Wednesday, February 15, 2023

ಖಾಸಗಿ ಹಣಕಾಸು ಸಂಸ್ಥೆ ಸಿಬ್ಬಂದಿಯಿಂದ ಲಕ್ಷಾಂತರ ರು. ಹಣ ಕಬಳಿಕೆ

    ಭದ್ರಾವತಿ, ಫೆ. ೧೫ : ಖಾಸಗಿ ಹಣಕಾಸು ಸಂಸ್ಥೆಯ ಉದ್ಯೋಗಿಯೊಬ್ಬ ಲಕ್ಷಾಂತರ ರು. ಹಣ ಕಬಳಿಸಿರುವ ಘಟನೆ ಬೆಳಕಿಗೆ ಬಂದಿದ್ದು, ಈ ಸಂಬಂಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
    ಸಿದ್ದರೂಢ ನಗರದ ಭಾರತ್ ಪೈನಾನ್ಸಿಯಲ್ ಇನ್ ಕ್ಲೋಷನ್ ಲಿಮಿಟೆಡ್ ಸಿಬ್ಬಂದಿ ದಿನೇಶ್ ಸುಮಾರು ೩,೭೦,೧೪೪ ರು. ಕಬಳಿಸಿದ್ದು, ಸುಮಾರು ೧ ವರ್ಷದಿಂದ ದಿನೇಶ್ ಸಂಸ್ಥೆಯಿಂದ ಸಾಲ ನೀಡಿದಂತಹ ಒಟ್ಟು ೨೫ ಮಹಿಳಾ ಸಂಘಗಳ ಹಣಕಾಸಿನ ವ್ಯವಹಾರ ನೋಡಿಕೊಳ್ಳುತ್ತಿದ್ದನು. ಹಣವನ್ನು ಸಂಗ್ರಹಿಸಿ ಸಂಸ್ಥೆಯ ಖಾತೆಗೆ ಜಮಾ ಮಾಡುತ್ತಿದ್ದನು. ಲೆಕ್ಕ ಪರಿಶೋಧನೆ ಸಂದರ್ಭದಲ್ಲಿ ಒಟ್ಟು ೩,೭೦,೧೪೪ ರು. ವ್ಯತ್ಯಾಸ ಕಂಡುಬಂದಿದ್ದು, ಹಣದ ಬಗ್ಗೆ ಈತನನ್ನು ವಿಚಾರ ಮಾಡಿದಾಗ ಹಣ ಸ್ವಂತಕ್ಕೆ ಬಳಸಿಕೊಂಡಿರುತ್ತೆನೆಂದು ಹಾಗೂ  ೨೦ ದಿನಗಳಲ್ಲಿ ಹಣ ಜಮಾ ಮಾಡುವುದಾಗಿ ತಿಳಿಸಿದ್ದು, ಆದರೆ ಒಟ್ಟು ೨,೨೩,೮೭೫ ರು. ಹಣ ಬಾಕಿ ಉಳಿಸಿಕೊಂಡಿದ್ದು, ಈ ಹಿನ್ನಲೆಯಲ್ಲಿ ಸಂಸ್ಥೆಯ ವ್ಯವಸ್ಥಾಪಕ ಬಸವರಾಜ್‌ಎಂಬುವರು ಹಳೇನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ವಿಐಎಸ್‌ಎಲ್ ಉಳಿಸಲು ವಿಧಾನಸಭೆಯಲ್ಲಿ ಒತ್ತಡ ಹೇರಿದ ಶಾಸಕ ಸಂಗಮೇಶ್ವರ್

