Friday, February 10, 2023

ನ್ಯಾಷನಲ್ ಲೆವೆಲ್ ಕರಾಟೆ ಚಾಂಪಿಯನ್ ಶಿಪ್ ಪಂದ್ಯಾವಳಿಯಲ್ಲಿ ವಿಮರ್ಶ ಸಿ.ಎಂ ಕವಾಡ್ ತೃತೀಯ ಸ್ಥಾನ

ಭದ್ರಾವತಿ ಹಳೇನಗರದ ಬಸವೇಶ್ವರ ವೃತ್ತದ ಸಮೀಪದಲ್ಲಿರುವ ಶ್ರೀ ಕನಕ ವಿದ್ಯಾ ಸಂಸ್ಥೆ ೩ನೇ ತರಗತಿ ವಿದ್ಯಾರ್ಥಿನಿ ವಿಮರ್ಶ ಸಿ.ಎಂ ಕವಾಡ್ ನ್ಯಾಷನಲ್ ಲೆವೆಲ್ ಕರಾಟೆ ಚಾಂಪಿಯನ್ ಶಿಪ್ ಪಂದ್ಯಾವಳಿಯಲ್ಲಿ ಭಾಗವಹಿಸಿ ತೃತೀಯ ಸ್ಥಾನಪಡೆದು ಕೊಂಡಿದ್ದಾಳೆ.
    ಭದ್ರಾವತಿ, ಫೆ. ೧೦ :  ಕರಾಟೆ ಇಂಡಿಯಾ ಆರ್ಗನೈಸೇಷನ್ ಹಾಗೂ ಏಷಿಯನ್ ಕರಾಟೆ ಫೆಡರೇಷನ್/ ವರ್ಡ್ ಕರಾಟೆ ಫೆಡರೇಷನ್ ವತಿಯಿಂದ ಆಯೋಜಿಸಲಾಗಿದ್ದ ಮೈಸೂರು ಓಪನ್ ನ್ಯಾಷನಲ್ ಲೆವೆಲ್ ಕರಾಟೆ ಚಾಂಪಿಯನ್ ಶಿಪ್ ಪಂದ್ಯಾವಳಿಯಲ್ಲಿ ಹಳೇನಗರದ ಬಸವೇಶ್ವರ ವೃತ್ತದ ಸಮೀಪದಲ್ಲಿರುವ ಶ್ರೀ ಕನಕ ವಿದ್ಯಾ ಸಂಸ್ಥೆ ೩ನೇ ತರಗತಿ ವಿದ್ಯಾರ್ಥಿನಿ ವಿಮರ್ಶ ಸಿ.ಎಂ ಕವಾಡ್ ಭಾಗವಹಿಸಿ ತೃತೀಯ ಸ್ಥಾನಪಡೆದು ಕೊಂಡಿದ್ದಾಳೆ.
    ಮೈಸೂರಿನ ಸೇಂಟ್ ಫಿಲೋಮಿನಾಸ್ ಕಾಲೇಜ್ ಇಂಡೋರ್ ಸ್ಟೇಡಿಯಂನಲ್ಲಿ ಆಯೋಜಿಸಲಾಗಿದ್ದ ಪಂದ್ಯಾವಳಿಯಲ್ಲಿ ೩ನೇ ಸ್ಥಾನ ಪಡೆದುಕೊಂಡು  ರಾಜ್ಯಕ್ಕೆ ಹಾಗೂ ಶಾಲೆಗೆ ಕೀರ್ತಿ ತಂದಿದ್ದಾಳೆ. ಈ ವಿದ್ಯಾರ್ಥಿನಿ ಇದೆ ವಿದ್ಯಾಸಂಸ್ಥೆಯ ಮುಖ್ಯೋಪಾಧ್ಯಾಯ ಸಿ.ಡಿ ಮಂಜುನಾಥ್‌ರವರ ಪುತ್ರಿಯಾಗಿದ್ದು, ಈ ವಿದ್ಯಾರ್ಥಿಯನ್ನು  ಶಾಲೆಯ ಆಡಳಿತ ಮಂಡಳಿ ಹಾಗೂ ಶಿಕ್ಷಕರು ಅಭಿನಂದಿಸಿದ್ದಾರೆ. 

