Wednesday, September 7, 2022

ವಿಳಾಸ ದೃಢೀಕರಣ ಮಾಹಿತಿ ನೀಡಿ ಸಹಕರಿಸಿ

    ಭದ್ರಾವತಿ, ಸೆ. ೭ : ನಗರದ ಚನ್ನಗಿರಿ ರಸ್ತೆಯ ಶ್ರೀ ಭವಾನಿ ಸಂಕೀರ್ಣದಲ್ಲಿರುವ ಶ್ರೀ ಛತ್ರಪತಿ ಶಿವಾಜಿ ಸೇವಾ ಸಂಘದ ಸರ್ವ ಸದಸ್ಯರ ಸಭೆ ನಡೆಸಲು ಉದ್ದೇಶಿಸಲಾಗಿದ್ದು, ಒಂದು ವೇಳೆ ಸದಸ್ಯರ ವಿಳಾಸ ಬದಲಾವಣೆಯಾಗಿದ್ದಲ್ಲಿ ವಿಳಾಸದ ದೃಢೀಕರಣ ದಾಖಲಾತಿಯೊಂದಿಗೆ ಸಂಘದ ಕಛೇರಿಗೆ ಮಾಹಿತಿ ನೀಡುವಂತೆ ಕೋರಲಾಗಿದೆ.
    ಸರ್ವ ಸದಸ್ಯರ ಸಭೆ ಹಿನ್ನಲೆಯಲ್ಲಿ ಈಗಾಗಲೇ ಸದಸ್ಯರಿಗೆ ಅಂಚೆ ಮೂಲಕ ಆಹ್ವಾನ ಪತ್ರಿಕೆಗಳನ್ನು ಕಳುಹಿಸಲಾಗಿದೆ. ಆದರೆ ಕೆಲವು ಆಹ್ವಾನ ಪತ್ರಿಕೆಗಳು ಹಿಂದಿರುಗಿವೆ. ಒಂದು ವೇಳೆ ಸದಸ್ಯರ ವಿಳಾಸಗಳು ಬದಲಾವಣೆಯಾಗಿದ್ದಲ್ಲಿ ಅಥವಾ ತಾಲೂಕಿನ ಹೊರಗೆ ವಾಸಿಸುತ್ತಿದ್ದರೇ ತಕ್ಷಣ ವಿಳಾಸ ದೃಡೀಕರಣದ ಮಾಹಿತಿಯನ್ನು ಸಂಘದ ಕಛೇರಿಗೆ ತಿಳಿಸುವಂತೆ ಸಂಘದ ಕಾರ್ಯದರ್ಶಿ ವಿಶ್ವೇಶ್ವರರಾವ್ ಗಾಯಕ್‌ವಾಡ್ ಕೋರಿದ್ದಾರೆ.

