Wednesday, December 28, 2022

ಡಿ.೩೧ರಂದು ಆಯ-ವ್ಯಯ ಪೂರ್ವಭಾವಿ ಸಭೆ

    ಭದ್ರಾವತಿ, ಡಿ. ೨೮: ನಗರಸಭೆ ಆಯ-ವ್ಯಯ ಪೂರ್ವಭಾವಿ ಸಭೆ ಡಿ.೩೧ರಂದು ಬೆಳಿಗ್ಗೆ ೧೧ ಗಂಟೆಗೆ ನಗರಸಭೆ ಅಧ್ಯಕ್ಷೆ ಅನುಸುಧಾ ಮೋಹನ್ ಪಳನಿ ಅಧ್ಯಕ್ಷತೆಯಲ್ಲಿ ನಡೆಯಲಿದೆ.
    ನಗರದ ಹಿರಿಯ ನಾಗರೀಕರು, ವಿವಿಧ ಸಂಘ-ಸಂಸ್ಥೆಗಳ ಪ್ರಮುಖರು ಸಭೆಯಲ್ಲಿ ಭಾಗವಹಿಸಿ ಸಲಹೆ ಸೂಚನೆಗಳನ್ನು ನೀಡುವಂತೆ ನಗರಸಭೆ ಪೌರಾಯುಕ್ತ ಮನುಕುಮಾರ್ ಕೋರಿದ್ದಾರೆ.