ವಿಐಎಸ್‌ಎಲ್ ಉಳಿಸಿಕೊಳ್ಳಲು ಸರ್ಕಾರ ಬದ್ಧ : ಸಚಿವ ಮಾಧುಸ್ವಾಮಿ

ಬೆಂಗಳೂರು/ಭದ್ರಾವತಿ, ಫೆ. ೧೫: ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಿ ವಿಐಎಸ್'ಎಲ್ ಕಾರ್ಖಾನೆಯನ್ನು ರಾಜ್ಯ ಸರ್ಕಾರದ ಸುಪರ್ದಿಗೆ ಪಡೆದು, ಪುನಶ್ಚೇತನಗೊಳಿಸಬೇಕೆಂದು ಶಾಸಕ ಬಿ.ಕೆ. ಸಂಗಮೇಶ್ವರ್ ಅವರು ಒತ್ತಾಯಿಸಿದರು.
    ವಿಧಾನಸಭೆ ಅಧಿವೇಶನದಲ್ಲಿ ಮಾತನಾಡಿದ ಅವರು, ಕಾರ್ಖಾನೆಯ ಅಭಿವೃದ್ಧಿ, ಉದ್ಯೋಗ ಸೃಷ್ಠಿ ಹಾಗೂ ಸಮಗ್ರ ಭದ್ರತೆಗಾಗಿ ಹಿಂದೆ ಕೇಂದ್ರ ಸರ್ಕಾರಕ್ಕೆ ವಹಿಸಿಕೊಡಲಾಗಿತ್ತು. ಆದರೆ, ವಿಶ್ವೇಶ್ವರಯ್ಯನವರ ದೂರದೃಷ್ಟಿಯಿಂದ ನಿರ್ಮಿತವಾದ ಈ ಕಾರ್ಖಾನೆಯನ್ನು ಕೇಂದ್ರ ಸರ್ಕಾರ ಮುಚ್ಚಲು ಮುಂದಾಗಿರುವುದು ಖಂಡನೀಯ ವಿಚಾರ. ಹೀಗಾಗಿ, ಕೇಂದ್ರದ ಮೇಲೆ ಒತ್ತಡ ಹೇರಿ ಕಾರ್ಖಾನೆಯನ್ನು ರಾಜ್ಯ ಸರ್ಕಾರದ ಸುಪರ್ದಿಗೆ  ಹಿಂಪಡೆದು, ಬಂಡವಾಳ ತೊಡಗಿಸಬೇಕು ಎಂದು ಒತ್ತಡ ಹೇರಿದರು.
    ವಿಐಎಸ್‌ಎಲ್ ಕಾರ್ಖಾನೆ ಕೇವಲ ಭದ್ರಾವತಿಯ ಆಸ್ತಿಯಲ್ಲ. ಇದು ನಾಡಿನ ಜನರ ಹಾಗೂ ಸರ್ಕಾರದ ಆಸ್ತಿಯಾಗಿದೆ. ಹೀಗಾಗಿ, ರಾಜ್ಯದ ೨೪೪ ಶಾಸಕರೂ ಸಹ ಕಾರ್ಖಾನೆ ಉಳಿಸಲು ಬೆಂಬಲ ನೀಡಬೇಕು. ಒಟ್ಟಾಗಿ ಸೇರಿ ಸರ್ಕಾರದ ಮೂಲಕ ಒಂದು ನಿರ್ಣಯ ಕೈಗೊಂಡು, ಕೇಂದ್ರದ ಮೇಲೆ ಒತ್ತಡ ಹೇರಬೇಕು. ಆ ಮೂಲಕ ಕಾರ್ಖಾನೆಯನ್ನು ಕೇಂದ್ರದಿಂದ ರಾಜ್ಯ ಸರ್ಕಾರದ ಸುಪರ್ದಿಗೆ ಪಡೆದು, ಉತ್ಪಾದನೆಯನ್ನು ಮುಂದುವರೆಸಬೇಕೆಂದು ಆಗ್ರಹಿಸಿದರು.
    ವಿಐಎಸ್‌ಎಲ್ ಉಳಿಸುವ ಆಶಯ ನಮಗೂ ಇದೆ : ಬಿ.ಎಸ್ ಯಡಿಯೂರಪ್ಪ
     ವಿಐಎಸ್‌ಎಲ್ ಕಾರ್ಖಾನೆ ಉಳಿಸುವ ಆಶಯ ನಮಗೂ ಸಹ ಇದ್ದು, ಇದಕ್ಕಾಗಿ ಕೇಂದ್ರದ ಮೇಲೆ ಒತ್ತಡ ಹೇರಲು ಎಲ್ಲರೂ  ಸಹಕಾರ ನೀಡಬೇಕು ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದರು.
ವಿಐಎಸ್‌ಎಲ್ ಕಾರ್ಖಾನೆ ಉಳಿಸಿಕೊಳ್ಳಲೇಬೇಕಿದೆ. ಇದಕ್ಕಾಗಿ ಎಲ್ಲಾ ಪ್ರಯತ್ನಗಳನ್ನು ಸಹ ನಾವು ಮಾಡಿದ್ದೇವೆ. ಸದ್ಯ ಕೇಂದ್ರ ಸರ್ಕಾರ ಕೈಗೊಂಡಿರುವ ಸ್ಥಗಿತದ ನಿರ್ಧಾರ ಬದಲಿಸಿ, ಕಾರ್ಖಾನೆಯನ್ನು ಮುಚ್ಚದೇ ಮುಂದುವೆರೆಸಿಕೊಂಡು ಹೋಗಲು ಮನವೊಲಿಸಬೇಕಿದೆ. ಇದಕ್ಕಾಗಿ ಎಲ್ಲರ ಸಹಕಾರ ಪಡೆದು ರಾಜ್ಯ ಸರ್ಕಾರ ನಿರ್ಣಯ ಕೈಗೊಂಡು ಕೇಂದ್ರದ ಮೇಲೆ ಒತ್ತಡ ಹಾಕಬೇಕಿದೆ ಎಂದರು.
    ವಿಐಎಸ್‌ಎಲ್ ಮುಚ್ಚುವ ನಿರ್ಧಾರಕ್ಕೆ : ಯು.ಟಿ. ಖಾದರ್, ಪ್ರಿಯಾಂಕ್ ಖರ್ಗೆ ವಾಗ್ದಾಳಿ
ವಿಐಎಸ್‌ಎಲ್ ಕಾರ್ಖಾನೆ ಮುಚ್ಚುವ ಕೇಂದ್ರ ಸರ್ಕಾರದ ನಿರ್ಧಾರ ಖಂಡನೀಯವಾಗಿದ್ದು, ಕಾರ್ಖಾನೆಯನ್ನು ರಾಜ್ಯ ಸರ್ಕಾರವೇ ವಹಿಸಿಕೊಳ್ಳಬೇಕು ಎಂದು ಕಾಂಗ್ರೆಸ್ ನಾಯಕರು ಒತ್ತಡ ಹೇರಿದರು.
    ವಿಐಎಸ್‌ಎಲ್ ಕುರಿತಾಗಿ ಶಾಸಕ ಬಿ.ಕೆ. ಸಂಗಮೇಶ್ವರ್ ಅವರು ಪ್ರಸ್ತಾಪಿಸದ ವೇಳೆ ಮಾತನಾಡಿದ ಯು.ಟಿ. ಖಾದರ್, ಕಾರ್ಖಾನೆಯನ್ನು ಮುಚ್ಚುವ ನಿರ್ಧಾರವನ್ನು ನಾವು ಬಲವಾಗಿ ಖಂಡಿಸುತ್ತೇವೆ. ನಿರ್ಣಯ ಕೈಗೊಂಡು, ಕೇಂದ್ರದ ಮೇಲೆ ಒತ್ತಡ ಹೇರಿ, ಕಾರ್ಖಾನೆಯನ್ನು ರಾಜ್ಯ ಸರ್ಕಾರವೇ ವಹಿಸಿಕೊಳ್ಳಬೇಕು. ರಾಜ್ಯದಿಂದಲೇ ಬಂಡವಾಳ ಹೂಡಿ, ಮರುಸ್ಥಾಪಿಸಿ, ಉತ್ಪಾದನೆಯನ್ನು ಮುಂದುವರೆಸಬೇಕು ಎಂದು ಆಗ್ರಹಿಸಿದರು.
    ಜಿಂದಾಲ್ ಸೇರಿದಂತೆ ಖಾಸಗಿ ಸ್ಟೀಲ್ ಕಂಪೆನಿಗಳಿಗೆ ಸಹಾಯ ಮಾಡುವ ಉದ್ದೇಶದಿಂದ ವಿಐಎಸ್‌ಎಲ್ ಕಾರ್ಖಾನೆ ಮುಚ್ಚುವ ನಿರ್ಧಾರ ಸರ್ಕಾರ ಕೈಗೊಂಡಿದೆ. ಇದು ಅತ್ಯಂತ ಖಂಡನೀಯವಾಗಿದ್ದು, ಇದನ್ನು ಬದಲಾವಣೆ ಮಾಡಬೇಕು ಎಂದು ಮನವಿ ಮಾಡಿದರು.
    ಈ ವೇಳೆ ಮಾತನಾಡಿದ ಶಾಸಕ ಪ್ರಿಯಾಂಕ್ ಖರ್ಗೆ, ಕಾರ್ಖಾನೆಯನ್ನು ಮುಚ್ಚುವುದಿಲ್ಲ ಎಂದು ರಾಜ್ಯ ಸರ್ಕಾರ ಹೇಳುತ್ತದೆ. ಆದರೆ, ಕಾರ್ಖಾನೆಯನ್ನು ಮುಚ್ಚಲಾಗುತ್ತದೆ ಎಂದು ಕೇಂದ್ರ ಸಚಿವ ಜ್ಯೋತಿರಾರಾಧ್ಯ ಸಿಂಧ್ಯಾ ಅವರು ಲೋಕಸಭೆಯಲ್ಲಿ ಹೇಳಿದ್ದಾರೆ. ಯಾವುದನ್ನು ನಂಬಬೇಕು. ಈ ಕುರಿತಂತೆ ರಾಜ್ಯ ಸರ್ಕಾರ ಒಂದು ಮಹತ್ವದ ನಿರ್ಣಯ ಕೈಗೊಂಡು ಕಾರ್ಖಾನೆಯನ್ನು ಉಳಿಸಬೇಕು ಎಂದು ಆಗ್ರಹಿಸಿದರು.
    ಸಚಿವ ಮಾಧುಸ್ವಾಮಿ ವಿಧಾನಸಭೆಯಲ್ಲಿ ಮಹತ್ವದ ಹೇಳಿಕೆ
    ವಿಐಎಸ್‌ಎಲ್ ಒಂದು ಪ್ರತಿಷ್ಠಿತ ಕಾರ್ಖಾನೆಯಾಗಿದ್ದು, ಎಲ್ಲ ಪ್ರಯತ್ನ ಮಾಡಿ ಇದನ್ನು ಉಳಿಸಿಕೊಳ್ಳುತ್ತೇವೆ ಎಂದು ಸಚಿವ ಮಾಧುಸ್ವಾಮಿ ಹೇಳಿದರು.
    ವಿಐಎಸ್‌ಎಲ್ ಉಳಿಸಲು ನಿರ್ಣಯ ಕೈಗೊಳ್ಳುವಂತೆ ಶಾಸಕ ಬಿ.ಕೆ. ಸಂಗಮೇಶ್ವರ್ ಅವರು ಪ್ರಸ್ತಾಪಿಸಿದ ವಿಚಾರಕ್ಕೆ ವಿಧಾನಸಭೆಯಲ್ಲಿ ಸಚಿವರು ಉತ್ತರ ನೀಡಿದರು.
    ವಿಐಎಸ್‌ಎಲ್ ಪ್ರತಿಷ್ಠಿತ ಕಂಪೆನಿಯಗಿದ್ದು, ಸರ್ಕಾರ ಇದರ ಪರವಾಗಿದೆ. ಶಾಸಕ ಬಿ.ಕೆ. ಸಂಗಮೇಶ್ವರ್ ಹಾಗೂ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರ ಆಶಯವೂ ಸಹ ಕಾರ್ಖಾನೆ ಉಳಿಸುವುದಾಗಿದೆ. ಸರ್ಕಾರ ಇದರ ಪರವಾಗಿದ್ದು, ಎಲ್ಲ ಪ್ರಯತ್ನ ಮಾಡಿ ಶ್ರಮ ವಹಿಸಿ ಉಳಿಸಿಕೊಳ್ಳುತ್ತೇವೆ ಎಂದರು.
    ವಿಐಎಸ್‌ಎಲ್‌ಗಾಗಿ ನನ್ನದೇ ಕ್ಷೇತ್ರದಲ್ಲಿ ನಾಲ್ಕು ಎಕರೆ ಮೈನಿಂಗ್ ಜಾಗ ನೀಡಲಾಗಿದ್ದು, ಸರ್ಕಾರ ಇವರ ಸಂಪರ್ಕದಲ್ಲಿದೆ. ಹೇಗಾದರೂ ಮಾಡಿ ಕಾರ್ಖಾನೆಯನ್ನು ಉಳಿಸಿಕೊಂಡು, ಮುಂದುವರೆಸಿಕೊಂಡು ಹೋಗಬೇಕು ಎಂಬುದು ನಮ್ಮ ಅಪೇಕ್ಷೆಯಾಗಿದೆ ಎಂದರು.

