ಗುರುವಾರ, ಡಿಸೆಂಬರ್ 8, 2022

ರ‍್ಯಾಮ್ಕೋಸ್ ಅಧ್ಯಕ್ಷರಾಗಿ ಬಿ.ಜಿ ಜಗದೀಶಗೌಡ ಅವಿರೋಧ ಆಯ್ಕೆ

ಬಿ.ಜಿ ಜಗದೀಶಗೌಡ
    ಭದ್ರಾವತಿ, ಡಿ. ೮ : ನಗರದ ರೈತರ ಅಡಕೆ ಮಾರಾಟ ಮತ್ತು ಪರಿಷ್ಕರಣ ಸಹಕಾರ ಸಂಘ ನಿಯಮಿತ(ರ‍್ಯಾಮ್ಕೋಸ್) ನೂತನ ಅಧ್ಯಕ್ಷರಾಗಿ ತಾಲೂಕಿನ ಆನವೇರಿ ನಿವಾಸಿ, ತರಳಬಾಳು ಯುವ ವೇದಿಕೆ ಮಾಜಿ ಅಧ್ಯಕ್ಷ ಬಿ.ಜಿ ಜಗದೀಶಗೌಡ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
    ಇದುವರೆಗೂ ರ‍್ಯಾಮ್ಕೋಸ್ ಅಧ್ಯಕ್ಷರಾಗಿ ಸಿ. ಮಲ್ಲೇಶಪ್ಪ ಸೇವೆ ಸಲ್ಲಿಸುತ್ತಿದ್ದರು. ಇದೀಗ ಬಿ.ಜಿ ಜಗದೀಶಗೌಡ ಅಧ್ಯಕ್ಷರಾಗಿದ್ದು, ಅವಿರೋಧ ಆಯ್ಕೆಯನ್ನು ಚುನಾವಣಾಧಿಕಾರಿಯಾಗಿರುವ ಸಹಕಾರ ಅಭಿವೃದ್ಧಿ ಅಧಿಕಾರಿ ಶಾಂತರಾಜ್ ಘೋಷಿಸಿದ್ದಾರೆ.
    ಸಂಘದ ಉಪಾಧ್ಯಕ್ಷ ಎಚ್.ಟಿ ಉಮೇಶ್, ನಿರ್ದೇಶಕರಾದ ಸಿ. ಹನುಮಂತಪ್ಪ, ಸಿ. ಮಲ್ಲೇಶಪ್ಪ, ಎಂ. ಪರಮೇಶ್ವರಪ್ಪ, ಯು. ಗಂಗನಗೌಡ, ಜಿ. ಈ.ಚನ್ನಪ್ಪ, ಮಹೇಶ್, ಹೆಚ್.ಎಲ್ ಷಡಾಕ್ಷರಿ. ಎಂ.ಎಸ್ ಬಸರಾಜಪ್ಪ, ಲಲಿತಮ್ಮ, ಎಚ್.ಆರ್ ತಿಮ್ಮಪ್ಪ, ಎಸ್. ಮಹೇಶ್ವರಪ್ಪ, ಎಚ್.ಎಸ್ .ಸಂಜೀವ್‌ಕುಮಾರ್ ಮತ್ತು ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಎಂ. ವಿರುಪಾಕ್ಷಪ್ಪ ಉಪಸ್ಥಿತರಿದ್ದರು.  

