Sunday, August 28, 2022

ಕೇಶ ವಿನ್ಯಾಸ, ಸೌಂದರ್ಯ ವರ್ಧನೆ ಕ್ಷೇತ್ರದಲ್ಲೂ ಭದ್ರಾವತಿ ಮುಂಚೂಣಿಗೆ ಬರಲಿ : ಆಶಾಭಟ್

ಭದ್ರಾವತಿ ನಗರದ ತಾಲೂಕು ಸಾರ್ವಜನಿಕ ಸರ್ಕಾರಿ ಆಸ್ಪತ್ರೆ ಸಮೀಪ ಸಿ.ಎನ್ ರಸ್ತೆಯಲ್ಲಿ ನೂತನವಾಗಿ ಆರಂಭಿಸಲಾಗಿರುವ ಹನಿ ಯೂನಿಸೆಕ್ಸ್ ಸಲೂನ್ ಅಂಡ್ ಸ್ಪಾ ಭಾನುವಾರ ಮಾಜಿ ರೂಪದರ್ಶಿ, ಚಲನಚಿತ್ರ ನಟಿ ಆಶಾಭಟ್ ಉದ್ಘಾಟಿಸಿದರು. ಶಾಸಕ ಬಿ.ಕೆ ಸಂಗಮೇಶ್ವರ್, ನಗರಸಭೆ ಪ್ರಭಾರ ಅಧ್ಯಕ್ಷ ಚನ್ನಪ್ಪ, ಪೌರಾಯುಕ್ತ ಮನುಕುಮಾರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
    ಭದ್ರಾವತಿ, ಆ. ೨೮: ಕೇಶ ವಿನ್ಯಾಸ, ಸೌಂದರ್ಯ ವರ್ಧನೆ ಕ್ಷೇತ್ರದ ಉನ್ನತ ಮಟ್ಟದ ಸೌಲಭ್ಯಗಳು ಸ್ಥಳೀಯವಾಗಿ ಲಭ್ಯವಾಗುವ ಮೂಲಕ ಈ ಕ್ಷೇತ್ರದಲ್ಲೂ ಭದ್ರಾವತಿ ಮುಂಚೂಣಿಯಲ್ಲಿ ಗುರುತಿಸಿಕೊಳ್ಳುವಂತಾಗಬೇಕೆಂದು ಮಾಜಿ ರೂಪದರ್ಶಿ, ಚಲನಚಿತ್ರ ನಟಿ ಆಶಾಭಟ್ ಹೇಳಿದರು.
    ಅವರು ಭಾನುವಾರ ನಗರದ ತಾಲೂಕು ಸಾರ್ವಜನಿಕ ಸರ್ಕಾರಿ ಆಸ್ಪತ್ರೆ ಸಮೀಪ ಸಿ.ಎನ್ ರಸ್ತೆಯಲ್ಲಿ ನೂತನವಾಗಿ ಆರಂಭಿಸಲಾಗಿರುವ ಹನಿ ಯೂನಿಸೆಕ್ಸ್ ಸಲೂನ್ ಅಂಡ್ ಸ್ಪಾ ಉದ್ಘಾಟಿಸಿ ಮಾತನಾಡಿದರು.
    ಕೇಶ ವಿನ್ಯಾಸ, ಸೌಂದರ್ಯ ವರ್ಧನೆ ಕೇವಲ ವ್ಯವಹಾರಕ್ಕೆ ಸೀಮಿತವಾಗದೆ ಈ ಕ್ಷೇತ್ರದಲ್ಲಿ ಇತರರು ಸಹ ತೊಡಗಿಸಿಕೊಳ್ಳುವಂತೆ ಮಾಡುವ ಮೂಲಕ ಉದ್ಯೋಗ ಸೃಷ್ಟಿಸಿಕೊಡಬೇಕು. ಆ ಮೂಲಕ ಸಾರ್ಥಕ ಸೇವೆ ಸಲ್ಲಿಸಬೇಕೆಂದರು. ಈ ನಿಟ್ಟಿನಲ್ಲಿ ನೂತನ ಆರಂಭಗೊಂಡಿರುವ ಹನಿ ಯೂನಿಸೆಕ್ಸ್ ಸಲೂನ್ ಅಂಡ್ ಸ್ಪಾ ಸಹಕಾರಿಯಾಗಿದೆ ಎಂದರು.
    ಶಾಸಕ ಬಿ.ಕೆ ಸಂಗಮೇಶ್ವರ್, ನಗರಸಭೆ ಪ್ರಭಾರ ಅಧ್ಯಕ್ಷ ಚನ್ನಪ್ಪ, ಪೌರಾಯುಕ್ತ ಮನುಕುಮಾರ್, ಜೆಡಿಎಸ್ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಗೀತಾ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎಸ್. ಮಣಿಶೇಖರ್, ಉದ್ಯಮಿ ಬಿ.ಕೆ ಜಗನ್ನಾಥ್, ಸೂಡಾ ಸದಸ್ಯೆ ಹೇಮಾವತಿ ವಿಶ್ವನಾಥ್, ಸುಂದರ್ ಬಾಬು, ಎಂ.ಎಸ್ ರವಿ, ಅನ್ನಸತೀಶ್, ರಾಜ್‌ಕುಮಾರ್, ಅಬಿದ್‌ಆಲಿ, ಹನಿ ಯೂನಿಸೆಕ್ಸ್ ಸಲೂನ್ ಅಂಡ್ ಸ್ಪಾ ಮಾಲೀಕರಾದ ಸವಿತಾ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.

