Wednesday, February 15, 2023

ಸಹಾಯಕ ತನಿಖಾಧಿಕಾರಿಯಾಗಿ ಉತ್ತಮ ಕರ್ತವ್ಯ ನಿರ್ವಹಣೆ : ಚಂದ್ರಕಲಾಗೆ ಪ್ರಶಂಸೆ

ಜಿಲ್ಲಾ ಪೊಲೀಸ್ ವತಿಯಿಂದ ಪ್ರಶಂಸನಾ ಪತ್ರ ವಿತರಣೆ

೨೦೧೮ನೇ ಸಾಲಿನಲ್ಲಿ ಹಳೇನಗರದ ಪೊಲೀಸ್ ಠಾಣೆಯಲ್ಲಿ ದಾಖಲಾದ ಮಾರಣಾಂತಿಕ ಹಲ್ಲೆ ಪ್ರಕರಣದಲ್ಲಿ ತನಿಖಾ ಸಹಾಯಕರಾಗಿ ಕತವ್ಯ ನಿರ್ವಹಿಸಿ, ಆರೋಪಿಗಳಿಗೆ ಶಿಕ್ಷೆಯಾಗುವಲ್ಲಿ ಪ್ರಮುಖ ಪಾತ್ರ ವಹಿಸಿರುವ ಠಾಣೆಯ ಸಿಬ್ಬಂದಿ(ಸಿಎಚ್‌ಸಿ) ಚಂದ್ರಕಲಾ ಅವರನ್ನು ಜಿಲ್ಲಾ ಪೊಲೀಸ್ ವತಿಯಿಂದ ಪ್ರಶಂಸನಾ ಪತ್ರ ನೀಡಿ ಅಭಿನಂದಿಸಲಾಯಿತು.
    ಭದ್ರಾವತಿ, ಫೆ. ೧೫ : ೨೦೧೮ನೇ ಸಾಲಿನಲ್ಲಿ ಹಳೇನಗರದ ಪೊಲೀಸ್ ಠಾಣೆಯಲ್ಲಿ ದಾಖಲಾದ ಮಾರಣಾಂತಿಕ ಹಲ್ಲೆ ಪ್ರಕರಣದಲ್ಲಿ ತನಿಖಾ ಸಹಾಯಕರಾಗಿ ಕತವ್ಯ ನಿರ್ವಹಿಸಿ, ಆರೋಪಿಗಳಿಗೆ ಶಿಕ್ಷೆಯಾಗುವಲ್ಲಿ ಪ್ರಮುಖ ಪಾತ್ರ ವಹಿಸಿರುವ ಠಾಣೆಯ ಸಿಬ್ಬಂದಿ(ಸಿಎಚ್‌ಸಿ) ಚಂದ್ರಕಲಾ ಅವರನ್ನು ಜಿಲ್ಲಾ ಪೊಲೀಸ್ ವತಿಯಿಂದ ಪ್ರಶಂಸನಾ ಪತ್ರ ನೀಡಿ ಅಭಿನಂದಿಸಲಾಯಿತು.
    ಜಿಲ್ಲಾ ರಕ್ಷಣಾಧಿಕಾರಿ ಜಿ.ಕೆ ಮಿಥುನ್‌ಕುಮಾರ್ ಚಂದ್ರಕಲಾ ಅವರನ್ನು ಅಭಿನಂದಿಸಿದರು. ಶಿವಮೊಗ್ಗ ಪೊಲೀಸ್ ಉಪವಿಭಾಗದ ಪೊಲೀಸ್ ಉಪಾಧೀಕ್ಷಕ ಎಂ. ಸುರೇಶ್, ಡಿಸಿಆರ್ ಉಪ ನಿರೀಕ್ಷಕ ಮೋಹನ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
    ಚಂದ್ರಕಲಾ ಅವರು ಹೊಸಸೇತುವೆ ರಸ್ತೆಯಲ್ಲಿರುವ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಆಶ್ರಿತದ ವಿಶ್ವೇಶ್ವರಾಯ ವಿದ್ಯಾಸಂಸ್ಥೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಜಾನಪದ ಕಲಾವಿದ ದಿವಾಕರ್ ಅವರ ಪತ್ನಿಯಾಗಿದ್ದಾರೆ. ಇವರಿಗೆ ಹಳೇನಗರ ಪೊಲೀಸ್ ಠಾಣೆ ಸಿಬ್ಬಂದಿಗಳು ಅಭಿನಂದಿಸಿದ್ದಾರೆ.

ಗುತ್ತಿಗೆ ಕಾರ್ಮಿಕರ ೨೮ನೇ ದಿನದ ಹೋರಾಟಕ್ಕೆ ಕ್ರೈಸ್ತರ ಬೆಂಬಲ : ಕಾರ್ಖಾನೆ ಪುನಶ್ಚೇತನಕ್ಕೆ ಆಗ್ರಹ