ಅಕ್ರಮ ಮದ್ಯ ಮಾರಾಟ : ದಾಳಿ


    ಭದ್ರಾವತಿ, ಫೆ. ೧೦: ನಗರದ ಹೊಸ ಸಿದ್ದಾಪುರದ-ನಂಜಾಪುರ ರಸ್ತೆಯಲ್ಲಿರುವ ಹೋಟೆಲ್ ಮೇಲೆ ನ್ಯೂಟೌನ್ ಪೊಲೀಸರು ದಾಳಿ ನಡೆಸಿ ಅಕ್ರಮ ಮದ್ಯ ವಶಪಡಿಸಿಕೊಂಡಿರುವ ಘಟನೆ ನಡೆದಿದೆ.
    ಈ ವ್ಯಾಪ್ತಿಯಲ್ಲಿ ಬೀಟ್ ಗಸ್ತಿನಲ್ಲಿದ್ದ  ಸಿ.ಎಚ್.ಸಿ ಗಂಗಾಧರ್‌ರವರಿಗೆ ಬಂದ ಖಚಿತ ಮಾಹಿತಿ ಮೇರೆಗೆ ಗುರುವಾರ ಮಧ್ಯಾಹ್ನ ಠಾಣಾಧಿಕಾರಿ ರಂಗನಾಥ ಅಂತರಗಟ್ಟಿರವರ ಮಾರ್ಗದರ್ಶನದಲ್ಲಿ ಪೊಲೀಸರು ಶಿವಕುಮಾರ್ ಎಂಬುವರ ಹೋಟೆಲ್ ಮೇಲೆ ದಾಳಿ ನಡೆಸಿದ್ದು, ಒಟ್ಟು ಸುಮಾರು ರು.೭೦೨ ರು. ಮೌಲ್ಯದ ಅಕ್ರಮ ಮದ್ಯ ವಶಪಡಿಸಿಕೊಂಡು ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಗೋ ಮಾಂಸ ಸಾಗಾಟ ಆರೋಪ : ಓರ್ವನ ಮೇಲೆ ಹಲ್ಲೆ

    ಭದ್ರಾವತಿ, ಫೆ. ೧೦: ನಗರದ ಕಂಚಿಬಾಗಿಲು ವೃತ್ತದಲ್ಲಿ ಓರ್ವನ ಮೇಲೆ ಹಲ್ಲೆ ನಡೆಸಲಾಗಿದ್ದು, ಈ ಸಂಬಂಧ ಹಳೇನಗರ ಪೊಲೀಸ್ ಠಾಣೆ ಪ್ರಕರಣ ದಾಖಲಾಗಿದೆ.
    ಅನ್ವರ್ ಕಾಲೋನಿ ಖಲಂದರ್ ನಗರದ ನಿವಾಸಿ ರಹಮಾನ್ ಎಂಬಾತ ಗೋ ಮಾಂಸ ತೆಗೆದುಕೊಂಡು ಹೋಗುತ್ತಿದ್ದಾನೆಂದು ಆರೋಪಿಸಿ ಆತನ ಮೇಲೆ ಹಲ್ಲೆ ನಡೆಸಲಾಗಿದ್ದು, ಈ ನಡುವೆ ರಹಮಾನ್ ವಿರುದ್ಧ ಪ್ರಕರಣ ದಾಖಲಾಗಿದೆ. ಹಲ್ಲೆಗೊಳಗಾಗಿರುವ ರಹಮಾನ್ ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಈತನ ಹೇಳಿಕೆ ಆಧರಿಸಿ ಹಲ್ಲೆ ನಡೆಸಿದವರ ವಿರುದ್ಧ ಪ್ರಕರಣ ದಾಖಲಾಗಬೇಕಿದೆ ಎನ್ನಲಾಗಿದೆ.

