತೊಂದರೆ ನೀಡುವುದಿಲ್ಲ. ನಗರದಲ್ಲಿ ನಡೆದಿರುವ ಘಟನೆಗೆ ಸಂಬಂಧಿಸಿದಂತೆ ಇನ್ನೂ ವಿಚಾರಣೆ ಬಾಕಿ ಇದ್ದು, ಅಧಿಕೃತವಾಗಿ ಏನನ್ನು ಹೇಳಲು ಸಾಧ್ಯವಿಲ್ಲ. ಪ್ರಸ್ತುತ ೧೪೪ ಕಲಂರನ್ವಯ ವಿಧಿಸಲಾಗಿರುವ ನಿಷೇಧಾಜ್ಞೆ ಗುರುವಾರದವರೆಗೂ ಮುಂದುವರೆಯಲಿದ್ದು, ಆ ನಂತರ ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು ಎಂದರು.
    ರಂಗಪ್ಪ ವೃತ್ತದಿಂದ ಆರಂಭಗೊಂಡ ಪಥಸಂಚಲನ ಮಾಧವಚಾರ್ ವೃತ್ತದ ಮೂಲಕ ಭೂತನಗುಡಿ ಪ್ರವೇಶಿಸಿ ನಂತರ ಹೊಳೆಹೊನ್ನೂರು ವೃತ್ತ ತಲುಪಿ ರಂಗಪ್ಪ ವೃತ್ತದಲ್ಲಿ ಅಂತ್ಯಗೊಂಡಿತು.
    ಪಥ ಸಂಚಲನದಲ್ಲಿ ೩ ಕೆಎಸ್‌ಆರ್‌ಪಿ ವಾಹನ, ೩ ರ್‍ಯಾಪಿಡ್ ಆಕ್ಷನ್ ಪೊಲೀಸ್ ಹಾಗು ನಾಗರೀಕ ಪೊಲೀಸ್ ಪಡೆ ಸೇರಿದಂತೆ ಒಟ್ಟು ಸುಮಾರು ೨೦೦ ಮಂದಿಯೊಂದಿಗೆ ಪೂರ್ವವಲಯ ಪೊಲೀಸ್ ಮಹಾನಿರ್ದೇಶಕ ತ್ಯಾಗರಾಜನ್, ಜಿಲ್ಲಾ ರಕ್ಷಣಾಧಿಕಾರಿ ಡಾ. ಲಕ್ಷ್ಮೀಪ್ರಸಾದ್, ಹೆಚ್ಚುವರಿ ರಕ್ಷಣಾಧಿಕಾರಿ ವಿಕ್ರಮ್ ಅಮತೆ, ವೈರ್‌ಲೆಸ್ ವಿಭಾಗದ ರಕ್ಷಣಾಧಿಕಾರಿ ಕಾರ್ತಿಕ್‌ರೆಡ್ಡಿ, ತಹಸೀಲ್ದಾರ್ ಆರ್. ಪ್ರದೀಪ್, ನಗರಸಭೆ ಪೌರಾಯುಕ್ತ ಮನುಕುಮಾರ್, ಪೊಲೀಸ್ ಉಪಾಧೀಕ್ಷಕ ಜಿತೇಂದ್ರಕುಮಾರ್ ದಯಾಮ, ನಗರ ವೃತ್ತ ನಿರೀಕ್ಷಕರಾದ ರಾಘವೇಂದ್ರ ಕಾಂಡಿಕೆ, ಗ್ರಾಮಾಂತರ ವೃತ್ತ ನಿರೀಕ್ಷಕ ಗುರುರಾಜ್, ಆರ್‌ಎಎಫ್ ಅಧಿಕಾರಿಗಳು, ಸೇರಿದಂತೆ ನಗರದ ವಿವಿಧ ಪೊಲೀಸ್ ಠಾಣಾಧಿಕಾರಿಗಳು ಹೆಜ್ಜೆ ಹಾಕಿದರು.