ಭದ್ರಾವತಿ.ಕಾಂ (bhadravathi.com) ಅಂತರ್ಜಾಲದ ಮೂಲಕ ಹೋರಾಟ : ೨೩೧ ಮಂದಿ ಬೆಂಬಲ

ಭದ್ರಾವತಿ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಮುಚ್ಚುವ ಆದೇಶದ ವಿರುದ್ಧ ಗುತ್ತಿಗೆ ಕಾರ್ಮಿಕರು ನಡೆಸುತ್ತಿರುವ ೨೮ನೇ ದಿನದ ಅನಿರ್ಧಿಷ್ಟಾವಧಿ ಹೋರಾಟಕ್ಕೆ ನಗರದ ಎಲ್ಲಾ ಕ್ರೈಸ್ತ ಸಭೆಗಳು ಮತ್ತು ಸಂಘ-ಸಂಸ್ಥೆಗಳು ಬೆಂಬಲ ಸೂಚಿಸಿ ಬುಧವಾರ ಸಂಜೆ ಕ್ಯಾಂಡಲ್ ಹಿಡಿದು ಪ್ರತಿಭಟನೆ ನಡೆಸಿದವು.
    ಭದ್ರಾವತಿ, ಫೆ. ೧೫ : ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಮುಚ್ಚುವ ಆದೇಶದ ವಿರುದ್ಧ ಗುತ್ತಿಗೆ ಕಾರ್ಮಿಕರು ನಡೆಸುತ್ತಿರುವ ೨೮ನೇ ದಿನದ ಅನಿರ್ಧಿಷ್ಟಾವಧಿ ಹೋರಾಟಕ್ಕೆ ನಗರದ ಎಲ್ಲಾ ಕ್ರೈಸ್ತ ಸಭೆಗಳು ಮತ್ತು ಸಂಘ-ಸಂಸ್ಥೆಗಳು ಬೆಂಬಲ ಸೂಚಿಸಿ ಬುಧವಾರ ಸಂಜೆ ಕ್ಯಾಂಡಲ್ ಹಿಡಿದು ಪ್ರತಿಭಟನೆ ನಡೆಸಿದವು.
    ಪ್ರತಿಭಟನೆ ನೇತೃತ್ವವಹಿಸಿದ್ದ ಸೆಲ್ವರಾಜ್ ಮಾತನಾಡಿ, ಗುತ್ತಿಗೆ ಕಾರ್ಮಿಕರು ನಡೆಸುತ್ತಿರುವ ಹೋರಾಟಕ್ಕೆ ಸಂಪೂರ್ಣ ಬೆಂಬಲ ಸೂಚಿಸುವ ಜೊತೆಗೆ ಯಾವುದೇ ರೀತಿಯ ಹೋರಾಟಕ್ಕೂ ಕ್ರೈಸ್ತ ಸಮುದಾಯದವರು ಸಹ ಸಿದ್ದರಾಗಿದ್ದು, ನಿಮ್ಮ ಬೇಡಿಕೆಗಳು ನಮ್ಮ ಬೇಡಿಕೆಗಳಾಗಿವೆ. ಸರ್ಕಾರ ಬೇಡಿಕೆಗಳನ್ನು ತಕ್ಷಣ ಈಡೇರಿಸಬೇಕು. ೧೦೫ ವರ್ಷಗಳ ಇತಿಹಾಸವಿರುವ ಈ ಕಾರ್ಖಾನೆಗೆ ಅಗತ್ಯವಿರುವ ಬಂಡವಾಳ ಹೂಡುವ ಜೊತೆಗೆ ಉದ್ಯೋಗ ಕಲ್ಪಿಸಿಕೊಡಬೇಕೆಂದು ಆಗ್ರಹಿಸಲಾಗುವುದು. ಅಲ್ಲದೆ ಈ ಸಂಬಂಧ ಪ್ರಧಾನಮಂತ್ರಿ, ಕೇಂದ್ರ ಕೈಗಾರಿಕಾ ಸಚಿವರಿಗೆ ಹಾಗು ರಾಜ್ಯದ ಎಲ್ಲಾ ಸಂಸದರಿಗೆ ಮನವಿ ಸಲ್ಲಿಸಲಾಗುವುದು ಎಂದರು.