ಜೆಡಿಎಸ್ ಪಕ್ಷದ ರಾಜ್ಯ ವಕ್ತಾರರಾಗಿ ಅಮೋಸ್

 


   ಭದ್ರಾವತಿ, ಫೆ. ೧೦: ಕ್ರೈಸ್ತ ಸಮಾಜದ ಯುವ ಮುಖಂಡ, ಅಂಜನೇಯ ಅಗ್ರಹಾರ ನಿವಾಸಿ ಅಮೋಸ್‌ರನ್ನು ಜೆಡಿಎಸ್ ಪಕ್ಷದ ರಾಜ್ಯ ವಕ್ತಾರರಾಗಿ ನೇಮಕಗೊಳಿಸಲಾಗಿದೆ. 

   ಪಕ್ಷದ ರಾಜ್ಯಾಧ್ಯಕ್ಷ ಸಿ.ಎಂ ಇಬ್ರಾಹಿಂ ನೇಮಕ ಆದೇಶ ಹೊರಡಿಸಿದ್ದು, ಜೆಡಿಎಸ್ ಪಕ್ಷದ ಸರ್ಕಾರದ ಸಾಧನೆಗಳು ಹಾಗು ಪಕ್ಷದ ಕಾರ್ಯಕ್ರಮಗಳ ಕುರಿತು ಸುದ್ದಿ ಮಾಧ್ಯಮಗಳಲ್ಲಿ ಸಾರ್ವಜನಿಕರಿಗೆ ಪರಿಣಾಮಕಾರಿಯಾಗಿ ತಲುಪಿಸುವ ಮೂಲಕ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಳ್ಳುವಂತೆ ಸೂಚಿಸಿದ್ದಾರೆ. 
ಅಮೋಸ್‌ರವರು ಈ ಹಿಂದೆ ಕಾಂಗ್ರೆಸ್ ಪಕ್ಷದ ರಾಜ್ಯ ವಕ್ತಾರರಾಗಿ ಸಹ ಕಾರ್ಯನಿರ್ವಹಿಸಿದ್ದರು. ಇತ್ತೀಚೆಗೆ ಕಾಂಗ್ರೆಸ್ ತೊರೆದು ಜೆಡಿಎಸ್ ಸೇರ್ಪಡೆಗೊಂಡಿದ್ದರು.  ಇವರನ್ನು ಜೆಡಿಎಸ್ ಪಕ್ಷದ ಸ್ಥಳೀಯ ಮುಖಂಡರು, ಕ್ರೈಸ್ತ ಸಮಾಜದ ಪ್ರಮುಖರು, ಸ್ನೇಹಿತರು ಅಭಿನಂದಿಸಿದ್ದಾರೆ. 