ಜೆಡಿಎಸ್ ಪರಿಶಿಷ್ಟ ಪಂಗಡದ ಅಧ್ಯಕ್ಷರಾಗಿ ಬಸವರಾಜ್ ಬಿ. ಆನೇಕೊಪ್ಪ

ಭದ್ರಾವತಿ ವಿಧಾನಸಭಾ ಕ್ಷೇತ್ರದ ಜಾತ್ಯತೀತ ಜನತಾದಳ ಪರಿಶಿಷ್ಟ ಪಂಗಡ ಅಧ್ಯಕ್ಷರಾಗಿ ನಗರಸಭಾ ಸದಸ್ಯ ಬಸವರಾಜ್ ಬಿ. ಆನೆಕೊಪ್ಪ ನೇಮಕಗೊಂಡಿದ್ದಾರೆ.
    ಭದ್ರಾವತಿ, ಫೆ. ೧೫ :  ವಿಧಾನಸಭಾ ಕ್ಷೇತ್ರದ ಜಾತ್ಯತೀತ ಜನತಾದಳ ಪರಿಶಿಷ್ಟ ಪಂಗಡ ಅಧ್ಯಕ್ಷರಾಗಿ ನಗರಸಭಾ ಸದಸ್ಯ ಬಸವರಾಜ್ ಬಿ. ಆನೆಕೊಪ್ಪ ನೇಮಕಗೊಂಡಿದ್ದಾರೆ.
    ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಶಾರದಾ ಅಪ್ಪಾಜಿಯವರ ನಿರ್ದೇಶನದ ಮೇರೆಗೆ ಜಿಲ್ಲಾ ಪರಿಶಿಷ್ಟ ಪಂಗಡ ವಿಭಾಗದ ಅಧ್ಯಕ್ಷ ಎಚ್.ಆರ್ ಹನುಮಂತಪ್ಪ ಬಸವರಾಜ್ ಬಿ. ಆನೆಕೊಪ್ಪರವನ್ನು ನೇಮಕಗೊಳಿಸಿ ಆದೇಶ ಹೊರಡಿಸಿದ್ದು, ಪಕ್ಷದ ತತ್ವ, ಸಿದ್ದಾಂತಗಳಿಗೆ ಬದ್ಧರಾಗಿ ಸಂಘಟನೆಯಲ್ಲಿ ತೊಡಗಿಸಿಕೊಳ್ಳುವಂತೆ ಸೂಚಿಸಿದ್ದಾರೆ.
    ಪಕ್ಷದ ನಗರ ಘಟಕದ ಅಧ್ಯಕ್ಷ ಆರ್. ಕರುಣಾಮೂರ್ತಿ, ಜಿಲ್ಲಾ ಪರಿಶಿಷ್ಟ ಪಂಗಡ ವಿಭಾಗದ ಉಪಾಧ್ಯಕ್ಷ ಶಿವಕುಮಾರ್, ಪರಿಶಿಷ್ಟ ಜಾತಿ ವಿಭಾಗದ ತಾಲೂಕು ಅಧ್ಯಕ್ಷ ಮೈಲಾರಪ್ಪ, ಪ್ರಧಾನ ಕಾರ್ಯದರ್ಶಿ ವೆಂಕಟೇಶ್ ಉಜ್ಜನಿಪುರ, ನಗರಸಭೆ ಮಾಜಿ ಅಧ್ಯಕ್ಷೆ ವಿಶಾಲಾಕ್ಷಿ, ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಎಚ್.ಬಿ ರವಿಕುಮಾರ್, ಮಾಜಿ ಸದಸ್ಯ ಆನಂದ್, ಮುಖಂಡರಾದ ಚಂದ್ರಣ್ಣ, ಉಮೇಶ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
    ಪರಿಶಿಷ್ಟ ಪಂಗಡದ ಅಧ್ಯಕ್ಷರಾಗಿ ನೇಮಕಗೊಳ್ಳಲು ಕಾರಣಕರ್ತರಾದ ಶಾರದ ಅಪ್ಪಾಜಿ, ಯುವ ಮುಖಂಡ ಎಂ.ಎ ಅಜಿತ್ ಹಾಗು ಪಕ್ಷದ ಜಿಲ್ಲಾ ಹಾಗು ತಾಲೂಕು ಮುಖಂಡರಿಗೆ ಬಸವರಾಜ್ ಬಿ. ಆನೇಕೊಪ್ಪ ಕೃತಜ್ಞತೆ ಸಲ್ಲಿಸಿದ್ದಾರೆ.