    ಪ್ರತಿಭಟನೆ ಆರಂಭಕ್ಕೂ ಮೊದಲು ಯಶಸ್ವಿಗಾಗಿ ಧರ್ಮಗುರುಗಳಿಂದ ಪ್ರಾರ್ಥನೆ ನಡೆಯಿತು. ಕ್ರೈಸ್ತ ಸಮುದಾಯದವರು ಹಾಗು ಗುತ್ತಿಗೆ ಕಾರ್ಮಿಕರು ಕಾರ್ಖಾನೆ ಮುಂಭಾಗದಿಂದ ಪ್ರತಿಭಟನಾ ಮೆರವಣಿಗೆ ಆರಂಭಿಸಿ ಕಾರ್ಖಾನೆಯ ಡಬ್ಬಲ್ ರಸ್ತೆ ಮೂಲಕ ಅಂಡರ್ ಬ್ರಿಡ್ಜ್, ಹಾಲಪ್ಪ ವೃತ್ತವರೆಗೂ ಸಾಗಿ ಪುನಃ ಹಿಂದಿರುಗಿ ಗುತ್ತಿಗೆ ಕಾರ್ಮಿಕರ ಹೋರಾಟ ಸ್ಥಳಕ್ಕೆ ತಲುಪಿತು. ಕೊನೆಯಲ್ಲಿ ಕ್ಯಾಂಡಲ್ ಬೆಳಗುವ ಮೂಲಕ ಪ್ರಾರ್ಥಿಸಲಾಯಿತು.
    ಗುತ್ತಿಗೆ ಕಾರ್ಮಿಕರ ಸಂಘದ ಅಧ್ಯಕ್ಷರು, ಪದಾಧಿಕಾರಿಗಳು, ಗುತ್ತಿಗೆ ಕಾರ್ಮಿಕರು,  ಎಲ್ಲಾ ಕ್ರೈಸ್ತ ಸಭೆಗಳು ಮತ್ತು ಸಂಘ-ಸಂಸ್ಥೆಗಳ ಪ್ರಮುಖರು, ಧರ್ಮಗುರುಗಳು, ಮಹಿಳೆಯರು, ಮಕ್ಕಳು ಪ್ರತಿಭಟನಾ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.
    ಭದ್ರಾವತಿ.ಕಾಂ (bhadravathi.com) ಅಂತರ್ಜಾಲದ ಮೂಲಕ ಹೋರಾಟ : ೨೩೧ ಮಂದಿ ಬೆಂಬಲ
    ವಿಐಎಸ್‌ಎಲ್ ಕಾರ್ಖಾನೆ ಉಳಿವಿಗಾಗಿ ಹಲವು ರೀತಿಯ ಹೋರಾಟಗಳು ಆರಂಭಗೊಂಡಿದ್ದು, ಇದೀಗ ಅಂತರ್ಜಾಲ ಸಮರ್ಪಕವಾಗಿ ಬಳಸಿಕೊಂಡು ಹೋರಾಟ ಮಾಡಲು ಯುವ ಸಮುದಾಯ ಮುಂದಾಗಿದೆ.
    ಭದ್ರಾವತಿ ಉಳಿಸಿ ವಿಐಎಸ್‌ಎಲ್-ಎಂಪಿಎಂ ಚಳುವಳಿ ಎಂಬ ಶೀರ್ಷಿಕೆಯಡಿ ಹೋರಾಟ ಆರಂಭಗೊಂಡಿದ್ದು, ಅಂತರ್ಜಾಲದಲ್ಲಿ ಆಂಗ್ಲ ಮತ್ತು ಕನ್ನಡ ಎರಡು ಭಾಷೆಯಲ್ಲಿ ಚಳುವಳಿ ಆರಂಭಿಸಲಾಗಿದೆ. ಈ ಹೋರಾಟಕ್ಕೆ ಈಗಾಗಲೇ ೨೩೧ ಮಂದಿ ಬೆಂಬಲಿಸಿದ್ದು, ಒಬ್ಬರು ವಿರೋಧಿಸಿದ್ದಾರೆ. ೧೪೭ ನಾಗರೀಕರು, ೫೬ ಗುತ್ತಿಗೆ ಕಾರ್ಮಿಕರು,  ೧೨ ಕಾಯಂ ಹಾಗು ನಿವೃತ್ತ ಕಾರ್ಮಿಕರು, ಒಬ್ಬರು ಎಂಪಿಎಂ ಕಾರ್ಮಿಕರು, ಒಬ್ಬರು ರೈತರು, ೪ ವ್ಯಾಪಾರಿಗಳು, ಒಬ್ಬರು ಸರ್ಕಾರಿ ಉದ್ಯೋಗಿ, ಇಬ್ಬರು ಖಾಸಗಿ ಕಂಪನಿ ಉದ್ಯೋಗಿಗಳು, ೩ ವಿದ್ಯಾರ್ಥಿಗಳು ಹಾಗು ಇತರೆ ೪ ಮಂದಿ ಹೋರಾಟ ಬೆಂಬಲಿಸಿದ್ದಾರೆ.
    ಚಳುವಳಿಯಲ್ಲಿ ಪಾಲ್ಗೊಳ್ಳುವವರು ನೇರವಾಗಿ (bhadravathi.com) ವಿಳಾಸಕ್ಕೆ ತೆರಳಿ ಬೆಂಬಲ ಮತ್ತು ವಿರೋಧಿಸುತ್ತಾರೆ. ಈ ಎರಡು ಆಯ್ಕೆಗಳಲ್ಲಿ ಯಾವುದಾದರೂ ಒಂದು ಆಯ್ಕೆ ಮಾಡುವ ಮೂಲಕ ಯಶಸ್ವಿಗೊಳಿಸುವಂತೆ ಕೋರಲಾಗಿದೆ


ಭದ್ರಾವತಿ ವಿಐಎಸ್‌ಎಲ್ ಕಾರ್ಖಾನೆ ಉಳಿವಿಗಾಗಿ ಹಲವು ರೀತಿಯ ಹೋರಾಟಗಳು ಆರಂಭಗೊಂಡಿದ್ದು, ಇದೀಗ ಅಂತರ್ಜಾಲ ಸಮರ್ಪಕವಾಗಿ ಬಳಸಿಕೊಂಡು ಹೋರಾಟ ಮಾಡಲು ಯುವ ಸಮುದಾಯ ಮುಂದಾಗಿದೆ.