ಹೈನುಗಾರಿಕೆ, ಕೃಷಿ ಚಟುವಟಿಕೆಗಳಿಗೆ ಅನುಕೂಲವಾಗುವಂತೆ ೨ ದಿನ ಜಾನುವಾರು ಸಂತೆಗೆ ಅವಕಾಶ ನೀಡಿ

ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಆಡಳಿತಕ್ಕೆ ಶಾಸಕ ಬಿ.ಕೆ ಸಂಗಮೇಶ್ವರ್ ಮನವಿ

ಭದ್ರಾವತಿ ಸಿ.ಎನ್ ರಸ್ತೆಯಲ್ಲಿರುವ ಕೃಷಿ ಉತ್ಪನ್ನ ಮಾರುಕಟ್ಟೆ ಪ್ರಾಂಗಣದಲ್ಲಿ ಭಾನುವಾರ ಶಾಸಕ ಬಿ.ಕೆ ಸಂಗಮೇಶ್ವರ್ ಜಾನುವಾರು ಸಂತೆಗೆ ಚಾಲನೆ ನೀಡಿದರು.
    ಭದ್ರಾವತಿ, ಆ. ೨೮: ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಆಡಳಿತ ಹೈನುಗಾರಿಕೆ ಮತ್ತು ಕೃಷಿ ಚಟುವಟಿಕೆಗಳಿಗೆ ಅನುಕೂಲವಾಗುವಂತೆ ೨ ದಿನ ಜಾನುವಾರು ಸಂತೆ ನಡೆಸಲು ಅನುಮತಿ ನೀಡುವ ಮೂಲಕ ಯಾವುದೇ ರೀತಿ ತೊಂದರೆಯಾಗದಂತೆ ಅಗತ್ಯವಿರುವ ಸೌಲಭ್ಯಗಳನ್ನು ಕಲ್ಪಿಸಿಕೊಡುವಂತೆ ಶಾಸಕ ಬಿ.ಕೆ ಸಂಗಮೇಶ್ವರ್ ಮನವಿ ಮಾಡಿದರು.
    ಅವರು ಭಾನುವಾರ ಸಿ.ಎನ್ ರಸ್ತೆಯಲ್ಲಿರುವ ಕೃಷಿ ಉತ್ಪನ್ನ ಮಾರುಕಟ್ಟೆ ಪ್ರಾಂಗಣದಲ್ಲಿ ಜಾನುವಾರು ಸಂತೆಗೆ ಚಾಲನೆ ನೀಡಿ ಮಾತನಾಡಿದರು. 
    ಮಾರುಕಟ್ಟೆಯಲ್ಲಿ ಇದೀಗ ಒಂದು ರೀತಿಯ ಹಬ್ಬದ ವಾತಾವರಣ ಕಂಡು ಬರುತ್ತಿದೆ. ಕೆಲವು ವರ್ಷಗಳಿಂದ ಸ್ಥಗಿತಗೊಂಡಿದ್ದ ಜಾನುವಾರು ಸಂತೆ ಪುನಃ ಆರಂಭಗೊಂಡಿರುವುದು ರೈತರು ಹಾಗು ವ್ಯಾಪಾರಸ್ಥರಲ್ಲಿ ಸಂತಸವನ್ನುಂಟು ಮಾಡಿದೆ.  ಅಲ್ಲದೆ ಇಬ್ಬರು ಒಂದೆಡೆ ಸೇರಲು ಅನುಕೂಲವಾಗಿದೆ. ಜಾನುವಾರು ಸಂತೆ ಕೇವಲ ಭಾನುವಾರಕ್ಕೆ ಮಾತ್ರ ಸೀಮಿತವಾಗಬಾರದು. ಶನಿವಾರ ಮತ್ತು ಭಾನುವಾರ ೨ ದಿನ ಸಹ ಸಂತೆ ನಡೆಯಲು ಅವಕಾಶ ಮಾಡಿಕೊಡಬೇಕು. ಪಶು ಇಲಾಖೆ ವೈದ್ಯರು ಹಾಗು ಸಿಬ್ಬಂದಿಗಳು ರೈತರಿಗೆ ಇಲಾಖೆಯಿಂದ ಲಭ್ಯವಿರುವ ಸೇವೆಗಳನ್ನು ಕಲ್ಪಿಸಿಕೊಡಬೇಕು. ಜಾನುವಾರುಗಳ ಆರೋಗ್ಯ ಹಾಗು ಆರೈಕೆ ಕುರಿತು ಹೆಚ್ಚಿನ ಜಾಗೃತಿ ಮೂಡಿಸಬೇಕು. ಮುಂದಿನ ದಿನಗಳಲ್ಲಿ ರೈತರು ಹಾಗು ವ್ಯಾಪಾರಸ್ಥರಿಗೆ ಅನುಕೂಲವಾಗುವಂತೆ ಸಂಘವನ್ನು ನೋಂದಾಯಿಸಿ ಕೊಡಲಾಗುವುದು. ಅಲ್ಲದೆ ಅಗತ್ಯವಿರುವ ಎಲ್ಲಾ ರೀತಿಯ ನೆರವು ನೀಡುವುದಾಗಿ ಎಂದು ಭರವಸೆ ನೀಡಿದರು.