ಎರೆಹುಳು ಗೊಬ್ಬರ ಬಳಕೆಯಿಂದ ಮಣ್ಣಿನ ಫಲವತ್ತತೆ : ಈಶ್ವರ್ ಪಿ ತೀರ್ಥ

ಭದ್ರಾವತಿ ಅಪ್ಪರ್‌ಹುತ್ತಾದಲ್ಲಿರುವ ಅನನ್ಯ ಪ್ರೌಢಶಾಲೆಯಲ್ಲಿ ವಿಶ್ವ ಮಣ್ಣಿನ ದಿನದ ಅಂಗವಾಗಿ ಶಾಲೆಯಲ್ಲಿ ನೂತವಾಗಿ ಅನುಷ್ಠಾನಗೊಳಿರುವ ಎರೆಹುಳು ಗೊಬ್ಬರ ಘಟಕ ಹಾಗೂ ಕೃಷಿ ಬೆಳೆಗಳ ಪರಿಚಯ ಮತ್ತು ಕೃಷಿ ಉಪಕರಣಗಳ ಪ್ರದರ್ಶನ ಉದ್ಘಾಟನಾ ಸಮಾರಂಭದಲ್ಲಿ ಕೃಷಿ ಬೆಳೆಗಳ ಕುರಿತು ಕೈಪಿಡಿ ಪುಸ್ತಕ ಬಿಡುಗಡೆಗೊಳಿಸಲಾಯಿತು.
    ಭದ್ರಾವತಿ, ಡಿ. ೮: ಉತ್ತಮ ಬೆಳೆ ಬೆಳೆಯಲು ಫಲವತ್ತಾದ ಮಣ್ಣಿನ ಅಗತ್ಯವಿದ್ದು, ಈ ನಿಟ್ಟಿನಲ್ಲಿ ಎರೆಹುಳುಗಳ ಪಾತ್ರ ಪ್ರಮುಖವಾಗಿದೆ ಎಂದು ಸಾವಯುವ ಕೃಷಿಕ ಈಶ್ವರ್ ಪಿ ತೀರ್ಥ ಹೇಳಿದರು.
      ಅವರು ನಗರದ ಅಪ್ಪರ್‌ಹುತ್ತಾದಲ್ಲಿರುವ ಅನನ್ಯ ಪ್ರೌಢಶಾಲೆಯಲ್ಲಿ ವಿಶ್ವ ಮಣ್ಣಿನ ದಿನದ ಅಂಗವಾಗಿ ಶಾಲೆಯಲ್ಲಿ ನೂತವಾಗಿ ಅನುಷ್ಠಾನಗೊಳಿರುವ ಎರೆಹುಳು ಗೊಬ್ಬರ ಘಟಕ ಹಾಗೂ ಕೃಷಿ ಬೆಳೆಗಳ ಪರಿಚಯ ಮತ್ತು ಕೃಷಿ ಉಪಕರಣಗಳ ಪ್ರದರ್ಶನ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು.  
      ಬೆಳೆಗಳಿಗೆ ಉತ್ತಮ ಮಣ್ಣಿನ ಅಗತ್ಯವಿದ್ದು, ಈ ನಿಟ್ಟಿನಲ್ಲಿ ಪ್ರಸ್ತುತ ಮಣ್ಣಿನ ಸಂರಕ್ಷಣೆ ಅಗತ್ಯವಿದೆ. ಪರಿಸರಕ್ಕೆ ಅದರಲ್ಲೂ ಮಣ್ಣಿನ ಫಲವತ್ತತೆಗೆ ಪ್ಲಾಸ್ಟಿಕ್ ಮಾರಕವಾಗಿದ್ದು, ಇದನ್ನು ಸಂಪೂರ್ಣವಾಗಿ ನಿಯಂತ್ರಿಸಬೇಕಾಗಿದೆ. ನಾವುಗಳು ಪ್ಲಾಸ್ಟಿಕ್ ಬಳಕೆ ಮಾಡದಂತೆ ಎಚ್ಚರವಹಿಸಬೇಕಾಗಿದೆ ಎಂದರು.