Tuesday, February 14, 2023

ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಹಣ ಕಳೆದುಕೊಂಡ ಮಹಿಳೆ : ಹಣ ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದ ಸಿಬ್ಬಂದಿ

ಭದ್ರಾವತಿಯಲ್ಲಿ  ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಪ್ರಯಾಣಿಸುವಾಗ ಸುಮಾರು ೩೦,೦೦೦ ಹಣ ಕಳೆದುಕೊಂಡಿದ್ದ ಮಹಿಳೆಗೆ ಪುನಃ ಹಣ ಹಿಂದಿರುಗಿಸುವ ಮೂಲಕ ಪ್ರಾಮಾಣಿಕತೆ ಮೆರೆದಿರುವ ಘಟನೆ ನಡೆದಿದೆ.
    ಭದ್ರಾವತಿ, ಫೆ. ೧೪ : ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಪ್ರಯಾಣಿಸುವಾಗ ಸುಮಾರು ೩೦,೦೦೦ ಹಣ ಕಳೆದುಕೊಂಡಿದ್ದ ಮಹಿಳೆಗೆ ಪುನಃ ಹಣ ಹಿಂದಿರುಗಿಸುವ ಮೂಲಕ ಪ್ರಾಮಾಣಿಕತೆ ಮೆರೆದಿರುವ ಘಟನೆ ನಡೆದಿದೆ.
    ತಾಲೂಕಿನ ಕಾಡಿನಂಚಿನಲ್ಲಿರುವ ಬಂಡಿಗುಡ್ಡ ಗ್ರಾಮಕ್ಕೆ ತೆರಳುವ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಆಯಿಷಮ್ಮ ಎಂಬ ಮುಸ್ಲಿಂ ಮಹಿಳೆಯೊಬ್ಬರು ಬಂಡಿಗುಡ್ಡದಿಂದ ನಗರಕ್ಕೆ ಪ್ರಯಾಣ ಬೆಳೆಸಿದ್ದು, ಈ ಅವಧಿಯಲ್ಲಿ ಸುಮಾರು ೩೦,೦೦೦ ರು. ನಗದು ಹಣ ಕಳೆದುಕೊಂಡಿದ್ದಾರೆ. ಕಳೆದುಕೊಂಡ ಹಣ ಬಸ್‌ನಲ್ಲಿಯೇ ನಿರ್ವಾಹಕ ರವಿ ಅವರಿಗೆ ಪತ್ತೆಯಾಗಿದ್ದು, ಹಣ ಕಳೆದುಕೊಂಡ ಮಹಿಳೆಯನ್ನು ಪತ್ತೆ ಮಾಡಿ ನಗರದ ಮುಖ್ಯಬಸ್ ನಿಲ್ದಾಣದಲ್ಲಿ ಸರ್.ಎಂ ವಿಶ್ವೇಶ್ವರಾಯನವರ ಪ್ರತಿಮೆ ಬಳಿ ನಿರ್ವಾಹಕ ರವಿ, ಚಾಲಕ ರಾಜು ಮತ್ತು ಸಂಚಾರಿ ನಿಯಂತ್ರಕ ಪುರುಷೋತ್ತಮ್ ಹಣ ಹಿಂದಿರುಗಿಸಿದರು. ಪ್ರಾಮಾಣಿಕತೆ ಮೆರೆದಿರುವ ಸಿಬ್ಬಂದಿ ವರ್ಗವನ್ನು ಕೆಎಸ್‌ಆರ್‌ಟಿಸಿ ಭದ್ರಾವತಿ ಘಟಕ ಅಭಿನಂದಿಸಿದೆ.

ದೆಹಲಿ ಮಟ್ಟದಲ್ಲಿ ಹೋರಾಟಕ್ಕೆ ಯುವ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಕರೆ

ಫೆ.೧೫ರಂದು ಕ್ರೈಸ್ತರ ಬೆಂಬಲ : ಭದ್ರಾವತಿ.ಕಾಂ (bhadravathi.com)  ಅಂತರ್ಜಾಲದ ಮೂಲಕ ಹೋರಾಟ



ಭದ್ರಾವತಿ ವಿಐಎಸ್‌ಎಲ್ ಕಾರ್ಖಾನೆ ಉಳಿವಿಗಾಗಿ ಬಿ.ಎಸ್ ದಯಾನಂದ್‌ರವರು ಭದ್ರಾವತಿಯಿಂದ ಬೆಂಗಳೂರಿಗೆ ಹಮ್ಮಿಕೊಂಡಿದ್ದ ಪಾದಯಾತ್ರೆಗೆ ಮಂಗಳವಾರ ಬೆಂಗಳೂರಿನಲ್ಲಿ ಗುತ್ತಿಗೆ ಕಾರ್ಮಿಕರು ಬೆಂಬಲ ಸೂಚಿಸಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಯುವ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಬಿ.ವಿ ಶ್ರೀನಿವಾಸ್ ಮತ್ತು ಶಾಸಕ ಬಿ.ಕೆ ಸಂಗಮೇಶ್ವರ್ ಸಹ ಬೆಂಬಲ ಸೂಚಿಸುವ ಜೊತೆಗೆ ಮುಂದಿನ ಹೋರಾಟಕ್ಕೆ ಕರೆ ನೀಡಿದರು.
    ಭದ್ರಾವತಿ: ವಿಐಎಸ್‌ಎಲ್ ಕಾರ್ಖಾನೆ ಉಳಿವಿಗಾಗಿ ಬಿ.ಎಸ್ ದಯಾನಂದ್‌ರವರು ಭದ್ರಾವತಿಯಿಂದ ಬೆಂಗಳೂರಿಗೆ ಹಮ್ಮಿಕೊಂಡಿದ್ದ ಪಾದಯಾತ್ರೆಗೆ ಮಂಗಳವಾರ ಬೆಂಗಳೂರಿನಲ್ಲಿ ಗುತ್ತಿಗೆ ಕಾರ್ಮಿಕರು ಬೆಂಬಲ ಸೂಚಿಸಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
    ಯುವ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಬಿ.ವಿ ಶ್ರೀನಿವಾಸ್ ಮತ್ತು ಶಾಸಕ ಬಿ.ಕೆ ಸಂಗಮೇಶ್ವರ್ ಸಹ ಬೆಂಬಲ ಸೂಚಿಸುವ ಜೊತೆಗೆ ಮುಂದಿನ ಹೋರಾಟಕ್ಕೆ ಕರೆ ನೀಡಿದರು. ಬಿ.ವಿ ಶ್ರೀನಿವಾಸ್‌ರವರು ಮುಂದಿನ ಹೋರಾಟ ದೆಹಲಿ ಮಟ್ಟದಲ್ಲಿ ನಡೆಯಬೇಕು. ಇದಕ್ಕೆ ಎಲ್ಲಾ ರೀತಿಯ ಸಹಕಾರ ನೀಡಲು ಬದ್ಧವಾಗಿದ್ದೇನೆ ಎಂದರು.
    ಕಾರ್ಮಿಕ ಸಂಘದ ಮಾಜಿ ಅಧ್ಯಕ್ಷ ಜೆ.ಎನ್ ಚಂದ್ರಹಾಸ ಕೇಂದ್ರ ಸರ್ಕಾರ ಹಾಗು ಉಕ್ಕು ಪ್ರಾಧಿಕಾರದ ಕಾರ್ಮಿಕ ವಿರೋಧಿ ನೀತಿಗಳನ್ನು ಬಿ.ವಿ ಶ್ರೀನಿವಾಸ್‌ರವರಿಗೆ ವಿವರಿಸಿದರು.  ಶಾಸಕ ಬಿ.ಕೆ ಸಂಗಮೇಶ್ವರ್ ಕಾರ್ಖಾನೆ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಹೋರಾಟಕ್ಕೆ ಇನ್ನೂ ಹೆಚ್ಚಿನ ಸಹಕಾರ ನೀಡುವುದಾಗಿ ಭರವಸೆ ನೀಡಿದರು.
    ಗುತ್ತಿಗೆ ಕಾರ್ಮಿಕರ ಹೋರಾಟಕ್ಕೆ ಫೆ.೧೫ರಂದು ಕ್ರೈಸ್ತರ ಬೆಂಬಲ:
    ಕಾರ್ಖಾನೆ ಮುಚ್ಚುವ ಆದೇಶದ ವಿರುದ್ಧ ಗುತ್ತಿಗೆ ಕಾರ್ಮಿಕರು ನಡೆಸುತ್ತಿರುವ ಹೋರಾಟಕ್ಕೆ ನಗರದ ಎಲ್ಲಾ ಕ್ರೈಸ್ತ ಸಭೆಗಳು ಮತ್ತು ಸಂಘ-ಸಂಸ್ಥೆಗಳು ಬೆಂಬಲ ಸೂಚಿಸಿಫೆ.೧೫ರಂದು ಸಂಜೆ ೬ ಗಂಟೆ ಕ್ಯಾಂಡಲ್ ಹಿಡಿದು ಪ್ರತಿಭಟನೆ ನಡೆಸಲಿವೆ.
    ಈ ಪ್ರತಿಭಟನೆಯಲ್ಲಿ ನಗರದ ಎಲ್ಲಾ ಕ್ರೈಸ್ತ ಸಮುದಾಯದವರು ಸೇರಿದಂತೆ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸುವಂತೆ ಸೆಲ್ವರಾಜ್ ಕೋರಿದ್ದಾರೆ.
    ಭದ್ರಾವತಿ.ಕಾಂ (bhadravathi.com)  ಅಂತರ್ಜಾಲದ ಮೂಲಕ ಹೋರಾಟ :
    ವಿಐಎಸ್‌ಎಲ್ ಕಾರ್ಖಾನೆ ಉಳಿವಿಗಾಗಿ ಹಲವು ರೀತಿಯ ಹೋರಾಟಗಳು ಆರಂಭಗೊಂಡಿದ್ದು, ಇದೀತ ಅಂತರ್ಜಾಲ ಸಮರ್ಪಕವಾಗಿ ಬಳಸಿಕೊಂಡು ಹೋರಾಟ ಮಾಡಲು ಯುವ ಸಮುದಾಯ ಮುಂದಾಗಿದೆ.
    ಭದ್ರಾವತಿ ಉಳಿಸಿ ವಿಐಎಸ್‌ಎಲ್-ಎಂಪಿಎಂ ಚಳುವಳಿ ಎಂಬ ಶೀರ್ಷಿಕೆಯಡಿ ಹೋರಾಟ ಆರಂಭಗೊಂಡಿದ್ದು, ಅಂತರ್ಜಾಲದಲ್ಲಿ ಆಂಗ್ಲ ಮತ್ತು ಕನ್ನಡ ಎರಡು ಭಾಷೆಯಲ್ಲಿ ಚಳುವಳಿ ಆರಂಭಿಸಲಾಗಿದೆ. ಈ ಹೋರಾಟಕ್ಕೆ ಈಗಾಗಲೇ ೧೪೫ ಮಂದಿ ಬೆಂಬಲಿಸಿದ್ದಾರೆ.
ಚಳುವಳಿಯಲ್ಲಿ ಪಾಲ್ಗೊಳ್ಳುವವರು ನೇರವಾಗಿ bhadravathi.com ವಿಳಾಸಕ್ಕೆ ತೆರಳಿ ಬೆಂಬಲ ಮತ್ತು ವಿರೋಧಿಸುತ್ತಾರೆ. ಈ ಎರಡು ಆಯ್ಕೆಗಳಲ್ಲಿ ಯಾವುದಾದರೂ ಒಂದು ಆಯ್ಕೆ ಮಾಡುವ ಮೂಲಕ ಯಶಸ್ವಿಗೊಳಿಸುವಂತೆ ಕೋರಲಾಗಿದೆ.


