Wednesday, January 4, 2023

ನ್ಯಾಯಾಲಯಕ್ಕೆ ಆಗಮಿಸಿದ್ದ ವ್ಯಕ್ತಿಗೆ ಹೃದಯಾಘಾತ : ನಿಧನ

ಎಂ.ಆರ್ ಗೋಪಾಲಕೃಷ್ಣ
    ಭದ್ರಾವತಿ, ಜ. ೪: ನಗರದ ನ್ಯಾಯಾಲಯಕ್ಕೆ ಪ್ರಕರಣದ ವಿಚಾರಣೆ ಸಂಬಂಧ ಆಗಮಿಸಿದ್ದ ವ್ಯಕ್ತಿಯೋರ್ವರು ಹೃದಯಾಘಾತದಿಂದ ಮೃತಪಟ್ಟಿರುವ ಘಟನೆ ಬುಧವಾರ ನಡೆದಿದೆ.  
    ಶಿವಮೊಗ್ಗ ನಿವಾಸಿ ಎಂ.ಅರ್ ಗೋಪಾಲಕೃಷ್ಣ (೭೨ ) ಮೃತಪಟ್ಟಿದ್ದು, ಪತ್ನಿ ಹಾಗು ಇಬ್ಬರು ಪುತ್ರರು ಇದ್ದರು. ಬೆಳಿಗ್ಗೆ ನ್ಯಾಯಾಧೀಶರ ಕೊಠಡಿ ಹೊರಗೆ ಕುಳಿತು ಕೊಂಡಿದ್ದಾಗ ಏಕಾಏಕಿ ಹೃದಯಾಘಾತ ಸಂಭವಿಸಿದೆ ಎನ್ನಲಾಗಿದೆ.
    ಗೋಪಾಲಕೃಷ್ಣರನ್ನು ತಕ್ಷಣ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಯಿತು. ಪರೀಕ್ಷೆ ನಡೆಸಿದ ವೈದ್ಯರು ಮೃತಪಟ್ಟಿರುವುದು ಖಚಿತ ಪಡಿಸಿದ್ದಾರೆ. ನಂತರ ಮೃತದೇಹವನ್ನು ಶಿವಮೊಗ್ಗಕ್ಕೆ ಕಳುಹಿಸಲಾಯಿತು. ನಗರದ ಆರ್ಯವೈಶ್ಯ ಸಮಾಜ ಸಂತಾಪ ಸೂಚಿಸಿದೆ.
    ಶಿವಮೊಗ್ಗ ಸೋಮಿನಕೊಪ್ಪ ನಿವಾಸಿ ಗೋಪಾಲಕೃಷ್ಣರವರು ಪ್ರಕರಣವೊಂದರ ವಿಚಾರಣೆಗಾಗಿ ಇಲ್ಲಿನ ನ್ಯಾಯಾಲಯಕ್ಕೆ ಆಗಾಗ ಬಂದು ಹೋಗುತ್ತಿದ್ದರು ಎನ್ನಲಾಗಿದೆ.