Tuesday, December 27, 2022

ಅಭ್ಯರ್ಥಿ ಗೆಲ್ಲಿಸಲು ಜೆಡಿಎಸ್ ತಂತ್ರಗಾರಿಕೆ : ಯುವ ಮತದಾರರನ್ನು ಸೆಳೆಯಲು ಹೆಚ್ಚಿನ ಆಸಕ್ತಿ

ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಹಾಗು ಪಕ್ಷದ ರಾಜ್ಯಾಧ್ಯಕ್ಷ ಸಿ.ಎಂ ಇಬ್ರಾಹಿಂರವರಿಗೆ ಭದ್ರಾವತಿ ಜೆಡಿಎಸ್ ಅಭ್ಯರ್ಥಿ ಶಾರದ ಅಪ್ಪಾಜಿ ನೇತೃತ್ವದ ನಿಯೋಗ ಖುದ್ದಾಗಿ ಭೇಟಿ ಮಾಡಿ ಪಕ್ಷ ಸಂಘಟನೆ ಕುರಿತು ಮಾಹಿತಿ ನೀಡಿತು.
    ಭದ್ರಾವತಿ, ಡಿ. ೨೮: ವಿಧಾನಸಭಾ ಚುನಾವಣೆಗೆ ಈಗಾಗಲೇ ಕ್ಷೇತ್ರದಲ್ಲಿ ಅಭ್ಯರ್ಥಿಯನ್ನು ಘೋಷಿಸಿರುವ ಜಾತ್ಯತೀತ ಜನತಾದಳ ಇದೀಗ ತನ್ನ ಅಭ್ಯರ್ಥಿ ಗೆಲುವಿಗಾಗಿ ಹಲವು ತಂತ್ರಗಾರಿಕೆಗಳಿಗೆ ಮೊರೆ ಹೋಗಿದ್ದು, ಈ ನಿಟ್ಟಿನಲ್ಲಿ ಪಕ್ಷದ ಯುವ ಘಟಕದ ಜಿಲ್ಲಾಧ್ಯಕ್ಷ ಮಧುಕುಮಾರ್ ನೇತೃತ್ವದಲ್ಲಿ ಪಕ್ಷ ಸಂಘಟನೆಗೆ ಮುಂದಾಗಿದೆ.
    ಕಳೆದ ಸುಮಾರು ೨ ವರ್ಷಗಳಿಂದ ನಿರಂತರವಾಗಿ ಕ್ಷೇತ್ರದಾದ್ಯಂತ ಸಂಚರಿಸಿ ಮಾಜಿ ಶಾಸಕ ಎಂ.ಜೆ ಅಪ್ಪಾಜಿಯವರ ಅಭಿಮಾನಿಗಳನ್ನು ಒಗ್ಗೂಡಿಸುವ ನಿಟ್ಟಿನಲ್ಲಿ ಮುಂದಾಗಿದ್ದಾರೆ. ವಿಶೇಷ ಎಂದರೆ ಯುವ ಸಮೂಹ ಸೆಳೆಯಲು ಹಲವು ರೀತಿಯ ಸಿದ್ದತೆಗಳನ್ನು ಕೈಗೊಳ್ಳಲಾಗಿದೆ. ಅಪ್ಪಾಜಿ ವರ್ಚಸ್ಸಿನ ಮತ ಹೊರತುಪಡಿಸಿ ಹೊಸ ಮತದಾರರನ್ನು ಸೆಳೆಯಲು ಹೆಚ್ಚಿನ ಗಮನ ಹರಿಸಲಾಗಿದೆ. ಈಗಾಗಲೇ ಗ್ರಾಮಾಂತರ ಭಾಗದಲ್ಲಿ ಯುವ ಮುಖಂಡರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳಲಾಗುತ್ತಿದೆ. ಅದರಲ್ಲೂ ವಿಶೇಷ ಎಂದರೆ ಮುಸ್ಲಿಂ, ಕ್ರಿಶ್ಚಿಯನ್ ಸೇರಿದಂತೆ ಅಲ್ಪ ಸಮುದಾಯದ ಮತಗಳ ಮೇಲೆ ಹೆಚ್ಚಿನ ನಿಗಾವಹಿಸಲಾಗಿದೆ.
    ಮಧುಕುಮಾರ್‌ರವರು ಅಭ್ಯರ್ಥಿ ಶಾರದ ಅಪ್ಪಾಜಿಯವರನ್ನು ಗೆಲ್ಲಿಸುವ ನಿಟ್ಟಿನ ಹೆಚ್ಚಿನ ಆಸಕ್ತಿವಹಿಸಿದ್ದು, ಈಗಾಗಲೇ ಹಲವು ಕಾರ್ಯಕ್ರಮಗಳನ್ನು ತಮ್ಮ ಸ್ವಂತ ಖರ್ಚಿನಲ್ಲಿ ಆಯೋಜಿಸುವಲ್ಲಿ ಯಶಸ್ವಿಯಾಗಿದ್ದಾರೆ. ಚುನಾವಣೆ ಘೋಷಣೆಯಾಗುವಷ್ಟರಲ್ಲಿ ಪಕ್ಷವನ್ನು ಹೆಚ್ಚಿನ ರೀತಿಯಲ್ಲಿ ಸಂಘಟಿಸಲು ಹಗಲಿರುಳು ಶ್ರಮಿಸುತ್ತಿದ್ದು, ಈ ಬೆಳವಣಿಗೆಗಳ ಕುರಿತು ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಹಾಗು ಪಕ್ಷದ ರಾಜ್ಯಾಧ್ಯಕ್ಷ ಸಿ.ಎಂ ಇಬ್ರಾಹಿಂರವರಿಗೆ ಅಭ್ಯರ್ಥಿ ಶಾರದ ಅಪ್ಪಾಜಿ ನೇತೃತ್ವದ ನಿಯೋಗ ಖುದ್ದಾಗಿ ಭೇಟಿ ಮಾಡಿ ಮಾಹಿತಿ ನೀಡಿದೆ.
    ನಿಯೋಗದಲ್ಲಿ ವಿಧಾನಪರಿಷತ್ ಸದಸ್ಯ ಭೋಜೇಗೌಡ, ಪಕ್ಷದ ಯುವ ಘಟಕದ ಜಿಲ್ಲಾಧ್ಯಕ್ಷ ಮಧುಕುಮಾರ್, ತಾಲೂಕು ನಗರ ಅಧ್ಯಕ್ಷ ಆರ್. ಕರುಣಾಮೂರ್ತಿ, ಪಕ್ಷದ ನೂತನ ರಾಜ್ಯ ಕಾರ್ಯದರ್ಶಿ ಜೆ.ಪಿ ಯೋಗೇಶ್, ಭಾಗ್ಯಮ್ಮ, ಸೈಯದ್ ಅಜ್ಮಲ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.  

