Saturday, November 19, 2022

ನ.೨೦ರಂದು ಭೂಮಿಕಾ ವೇದಿಕೆಯಿಂದ ಕನ್ನಡ ರಾಜ್ಯೋತ್ಸವ ವಿಶೇಷ ಕಾರ್ಯಕ್ರಮ

    ಭದ್ರಾವತಿ, ನ. ೧೯: ಕನ್ನಡ ನಾಡು-ನಡೆ-ನುಡಿ ಬಿಂಬಿಸುವ ನಗರದ ಭೂಮಿಕಾ ವೇದಿಕೆ ವತಿಯಿಂದ ನ.೨೦ರ ಭಾನುವಾರ ಸಂಜೆ ೬ ಗಂಟೆಗೆ ೬೭ನೇ ಕನ್ನಡ ರಾಜ್ಯೋತ್ಸವ ಅಂಗವಾಗಿ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
    ನಿವೃತ್ತ ಉಪನ್ಯಾಸಕ, ಅಂಕಣಕಾರ ಹಾಗು ಗಮಕಿ ರಾಮಸುಬ್ರಾಯ ಶೇಟ್ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳಲಿದ್ದು, ಭೂಮಿಕಾ ವೇದಿಕೆ ಅಧ್ಯಕ್ಷ ಡಾ. ಕೃಷ್ಣ ಎಸ್. ಭಟ್ ಅಧ್ಯಕ್ಷತೆ ವಹಿಸಲಿದ್ದಾರೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಕೋರಲಾಗಿದೆ.

ರಾಜ್ಯ ಸರ್ಕಾರದ ಮಲತಾಯಿ ಧೋರಣೆಯಿಂದಾಗಿ ಕ್ಷೇತ್ರದ ಅಭಿವೃದ್ಧಿ ಕುಂಠಿತ

ಶಾಸಕ ಬಿ.ಕೆ ಸಂಗಮೇಶ್ವರ್ ಪತ್ರಿಕಾಗೋಷ್ಠಿಯಲ್ಲಿ ಆರೋಪ

ಭದ್ರಾವತಿಯಲ್ಲಿ ಶಾಸಕ ಬಿ.ಕೆ ಸಂಗಮೇಶ್ವರ್ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
    ಭದ್ರಾವತಿ, ನ. ೧೯: ಆಡಳಿತಾರೂಢ ಬಿಜೆಪಿ ರಾಜ್ಯ ಸರ್ಕಾರ ಕಾಂಗ್ರೆಸ್ ಪಕ್ಷ ಪ್ರತಿನಿಧಿಸುವ ಶಾಸಕರ ಕ್ಷೇತ್ರಗಳಿಗೆ ಸರಿಯಾಗಿ ಅನುದಾನ ನೀಡದೇ ಮಲತಾಯಿ ಧೋರಣೆ ಮುಂದುವರೆಸುತ್ತಾ ಬಂದಿದ್ದು, ಪರಿಣಾಮವಾಗಿ ಕಾರ್ಖಾನೆಗಳ ಅವನತಿ ಸೇರಿದಂತೆ ನಿರೀಕ್ಷಿತ ರೀತಿಯಲ್ಲಿ ಭದ್ರಾವತಿ ಕ್ಷೇತ್ರ ಅಭಿವೃದ್ಧಿ ಸಾಧಿಸದೇ ಹಿನ್ನಡೆ ಅನುಭವಿಸುವಂತಾಗಿದೆ ಎಂದು ಶಾಸಕ ಬಿ.ಕೆ. ಸಂಗಮೇಶ್ವರ್ ಆರೋಪಿಸಿದರು.
    ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಈ ಕುರಿತು ಹಲವು ಬಾರಿ ಸದನದಲ್ಲಿ  ಗಟ್ಟಿಧ್ವನಿಯಲ್ಲಿ ಮಾತನಾಡಿದರೂ ಸಹ ಯಾವುದೇ ರೀತಿಯ ಪ್ರಯೋಜನವಾಗದಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.
    ಡಿಸೆಂಬರ್ ತಿಂಗಳಿನಲ್ಲಿ ಕ್ಷೇತ್ರಕ್ಕೆ ಆಗಮಿಸುತ್ತಿರುವ ಮುಖ್ಯಮಂತ್ರಿಗಳ ಗಮನವನ್ನು ಈ ಕುರಿತಂತೆ ಸೆಳೆಯಲಾಗುವುದು. ನಂತರದ ದಿನಗಳಲ್ಲಿ ಹೋರಾಟದ ರೂಪು-ರೇಷೆ ಸಿದ್ದಪಡಿಸಲಾಗುವುದು ಎಂದರು.
    ಬಡವರಿಗೆ ಮನೆಕಟ್ಟಿಸಿಕೊಡುವ ಗುಂಪುಮನೆ ಯೋಜನೆಯಡಿ ಕ್ಷೇತ್ರದಲ್ಲಿ ಎರಡುಸಾವಿರ ಫಲಾನುಭವಿಗಳನ್ನು ಈಗಾಗಲೇ ಗುರುತಿಸಲಾಗಿದ್ದು, ಮುಂದಿನ ಹತ್ತು ದಿನಗಳ ಒಳಗಾಗಿ ಟೆಂಡರ್ ಕರೆಯದಿದ್ದಲ್ಲಿ ವಸತಿ ಸಚಿವರಾದ ವಿ. ಸೋಮಣ್ಣ ರವರ ಮನೆಯ ಎದುರು ಧರಣಿ ನಡೆಸಲಾಗುವುದು ಎಂದು ಎಚ್ಚರಿಸಿದರು.
    ಶರಾವತಿ ಮುಳುಗಡೆ ಸಂತ್ರಸ್ತರ ನೆರವಿಗಾಗಿ ಕಾಂಗ್ರೆಸ್ ಪಕ್ಷದ ವತಿಯಿಂದ ಹಮ್ಮಿಕೊಳ್ಳಲಾಗಿರುವ ಪ್ರತಿಭಟನೆಗೆ ಮಾಜಿ ಮುಖ್ಯಮಂತ್ರಿ, ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯ, ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಅನೇಕ ಮುಖಂಡರು ಶಿವಮೊಗ್ಗಕ್ಕೆ ಆಗಮಿಸುತ್ತಿದ್ದು, ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಮನವಿ ಮಾಡಿದರು.
    ನಗರಸಭೆ ಅಧ್ಯಕ್ಷೆ ಅನುಸುಧಾ ಮೋಹನ್ ಪಳನಿ, ಉಪಾಧ್ಯಕ್ಷ ಚನ್ನಪ್ಪ, ಸ್ಥಾಯಿ ಸಮಿತಿ ಅಧ್ಯಕ್ಷ ಕೆ. ಸುದೀಪ್ ಕುಮಾರ್, ಸದಸ್ಯರಾದ ಬಿ.ಟಿ ನಾಗರಾಜ್, ಲತಾ ಚಂದ್ರಶೇಖರ್, ಜಾರ್ಜ್, ಕಾಂತ್‌ರಾಜ್, ಬ್ಲಾಕ್ ಕಾಂಗ್ರೆಸ್ ನಗರ ಘಟಕದ ಅಧ್ಯಕ್ಷ ಟಿ. ಚಂದ್ರೇಗೌಡ, ಗ್ರಾಮಾಂತರ ಅಧ್ಯಕ್ಷ ಎಚ್.ಎಲ್. ಷಡಾಕ್ಷರಿ, ಮುಖಂಡರಾದ ತಳ್ಳಿಕಟ್ಟೆ ಲೋಕೇಶ್, ಎಸ್.ಎಸ್ ಭೈರಪ್ಪ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಮಾಜಿ ಪ್ರಧಾನಿ ಇಂದಿರಾಗಾಂಧಿ ಜನ್ಮದಿನ ಆಚರಣೆ : ಸೇವಾದಳಕ್ಕೆ ತನ್ನದೇ ಆದ ವಿಶೇಷತೆ ಇದೆ