-

ಹಣ ದ್ವಿಗುಣ ದುರಾಸೆಗೆ ಲಕ್ಷಾಂತರ ಕಳೆದುಕೊಂಡ ವ್ಯಕ್ತಿ : ಪ್ರಕರಣ ದಾಖಲು

    ಭದ್ರಾವತಿ, ಫೆ. ೧೫ : ಹಣ ದ್ವಿಗುಣ ಮಾಡಿಕೊಡುವುದಾಗಿ ಹೇಳಿ ವ್ಯಕ್ತಿಯೊಬ್ಬರಿಗೆ ಲಕ್ಷಾಂತರ ರು. ವಂಚನೆ ಮಾಡಿರುವ ಘಟನೆ ಕಳೆದ ೨ ದಿನಗಳ ಹಿಂದೆ ತಾಲೂಕಿನ ಭದ್ರಾ ಜಲಾಶಯದ ಬಳಿ ನಡೆದಿರುವುದು ಬೆಳಕಿಗೆ ಬಂದಿದೆ.
    ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಸುಮಾರು ೨೫ ವರ್ಷ ವಯಸ್ಸಿನ ನಿತೀಶ್ ಪಂಡಿತ್ ಎಂಬುವರಿಗೆ ಜಗದೀಶ್ ಎಂಬಾತ ಪರಿಚಿತನಾಗಿದ್ದು, ಫೆ.೭ರಂದು ಚಿಕ್ಕಮಗಳೂರು ವಾಸಿ ಜಾಫರ್ ಎಂಬ ವ್ಯಕ್ತಿ (ಭದ್ರಾ ಜಲಾಶಯ) ಲಕ್ಕವಳ್ಳಿ ಡ್ಯಾಮ್ ಬಳಿಯಲ್ಲಿ ೪೦ ಕೋಟಿ ಹಣ ಗೋಡೋನ್‌ನಲ್ಲಿ ಇದ್ದು ಒಂದಕ್ಕೆ ಎರಡರಷ್ಟು ಹಣ ನೀಡುತ್ತಾನೆ ಎಂದು ತಿಳಿಸಿದ್ದಾನೆ ಎನ್ನಲಾಗಿದೆ.  
    ಈ ಮಾತನನ್ನು ನಂಬಿ ಫೆ.೧೩ರಂದು ನಿತೀಶ್ ಪಂಡಿತ್ ಮತ್ತು ಜಗದೀಶ್ ಹಾಗು ಅಭಿಜಿತ್ ರವರು ೫೦೦ ರೂ. ಮುಖ ಬೆಲೆಯ ಒಟ್ಟು  ೧೦ ಲಕ್ಷ ನಗದು ಹಣ ಜಾಫರ್‌ಗೆ ನೀಡಿದ್ದು, ಈ ಹಣಕ್ಕೆ ಬದಲಾಗಿ ಒಂದು ಕೆಂಪು ಬಣ್ಣದ ಸೂಟ್‌ಕೇಸ್ ನೀಡಲಾಗಿದೆ. ಇದನ್ನು ಓಪನ್ ಮಾಡಿ ನೋಡಿದಾಗ ೧೦೦ ರೂ. ಮುಖ ಬೆಲೆಯ ೧೪೭ ನೋಟುಗಳಿದ್ದು, ಒಟ್ಟು ೧೪,೭೦೦ ರೂ ಹಣವಿರುವುದು ತಿಳಿದು ಬಂದಿದೆ. ಉಳಿದಂತೆ ಬಾಕ್ಸ್ ಒಳಗೆ ನ್ಯೂಸ್ ಪೇಪರ್‌ಗಳನ್ನು ಮಡಚಿ ಪ್ಯಾಕ್ ಮಾಡಿ ಇಟ್ಟಿದ್ದು, ೯,೮೫,೩೦೦ ರೂ. ವಂಚಿಸಿರುವುದು ಬೆಳಕಿಗೆ ಬಂದಿದೆ. ಈ ಹಿನ್ನಲೆಯಲ್ಲಿ ನಿತೀಶ್ ಪಂಡಿತ್ ಪೇಪರ್‌ಟೌನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.  

ಖಾಸಗಿ ಹಣಕಾಸು ಸಂಸ್ಥೆ ಸಿಬ್ಬಂದಿಯಿಂದ ಲಕ್ಷಾಂತರ ರು. ಹಣ ಕಬಳಿಕೆ

    ಭದ್ರಾವತಿ, ಫೆ. ೧೫ : ಖಾಸಗಿ ಹಣಕಾಸು ಸಂಸ್ಥೆಯ ಉದ್ಯೋಗಿಯೊಬ್ಬ ಲಕ್ಷಾಂತರ ರು. ಹಣ ಕಬಳಿಸಿರುವ ಘಟನೆ ಬೆಳಕಿಗೆ ಬಂದಿದ್ದು, ಈ ಸಂಬಂಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
    ಸಿದ್ದರೂಢ ನಗರದ ಭಾರತ್ ಪೈನಾನ್ಸಿಯಲ್ ಇನ್ ಕ್ಲೋಷನ್ ಲಿಮಿಟೆಡ್ ಸಿಬ್ಬಂದಿ ದಿನೇಶ್ ಸುಮಾರು ೩,೭೦,೧೪೪ ರು. ಕಬಳಿಸಿದ್ದು, ಸುಮಾರು ೧ ವರ್ಷದಿಂದ ದಿನೇಶ್ ಸಂಸ್ಥೆಯಿಂದ ಸಾಲ ನೀಡಿದಂತಹ ಒಟ್ಟು ೨೫ ಮಹಿಳಾ ಸಂಘಗಳ ಹಣಕಾಸಿನ ವ್ಯವಹಾರ ನೋಡಿಕೊಳ್ಳುತ್ತಿದ್ದನು. ಹಣವನ್ನು ಸಂಗ್ರಹಿಸಿ ಸಂಸ್ಥೆಯ ಖಾತೆಗೆ ಜಮಾ ಮಾಡುತ್ತಿದ್ದನು. ಲೆಕ್ಕ ಪರಿಶೋಧನೆ ಸಂದರ್ಭದಲ್ಲಿ ಒಟ್ಟು ೩,೭೦,೧೪೪ ರು. ವ್ಯತ್ಯಾಸ ಕಂಡುಬಂದಿದ್ದು, ಹಣದ ಬಗ್ಗೆ ಈತನನ್ನು ವಿಚಾರ ಮಾಡಿದಾಗ ಹಣ ಸ್ವಂತಕ್ಕೆ ಬಳಸಿಕೊಂಡಿರುತ್ತೆನೆಂದು ಹಾಗೂ  ೨೦ ದಿನಗಳಲ್ಲಿ ಹಣ ಜಮಾ ಮಾಡುವುದಾಗಿ ತಿಳಿಸಿದ್ದು, ಆದರೆ ಒಟ್ಟು ೨,೨೩,೮೭೫ ರು. ಹಣ ಬಾಕಿ ಉಳಿಸಿಕೊಂಡಿದ್ದು, ಈ ಹಿನ್ನಲೆಯಲ್ಲಿ ಸಂಸ್ಥೆಯ ವ್ಯವಸ್ಥಾಪಕ ಬಸವರಾಜ್‌ಎಂಬುವರು ಹಳೇನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ವಿಐಎಸ್‌ಎಲ್ ಉಳಿಸಲು ವಿಧಾನಸಭೆಯಲ್ಲಿ ಒತ್ತಡ ಹೇರಿದ ಶಾಸಕ ಸಂಗಮೇಶ್ವರ್