ಎಮೆರಿಟಸ್ ಪ್ರೊಫೆಸರ್ ಡಾ. ವಿಜಯದೇವಿಗೆ ಅಲ್ಲಮಪ್ರಭು ಪ್ರಶಸ್ತಿ

ಪ್ರೊಫೆಸರ್ ಡಾ. ವಿಜಯದೇವಿ
    ಭದ್ರಾವತಿ, ಜ. ೪ : ನಗರದ ನಿವಾಸಿ, ವಿಜಯಪುರ ಕರ್ನಾಟಕ ರಾಜ್ಯ ಅಕ್ಕ ಮಹಾದೇವಿ ಮಹಿಳಾ ವಿಶ್ವ ವಿದ್ಯಾನಿಲಯದ ನಿವೃತ್ತ ಪ್ರಾಧ್ಯಾಪಕಿ, ಎಮೆರಿಟಸ್ ಪ್ರೊಫೆಸರ್  ಡಾ. ವಿಜಯದೇವಿ ಅವರಿಗೆ ಅಲ್ಲಮಪ್ರಭು ಪ್ರಶಸ್ತಿ ಲಭಿಸಿದೆ.
    ಗುರುಬಸವ ಅಧ್ಯಯನ ಪೀಠ ವತಿಯಿಂದ ಶಿವಮೊಗ್ಗ ಶ್ರೀ ಬೆಕ್ಕಿನಕಲ್ಮಠ ಶ್ರೀ ಗುರುಬಸವ ಭವನದಲ್ಲಿ ಜ.೬ ಮತ್ತು ೭ರಂದು ಎರಡು ದಿನಗಳ ಕಾಲ ಶಿವಮೊಗ್ಗ ಆನಂದಪುರ, ಶ್ರೀ ಬೆಕ್ಕಿನಕಲ್ಮಠ, ಶ್ರೀ ಮುರುಘರಾಜೇಂದ್ರ ಮಹಾಸಂಸ್ಥಾನ ಮಠದ ಡಾ. ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಮಹಾಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ ಹಮ್ಮಿಕೊಳ್ಳಲಾಗಿರುವ ಪರಮ ತಪಸ್ವಿ ಲಿಂಗೈಕ್ಯ ಜಗದ್ಗುರು ಶ್ರೀ ಗುರುಬಸವ ಮಹಾಸ್ವಾಮಿಗಳವರ ೧೧೧ನೇ ಪುಣ್ಯಸ್ಮರಣೋತ್ಸವ, ಶರಣ ಸಾಹಿತ್ಯ ಮತ್ತು ಭಾವೈಕ್ಯ ಸಮ್ಮೇಳನದಲ್ಲಿ ಡಾ. ವಿಜಯದೇವಿಯವರಿಗೆ ಪ್ರಶಸ್ತಿ ಪ್ರದಾನ ನಡೆಯಲಿದೆ.
    ಉಡುಪಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದಂಗಳವರು, ಜಿಲ್ಲಾ ಉಸ್ತುವಾರಿ ಸಚಿವ ಡಾ. ಕೆ.ಸಿ ನಾರಾಯಣಗೌಡ, ಶಾಸಕರಾದ ಕೆ.ಎಸ್ ಈಶ್ವರಪ್ಪ, ಆಯನೂರು ಮಂಜುನಾಥ್, ಡಿ.ಎಸ್ ಅರುಣ್, ಶಿವಮೊಗ್ಗ ಮಹಾನಗರ ಪಾಲಿಕೆ ಮಹಾಪೌರ ಎಸ್. ಶಿವಕುಮಾರ್, ಸದಸ್ಯ ಪ್ರಭಾಕರ್ ಮತ್ತು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್ ಷಡಾಕ್ಷರಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
    ಡಾ. ವಿಜಯದೇವಿಯವರು ಶಿಕ್ಷಣ ಹಾಗು ಸಾಹಿತ್ಯ ಕ್ಷೇತ್ರದಲ್ಲಿ ಅಪಾರವಾದ ಸೇವೆ ಸಲ್ಲಿಸಿದ್ದು, ತಾಲೂಕು ಹಾಗು ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಹಾಗು ಶರಣ ಸಾಹಿತ್ಯ ಸಮ್ಮೇಳನಗಳ ಸರ್ವಾಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಹಲವಾರು ಕೃತಿಗಳನ್ನು ರಚಿಸಿದ್ದಾರೆ.  ಇವರಿಗೆ ಹಲವಾರು ಪ್ರಶಸ್ತಿಗಳು ಲಭಿಸಿವೆ.  ಇದೀಗ ಅಲ್ಲಮಪ್ರಭು ಪ್ರಶಸ್ತಿ ಲಭಿಸಿದೆ. ಇವರಿಗೆ ನಗರದ ವಿವಿಧ ಸಂಘ-ಸಂಸ್ಥೆಗಳು, ಗಣ್ಯರು, ಜನಪ್ರತಿನಿಧಿಗಳು ಅಭಿನಂದನೆ ಸಲ್ಲಿಸಿದ್ದಾರೆ.