ಬ್ಲಾಕ್ ಕಾಂಗ್ರೆಸ್ ಹಿಂದುಳಿದ ವರ್ಗಗಳ ವಿಭಾಗದ ಅಧ್ಯಕ್ಷ ಬಿ. ಗಂಗಾಧರ್

ಭದ್ರಾವತಿ ನ್ಯೂಟೌನ್ ಜಯಶ್ರೀ ವೃತ್ತದ ಸಮೀಪದ ಛಲವಾದಿಗಳ ಸಮಾಜದ ಕಛೇರಿ ಆವರಣದಲ್ಲಿ ಭಾರತೀಯ ಸೇವಾದಳ ವತಿಯಿಂದ ಮಾಜಿ ಪ್ರಧಾನಿ, ಭಾರತರತ್ನ ಇಂದಿರಾಗಾಂಧಿಯವರ ೧೦೫ನೇ ಜನ್ಮ ದಿನ ಹಮ್ಮಿಕೊಳ್ಳಲಾಗಿತ್ತು.
    ಭದ್ರಾವತಿ, ನ. ೧೯ : ಭಾರತೀಯ ಸೇವಾದಳ ತನ್ನದೇ ಆದ ವಿಶಿಷ್ಟತೆಯನ್ನು ಹೊಂದಿದ್ದು, ಕಾಂಗ್ರೆಸ್ ಪಕ್ಷದಲ್ಲಿ ಸೇವಾ ಮನೋಭಾವ, ಶಿಸ್ತು ರೂಪುಗೊಳ್ಳಲು ಸಹಕಾರಿಯಾಗಿದೆ ಎಂದು ಬ್ಲಾಕ್ ಕಾಂಗ್ರೆಸ್ ಹಿಂದುಳಿದ ವರ್ಗಗಳ ವಿಭಾಗದ ಅಧ್ಯಕ್ಷ ಬಿ. ಗಂಗಾಧರ್ ಹೇಳಿದರು.
    ಅವರು ಶನಿವಾರ ನ್ಯೂಟೌನ್ ಜಯಶ್ರೀ ವೃತ್ತದ ಸಮೀಪದ ಛಲವಾದಿಗಳ ಸಮಾಜದ ಕಛೇರಿ ಆವರಣದಲ್ಲಿ ಭಾರತೀಯ ಸೇವಾದಳ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಮಾಜಿ ಪ್ರಧಾನಿ, ಭಾರತರತ್ನ ಇಂದಿರಾಗಾಂಧಿಯವರ ೧೦೫ನೇ ಜನ್ಮ ದಿನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
    ಈ ಹಿಂದೆ ಸೇವಾದಳ ಹೆಚ್ಚು ಸಕ್ರಿಯವಾಗಿರುವ ಮೂಲಕ ಕಾಂಗ್ರೆಸ್ ಪಕ್ಷಕ್ಕೆ ಪೂರಕವಾಗಿ ಎಲ್ಲಾ ರೀತಿಯಿಂದಲೂ ಶಕ್ತಿ ತುಂಬುವಲ್ಲಿ ಯಶಸ್ವಿಯಾಗಿತ್ತು. ನಂತರ ದಿನಗಳಲ್ಲಿ ಕೆಲವು ಕಾರಣಗಳಿಂದಾಗಿ ಸೇವಾದಳ ಚಟುವಟಿಕೆಗಳು ಕುಂಠಿತಗೊಂಡಿದ್ದು, ಇದೀಗ ಪುನಃ ದೇಶಾದ್ಯಂತ ಹೆಚ್ಚು ಕ್ರಿಯಾಶೀಲವಾಗಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ಸಂಘಟಿತಗೊಳ್ಳುವ ಮೂಲಕ ಕಾಂಗ್ರೆಸ್ ಪಕ್ಷಕ್ಕೆ ಶಕ್ತಿ ತುಂಬುವ ವಿಶ್ವಾಸವಿದೆ ಎಂದರು.
    ಕ್ಷೇತ್ರದಲ್ಲಿ ಕಾಂಗ್ರೆಸ್ ಹೆಚ್ಚು ಪ್ರಬಲವಾಗಿದ್ದು, ಶಾಸಕ ಬಿ.ಕೆ ಸಂಗಮೇಶ್ವರ್‌ರವರನ್ನು ಚುನಾವಣೆಯಲ್ಲಿ ಪುನಃ ಗೆಲ್ಲಿಸುವ ನಿಟ್ಟಿನಲ್ಲಿ ಪಕ್ಷದ ಪ್ರತಿಯೊಬ್ಬರು ಹೆಚ್ಚು ಗಮನ ಹರಿಸಬೇಕೆಂದರು.
    ಕಾರ್ಯಕ್ರಮವನ್ನು ಯುವ ಮುಖಂಡ ಬಿ.ಎಸ್ ಬಸವೇಶ್ ಉದ್ಘಾಟಿಸಿದರು. ಸೇವಾದಳ ಜಿಲ್ಲಾಧ್ಯಕ್ಷ ಮಂಜುನಾಥ್ ಬಾಬು, ನಗರಸಭೆ ಅಧ್ಯಕ್ಷೆ ಅನುಸುಧಾ ಮೋಹನ್ ಪಳನಿ, ಸದಸ್ಯರಾದ ಶೃತಿ ವಸಂತ್, ಲತಾ ಚಂದ್ರಶೇಖರ್, ಟಿಪ್ಪು ಸುಲ್ತಾನ್, ಕಾಂತರಾಜ್, ಸರ್ವಮಂಗಳ ಭೈರಪ್ಪ, ಶೋಭಾ ರವಿಕುಮಾರ್, ಬ್ಲಾಕ್ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ಹೇಮಾವತಿ, ರಾಷ್ಟ್ರೀಯ ವಕ್ತಾರ ಅಮೋಸ್, ಚಿನ್ನಪ್ಪ, ಚೌಡಪ್ಪ ಸೇರಿದಂತೆ ಇನ್ನಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
    ಸೇವಾದಳದ ಹಿರಿಯ ಮಹಿಳೆ ಸರೋಜಮ್ಮ ಪ್ರಾರ್ಥಿಸಿದರು. ಮುಖಂಡ ಎಸ್.ಎಸ್ ಭೈರಪ್ಪ ಸ್ವಾಗತಿಸಿ, ಡಿ. ನರಸಿಂಹಮೂರ್ತಿ ನಿರೂಪಿಸಿದರು. ನಾಗೇಶ್ ಪ್ರಾಸ್ತಾವಿಕ ನುಡಿಗಳನ್ನಾಡಿದರು.
    ಪ್ರಮುಖರಾದ ಸ್ಟ್ಯಾನ್ಲಿ ಸುದರ್ಶನ್, ಅಂತೋಣಿ, ಶೇಖರ್, ಬಾಬು, ಕುಮಾರ್, ಮಹಾದೇವಯ್ಯ, ಭಾಸ್ಕರ್, ಜೀವಾ, ನೇತ್ರ, ಮಂಗಳ, ವೀಣಾ, ಉಷಾಲಕ್ಷ್ಮೀ, ರತ್ನಮ್ಮ, ಲಕ್ಷ್ಮೀ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.