ವಿಐಎಸ್‌ಎಲ್ ಉಳಿಸಿಕೊಳ್ಳಲು ಸರ್ಕಾರ ಬದ್ಧ : ಸಚಿವ ಮಾಧುಸ್ವಾಮಿ

ಬೆಂಗಳೂರು/ಭದ್ರಾವತಿ, ಫೆ. ೧೫: ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಿ ವಿಐಎಸ್'ಎಲ್ ಕಾರ್ಖಾನೆಯನ್ನು ರಾಜ್ಯ ಸರ್ಕಾರದ ಸುಪರ್ದಿಗೆ ಪಡೆದು, ಪುನಶ್ಚೇತನಗೊಳಿಸಬೇಕೆಂದು ಶಾಸಕ ಬಿ.ಕೆ. ಸಂಗಮೇಶ್ವರ್ ಅವರು ಒತ್ತಾಯಿಸಿದರು.
    ವಿಧಾನಸಭೆ ಅಧಿವೇಶನದಲ್ಲಿ ಮಾತನಾಡಿದ ಅವರು, ಕಾರ್ಖಾನೆಯ ಅಭಿವೃದ್ಧಿ, ಉದ್ಯೋಗ ಸೃಷ್ಠಿ ಹಾಗೂ ಸಮಗ್ರ ಭದ್ರತೆಗಾಗಿ ಹಿಂದೆ ಕೇಂದ್ರ ಸರ್ಕಾರಕ್ಕೆ ವಹಿಸಿಕೊಡಲಾಗಿತ್ತು. ಆದರೆ, ವಿಶ್ವೇಶ್ವರಯ್ಯನವರ ದೂರದೃಷ್ಟಿಯಿಂದ ನಿರ್ಮಿತವಾದ ಈ ಕಾರ್ಖಾನೆಯನ್ನು ಕೇಂದ್ರ ಸರ್ಕಾರ ಮುಚ್ಚಲು ಮುಂದಾಗಿರುವುದು ಖಂಡನೀಯ ವಿಚಾರ. ಹೀಗಾಗಿ, ಕೇಂದ್ರದ ಮೇಲೆ ಒತ್ತಡ ಹೇರಿ ಕಾರ್ಖಾನೆಯನ್ನು ರಾಜ್ಯ ಸರ್ಕಾರದ ಸುಪರ್ದಿಗೆ  ಹಿಂಪಡೆದು, ಬಂಡವಾಳ ತೊಡಗಿಸಬೇಕು ಎಂದು ಒತ್ತಡ ಹೇರಿದರು.
    ವಿಐಎಸ್‌ಎಲ್ ಕಾರ್ಖಾನೆ ಕೇವಲ ಭದ್ರಾವತಿಯ ಆಸ್ತಿಯಲ್ಲ. ಇದು ನಾಡಿನ ಜನರ ಹಾಗೂ ಸರ್ಕಾರದ ಆಸ್ತಿಯಾಗಿದೆ. ಹೀಗಾಗಿ, ರಾಜ್ಯದ ೨೪೪ ಶಾಸಕರೂ ಸಹ ಕಾರ್ಖಾನೆ ಉಳಿಸಲು ಬೆಂಬಲ ನೀಡಬೇಕು. ಒಟ್ಟಾಗಿ ಸೇರಿ ಸರ್ಕಾರದ ಮೂಲಕ ಒಂದು ನಿರ್ಣಯ ಕೈಗೊಂಡು, ಕೇಂದ್ರದ ಮೇಲೆ ಒತ್ತಡ ಹೇರಬೇಕು. ಆ ಮೂಲಕ ಕಾರ್ಖಾನೆಯನ್ನು ಕೇಂದ್ರದಿಂದ ರಾಜ್ಯ ಸರ್ಕಾರದ ಸುಪರ್ದಿಗೆ ಪಡೆದು, ಉತ್ಪಾದನೆಯನ್ನು ಮುಂದುವರೆಸಬೇಕೆಂದು ಆಗ್ರಹಿಸಿದರು.
    ವಿಐಎಸ್‌ಎಲ್ ಉಳಿಸುವ ಆಶಯ ನಮಗೂ ಇದೆ : ಬಿ.ಎಸ್ ಯಡಿಯೂರಪ್ಪ
     ವಿಐಎಸ್‌ಎಲ್ ಕಾರ್ಖಾನೆ ಉಳಿಸುವ ಆಶಯ ನಮಗೂ ಸಹ ಇದ್ದು, ಇದಕ್ಕಾಗಿ ಕೇಂದ್ರದ ಮೇಲೆ ಒತ್ತಡ ಹೇರಲು ಎಲ್ಲರೂ  ಸಹಕಾರ ನೀಡಬೇಕು ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದರು.
ವಿಐಎಸ್‌ಎಲ್ ಕಾರ್ಖಾನೆ ಉಳಿಸಿಕೊಳ್ಳಲೇಬೇಕಿದೆ. ಇದಕ್ಕಾಗಿ ಎಲ್ಲಾ ಪ್ರಯತ್ನಗಳನ್ನು ಸಹ ನಾವು ಮಾಡಿದ್ದೇವೆ. ಸದ್ಯ ಕೇಂದ್ರ ಸರ್ಕಾರ ಕೈಗೊಂಡಿರುವ ಸ್ಥಗಿತದ ನಿರ್ಧಾರ ಬದಲಿಸಿ, ಕಾರ್ಖಾನೆಯನ್ನು ಮುಚ್ಚದೇ ಮುಂದುವೆರೆಸಿಕೊಂಡು ಹೋಗಲು ಮನವೊಲಿಸಬೇಕಿದೆ. ಇದಕ್ಕಾಗಿ ಎಲ್ಲರ ಸಹಕಾರ ಪಡೆದು ರಾಜ್ಯ ಸರ್ಕಾರ ನಿರ್ಣಯ ಕೈಗೊಂಡು ಕೇಂದ್ರದ ಮೇಲೆ ಒತ್ತಡ ಹಾಕಬೇಕಿದೆ ಎಂದರು.
    ವಿಐಎಸ್‌ಎಲ್ ಮುಚ್ಚುವ ನಿರ್ಧಾರಕ್ಕೆ : ಯು.ಟಿ. ಖಾದರ್, ಪ್ರಿಯಾಂಕ್ ಖರ್ಗೆ ವಾಗ್ದಾಳಿ
ವಿಐಎಸ್‌ಎಲ್ ಕಾರ್ಖಾನೆ ಮುಚ್ಚುವ ಕೇಂದ್ರ ಸರ್ಕಾರದ ನಿರ್ಧಾರ ಖಂಡನೀಯವಾಗಿದ್ದು, ಕಾರ್ಖಾನೆಯನ್ನು ರಾಜ್ಯ ಸರ್ಕಾರವೇ ವಹಿಸಿಕೊಳ್ಳಬೇಕು ಎಂದು ಕಾಂಗ್ರೆಸ್ ನಾಯಕರು ಒತ್ತಡ ಹೇರಿದರು.