      ಕೃಷಿಯಲ್ಲಿ ಎರೆಹುಳು ಗೊಬ್ಬರ ಹೆಚ್ಚು ಪ್ರಯೋಜನಕಾರಿಯಾಗಿದ್ದು, ಇದು ಮಣ್ಣಿನ ಫಲವತ್ತತೆ ಹೆಚ್ಚಿಸುವ ಜೊತೆಗೆ ಹೆಚ್ಚಿನ ಇಳುವರಿಯೊಂದಿಗೆ ರೈತರಿಗೆ ಹೆಚ್ಚಿನ ಲಾಭ ತಂದುಕೊಡುತ್ತದೆ ಎಂದರು.  
      ಶಾಲೆಯ ೬ ರಿಂದ ೧೦ನೇ ತರಗತಿ ವಿದ್ಯಾರ್ಥಿಗಳಿಗೆ ಕೃಷಿಯಲ್ಲಿ ಆಸಕ್ತಿ  ಮೂಡಿಸುವ ಉದ್ದೇಶದಿಂದ ತಾಲೂಕಿನ ಕೃಷಿ ಬೆಳೆಗಳ ಕುರಿತ ಕೈಪಿಡಿ ಪುಸಕ್ತ ಬಿಡುಗಡೆ ಗೊಳಿಸಲಾಯಿತು.
      ವಿದ್ಯಾಸಂಸ್ಥೆ ಅಧ್ಯಕ್ಷ ಡಾ. ಕೆ. ನಾಗರಾಜ್ ಕೃಷಿ ಉಪಕರಣಗಳ ಪ್ರದರ್ಶನ ಉದ್ಘಾಟಿಸಿದರು.  ಹುಲ್ಲು ಕತ್ತರಿಸುವ ಯಂತ್ರ, ಔಷಧಿ ಸಿಂಪಡಿಸುವ ಯಂತ್ರ, ನೊಗ, ಹಲಗೆ, ನೇಗಿಲು, ಕೈ ಗುದ್ದಲಿ, ಭತ್ತದ ಕಳೆ ಕೀಳುವ ಯಂತ್ರ ಸೇರಿದಂತೆ ಕೃಷಿಯಲ್ಲಿ ಬಳಸುವ ಇನ್ನಿತರ ಪರಿಕರಗಳನ್ನು ಮತ್ತು ಟ್ರಾಕ್ಟರ್, ಟಿಲ್ಲರ್‌ಗಳನ್ನು ಸಹ ಮಕ್ಕಳಿಗೆ ಪರಿಚಯಿಸಲಾಯಿತು.
      ವಿದ್ಯಾಸಂಸ್ಥೆ ಕಾರ್ಯದರ್ಶಿ ಅನಿಲ್ ಕುಮಾರ್, ವ್ಯವಸ್ಥಾಪಕ ವೇಣುಗೋಪಾಲ್, ಪ್ರಾಂಶುಪಾಲ ಕಲ್ಲೇಶ್, ಸುನೀತ, ತನುಜಾ ವೇದಿಕೆಯಲ್ಲಿ ಉಪಸ್ಥಿತರಿದ್ದರು ಶಾರದ ಪ್ರಾರ್ಥಿಸಿ, ಕವನಾ ಸ್ವಾಗತಿಸಿದರು. ಜೀವಿತಾ ಕಾರ್ಯಕ್ರಮ ನಿರೂಪಿಸಿ, ಶುಭ ಕೋಠಿ ವಂದಿಸಿದರು.
.