Tuesday, January 3, 2023

ಗ್ರಾಮೀಣ ಪ್ರತಿಭೆ ಬಿ.ಎಚ್ ದರ್ಶನ್ ಎತ್ತರ ಜಿಗಿತದಲ್ಲಿ ಬೆಳ್ಳಿ ಪದಕ

ಭದ್ರಾವತಿ ಹೊಸಮನೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿ ಬಿ.ಎಚ್ ದರ್ಶನ್ ಎತ್ತರ ಜಿಗಿತದಲ್ಲಿ ಬೆಳ್ಳಿ ಪದಕ ತಮ್ಮದಾಗಿಸಿಕೊಂಡಿದ್ದಾರೆ.
    ಭದ್ರಾವತಿ, ಜ. ೩: ನಗರದ ಹೊಸಮನೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿ ಬಿ.ಎಚ್ ದರ್ಶನ್ ಎತ್ತರ ಜಿಗಿತದಲ್ಲಿ ಬೆಳ್ಳಿ ಪದಕ ತಮ್ಮದಾಗಿಸಿಕೊಂಡಿದ್ದಾರೆ.
    ಶಿವಮೊಗ್ಗ ನೆಹರು ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದ ಕುವೆಂಪು ವಿಶ್ವವಿದ್ಯಾಲಯ ಅಂತರ ಕಾಲೇಜು ಅಥ್ಲೆಟಿಕ್ಸ್ ಪಂದ್ಯಾವಳಿ ಭಾಗವಹಿಸಿ ಎತ್ತರ ಜಿಗಿತ ಸ್ಪರ್ಧೆಯಲ್ಲಿ ೧.೬೬ ಮೀಟರ್ ಎತ್ತರಕ್ಕೆ ಜಿಗಿಯುವ ಮೂಲಕ ಉತ್ತಮ ಸಾಧನೆ ಮಾಡಿದ್ದು, ಬೆಳ್ಳಿ ಪದಕ ಪಡೆದು ಕಾಲೇಜಿಗೆ ಕೀರ್ತಿ ತಂದಿದ್ದಾರೆ.
ದರ್ಶನ್ ತೃತೀಯ ಬಿ.ಎ ವ್ಯಾಸಂಗ ಮಾಡುತ್ತಿದ್ದು, ತಾಲೂಕಿನ ಗ್ರಾಮೀಣ ಕ್ರೀಡಾ ಪ್ರತಿಭೆಯಾಗಿದ್ದಾರೆ.   
    ಇವರಿಗೆ ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷರಾದ ಶಾಸಕ ಬಿ.ಕೆ ಸಂಗಮೇಶ್ವರ್, ಪ್ರಾಂಶುಪಾಲ ಡಾ. ಬಿ.ಜಿ ಧನಂಜಯ, ದೈಹಿಕ ಶಿಕ್ಷಣ ನಿರ್ದೇಶಕ ಎಂ.ಡಿ ವಿಶ್ವನಾಥ್, ಎಲ್ಲಾ ಅಧ್ಯಾಪಕರು, ಸಿಬ್ಬಂದಿ ವರ್ಗದವರು ಮತ್ತು ವಿದ್ಯಾರ್ಥಿಗಳು ಅಭಿನಂದಿಸಿದ್ದಾರೆ. ಅಲ್ಲದೆ ಮಗನ ಸಾಧನೆಗೆ ತಂದೆ ಹನುಮಂತ ನಾಯ್ಕ ಹಾಗೂ ತಾಯಿ ಗೌರಿಬಾಯಿ, ಬಿಸಿಲುಮನೆ ನಿವಾಸಿಗಳು ಸಂಭ್ರಮ ವ್ಯಕ್ತಪಡಿಸಿದ್ದಾರೆ.

ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ೨ನೇ ಅವಧಿಗೆ ಕೆ. ಸುದೀಪ್‌ಕುಮಾರ್ ಆಯ್ಕೆ

ಭದ್ರಾವತಿ ನಗರಸಭೆಯಲ್ಲಿ ಮಂಗಳವಾರ ನಡೆದ ಸ್ಥಾಯಿ ಸಮಿತಿ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಕೆ. ಸುದೀಪ್‌ಕುಮಾರ್ ಮರು ಆಯ್ಕೆಯಾಗಿದ್ದಾರೆ.
    ಭದ್ರಾವತಿ, ಜ. ೩: ನಗರಸಭೆಯಲ್ಲಿ ಮಂಗಳವಾರ ನಡೆದ ಸ್ಥಾಯಿ ಸಮಿತಿ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಕೆ. ಸುದೀಪ್‌ಕುಮಾರ್ ಮರು ಆಯ್ಕೆಯಾಗಿದ್ದಾರೆ.
    ನಗರಸಭೆಯಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದಿರುವ ಕಾಂಗ್ರೆಸ್ ಅಧ್ಯಕ್ಷ, ಉಪಾಧ್ಯಕ್ಷ ಮತ್ತು ಸ್ಥಾಯಿ ಸಮಿತಿ ಅಧ್ಯಕ್ಷರ ಅಧಿಕಾರವನ್ನು ಒಪ್ಪಂದದಂತೆ ಹಂಚಿಕೆ ಮಾಡಿಕೊಂಡಿದ್ದು, ಮೊದಲ ಅವಧಿಗೆ ಕೆ. ಸುದೀಪ್‌ಕುಮಾರ್ ಆಯ್ಕೆಯಾಗಿದ್ದರು. ೧ ವರ್ಷ ಅವಧಿ ಅಧಿಕಾರ ಹಂಚಿಕೆ ಮಾಡಲಾಗಿತ್ತು. ಅದರಂತೆ ೧ ವರ್ಷ ಅಧಿಕಾರ ನಡೆಸಿ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು. ಈ ಹಿನ್ನಲೆಯಲ್ಲಿ ಚುನಾವಣೆ ನಡೆಯಿತು.
    ಕಾಂಗ್ರೆಸ್ ಪಕ್ಷದ ಸದಸ್ಯರು ಪ್ರಸ್ತುತ ಕ್ಷೇತ್ರದಲ್ಲಿ ರಾಜಕೀಯ ಬೆಳವಣಿಗೆಗಳನ್ನು ಗಮನಸಿ ಕೆ. ಸುದೀಪ್‌ಕುಮಾರ್‌ರವರನ್ನು ೨ನೇ ಅವಧಿಗೂ ಮುಂದುವರೆಸುವುದು ಸೂಕ್ತ ಎಂಬ ತೀರ್ಮಾನ ಕೈಗೊಂಡು ಪುನಃ ೨ನೇ ಅವಧಿಗೂ ಆಯ್ಕೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಅಧ್ಯಕ್ಷ ಸ್ಥಾನಕ್ಕೆ ಜೆಡಿಎಸ್ ಪಕ್ಷದಿಂದ ವಿಜಯರವರು ನಾಮಪತ್ರ ಸಲ್ಲಿಸಿದ್ದರು. ಕೆ. ಸುದೀಪ್‌ಕುಮಾರ್‌ರವರು ೬ ಮತಗಳನ್ನು ಹಾಗು ವಿಜಯರವರು ೫ ಮತಗಳನ್ನು ಪಡೆದುಕೊಂಡಿದ್ದಾರೆ.
    ೨ನೇ ಅವಧಿಗೆ ಆಯ್ಕೆಯಾದ ಸುದೀಪ್‌ಕುಮಾರ್‌ರವರನ್ನು ಅಧ್ಯಕ್ಷೆ ಅನುಸುಧಾ ಮೋಹನ್ ಪಳನಿ, ಉಪಾಧ್ಯಕ್ಷ ಚನ್ನಪ್ಪ ಹಾಗು ಸದಸ್ಯರು, ನಗರಸಭೆ ಅಧಿಕಾರಿಗಳು, ಸಿಬ್ಬಂದಿಗಳು, ಪೌರಕಾರ್ಮಿಕರು ಅಭಿನಂದಿಸಿದ್ದಾರೆ.