ಯೋಗ ಆರೋಗ್ಯಕ್ಕೆ ಪೂರಕ ಪ್ರತಿಯೊಬ್ಬರು ರೂಡಿಸಿಕೊಳ್ಳಿ : ಆರ್. ರಾಮಮೂರ್ತಿ

ಕರ್ನಾಟಕ ಯೋಗ ಸಂಸ್ಥೆ ಅಧ್ಯಕ್ಷ್ಯ ಆರ್. ರಾಮಮೂರ್ತಿ ಭದ್ರಾವತಿ ನ್ಯೂಟೌನ್  ಮಹಾತ್ಮ ಗಾಂಧಿ ಉದ್ಯಾನವನ ಮುಂಭಾಗದಲ್ಲಿರುವ ಶ್ರೀರಾಮ ಸಮುದಾಯ ಭವನದಲ್ಲಿ ಕರ್ನಾಟಕ ಯೋಗ ಸಂಸ್ಥೆ ಹಾಗೂ ಶ್ರೀ ಅನ್ನಪೂರ್ಣೇಶ್ವರಿ ವಿವೇಕಾನಂದ ಯೋಗ ಅಸೋಸಿಯೇಷನ್ ವತಿಯಿಂದ ಶನಿವಾರ ಹಮ್ಮಿಕೊಳ್ಳಲಾಗಿದ್ದ ೪೧ನೇ ಕರ್ನಾಟಕ ರಾಜ್ಯ ಯೋಗಾಸನ ಚಾಂಪಿಯನ್ ಶಿಪ್ ಹಾಗೂ ೨೮ನೇ ಕರ್ನಾಟಕ ರಾಜ್ಯ ವಿಜಯೇತರ ಯೋಗಾಸನ ಸ್ಪರ್ಧೆ ಅಧ್ಯಕ್ಷತೆ ವಹಿಸಿ ಮಾತನಾಡಿದರು.  
    ಭದ್ರಾವತಿ, ನ. ೧೯: ಎಲ್ಲರಿಗೂ ಆರೋಗ್ಯ ಮುಖ್ಯವಾಗಿದ್ದು, ಇದಕ್ಕೆ ಪೂರಕವಾಗಿರುವ ಯೋಗ ರೂಡಿಸಿಕೊಳ್ಳಬೇಕೆಂದು ಕರ್ನಾಟಕ ಯೋಗ ಸಂಸ್ಥೆ ಅಧ್ಯಕ್ಷ್ಯ ಆರ್. ರಾಮಮೂರ್ತಿ ಹೇಳಿದರು.
    ಅವರು ಶನಿವಾರ ನಗರದ ನ್ಯೂಟೌನ್  ಮಹಾತ್ಮ ಗಾಂಧಿ ಉದ್ಯಾನವನ ಮುಂಭಾಗದಲ್ಲಿರುವ ಶ್ರೀರಾಮ ಸಮುದಾಯ ಭವನದಲ್ಲಿ ಕರ್ನಾಟಕ ಯೋಗ ಸಂಸ್ಥೆ ಹಾಗೂ ಶ್ರೀ ಅನ್ನಪೂರ್ಣೇಶ್ವರಿ ವಿವೇಕಾನಂದ ಯೋಗ ಅಸೋಸಿಯೇಷನ್ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ೪೧ನೇ ಕರ್ನಾಟಕ ರಾಜ್ಯ ಯೋಗಾಸನ ಚಾಂಪಿಯನ್ ಶಿಪ್ ಹಾಗೂ ೨೮ನೇ ಕರ್ನಾಟಕ ರಾಜ್ಯ ವಿಜಯೇತರ ಯೋಗಾಸನ ಸ್ಪರ್ಧೆ ಅಧ್ಯಕ್ಷತೆ ವಹಿಸಿ ಮಾತನಾಡಿದರು.  
