Friday, February 17, 2023

ಶಾಸಕ ಬಿ.ಕೆ ಸಂಗಮೇಶ್ವರ್ ಸಹೋದರ ಬಿ.ಕೆ ಶಿವಕುಮಾರ್ ಪುತ್ರಿ ಹಿತಾರವರ ಶ್ರೀಮಂತ ಕಾರ್ಯಕ್ರಮ

ಬೆಳಗಾವಿ ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಕುಟುಂಬ ವರ್ಗದವರು ಭಾಗಿ

ಭದ್ರಾವತಿ ಶಾಸಕ ಬಿ.ಕೆ ಸಂಗಮೇಶ್ವರ್‌ರವರ ಸಹೋದರ ಬಿ.ಕೆ ಶಿವಕುಮಾರ್‌ರವರ ಪುತ್ರಿ ಹಿತಾರವರ ಶ್ರೀಮಂತ ಕಾರ್ಯಕ್ರಮ ಶುಕ್ರವಾರ ಶಿವಮೊಗ್ಗ ಲಗಾನ್ ಕಲ್ಯಾಣ ಮಂಟಪದಲ್ಲಿ ನಡೆಯಿತು.
    ಭದ್ರಾವತಿ, ಫೆ. ೧೭ : ಶಾಸಕ ಬಿ.ಕೆ ಸಂಗಮೇಶ್ವರ್‌ರವರ ಸಹೋದರ ಬಿ.ಕೆ ಶಿವಕುಮಾರ್‌ರವರ ಪುತ್ರಿ ಹಿತಾರವರ ಶ್ರೀಮಂತ ಕಾರ್ಯಕ್ರಮ ಶುಕ್ರವಾರ ಶಿವಮೊಗ್ಗ ಲಗಾನ್ ಕಲ್ಯಾಣ ಮಂಟಪದಲ್ಲಿ ನಡೆಯಿತು.
    ಹಿತಾರವರು ಬೆಳಗಾವಿ ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್‌ರವರ ಸೊಸೆಯಾಗಿದ್ದು, ಶ್ರೀಮಂತ ಕಾರ್ಯಕ್ರಮದಲ್ಲಿ ಸಹೋದರ, ವಿಧಾನಪರಿಷತ್ ಸದಸ್ಯ ಚನ್ನರಾಜ್ ಹಟ್ಟಿಹೊಳಿ ಸೇರಿದಂತೆ ಕುಟುಂಬ ವರ್ಗದವರು ಪಾಲ್ಗೊಂಡಿದ್ದರು.
    ಕ್ಷೇತ್ರದ ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳು, ಗಣ್ಯರು, ಹಿತೈಷಿಗಳು, ಕಾಂಗ್ರೆಸ್ ಪಕ್ಷದ ಮುಖಂಡರು ಹಾಗು ಶಾಸಕ ಬಿ.ಕೆ ಸಂಗಮೇಶ್ವರ್ ಕುಟುಂಬ ವರ್ಗದವರು ಪಾಲ್ಗೊಂಡಿದ್ದರು.