    ವಿಐಎಸ್‌ಎಲ್ ಕುರಿತಾಗಿ ಶಾಸಕ ಬಿ.ಕೆ. ಸಂಗಮೇಶ್ವರ್ ಅವರು ಪ್ರಸ್ತಾಪಿಸದ ವೇಳೆ ಮಾತನಾಡಿದ ಯು.ಟಿ. ಖಾದರ್, ಕಾರ್ಖಾನೆಯನ್ನು ಮುಚ್ಚುವ ನಿರ್ಧಾರವನ್ನು ನಾವು ಬಲವಾಗಿ ಖಂಡಿಸುತ್ತೇವೆ. ನಿರ್ಣಯ ಕೈಗೊಂಡು, ಕೇಂದ್ರದ ಮೇಲೆ ಒತ್ತಡ ಹೇರಿ, ಕಾರ್ಖಾನೆಯನ್ನು ರಾಜ್ಯ ಸರ್ಕಾರವೇ ವಹಿಸಿಕೊಳ್ಳಬೇಕು. ರಾಜ್ಯದಿಂದಲೇ ಬಂಡವಾಳ ಹೂಡಿ, ಮರುಸ್ಥಾಪಿಸಿ, ಉತ್ಪಾದನೆಯನ್ನು ಮುಂದುವರೆಸಬೇಕು ಎಂದು ಆಗ್ರಹಿಸಿದರು.
    ಜಿಂದಾಲ್ ಸೇರಿದಂತೆ ಖಾಸಗಿ ಸ್ಟೀಲ್ ಕಂಪೆನಿಗಳಿಗೆ ಸಹಾಯ ಮಾಡುವ ಉದ್ದೇಶದಿಂದ ವಿಐಎಸ್‌ಎಲ್ ಕಾರ್ಖಾನೆ ಮುಚ್ಚುವ ನಿರ್ಧಾರ ಸರ್ಕಾರ ಕೈಗೊಂಡಿದೆ. ಇದು ಅತ್ಯಂತ ಖಂಡನೀಯವಾಗಿದ್ದು, ಇದನ್ನು ಬದಲಾವಣೆ ಮಾಡಬೇಕು ಎಂದು ಮನವಿ ಮಾಡಿದರು.
    ಈ ವೇಳೆ ಮಾತನಾಡಿದ ಶಾಸಕ ಪ್ರಿಯಾಂಕ್ ಖರ್ಗೆ, ಕಾರ್ಖಾನೆಯನ್ನು ಮುಚ್ಚುವುದಿಲ್ಲ ಎಂದು ರಾಜ್ಯ ಸರ್ಕಾರ ಹೇಳುತ್ತದೆ. ಆದರೆ, ಕಾರ್ಖಾನೆಯನ್ನು ಮುಚ್ಚಲಾಗುತ್ತದೆ ಎಂದು ಕೇಂದ್ರ ಸಚಿವ ಜ್ಯೋತಿರಾರಾಧ್ಯ ಸಿಂಧ್ಯಾ ಅವರು ಲೋಕಸಭೆಯಲ್ಲಿ ಹೇಳಿದ್ದಾರೆ. ಯಾವುದನ್ನು ನಂಬಬೇಕು. ಈ ಕುರಿತಂತೆ ರಾಜ್ಯ ಸರ್ಕಾರ ಒಂದು ಮಹತ್ವದ ನಿರ್ಣಯ ಕೈಗೊಂಡು ಕಾರ್ಖಾನೆಯನ್ನು ಉಳಿಸಬೇಕು ಎಂದು ಆಗ್ರಹಿಸಿದರು.
    ಸಚಿವ ಮಾಧುಸ್ವಾಮಿ ವಿಧಾನಸಭೆಯಲ್ಲಿ ಮಹತ್ವದ ಹೇಳಿಕೆ
    ವಿಐಎಸ್‌ಎಲ್ ಒಂದು ಪ್ರತಿಷ್ಠಿತ ಕಾರ್ಖಾನೆಯಾಗಿದ್ದು, ಎಲ್ಲ ಪ್ರಯತ್ನ ಮಾಡಿ ಇದನ್ನು ಉಳಿಸಿಕೊಳ್ಳುತ್ತೇವೆ ಎಂದು ಸಚಿವ ಮಾಧುಸ್ವಾಮಿ ಹೇಳಿದರು.
    ವಿಐಎಸ್‌ಎಲ್ ಉಳಿಸಲು ನಿರ್ಣಯ ಕೈಗೊಳ್ಳುವಂತೆ ಶಾಸಕ ಬಿ.ಕೆ. ಸಂಗಮೇಶ್ವರ್ ಅವರು ಪ್ರಸ್ತಾಪಿಸಿದ ವಿಚಾರಕ್ಕೆ ವಿಧಾನಸಭೆಯಲ್ಲಿ ಸಚಿವರು ಉತ್ತರ ನೀಡಿದರು.
    ವಿಐಎಸ್‌ಎಲ್ ಪ್ರತಿಷ್ಠಿತ ಕಂಪೆನಿಯಗಿದ್ದು, ಸರ್ಕಾರ ಇದರ ಪರವಾಗಿದೆ. ಶಾಸಕ ಬಿ.ಕೆ. ಸಂಗಮೇಶ್ವರ್ ಹಾಗೂ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರ ಆಶಯವೂ ಸಹ ಕಾರ್ಖಾನೆ ಉಳಿಸುವುದಾಗಿದೆ. ಸರ್ಕಾರ ಇದರ ಪರವಾಗಿದ್ದು, ಎಲ್ಲ ಪ್ರಯತ್ನ ಮಾಡಿ ಶ್ರಮ ವಹಿಸಿ ಉಳಿಸಿಕೊಳ್ಳುತ್ತೇವೆ ಎಂದರು.
    ವಿಐಎಸ್‌ಎಲ್‌ಗಾಗಿ ನನ್ನದೇ ಕ್ಷೇತ್ರದಲ್ಲಿ ನಾಲ್ಕು ಎಕರೆ ಮೈನಿಂಗ್ ಜಾಗ ನೀಡಲಾಗಿದ್ದು, ಸರ್ಕಾರ ಇವರ ಸಂಪರ್ಕದಲ್ಲಿದೆ. ಹೇಗಾದರೂ ಮಾಡಿ ಕಾರ್ಖಾನೆಯನ್ನು ಉಳಿಸಿಕೊಂಡು, ಮುಂದುವರೆಸಿಕೊಂಡು ಹೋಗಬೇಕು ಎಂಬುದು ನಮ್ಮ ಅಪೇಕ್ಷೆಯಾಗಿದೆ ಎಂದರು.