Thursday, February 9, 2023

ಜೂಜಾಟ ನೋಡುತ್ತಿದ್ದವನ ಮೇಲೆ ಹಲ್ಲೆನಡೆಸಿ ಹತ್ಯೆ

ಹತ್ಯೆಯಾದ ವೆಂಕಟೇಶ್
    ಭದ್ರಾವತಿ, ಫೆ. ೯ : ಜೂಜಾಟ ನೋಡುತ್ತಿದ್ದ ಕೂಲಿ ಕಾರ್ಮಿಕನೋರ್ವ ತೀವ್ರ ಹಲ್ಲೆಗೊಳಗಾಗಿ ಹತ್ಯೆಯಾಗಿರುವ ಘಟನೆ ತಾಲೂಕಿನ ರಂಗನಾಥಪುರದಲ್ಲಿ ನಡೆದಿದೆ.
    ಗ್ರಾಮದ ನಿವಾಸಿ ವೆಂಕಟೇಶ್( ೩೫ ) ಹತ್ಯೆಯಾಗಿದ್ದು, ಈತನಿಗೆ ಮದುವೆಯಾಗಿ ಎರಡು ಮಕ್ಕಳಿದ್ದಾರೆ. ಪತ್ನಿ ಹೋಟೆಲ್ ಒಂದರಲ್ಲಿ ಕೂಲಿ ಕೆಲಸ ಮಾಡುತ್ತಿದ್ದಾರೆ. ಬುಧವಾರ ಗ್ರಾಮದ ಗಣಪತಿ ಪೆಂಡಾಲ್ ಬಳಿ ಚೌಕಾಬಾರ ಆಡುತ್ತಿದ್ದ ವೇಳೆ ಆಟವನ್ನು ನೋಡುತ್ತಿದ್ದ ವೆಂಟಕೇಶ್ ಮೇಲೆ ಅದೇ ಗ್ರಾಮದ ಪ್ರದೀಪ್ ಕಳೆದ ೧೫ ದಿನಗಳ ಹಿಂದೆ ಹಣಕಾಸಿನ ವಿಚಾರದಲ್ಲಿ ನಡೆದ ಗಲಾಟೆ ವಿಚಾರವನ್ನು ಪ್ರಸ್ತಾಪಿಸಿ ಹಲ್ಲೆಗೆ ಯತ್ನಿಸಿದ್ದು, ಈ ಸಂದರ್ಭದಲ್ಲಿ ಅಲ್ಲಿದ್ದವರು ಇಬ್ಬರನ್ನು ಸಮಾಧಾನಪಡಿಸಿ ಮನೆಗೆ ಕಳುಹಿಸಿದ್ದಾರೆ.
    ವೆಂಕಟೇಶ್ ಮನೆ ಬಳಿ ಫೋನ್‌ನಲ್ಲಿ ಮಾತಾಡುತ್ತಿದ್ದ ವೇಳೆ ಪ್ರದೀಪ್ ಹಾಗು ಈತನ ತಂದೆ ಚಂದ್ರಣ್ಣ ಮತ್ತು ತಾಯಿ ಪ್ರೇಮ ದೊಣ್ಣೆ ತೆಗೆದುಕೊಂಡು ಬಂದು ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.
    ವೆಂಕಟೇಶ್ ತಲೆಗೆ ಹೆಚ್ಚಿನ ಗಾಯವಾಗಿದ್ದು, ಸ್ಥಳದಲ್ಲಿಯೇ ಕುಸಿದು ಬಿದ್ದಿದ್ದಾನೆ. ತಕ್ಷಣ ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆ ಹಾಗು ಖಾಸಗಿ ಆಸ್ಪತ್ರೆಗಳಿಗೆ ದಾಖಲಿಸಿ ಕೊನೆಗೆ ಹಳೇನಗರದ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಗೆ ಕರೆತರಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗಿದೆ ಗುರುವಾರ ಮೃತಪಟ್ಟಿದ್ದಾನೆ.
ಗ್ರಾಮದಲ್ಲಿ ಜೂಜಾಟ ಹೆಚ್ಚಾಗಿದ್ದು, ಕೊಲೆಗೆ ಜೂಜಾಟವೇ ಕಾರಣವಾಗಿದೆ. ಗ್ರಾಮದಲ್ಲಿರುವ ಮದ್ಯದಂಗಡಿ ತೆರವುಗೊಳಿಸಿ ಜೂಜಾಟ ಕಡಿವಾಣ ಹಾಕಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.  ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಸ್ತುತ ಪೊಲೀಸರು ಪ್ರದೀಪ್‌ನನ್ನು ಬಂಧಿಸಿದ್ದು, ಮುಂದಿನ ಕ್ರಮ ಕೈಗೊಂಡಿದ್ದಾರೆ.