ವಿಐಎಸ್‌ಎಲ್ ಆಸ್ಪತ್ರೆ ನಿವೃತ್ತ ವೈದ್ಯೆ ಡಾ. ಅರುಂಧತಿ ನಿಧನ

ಡಾ. ಅರುಂಧತಿ
ಭದ್ರಾವತಿ, ಫೆ. ೧೭ : ನಗರದ ಜನ್ನಾಪುರ ನಿವಾಸಿ, ವಿಐಎಸ್‌ಎಲ್ ಆಸ್ಪತ್ರೆ ನಿವೃತ್ತ ವೈದ್ಯೆ ಡಾ. ಅರುಂಧತಿ(೮೦) ನಿಧನ ಹೊಂದಿದರು.
ಪತಿ ಡಾ. ಚಂದ್ರಶೇಖರ್ ಹಂಚಾಟೆ, ಪುತ್ರ ಡಾ. ಗಿರೀಶ್, ಪುತ್ರಿ ಮಾಲಿನಿ ಹಾಗು ಸೊಸೆ ಇದ್ದಾರೆ. ಹುತ್ತಾಕಾಲೋನಿ ಹಿಂದೂ ರುದ್ರಭೂಮಿಯಲ್ಲಿ ಶುಕ್ರವಾರ ಸಂಜೆ ಇವರ ಅಂತ್ಯಕ್ರಿಯೆ ನೆರವೇರಿತು.
ಡಾ. ಅರುಂಧತಿಯವರ ನಿಧನಕ್ಕೆ ನಗರದ ವೈದ್ಯರು, ಗಣ್ಯರು, ವಿವಿಧ ಸಂಘ-ಸಂಸ್ಥೆಗಳು ಸಂತಾಪ ಸೂಚಿಸಿವೆ.