    ಮನುಷ್ಯನಿಗೆ ಅಧಿಕಾರ, ಸಂಪತ್ತು ಎಲ್ಲಕ್ಕಿಂತ ಮುಖ್ಯವಾಗಿ ಆರೋಗ್ಯ ಬಹಳ ಮುಖ್ಯವಾಗಿದೆ. ಹಿನ್ನೆಲೆಯಲ್ಲಿ ಆರೋಗ್ಯಕ್ಕೆ ಪೂರಕವಾಗಿ ಯೋಗ ರೂಡಿಸಿಕೊಂಡಾಗ ಮಾತ್ರ ಯಶಸ್ಸು ಕಾಣಲು ಸಾಧ್ಯ ಎಂದರು.
    ಕರ್ನಾಟಕ ಯೋಗ ಸಂಸ್ಥೆ ವತಿಯಿಂದ ೩೦ ವರ್ಷಗಳ ಬಳಿಕ ಎರಡನೇ ಬಾರಿಗೆ ಭದ್ರಾವತಿಯಲ್ಲಿ ರಾಜ್ಯಮಟ್ಟದ ಸ್ಪರ್ಧೆ ಆಯೋಜಿಸಲಾಗಿದೆ. ಈ ಸ್ಪರ್ಧೆಯಲ್ಲಿ ವಿಜೇತರಾದ ಮೊದಲ ಮೂರು ಪಟುಗಳು  ಡಿಸೆಂಬರ್ ತಿಂಗಳಲ್ಲಿ ನಡೆಯಲಿರುವ ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆ ಎಂದರು.
    ಸ್ತ್ರೀ ರೋಗ ತಜ್ಞೆ ಡಾ. ವೀಣಾ ಭಟ್ ಮಾತನಾಡಿ, ಯೋಗ ಕೇವಲ ಪ್ರದರ್ಶನಕ್ಕೆ ಮೀಸಲಾಗಿರದೆ ನಿದರ್ಶನವಾಗಬೇಕು. ಯೋಗ ಬದುಕಿನ ಅವಿಭಾಗ್ಯ ಅಂಗವಾಗಬೇಕೆಂದರು.
    ನಗರಸಭೆ ಮಾಜಿ ಅಧ್ಯಕ್ಷ ಬಿ.ಕೆ ಮೋಹನ್ ಉದ್ಘಾಟಿಸಿದರು. ಕರ್ನಾಟಕ ಯೋಗ ಸಂಸ್ಥೆ ಉಪಾಧ್ಯಕ್ಷ ರುದ್ರಾರಾಧ್ಯ, ಕಾರ್ಯದರ್ಶಿ ಪುಟ್ಟೇಗೌಡ, ನಗರಸಭೆ ಅಧ್ಯಕ್ಷೆ ಅನುಸುಧಾ ಮೋಹನ್ ಪಳನಿ, ಉಪಾಧ್ಯಕ್ಷ ಚನ್ನಪ್ಪ, ಸ್ಥಾಯಿ ಸಮಿತಿ ಅಧ್ಯಕ್ಷ ಕೆ. ಸುದೀಪ್‌ಕುಮಾರ್, ಸದಸ್ಯರಾದ ಶೃತಿ ವಸಂತ್, ಲತಾ ಚಂದ್ರಶೇಖರ್, ಕಾಂತರಾಜ್, ಶ್ರೀ ಅನ್ನಪೂರ್ಣೇಶ್ವರಿ ವಿವೇಕಾನಂದ ಯೋಗ ಅಸೋಸಿಯೇಷನ್ ಅಧ್ಯಕ್ಷ ಕೆ.ಎಚ್ ಪಾಲಾಕ್ಷಪ್ಪ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ಅಸೋಸಿಯೇಷನ್ ಕಾರ್ಯದರ್ಶಿ ಕೆ.ಜೆ ತಮ್ಮಣ್ಣಗೌಡ ನಿರೂಪಿಸಿದರು.