ಶೀಘ್ರದಲ್ಲಿಯೇ ಪ್ರತಿಷ್ಠಾಪನೆಗೊಳ್ಳಲಿದೆ ಅಂಬೇಡ್ಕರ್ ವೃತ್ತದಲ್ಲಿ ನೂತನ ೧೨ ಅಡಿ ಎತ್ತರದ ಕಂಚಿನ ಪ್ರತಿಮೆ

ಮಹಾರಾಷ್ಟ್ರದ ಗಾರ್ನೆಟ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆ ವತಿಯಿಂದ ೨೮ ಲಕ್ಷ ರು. ವೆಚ್ಚದಲ್ಲಿ ಪ್ರತಿಮೆ ನಿರ್ಮಾಣ

ಭದ್ರಾವತಿಬಿ.ಎಚ್ ರಸ್ತೆ, ಅಂಡರ್ ಬ್ರಿಡ್ಜ್ ಬಳಿ ಭಾರತರತ್ನ, ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಅಂಬೇಡ್ಕರ್‌ರವರ ನೂತನ ೧೨ ಅಡಿ ಎತ್ತರದ ಕಂಚಿನ ಪ್ರತಿಮೆ ಪ್ರತಿಷ್ಠಾಪನೆಗೆ ಸುಮಾರು ೨ ವರ್ಷಗಳ ಹಿಂದೆಯೇ ವೇದಿಕೆ ನಿರ್ಮಿಸಿರುವುದು.
    ಭದ್ರಾವತಿ, ಡಿ. ೨೭: ದಲಿತ ಸಂಘಟನೆಗಳ ಹೋರಾಟದ ಫಲವಾಗಿ ಕೊನೆಗೂ ನಗರದ ಬಿ.ಎಚ್ ರಸ್ತೆ, ಅಂಡರ್ ಬ್ರಿಡ್ಜ್ ಬಳಿ ಭಾರತರತ್ನ, ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಅಂಬೇಡ್ಕರ್‌ರವರ ನೂತನ ೧೨ ಅಡಿ ಎತ್ತರದ ಕಂಚಿನ ಪ್ರತಿಮೆ ಪ್ರತಿಷ್ಠಾಪನೆಗೊಳ್ಳಲಿದೆ.
    ಅಂಡರ್ ಬ್ರಿಡ್ಜ್ ಬಳಿ ಅಂಬೇಡ್ಕರ್‌ರವರ ಪ್ರತಿಮೆ ಪ್ರತಿಸ್ಥಾಪಿಸಬೇಕೆಂದು ಆಗ್ರಹಿಸಿ ದಲಿತಪರ ಸಂಘಟನೆಗಳು ನಿರಂತರವಾಗಿ ಹೋರಾಟ ನಡೆಸಿದ ಹಿನ್ನಲೆಯಲ್ಲಿ ಈ ಹಿಂದೆ ಬಿ.ಎಸ್ ಯಡಿಯೂರಪ್ಪನವರು ಉಪಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಪ್ರತಿಮೆ ಅನಾವರಣಗೊಳಿಸಲಾಗಿತ್ತು. ಆದರೆ ಈ ಪ್ರತಿಮೆ ಕುಬ್ಜ ರೀತಿಯಲ್ಲಿದ್ದು, ಅಂಬೇಡ್ಕರ್‌ರವರಿಗೆ ಅವಮಾನ ಮಾಡುವ ರೀತಿಯಲ್ಲಿ ಕಂಡು ಬರುತ್ತಿದೆ. ಈ ಪ್ರತಿಮೆಯನ್ನು ಬದಲಾಯಿಸಿ ಅಂಬೇಡ್ಕರ್‌ರವರನ್ನು ಹೋಲುವ ಹಾಗು ಸುಂದರವಾಗಿ ಕಾಣುವ ೧೨ ಅಡಿ ಎತ್ತರದ ಕಂಚಿನ ಪ್ರತಿಮೆ ನಿರ್ಮಿಸಬೇಕೆಂಬ ಹೋರಾಟ ಆರಂಭಗೊಂಡಿತು.