    ನಗರಸಭೆ ಪ್ರಭಾರ ಅಧ್ಯಕ್ಷ ಚನ್ನಪ್ಪ ಮಾತನಾಡಿ, ಜಾನುವಾರು ಸಂತೆಯೇ ಒಂದು ರೀತಿಯ ರೋಮಾಂಚಕಾರಿಯಾಗಿದೆ.  ರೈತರು ಹಾಗು ವ್ಯಾಪಾರಸ್ಥರು ಒಂದೆಡೆ ಸೇರುವ ಹಾಗು ವ್ಯಾಪಾರ ನಡೆಸುವ ಪರಿ ನೋಡಿ ಕಣ್ತುಂಬಿಕೊಳ್ಳುವ ದಿನಗಳು ಪುನಃ ಆರಂಭಗೊಂಡಿರುವುದು ಸಂತಸವನ್ನುಂಟು ಮಾಡಿದೆ. ಮಾರುವವರು ಹಾಗು ಕೊಳ್ಳುವವರು ಒಂದೆಡೆ ಸೇರುವುದರಿಂದ ಹೆಚ್ಚಿನ ಅನುಕೂಲವಾಗಲಿದೆ. ಸೂಕ್ತ ಬೆಲೆಗೆ ಕೊಂಡುಕೊಳ್ಳುವ ಅಥವಾ ಮಾರಾಟ ಮಾಡುವ ಅವಕಾಶ ಲಭಿಸುತ್ತದೆ. ಮಾರುಕಟ್ಟೆಯಿಂದ ಹೊರಗೆ ವ್ಯವಹಾರ ನಡೆಸುವುದರಿಂದ ರೈತರು ಹಾಗು ವ್ಯಾಪಾರಸ್ಥರು ಸಾಕಷ್ಟು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಈ ಹಿನ್ನಲೆಯಲ್ಲಿ ಜಾನುವಾರು ಸಂತೆ ನಿರಂತರವಾಗಿ ಮುನ್ನಡೆಯಬೇಕು. ಮುಂದಿನ ದಿನಗಳಲ್ಲಿ ಇನ್ನೂ ದೊಡ್ಡ ಪ್ರಮಾಣದಲ್ಲಿ ಸಂತೆ ನಡೆಯುವಂತಾಗಬೇಕೆಂದರು.
    ಹಿರಿಯ ಪತ್ರಕರ್ತ ಕಣ್ಣಪ್ಪ ಮಾತನಾಡಿ, ಭದ್ರಾವತಿ ಸಂತೆ ಎಂದರೆ ಎಲ್ಲೆಡೆ ಹೆಸರುವಾಸಿಯಾಗಿದೆ. ಈ ಹಿಂದೆ ಹಳೇ ಸಂತೆ ಮೈದಾನದಲ್ಲಿ ಜಾನುವಾರು, ಕುರಿ ಸಂತೆ ನಡೆಯುತ್ತಿತ್ತು. ಜಾನುವಾರು, ಕುರಿ ಸಂತೆ ಪ್ರತ್ಯೇಕವಾಗಿ ನಡೆಸುವಂತೆ ಕಾನೂನು ರೂಪುಗೊಂಡ ನಂತರ ನಗರಸಭೆ ಆಡಳಿತ ಜಾನುವಾರು, ಕುರಿ ಸಂತೆಯನ್ನು ಕೃಷಿ ಉತ್ಪನ್ನ ಮಾರುಕಟ್ಟೆ ಪ್ರಾಂಗಣಕ್ಕೆ ಸ್ಥಳಾಂತರಿಸಿತು. ಮಹಾಮಾರಿ ಕೊರೋನಾ ಹಿನ್ನಲೆಯಲ್ಲಿ ಎಲ್ಲರ ಆರೋಗ್ಯ ದೃಷ್ಟಿಯಿಂದ ಜಾನುವಾರು ಸಂತೆಯನ್ನು ಸ್ಥಗಿತಗೊಳಿಸಲಾಗಿತ್ತು. ಇದೀಗ ಪುನಃ ಆರಂಭಗೊಂಡಿದ್ದು, ಮುಂದಿನ ದಿನಗಳಲ್ಲಿ ರಾಜ್ಯದಲ್ಲಿಯೇ ಮಾದರಿ ಸಂತೆಯಾಗಿ ರೂಪುಗೊಳ್ಳಬೇಕೆಂದರು.
    ನಗರಸಭಾ ಸದಸ್ಯರಾದ ಬಿ.ಕೆ ಮೋಹನ್, ಬಿ.ಎಂ ಮಂಜುನಾಥ್, ಪೌರಾಯುಕ್ತ ಮನುಕುಮಾರ್, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಕಾರ್ಯದರ್ಶಿ ಮಹೇಶ್, ಯುವ ಮುಖಂಡ ಬಿ.ಎಸ್ ಗಣೇಶ್ ಹಾಗು ಹಿರಿಯ ರೈತ ಮುಖಂಡರು ಉಪಸ್ಥಿತರಿದ್ದರು.
    ಜಾನುವಾರು ಸಂತೆಯಲ್ಲಿ ಮೊದಲ ದಿನವೇ ಭರ್ಜರಿ ವಹಿವಾಟು ನಡೆದಿದ್ದು, ವಿವಿಧಡೆಗಳಿಂದ ರೈತರು, ವ್ಯಾಪಾರಸ್ಥರು ಹೆಚ್ಚಿನ ಪ್ರಮಾಣದಲ್ಲಿ ಆಗಮಿಸಿದ್ದರು.