Friday, November 18, 2022

ಮಾಜಿ ಪ್ರಧಾನಿ ದೇವೇಗೌಡರಿಗೆ ಅವಮಾನ, ರಾಜ್ಯದ ಜನತೆಗೆ ಮಾಡಿರುವ ಅವಮಾನ

ರಾಜ್ಯ ಸರ್ಕಾರದ ವಿರುದ್ಧ ಅಭಿಮಾನಿಗಳು, ಮುಖಂಡರಿಂದ ಆಕ್ರೋಶ

ನಾಡಹಬ್ಬ ಪ್ರಭು ಕೆಂಪೇಗೌಡ ಪ್ರತಿಮೆ ಅನಾವರಣ ಕಾರ್ಯಕ್ರಮಕ್ಕೆ ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡರನ್ನು ಸರಿಯಾದ ರೀತಿಯಲ್ಲಿ ಆಹ್ವಾನಿಸದಿರುವುದನ್ನು ಖಂಡಿಸಿ ಶುಕ್ರವಾರ ಭದ್ರಾವತಿ ತಾಲೂಕು ಕಚೇರಿ ಮುಂಭಾಗ ಧರಣಿ ಸತ್ಯಾಗ್ರಹ ನಡೆಸಿ ತಹಸೀಲ್ದಾರ್ ಗ್ರೇಡ್-೨ ರಂಗಮ್ಮ ಮೂಲಕ ಮನವಿ ಸಲ್ಲಿಸಲಾಯಿತು.
    ಭದ್ರಾವತಿ, ನ. ೧೮ : ನಾಡಹಬ್ಬ ಪ್ರಭು ಕೆಂಪೇಗೌಡ ಪ್ರತಿಮೆ ಅನಾವರಣ ಕಾರ್ಯಕ್ರಮಕ್ಕೆ ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡರನ್ನು ಸರಿಯಾದ ರೀತಿಯಲ್ಲಿ ಆಹ್ವಾನಿಸದಿರುವುದನ್ನು ಖಂಡಿಸಿ ಶುಕ್ರವಾರ ತಾಲೂಕು ಕಚೇರಿ ಮುಂಭಾಗ ಧರಣಿ ಸತ್ಯಾಗ್ರಹ ನಡೆಸಲಾಯಿತು.
    ಪ್ರಮುಖರು ಮಾತನಾಡಿ, ಬೆಂಗಳೂರಿನಲ್ಲಿ ಪ್ರತಿಷ್ಠಾಪಿಸಲಾಗಿರುವ ನಾಡಹಬ್ಬ ಪ್ರಭು ಕೆಂಪೇಗೌಡ ಪ್ರತಿಮೆ ಅನಾವರಣ ಕಾರ್ಯಕ್ರಮಕ್ಕೆ ರಾಜ್ಯ ಸರ್ಕಾರ ಸರಿಯಾದ ರೀತಿಯಲ್ಲಿ ಆಹ್ವಾನಿಸದೆ ನಿರ್ಲಕ್ಷ್ಯತನದಿಂದ ವರ್ತಿಸುವ ಮೂಲಕ ಅವಮಾನಗೊಳಿಸಿದೆ ಎಂದು ಆರೋಪಿಸಿದರು.
    ಇದು ರಾಜ್ಯದ ಸಮಸ್ತ ಜನತೆಗೆ ಮಾಡಿರುವ ಅವಮಾನವಾಗಿದೆ. ದೇವೇಗೌಡರು ಕೇವಲ ಒಂದು ಜಾತಿಗೆ, ಒಂದು ಸಮುದಾಯಕ್ಕೆ, ಒಂದು ಧರ್ಮಕ್ಕೆ ಸೀಮಿತವಾಗಿಲ್ಲ. ಅವರು ರಾಷ್ಟ ನಾಯಕರಾಗಿದ್ದು, ರಾಜ್ಯದ ಹಿರಿಯ ಮುತ್ಸದ್ದಿ ಹಾಗು ದೇಶದ ಮಾಜಿ ಪ್ರಧಾನಿಗೆ ಗೌರವ ನೀಡದಿರುವುದು ವಿಪರ್ಯಾಸದ ಸಂಗತಿಯಾಗಿದೆ. ಕ್ಷೇತ್ರದಲ್ಲಿ ವಿಐಎಸ್‌ಎಲ್ ಕಾರ್ಖಾನೆ ಇಂದಿಗೂ ಕಾರ್ಯಾರಂಭ ನಡೆಸುತ್ತಿರುವುದು ದೇವೇಗೌಡರ ಪರಿಶ್ರಮದಿಂದ ಎಂಬುದನ್ನು ಯಾರು ಸಹ ಮರೆಯಬಾರದು. ರಾಜ್ಯ ಮತ್ತು ರಾಷ್ಟ್ರಕ್ಕೆ ದೇವೇಗೌಡರ ಕೊಡುಗೆ ಅನನ್ಯವಾಗಿದೆ. ತಕ್ಷಣ ರಾಜ್ಯ ಸರ್ಕಾರ ಕ್ಷಮೆಯಾಚಿಸಬೇಕೆಂದು ಆಗ್ರಹಿಸಿದರು.
    ತಹಸೀಲ್ದಾರ್ ಗ್ರೇಡ್-೨ ರಂಗಮ್ಮ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು. ಸಂಯುಕ್ತ ಕರ್ನಾಟಕ ಜನತಾದಳ(ಜೆಡಿಯು) ರಾಜ್ಯ ಕಾರ್ಯದರ್ಶಿ ಶಶಿಕುಮಾರ್‌ಗೌಡ, ಶಿವಮೊಗ್ಗ ಜಿಲ್ಲಾ ಸಹಕಾರ ಯೂನಿಯನ್ ನಿರ್ದೇಶಕ ಜಯರಾಮ್ ಗೊಂದಿ,  ಕರುನಾಡು ಹಿತರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ವೈ. ಶಶಿಕುಮಾರ್, ನಗರಸಭಾ ಸದಸ್ಯ ಆರ್. ಮೋಹನ್‌ಕುಮಾರ್, ಸಾವಿತ್ರಿ ಪುಟ್ಟೇಗೌಡ, ಸುಬ್ಬೇಗೌಡ, ಎಸ್. ರಾಜು, ಧರ್ಮರಾಜ್ ಸೇರಿದಂತೆ ವಿವಿಧ ಸಂಘಟನೆಗಳ ಪ್ರಮುಖರು, ಕಾರ್ಯಕರ್ತರು, ಎಚ್.ಡಿ ದೇವೇಗೌಡರ ಅಭಿಮಾನಿಗಳು ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.  