    ಶಾಸಕ ಬಿ.ಕೆ ಸಂಗಮೇಶ್ವರ್ ಹಾಗು ಈ ಹಿಂದಿನ ಪೌರಾಯುಕ್ತರಾಗಿದ್ದ ಮನೋಹರ್‌ರವರು ನಗರಸಭೆ ವತಿಯಿಂದ ಪ್ರತಿಮೆ ನಿರ್ಮಿಸಿಕೊಡುವುದಾಗಿ ಭರವಸೆ ನೀಡಿದ್ದರು. ಅದರಂತೆ ಪ್ರತಿಷ್ಠಾಪನೆಗಾಗಿ ಅಂಬೇಡ್ಕರ್ ವೃತ್ತವನ್ನು ನವೀಕರಣಗೊಳಿಸಿ ವೇದಿಕೆ ಸಹ ನಿರ್ಮಿಸಿಕೊಟ್ಟಿದ್ದರು. ಆದರೆ ಪ್ರತಿಮೆ ಮಾತ್ರ ಸುಮಾರು ೨ ವರ್ಷ ಕಳೆದರೂ ಸಹ ಪ್ರತಿಸ್ಥಾಪನೆಗೊಂಡಿಲ್ಲ. ಇದೀಗ ಪ್ರತಿಷ್ಠಾಪನೆಗೆ ಸಿದ್ದತೆಗಳು ನಡೆಯುತ್ತಿದ್ದು, ಮಹಾರಾಷ್ಟ್ರದ ಗಾರ್ನೆಟ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆ ೨೮ ಲಕ್ಷ ರು. ವೆಚ್ಚದಲ್ಲಿ ಪ್ರತಿಮೆ ನಿರ್ಮಿಸಿ ಕೊಡಲು ಮುಂದಾಗಿದೆ.
    ಇಂದಿನ ಪೌರಾಯುಕ್ತ ಮನುಕುಮಾರ್‌ರವರು ಇತ್ತೀಚೆಗೆ ಸಭೆ ನಡೆಸಿ ದಲಿತ ಸಂಘಟನೆಗಳ ಮುಖಂಡರು, ಅಭಿಮಾನಿಗಳು ಹಾಗು ಚುನಾಯಿತ ಪ್ರತಿನಿಧಿಗಳ ಸಲಹೆ, ಸೂಚನೆ ಮೇರೆಗೆ ತೀರ್ಮಾನ ಕೈಗೊಂಡು ೧೨ ಅಡಿ ಎತ್ತರದ ಕಂಚಿನ ಪ್ರತಿಮೆಗೆ ೩೫ ಲಕ್ಷ ರು. ಅಂದಾಜು ವೆಚ್ಚ ತಯಾರಿಸಿ ಟೆಂಡರ್ ಆಹ್ವಾನಿಸಿದ್ದರು. ಟೆಂಡರ್‌ನಲ್ಲಿ ಭಾಗವಹಿಸಿದ್ದ ಗಾರ್ನೆಟ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆ ಕಡಿಮೆ ವೆಚ್ಚದಲ್ಲಿ ಪ್ರತಿಮೆ ನಿರ್ಮಿಸಿ ಕೊಡಲು ಮುಂದೆ ಬಂದಿದೆ.
    ದಲಿತಪರ ಸಂಘಟನೆಗಳು ಶಾಸಕ ಬಿ.ಕೆ.ಸಂಗಮೇಶ್ವರ್, ನಗರಸಭೆ ಅಧ್ಯಕ್ಷೆ ಅನುಸುಧಾ ಮೋಹನ್ ಪಳನಿ, ಉಪಾಧ್ಯಕ್ಷ ಚನ್ನಪ್ಪ, ಮಾಜಿ ಅಧ್ಯಕ್ಷ ಬಿ.ಕೆ ಮೋಹನ್ ಮತ್ತು ಪೌರಾಯುಕ್ತ ಮನುಕುಮಾರ್ ಹಾಗು ಎಲ್ಲಾ ಸದಸ್ಯರಿಗೆ ಕೃತಜ್ಞತೆ ಸಲ್ಲಿಸಿವೆ.  