ಸಹಾಯಕ ಪ್ರಾಧ್ಯಾಪಕ ಎಂ.ಎಚ್ ವಿದ್ಯಾಶಂಕರ್ ಕರ್ತವ್ಯಕ್ಕೆ ಮರುನಿಯುಕ್ತಿ


ಎಂ.ಎಚ್ ವಿದ್ಯಾಶಂಕರ್
    ಭದ್ರಾವತಿ, ಜ. ೩ : ನಗರದ ನಿವಾಸಿ, ಪ್ರಾಧ್ಯಾಪಕ ಎಂ.ಎಚ್ ವಿದ್ಯಾಶಂಕರ್‌ರವರನ್ನು ಕುವೆಂಪು ವಿಶ್ವವಿದ್ಯಾಲಯದ ಕುಲಪತಿಗಳು ಶಿವಮೊಗ್ಗ ಸಹ್ಯಾದ್ರಿ ವಿಜ್ಞಾನ ಕಾಲೇಜಿನ ಸಹಾಯಕ ಪ್ರಾಧ್ಯಾಪಕರ ಸೇವೆಗೆ ಮರುನಿಯುಕ್ತಿಗೊಳಿಸಿದ್ದಾರೆ.
    ಶಿವಮೊಗ್ಗ ಸಹ್ಯಾದ್ರಿ ವಿಜ್ಞಾನ ಕಾಲೇಜಿನ ಕಂಪ್ಯೂಟರ್ ಸೈನ್ಸ್ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಎಂ.ಎಚ್ ವಿದ್ಯಾಶಂಕರ್‌ರವರು ಕರ್ತವ್ಯ ನಿರ್ವಹಿಸುತ್ತಿದ್ದು, ಉಚ್ಛ ನ್ಯಾಯಾಲಯದ ಮಧ್ಯಂತರ ಆದೇಶದ ಮೇರೆಗೆ ಡಿ.೨೮ರಂದು ಕುಲಪತಿಗಳು ಡಿ.೧೫ರಿಂದ ಜಾರಿಗೆ ಬರುವಂತೆ ಸೇವೆಗೆ ಮರುನಿಯುಕ್ತಿಗೊಳಿಸಿ ಅನುಮೋದಿಸಿದ್ದಾರೆಂದು ವಿಶ್ವವಿದ್ಯಾಲಯದ ಕುಲಸಚಿವರು ಕಛೇರಿ ಆದೇಶದಲ್ಲಿ ತಿಳಿಸಿದ್ದಾರೆ.