ಭದ್ರಾವತಿ ಅಪ್ಪರ್‌ಹುತ್ತಾದಲ್ಲಿರುವ ಅನನ್ಯ ಪ್ರೌಢಶಾಲೆಯಲ್ಲಿ ವಿಶ್ವ ಮಣ್ಣಿನ ದಿನದ ಅಂಗವಾಗಿ ಶಾಲೆಯಲ್ಲಿ ನೂತವಾಗಿ ಅನುಷ್ಠಾನಗೊಳಿರುವ ಎರೆಹುಳು ಗೊಬ್ಬರ ಘಟಕ ಹಾಗೂ ಕೃಷಿ ಬೆಳೆಗಳ ಪರಿಚಯ ಮತ್ತು ಕೃಷಿ ಉಪಕರಣಗಳ ಪ್ರದರ್ಶನ ಉದ್ಘಾಟನಾ ಸಮಾರಂಭದಲ್ಲಿ ಕೃಷಿಯಲ್ಲಿ ಬಳಸುವ ಪರಿಕರಗಳನ್ನು ಪರಿಚಯಿಸಲಾಯಿತು.

ಬುಧವಾರ, ಡಿಸೆಂಬರ್ 7, 2022

ವಿವಿಧ ಸಂಘಟನೆಗಳಿಂದ ಅಂಬೇಡ್ಕರ್ ಪರಿನಿರ್ವಾಣ ದಿನ

ಅಂಬೇಡ್ಕರ್ ಪರಿನಿರ್ವಾಣ ದಿನದ ಅಂಗವಾಗಿ ಭದ್ರಾವತಿಯಲ್ಲಿ ನಗರಸಭೆ ವತಿಯಿಂದ ಬಿ.ಎಚ್ ರಸ್ತೆ ಅಂಡರ್‌ಬ್ರಿಡ್ಜ್ ಬಳಿ ಇರುವ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಲಾಯಿತು.
    ಭದ್ರಾವತಿ, ಡಿ. ೭: ನಗರದ ವಿವಿಧ ಸಂಘಟನೆಗಳಿಂದ ಅಂಬೇಡ್ಕರ್ ಪರಿನಿರ್ವಾಣ ದಿನ ಆಚರಿಸಲಾಯಿತು. ಬಿ.ಎಚ್ ರಸ್ತೆ ಅಂಡರ್‌ಬ್ರಿಡ್ಜ್ ಬಳಿ ಇರುವ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಲಾಯಿತು.
    ನಗರಸಭೆ ವತಿಯಿಂದ ನಡೆದ ಕಾರ್ಯಕ್ರಮದಲ್ಲಿ ನಗರಸಭೆ ಅಧ್ಯಕ್ಷೆ ಅನುಸುಧಾ ಮೋಹನ್ ಪಳನಿ ಮಾಲಾರ್ಪಣೆ ಮಾಡಿದರು. ಉಪಾಧ್ಯಕ್ಷ ಚನ್ನಪ್ಪ, ಸ್ಥಾಯಿ ಸಮಿತಿ ಅಧ್ಯಕ್ಷ ಕೆ. ಸುದೀಪ್‌ಕುಮಾರ್, ಸದಸ್ಯರಾದ ಲತಾ ಚಂದ್ರಶೇಖರ್, ಟಿಪ್ಪು ಸುಲ್ತಾನ್, ಪೌರಾಯುಕ್ತ ಮನುಕುಮಾರ್, ಕಂದಾಯಾಧಿಕಾರಿ ರಾಜ್‌ಕುಮಾರ್, ಪರಿಸರ ಅಭಿಯಂತರ ಪ್ರಭಾಕರ್ ಸೇರಿದಂತೆ ಇನ್ನಿತರ ಅಧಿಕಾರಿಗಳು, ಪೌರ ಸೇವಾ ನೌಕರರ ಸೇವಾ ಸಂಘದ ಪದಾಧಿಕಾರಿಗಳು, ಸಿಬ್ಬಂದಿಗಳು ಉಪಸ್ಥಿತರಿದ್ದರು.
    ಛಲವಾದಿ ಸಮಾಜದಿಂದ ನಡೆದ ಕಾರ್ಯಕ್ರಮದಲ್ಲಿ ಸಮಾಜದ ಜಿಲ್ಲಾಧ್ಯಕ್ಷ ಸುರೇಶ್, ಪ್ರಮುಖರಾದ ಜಯರಾಜ್, ಗೋಪಾಲ್, ಮಹೇಶ್, ಜಗದೀಶ್, ಛಲವಾದಿ ಕೃಷ್ಣ, ಇ.ಪಿ ಬಸವರಾಜ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
    ಕರ್ನಾಟಕ ದಲಿತ ಸಂಘರ್ಷ ಸಮಿತಿ ಸೇರಿದಂತೆ ವಿವಿಧ ದಲಿತ ಸಂಘಟನೆಗಳು ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಪರಿನಿರ್ವಾಣ ದಿನ ಆಚರಿಸಿದವು.


