೯ ಬಿಡಾಡಿ ದನಗಳು ವಶಕ್ಕೆ ಪಡೆದು ಮಾಲೀಕರಿಗೆ ದಂಡ
ಬಿಡಾಡಿ ದನಗಳ ಹಾವಳಿ ಹೆಚ್ಚಾದ ಹಿನ್ನಲೆಯಲ್ಲಿ ನಗರದ ಪ್ರಮುಖ ರಸ್ತೆಗಳಲ್ಲಿ ಸಂಚಾರಕ್ಕೆ ತೊಂದರೆ ಉಂಟಾಗುತ್ತಿದ್ದು, ಈ ಹಿನ್ನಲೆಯಲ್ಲಿ ಶನಿವಾರ ನಗರಸಭೆ ವತಿಯಿಂದ ಕಾರ್ಯಾಚರಣೆ ನಡೆಸಿ ಬಿಡಾಡಿ ದನಗಳನ್ನು ವಶಕ್ಕೆ ಪಡೆಯಲಾಯಿತು.
ಭದ್ರಾವತಿ, ಆ. ೨೦: ಬಿಡಾಡಿ ದನಗಳ ಹಾವಳಿ ಹೆಚ್ಚಾದ ಹಿನ್ನಲೆಯಲ್ಲಿ ನಗರದ ಪ್ರಮುಖ ರಸ್ತೆಗಳಲ್ಲಿ ಸಂಚಾರಕ್ಕೆ ತೊಂದರೆ ಉಂಟಾಗುತ್ತಿದ್ದು, ಈ ಹಿನ್ನಲೆಯಲ್ಲಿ ಶನಿವಾರ ನಗರಸಭೆ ವತಿಯಿಂದ ಕಾರ್ಯಾಚರಣೆ ನಡೆಸಿ ಬಿಡಾಡಿ ದನಗಳನ್ನು ವಶಕ್ಕೆ ಪಡೆಯಲಾಯಿತು.
ರಸ್ತೆಗಳಲ್ಲಿ ಬಿಡಾಡಿ ದನಗಳ ಹಾವಳಿ ಹೆಚ್ಚಾದ ಹಿನ್ನಲೆಯಲ್ಲಿ ಪಾದಚಾರಿ ಹಾಗು ವಾಹನಗಳ ಸಂಚಾರಕ್ಕೆ ತೊಂದರೆಯಾಗುತ್ತಿದ್ದು, ಈ ಹಿನ್ನಲೆಯಲ್ಲಿ ನಗರಸಭೆಗೆ ಸಾಕಷ್ಟು ದೂರುಗಳು ಸಲ್ಲಿಕೆಯಾಗಿವೆ. ಈ ನಡುವೆ ನಗರಸಭೆ ಆಡಳಿತ ಬಿಡಾಡಿ ದನಗಳನ್ನು ರಸ್ತೆಗೆ ಬಿಡದಂತೆ ಹಲವು ಬಾರಿ ಮಾಲೀಕರಿಗೆ ಸೂಚಿಸಿದೆ. ಆದರೂ ಸಹ ನಿರ್ಲಕ್ಷ್ಯತನವಹಿಸಿರುವ ಹಿನ್ನಲೆಯಲ್ಲಿ ಬಿ.ಎಚ್ ರಸ್ತೆ, ತಾಲೂಕು ಕಛೇರಿ ರಸ್ತೆ ಸೇರಿದಂತೆ ಪ್ರಮುಖ ರಸ್ತೆಗಳಲ್ಲಿ ಕಾರ್ಯಾಚರಣೆ ನಡೆಸಿ ಸುಮಾರು ೯ ಬಿಡಾಡಿ ದನಗಳನ್ನು ವಶಕ್ಕೆ ಪಡೆದು ತರೀಕೆರೆ ರಸ್ತೆಯಲ್ಲಿರುವ ನಗರಸಭೆ ನೀರು ಸರಬರಾಜು ಕೇಂದ್ರದ ಆವರಣದಲ್ಲಿರಿಸಲಾಗಿತ್ತು. ಸಂಜೆ ವೇಳೆಗೆ ಸಂಬಂಧಪಟ್ಟ ಮಾಲೀಕರು ದಂಡ ಪಾವತಿಸಿ ಬಿಡಿಸಿಕೊಂಡು ಹೋಗಿದ್ದಾರೆ.
ಪತ್ರಿಕೆಗೆ ಮಾಹಿತಿ ನೀಡಿದ ಪೌರಾಯುಕ್ತ ಮನುಕುಮಾರ್, ನಗರಸಭೆ ಸಿಬ್ಬಂದಿಗಳು ಬೆಳಿಗ್ಗೆಯಿಂದ ಕಾರ್ಯಾಚರಣೆ ನಡೆಸಿ ಬಿಡಾಡಿ ದನಗಳನ್ನು ವಶಕ್ಕೆ ಪಡೆದಿದ್ದಾರೆ. ಬಿಡಾಡಿ ದನಗಳ ಮಾಲೀಕರು ಎಚ್ಚೆತ್ತುಕೊಳ್ಳಬೇಕು. ಯಾವುದೇ ಕಾರಣಕ್ಕೂ ಬಿಡಾಡಿ ದನಗಳನ್ನು ರಸ್ತೆಗೆ ಬಿಡಬಾರದು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಕಠಿಣ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.
ಪೌರಾಯುಕ್ತ ಮನುಕುಮಾರ್ ಕಾರ್ಯಾಚರಣೆ ನೇತೃತ್ವ ವಹಿಸಿದ್ದರು. ಪರಿಸರ ಅಭಿಯಂತರ ಪ್ರಭಾಕರ್, ಹಿರಿಯ ಆರೋಗ್ಯ ನಿರೀಕ್ಷಕ ಆರ್.ಬಿ ಸತೀಶ್, ಕಿರಿಯ ಆರೋಗ್ಯ ನಿರೀಕ್ಷಕಿ ಶೃತಿ ಸೇರಿದಂತೆ ಇನ್ನಿತರ ಸಿಬ್ಬಂದಿಗಳು, ಪೌರಕಾರ್ಮಿಕರು ಪಾಲ್ಗೊಂಡಿದ್ದರು.