Tuesday, August 16, 2022

ಬಿವೈಆರ್ ಹುಟ್ಟುಹಬ್ಬ ವಿಶೇಷ ಪೂಜೆ

ಸಂಸದ ಬಿ.ವೈ ರಾಘವೇಂದ್ರ ಹುಟ್ಟುಹಬ್ಬ ಹಿನ್ನಲೆಯಲ್ಲಿ ಮಂಗಳವಾರ ಭದ್ರಾವತಿ ಹೊಸಮನೆ ಶ್ರೀ ಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನದಲ್ಲಿ ಬಿಜೆಪಿ ಪ್ರಮುಖರು ವಿಶೇಷ ಪೂಜೆ ಸಲ್ಲಿಸಿದರು.
    ಭದ್ರಾವತಿ, ಆ. ೧೬: ಸಂಸದ ಬಿ.ವೈ ರಾಘವೇಂದ್ರ ಹುಟ್ಟುಹಬ್ಬ ಹಿನ್ನಲೆಯಲ್ಲಿ ಮಂಗಳವಾರ ಹೊಸಮನೆ ಶ್ರೀ ಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನದಲ್ಲಿ ಬಿಜೆಪಿ ಪ್ರಮುಖರು ವಿಶೇಷ ಪೂಜೆ ಸಲ್ಲಿಸಿದರು.
    ಸಂಸದರ ಹೆಸರಿನಲ್ಲಿ ಕುಂಕುಂಮಾರ್ಚನೆ ನೆರವೇರಿಸಿ ಇನ್ನೂ ಹೆಚ್ಚಿನ ಆಯುರಾರೋಗ್ಯ ಕರುಣಿಸಲಿ ಎಂದು ಪ್ರಾರ್ಥಿಸಲಾಯಿತು. ಶಿವಮೊಗ್ಗದಲ್ಲಿ ಸೋಮವಾರ ನಡೆದ ಅಹಿತಕರ ಘಟನೆಗಳ ಹಿನ್ನಲೆಯಲ್ಲಿ ಮುಂಜಾಗ್ರತೆ ಕ್ರಮವಾಗಿ ನಗರಸಭೆ ವ್ಯಾಪ್ತಿ ಹಾಗು ಕೆಲ ಗ್ರಾಮಾಂತರ ಪ್ರದೇಶದ ವ್ಯಾಪ್ತಿ ೧೪೪ ಕಲಂರನ್ವಯ ನಿಷೇಧಾಜ್ಞೆ ಜಾರಿಗೊಳಿಸಿರುವ ಹಿನ್ನಲೆಯಲ್ಲಿ ಸಂಸದರ ಹುಟ್ಟುಹಬ್ಬವನ್ನು ಈ ಬಾರಿ ಸರಳವಾಗಿ ಆಚರಿಸಲಾಯಿತು.
    ಪಕ್ಷದ ಪ್ರಮುಖರಾದ ಜಿ. ಆನಂದ್‌ಕುಮಾರ್, ಮಂಗೋಟೆ ರುದ್ರೇಶ್, ಎಂ. ಮಂಜುನಾಥ್, ನಾಗರಾಜ್, ನರೇಂದ್ರ, ಮುರುಗನ್, ಬಿ.ಎಸ್ ಶ್ರೀನಾಥ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಹಲ್ಲೆಗೊಳಗಾಗಿರುವ ಸುನಿಲ್ ಬಜರಂಗದಳ ಕಾರ್ಯಕರ್ತ : ರಾಘವನ್ ವಡಿವೇಲು

ರಾಘವನ್ ವಡಿವೇಲು
    ಭದ್ರಾವತಿ, ಆ. ೧೬: ನಗರಸಭೆ ವ್ಯಾಪ್ತಿಯ ನೆಹರು ನಗರದ ನಿವಾಸಿ ಸುನಿಲ್ ಬಜರಂಗದಳ ಕಾರ್ಯಕರ್ತನಾಗಿದ್ದು, ಮಂಗಳವಾರ ಬೆಳಿಗ್ಗೆ ಮುಸ್ಲಿಂ ಸಮುದಾಯದ ಕೆಲವರು ಈತನ ಮೇಲೆ ಹಲ್ಲೆ ನಡೆಸಿದ್ದಾರೆ. ಪೊಲೀಸರು ಸುನಿಲ್ ನೀಡಿದ ಹೇಳಿಕೆಯನ್ನು ದೂರಿನಲ್ಲಿ ಸರಿಯಾಗಿ ದಾಖಲಿಸಿಕೊಂಡಿಲ್ಲ ಎಂದು ಬಜರಂಗದಳ ಜಿಲ್ಲಾ ಸಹ ಸಂಚಾಲಕ ರಾಘವನ್ ವಡಿವೇಲು ಆರೋಪಿಸಿದ್ದಾರೆ.