ಭದ್ರಾವತಿಬಿ.ಎಚ್ ರಸ್ತೆ, ಅಂಡರ್ ಬ್ರಿಡ್ಜ್ ಬಳಿ ಭಾರತರತ್ನ, ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಅಂಬೇಡ್ಕರ್‌ರವರ ನೂತನ ೧೨ ಅಡಿ ಎತ್ತರದ ಕಂಚಿನ ಪ್ರತಿಮೆ ಪ್ರತಿಷ್ಠಾಪನೆಗಾಗಿ ನೀಲ ನಕ್ಷೆ ರಚಿಸಿ ಟೆಂಡರ್ ಆಹ್ವಾನಿಸಿರುವುದು.  

ಕೆಎಸ್‌ಆರ್‌ಟಿಸಿ ಮುಖ್ಯ ಬಸ್ ನಿಲ್ದಾಣ ಸಮೀಪ ಮೃತದೇಹ ಪತ್ತೆ

    ಭದ್ರಾವತಿ, ಡಿ. ೨೭ : ನಗರದ ಕೆಎಸ್‌ಆರ್‌ಟಿಸಿ ಮುಖ್ಯ ಬಸ್ ನಿಲ್ದಾಣದ ಸಮೀಪ ವ್ಯಕ್ತಿಯೋರ್ವನ ಮೃತದೇಹ ಪತ್ತೆಯಾಗಿದ್ದು, ಈ ಸಂಬಂಧ ನ್ಯೂಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
    ಮೃತಪಟ್ಟಿರುವ ವ್ಯಕ್ತಿಯನ್ನು ತಾಲೂಕಿನ ಮತ್ತಿಘಟ್ಟ ಗ್ರಾಮದ ನಿವಾಸಿ ನಂದೀಶ(೨೮) ಎಂದು ಗುರುತಿಸಲಾಗಿದೆ. ಕೆಎಸ್‌ಆರ್‌ಟಿಸಿ ಮುಖ್ಯ ಬಸ್ ನಿಲ್ದಾಣದ ಸಮೀಪದಲ್ಲಿರುವ ಮದ್ಯದಂಗಡಿ ಪಕ್ಕದಲ್ಲಿರುವ ಪಂಕ್ಚರ್ ಅಂಗಡಿ ಮುಂಭಾಗ ಮೃತದೇಹ ಪತ್ತೆಯಾಗಿದೆ. ಈತ ಸೋಮವಾರ ರಾತ್ರಿ ಮೃತಪಟ್ಟಿರಬಹುದು ಎನ್ನಲಾಗಿದೆ. ಮಂಗಳವಾರ ಸ್ಥಳಕ್ಕೆ ಸಂಬಂಧಿಕರು ಆಗಮಿಸಿ ಮೃತದೇಹ ಗುರುತಿಸಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಸಾವಿಗೆ ನಿಖರ ಕಾರಣ ಇನ್ನೂ ತಿಳಿದು ಬಂದಿಲ್ಲ.