Tuesday, September 6, 2022

ವೇಳಾಂಗಣಿ ಆರೋಗ್ಯಮಾತೆಯ ಪುಣ್ಯಕ್ಷೇತ್ರದಲ್ಲಿ ಜಯಂತ್ಯೋತ್ಸವ, ವಾರ್ಷಿಕೋತ್ಸವ

ಭದ್ರಾವತಿ ಗಾಂಧಿನಗರದಲ್ಲಿರುವ ವೇಳಾಂಗಣಿ ಆರೋಗ್ಯಮಾತೆಯ ಪುಣ್ಯಕ್ಷೇತ್ರದಲ್ಲಿ ಮಾತೆಯ ಜಯಂತ್ಯೋತ್ಸವ ಹಾಗು ಪುಣ್ಯಕ್ಷೇತ್ರದ ವಾರ್ಷಿಕೋತ್ಸವ ಜರುಗುತ್ತಿವೆ.
  ಭದ್ರಾವತಿ, ಸೆ. ೬: ಗಾಂಧಿನಗರದಲ್ಲಿರುವ ವೇಳಾಂಗಣಿ ಆರೋಗ್ಯಮಾತೆಯ ಪುಣ್ಯಕ್ಷೇತ್ರದಲ್ಲಿ ಮಾತೆಯ ಜಯಂತ್ಯೋತ್ಸವ ಹಾಗು ಪುಣ್ಯಕ್ಷೇತ್ರದ ವಾರ್ಷಿಕೋತ್ಸವ ನಡೆಯುತ್ತಿದ್ದು, ನಗರದ ವಿವಿಧೆಡೆಗಳಿಂದ ಭಕ್ತರು ಪಾಲ್ಗೊಳ್ಳುವ ಮೂಲಕ ತಮ್ಮ ನಿವೇದನೆಗಳನ್ನು ಸಮರ್ಪಿಸಿಕೊಳ್ಳುತ್ತಿದ್ದಾರೆ.
    ಈ ಭಾಗದಲ್ಲಿ ವೇಳಾಂಗಣಿ ಆರೋಗ್ಯಮಾತೆಯ ಪುಣ್ಯಕ್ಷೇತ್ರ ಇಂದಿಗೂ ತನ್ನದೇ ಆದ ವಿಶಿಷ್ಟತೆಯನ್ನು ಕಾಯ್ದುಕೊಂಡು ಬಂದಿದೆ. ಕ್ಯಾಥೋಲಿಕ್ ಕ್ರೈಸ್ತ ಸಮುದಾಯದವರ ಧಾರ್ಮಿಕ ಅಗತ್ಯತೆಗಳನ್ನು ಪೂರೈಸುವ ಜೊತೆಗೆ ಪವಾಡ ಕ್ಷೇತ್ರವಾಗಿ ಸಹ ಗುರುತಿಸಿಕೊಂಡಿದೆ.
    ಆ.೨೯ರಿಂದ ಮಾತೆಯ ಜಯಂತ್ಯೋತ್ಸವ ಹಾಗು ಪುಣ್ಯಕ್ಷೇತ್ರದ ವಾರ್ಷಿಕೋತ್ಸವ ನಡೆಯುತ್ತಿದ್ದು, ಮಾತೆ ಧರ್ಮಸಭೆಯ ಮಕ್ಕಳನ್ನು ಅನ್ಯೋನ್ಯತೆಯೆಡೆಗೆ ಮುನ್ನಡೆಸುವ ಮಹಾಮಾತೆ ಎಂಬ ಧ್ಯೇಯ ವಾಕ್ಯದೊಂದಿಗೆ ಮಕ್ಕಳ ದಿನ, ಕ್ರಿಸ್ತನೊಂದಿಗೆ ಪಯಣಿಸುವ ಮಾತೆ, ಯುವಜನತೆಯನ್ನು ಸಹಭಾಗಿತ್ವದಲ್ಲಿ ನಡೆಸುವ ಕೃಪಾದಾತೆ ಎಂಬ ಧ್ಯೇಯ ವಾಕ್ಯದೊಂದಿಗೆ ಯುವಜನರ ದಿನ, ಮರಿಯ ಪ್ರೇಷಿತರ ಸಮಾಗಮ, ಕುಟುಂಬದಲ್ಲಿ ಐಕ್ಯತೆಯ ಉಗಮ ಎಂಬ ಧ್ಯೇಯ ವಾಕ್ಯದೊಂದಿಗೆ ಕುಟುಂಬದ ದಿನ, ಮಾತೆಯ ಮಧ್ಯಸ್ಥಿಕೆ ಹಿರಿಯರಲ್ಲಿ ಚೇತರಿಕೆ ಎಂಬ ಧ್ಯೇಯ ವಾಕ್ಯದೊಂದಿಗೆ ಹಿರಿಯರ ದಿನ, ಮಾತೆಯ ಪ್ರಾರ್ಥನಾ ಸಾಂಗತ್ಯ ದಂಪತಿಗಳಿಗೆ ಅಗತ್ಯ ಎಂಬ ಧ್ಯೇಯ ವಾಕ್ಯದೊಂದಿಗೆ ದಂಪತಿಗಳ ದಿನ, ಮಾತೆಯ ವಿಶ್ವಾಸದ ಹಾದಿ, ಕಾರ್ಮಿಕರ ಬಾಳಿಗೆ ಭದ್ರ ಬುನಾದಿ ಎಂಬ ಧ್ಯೇಯ ವಾಕ್ಯದೊಂದಿಗೆ ಕಾರ್ಮಿಕರ ದಿನ, ಮಾತೆಯ ದೈವ ವಾಕ್ಯದ ಅನುಸರಣೆ, ಶಿಕ್ಷಕರ ಬಾಳಿಗಾಗಲಿ ಪ್ರೇರಣೆ ಎಂಬ ವಾಕ್ಯದೊಂದಿಗೆ ಶಿಕ್ಷಕರ ದಿನ ಹಾಗು ಆರೋಗ್ಯ ಮಾತೆ ನಮ್ಮೆಲ್ಲರ ಸೌಖ್ಯ ದಾತೆ ಎಂಬ ಧ್ಯೇಯ ವಾಕ್ಯದೊಂದಿಗೆ ವೈದ್ಯ/ದಾದಿಯರ ದಿನಾಚರಣೆಗಳು ಈಗಾಗಲೇ ಜರುಗಿವೆ.
    ಸೆ.೭ರಂದು ಕ್ರೈಸ್ತ ತಾಯಿ ಮರಿಯಮ್ಮ, ಸುವಾರ್ತಿಕರ ಹರಸಮ್ಮ ಎಂಬ ಧೈಯ ವಾಕ್ಯದೊಂದಿಗೆ ಧಾರ್ಮಿಕರ ದಿನ ನಡೆಯಲಿದ್ದು, ಸಂಜೆ ೫ ಗಂಟೆಗೆ ಜಪಸರ, ಬಲಿಪೂಜೆ, ಪ್ರಬೋಧನೆ ಮತ್ತು ನವೇನ, ೬.೩೦ಕ್ಕೆ ನಗರದ ಪ್ರಮುಖ ರಸ್ತೆಗಳಲ್ಲಿ ಮಾತೆಯ ಅಲಂಕೃತ ತೇರಿನ ಮೆರವಣಿಗೆ ನಡೆಯಲಿದೆ.
    ಸೆ.೮ರಂದು ಮಾತೆ ಮರಿಯ : ಸರ್ವರ ಪೋಷಕಿ, ಸುವಾರ್ತಿಕರ ಪ್ರೇರಕಿ ಎಂಬ ಧ್ಯೇಯ ವಾಕ್ಯದೊಂದಿಗೆ ಸರ್ವರ ದಿನ ನಡೆಯಲಿದ್ದು, ಬೆಳಿಗ್ಗೆ ೭ ಗಂಟೆಯಿಂದ ೧೧ ಗಂಟೆವರೆಗೆ ಪೂಜೆಗಳು, ಮಧ್ಯಾಹ್ನ ೧೨.೩೦ಕ್ಕೆ ಅನ್ನದಾನ, ಸಂಜೆ ೫.೩೦ಕ್ಕೆ ಮಹೋತ್ಸವದ ಸಾಂಭ್ರಮಿಕ ಬಲಿಪೂಜೆ ಜರುಗಲಿವೆ.
    ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಜಯಂತ್ಯೋತ್ಸವ ಹಾಗು ಪುಣ್ಯಕ್ಷೇತ್ರದ ವಾರ್ಷಿಕೋತ್ಸವ ಯಶಸ್ವಿಗೊಳಿಸುವಂತೆ ಧರ್ಮಗುರುಗಳು ಕೋರಿದ್ದಾರೆ.