    ಪತ್ರಿಕೆಗೆ ಮಾಹಿತಿ ನೀಡಿದ ಅವರು, ಹಲ್ಲೆಗೊಳಗಾಗಿ ನಗರದ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸುನಿಲ್ ಮೂಲತಃ ಬಜರಂಗದಳ ಕಾರ್ಯಕರ್ತನಾಗಿದ್ದು, ಇದನ್ನು ಸುನಿಲ್ ಸಹ ಟಿ.ವಿ ಮಾಧ್ಯಮದವರ ಮುಂದೆ ಸ್ಪಷ್ಟಪಡಿಸಿದ್ದಾನೆ. ಈತನ ಮೇಲೆ ವಿನಾಕಾರಣ ಮುಸ್ಲಿಂ ಸಮುದಾಯದ ಕೆಲವರು ಹಲ್ಲೆ ನಡೆಸಿದ್ದಾರೆ.
    ಆದರೆ ಕೆಲವರು ಸುನಿಲ್ ಯಾವುದೇ ಸಂಘಟನೆ, ಪಕ್ಷಕ್ಕೆ ಸೇರಿಲ್ಲ ಎಂದು ಹೇಳುವ ಮೂಲಕ ಈ ಪ್ರಕರಣದ ದಿಕ್ಕು ತಪ್ಪಿಸುವ ನಿಟ್ಟಿನಲ್ಲಿ ತೊಡಗಿದ್ದಾರೆ.  ಪೊಲೀಸರು ಸುನಿಲ್ ಹೇಳಿಕೆಯನ್ನು ಸರಿಯಾಗಿ ದಾಖಲಿಸಿಕೊಂಡು ತನಿಖೆ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.

ಮುಸ್ಲಿಂ ಸಮಾಜದ ಕೆಲ ಗೂಂಡಾಗಳಿಂದ ಸಮಾಜದಲ್ಲಿ ಆಶಾಂತಿ ವಾತಾರಣ : ಕೆ.ಎಸ್ ಈಶ್ವರಪ್ಪ

ಮಾಜಿ ಉಪಮುಖ್ಯಮಂತ್ರಿ ಕೆ.ಎಸ್ ಈಶ್ವರಪ್ಪ ಭದ್ರಾವತಿ ಹಳೇನಗರದ ತಾಲೂಕು ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ಹಲ್ಲೆಗೊಳಗಾಗಿ ಚಿಕಿತ್ಸೆ ಪಡೆಯುತ್ತಿರುವ ನೆಹರು ನಗರದ ನಿವಾಸಿ, ಯುವಕ ಸುನಿಲ್ ಆರೋಗ್ಯ ವಿಚಾರಿಸಿದರು.
    ಭದ್ರಾವತಿ, ಆ. ೧೬: ರಾಜ್ಯದಲ್ಲಿ ಹಿಂದೂ ಮುಸ್ಲಿಂ ಎಲ್ಲರೂ ಒಗ್ಗಟ್ಟಾಗಿ ಬದುಕಬೇಕು. ಮುಸ್ಲಿಂ ಸಮುದಾಯದಲ್ಲಿನ ಕೆಲವು ಗೂಂಡಾಗಳಿಂದ ಸಮಾಜದಲ್ಲಿ ಆಶಾಂತಿ ವಾತಾವರಣ ನಿರ್ಮಾಣವಾಗುತ್ತಿದೆ ಎಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್ ಈಶ್ವರಪ್ಪ ಆರೋಪಿಸಿದರು.