ಭದ್ರಾವತಿ ಉಳಿಸಿ ವಿಐಎಸ್‌ಎಲ್-ಎಂಪಿಎಂ ಚಳುವಳಿ ಎಂಬ ಶೀರ್ಷಿಕೆಯಡಿ ಹೋರಾಟ ಆರಂಭಗೊಂಡಿದ್ದು, ಅಂತರ್ಜಾಲದಲ್ಲಿ ಆಂಗ್ಲ ಮತ್ತು ಕನ್ನಡ ಎರಡು ಭಾಷೆಯಲ್ಲಿ ಚಳುವಳಿ ಆರಂಭಿಸಲಾಗಿದೆ. ಈ ಹೋರಾಟಕ್ಕೆ ಈಗಾಗಲೇ ೧೪೫ ಮಂದಿ ಬೆಂಬಲಿಸಿದ್ದಾರೆ.

ವಿಐಎಸ್‌ಎಲ್ ಉಳಿಸಲು ಬೆಂಗಳೂರಿಗೆ ಯುವಕನ ಪಾದಯಾತ್ರೆ : ಪ್ರತಿಭಟನೆ

ಭದ್ರಾವತಿ ವಿಐಎಸ್‌ಎಲ್ ಕಾರ್ಖಾನೆ ಉಳಿವಿಗಾಗಿ ಬಿ.ಎಸ್ ದಯಾನಂದ್‌ರವರು ಭದ್ರಾವತಿಯಿಂದ ಬೆಂಗಳೂರಿಗೆ ಹಮ್ಮಿಕೊಂಡಿದ್ದ ಪಾದಯಾತ್ರೆಗೆ ಮಂಗಳವಾರ ಬೆಂಗಳೂರಿನಲ್ಲಿ ಗುತ್ತಿಗೆ ಕಾರ್ಮಿಕರು ಬೆಂಬಲ ಸೂಚಿಸಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
    ಭದ್ರಾವತಿ, ಫೆ. ೧೪ : ವಿಶ್ವೇಶ್ವರಾಯ ಉಕ್ಕಿನ ಮತ್ತು ಕಬ್ಬಿಣ ಕಾರ್ಖಾನೆ  ಮುಚ್ಚುವ ನಿರ್ಧಾರ ಕೈಬಿಟ್ಟು, ಪುನಶ್ಚೇತನಗೊಳಿಸಬೇಕೆಂದು ಒತ್ತಾಯಿಸಿ ನಗರದ ಯುವಕನೊಬ್ಬ ಬೆಂಗಳೂರಿಗೆ ಪಾದಯಾತ್ರೆ ಕೈಗೊಳ್ಳುವಲ್ಲಿ ಯಶಸ್ವಿಯಾಗಿದ್ದು, ಮಂಗಳವಾರ ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆಯೊಂದಿಗೆ ಪಾದಯಾತ್ರೆ ಮುಕ್ತಾಯಗೊಂಡಿದೆ.


    ನಗರದ ರೈಲ್ವೆ ನಿಲ್ದಾಣದ ಬಳಿ ಅಂಗಡಿ ಹೊಂದಿರುವ ಬಿ.ಎಸ್ ದಯಾನಂದ್ ಎಂಬ ಯುವಕ ಭದ್ರಾವತಿಗೆ ಬಂದು ನೆಲೆಸಿ ಕೇವಲ ೫-೬ ವರ್ಷಗಳಾಗಿವೆ. ಆದರೆ, ಉಕ್ಕಿನ ನಗರಿ ತನಗೆ ನೆಲೆಸಲು ಜಾಗ, ಅನ್ನ, ನೀರು ನೀಡಿ ಸಲುಹಿದೆ. ಇಂತಹ ನಗರ ಉಳಿಯಬೇಕು ಎಂದರೆ ವಿಐಎಸ್‌ಎಲ್ ಹಾಗೂ ಎಂಪಿಎಂ ಕಾರ್ಖಾನೆ ಉಳಿಯಬೇಕು. ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಲಕ್ಷಾಂತರ ಮಂದಿಯ ಜೀವನಕ್ಕೆ ಆಧಾರವಾಗಿರುವ ವಿಐಎಸ್‌ಎಲ್ ಕಾರ್ಖಾನೆ ಮುಚ್ಚುವುದರಿಂದ ಎಷ್ಟೋ ಕುಟುಂಬಗಳ ಜೀವನ ನಾಶವಾಗಲಿದೆ. ಹೀಗಾಗಿ, ಕಾರ್ಖಾನೆ ಮುಚ್ಚುವ ನಿರ್ಧಾರ ಕೈಬಿಟ್ಟು, ಅಗತ್ಯ ಬಂಡವಾಳ ತೊಡಗಿಸಿ ಗತವೈಭವ ಮರುಕಳಿಸುವಂತೆ ಕ್ರಮ ಕೈಗೊಳ್ಳಬೇಕೆಂಬ ಬೇಡಿಕೆಯೊಂದಿಗೆ ದಯಾನಂದ್ ಪಾದಯಾತ್ರೆ ಆರಂಭಿಸಿದ್ದರು.
    ಮೂಲತಃ ಶ್ರವಣಬೆಳಗೊಳದವರಾದ ದಯಾನಂದ್ ಫೆ.೧ರಂದು ಪಾದಯಾತ್ರೆ ಆರಂಭಿಸಿ ಮೊದಲು ಜಿಲ್ಲಾಧಿಕಾರಿಗಳ ಕಛೇರಿವರೆಗೂ ತೆರೆಳಿ ಮನವಿ ಸಲ್ಲಿಸಿದ್ದರು. ನಂತರ ಫೆ.೭ರಿಂದ ಬೆಂಗಳೂರಿಗೆ ಪಾದಯಾತ್ರೆ ಆರಂಭಿಸಿ ೧೪ರ ಮಂಗಳವಾರ ತಲುಪಿದ್ದು, ಇವರಿಗೆ ಪ್ರೀಡಂ ಪಾರ್ಕಿನಲ್ಲಿ ಗುತ್ತಿಗೆ ಕಾರ್ಮಿಕರು ಬೆಂಬಲ ಸೂಚಿಸಿ ಪ್ರತಿಭಟನೆಯಲ್ಲಿ ಪಾಲ್ಗೊಂಡು ಸರ್ಕಾರಕ್ಕೆ ಮನವಿ ಸಲ್ಲಿಸಿದರು.
    ಕಾರ್ಖಾನೆಗೆ ಡಿಸಿ ಮತ್ತು ಎಸ್‌ಪಿ ಭೇಟಿ : ಪರಿಶೀಲನೆ
    ಕೇಂದ್ರ ಸಚಿವರು ಕಾರ್ಖಾನೆ ಮುಚ್ಚುವ ಕುರಿತು ಸ್ಪಷ್ಟಪಡಿಸಿರುವ ಹಿನ್ನಲೆಯಲ್ಲಿ ಜಿಲ್ಲಾಧಿಕಾರಿ ಡಾ. ಸೆಲ್ವಮಣಿ ಮತ್ತು ಜಿಲ್ಲಾ ರಕ್ಷಣಾಧಿಕಾರಿ ಜಿ.ಕೆ ಮಿಥುನ್‌ಕುಮಾರ್ ಮಂಗಳವಾರ ಮಧ್ಯಾಹ್ನ ಏಕಾಏಕಿ ಕಾರ್ಖಾನೆಗೆ ಭೇಟಿ ನೀಡಿದ್ದು, ಹಲವು ಕುತೂಹಲಗಳಿಗೆ ಕಾರಣವಾಗಿವೆ.