ಹೆಲಿಪ್ಯಾಡ್ ಬಳಿ ಹಸುವಿನ ಮೃತದೇಹ ಪತ್ತೆ

ಭದ್ರಾವತಿ ನಗರಸಭೆ ವ್ಯಾಪ್ತಿಯ ವಾರ್ಡ್ ನಂ.೨೫ರ ಹುಡ್ಕೋ ಕಾಲೋನಿ ಹೆಲಿಪ್ಯಾಡ್ ಬಳಿ ಹಸುವಿನ ಮೃತದೇಹ ಪತ್ತೆಯಾಗಿದೆ.
    ಭದ್ರಾವತಿ, ಸೆ. ೬: ನಗರಸಭೆ ವ್ಯಾಪ್ತಿಯ ವಾರ್ಡ್ ನಂ.೨೫ರ ಹುಡ್ಕೋ ಕಾಲೋನಿ ಹೆಲಿಪ್ಯಾಡ್ ಬಳಿ ಹಸುವಿನ ಮೃತದೇಹ ಪತ್ತೆಯಾಗಿದೆ.
    ಈ ಭಾಗದಲ್ಲಿ ವಾಯು ವಿಹಾರಕ್ಕೆ ಸಂಚರಿಸುವವರಿಗೆ ಮೃತದೇಹ ಕಂಡು ಬಂದಿದ್ದು, ಕೊಳೆತ ಸ್ಥಿತಿಯಲ್ಲಿರುವ ಮೃತದೇಹ ನಾಯಿ-ನರಿಗಳಿಗೆ ಆಹಾರವಾಗಿದೆ.
    ೨-೩ ದಿನಗಳು ಕಳೆದರೆ ಮೃತದೇಹ ಮತ್ತಷ್ಟು ಕೊಳೆತು ದುರ್ವಾಸನೆ ಬೀರುವ ಜೊತೆಗೆ ರೋಗರುಜಿನಗಳು ಹರಡುವ ಸಾಧ್ಯತೆಗಳು ಹೆಚ್ಚಾಗಿವೆ. ಈ ಹಿನ್ನೆಲೆಯಲ್ಲಿ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ತಕ್ಷಣ ಮೃತದೇಹದ ಅಂತ್ಯಸಂಸ್ಕಾರ ನಡೆಸುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ.

ಸೆ.೮ರಂದು ಹಿಂದೂ ಮಹಾಸಭಾ ಗಣಪತಿ ವಿಸರ್ಜನೆ : ರಾಜಬೀದಿ ಉತ್ಸವ ಮೆರವಣಿಗೆಗೆ ಸಕಲ ಸಿದ್ದತೆ

ಭದ್ರಾವತಿಯಲ್ಲಿ ಹಿಂದೂ ಮಹಾಸಭಾ-ಹಿಂದೂ ರಾಷ್ಟ್ರ ಸೇನಾ ವಿನಾಯಕ ಸೇವಾ ಸಮಿತಿ ವತಿಯಿಂದ ನಿರ್ಮಿಸಲಾಗಿರುವ ರಾಜಮಹಾರಾಜರ ಕಾಲದ ಕೋಟೆಯಂತೆ ಕಾಣುವ ಮಹಾದ್ವಾರ.

    ಭದ್ರಾವತಿ, ಸೆ. ೬: ಹಿಂದೂ ಮಹಾಸಭಾ-ಹಿಂದೂ ರಾಷ್ಟ್ರ ಸೇನಾ ವಿನಾಯಕ ಸೇವಾ ಸಮಿತಿ ವತಿಯಿಂದ ಹೊಸಮನೆ ತಮಿಳು ಶಾಲೆ ಬಳಿ ಪ್ರತಿಷ್ಠಾಪಿಸಲಾಗಿರುವ ಶ್ರೀವಿನಾಯಕ ಮೂರ್ತಿ ವಿಸರ್ಜನೆ ಸೆ.೮ರಂದು ನಡೆಯಲಿದ್ದು, ಈ ಹಿನ್ನಲೆಯಲ್ಲಿ ರಾಜಬೀದಿ ಉತ್ಸವ ಮೆರವಣಿಗೆಗೆ ಸಕಲ ಸಿದ್ದತೆಗಳು ನಡೆಯುತ್ತಿವೆ.
    ಈ ಬಾರಿ ೫೦ನೇ ವರ್ಷದ ಸುವರ್ಣ ಮಹೋತ್ಸವ ಆಚರಣೆ ಹಿನ್ನಲೆಯಲ್ಲಿ ಹಲವಾರು ಕಾರ್ಯಕ್ರಮಗಳೊಂದಿಗೆ ಅದ್ದೂರಿಯಾಗಿ ೯ ದಿನಗಳ ಕಾಲ ಮಹೋತ್ಸವ ಹಮ್ಮಿಕೊಳ್ಳಲಾಗಿದ್ದು, ಈಗಾಗಲೇ ಹಲವಾರು ಕಾರ್ಯಕ್ರಮಗಳು ಯಶಸ್ವಿಯಾಗಿನಡೆದಿವೆ. ಸೆ.೮ರಂದು ವಿಸರ್ಜನೆ ನಡೆಯಲಿದ್ದು, ಈ ಸಂಬಂಧ ನಡೆಯುವ ರಾಜಬೀದಿ ಉತ್ಸವ ಮೆರವಣಿಗೆಗೆ ಸಕಲ ಸಿದ್ದತೆಗಳು ನಡೆಯುತ್ತಿವೆ. ಈ ಬಾರಿ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು, ಅಭಿಮಾನಿಗಳು, ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇದೆ.
    ಕೇಸರಿ ಪಡೆಯಿಂದ ೨೫ ಸಾವಿರ ಲಾಡು ವಿತರಣೆ :
    ಪ್ರತಿ ವರ್ಷ ರಾಜಬೀದಿ ಉತ್ಸವದಲ್ಲಿ ವಿಶಿಷ್ಟ ಸೇವಾ ಕಾರ್ಯಗಳನ್ನು ನಡೆಸಿಕೊಂಡು ಬರುತ್ತಿರುವ ಹಿಂದೂಪರ ಸಂಘಟನೆಗಳಲ್ಲಿ ಒಂದಾದ ಕೇಸರಿ ಪಡೆ ವತಿಯಿಂದ ಈ ಬಾರಿ ೨೫ ಸಾವಿರ ಲಾಡು ವಿತರಣೆ ನಡೆಯಲಿದೆ. ಈಗಾಗಲೇ ಲಾಡು ತಯಾರಿಕೆ ಕಾರ್ಯ ನಡೆಯುತ್ತಿದ್ದು, ಈ ಹಿಂದೆ ಸಹ ಲಾಡು ವಿತರಣೆ ಮಾಡಲಾಗಿತ್ತು.


ಭದ್ರಾವತಿಯಲ್ಲಿ ಹಿಂದೂ ಮಹಾಸಭಾ ಗಣಪತಿ ರಾಜಬೀದಿ ಉತ್ಸವ ಮೆರವಣಿಗೆಯಲ್ಲಿ ಹಿಂದೂಪರ ಸಂಘಟನೆಗಳಲ್ಲಿ ಒಂದಾದ ಕೇಸರಿ ಪಡೆ ವತಿಯಿಂದ ಈ ಬಾರಿ ೨೫ ಸಾವಿರ ಲಾಡು ವಿತರಣೆ ನಡೆಯಲಿದ್ದು, ಈ ಹಿನ್ನೆಯಲ್ಲಿ ಕಾರ್ಯಕರ್ತರು ಲಾಡು ತಯಾರಿಸುತ್ತಿರುವುದು.