ಭದ್ರಾವತಿ ಸಿ.ಎನ್ ರಸ್ತೆಯಲ್ಲಿರುವ ಕೃಷಿ ಉತ್ಪನ್ನ ಮಾರುಕಟ್ಟೆ ಪ್ರಾಂಗಣದಲ್ಲಿ ಭಾನುವಾರ ನಡೆದ ಜಾನುವಾರು ಸಂತೆಯಲ್ಲಿ ನಗರಸಭೆ ಪ್ರಭಾರ ಅಧ್ಯಕ್ಷ ಚನ್ನಪ್ಪ, ಸದಸ್ಯ ಬಿ.ಕೆ ಮೋಹನ್, ಪೌರಾಯುಕ್ತ ಮನುಕುಮಾರ್ ಹಾಗು ರೈತರ ಸಮ್ಮುಖದಲ್ಲಿ ಜಾನುವಾರು ಖರೀದಿ ಪ್ರಕ್ರಿಯೆ ನಡೆಯಿತು.

Saturday, August 27, 2022

ಗೋಹತ್ಯೆ ನಿಷೇಧ ಕಾಯ್ದೆ ನಂತರ ಮೊದಲ ಬಾರಿಗೆ ಆ.೨೮ರಂದು ಜಾನುವಾರು ಸಂತೆ

ಹೈನುಗಾರಿಕೆ, ಕೃಷಿ ಚಟುವಟಿಕೆಗಳಿಗೆ ಅಗತ್ಯವಿರುವ ಜಾನುವಾರುಗಳ ಮಾರಾಟ

    ಭದ್ರಾವತಿ, ಆ. ೨೭: ನಗರದ ಸಿ.ಎನ್ ರಸ್ತೆಯಲ್ಲಿರುವ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಸುಮಾರು ೫-೬ ವರ್ಷಗಳ ನಂತರ ಆ.೨೮ರ ಭಾನುವಾರ ಜಾನುವಾರ ಸಂತೆ ನಡೆಸಲಾಗುತ್ತಿದೆ.
    ಹೈನುಗಾರಿಕೆ ಹಾಗು ಕೃಷಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಇದೀಗ ಜಾನುವಾರು ಸಂತೆ ಪ್ರತಿ ಶನಿವಾರ ನಡೆಸಲು ಉದ್ದೇಶಿಸಲಾಗಿದೆ. ೫-೬ ವರ್ಷಗಳ ಹಿಂದೆ ಕೆಲವು ಕಾರಣಾಂತರಗಳಿಂದ ಜಾನುವಾರು ಸಂತೆ ಸ್ಥಗಿತಗೊಂಡಿತು.  ಎಲ್ಲಾ ರೀತಿಯ ಜಾನುವಾರುಗಳ ಮಾರಾಟ ನಡೆಯುತ್ತಿತ್ತು. ಸರ್ಕಾರ ಇದೀಗ ರಾಜ್ಯದಲ್ಲಿ ಗೋ ಹತ್ಯೆ ನಿಷೇಧ ಕಾಯ್ದೆ ಜಾರಿಗೆ ತಂದಿರುವ ಹಿನ್ನಲೆಯಲ್ಲಿ ರೈತರು ಮಾರುಕಟ್ಟೆಯಿಂದ ಹೊರಗೆ ಸಹ ಜಾನುವಾರುಗಳನ್ನು ಖರೀದಿಸಲು ಸಾಕಷ್ಟು ಸಮಸ್ಯೆ ಎದುರಾಗಿದೆ. ಈ ಹಿನ್ನಲೆಯಲ್ಲಿ ರೈತರು, ಜಾನುವಾರು ವ್ಯಾಪಾರಸ್ಥರು ಇತ್ತೀಚೆಗೆ ಸಭೆ ನಡೆಸಿ ಜಾನುವಾರ ಸಂತೆ ನಡೆಸಲು ನಿರ್ಧರಿಸಿದ್ದಾರೆ.



