ಹವ್ಯಾಸಿ ಖಗೋಳ ಶಾಸ್ತ್ರಜ್ಞ ಹರೋನಹಳ್ಳಿ ಸ್ವಾಮಿ
ಪಾರ್ಶ್ವ ಚಂದ್ರಗ್ರಹಣ ಸಂಭವಿಸುವ ಪ್ರಕ್ರಿಯೆ
ಭದ್ರಾವತಿ, ನ. ೭ : ಪಾರ್ಶ್ವ ಚಂದ್ರಗ್ರಹಣ ನ.೮ರ ಮಂಗಳವಾರ ಗೋಚರಿಸಲಿದ್ದು, ನಿಸರ್ಗ ಚಲನೆಯ ಈ ನೆರಳು ಬೆಳಕಿನ ಆಟದ ವಿಸ್ಮಯ ಬರೀಗಣ್ಣಿನಿಂದ ವೀಕ್ಷಿಸಿ ಆನಂದಿಸಬಹುದಾಗಿದೆ ಎಂದು ಹವ್ಯಾಸಿ ಖಗೋಳ ಶಾಸ್ತ್ರಜ್ಞ ಹರೋನಹಳ್ಳಿ ಸ್ವಾಮಿ ತಿಳಿಸಿದ್ದಾರೆ.
ಇತ್ತೀಚೆಗೆ ಪಾರ್ಶ್ವ ಸೂರ್ಯಗ್ರಹಣ ಗೋಚರಿಸಿದ್ದು, ಇದೀಗ ಪಾರ್ಶ್ವ ಚಂದ್ರಗ್ರಹಣ ಎದುರಾಗುತ್ತಿದೆ. ಸಂಜೆ ೫.೫೭ ರಿಂದ ೬.೧೮ರ ವರೆಗೆ ಗೋಚರಿಸಲಿದ್ದು, ನಿಸರ್ಗದ ಈ ನೆರಳು ಬೆಳಕಿನ ಆಟವನ್ನು ಕಣ್ತುಂಬಿಕೊಂಡು ಆನಂದಿಸಬಹುದಾಗಿದೆ. ಬರೀಗಣ್ಣಿನಿಂದ ವೀಕ್ಷಿಸಬಹುದಾಗಿದ್ದು, ಕಣ್ಣಿಗೆ ಯಾವುದೇ ಸಮಸ್ಯೆ ಎದುರಾಗುವುದಿಲ್ಲ. ಇದು ಸಂಪೂರ್ಣ ಖಗ್ರಾಸ ಚಂದ್ರಗ್ರಹಣವಾಗಿದ್ದು, ದಕ್ಷಿಣ ಭಾರತೀಯರಿಗೆ ಗೋಚರಿಸಲಿದೆ.
ಚಂದ್ರಗ್ರಹಣ ಹೇಗೆ ಸಂಭವಿಸುತ್ತದೆ ?
ಸೂರ್ಯನ ಸುತ್ತಾ ಭೂಮಿ, ಭೂಮಿಯ ಸುತ್ತಾ ಚಂದ್ರ ಗುರುತ್ವ ಬಲದ ಕಾರಣ ಸುತ್ತುತ್ತಿವೆ. ಸೂರ್ಯ ಮತ್ತು ಚಂದ್ರರ ನಡುವೆ ಭೂಮಿಯು ಒಂದೇ ಸಮತಲದೊಂದಿಗೆ ಸರಳ ರೇಖೆಯಲ್ಲಿ ಬಂದಾಗ ಭೂಮಿಯ ನೆರಳು ಚಂದ್ರನ ಮೇಲೆ ಬೀಳುತ್ತದೆ. ಭೂಮಿ ಚಂದ್ರನನ್ನು ಮರೆ ಮಾಡುವ ಘಟನೆಯೇ ಚಂದ್ರಗ್ರಹಣ.
ಚಂದ್ರನನ್ನು ಭೂಮಿಯ ನೆರಳು ಪೂರ್ಣ ಮುಚ್ಚಿದಾಗ ಪೂರ್ಣ ಚಂದ್ರಗ್ರಹಣ, ಭಾಗಶಃ ಮರೆಮಾಡಿದರೆ ಪಾರ್ಶ್ವ ಚಂದ್ರಗ್ರಹಣ ಎನ್ನುತ್ತೇವೆ.
ಕೆಂಪು ಬಣ್ಣದ ಚಂದ್ರ ಗೋಚರ :
ಹುಣ್ಣಿಮೆ ಪೂರ್ವದಲ್ಲಿ ಚಂದ್ರ ಉದಯವಾಗುತ್ತಿದ್ದರೆ, ಪಶ್ಚಿಮದಲ್ಲಿ ಸೂರ್ಯ ಮುಳುಗುತ್ತಿರುವಾಗ ಸೂರ್ಯನ ಬೆಳಕು ಭೂಮಿಯ ವಾತಾವರಣದ ಕೆಂಪುಧೂಳಿನ ಮೂಲಕ ಹಾದು ಬರುವಾಗ ಬೆಳಕಿನ ವಕ್ರೀಭವನದ ಕಾರಣ ಕೆಂಪು ಬಣ್ಣ ನಮ್ಮ ಕಣ್ಣು ತಲುಪುವುದರಿಂದ ಚಂದ್ರ ಕೆಂಪು ಬಣ್ಣದಿಂದ ಗೋಚರಿಸುವನು. ಕೆಂಪು ಬಣ್ಣ ಹೆಚ್ಚಾಗಿದ್ದರೆ, ಧೂಳಿನ ಮಾಲಿನ್ಯ ಹೆಚ್ಚಾಗಿದೆ ಎಂದರ್ಥ,
ಹಿರಿಯೂರು ಗ್ರಾಮದಲ್ಲಿ ಗ್ರಹಣ ವೀಕ್ಷಣೆಗೆ ವ್ಯವಸ್ಥೆ :
ಟೆಲಿಸ್ಕೋಪ್ ಮೂಲಕ ಸಂಜೆ ಹಿರಿಯೂರು ರಂಗಮಂದಿರದಲ್ಲಿ ಗ್ರಹಣ, ಗುರು, ಶನಿ ಗ್ರಹಗಳ ವೀಕ್ಷಣೆ, ಚಂದ್ರನ ಕುಳಿಗಳ ದರ್ಶನ, ಆಶಾಕ ವೀಕ್ಷಣೆ ಮಾಡಿಸಲಾಗುವುದು. ವಿದ್ಯಾರ್ಥಿಗಳು, ಸಾರ್ವಜನಿಕರು ಇದರ ಸದುಪಯೋಗಪಡೆದುಕೊಳ್ಳುವಂತೆ ಹರೋನಹಳ್ಳಿ ಸ್ವಾಮಿ ಕೋರಿದ್ದಾರೆ. ಹೆಚ್ಚಿನ ಮಾಹಿತಿಗೆ ಮೊ: ೭೮೯೨೧೫೪೬೯೫ ಸಂಖ್ಯೆಗೆ ಕರೆ ಮಾಡಬಹುದಾಗಿದೆ.