    ಕೋಟೆಯಂತೆ ಮಹಾದ್ವಾರ ನಿರ್ಮಾಣ :
    ೫೦ನೇ ವರ್ಷದ ಸುವರ್ಣ ಮಹೋತ್ಸವ ಆಚರಣೆ ಹಿನ್ನಲೆಯಲ್ಲಿ ವಿನಾಯಕ ಸೇವಾ ಸಮಿತಿ ವತಿಯಿಂದ ಈ ಬಾರಿ ಬಿ.ಎಚ್ ರಸ್ತೆ ಅಂಬೇಡ್ಕರ್ ವೃತ್ತ, ಮಾಧವಚಾರ್ ವೃತ್ತಗಳಲ್ಲಿ ರಾಜಮಹಾರಾಜರ ಕಾಲದ ಕೋಟೆಯಂತೆ ಮಹಾದ್ವಾರಗಳನ್ನು ನಿರ್ಮಿಸಲಾಗಿದೆ. ಮಹಾದ್ವಾರಗಳು ಆಕರ್ಷಕವಾಗಿ ಕಂಡು ಬರುವ ಜೊತೆಗೆ ಎಲ್ಲರ ಗಮನ ಸೆಳೆಯುತ್ತಿವೆ.
    ಪೊಲೀಸ್ ಇಲಾಖೆ ವತಿಯಿಂದ ಪಥ ಸಂಚಲನ :
    ನಗರದಲ್ಲಿ ಶಾಂತಿ-ಸುವ್ಯವಸ್ಥೆ ಕುರಿತು ಜನರಲ್ಲಿ ಮೂಡಿಸುವ ಜೊತೆಗೆ ನಿಮ್ಮೊಂದಿಗೆ ನಾವಿದ್ದೇವೆ ಎಂಬ ಭರವಸೆ ಮೂಡಿಸುವ ಉದ್ದೇಶದೊಂದಿಗೆ ಪೊಲೀಸ್ ಇಲಾಖೆ ವತಿಯಿಂದ ಮಂಗಳವಾರ ಹೊಸಮನೆ ಶಿವಾಜಿ ವೃತ್ತದಿಂದ ರಂಗಪ್ಪ ವೃತ್ತದ ವರೆಗೂ ಪಥ ಸಂಚಲನ ನಡೆಸಲಾಯಿತು.
ಪಥ ಸಂಚಲನದಲ್ಲಿ ಪೊಲೀಸ್ ಇಲಾಖೆ ಹಾಗು ಆರ್‌ಎಎಫ್ ಸಿಬ್ಬಂದಿಗಳು, ಅಧಿಕಾರಿಗಳು ಪಾಲ್ಗೊಂಡಿದ್ದರು. ಹೆಚ್ಚುವರಿ ಜಿಲ್ಲಾ ರಕ್ಷಣಾಧಿಕಾರಿ ವಿಕ್ರಮ್ ಅಮಟೆ ನೇತೃತ್ವದಲ್ಲಿ ಪಥ ಸಂಚಲನ ನಡೆಯಿತು.


ಪೊಲೀಸ್ ಇಲಾಖೆ ವತಿಯಿಂದ ಮಂಗಳವಾರ ಭದ್ರಾವತಿ ಹೊಸಮನೆ ಶಿವಾಜಿ ವೃತ್ತದಿಂದ ರಂಗಪ್ಪ ವೃತ್ತದ ವರೆಗೂ ಪಥ ಸಂಚಲನ ನಡೆಸಲಾಯಿತು.

    ನಗರಸಭೆ ವತಿಯಿಂದ ಬ್ಯಾರಿಗೇಡ್‌ಗಳ ನಿರ್ಮಾಣ :
ರಾಜಬೀದಿ ಉತ್ಸವ ಮೆರವಣಿಗೆ ಹಿನ್ನಲೆಯಲ್ಲಿ ಪ್ರಮುಖ ವೃತ್ತ ಹಾಗು ರಸ್ತೆಗಳಲ್ಲಿ ನಗರಸಭೆ ವತಿಯಿಂದ ಬ್ಯಾರಿಗೇಡ್‌ಗಳ ನಿರ್ಮಾಣ ನಡೆಯುತ್ತಿದ್ದು, ಈ ಬಾರಿ ಸಹ ಹೆಚ್ಚಿನ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಕೈಗೊಳ್ಳಲಾಗಿದೆ.