ಅಂಬೇಡ್ಕರ್ ಪರಿನಿರ್ವಾಣ ದಿನದ ಅಂಗವಾಗಿ ಭದ್ರಾವತಿಯಲ್ಲಿ ಛಲವಾದಿ ಸಮಾಜ ಸೇರಿದಂತೆ ವಿವಿಧ ಸಂಘಟನೆಗಳಿಂದ ಬಿ.ಎಚ್ ರಸ್ತೆ ಅಂಡರ್‌ಬ್ರಿಡ್ಜ್ ಬಳಿ ಇರುವ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಲಾಯಿತು. 

ಅಂಬೇಡ್ಕರ್ ವಿಶ್ವದ ಮಹಾನ್ ವ್ಯಕ್ತಿ, ಜ್ಞಾನದ ಸಂಕೇತ : ಸತ್ಯ ಭದ್ರಾವತಿ

ಭದ್ರಾವತಿ ರಂಗಪ್ಪವೃತ್ತ, ಜೈಭೀಮ ನಗರದಲ್ಲಿರುವ ಸಮಿತಿ ಕಛೇರಿ ಮುಂಭಾಗ ಹಮ್ಮಿಕೊಳ್ಳಲಾಗಿದ್ದ ಅಂಬೇಡ್ಕರ್‌ರವರ ಪರಿನಿರ್ವಾಣ ದಿನಾಚರಣೆಯಲ್ಲಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ರಾಜ್ಯ ಖಜಾಂಚಿ  ಸತ್ಯ ಭದ್ರಾವತಿ ನೇತೃತ್ವವಹಿಸಿ ಮಾತನಾಡಿದರು.
    ಭದ್ರಾವತಿ, ಡಿ. ೭: ಭಾರತರತ್ನ, ಸಂವಿಧಾನ ಶಿಲ್ಪಿ ಡಾ. ಬಿ.ಆರ್ ಅಂಬೇಡ್ಕರ್‌ರವರು ಪ್ರಪಂಚದ ಎಲ್ಲಾ ದೇಶಗಳು ಗೌರವಿಸುವ ಮಹಾನ್ ವ್ಯಕ್ತಿಯಾಗಿದ್ದಾರೆಂದು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ರಾಜ್ಯ ಖಜಾಂಚಿ  ಸತ್ಯ ಭದ್ರಾವತಿ ಬಣ್ಣಿಸಿದರು.
    ಅವರು ನಗರದ ರಂಗಪ್ಪವೃತ್ತ, ಜೈಭೀಮ ನಗರದಲ್ಲಿರುವ ಸಮಿತಿ ಕಛೇರಿ ಮುಂಭಾಗ ಹಮ್ಮಿಕೊಳ್ಳಲಾಗಿದ್ದ ಅಂಬೇಡ್ಕರ್‌ರವರ ಪರಿನಿರ್ವಾಣ ದಿನಾಚರಣೆ ನೇತೃತ್ವವಹಿಸಿ ಮಾತನಾಡಿದರು..
ಅಸ್ಪೃಶ್ಯ ಜಾತಿಯಲ್ಲಿ ಹುಟ್ಟಿಬೆಳೆದ ಅಂಬೇಡ್ಕರ್‌ರವರು ಸಮಾಜದ ಎಲ್ಲಾ ಸಂಕಷ್ಟಗಳನ್ನು ಕಂಡಿದ್ದು, ನೋವು, ಅಪಮಾನಗಳನ್ನು ಅನುಭವಿಸಿ ಉನ್ನತ ಸ್ಥಾನಕ್ಕೆ ಏರಿದವರು. ಈ ಹಿನ್ನಲೆಯಲ್ಲಿ ಅವರು ದೇಶದಲ್ಲಿನ ಎಲ್ಲಾ ಧರ್ಮ, ಎಲ್ಲಾ ಜಾತಿ-ಜನಾಂಗದವರಿಗೆ ಅನ್ವಯವಾಗುವ, ಸರ್ವ ಸಮಾನತೆಯಿಂದ ಕೂಡಿರುವ ಶ್ರೇಷ್ಠ ಸಂವಿಧಾನವನ್ನು ರಚಿಸುವ ಮೂಲಕ ಎಲ್ಲರೂ ಸೌಹಾರ್ದತೆಯಿಂದ ಬದುಕಲು ಕಾರಣಕರ್ತರಾಗಿದ್ದಾರೆ ಎಂದರು.
    ದೇಶದ ಪ್ರತಿಯೊಬ್ಬರೂ ಸಹ ಸಂವಿಧಾನವನ್ನು ಗೌರವಿಸಬೇಕು. ಸಂವಿಧಾನದ ಆಶಯದಂತೆ ನಡೆದುಕೊಳ್ಳಬೇಕು. ಅಂಬೇಡ್ಕರ್‌ರವರು ಜ್ಞಾನದ ಸಂಕೇತವಾಗಿ ಪ್ರಜ್ವಲಿಸುತ್ತಿದ್ದು, ಈ ಹಿನ್ನಲೆಯಲ್ಲಿ ಪ್ರಪಂಚದ ಎಲ್ಲಾ ದೇಶಗಳು ಸಹ ಅಂಬೇಡ್ಕರ್‌ರವರನ್ನು ಗೌರವಿಸುತ್ತಿವೆ. ಇಂತಹ ಮಹಾನ್ ವ್ಯಕ್ತಿಯ ದಾರಿಯಲ್ಲಿ ನಾವುಗಳು ಸಹ ಸಾಗುವಂತಾಗಬೇಕೆಂದರು.
    ತಾಲೂಕು ಸಂಚಾಲಕ ಕೆ. ರಂಗನಾಥ್, ಪ್ರಮುಖರಾದ ಶಾಂತಮ್ಮ, ಎನ್. ಗೋವಿಂದ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ದತ್ತ ಜಯಂತಿ : ವಿಜೃಂಭಣೆಯಿಂದ ಜರುಗಿದ ಉತ್ಸವ ಮೆರವಣಿಗೆ