    ಕಾರ್ಖಾನೆಯ ಎನ್‌ಫೋರ್ಸ್‌ಮೆಂಟ್ ಡೈರೆಕ್ಟರ್ ಜೊತೆ ಮಾತುಕತೆ ನಡೆಸಿದ್ದು, ಕಾರ್ಖಾನೆ ಹೊಂದಿರುವ ಖಾಲಿ ಜಾಗ ಮತ್ತು ವಸತಿಗೃಹಗಳಿರುವ ಜಾಗದ ನಕಾಶೆ ಪರಿಶೀಲನೆ ನಡೆಸಲಾಯಿತು. ಅಲ್ಲದೆ ಕಾರ್ಖಾನೆ ಅಡಳಿತ ಮಂಡಳಿ ಜೊತೆ ಸಹ ಚರ್ಚೆ ನಡೆಸಲಾಗಿದೆ. ಗುತ್ತಿಗೆ ಕಾರ್ಮಿಕರು ಬೆಂಗಳೂರಿನಲ್ಲಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಹಿನ್ನಲೆಯಲ್ಲಿ ಕಾರ್ಖಾನೆ ಬಳಿ ಬಿಕೋ ಎನ್ನುವ ವಾತಾವರಣ ಕಂಡು ಬಂದಿತು.


ಕೇಂದ್ರ ಸಚಿವರು ಕಾರ್ಖಾನೆ ಮುಚ್ಚುವ ಕುರಿತು ಸ್ಪಷ್ಟಪಡಿಸಿರುವ ಹಿನ್ನಲೆಯಲ್ಲಿ ಜಿಲ್ಲಾಧಿಕಾರಿ ಡಾ. ಸೆಲ್ವಮಣಿ ಮತ್ತು ಜಿಲ್ಲಾ ರಕ್ಷಣಾಧಿಕಾರಿ ಜಿ.ಕೆ ಮಿಥುನ್‌ಕುಮಾರ್ ಮಂಗಳವಾರ ಮಧ್ಯಾಹ್ನ ಏಕಾಏಕಿ ಭದ್ರಾವತಿ ವಿಐಎಸ್‌ಎಲ್ ಕಾರ್ಖಾನೆಗೆ ಭೇಟಿ ನೀಡಿದ್ದು, ಹಲವು ಕುತೂಹಲಗಳಿಗೆ ಕಾರಣವಾಗಿವೆ.