    ಅವರು ಮಂಗಳವಾರ ಹಳೇನಗರದ ತಾಲೂಕು ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ಹಲ್ಲೆಗೊಳಗಾಗಿ ಚಿಕಿತ್ಸೆ ಪಡೆಯುತ್ತಿರುವ ನೆಹರು ನಗರದ ನಿವಾಸಿ, ಯುವಕ ಸುನಿಲ್ ಆರೋಗ್ಯ ವಿಚಾರಿಸಿ ನಂತರ ಮಾತನಾಡಿದರು.


    ತಪ್ಪು ಮಾಡಿದ ಯಾರೇ ಆಗಲಿ ಅವರಿಗೆ ಶಿಕ್ಷೆ ವಿಧಿಸಬೇಕು. ರಾಜ್ಯದಲ್ಲಿ ಪೊಲೀಸರು ಹೆಚ್ಚಿನ ಶ್ರಮವಹಿಸಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಆದರೂ ಮುಸ್ಲಿಂ ಸಮುದಾಯದಲ್ಲಿನ ಕೆಲವು ಗೂಂಡಾಗಳು ಆಶಾಂತಿ ವಾತಾವರಣ ಸೃಷ್ಟಿಸುತ್ತಿದ್ದಾರೆ. ಇಂತಹವರಿಗೆ ಮುಸ್ಲಿಂ ಸಮುದಾಯದಲ್ಲಿನ ಹಿರಿಯರು ಬುದ್ಧಿ ಹೇಳಬೇಕು.  ಇಲ್ಲವಾದಲ್ಲಿ ಇವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.
    ಹಲ್ಲೆಗೊಳಗಾಗಿರುವ ಸುನಿಲ್‌ಗೆ ಹೆಚ್ಚಿನ ಚಿಕಿತ್ಸೆ ಅಗತ್ಯವಿದ್ದಲ್ಲಿ ಕಲ್ಪಿಸಿಕೊಡುವ ಭರವಸೆ ನೀಡಿ, ಈ ರೀತಿಯ ಘಟನೆಗಳು ನಡೆಯದಂತೆ ಎಚ್ಚರವಹಿಸಬೇಕೆಂದರು.
    ಬಿಜೆಪಿ ಪಕ್ಷದ ಪ್ರಮುಖರಾದ ಡಿ.ಟಿ ಮೇಘರಾಜ್, ಬಿ.ಕೆ ಶ್ರೀನಾಥ್, ಶಿವರಾಜ್, ಮಂಗೋಟೆ ರುದ್ರೇಶ್, ಜಿ. ಧರ್ಮಪ್ರಸಾದ್, ಎಂ. ಪ್ರಭಾಕರ್, ಕೆ.ಇ ಕಾಂತೇಶ್, ಜಿ. ಆನಂದಕುಮಾರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ನೆಹರು ನಗರದಲ್ಲಿ ಯುವಕನ ಮೇಲೆ ಹಲ್ಲೆ : ವ್ಯಾಪಕ ಅಪಪ್ರಚಾರ

ಭದ್ರಾವತಿ ನಗರಸಭೆ ವ್ಯಾಪ್ತಿಯ ನೆಹರು ನಗರದಲ್ಲಿ ಮಂಗಳವಾರ ಬೆಳಿಗ್ಗೆ ಸುನಿಲ್ ಎಂಬಾತನ ಮೇಲೆ ಹಲ್ಲೆ ನಡೆದಿದ್ದು, ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವುದು.
    ಭದ್ರಾವತಿ, ಆ. ೧೬: ನಗರಸಭೆ ವ್ಯಾಪ್ತಿಯ ನೆಹರು ನಗರದಲ್ಲಿ ಮಂಗಳವಾರ ಬೆಳಿಗ್ಗೆ ಯುವಕನೋರ್ವನ ಮೇಲೆ ಹಲ್ಲೆ ನಡೆದಿದ್ದು, ಈ ಸಂಬಂಧ ಹಳೇನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
    ಡಿಚ್ಚಿ ಎಂಬಾತ ಹಲ್ಲೆ ನಡೆಸಿದ್ದು, ಹಲ್ಲೆಗೊಳಗಾಗಿರುವ ಸುನಿಲ್ ತಾಲೂಕು ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆದುಕೊಂಡಿದ್ದಾನೆ.  ಹಲ್ಲೆಗೆ ಯಾವುದೇ ನಿಖರವಾದ ಕಾರಣ ದೂರಿನಲ್ಲಿ ದಾಖಲಿಸಿಲ್ಲ.