    ಮಧ್ಯವರ್ತಿಗಳಿಗೆ ಅಥವಾ ೩ನೇ ವ್ಯಕ್ತಿಗೆ ಅವಕಾಶ ನೀಡದಂತೆ ಕೃಷಿ ಉತ್ಪನ್ನ ಮಾರುಕಟ್ಟೆ ಮೂಲಕ ನೇರವಾಗಿ ಖರೀದಿಸುವ ವ್ಯವಸ್ಥೆ ಕಲ್ಪಿಸಲಾಗಿದೆ. ಅಲ್ಲದೆ  ಜಾನುವಾರುಗಳನ್ನು ನೇರವಾಗಿ ಖರೀದಿದಾರರ ಮನೆಗೆ ತಲುಪಿಸುವ ವ್ಯವಸ್ಥೆ ಕೈಗೊಳ್ಳಲಾಗಿದ್ದು, ಸರ್ಕಾರದ ಮಾರ್ಗಸೂಚಿಗಳನ್ವಯ ಜಾನುವಾರು ಸಂತೆ ನಡೆಯಲಿದೆ. ಹೈನುಗಾರಿಕೆ ಹಾಗು ಕೃಷಿಗೆ ಅಗತ್ಯವಿರುವ ಜಾನುವಾರುಗಳ ಮಾರಾಟ ಮಾತ್ರ ನಡೆಯಲಿದೆ.
    ಜಾನುವಾರು ಸಂತೆಗೆ ಬೆಳಿಗ್ಗೆ ೯ ಗಂಟೆಗೆ ಶಾಸಕ ಬಿ.ಕೆ ಸಂಗಮೇಶ್ವರ್ ಚಾಲನೆ ನೀಡಲಿದ್ದು, ತಹಸೀಲ್ದಾರ್ ಆರ್. ಪ್ರದೀಪ್, ನಗರಸಭೆ ಅಧ್ಯಕ್ಷ ಚನ್ನಪ್ಪ, ಪೌರಾಯುಕ್ತ ಮನುಕುಮಾರ್, ಪೊಲೀಸ್ ನಗರ ವೃತ್ತ ನಿರೀಕ್ಷಕರು ಸೇರಿದಂತೆ ಇನ್ನಿತರರು ಉಪಸ್ಥಿತರಿರುವರು.
    ಹೆಚ್ಚಿನ ಮಾಹಿತಿಗೆ ಮೊ: ೮೯೭೧೬೦೩೯೬೪ ಅಥವಾ ೯೭೪೧೮೮೫೯೪೯ ಸಂಖ್ಯೆಗೆ ಕರೆ ಮಾಡಬಹುದಾಗಿದೆ. ರೈತ ಬಾಂಧವರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಕೋರಲಾಗಿದೆ.

ಪ್ರತಿಭೆ, ಸಾಧನೆ ಯಾರ ಸ್ವತ್ತು ಅಲ್ಲ : ವಿ.ಎಚ್ ಪಂಚಾಕ್ಷರಿ

ಭದ್ರಾವತಿ ಕಾಗದನಗರದ ಪೇಪರ್‌ಟೌನ್ ಆಂಗ್ಲ ಶಾಲೆಯಲ್ಲಿ ಕಾಗದ ನಗರ ಕ್ಲಸ್ಟರ್ ವ್ಯಾಪ್ತಿಯ ಪ್ರತಿಭಾ ಕಾರಂಜಿ, ಸಾಂಸ್ಕೃತಿಕ ಕಾರ್ಯಕ್ರಮ ಶನಿವಾರ ಜರುಗಿತು.
ಭದ್ರಾವತಿ, ಆ. ೨೭: ಪ್ರತಿಭೆ, ಸಾಧನೆ ಎಂಬುದು ಯಾರ ಸ್ವತ್ತು ಅಲ್ಲ. ಕಲಿಯುವ ಛಲ ಇದ್ದಾಗ ಮಾತ್ರ ನಾವು ಸಹ ಸಮಾಜದ ಮುಖ್ಯವಾಹಿನಿಯಲ್ಲಿ ಗುರುತಿಸಿಕೊಳ್ಳಲು ಸಾಧ್ಯ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಕ್ಷೇತ್ರ ಶಿಕ್ಷಣ ಸಮನ್ವಯಾಧಿಕಾರಿ ವಿ.ಎಚ್ ಪಂಚಾಕ್ಷರಿ ಹೇಳಿದರು. 
ಅವರು ಶನಿವಾರ ಕಾಗದನಗರದ ಪೇಪರ್‌ಟೌನ್ ಆಂಗ್ಲ ಶಾಲೆಯಲ್ಲಿ ಕಾಗದ ನಗರ ಕ್ಲಸ್ಟರ್ ವ್ಯಾಪ್ತಿಯ ಪ್ರತಿಭಾ ಕಾರಂಜಿ, ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. 
ಏಕಲವ್ಯನಿಗೆ ಗುರುಗಳು ವಿದ್ಯೆ ಕಲಿಸಲು ನಿರಾಕರಿಸಿದರೂ ಸಹ ಅವನು ಕಲಿಯುವ ಛಲದೊಂದಿಗೆ ತನ್ನಲ್ಲಿನ ಪ್ರತಿಭೆ ಮೂಲಕ ಸಾಧನೆಯನ್ನು ಸಾಧಿಸಿದನು. ಇಂತಹ ಮನೋಭಾವನೆ ಪ್ರತಿಯೊಬ್ಬ ವಿದ್ಯಾರ್ಥಿ ಬೆಳೆಸಿಕೊಳ್ಳಬೇಕು. ತಮ್ಮಲ್ಲಿನ ಪ್ರತಿಭೆಗಳನ್ನು ಅನಾವರಣಗೊಳಿಸಲು ಸೂಕ್ತ ವೇದಿಕೆ ಕಲ್ಪಿಸಿಕೊಡಲಾಗಿದೆ. ಇದರ ಸದುಪಯೋಗಪಡೆದುಕೊಳ್ಳಬೇಕೆಂದರು. 
ನಗರಸಭಾ ಸದಸ್ಯ ಬಸವರಾಜ ಬಿ ಆನೆಕೊಪ್ಪ ಮಾತನಾಡಿ, ಮಕ್ಕಳ ಪ್ರತಿಭೆಗೆ ಉತ್ತಮ ವೇದಿಕೆಯನ್ನು ಕಲ್ಪಿಸಿಕೊಡುವಲ್ಲಿ ಶಿಕ್ಷಣ ಇಲಾಖೆ ಹೆಚ್ಚಿನ ಗಮನ ನೀಡಿರುವುದು ಒಳ್ಳೆಯ ಬೆಳವಣಿಗೆಯಾಗಿದೆ. ಮಕ್ಕಳು ತಮ್ಮ ಪ್ರತಿಭೆ ಅನಾವರಣಗೊಳಿಸುವ ಮೂಲಕ ಇನ್ನೂ ಹೆಚ್ಚಿನ ಸಾಧನೆಯನ್ನು ಮಾಡುವಂತಾಗಬೇಕೆಂದರು.
ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಬಿ. ನಟರಾಜ್ ಮಾತನಾಡಿ, ಪ್ರತಿ ಮಕ್ಕಳು ಉನ್ನತ ಹುದ್ದೆ ಅಲಂಕರಿಸಬೇಕೆಂಬ ಗುರಿಯೊಂದಿಗೆ ತಮ್ಮ ಪ್ರತಿಭೆಗಳನ್ನು ಸಹ ಅನಾವರಣಗೊಳಿಸುವ ಮೂಲಕ ಮುನ್ನಡೆಯಬೇಕು. ಕೆಲವು ಮಕ್ಕಳಿಗೆ ಪ್ರತಿಭೆ ಅನಾವರಣಗೊಳಿಸಲು ಇದು ವೇದಿಕೆಯಾದರೆ ಉಳಿದ ಮಕ್ಕಳಿಗೆ ನಾವು ಸಹ ಅವರ ದಾರಿಯಲ್ಲಿ ಸಾಗಲು ಪ್ರೇರೇಪಿಸುವ ವೇದಿಕೆಯಾಗಿದೆ ಎಂದರು. 
ಶಾಲೆಯ ಪ್ರಾಂಶುಪಾಲ ಆರ್. ಸತೀಶ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಎಂಪಿಎಂ ನಗರಾಡಳಿತ ಇಲಾಖೆ ವ್ಯವಸ್ಥಾಪಕ ಸತೀಶ್, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ನಿರ್ದೇಶಕಿ ಸುಮತಿ ಕಾರಂತ್, ಶಿಕ್ಷಣ ಇಲಾಖೆಯ ಸಿ. ಚನ್ನಪ್ಪ, ಶಾಲೆಯ ಉಪಪ್ರಾಂಶುಪಾಲ ನಾಗರಾಜ್ ಸೇರಿದಂತೆ ಇನ್ನಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು. 
ಪ್ರೇರಣಾ ಮತ್ತು ಪರಿಣಿತ ಪ್ರಾರ್ಥಿಸಿದರು. ಕೆ.ಎಸ್ ರಾಘವೇಂದ್ರ ನಿರೂಪಿಸಿದರು. ಸಿಆರ್‌ಪಿ ಗಿರಿಜಮ್ಮ ವಂದಿಸಿದರು. ಕಾಗದ ಕ್ಲಸ್ಟರ್ ವ್ಯಾಪ್ತಿಯಲ್ಲಿ ಬರುವ ಶಾಲೆಗಳ ಶಿಕ್ಷಕರು, ಮಕ್ಕಳು, ಪೋಷಕರು ಪಾಲ್ಗೊಂಡಿದ್ದರು. 
 