೨೨ದಿನ ಪೂರೈಸಿದ ವಿಐಎಸ್‌ಎಲ್ ಗುತ್ತಿಗೆ ಕಾರ್ಮಿಕರ ಹೋರಾಟ : ಕರಪತ್ರ ವಿತರಿಸಿ ಹೋರಾಟ ಬೆಂಬಲಿಸಲು ಮನವಿ

ಕೇಂದ್ರ ಉಕ್ಕು ಪ್ರಾಧಿಕಾರದ ಭದ್ರಾವತಿ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಮುಚ್ಚುವ ಆದೇಶದ ವಿರುದ್ಧ ಗುತ್ತಿಗೆ ಕಾರ್ಮಿಕರು ಕಾರ್ಖಾನೆ ಮುಂಭಾಗ ನಡೆಸುತ್ತಿರುವ ಅನಿರ್ಧಿಷ್ಟಾವಧಿ ಹೋರಾಟ ಗುರುವಾರ ೨೨ನೇ ದಿನ ಪೂರೈಸಿತು. ಈ ನಡುವೆ ಗುತ್ತಿಗೆ ಕಾರ್ಮಿಕರು ಹೋರಾಟ ತೀವ್ರಗೊಳಿಸಿದ್ದು, ಸಂಜೆ ಜನ್ನಾಪುರ, ಹುತ್ತಾಕಾಲೋನಿ ಸೇರಿದಂತೆ ವಿವಿಧೆಡೆ ಜಾಥಾ ನಡೆಸಿ ಕರಪತ್ರಗಳನ್ನು ವಿತರಿಸಿದರು. 
    ಭದ್ರಾವತಿ, ಫೆ. ೯ : ಕೇಂದ್ರ ಉಕ್ಕು ಪ್ರಾಧಿಕಾರದ ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಮುಚ್ಚುವ ಆದೇಶದ ವಿರುದ್ಧ ಗುತ್ತಿಗೆ ಕಾರ್ಮಿಕರು ಕಾರ್ಖಾನೆ ಮುಂಭಾಗ ನಡೆಸುತ್ತಿರುವ ಅನಿರ್ಧಿಷ್ಟಾವಧಿ ಹೋರಾಟ ಗುರುವಾರ ೨೨ನೇ ದಿನ ಪೂರೈಸಿತು. ಈ ನಡುವೆ ಗುತ್ತಿಗೆ ಕಾರ್ಮಿಕರು ಹೋರಾಟ ತೀವ್ರಗೊಳಿಸಿದ್ದು, ಸಂಜೆ ಜನ್ನಾಪುರ, ಹುತ್ತಾಕಾಲೋನಿ ಸೇರಿದಂತೆ ವಿವಿಧೆಡೆ ಜಾಥಾ ನಡೆಸಿ ಕರಪತ್ರಗಳನ್ನು ವಿತರಿಸಿದರು.
    ಮೈಸೂರು ಮಹಾರಾಜರು ಹಾಗು ಸರ್.ಎಂ ವಿಶ್ವೇಶ್ವರಾಯನವರ ಪರಿಶ್ರಮದ ಫಲವಾಗಿ ನಿರ್ಮಾಣಗೊಂಡು ಶತಮಾನ ಪೂರೈಸಿರುವ ಕಾರ್ಖಾನೆಯನ್ನು ಉಳಿಸಿಕೊಳ್ಳಲು ನಡೆಸುತ್ತಿರುವ ನಮ್ಮ ಹೋರಾಟಕ್ಕೆ ನಾಗರೀಕರು ಸಹ ಬೆಂಬಲಿಸುವಂತೆ ಕರಪತ್ರಗಳನ್ನು ವಿತರಿಸಿ ಮನವಿ ಮಾಡಲಾಯಿತು.
ಹೋರಾಟ ಸ್ಥಳದಿಂದ ಆರಂಭಗೊಂಡ ಜಾಥಾ ಜಯಶ್ರೀ ವೃತ್ತ ಮೂಲಕ ನಂದಿನಿ ವೃತ್ತ ತಲುಪಿ ವಾಣಿಜ್ಯ ರಸ್ತೆಯಲ್ಲಿ ಸಾಗಿ, ಹುತ್ತಾ ಕಾಲೋನಿಯಲ್ಲಿ ಸಂಚರಿಸಿತು. ಲೋಯರ್ ಹುತ್ತಾ ಮೂಲಕ ಬಿ.ಎಚ್ ರಸ್ತೆಯಲ್ಲಿ ಸಾಗಿ ಡಬ್ಬಲ್ ರಸ್ತೆ ಮೂಲಕ ಪುನಃ ಹೋರಾಟ ಸ್ಥಳಕ್ಕೆ ಬಂದು ತಲುಪಿತು. ಗುತ್ತಿಗೆ ಕಾರ್ಮಿಕ ಸಂಘಟನೆಗಳ ಪ್ರಮುಖರು, ಗುತ್ತಿಗೆ ಕಾರ್ಮಿಕರು, ಮಹಿಳೆಯರು ಜಾಥಾದಲ್ಲಿ ಪಾಲ್ಗೊಂಡಿದ್ದರು.
    ಫೆ.೧೧ರಂದು ಎಎಪಿ ರಾಜ್ಯಾಧ್ಯಕ್ಷ ಪೃಥ್ವಿರೆಡ್ಡಿ ಆಗಮನ:
    ೨೨ನೇ ದಿನದ ಹೋರಾಟಕ್ಕೆ ಆಮ್ ಆದ್ಮಿ ಪಾರ್ಟಿ ಬೆಂಬಲ ಸೂಚಿಸಿದ್ದು, ಹೋರಾಟ ಸ್ಥಳಕ್ಕೆ ಆಗಮಿಸಿದ್ದ ಜಿಲ್ಲಾ ಪ್ರಮುಖರು ಗುತ್ತಿಗೆ ಕಾರ್ಮಿಕರು ನಡೆಸುತ್ತಿರುವ ಹೋರಾಟಕ್ಕೆ ಎಲ್ಲಾ ರೀತಿಯ ಸಹಕಾರ ನೀಡಲು ಬದ್ಧವಾಗಿದ್ದೇವೆ. ಫೆ.೧೧ರಂದು ಪಕ್ಷದ ರಾಜ್ಯಾಧ್ಯಕ್ಷರಾದ ಪೃಥ್ವಿರೆಡ್ಡಿ ಆಗಮಿಸಲಿದ್ದಾರೆ ಎಂದರು.