Thursday, February 16, 2023

ಫೆ.೨೧ರಂದು ಭದ್ರಾವತಿಗೆ ಪಂಚರತ್ನ ಯಾತ್ರೆ : ೨ನೇ ಬಾರಿಗೆ ಎಚ್‌ಡಿಕೆ ಆಗಮನ

ಎಚ್.ಡಿ ಕುಮಾರಸ್ವಾಮಿ
    ಭದ್ರಾವತಿ, ಫೆ. ೧೬ : ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಫೆ.೨೧ರಂದು ನಗರಕ್ಕೆ ಪಂಚರತ್ನ ಯಾತ್ರೆ ಮೂಲಕ ಆಗಮಿಸಲಿದ್ದು, ಒಂದೇ ತಿಂಗಳಿನಲ್ಲಿ ೨ನೇ ಬಾರಿಗೆ ಕ್ಷೇತ್ರಕ್ಕೆ ಆಗಮಿಸುತ್ತಿರುವುದು ವಿಶೇಷತೆಯಾಗಿದೆ.
    ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಮುಚ್ಚುವ ಆದೇಶದ ವಿರುದ್ಧ ಗುತ್ತಿಗೆ ಕಾರ್ಮಿಕರು ನಡೆಸುತ್ತಿರುವ ಅನಿರ್ಧಿಷ್ಟಾವಧಿ ಹೋರಾಟಕ್ಕೆ ಬೆಂಬಲ ಸೂಚಿಸಿ ಫೆ.೩ರಂದು ಬಹಿರಂಗ ಸಭೆಯಲ್ಲಿ ಪಾಲ್ಗೊಂಡು ಮಾತನಾಡುವ ಮೂಲಕ ವಿಐಎಸ್‌ಎಲ್ ಕಾರ್ಖಾನೆ ಉಳಿಸಿಕೊಳ್ಳುವ ಭರವಸೆ ನೀಡಿದ್ದರು. ಈ ನಡುವೆ ಕೇಂದ್ರ ಸರ್ಕಾರ ಕಾರ್ಖಾನೆ ಮುಚ್ಚುವ ಕುರಿತು ಸ್ಪಷ್ಟಪಡಿಸಿದೆ. ಇದರಿಂದಾಗಿ ಕಾರ್ಮಿಕ ವಲಯದಲ್ಲಿ ಆತಂಕದ ಕಾರ್ಮೋಡ ಆವರಿಸಿಕೊಂಡಿದೆ. ಕಾರ್ಖಾನೆ ಉಳಿಸುವ ಸಂಬಂಧ ಕುಮಾರಸ್ವಾಮಿಯವರ ಮುಂದಿನ ನಿಲುವಿಗಾಗಿ ಎದುರು ನೋಡುವಂತಾಗಿದೆ.
    ರಾಜ್ಯಾದ್ಯಂತ ಪಂಚರತ್ನ ಯಾತ್ರೆ ಸಂಚರಿಸುತ್ತಿದ್ದು, ಫೆ.೨೧ರಂದು ಬೆಳಿಗ್ಗೆ ೯ ಗಂಟೆಗೆ ತಾಲೂಕಿನ ಗಡಿ ಭಾಗ ಕಾರೇಹಳ್ಳಿಗೆ ಆಗಮಿಸಲಿದ್ದು, ನಂತರ ಯಾತ್ರೆ ಕೆಂಪೇಗೌಡ ನಗರ, ಬಾರಂದೂರು, ಕೆಂಚೇನಹಳ್ಳಿ, ಮಾವಿನಕೆರೆ, ತಾಷ್ಕೆಂಟ್‌ನಗರ, ಯರೇಹಳ್ಳಿ, ಮಾರುತಿನಗರ, ಶಿವನಿಕ್ರಾಸ್, ಗೌರಾಪುರ, ಬಸವನಗುಡಿ, ಕೆ.ಎಚ್ ನಗರ, ಅಂತರಗಂಗೆ, ಕಾಚಗೊಂಡನಹಳ್ಳಿ, ಅಶ್ವಥ್‌ನಗರ, ಶಿವಾಜಿ ವೃತ್ತ, ರಂಗಪ್ಪ ವೃತ್ತ, ಮಾಧವಚಾರ್ ವೃತ್ತ, ಹಾಲಪ್ಪ ವೃತ್ತ, ಅಂಡರ್‌ಬ್ರಿಡ್ಜ್, ಹೊಸ ಸೇತುವೆ, ಕೆಎಸ್‌ಆರ್‌ಟಿಸಿ ಬಸ್ ಡಿಪೋ ವೃತ್ತ, ಕಂಚಿಬಾಗಿಲು ವೃತ್ತ ಮೂಕ ಕನಕಮಂಟಪ ಮೈದಾನ ತಲುಪಲಿದೆ.
    ಸಂಜೆ ೪ ಗಂಟೆಗೆ ಕನಕಮಂಟಪ ಮೈದಾನದಲ್ಲಿ ನಡೆಯಲಿರುವ ವೇದಿಕೆ ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ, ಜೆಡಿಎಸ್  ಪಕ್ಷದ ರಾಜ್ಯಾಧ್ಯಕ್ಷ ಸಿ.ಎಂ ಇಬ್ರಾಹಿಂ, ವಿಧಾನ ಪರಿಷತ್ ಸದಸ್ಯ ಭೋಜೇಗೌಡ, ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಶಾರದ ಅಪ್ಪಾಜಿ, ಪಕ್ಷದ ನಗರ ಘಟಕದ ಅಧ್ಯಕ್ಷ ಆರ್. ಕರುಣಾಮೂರ್ತಿ, ಯುವ ಘಟಕದ ಜಿಲ್ಲಾಧ್ಯಕ್ಷ ಮಧುಕುಮಾರ್ ಸೇರಿದಂತೆ ಇನ್ನಿತರರು ಪಾಲ್ಗೊಳ್ಳಲಿದ್ದಾರೆ.

ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ಸಂತ ಶ್ರೀ ಸೇವಾಲಾಲ್ ಜಯಂತಿ

ಭದ್ರಾವತಿ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಸಂತ ಶ್ರೀ ಸೇವಾಲಾಲ್ ಜಯಂತಿ ತಾಲೂಕು ಕಛೇರಿ ಸಭಾಂಗಣದಲ್ಲಿ ಆಚರಿಸಲಾಯಿತು.
    ಭದ್ರಾವತಿ, ಫೆ. ೧೬ : ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಸಂತ ಶ್ರೀ ಸೇವಾಲಾಲ್ ಜಯಂತಿ ತಾಲೂಕು ಕಛೇರಿ ಸಭಾಂಗಣದಲ್ಲಿ ಆಚರಿಸಲಾಯಿತು.
    ತಹಸೀಲ್ದಾರ್ ಗ್ರೇಡ್-೨ ರಂಗಮ್ಮ ನಗರಸಭೆ ಮಾಜಿ ಅಧ್ಯಕ್ಷ ಬಿ.ಕೆ ಮೋಹನ್, ಬಂಜಾರ ರೈತರ ಸಂಘದ ರಾಜ್ಯಾಧ್ಯಕ್ಷ ಕೃಷ್ಣನಾಯ್ಕ, ಬಂಜಾರ ಸಂಘದ ತಾಲೂಕು ಅಧ್ಯಕ್ಷ ಪ್ರೇಮ್‌ಕುಮಾರ್ ಸೇರಿದಂತೆ ಇನ್ನಿತರರು  ಸಂತ ಶ್ರೀ ಸೇವಾಲಾಲ್‌ರವರ ಕುರಿತು ಮಾತನಾಡಿದರು.
    ಇದಕ್ಕೂ ಮೊದಲು ಸಂತ ಶ್ರೀ ಸೇವಾಲಾಲ್‌ರವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಶಿರಸ್ತೇದಾರ್ ರಾಧಕೃಷ್ಣಭಟ್, ಪ್ರಮುಖರಾದ ಹಾಲೇಶ್‌ನಾಯ್ಕ, ಪ್ರೊಫೆಸರ್ ಭೋಜನಾಯ್ಕ, ಮಲ್ಲಿಕಾನಾಯ್ಕ, ಮಂಜುನಾಯ್ಕ, ರಮೇಶ್‌ನಾಯ್ಕ, ಪಾವರ್ತಿಬಾಯಿ, ಶಿಕ್ಷಕ ಪ್ರಶಸ್ತಿ ಪುರಸ್ಕೃತೆ ಕೋಕಿಲ, ನಿವೃತ್ತ ಶಿಕ್ಷಕ ಜುಂಜ್ಯಾನಾಯ್ಕ, ದಲಿತ ಮುಖಂಡ ಕುಬೇಂದ್ರಪ್ಪ ಸೇರಿದಂತೆ ತಾಲೂಕು ಕಛೇರಿ ಅಧಿಕಾರಿಗಳು, ಸಿಬ್ಬಂದಿಗಳು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Wednesday, February 15, 2023

ಕೃಷಿ ಸಂಸ್ಕರಣಾ ಯೋಜನೆಯಡಿ ಯಂತ್ರೋಪಕರಣಗಳ ರಿಯಾಯಿತಿ ಮಾರಾಟ

    ಭದ್ರಾವತಿ, ಫೆ. ೧೬ : ಕೃಷಿ ಇಲಾಖೆ ವತಿಯಿಂದ ೨೦೨೨-೨೩ನೇ ಸಾಲಿನ ಕೃಷಿ ಸಂಸ್ಕರಣಾ ಯೋಜನೆಯಡಿ ಯಂತ್ರೋಪಕರಣಗಳನ್ನು ರಿಯಾಯಿತಿ ದರದಲ್ಲಿ ರೈತರಿಗೆ ಮಾರಾಟ ಮಾಡಲು ಲಭ್ಯವಿದ್ದು, ಇದರ ಸದುಪಯೋಗಪಡೆದುಕೊಳ್ಳುವಂತೆ ಕೋರಲಾಗಿದೆ.
    ಇತರೆ ವರ್ಗದ ರೈತರಿಗೆ ಶೇ.೫೦ರಷ್ಟು ಹಾಗು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ರೈತರುಗಳಿಗೆ ಶೇ.೯೦ರಷ್ಟು ರಿಯಾಯಿತಿಯಲ್ಲಿ ಯಂತ್ರೋಪಕರಣಗಳನ್ನು ಮಾರಾಟ ಮಾಡಲಾಗುವುದು. 