ಹನಿ ಯುನಿಸೆಕ್ಸ್ ಸಲೂನ್ ಅಂಡ್ ಸ್ಪಾ ಉದ್ಘಾಟನೆ



ಭದ್ರಾವತಿ, ಆ.27: ನಗರದ ರಂಗಪ್ಪ ವೃತ್ತದಲ್ಲಿ ನೂತನವಾಗಿ ಆರಂಭಗೊಳ್ಳಲಿರುವ ಹನಿ ಯುನಿಸೆಕ್ಸ್ ಲೂನ್ ಅಂಡ್ ಸ್ಪಾ ಉದ್ಘಾಟನೆ ಆ. 28 ರಂದು ಬೆಳಗ್ಗೆ 10:30ಕ್ಕೆ ನಡೆಯಲಿದೆ. ಮಾಜಿ ರೂಪದರ್ಶಿ ಚಲನಚಿತ್ರ ನಟಿ ಆಶಾ ಭಟ್ ಉದ್ಘಾಟಿಸುವರು. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಕೋರಲಾಗಿದೆ.

ನಿವೃತ್ತ ಕಾರ್ಮಿಕ ಮುಖಂಡ ತಿಮ್ಮೇಗೌಡ ನಿಧನ

ತಿಮ್ಮೇಗೌಡ
    ಭದ್ರಾವತಿ, ಆ. ೨೭:  ತಿಮ್ಲಾಪುರ ನಿವಾಸಿ ನಗರಸಭೆ ಮಾಜಿ ಸದಸ್ಯ ಟಿ. ರಮೇಶ್‌ರವರ ತಂದೆ, ನಿವೃತ್ತ ಕಾರ್ಮಿಕ ಮುಖಂಡ ತಿಮ್ಮೇಗೌಡ(೮೦) ಶನಿವಾರ ಬೆಳಿಗ್ಗೆ ಹೃದಯಾಘಾತದಿಂದ ನಿಧನ ಹೊಂದಿದರು.
    ಪತ್ನಿ ಟಿ.ರಮೇಶ್ ಸೇರಿದಂತೆ ಇಬ್ಬರು ಗಂಡು ಮಕ್ಕಳು, ಓರ್ವ ಪುತ್ರಿಯನ್ನು ಹೊಂದಿದ್ದರು.  ತಿಮ್ಮೇಗೌಡರವರು ವಿಐಎಸ್‌ಎಲ್ ಕಾರ್ಖಾನೆಯಲ್ಲಿ ನೌಕರರಾಗಿ ಸೇವೆ ಸಲ್ಲಿಸುವ ಜೊತೆಗೆ ಎಐಟಿಯುಸಿ ಕಾರ್ಮಿಕ ಸಂಘಟನೆಯ ಪ್ರಧಾನ ಕಾರ್ಯದರ್ಶಿಯಾಗಿ ಸೇವೆಸಲ್ಲಿಸಿದ್ದರು. ತಿಮ್ಮಗೌಡರವರು ಎಂಪಿಎಂ ಕಾರ್ಮಿಕ ಸಂಘದ ಮಾಜಿ ಅಧ್ಯಕ್ಷ ಮರಿಸ್ವಾಮಿ ಅವರ ಸಹೋದರರಾಗಿದ್ದಾರೆ. ಇವರ ಅಂತ್ಯಕ್ರಿಯೆ ಹೊಸಬುಳ್ಳಾಪುರ-ಬಾಳೇಮಾರನಹಳ್ಳಿ ರಸ್ತೆಯಲ್ಲಿರುವ ಶ್ರೀ ಸತ್ಯಶ್ಚಂದ್ರ ಹಿಂದೂ ರುದ್ರಭೂಮಿಯಲ್ಲಿ ನೆರವೇರಲಿದೆ.
    ಪ್ರಗತಿಪರ ಸಂಘಟನೆಗಳ ಒಕ್ಕೂಟದ ಸುರೇಶ್, ಕರ್ನಾಟಕ ರಾಜ್ಯ ಸರ್ಕಾರಿ ಪಡಿತರ ವಿತರಕರ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ಸಿದ್ದಲಿಂಗಯ್ಯ ಸೇರಿದಂತೆ ವಿವಿಧ ಕಾರ್ಮಿಕ ಸಂಘಟನೆಗಳ ಪ್ರಮುಖರು ಸಂತಾಪ ಸೂಚಿಸಿದ್ದಾರೆ.