ಬ್ರಾಹ್ಮಣ ಸಂಪ್ರದಾಯ ಕುರಿತು ಅವಹೇಳನ : ಸೂಕ್ತ ಕ್ರಮಕ್ಕೆ ಆಗ್ರಹ

ತಹಸೀಲ್ದಾರ್ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ

ಬ್ರಾಹ್ಮಣ ಸಮಾಜದ ಮೇಲೆ ನಿರಂತರ ದಬ್ಬಾಳಿಕೆ, ದೌರ್ಜನ್ಯ ಹಾಗೂ ಸಂಪ್ರದಾಯ ಕುರಿತು ಅವಹೇಳನ ಹೆಚ್ಚಾಗುತ್ತಿದ್ದು, ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಶುಕ್ರವಾರ ತಾಲೂಕು ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಮೂಲಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರಿಗೆ ಮನವಿ ಸಲ್ಲಿಸಲಾಯಿತು
    ಭದ್ರಾವತಿ, ನ. ೧೮: ಬ್ರಾಹ್ಮಣ ಸಮಾಜದ ಮೇಲೆ ನಿರಂತರ ದಬ್ಬಾಳಿಕೆ, ದೌರ್ಜನ್ಯ ಹಾಗೂ ಸಂಪ್ರದಾಯ ಕುರಿತು ಅವಹೇಳನ ಹೆಚ್ಚಾಗುತ್ತಿದ್ದು, ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಶುಕ್ರವಾರ ತಾಲೂಕು ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಮೂಲಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರಿಗೆ ಮನವಿ ಸಲ್ಲಿಸಲಾಯಿತು.
    ತಾಲೂಕು ಬ್ರಾಹ್ಮಣ ಸಭಾ ನೇತೃತ್ವದಲ್ಲಿ ಬ್ರಾಹ್ಮಣ ಸಮಾಜದ ವಿವಿಧ ಸಂಘಟನೆಗಳಿಂದ ಪ್ರತಿಭಟನೆ ನಡೆಸಿ ಮಾತನಾಡಿದ ಪ್ರಮುಖರು, ಮೈಸೂರಿನಲ್ಲಿ ಆಯೋಜಿಸಲಾಗಿದ್ದ ಸಿದ್ದರಾಮಯ್ಯ ೭೫ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಪುಸ್ತಕದ ಲೇಖಕ ಮಲ್ಲೇಶ್ ಎಂಬುವರು ಬ್ರಾಹ್ಮಣ ಸಮಾಜ ಹಾಗೂ ಸಂಪ್ರದಾಯ ಕುರಿತು ಅವಹೇಳನಕಾರಿಯಾಗಿ ಮಾತನಾಡಿರುವುದು ಖಂಡನೀಯ ಎಂದರು.
  ದೇಶದಲ್ಲಿ ಬ್ರಾಹ್ಮಣ ಸಮಾಜ ತನ್ನದೇ ಆದ ಕೊಡುಗೆಗಳನ್ನು ನೀಡುವ ಮೂಲಕ ಶತ ಶತಮಾನಗಳಿಂದ ಸರ್ವೆಜನ ಸುಖಿನೊಭವಂತು ಎನ್ನು ಆಶಯ ಹೊಂದಿದೆ. ಸಮಾಜದಲ್ಲಿ ಸರ್ವರೊಂದಿಗೆ ಶಾಂತಿ, ಸಹಬಾಳ್ವೆಯಿಂದ ಬದುಕುವ ಮೂಲಕ ದೇಶದ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸಿದೆ. ಇಂತಹ ಸಮಾಜದ ವಿರುದ್ಧ ನಿರಂತರ ದಬ್ಬಾಳಿಕೆ, ದೌರ್ಜನ್ಯ ಹಾಗು ಸಂಪ್ರದಾಯ ಕುರಿತು ಅವಹೇಳನ ಮಾಡುತ್ತಿರುವುದು ಸರಿಯಲ್ಲ. ತಕ್ಷಣ ಮಲ್ಲೇಶ್ ವಿರುದ್ಧ ಹಾಗು ಕಾರ್ಯಕ್ರಮ ಆಯೋಜಕರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ತಹಸೀಲ್ದಾರ್ ಗ್ರೇಡ್-೨ ರಂಗಮ್ಮ ಮೂಲಕ ಮನವಿ ಸಲ್ಲಿಸಲಾಯಿತು.
    ತಾಲೂಕು ಬ್ರಾಹ್ಮಣ ಸಭಾ ಅಧ್ಯಕ್ಷ ಎಂ.ಎಸ್ ಜರ್ನಾಧನ ಅಯ್ಯಂಗಾರ್, ಉಪಾಧ್ಯಕ್ಷರಾದ ನೀಲಕಂಠ ಜೋಯ್ಸ್, ಜಿ. ರಮಾಕಾಂತ, ಕಾರ್ಯದರ್ಶಿ ಕೇಶವಮೂರ್ತಿ, ಮಾಧ್ವ ಮಂಡಳಿ ಅಧ್ಯಕ್ಷ ಗೋಪಾಲಕೃಷ್ಣಚಾರ್, ಪ್ರಮುಖರಾದ ಕೃಷ್ಣಸ್ವಾಮಿ, ಪರಿಮಳ ನಾಗರಾಜ್, ಲಕ್ಷ್ಮೀ ರವೀಂದ್ರತಂತ್ರಿ, ಶೋಭಾ ಶ್ರೀಧರ್, ಮಧುಸೂಧನ್ ಸೇರಿದಂತೆ ವಿವಿಧ ಸಂಘಟನೆಗಳ ಪ್ರಮುಖರು ಉಪಸ್ಥಿತರಿದ್ದರು.