ಕಾಡಾ ಅಧ್ಯಕ್ಷೆ ಪವಿತ್ರ ರಾಮಯ್ಯ ತಡಸ ಗ್ರಾಮಕ್ಕೆ ಭೇಟಿ

ಭದ್ರಾವತಿ ತಾಲೂಕಿನ  ತಡಸ ಗ್ರಾಮ ಪಂಚಾಯತಿ ವ್ಯಾಪ್ತಿಯ ರೈತರ ಜಮೀನುಗಳಿಗೆ ಭದ್ರಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರ(ಕಾಡಾ)ದ ಅಧ್ಯಕ್ಷೆ ಕೆ.ಬಿ ಪವಿತ್ರ ರಾಮಯ್ಯ ಭೇಟಿ ನೀಡಿ ಪರಿಶೀಲನೆ ನಡೆಸಿದರು.
    ಭದ್ರಾವತಿ, ಡಿ. ೨೭ :  ತಾಲೂಕಿನ  ತಡಸ ಗ್ರಾಮ ಪಂಚಾಯತಿ ವ್ಯಾಪ್ತಿಯ ರೈತರ ಜಮೀನುಗಳಿಗೆ ಭದ್ರಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರ(ಕಾಡಾ)ದ ಅಧ್ಯಕ್ಷೆ ಕೆ.ಬಿ ಪವಿತ್ರ ರಾಮಯ್ಯ ಭೇಟಿ ನೀಡಿ ಪರಿಶೀಲನೆ ನಡೆಸಿದರು.
    ಜಮೀನುಗಳಿಗೆ ಸಂಪರ್ಕಗೊಂಡಿರುವ ಕಾಲುವೆಗಳು ಮತ್ತು ಜಮೀನು ರಸ್ತೆಗಳನ್ನು ಪರಿಶೀಲಿಸಿ ನಂತರ 'ನಮ್ಮ ಹೊಲ ನಮ್ಮ ರಸ್ತೆ' ಹಾಗೂ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಕಾಮಗಾರಿಗಳನ್ನು ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಿದರು. ತಡಸ ಗ್ರಾಮ ಪಂಚಾಯಿತಿ ಅಧ್ಯಕ್ಷರು ಹಾಗು ಸದಸ್ಯರುಗಳು ಮತ್ತು ಅಭಿವೃದ್ಧಿ ಅಧಿಕಾರಿ ಹಾಗು ಈ ವ್ಯಾಪ್ತಿಯ ರೈತರು ಉಪಸ್ಥಿತರಿದ್ದರು.