Monday, February 13, 2023

ವಿಐಎಸ್‌ಎಲ್ ಉಳಿವಿಗಾಗಿ ಜೆಡಿಎಸ್ ಬೆಂಬಲಿಸಿ : ಶಾರದ ಅಪ್ಪಾಜಿ

ಸುಂಕದಮ್ಮ ಜಾತ್ರಾ ಮಹೋತ್ಸವ ಅಂಗವಾಗಿ ಹಿರಿಯ ನಾಗರೀಕರಿಗೆ ಸನ್ಮಾನ ಕಾರ್ಯಕ್ರಮ

ಭದ್ರಾವತಿ ನಗರಸಭೆ ವಾರ್ಡ್ ನಂ.೩೪ರ ಅಪ್ಪರ್ ಹುತ್ತಾದಲ್ಲಿ ಸುಂಕದಮ್ಮ ಜಾತ್ರಾ ಮಹೋತ್ಸವ ಅಂಗವಾಗಿ ಎಂ.ಜೆ ಅಪ್ಪಾಜಿ ಅಭಿಮಾನಿ ಬಳಗ ಮತ್ತು ಶಂಕರ್‌ನಾಗ್ ಅಭಿಮಾನಿ ಬಳಗದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಹಿರಿಯ ನಾಗರೀಕರಿಗೆ ಸನ್ಮಾನ ಹಾಗು ಸಾಂಸ್ಕೃತಿಕ ರಸಮಂಜರಿ ಕಾರ್ಯಕ್ರಮದಲ್ಲಿ ಜೆಡಿಎಸ್ ಪಕ್ಷದ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಶಾರದ ಅಪ್ಪಾಜಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
    ಭದ್ರಾವತಿ, ಫೆ. ೧೪: ಮಾಜಿ ಶಾಸಕರಾದ ಎಂ.ಜೆ ಅಪ್ಪಾಜಿಯವರು ಅಂದು ಎಂಪಿಎಂ ಕಾರ್ಮಿಕರ ಪರವಾಗಿ ಹಗಲಿರುಳು ಹೋರಾಟ ನಡೆಸಿದರು. ಆದರೂ ಆ ಕಾರ್ಖಾನೆಯನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಇದೀಗ ವಿಐಎಸ್‌ಎಲ್ ಕಾರ್ಖಾನೆ ಮುಚ್ಚುವ ಸ್ಥಿತಿ ಎದುರಾಗಿದ್ದು, ಕಾರ್ಖಾನೆ ಉಳಿಸಿಕೊಳ್ಳಲು ರಾಜಕೀಯ ಅಧಿಕಾರ ಅಗತ್ಯವಾಗಿದೆ ಎಂದು ಜೆಡಿಎಸ್ ಪಕ್ಷದ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಶಾರದ ಅಪ್ಪಾಜಿ ಹೇಳಿದರು.
    ಅವರು ನಗರಸಭೆ ವಾರ್ಡ್ ನಂ.೩೪ರ ಅಪ್ಪರ್ ಹುತ್ತಾದಲ್ಲಿ ಸುಂಕದಮ್ಮ ಜಾತ್ರಾ ಮಹೋತ್ಸವ ಅಂಗವಾಗಿ ಎಂ.ಜೆ ಅಪ್ಪಾಜಿ ಅಭಿಮಾನಿ ಬಳಗ ಮತ್ತು ಶಂಕರ್‌ನಾಗ್ ಅಭಿಮಾನಿ ಬಳಗದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಹಿರಿಯ ನಾಗರೀಕರಿಗೆ ಸನ್ಮಾನ ಹಾಗು ಸಾಂಸ್ಕೃತಿಕ ರಸಮಂಜರಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
    ಎಂ.ಜೆ ಅಪ್ಪಾಜಿಯವರು ಕಾರ್ಮಿಕರಾಗಿ, ಕ್ಷೇತ್ರದ ಶಾಸಕರಾಗಿ ಅವರು ನಡೆಸಿದ ಹೋರಾಟ ಇಂದಿಗೂ ನಮ್ಮೆಲ್ಲರ ಕಣ್ಮುಂದೆ ಇದೆ. ಕ್ಷೇತ್ರ ಎರಡು ಕಣ್ಣುಗಳಲ್ಲಿ ಒಂದಾದ ಎಂಪಿಎ ಕಾರ್ಖಾನೆ ಈಗಾಗಲೇ ಮುಚ್ಚಿಹೋಗಿದ್ದು, ಕಾರ್ಮಿಕರು ಹಾಗು ಕುಟುಂಬ ವರ್ಗದವರು ಇಂದು ಸಂಕಷ್ಟ ಅನುಭವಿಸುತ್ತಿದ್ದಾರೆ. ಇದೀಗ ವಿಐಎಸ್‌ಎಲ್ ಕಾರ್ಖಾನೆ ಮುಚ್ಚುವ ಸ್ಥಿತಿ ಎದುರಾಗಿದ್ದು, ನಾವೆಲ್ಲರೂ ಒಗ್ಗಟ್ಟಿನಿಂದ ಹೋರಾಟ ಎದುರಿಸಬೇಕಾಗಿದೆ. ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಂದ ಮಾತ್ರ ಈ ಕಾರ್ಖಾನೆ ಉಳಿಸಿಕೊಳ್ಳಲು ಸಾಧ್ಯ. ಕ್ಷೇತ್ರದ ಮತದಾರರು ಜೆಡಿಎಸ್ ಬೆಂಬಲಿಸುವ ಮೂಲಕ ಅವರನ್ನು ಪುನಃ ಮುಖ್ಯಮಂತ್ರಿಯನ್ನಾಗಿಸಬೇಕೆಂದು ಮನವಿ ಮಾಡಿದರು.


    ನಗರಸಭೆ ಮಾಜಿ ಸದಸ್ಯ ಎಚ್.ಬಿ ರವಿಕುಮಾರ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಈ ಭಾಗದಲ್ಲಿ ಎಂ.ಜೆ ಅಪ್ಪಾಜಿಯವರಾಗಲಿ, ನಾನಗಲಿ ರಾಜಕೀಯವನ್ನು ವೈಯಕ್ತಿಕವಾಗಿ ಬಳಸಿಕೊಂಡಿಲ್ಲ. ಅವರು ಮಾಡಿರುವ ಅಭಿವೃದ್ಧಿ ಕಾರ್ಯಗಳು ಇಂದಿಗೂ ಉಳಿದುಕೊಂಡಿವೆ. ಮುಂದಿನ ದಿನಗಳಲ್ಲೂ ಸಹ ನಾವು ಅಪ್ಪಾಜಿ ಕುಟುಂಬವನ್ನು ಬೆಂಬಲಿಸುವುದು ಸೂಕ್ತವಾಗಿದೆ. ಅವರ ಕುಟುಂಬದ ಜೊತೆ ನಾನು ಸದಾ ಕಾಲ ಇರುತ್ತೇನೆ ಎಂದರು.
    ವೇದಿಕೆಯಲ್ಲಿ ಜೆಡಿಎಸ್ ನಗರ ಘಟಕದ ಅಧ್ಯಕ್ಷ ಆರ್. ಕರುಣಾಮೂರ್ತಿ, ಮಾಜಿ ನಗರಸಭಾ ಸದಸ್ಯರಾದ ಕರಿಯಪ್ಪ, ಮುರ್ತುಜಾಖಾನ್, ವಿಶಾಲಾಕ್ಷಿ, ಎಸ್.ಬಿ ಮೋಹನ್ ರಾವ್, ನಗರಸಭಾ ಸದಸ್ಯರಾದ ಪಲ್ಲವಿ, ಜಯಶೀಲ, ನಾಗರತ್ನ, ಸವಿತಾ, ರೂಪಾವತಿ, ಬಸವರಾಜ ಬಿ. ಆನೇಕೊಪ್ಪ, ಕೋಟೇಶ್ವರ ರಾವ್, ಉದಯಕುಮಾರ್, ಮುಖಂಡರಾದ ಡಿ.ಟಿ ಶ್ರೀಧರ್, ಗೊಂದಿ ಜಯರಾಂ, ವಸಂತ್, ಭಾಗ್ಯಮ್ಮ, ಉಮೇಶ್, ಮಧುಸೂಧನ್, ಸಣ್ಣಯ್ಯ, ಮಲ್ಲೇಶ್ ಸೇರಿದಂತೆ ಇನ್ನಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
    ಎಂ.ಜೆ ಅಪ್ಪಾಜಿ ಅಭಿಮಾನಿ ಬಳಗ ಮತ್ತು ಶಂಕರ್‌ನಾಗ್ ಅಭಿಮಾನಿ ಬಳಗದ ವತಿಯಿಂದ ಶಾರದ ಅಪ್ಪಾಜಿ, ವಾರ್ಡಿನ ಹಿರಿಯ ನಾಗರೀಕರು, ಮಹಿಳಾ ಪ್ರಮುಖರನ್ನು ಸನ್ಮಾನಿಸಿ ಗೌರವಿಸಲಾಯಿತು.
ಕ್ರೀಡಾ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣೆ ನಡೆಯಿತು. ಆರ್ಕೆಸ್ಟ್ರಾ ಕಲಾವಿದರಿಂದ ಸಾಂಸ್ಕೃತಿಕ ರಸಮಂಜರಿ ಕಾರ್ಯಕ್ರಮ ನಡೆಯಿತು.