    ನಗರಸಭೆ ವಾರ್ಡ್ ನಂ.೧೭ರ ನೆಹರು ನಗರದಲ್ಲಿರುವ ರಾಜೇಶ್ವರಿ ದೇವಸ್ಥಾನ ಸಮೀಪದ ನಿವಾಸಿಯಾಗಿರುವ ಸುನಿಲ್ ಅವರ ಮನೆಯ ಮುಂದಿನ ರಸ್ತೆಯಲ್ಲಿ ಬೆಳಿಗ್ಗೆ ೮.೩೦ರ ಸಮಯದಲ್ಲಿ ಕೆಲಸಕ್ಕೆ ಹೋಗುತ್ತಿದ್ದಾಗ ಡಿಚ್ಚಿ ಏಕಾಏಕಿ ಹಲ್ಲೆ ನಡೆಸಿದ್ದು, ಈ ಸಂದರ್ಭದಲ್ಲಿ ಚಟಾಕು ಎಂಬುವವನು ಬಂದು ಹಲ್ಲೆ ತಪ್ಪಿಸಿದ್ದಾನೆ. ನಂತರ ಹಲ್ಲೆಗೊಳಗಾದ ಸುನಿಲ್‌ನನ್ನು ಈತನ ಸಹೋದರ ಸುಮನ್ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆಂದು ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಲಾಗಿದೆ.
    ವ್ಯಾಪಕ ಅಪಪ್ರಚಾರ :
    ಸುನಿಲ್ ಯಾವುದೇ ಪಕ್ಷದ ಅಥವಾ ಸಂಘಟನೆ ಕಾರ್ಯಕರ್ತನಲ್ಲ ಎನ್ನಲಾಗಿದೆ. ಆದರೂ ಈ ನಡುವೆ ಬಜರಂಗದಳ ಪ್ರಮುಖರು ಆಸ್ಪತ್ರೆಗೆ ತೆರಳಿ ಸುನಿಲ್ ಬಜರಂಗದಳ ಕಾರ್ಯಕರ್ತ ಎಂದು ಹೇಳಿಕೊಳ್ಳುತ್ತಿದ್ದು, ಈ ನಡುವೆ ಡಿಚ್ಚಿ ಜೊತೆಗೆ ೩-೪ ಜನ ಹಲ್ಲೆ ನಡೆಸಿದ್ದಾರೆಂದು ಅಪಪ್ರಚಾರ ನಡೆಯುತ್ತಿದೆ. ಅಲ್ಲದೆ ಈ ಘಟನೆಯನ್ನು ಹಿಂದೂ ಮತ್ತು ಮುಸ್ಲಿಂ ನಡುವೆ ನಡೆದಿರುವ ಕೋಮು ಗಲಭೆಯಾಗಿ ಬಿಂಬಿಸಲು ಯತ್ನಿಸಲಾಗುತ್ತಿದೆ. ಇದರಿಂದಾಗಿ ಕ್ಷೇತ್ರದ ನಿವಾಸಿಗಳಲ್ಲಿ ಭಯದ ವಾತಾವರಣ ಉಂಟಾಗಿದೆ.
    ಶಿವಮೊಗ್ಗ ನಗರದಲ್ಲಿ ಉಂಟಾಗಿರುವ ಅಹಿತಕರ ಘಟನೆ ಹಿನ್ನಲೆಯಲ್ಲಿ ಈಗಾಗಲೇ ತಾಲೂಕಿನ ನಗರಸಭೆ ವ್ಯಾಪ್ತಿ ಹಾಗು ಕೆಲವು ಗ್ರಾಮಾಂತರ ಭಾಗದಲ್ಲಿ  ಸೋಮವಾರ ಕಲಂ ೧೪೪ರನ್ವಯ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಈ ನಡುವೆ ಈ ಬೆಳವಣಿಗೆಯಿಂದಾಗಿ ಪೊಲೀಸರು ಸಹ ಆತಂಕಕ್ಕೆ ಒಳಗಾಗಿದ್ದಾರೆ.