ಜೆಡಿಎಸ್ ಪರಿಶಿಷ್ಟ ಪಂಗಡದ ಅಧ್ಯಕ್ಷರಾಗಿ ಬಸವರಾಜ್ ಬಿ. ಆನೇಕೊಪ್ಪ

ಭದ್ರಾವತಿ ವಿಧಾನಸಭಾ ಕ್ಷೇತ್ರದ ಜಾತ್ಯತೀತ ಜನತಾದಳ ಪರಿಶಿಷ್ಟ ಪಂಗಡ ಅಧ್ಯಕ್ಷರಾಗಿ ನಗರಸಭಾ ಸದಸ್ಯ ಬಸವರಾಜ್ ಬಿ. ಆನೆಕೊಪ್ಪ ನೇಮಕಗೊಂಡಿದ್ದಾರೆ.
    ಭದ್ರಾವತಿ, ಫೆ. ೧೫ :  ವಿಧಾನಸಭಾ ಕ್ಷೇತ್ರದ ಜಾತ್ಯತೀತ ಜನತಾದಳ ಪರಿಶಿಷ್ಟ ಪಂಗಡ ಅಧ್ಯಕ್ಷರಾಗಿ ನಗರಸಭಾ ಸದಸ್ಯ ಬಸವರಾಜ್ ಬಿ. ಆನೆಕೊಪ್ಪ ನೇಮಕಗೊಂಡಿದ್ದಾರೆ.
    ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಶಾರದಾ ಅಪ್ಪಾಜಿಯವರ ನಿರ್ದೇಶನದ ಮೇರೆಗೆ ಜಿಲ್ಲಾ ಪರಿಶಿಷ್ಟ ಪಂಗಡ ವಿಭಾಗದ ಅಧ್ಯಕ್ಷ ಎಚ್.ಆರ್ ಹನುಮಂತಪ್ಪ ಬಸವರಾಜ್ ಬಿ. ಆನೆಕೊಪ್ಪರವನ್ನು ನೇಮಕಗೊಳಿಸಿ ಆದೇಶ ಹೊರಡಿಸಿದ್ದು, ಪಕ್ಷದ ತತ್ವ, ಸಿದ್ದಾಂತಗಳಿಗೆ ಬದ್ಧರಾಗಿ ಸಂಘಟನೆಯಲ್ಲಿ ತೊಡಗಿಸಿಕೊಳ್ಳುವಂತೆ ಸೂಚಿಸಿದ್ದಾರೆ.
    ಪಕ್ಷದ ನಗರ ಘಟಕದ ಅಧ್ಯಕ್ಷ ಆರ್. ಕರುಣಾಮೂರ್ತಿ, ಜಿಲ್ಲಾ ಪರಿಶಿಷ್ಟ ಪಂಗಡ ವಿಭಾಗದ ಉಪಾಧ್ಯಕ್ಷ ಶಿವಕುಮಾರ್, ಪರಿಶಿಷ್ಟ ಜಾತಿ ವಿಭಾಗದ ತಾಲೂಕು ಅಧ್ಯಕ್ಷ ಮೈಲಾರಪ್ಪ, ಪ್ರಧಾನ ಕಾರ್ಯದರ್ಶಿ ವೆಂಕಟೇಶ್ ಉಜ್ಜನಿಪುರ, ನಗರಸಭೆ ಮಾಜಿ ಅಧ್ಯಕ್ಷೆ ವಿಶಾಲಾಕ್ಷಿ, ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಎಚ್.ಬಿ ರವಿಕುಮಾರ್, ಮಾಜಿ ಸದಸ್ಯ ಆನಂದ್, ಮುಖಂಡರಾದ ಚಂದ್ರಣ್ಣ, ಉಮೇಶ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
    ಪರಿಶಿಷ್ಟ ಪಂಗಡದ ಅಧ್ಯಕ್ಷರಾಗಿ ನೇಮಕಗೊಳ್ಳಲು ಕಾರಣಕರ್ತರಾದ ಶಾರದ ಅಪ್ಪಾಜಿ, ಯುವ ಮುಖಂಡ ಎಂ.ಎ ಅಜಿತ್ ಹಾಗು ಪಕ್ಷದ ಜಿಲ್ಲಾ ಹಾಗು ತಾಲೂಕು ಮುಖಂಡರಿಗೆ ಬಸವರಾಜ್ ಬಿ. ಆನೇಕೊಪ್ಪ ಕೃತಜ್ಞತೆ ಸಲ್ಲಿಸಿದ್ದಾರೆ.