ಮಿನಿ ರೈಸ್ ಮಿಲ್(೩ ಮತ್ತು ೫ ಎಚ್.ಪಿ ವರೆಗೆ), ಎಣ್ಣೆ ತೆಗೆಯುವ ಗಾಣ, ರಾಗಿ ಪಾಲಿಶ್ ಯಂತ್ರ, ರಾಗಿ ಕ್ಲೀನಿಂಗ್ ಯಂತ್ರ, ಕಬ್ಬು ಜ್ಯೂಸ್ ಮಾಡುವ ಯಂತ್ರ, ಕಬ್ಬು ಕ್ರಷರ್, ಹಿಟ್ಟಿನ ಗಿರಣಿ, ಪಲ್ವರೈಸರ್, ರವಾ ಮಾಡುವ ಯಂತ್ರ, ಕಾರದ ಪುಡಿ ಮಾಡುವ ಯಂತ್ರ ಮತ್ತು ಶಾವಿಗೆ ಮಾಡುವ ಯಂತ್ರಗಳು ಲಭ್ಯವಿದ್ದು, ಹೆಚ್ಚಿನ ಮಾಹಿತಿಗೆ ಕೃಷಿ ಸಹಾಯಕ ನಿರ್ದೇಶಕರನ್ನು ಸಂಪರ್ಕಿಸಲು ಕೃಷಿ ಅಧಿಕಾರಿ ರಾಕೇಶ್ ಕೋರಿದ್ದಾರೆ. 

ಮನೆ ಬಾಡಿಗೆಗೆ ಕೊಡುವ ಮುನ್ನ ಈ ದಾಖಲೆ ಪರಿಶೀಲಿಸಿ : ಶಾಂತಿನಾಥ್

ಭದ್ರಾವತಿ ಹಳೇನಗರ ಠಾಣಾ ವ್ಯಾಪ್ತಿಯ ಅನ್ವರ್ ಕಾಲೋನಿಯಲ್ಲಿ ಬೀಟ್ ಸಮಿತಿ ಸದಸ್ಯರ ಸಭೆ ನಡೆಯಿತು.
    ಭದ್ರಾವತಿ, ಫೆ. ೧೫: ಮನೆಗಳನ್ನು ಬಾಡಿಗೆ ಕೊಡುವ ಮುನ್ನ ಬಾಡಿಗೆದಾರರ ಪೂರ್ವಾಪರ ಮತ್ತು ದಾಖಲಾತಿಗಳನ್ನು ಪರಿಶೀಲಿಸಬೇಕೆಂದು ನಗರ ವೃತ್ತ ನಿರೀಕ್ಷಕ ಶಾಂತಿನಾಥ್ ಸೂಚನೆ ನೀಡಿದ್ದಾರೆ.
    ಅವರು ಹಳೇನಗರ ಠಾಣಾ ವ್ಯಾಪ್ತಿಯ ಅನ್ವರ್ ಕಾಲೋನಿಯಲ್ಲಿ  ಬೀಟ್ ಸಮಿತಿ ಸದಸ್ಯರ ಸಭೆ ನಡೆಸಿ, ಸಾರ್ವಜನಿಕರನ್ನು ಕುರಿತು  ಮಾತನಾಡಿದರು. ಮನೆಗಳನ್ನು ಬಾಡಿಗೆಗೆ ಕೊಡುವ ಸಂದರ್ಭದಲ್ಲಿ, ಬಾಡಿಗೆದಾರರ ಪೂರ್ವಾಪರ ಮತ್ತು ದಾಖಲೆಗಳಾದ ಚುನಾವಣಾ ಗುರುತಿನ ಚೀಟಿ, ಆಧಾರ್ ಕಾರ್ಡ್‌ಗಳನ್ನು ಪರಿಶೀಲಿಸಿ ಅವರುಗಳ ಮಾಹಿತಿಯನ್ನು ಖಚಿತ ಪಡಿಸಿಕೊಳ್ಳಬೇಕು. ಪೊಲೀಸ್ ಠಾಣೆಯಲ್ಲಿ ಬಾಡಿಗೆದಾರರ ಪೂರ್ವಾಪರವನ್ನು ಪರಿಶೀಲಿಸಿಕೊಂಡ ನಂತರವೇ ಬಾಡಿಗೆಗೆ ನೀಡಬೇಕು. ಕಡ್ಡಾಯವಾಗಿ ಗುರುತಿನ ಚೀಟಿಗಳ ಜೆರಾಕ್ಸ್ ಪ್ರತಿಗಳನ್ನು ಪಡೆದುಕೊಳ್ಳಬೇಕು ಎಂದು ಸೂಚಿಸಿದರು.
    ಉಳಿದಂತೆ ಇಸ್ಪೀಟು ಜೂಜಾಟ, ಮಟ್ಕಾ ಮತ್ತು ಗಾಂಜಾ ವ್ಯಸನದಿಂದಾಗುವ ದುಷ್ಪರಿಣಾಮಗಳ ಕುರಿತು ಅವರು ಮಾಹಿತಿ ನೀಡಿದರು.  ತಮ್ಮ ವ್ಯಾಪ್ತಿಯಲ್ಲಿ ಯಾವುದೇ ರೀತಿಯ ಸಣ್ಣ ಪುಟ್ಟ ಘಟನೆಗಳು ಜರುಗಿದ ಸಂದರ್ಭದಲ್ಲಿ ಕೂಡಲೇ ಹತ್ತಿರದ ಪೊಲೀಸ್ ಠಾಣೆಗೆ ಮಾಹಿತಿ ನೀಡುವುದರಿಂದ, ಸಮಸ್ಯೆಯು ಚಿಕ್ಕದಿರುವಾಗಲೇ ಬಗೆಹರಿಸಿ ದೊಡ್ಡದಾಗದಂತೆ ತಡೆಯಬಹುದಾಗಿರುತ್ತದೆ ಎಂದರು.
    ಯಾವುದೇ ಕಾನೂನು ಬಾಹೀರ ಚಟುವಟಿಕೆಗಳು ಕಂಡು ಬಂದಲ್ಲಿ ಕೂಡಲೇ ಹತ್ತಿರದ ಪೊಲೀಸ್ ಠಾಣೆ /ಪೊಲೀಸ್ ಕಂಟ್ರೋಲ್ ರೂಂ/೧೧೨ ತುರ್ತು ಸಹಾಯವಾಣಿಗೆ ಮಾಹಿತಿ ನೀಡಬೇಕು ಎಂದರು.