ಫೆ.೧೨ರಂದು ಅವಧೂತರು-ಒಂದು ಅವಲೋಕನ

    ಭದ್ರಾವತಿ, ಫೆ. ೯ : ಸಿದ್ದಾರೂಢನಗರದ ಸಂಸ್ಕೃತಿ ಸೌರಭ ವತಿಯಿಂದ ಫೆ.೧೨ರಂದು ಸಂಜೆ ೬ ಗಂಟೆಗೆ ನ್ಯೂಟೌನ್ ಶ್ರೀ ದತ್ತಮಂದಿರದಲ್ಲಿ ಆಧ್ಯಾತ್ಮ ಸೌರಭ ಅವಧೂತರು-ಒಂದು ಅವಲೋಕನ(ಅವಧೂತ ಸ್ಥಿತಿ ಮತ್ತು ಅಜ್ಞಾನ ಅವಧೂತರು ಕುರಿತ ಚಿಂತನ ಕಾರ್ಯಕ್ರಮ) ಹಮ್ಮಿಕೊಳ್ಳಲಾಗಿದೆ.
    ಚಿತ್ರದುರ್ಗ ಹಿರಿಯೂರಿನ ಸಾಹಿತಿ, ಶ್ರೀ ದತ್ತ ಆರಾಧಕರಾದ ಕಣಜನಹಳ್ಳಿ ನಾಗರಾಜ್ ಉಪನ್ಯಾಸ ನೀಡಲಿದ್ದು, ಸಂಸ್ಕೃತಿ ಸೌರಭ ಅಧ್ಯಕ್ಷ ಎಚ್.ಎನ್ ಸುಬ್ರಹ್ಮಣ್ಯ ಅಧ್ಯಕ್ಷತೆ ವಹಿಸಲಿದ್ದಾರೆ. ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಗೊಳಿಸಲು ಕೋರಲಾಗಿದೆ.