Tuesday, February 14, 2023

ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಹಣ ಕಳೆದುಕೊಂಡ ಮಹಿಳೆ : ಹಣ ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದ ಸಿಬ್ಬಂದಿ

ಭದ್ರಾವತಿಯಲ್ಲಿ  ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಪ್ರಯಾಣಿಸುವಾಗ ಸುಮಾರು ೩೦,೦೦೦ ಹಣ ಕಳೆದುಕೊಂಡಿದ್ದ ಮಹಿಳೆಗೆ ಪುನಃ ಹಣ ಹಿಂದಿರುಗಿಸುವ ಮೂಲಕ ಪ್ರಾಮಾಣಿಕತೆ ಮೆರೆದಿರುವ ಘಟನೆ ನಡೆದಿದೆ.
    ಭದ್ರಾವತಿ, ಫೆ. ೧೪ : ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಪ್ರಯಾಣಿಸುವಾಗ ಸುಮಾರು ೩೦,೦೦೦ ಹಣ ಕಳೆದುಕೊಂಡಿದ್ದ ಮಹಿಳೆಗೆ ಪುನಃ ಹಣ ಹಿಂದಿರುಗಿಸುವ ಮೂಲಕ ಪ್ರಾಮಾಣಿಕತೆ ಮೆರೆದಿರುವ ಘಟನೆ ನಡೆದಿದೆ.
    ತಾಲೂಕಿನ ಕಾಡಿನಂಚಿನಲ್ಲಿರುವ ಬಂಡಿಗುಡ್ಡ ಗ್ರಾಮಕ್ಕೆ ತೆರಳುವ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಆಯಿಷಮ್ಮ ಎಂಬ ಮುಸ್ಲಿಂ ಮಹಿಳೆಯೊಬ್ಬರು ಬಂಡಿಗುಡ್ಡದಿಂದ ನಗರಕ್ಕೆ ಪ್ರಯಾಣ ಬೆಳೆಸಿದ್ದು, ಈ ಅವಧಿಯಲ್ಲಿ ಸುಮಾರು ೩೦,೦೦೦ ರು. ನಗದು ಹಣ ಕಳೆದುಕೊಂಡಿದ್ದಾರೆ. ಕಳೆದುಕೊಂಡ ಹಣ ಬಸ್‌ನಲ್ಲಿಯೇ ನಿರ್ವಾಹಕ ರವಿ ಅವರಿಗೆ ಪತ್ತೆಯಾಗಿದ್ದು, ಹಣ ಕಳೆದುಕೊಂಡ ಮಹಿಳೆಯನ್ನು ಪತ್ತೆ ಮಾಡಿ ನಗರದ ಮುಖ್ಯಬಸ್ ನಿಲ್ದಾಣದಲ್ಲಿ ಸರ್.ಎಂ ವಿಶ್ವೇಶ್ವರಾಯನವರ ಪ್ರತಿಮೆ ಬಳಿ ನಿರ್ವಾಹಕ ರವಿ, ಚಾಲಕ ರಾಜು ಮತ್ತು ಸಂಚಾರಿ ನಿಯಂತ್ರಕ ಪುರುಷೋತ್ತಮ್ ಹಣ ಹಿಂದಿರುಗಿಸಿದರು. ಪ್ರಾಮಾಣಿಕತೆ ಮೆರೆದಿರುವ ಸಿಬ್ಬಂದಿ ವರ್ಗವನ್ನು ಕೆಎಸ್‌ಆರ್‌ಟಿಸಿ ಭದ್ರಾವತಿ ಘಟಕ ಅಭಿನಂದಿಸಿದೆ.