ಜೆಡಿಎಸ್ ಪಕ್ಷಕ್ಕೆ ಯುವ ಮುಖಂಡ ಅಮೋಸ್ ಸೇರ್ಪಡೆ

ಭದ್ರಾವತಿ ಕ್ರೈಸ್ತ ಸಮುದಾಯದ ಯುವ ಮುಖಂಡ ಅಮೋಸ್ ಕಾಂಗ್ರೆಸ್ ಪಕ್ಷ ತೊರೆದು ಅಧಿಕೃತವಾಗಿ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ.
    ಭದ್ರಾವತಿ, ಜ. ೩ : ಕ್ರೈಸ್ತ ಸಮುದಾಯದ ಯುವ ಮುಖಂಡ ಅಮೋಸ್ ಕಾಂಗ್ರೆಸ್ ಪಕ್ಷ ತೊರೆದು ಅಧಿಕೃತವಾಗಿ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ.
    ಕಾಂಗ್ರೆಸ್ ಪಕ್ಷದಲ್ಲಿ ರಾಜ್ಯ ವಕ್ತಾರರಾಗಿ ಸೇವೆ ಸಲ್ಲಿಸಿರುವ ಅಮೋಸ್ ಕಡಿಮೆ ಅವಧಿಯಲ್ಲಿ ಹೆಚ್ಚಿನ ಜನಪ್ರಿಯತೆ ಗಳಿಸುವ ಮೂಲಕ ಎಲ್ಲರ ಗಮನ ಸೆಳೆದಿದ್ದರು. ಇದೀಗ ಏಕಾಏಕಿ ಕಾಂಗ್ರೆಸ್ ತೊರೆದಿದ್ದಾರೆ.  
    ತಾಲೂಕಿನ ಅಂತರಗಂಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆ.ಎಚ್ ನಗರದಲ್ಲಿ ಹಮ್ಮಿಕೊಳ್ಳಲಾಗಿದ್ದ ಅಪ್ಪಾಜಿಯ ಋಣಾನುಬಂಧ ಕಾರ್ಯಕ್ರಮದಲ್ಲಿ ಅಮೋಸ್ ತಮ್ಮ ಬೆಂಬಲಿಗರೊಂದಿಗೆ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಶಾರದ ಅಪ್ಪಾಜಿಯವರ ಸಮ್ಮುಖದಲ್ಲಿ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಗೊಂಡರು.
    ಜೆಡಿಎಸ್ ಪಕ್ಷದ ಪ್ರಮುಖರಾದ ಜೆ.ಪಿ ಯೋಗೇಶ್, ಆರ್. ಕರುಣಾಮೂರ್ತಿ, ಮಧುಕುಮಾರ್, ಎಂ.ಎ ಅಜಿತ್, ಧರ್ಮೇಗೌಡ, ಆನಂದ್, ಲಕ್ಷ್ಮೀದೇವಿ, ಜಯರಾಂ ಗೊಂದಿ, ಧರ್ಮರಾಜ್, ಮುರ್ತುಜಾಖಾನ್, ಎಚ್.ಬಿ ರವಿಕುಮಾರ್, ಉಮೇಶ್ ಸೇರಿದಂತೆ ಇನ್ನಿತರ ಮುಖಂಡರುಗಳು ಉಪಸ್ಥಿತರಿದ್ದರು.  

ಜಯಂತಿ ಸ್ಟೋರ್ ಮಾಲೀಕ ಆನಂದ್ ಕುಮಾರ್ ನಿಧನ

ಆನಂದ್ ಕುಮಾರ್
    ಭದ್ರಾವತಿ, ಜ. ೩ : ನಗರದ ಸಿ.ಎನ್ ರಸ್ತೆ ಜಯಂತಿ ಸ್ಟೋರ‍್ಸ್ ಮಾಲೀಕ, ಮಾಜಿ ಶಾಸಕ ದಿವಂಗತ ಎಂ.ಜೆ ಅಪ್ಪಾಜಿ ಬೆಂಬಲಿಗ ಆನಂದ್ ಕುಮಾರ್(೫೦) ಸೋಮವಾರ ಬೆಳಿಗ್ಗೆ ನಿಧನ ಹೊಂದಿದರು.
    ಪತ್ನಿ, ಓರ್ವ ಪುತ್ರ ಇದ್ದರು. ಜೈನ ಸಮಾಜದ ಮುಖಂಡರಾದ ಆನಂದಕುಮಾರ್ ಭದ್ರಾವತಿ ನಗರದಲ್ಲಿಯೇ ಹುಟ್ಟಿ ಬೆಳೆದಿದ್ದು, ಕಳೆದ ಸುಮಾರು ೨ ವರ್ಷಗಳಿಂದ ಗುಜರಾತ್ ಅಹಮದಬಾದ್‌ನಲ್ಲಿ ವಾಸಿಸುತ್ತಿದ್ದರು. ಇವರ ನಿಧನಕ್ಕೆ ಜೆಡಿಎಸ್ ಹಾಗು ಕಾಂಗ್ರೆಸ್ ಪಕ್ಷದ ಮುಖಂಡರು, ಜೈನ ಸಮಾಜದ ಪ್ರಮುಖರು ಸಂತಾಪ ಸೂಚಿಸಿದ್ದಾರೆ.