ಅಭಿಮಾನಿಗಳು, ಕಾರ್ಯಕರ್ತರು ಅಪ್ಪಾಜಿ ಕುಟುಂಬ : ಶಾರದ ಅಪ್ಪಾಜಿ

ಭದ್ರಾವತಿಯಲ್ಲಿ ಹಮ್ಮಿಕೊಳ್ಳಲಾಗಿದ್ದ ಮಾಜಿ ಶಾಸಕ ಎಂ.ಜೆ ಅಪ್ಪಾಜಿ ಅವರ ೨ನೇ ವರ್ಷದ ಪುಣ್ಯಸ್ಮರಣೆ, ಭದ್ರಾ ಜಲಾಶಯಕ್ಕೆ ಬಾಗಿನ ಸಮರ್ಪಣೆ ಹಾಗು ಜೆಡಿಎಸ್ ಪಕ್ಷದ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮವನ್ನು ಶಾರದ ಅಪ್ಪಾಜಿ ಉದ್ಘಾಟಿಸಿದರು.
    ಭದ್ರಾವತಿ, ಸೆ. ೬: ಕ್ಷೇತ್ರದ ರಾಜಕಾರಣಕ್ಕೆ ತಾಯಿ-ಮಗ ಬರಲ್ಲ ಎಂದು ಅಪಪ್ರಚಾರ ನಡೆಸಲಾಗುತ್ತಿದ್ದು, ಕಾರ್ಯಕರ್ತರು ಅಪ್ಪಾಜಿ ಕುಟುಂಬ ಎಂಬುದನ್ನು ವಿರೋಧಿಗಳಿಗೆ ಮನವರಿಕೆ ಮಾಡಿಕೊಡಬೇಕೆಂದು ಮುಂಬರುವ ವಿಧಾನಸಭಾ ಚುನಾವಣೆಯ ಜೆಡಿಎಸ್ ಪಕ್ಷದ ನಿಯೋಜಿತ ಅಭ್ಯರ್ಥಿ ಶಾರದ ಅಪ್ಪಾಜಿ ಹೇಳಿದರು.
    ಅವರು ಮಾಜಿ ಶಾಸಕ ಎಂ.ಜೆ ಅಪ್ಪಾಜಿ ಅವರ ೨ನೇ ವರ್ಷದ ಪುಣ್ಯಸ್ಮರಣೆ, ಭದ್ರಾ ಜಲಾಶಯಕ್ಕೆ ಬಾಗಿನ ಸಮರ್ಪಣೆ ಹಾಗು ಜೆಡಿಎಸ್ ಪಕ್ಷದ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
    ಅಪ್ಪಾಜಿ ಹೆಸರಿನಲ್ಲಿ ಯಾವುದೇ ಕೆಲಸ ಮಾಡಿದರೂ ಖಂಡಿತವಾಗಿ ಯಶಸ್ಸು ಲಭಿಸುತ್ತದೆ. ಕ್ಷೇತ್ರದ ಜನರ ಹೃದಯದಲ್ಲಿ ಅಪ್ಪಾಜಿ ಎಂದಿಗೂ ಅಚ್ಚಳಿಯದಂತೆ ಉಳಿದುಕೊಂಡಿದ್ದಾರೆ. ಇವರನ್ನು ಹೃದಯದಿಂದ ಕಿತ್ತು ಹಾಕಲು ಅಥವಾ ಅಳಿಸಿ ಹಾಕಲು ಸಾಧ್ಯವಿಲ್ಲ. ಅಭಿಮಾನಿಗಳು, ಕಾರ್ಯಕರ್ತರೇ ಅಪ್ಪಾಜಿ ಕುಟುಂಬವಾಗಿದ್ದಾರೆ. ತಾಯಿ-ಮಗ ರಾಜಕಾರಣಕ್ಕೆ ಬರುವುದಿಲ್ಲ ಎಂದು ಅಪಪ್ರಚಾರ ನಡೆಸಲಾಗುತ್ತಿದೆ. ಅಭಿಮಾನಿಗಳು, ಕಾರ್ಯಕರ್ತರು ಅಪ್ಪಾಜಿ ಅವರು ಬಿಟ್ಟು ಹೋಗಿರುವ ಆಸ್ತಿಯಾಗಿದ್ದಾರೆ. ಈ ಹಿನ್ನಲೆಯಲ್ಲಿ ಯಾರು ಸಹ ಇಂತಹ ಅಪಪ್ರಚಾರಗಳಿಗೆ ಕಿಡಿಕೊಡಬಾರದು ಎಂದರು.
    ಕಮಿಷನ್ ಹೊಡೆಯಲು ಪ್ರೋಟೋ ಕಾಲ್ ಇಲ್ಲ :
    ಕ್ಷೇತ್ರದಲ್ಲಿ ಅಪ್ಪಾಜಿ ಕುಟುಂಬ ಎಂದಿಗೂ ಯಾವುದೇ ಅಧಿಕಾರಿಗಳಿಗೆ ತೊಂದರೆ ನೀಡಿಲ್ಲ. ನಾನು ಇದುವರೆಗೂ ಪೊಲೀಸ್ ಠಾಣೆ ಮೆಟ್ಟಿಲು ಹತ್ತಿಲ್ಲ. ಅದರ ಅಗತ್ಯ ಸಹ ನಮಗೆ ಇರಲಿಲ್ಲ ಕಾರಣ ಅಪ್ಪಾಜಿ ಹೆಸರಿನಲ್ಲಿಯೇ ಅಧಿಕಾರಿಗಳು ತಮ್ಮ ಕರ್ತವ್ಯವನ್ನು ಸಮರ್ಥವಾಗಿ ನಿಭಾಯಿಸಿಕೊಂಡು ಹೋಗುತ್ತಿದ್ದರು. ಆದರೆ ಇದೀಗ ಪರಿಸ್ಥಿತಿ ಬದಲಾಗಿದೆ. ಅಧಿಕಾರಿಗಳು ಸ್ವತಂತ್ರ್ಯವಾಗಿ ಕೆಲಸ ಮಾಡಲು ಬಿಡುತ್ತಿಲ್ಲ ಎಂದು ಆರೋಪಿಸಿ ರಸ್ತೆ ಉದ್ಘಾಟನೆಗೂ ಪ್ರೋಟೋಕಾಲ್, ಆಮಂತ್ರಣ ಪತ್ರಿಕೆಯಲ್ಲಿ ಹೆಸರು ಮುದ್ರಿಸಲು ಪ್ರೋಟೋಕಾಲ್, ಆದರೆ ರಸ್ತೆ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿ ಕಮೀಷನ್ ಹೊಡೆಯಲು ಯಾವುದೇ ಪ್ರೋಟೋಕಾಲ್ ಇಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