ಶ್ರೀ ಚನ್ನವೀರ ಮಹಾಸ್ವಾಮಿಗಳ ವಿರಕ್ತ ಮಠದ ಜೀರ್ಣೋದ್ದಾರ ಕಾರ್ಯಕ್ಕೆ ೫ ಲಕ್ಷ ರು. ನೆರವು


ಭದ್ರಾವತಿ ತಾಲೂಕಿನ ಅರಕೆರೆ ಶ್ರೀ ಚನ್ನವೀರ ಮಹಾಸ್ವಾಮಿಗಳ ವಿರಕ್ತ ಮಠದ ಜೀರ್ಣೋದ್ದಾರ ಕಾರ್ಯಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ೫ ಲಕ್ಷ ರು. ಆರ್ಥಿಕ ನೆರವು ನೀಡಿದ್ದಾರೆ.
ಭದ್ರಾವತಿ, ನ. ೧೮: ತಾಲೂಕಿನ ಅರಕೆರೆ ಶ್ರೀ ಚನ್ನವೀರ ಮಹಾಸ್ವಾಮಿಗಳ ವಿರಕ್ತ ಮಠದ ಜೀರ್ಣೋದ್ದಾರ ಕಾರ್ಯಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ೫ ಲಕ್ಷ ರು. ಆರ್ಥಿಕ ನೆರವು ನೀಡಿದ್ದಾರೆ.
ಭಕ್ತಾಧಿಗಳು ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ತೆರಳಿ ಶ್ರೀ ಚನ್ನವೀರ ಮಹಾಸ್ವಾಮಿಗಳ ವಿರಕ್ತ ಮಠ ಟ್ರಸ್ಟ್ ವತಿಯಿಂದ ಜೀರ್ಣೋದ್ದಾರ ಕಾರ್ಯಕ್ಕೆ ಆರ್ಥಿಕ ನೆರವು ನೀಡುವಂತೆ ಮನವಿ ಮಾಡಿಕೊಂಡ ಹಿನ್ನಲೆಯಲ್ಲಿ ಆರ್ಥಿಕ ನೆರವು ನೀಡಲಾಗಿದೆ. ಧರ್ಮಸ್ಥಳದ ಕೆ. ಮಹಾವೀರ ಅಜ್ರಿಯವರು ಮಂಜೂರಾತಿ ಪತ್ರದೊಂದಿಗೆ ಚೆಕನ್ನು ಟ್ರಸ್ಟ್‌ಗೆ ಕಳುಹಿಸಿ ಕೊಟ್ಟಿದ್ದಾರೆ.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ತಾಲೂಕು ಯೋಜನಾಧಿಕಾರಿ ಮಾಧವ್‌ರವರು ಚೆಕನ್ನು ಹಸ್ತಾಂತರಿಸಿದರು. ವಿರಕ್ತ ಮಠದ ಶ್ರೀ ಕರಿಸಿದ್ದೇಶ್ವರ ಸ್ವಾಮೀಜಿ,   ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಎಚ್.ಎಲ್ ಷಡಾಕ್ಷರಿ, ಗ್ರಾಮ ಪಂಚಾಯಿತಿ ಸದಸ್ಯ ಎಸ್.ಎಲ್ ರವಿಕುಮಾರ್, ಎಸ್. ಗುರುಮೂರ್ತಿ, ಗ್ರಾಮ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಚಂದ್ರಪ್ಪ, ತಿಮಪ್ಪ, ರಾಕೇಶ್ ದಾನವಾಡಿ, ಜೆ.ಎಂ ಭೈರೇಶ್ ಕುಮಾರ್ ಹಾಗು ಮಹಿಳಾ ಸ್ವ ಸಹಾಯ ಸಂಘಗಳ ಒಕ್ಕೂಟದ ಸದಸ್ಯರು, ಗ್ರಾಮದ ಪ್ರಮುಖರು ಸೇರಿದಂತೆ ಇನ್ನಿತರು ಉಪಸ್ಥಿತರಿದ್ದರು.