Monday, December 26, 2022

ಕುವೆಂಪು ವಿಶ್ವವಿದ್ಯಾನಿಲಯ ನೌಕರರ ಹುದ್ದೆಗಳ ಉನ್ನತೀಕರಣದ ಪರಿನಿಯಮ ಅನುಮೋದನೆಗೆ ಒತ್ತಾಯ

ಕುವೆಂಪು ವಿಶ್ವವಿದ್ಯಾನಿಲಯ ನೌಕರರ ಹುದ್ದೆಗಳ ಉನ್ನತೀಕರಣದ ಪರಿನಿಯಮ ಅನುಮೋದನೆ ಕುರಿತು ಬೆಳಗಾವಿಯ ಸುವರ್ಣಸೌಧದಲ್ಲಿ ಸೋಮವಾರ ಉನ್ನತ ಶಿಕ್ಷಣ ಸಚಿವ ಡಾ. ಅಶ್ವಥ್‌ನಾರಾಯಣ್‌ರವರ ಕಚೇರಿಯಲ್ಲಿ ವಿಧಾನ ಪರಿಷತ್ ಸದಸ್ಯರಾದ ಎಸ್. ರುದ್ರೇಗೌಡ ಹಾಗೂ ಡಿ.ಎಸ್.ಅರುಣ್ ರವರು ಚರ್ಚಿಸಿದರು.
    ಭದ್ರಾವತಿ, ಡಿ. ೨೬: ಕುವೆಂಪು ವಿಶ್ವವಿದ್ಯಾನಿಲಯ ನೌಕರರ ಹುದ್ದೆಗಳ ಉನ್ನತೀಕರಣದ ಪರಿನಿಯಮ DRAFT STATUES GOVERNING THE UPGRADATION AND REORGANIZATION OF THE SANCTIONED MINISTERIAL POSTS IN THE KUVEMPU UNIVERSITY ಅನುಮೋದನೆ ಕುರಿತು ಬೆಳಗಾವಿಯ ಸುವರ್ಣಸೌಧದಲ್ಲಿ ಸೋಮವಾರ ಉನ್ನತ ಶಿಕ್ಷಣ ಸಚಿವ ಡಾ. ಅಶ್ವಥ್‌ನಾರಾಯಣ್‌ರವರ ಕಚೇರಿಯಲ್ಲಿ ವಿಧಾನ ಪರಿಷತ್ ಸದಸ್ಯರಾದ ಎಸ್. ರುದ್ರೇಗೌಡ ಹಾಗೂ ಡಿ.ಎಸ್.ಅರುಣ್ ರವರು ಚರ್ಚಿಸಿದರು.
    ಕುವೆಂಪು ವಿಶ್ವವಿದ್ಯಾನಿಲಯದ ಅಧ್ಯಾಪಕೇತರ ನೌಕರರ ಸಂಘದವರ ಜೊತೆ ಸೇರಿ ಎಸ್. ರುದ್ರೇಗೌಡ ಹಾಗು ಡಿ.ಎಸ್ ಅರುಣ್‌ರವರು ಪರಿನಿಯಮದ ಅನುಮೋದನೆಗೆ ಒತ್ತಾಯಿಸಿದರು.
ಅಧ್ಯಾಪಕೇತರ ನೌಕರರ ಸಂಘದ ಅಧ್ಯಕ್ಷ ಶ್ರೀನಿವಾಸ್ ಪ್ರತಿನಿಧಿಗಳಾದ ಎಂ.ಎಂ ಸ್ವಾಮಿ, ಪಿ. ಮಹೇಶ್, ಡಿ. ಕೃಷ್ಣ ಮತ್ತು ಬಸವರಾಜ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ಸಂಸದ ಬಿ.ವೈ ರಾಘವೇಂದ್ರ, ಎಸ್. ರುದ್ರೇಗೌಡ, ಡಿ.ಎಸ್ ಅರುಣ್, ಪಟ್ಟಾಭಿರಾಮ್ ಜೀರವರಿಗೆ ಸಂಘ ಕೃತಜ್ಞತೆ ಸಲ್ಲಿಸಿದೆ.

ಜಿ. ರಾಜಶೇಖರಪ್ಪ ನಿಧನ

ಜಿ. ರಾಜಶೇಖರಪ್ಪ
    ಭದ್ರಾವತಿ, ಡಿ. ೨೬: ಹಳೇನಗರದ ವೀರಶೈವ ಸೇವಾ ಸಮಾಜದ ಅಧ್ಯಕ್ಷ ಆರ್. ಮಹೇಶ್‌ಕುಮಾರ್‌ರವರ ತಂದೆ ಜಮೀನ್ದಾರ್ ಜಿ. ರಾಜಶೇಖರಪ್ಪ(೯೨) ಸೋಮವಾರ ನಿಧನ ಹೊಂದಿದರು.
    ೩ ಪುತ್ರರು, ೩ ಪುತ್ರಿಯರು, ಅಳಿಯಂದಿರು, ಸೊಸೆಯಂದಿರು ಹಾಗು ಮೊಕ್ಕಳು ಇದ್ದರು. ಇವರ ಅಂತ್ಯಕ್ರಿಯೆ ಸಂಜೆ ವೀರಶೈವ ರುದ್ರಭೂಮಿಯಲ್ಲಿ ನೆರವೇರಿತು. ಇವರ ನಿಧನಕ್ಕೆ ವೀರಶೈವ ಸಮಾಜದ ವಿವಿಧ ಸಂಘಟನೆಗಳ ಪ್ರಮುಖರು ಸಂತಾಪ ಸೂಚಿಸಿದ್ದಾರೆ.