ಭದ್ರಾವತಿ ನ್ಯೂಟೌನ್ ದತ್ತ ಮಂದಿರದಲ್ಲಿ ಬುಧವಾರ ದತ್ತ ಜಯಂತಿ ಅಂಗವಾಗಿ ಪ್ರಮುಖ ಬೀದಿಗಳಲ್ಲಿ ಉತ್ಸವ ಮೆರವಣಿಗೆ ನಡೆಸಲಾಯಿತು.
ಭದ್ರಾವತಿ, ಡಿ. ೭: ನಗರದ ನ್ಯೂಟೌನ್ ದತ್ತ ಮಂದಿರದಲ್ಲಿ ಬುಧವಾರ ದತ್ತ ಜಯಂತಿ ಅಂಗವಾಗಿ ಪ್ರಮುಖ ಬೀದಿಗಳಲ್ಲಿ ಉತ್ಸವ ಮೆರವಣಿಗೆ ನಡೆಸಲಾಯಿತು.
      ದತ್ತ ಜಯಂತಿ ಅಂಗವಾಗಿ ಪ್ರತಿದಿನ ವಿವಿಧ ಧಾರ್ಮಿಕ ಆಚರಣೆಗಳು ಜರುಗಿದವು. ವಿದ್ಯುತ್ ದೀಪಗಳಿಂದ ಅಲಂಕೃತಗೊಂಡ ದತ್ತಾತ್ರೇಯ ಸ್ವಾಮಿ ಭಾವಚಿತ್ರದೊಂದಿಗೆ ಉತ್ಸವ ಮೆರವಣಿಗೆ ನಡೆಸಲಾಯಿತು.  ನಂತರ ಮಹಾಮಂಗಳಾರತಿ, ತೀರ್ಥಪ್ರಸಾದ ವಿನಿಯೋಗ ಜರುಗಿತು.
      ವಿವಿಧ ಭಜನಾ ಮಂಡಳಿ ಸದಸ್ಯರು, ತಾಲೂಕು ಬ್ರಾಹ್ಮಣ ಮಹಾಸಭಾ ವಿವಿಧ ಸಂಘಟನೆಗಳ ಪ್ರಮುಖರು ಸೇರಿದಂತೆ ಸುತ್ತಮುತ್ತಲ ಪ್ರದೇಶಗಳ ಭಕ್ತರು ಪಾಲ್ಗೊಂಡಿದ್ದರು.