    ಪ್ರಸ್ತುತ ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡಬೇಕು. ಅಪ್ಪಾಜಿಯವರು ಕ್ಷೇತ್ರದಲ್ಲಿ ಬಿಟ್ಟು ಹೋಗಿರುವ ಕೆಲಸಗಳನ್ನು ಪೂರ್ಣಗೊಳಿಸಬೇಕು. ಈ ನಿಟ್ಟಿನಲ್ಲಿ ಮುಂಬರುವ ಚುನಾವಣೆಯಲ್ಲಿ ಯೋಚನೆ ಮಾಡಿ ತಮ್ಮ ಮತ ಚಲಾಯಿಸಬೇಕೆಂದರು.
    ಜೆಡಿಎಸ್ ಪಕ್ಷದ ಯುವ ಘಟಕದ ಜಿಲ್ಲಾಧ್ಯಕ್ಷ ಮಧುಕುಮಾರ್ ಮಾತನಾಡಿ, ಮುಂಬರುವ ಚುನಾವಣೆಯಲ್ಲಿ ಕ್ಷೇತ್ರದಲ್ಲಿ ಶಾರದ ಅಪ್ಪಾಜಿ ಅವರನ್ನು ಗೆಲ್ಲಿಸುವ ಪಣ ತೊಡುವ ಮೂಲಕ ಪಕ್ಷ ಸಂಘಟನೆ ಕೈಗೊಳ್ಳಲಾಗುತ್ತಿದೆ. ಈ ನಿಟ್ಟಿನಲ್ಲಿ ಈ ಕಾರ್ಯಕ್ರಮ ಆಯೋಜನೆ ಮಾಡಲಾಗಿದ್ದು, ಯಾರು ಈ ಕ್ಷೇತ್ರದಲ್ಲಿ ದರ್ಪದಿಂದ ಮೆರೆಯುತ್ತಿದ್ದಾರೆಯೋ ಅವರಿಗೆ ಎಲ್ಲರೂ ಒಗ್ಗಟ್ಟಾಗಿ ಸೇರಿ ಉತ್ತರ ಕೊಡಬೇಕಾಗಿದೆ ಎಂದರು.
    ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಜೆ.ಪಿ ಯೋಗೇಶ್, ಜೆಡಿಎಸ್ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಗೀತಾ ಸತೀಶ್, ತಾಲೂಕು ನಗರ ಘಟಕದ ಅಧ್ಯಕ್ಷ ಆರ್. ಕರುಣಾಮೂರ್ತಿ, ಗ್ರಾಮಂತರ ಘಟಕದ ಅಧ್ಯಕ್ಷ ಕೆ. ಧರ್ಮಕುಮಾರ, ನಗರ ಘಟಕದ ಮಹಿಳಾ ಅಧ್ಯಕ್ಷೆ ವಿಶಾಲಾಕ್ಷಿ, ಗ್ರಾಮಾಂತರ ಘಟಕದ ಅಧ್ಯಕ್ಷೆ ಪಾರ್ವತಿಬಾಯಿ, ಅಲ್ಪ ಸಂಖ್ಯಾಂತರ ನಗರ ಘಟಕದ ಅಧ್ಯಕ್ಷ ಮುತುರ್ಜಾಖಾನ್, ತಾಲೂಕು ಯುವ ಘಟಕದ ಅಧ್ಯಕ್ಷ ಎಂ.ಎ ಅಜಿತ್, ನಗರ ಘಟಕದ ಕಾರ್ಯಾಧ್ಯಕ್ಷ ಬಿ.ಸಿ ಉಮೇಶ್, ಪರಿಶಿಷ್ಟ ಜಾತಿ ನಗರ ಘಟಕದ ಅಧ್ಯಕ್ಷ ಮೈಲಾರಪ್ಪ, ಪರಿಶಿಷ್ಟ ಜಾತಿ ಗ್ರಾಮಾಂತರ ಘಟಕದ ಅಧ್ಯಕ್ಷ ಶ್ರೀಧರನಾಯ್ಕ, ಪಕ್ಷದ ಪ್ರಧಾನ ಕಾರ್ಯದರ್ಶಿ ಹಾಗು ವಕ್ತಾರ ಎಂ. ರಾಜು ನಗರ ಘಟಕದ ಮಹಿಳಾ ಕಾರ್ಯದರ್ಶಿ ಭಾಗ್ಯಮ್ಮ ಹಾಗು ಮುಖಂಡರಾದ ಕರಿಯಪ್ಪ, ಡಿ.ಟಿ ಶ್ರೀಧರ್, ಲೋಕೇಶ್ವರ್ ರಾವ್, ಧರ್ಮೇಗೌಡ ಹಾಗು ನಗರಸಭೆ ಮತ್ತು ಗ್ರಾಮ ಪಂಚಾಯಿತಿ ಸದಸ್ಯರು, ವಿವಿಧ ಸಂಘ-ಸಂಸ್ಥೆಗಳ ಮುಖಂಡರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Monday, September 5, 2022