ನಗರಸಭೆ ಅಧ್ಯಕ್ಷೆಯಾಗಿ ೧೦ ತಿಂಗಳು ಉತ್ತಮ ಆಡಳಿತ : ಹಲವು ಅಭಿವೃದ್ಧಿ ಕಾರ್ಯ

ಸಹಕಾರ ನೀಡಿದ ಎಲ್ಲರಿಗೂ ಗೀತಾ ಕೆ.ಜಿ ರಾಜ್‌ಕುಮಾರ್ ಕೃತಜ್ಞತೆ

ಭದ್ರಾವತಿಯಲ್ಲಿ ಶುಕ್ರವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ನಗರಸಭೆ ಅಧ್ಯಕ್ಷೆ ಗೀತಾ ಕೆ.ಜಿ ರಾಜ್‌ಕುಮಾರ್ ಮಾತನಾಡಿದರು.
    ಭದ್ರಾವತಿ, ಆ. ೨೬: ನಗರಸಭೆ ಅಧ್ಯಕ್ಷೆಯಾಗಿ ಹಲವಾರು ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುವ ಮೂಲಕ ಕಳೆದ ೧೦ ತಿಂಗಳು ಉತ್ತಮವಾಗಿ ಸೇವೆ ಸಲ್ಲಿಸಿದ್ದು,  ಸಹಕಾರ ನೀಡಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ನಗರಸಭೆ ನಿರ್ಗಮಿತ ಅಧ್ಯಕ್ಷೆ ಗೀತಾ ಕೆ.ಜಿ ರಾಜ್‌ಕುಮಾರ್ ಹೇಳಿದರು.
    ಅವರು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ನಗರಸಭೆಗೆ ಕಳೆದ ವರ್ಷ ಏ.೨೬ರಂದು ಚುನಾವಣೆ ನಡೆದಿದ್ದು, ಈ ಚುನಾವಣೆಯಲ್ಲಿ  ವಾರ್ಡ್ ನಂ.೨ರಲ್ಲಿ ಸ್ಪರ್ಧಿಸಿ ಗೆಲುವು ಸಾಧಿಸುವ ಮೂಲಕ ಮೊದಲ ಅವಧಿಯಲ್ಲಿಯೇ ನನಗೆ ಶಾಸಕ ಬಿ.ಕೆ ಸಂಗಮೇಶ್ವರ್ ಹಾಗು ಕಾಂಗ್ರೆಸ್ ಪಕ್ಷದ ಮುಖಂಡರು, ನಗರಸಭಾ ಸದಸ್ಯರು ಅಧ್ಯಕ್ಷರಾಗಲು ಅವಕಾಶ ಕಲ್ಪಿಸಿಕೊಟ್ಟರು. ಈ ಹಿನ್ನಲೆಯಲ್ಲಿ ಅ.೧೬ರಂದು ಅಧ್ಯಕ್ಷರಾಗಿ ಆಯ್ಕೆಯಾಗುವ ಮೂಲಕ ೧೦ ತಿಂಗಳ ಅವಧಿಯನ್ನು ಯಶಸ್ವಿಯಾಗಿ ಮುನ್ನಡೆಸಿಕೊಂಡು ಬಂದಿದ್ದೇನೆ ಎಂದರು.
    ಕುಡಿಯುವ ನೀರು, ರಸ್ತೆ ನಿರ್ಮಾಣ, ಉದ್ಯಾನವನಗಳ ಅಭಿವೃದ್ಧಿ, ನಗರದ ಪ್ರಮುಖ ವೃತ್ತಗಳ ಅಭಿವೃದ್ಧಿ, ಸುಸಜ್ಜಿತವಾದ ಖಾಸಗಿ ಬಸ್ ನಿಲ್ದಾಣ, ಪೌರಕಾರ್ಮಿಕರಿಗೆ ಗೃಹ ನಿರ್ಮಾಣ, ನಗರಸಭೆ ವ್ಯಾಪ್ತಿಯಲ್ಲಿ ಸಾರ್ವಜನಿಕರ ಆರೋಗ್ಯ ದೃಷ್ಟಿಯಿಂದ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಿದ್ದೇನೆ. ಇನ್ನೂ ಹಲವಾರು ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದ್ದೇನೆ ಎಂದರು.
ನಗರಸಭೆ ಪ್ರಭಾರ ಅಧ್ಯಕ್ಷ ಚನ್ನಪ್ಪ, ಸ್ಥಾಯಿ ಸಮಿತಿ ಅಧ್ಯಕ್ಷ ಕೆ. ಸುದೀಪ್‌ಕುಮಾರ್ ಮತ್ತು ಕೆ.ಜಿ ರಾಜ್‌ಕುಮಾರ್ ಉಪಸ್ಥಿತರಿದ್ದರು.
     ೧೦ ತಿಂಗಳ ಅವಧಿಯಲ್ಲಿ ಪ್ರಮುಖ ಅಭಿವೃದ್ಧಿ ಕಾರ್ಯಗಳು:-
    - ನಗರೋತ್ಥಾನ ಯೋಜನೆಯಡಿ ೩೪ ಕೋ. ರು. ವೆಚ್ಚದ ಅಭಿವೃದ್ಧಿ ಕಾರ್ಯಗಳು.
    - ಎಸ್‌ಎಫ್‌ಸಿ ಹಾಗು ಇತರೆ ಯೋಜನೆಯಡಿ ೭ ಕೋ.ರು. ಅನುದಾನದ ಅಭಿವೃದ್ಧಿ ಕಾರ್ಯಗಳು
    - ೯೨ ಲಕ್ಷ ರು. ವೆಚ್ಚದಲ್ಲಿ ಜಯಶ್ರೀ, ಹುತ್ತಾಕಾಲೋನಿ, ಬಸವೇಶ್ವರ, ಮಾಧವಚಾರ್,
       ಹಾಲಪ್ಪ ಮತ್ತು ರಂಗಪ್ಪ ವೃತ್ತಗಳ ಅಭಿವೃದ್ಧಿ.
    - ವಾರ್ಡ್ ನಂ.೯ರಿಂದ ಪ್ರತಿ ಮನೆಗೆ ಕಸದ ಬುಟ್ಟಿ ವಿತರಣೆ.