ಕೆರೆಗಳ ಒತ್ತುವರಿ ತೆರವು, ಬೌಂಡರಿ ನಿಗದಿ ಕಾರ್ಯ ವಿಳಂಬ : ಪ್ರತಿಭಟನೆ

ಸೂಕ್ತ ಕ್ರಮ ಕೈಗೊಳ್ಳಲು ತಹಸೀಲ್ದಾರ್‌ಗೆ ಮನವಿ

ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಕೆರೆಗಳ ಒತ್ತುವರಿ ತೆರವು ಹಾಗು ಬೌಂಡರಿ ನಿಗದಿಪಡಿಸುವ ಕಾರ್ಯ ವಿಳಂಬವಾಗುತ್ತಿರುವುದನ್ನು ಖಂಡಿಸಿ ಬುಧವಾರ ಭಾರತರತ್ನ ಸರ್.ಎಂ ವಿಶ್ವೇಶ್ವರಯ್ಯ ಚಾರಿಟಬಲ್ ಟ್ರಸ್ಟ್, ಶ್ರೀ ಡಿ. ದೇವರಾಜ ಅರಸು ಜನಸ್ಪಂದನ ವೇದಿಕೆ, ಸುವರ್ಣ ಮಹಿಳಾ ವೇದಿಕೆ ವತಿಯಿಂದ ತಾಲೂಕು ಕಛೇರಿ ಮಿನಿವಿಧಾನಸೌಧದ ಮುಂಭಾಗ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಗ್ರೇಡ್-೨ ರಂಗಮ್ಮ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
    ಭದ್ರಾವತಿ, ಡಿ. ೬: ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಕೆರೆಗಳ ಒತ್ತುವರಿ ತೆರವು ಹಾಗು ಬೌಂಡರಿ ನಿಗದಿಪಡಿಸುವ ಕಾರ್ಯ ವಿಳಂಬವಾಗುತ್ತಿರುವುದನ್ನು ಖಂಡಿಸಿ ಬುಧವಾರ ಭಾರತರತ್ನ ಸರ್.ಎಂ ವಿಶ್ವೇಶ್ವರಯ್ಯ ಚಾರಿಟಬಲ್ ಟ್ರಸ್ಟ್, ಶ್ರೀ ಡಿ. ದೇವರಾಜ ಅರಸು ಜನಸ್ಪಂದನ ವೇದಿಕೆ, ಸುವರ್ಣ ಮಹಿಳಾ ವೇದಿಕೆ ವತಿಯಿಂದ ತಾಲೂಕು ಕಛೇರಿ ಮಿನಿವಿಧಾನಸೌಧದ ಮುಂಭಾಗ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಗ್ರೇಡ್-೨ ರಂಗಮ್ಮ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
      ನಗರಸಭೆ ವ್ಯಾಪ್ತಿಯಲ್ಲಿ ಸುಮಾರು ೭೦ ಕೆರೆಗಳಿದ್ದು, ಈ ಹಿಂದೆ ಪೌರಾಯುಕ್ತರಾಗಿದ್ದ ಮನೋಹರ್‌ರವರ ಪರಿಶ್ರಮದ ಫಲವಾಗಿ ೭೦ ಕೆರೆಗಳ ಬೌಂಡರಿ ನಿಗದಿಪಡಿಸುವ ಸಂಬಂಧ ಆದೇಶವಾಗಿರುತ್ತದೆ. ೭೦ ಕೆರೆಗಳ ಪೈಕಿ ಈಗಾಗಲೇ ೨೫ ಕೆರೆಗಳ ಬೌಂಡರಿ ನಿಗದಿಪಡಿಸಲಾಗಿದ್ದು, ತುರ್ತಾಗಿ ಈ ಕೆರೆಗಳ ಒತ್ತುವರಿ ಕೈಗೊಂಡು ನಕ್ಷೆ ಸಮೇತ ನಗರಸಭೆಗೆ ಹಸ್ತಾಂತರ ಮಾಡುವುದು. ಉಳಿದ ಕೆರೆಗಳ ಬೌಂಡರಿ ನಿಗದಿಪಡಿಸುವ ಸಂಬಂಧ ಕ್ರಮ ಕೈಗೊಳ್ಳುವುದು.
      ಕಲ್ಲಹಳ್ಳಿ ಗ್ರಾಮಪಂಚಾಯಿತಿ ವ್ಯಾಪ್ತಿಯಲ್ಲಿ ೪ ಕೆರೆಗಳ ಬೌಂಡರಿ ಹಾಗು ಹಿರಿಯೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ೪ ಕೆರೆಗಳ ಬೌಂಡರಿ ಈಗಾಗಲೇ ನಿಗದಿಪಡಿಸಲಾಗಿದೆ. ಈ ಕೆರೆಗಳ ಒತ್ತುವರಿ ಕೈಗೊಂಡು ನಕ್ಷೆ ಸಮೇತ ಸಂಬಂಧ ಗ್ರಾಮ ಪಂಚಾಯಿತಿಗಳಿಗೆ ಹಸ್ತಾಂತರಿಸಲು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಲಾಯಿತು.
      ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಕೆರೆಗಳ ಅಭಿವೃದ್ಧಿ ಪಡಿಸುವ ಸಂಬಂಧ ಸರ್ಕಾರದಿಂದ ಇದುವರೆಗೂ ಯಾವುದೇ ಅನುದಾನ ಬಂದಿರುವುದಿಲ್ಲ. ಈ ಹಿನ್ನಲೆಯಲ್ಲಿ ದೇಶದ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಮಹತ್ವಾಕಾಂಕ್ಷೆ ಯೋಜನೆಗಳಲ್ಲಿ ಒಂದಾದ 'ಕ್ಯಾಚ್ ದ ರೈನ್'(ಮಳೆ ನೀರು ಹಿಡಿಯಿರಿ) ಅನುಷ್ಠಾನಗೊಳ್ಳಲು ಕೆರೆಗಳ ಸಮೀಪವಿರುವ ರೈತರುಗಳಿಗೆ ಕೆರೆಗಳಲ್ಲಿರುವ ಊಳನ್ನು ತೆಗೆದು ಕೆರೆಗಳನ್ನು ಅಭಿವೃದ್ಧಿಪಡಿಸಲು ಷರತ್ತು ಬದ್ಧ ಅನುಮತಿ ನೀಡುವಂತೆ ಮನವಿ ಮಾಡಲಾಯಿತು.
      ವೇದಿಕೆ ಪ್ರಮುಖರಾದ ನಗರಸಭೆ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಆರ್. ವೇಣುಗೋಪಾಲ್, ಮೂಡಲಗಿರಿ ಗೌಡ, ರುದ್ರೇಶ್, ಆನಂದ್, ದೇವಿಕಾ ನಾಗರಾಜ್, ಮಹಮದ್ ಸುಹೇಲ್, ಗವಿಸಿದ್ದಪ್ಪ, ಬಿ.ಡಿ ನಾಗರಾಜ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.


ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಕೆರೆಗಳ ಒತ್ತುವರಿ ತೆರವು ಹಾಗು ಬೌಂಡರಿ ನಿಗದಿಪಡಿಸುವ ಕಾರ್ಯ ವಿಳಂಬವಾಗುತ್ತಿರುವುದನ್ನು ಖಂಡಿಸಿ ಬುಧವಾರ ಭಾರತರತ್ನ ಸರ್.ಎಂ ವಿಶ್ವೇಶ್ವರಯ್ಯ ಚಾರಿಟಬಲ್ ಟ್ರಸ್ಟ್, ಶ್ರೀ ಡಿ. ದೇವರಾಜ ಅರಸು ಜನಸ್ಪಂದನ ವೇದಿಕೆ, ಸುವರ್ಣ ಮಹಿಳಾ ವೇದಿಕೆ ವತಿಯಿಂದ ತಾಲೂಕು ಕಛೇರಿ ಮಿನಿವಿಧಾನಸೌಧದ ಮುಂಭಾಗ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಗ್ರೇಡ್-೨ ರಂಗಮ್ಮ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.



ಮಂಗಳವಾರ, ಡಿಸೆಂಬರ್ 6, 2022

ಮತದಾನ ಕುರಿತು ಜಾಗೃತಿ ಜಾಥಾ

ಚುನಾವಣಾ ಆಯೋಗದ ನಿರ್ದೇಶನದ ಮೇರೆಗೆ ಮತದಾನ ಕುರಿತು ಜಾಗೃತಿ ಮೂಡಿಸಲು ಮಂಗಳವಾರ ಭದ್ರಾವತಿ ನಗರದಲ್ಲಿ ಜಾಥಾ ನಡೆಸಲಾಯಿತು.
    ಭದ್ರಾವತಿ, ಡಿ. ೬ : ಚುನಾವಣಾ ಆಯೋಗದ ನಿರ್ದೇಶನದ ಮೇರೆಗೆ ಮತದಾನ ಕುರಿತು ಜಾಗೃತಿ ಮೂಡಿಸಲು ಮಂಗಳವಾರ ನಗರದಲ್ಲಿ ಜಾಥಾ ನಡೆಸಲಾಯಿತು.
    ನಗರಸಭೆ ವತಿಯಿಂದ ನಗರದ ಬಿ.ಎಚ್ ರಸ್ತೆ, ಅಂಡರ್ ಬ್ರಿಡ್ಜ್ ಬಳಿ ಅಂಬೇಡ್ಕರ್ ವೃತ್ತ ದಿಂದ ಮಾಧವಚಾರ್ ವೃತ್ತದವರೆಗೆ ಆಯೋಜಿಸಲಾಗಿದ್ದ ಜಾಥಾದಲ್ಲಿ ಹೊಸಮನೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ನ್ಯೂಟೌನ್ ಸರ್.ಎಂ.ವಿ ಸರ್ಕಾರಿ ಕಲಾ ಮತ್ತು ವಾಣಿಜ್ಯ ಕಾಲೇಜು ಮತ್ತು ಬೊಮ್ಮನಕಟ್ಟೆ ಸರ್.ಎಂ.ವಿ ಸರ್ಕಾರಿ ವಿಜ್ಞಾನ ಕಾಲೇಜು ಸೇರಿದಂತೆ ಇನ್ನಿತರ ಕಾಲೇಜುಗಳ ವಿದ್ಯಾರ್ಥಿಗಳು, ತಾಲೂಕು ಕಛೇರಿ ಕಂದಾಯ ಇಲಾಖೆ ಅಧಿಕಾರಿಗಳು, ಸಿಬ್ಬಂದಿಗಳು, ಕಾಲೇಜುಗಳ ಅಧ್ಯಾಪಕರು ಹಾಗು ನಗರಸಭೆ ಮತ್ತು ಶಿಕ್ಷಣ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಪಾಲ್ಗೊಂಡಿದ್ದರು.
    ೧೮ ವರ್ಷ ಪೂರೈಸಿರುವ ಪ್ರತಿಯೊಬ್ಬರು ಸಹ ಮತದಾನ ಹಕ್ಕು ಹೊಂದುವುದು, ಕಡ್ಡಾಯವಾಗಿ ಮತ ಚಲಾಯಿಸುವುದು ಸೇರಿದಂತೆ ಚುನಾವಣಾ ಸಂಬಂಧ ಅರಿವು ಮೂಡಿಸುವ ಜಾಗೃತಿ ಫಲಕಗಳನ್ನು ಹಿಡಿದು ಜಾಥಾ ನಡೆಸಲಾಯಿತು.
    ಚುನಾವಣಾ ಸಾಕ್ಷರತಾ ಸಂಘ ಜಿಲ್ಲಾ ಉಪ ನೋಡಲ್ ಅಧಿಕಾರಿ ನವೀದ್ ಪರ್ವೀಜ್ ಅಹಮದ್ ರಂಗಪ್ಪ ವೃತ್ತದಲ್ಲಿ ಚುನಾವಣಾ ಮಾದರಿಗಳೊಂದಿಗೆ, ವಿಶಿಷ್ಟ ಆಟದೊಂದಿಗೆ ಪ್ರಾತ್ಯಕ್ಷಿಕೆ ಮೂಲಕ ಜಾಗೃತಿ ಮೂಡಿಸಿ ಗಮನ ಸೆಳೆದರು.
    ತಹಸೀಲ್ದಾರ್ ಗ್ರೇಡ್-೨ ರಂಗಮ್ಮ, ಉಪತಹಸೀಲ್ದಾರ್ ಮಂಜಾನಾಯ್ಕ, ನಗರಸಭೆ ಪೌರಾಯುಕ್ತ ಮನುಕುಮಾರ್, ಕಂದಾಯಾಧಿಕಾರಿ ರಾಜ್‌ಕುಮಾರ್, ಪರಿಸರ ಅಭಿಯಂತರ ಪ್ರಭಾಕರ್, ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ ನಾಗೇಂದ್ರಪ್ಪ, ಕ್ಷೇತ್ರ ಶಿಕ್ಷಣ ಸಂಪನ್ಮೂಲ ಸಮನ್ವಯಾಧಿಕಾರಿ ಪಂಚಾಕ್ಷರಿ, ಕವಿತಾ, ಹೊಸಮನೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ.ಬಿ.ಜಿ ಧನಂಜಯ ಸೇರಿದಂತೆ ಪ್ರಮುಖರು ಪಾಲ್ಗೊಂಡಿದ್ದರು.      


ಚುನಾವಣಾ ಸಾಕ್ಷರತಾ ಸಂಘ ಜಿಲ್ಲಾ ಉಪ ನೋಡಲ್ ಅಧಿಕಾರಿ ನವೀದ್ ಪರ್ವೀಜ್ ಅಹಮದ್ ಭದ್ರಾವತಿ ರಂಗಪ್ಪ ವೃತ್ತದಲ್ಲಿ ಚುನಾವಣಾ ಮಾದರಿಗಳೊಂದಿಗೆ, ವಿಶಿಷ್ಟ ಆಟದೊಂದಿಗೆ ಪ್ರಾತ್ಯಕ್ಷಿಕೆ ಮೂಲಕ ಜಾಗೃತಿ ಮೂಡಿಸಿ ಗಮನ ಸೆಳೆದರು.