ಖಾತೆ ಪಹಣಿ ಮ್ಯುಟೇಷನ್ ದಾಖಲೆ ವಿಳಂಬ : ಡಿಎಸ್‌ಎಸ್ ಪ್ರತಿಭಟನೆ

ರೈತರಿಗೆ ಸಾಗುವಳಿ ಚೀಟಿ ನೀಡಿದ್ದರೂ ಸಹ ಖಾತೆ ಪಹಣಿ ಮ್ಯುಟೇಷನ್ ದಾಖಲೆ ಮಾಡದೆ ವಿಳಂಬ ನೀತಿ ಮತ್ತು ೯೪ಸಿ ಅಡಿಯ ಫಲಾನುಭವಿಗಳಿಗೆ ಹಕ್ಕು ಪತ್ರ ಮತ್ತು ಹಿಂದೂ ರುದ್ರಭೂಮಿ ಮಂಜೂರಾತಿಗೆ ಆಗ್ರಹಿಸಿ ಸೋಮವಾರ ತಾಲೂಕು ಕಛೇರಿ ಮುಂಭಾಗ ದಲಿತ ಸಂಘರ್ಷ ಸಮಿತಿ(ಸಂಯೋಜಕ) ವತಿಯಿಂದ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಲಾಯಿತು.
    ಭದ್ರಾವತಿ, ಸೆ. ೫: ರೈತರಿಗೆ ಸಾಗುವಳಿ ಚೀಟಿ ನೀಡಿದ್ದರೂ ಸಹ ಖಾತೆ ಪಹಣಿ ಮ್ಯುಟೇಷನ್ ದಾಖಲೆ ಮಾಡದೆ ವಿಳಂಬ ನೀತಿ ಮತ್ತು ೯೪ಸಿ ಅಡಿಯ ಫಲಾನುಭವಿಗಳಿಗೆ ಹಕ್ಕು ಪತ್ರ ಮತ್ತು ಹಿಂದೂ ರುದ್ರಭೂಮಿ ಮಂಜೂರಾತಿಗೆ ಆಗ್ರಹಿಸಿ ಸೋಮವಾರ ತಾಲೂಕು ಕಛೇರಿ ಮುಂಭಾಗ ದಲಿತ ಸಂಘರ್ಷ ಸಮಿತಿ(ಸಂಯೋಜಕ) ವತಿಯಿಂದ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಲಾಯಿತು.
    ತಾಲೂಕಿನಲ್ಲಿ ೨೦೨೧-೨೨ನೇ ಸಾಲಿನಲ್ಲಿ ಬಗರ್ ಹುಕುಂ ಜಮೀನು ಅಳತೆ ಮಾಡಿ ಸ್ಕೆಚ್ ಮಾಡಿ ಸಾಗುವಳಿ ಚೀಟಿ ನೀಡಿದ್ದು, ಆದರೆ ಇದುವರೆಗೂ ಖಾತೆ ಪಹಣಿ ಮ್ಯುಟೇಷನ್ ದಾಖಲೆ ಮಾಡದೆ ವಿಳಂಬ ನೀತಿ ಅನುಸರಿಸಲಾಗುತ್ತಿದ್ದು, ತಕ್ಷಣ  ಪರಿಶೀಲಿಸಿ ಖಾತೆ ಪಹಣಿ ಮ್ಯುಟೇಷನ್ ಮಾಡಿಕೊಡುವುದು.
    ತಾಲೂಕಿನಾದ್ಯಂತ ೯೪ಸಿ ಅಡಿಯಲ್ಲಿ ಮನೆಗಳಿಗೆ ಹಕ್ಕು ಪತ್ರ ಕೊಡುವುದಾಗಿ ಸರ್ಕಾರಕ್ಕೆ ಹಣ ಸಂದಾಯ ಮಾಡಿಕೊಂಡು ಇದುವರೆಗೂ ಹಕ್ಕು ಪತ್ರ ನೀಡದೆ ಬಡ ಕುಟುಂಬಗಳಿಗೆ ಅನ್ಯಾಯ ಮಾಡಲಾಗಿದ್ದು, ತಕ್ಷಣ ಅನ್ಯಾಯ ಸರಿಪಡಿಸುವುದು.
    ತಾಲೂಕಿನ ಕೂಡ್ಲಿಗೆರೆ ಹೋಬಳಿ ದೇವರಹಳ್ಳಿ ಅಂಚೆ ಗುಡ್ಡದ ನೇರಳೆಕೆರೆ ಗ್ರಾಮದ ಸರ್ವೆ ನಂ. ೩೪ ಮತ್ತು ೩೫ರಲ್ಲಿ ೨ ಎಕರೆ ಜಮೀನು ಹಿಂದೂ ರುದ್ರಭೂಮಿಗೆ ಮಂಜೂರು ಮಾಡುವಂತೆ ಹಲವಾರು ಬಾರಿ ಅರ್ಜಿ ಸಲ್ಲಿಸಿ ಕೋರಲಾಗಿದೆ. ಆದರೆ ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ. ತಕ್ಷಣ ಹಿಂದೂ ರುದ್ರಭೂಮಿ ಮಂಜೂರು ಮಾಡಲು ಕ್ರಮ ಕೈಗೊಳ್ಳುವಂತೆ ಮನವಿ ಮಾಡಲಾಗಿದೆ.
    ಸಮಿತಿ ತಾಲೂಕು ಸಂಯೋಜಕ ಅಣ್ಣಾದೊರೈ, ಸಂಘಟನಾ ಸಂಯೋಜಕ ಬಸವರಾಜು ಮತ್ತು ರಾಜು ಸೇರಿದಂತೆ ಇನ್ನಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಅಪ್ಪಾಜಿ ಪುಣ್ಯಸ್ಮರಣೆ, ಬಾಗಿನ ಸಮರ್ಪಣೆ, ಜೆಡಿಎಸ್ ಶಕ್ತಿ ಪ್ರದರ್ಶನ

ಶಾರದ ಅಪ್ಪಾಜಿ ಸಮ್ಮುಖದಲ್ಲಿ ನೂತನ ಪದಾಧಿಕಾರಿಗಳ ಪದಗ್ರಹಣ ಸ್ವೀಕಾರ


ಭದ್ರಾವತಿ ಗೋಣಿಬೀಡಿನಲ್ಲಿರುವ ಮಾಜಿ ಶಾಸಕ ಎಂ.ಜೆ ಅಪ್ಪಾಜಿ ಅವರ ಶಕ್ತಿಧಾಮದಲ್ಲಿ ಅಪ್ಪಾಜಿ ಪ್ರತಿಮೆಗೆ ಶಾರದ ಅಪ್ಪಾಜಿ ಹಾಗು ಕುಟುಂಬ ವರ್ಗದವರು ಅಭಿಮಾನಿಗಳು, ಜೆಡಿಎಸ್ ಪಕ್ಷದ ಮುಖಂಡರು, ಕಾರ್ಯಕರ್ತರು ವಿಶೇಷ ಪೂಜೆ ಸಲ್ಲಿಸಿದರು.

ಶಾರದ ಅಪ್ಪಾಜಿ ಕುಟುಂಬ ವರ್ಗದವರು ಭದ್ರಾವತಿ ಬಿಆರ್‌ಪಿ ಭದ್ರಾ ಜಲಾಶಯದಲ್ಲಿ ಬಾಗಿನ ಸಮರ್ಪಿಸಿದರು. 

ಭದ್ರಾವತಿಯಲ್ಲಿ ಸೋಮವಾರ ಶಾರದ ಅಪ್ಪಾಜಿ ನೇತೃತ್ವದಲ್ಲಿ ಪಾದಯಾತ್ರೆ ನಡೆಸಲಾಯಿತು.

ಭದ್ರಾವತಿ ನ್ಯೂಟೌನ್ ಉಂಬ್ಳೆಬೈಲು ರಸ್ತೆ, ರೋಟರಿ ಕ್ಲಬ್ ಸಮೀಪದಲ್ಲಿರುವ ಅಪ್ಪಾಜಿ ನಿವಾಸದಿಂದ ಗೋಣಿಬೀಡಿನ ಶಕ್ತಿಧಾಮದವರೆಗೂ ನಂತರ ಶಂಕರಘಟ್ಟ, ಬಿಆರ್‌ಪಿ ವ್ಯಾಪ್ತಿಯಲ್ಲಿ  ಬೈಕ್ ರ‍್ಯಾಲಿ ನಡೆಸಲಾಯಿತು.
    ಭದ್ರಾವತಿ, ಸೆ. ೫ : ಒಂದೆಡೆ ಮಾಜಿ ಶಾಸಕ ಎಂ.ಜೆ ಅಪ್ಪಾಜಿ ೨ನೇ ವರ್ಷದ ಪುಣ್ಯಸ್ಮರಣೆ, ಮತ್ತೊಂದೆಡೆ ತುಂಬಿದ ಭದ್ರೆಗೆ ಬಾಗಿನ ಸಮರ್ಪಣೆ, ಇನ್ನೊಂದೆಡೆ ಜೆಡಿಎಸ್ ಪಕ್ಷದ ಶಕ್ತಿ ಪ್ರದರ್ಶನ ಸೋಮವಾರ ತಾಲೂಕಿನ ಗೋಣಿಬೀಡು, ಶಂಕರಘಟ್ಟ, ಬಿಆರ್‌ಪಿ ವ್ಯಾಪ್ತಿಯಲ್ಲಿ  ನಡೆಯಿತು.
    ಮಾಜಿ ಶಾಸಕ ಎಂ.ಜೆ ಅಪ್ಪಾಜಿ ಅವರ ೨ನೇ ವರ್ಷದ ಪುಣ್ಯಸ್ಮರಣೆ ಗೋಣಿಬೀಡಿನ ಅವರ ತೋಟದಲ್ಲಿರುವ ಶಕ್ತಿಧಾಮದಲ್ಲಿ ಬೆಳಿಗ್ಗೆ ನಡೆಯಿತು. ಅಪ್ಪಾಜಿ ಪ್ರತಿಮೆಗೆ ಶಾರದ ಅಪ್ಪಾಜಿ ಹಾಗು ಕುಟುಂಬ ವರ್ಗದವರು ಅಭಿಮಾನಿಗಳು, ಜೆಡಿಎಸ್ ಪಕ್ಷದ ಮುಖಂಡರು, ಕಾರ್ಯಕರ್ತರು ವಿಶೇಷ ಪೂಜೆ ಸಲ್ಲಿಸಿದರು. ನಂತರ ಬಿಆರ್‌ಪಿ ಭದ್ರಾ ಜಲಾಶಯದಲ್ಲಿ ಬಾಗಿನ ಸಮರ್ಪಿಸಲಾಯಿತು. ಮಧ್ಯಾಹ್ನ ಜೆಡಿಎಸ್ ಪಕ್ಷದ ಶಕ್ತಿ ಪ್ರದರ್ಶನ ನಡೆಯಿತು. ನೂತನ ಪದಾಧಿಕಾರಿಗಳು ಪದಗ್ರಹಣ ಸ್ವೀಕರಿಸಿದರು.
    ನ್ಯೂಟೌನ್ ಉಂಬ್ಳೆಬೈಲು ರಸ್ತೆ, ರೋಟರಿ ಕ್ಲಬ್ ಸಮೀಪದಲ್ಲಿರುವ ಅಪ್ಪಾಜಿ ನಿವಾಸದಿಂದ ಗೋಣಿಬೀಡಿನ ಶಕ್ತಿಧಾಮದವರೆಗೂ ನಂತರ ಶಂಕರಘಟ್ಟ, ಬಿಆರ್‌ಪಿ ವ್ಯಾಪ್ತಿಯಲ್ಲಿ  ಬೈಕ್ ರ‍್ಯಾಲಿ ನಡೆಸಲಾಯಿತು. ಈ ನಡುವೆ ಶಾರದ ಅಪ್ಪಾಜಿ ನೇತೃತ್ವದಲ್ಲಿ ಪಾದಯಾತ್ರೆ ಸಹ ನಡೆಯಿತು. 
     ನೂತನ    ಪದಾಧಿಕಾರಿಗಳ ಪದಗ್ರಹಣ :
    ಜಿಲ್ಲಾ ಯುವ ಘಟಕದ ಅಧ್ಯಕ್ಷರಾಗಿ ಮಧುಕುಮಾರ್, ತಾಲೂಕು ನಗರ ಘಟಕದ ಅಧ್ಯಕ್ಷರಾಗಿ ಆರ್. ಕರುಣಾಮೂರ್ತಿ, ಗ್ರಾಮಂತರ ಘಟಕದ ಅಧ್ಯಕ್ಷರಾಗಿ ಕೆ. ಧರ್ಮಕುಮಾರ, ನಗರ ಘಟಕದ ಮಹಿಳಾ ಅಧ್ಯಕ್ಷರಾಗಿ ವಿಶಾಲಾಕ್ಷಿ, ಗ್ರಾಮಾಂತರ ಘಟಕದ ಅಧ್ಯಕ್ಷರಾಗಿ ಪಾರ್ವತಿಬಾಯಿ, ಅಲ್ಪ ಸಂಖ್ಯಾಂತರ ನಗರ ಘಟಕದ ಅಧ್ಯಕ್ಷರಾಗಿ ಮುತುರ್ಜಾಖಾನ್, ತಾಲೂಕು ಯುವ ಘಟಕದ ಅಧ್ಯಕ್ಷರಾಗಿ ಎಂ.ಎ ಅಜಿತ್, ನಗರ ಘಟಕದ ಕಾರ್ಯಾಧ್ಯಕ್ಷರಾಗಿ ಬಿ.ಸಿ ಉಮೇಶ್, ಪರಿಶಿಷ್ಟ ಜಾತಿ ನಗರ ಘಟಕದ ಅಧ್ಯಕ್ಷರಾಗಿ ಮೈಲಾರಪ್ಪ, ಪರಿಶಿಷ್ಟ ಜಾತಿ ಗ್ರಾಮಾಂತರ ಘಟಕದ ಅಧ್ಯಕ್ಷರಾಗಿ ಶ್ರೀಧರನಾಯ್ಕ, ಪಕ್ಷದ ಪ್ರಧಾನ ಕಾರ್ಯದರ್ಶಿ ಹಾಗು ವಕ್ತಾರರಾಗಿ ಎಂ. ರಾಜು ಮತ್ತು ನಗರ ಘಟಕದ ಮಹಿಳಾ ಕಾರ್ಯದರ್ಶಿಯಾಗಿ ಭಾಗ್ಯಮ್ಮ ಅವರು ಪದಗ್ರಹಣ ಸ್ವೀಕರಿಸಿದರು.  
    ಜೆಡಿಎಸ್ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಗೀತಾ ಸತೀಶ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಜೆ.ಪಿ ಯೋಗೇಶ್, ಮುಖಂಡರಾದ ಕರಿಯಪ್ಪ, ಡಿ.ಟಿ ಶ್ರೀಧರ್, ಲೋಕೇಶ್ವರ್ ರಾವ್, ಧರ್ಮೇಗೌಡ ಹಾಗು ನಗರಸಭೆ ಮತ್ತು ಗ್ರಾಮ ಪಂಚಾಯಿತಿ ಸದಸ್ಯರು, ವಿವಿಧ ಸಂಘ-ಸಂಸ್ಥೆಗಳು ಮುಖಂಡರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.