ಸಹಾಯಕ ತನಿಖಾಧಿಕಾರಿಯಾಗಿ ಉತ್ತಮ ಕರ್ತವ್ಯ ನಿರ್ವಹಣೆ : ಚಂದ್ರಕಲಾಗೆ ಪ್ರಶಂಸೆ

ಜಿಲ್ಲಾ ಪೊಲೀಸ್ ವತಿಯಿಂದ ಪ್ರಶಂಸನಾ ಪತ್ರ ವಿತರಣೆ

೨೦೧೮ನೇ ಸಾಲಿನಲ್ಲಿ ಹಳೇನಗರದ ಪೊಲೀಸ್ ಠಾಣೆಯಲ್ಲಿ ದಾಖಲಾದ ಮಾರಣಾಂತಿಕ ಹಲ್ಲೆ ಪ್ರಕರಣದಲ್ಲಿ ತನಿಖಾ ಸಹಾಯಕರಾಗಿ ಕತವ್ಯ ನಿರ್ವಹಿಸಿ, ಆರೋಪಿಗಳಿಗೆ ಶಿಕ್ಷೆಯಾಗುವಲ್ಲಿ ಪ್ರಮುಖ ಪಾತ್ರ ವಹಿಸಿರುವ ಠಾಣೆಯ ಸಿಬ್ಬಂದಿ(ಸಿಎಚ್‌ಸಿ) ಚಂದ್ರಕಲಾ ಅವರನ್ನು ಜಿಲ್ಲಾ ಪೊಲೀಸ್ ವತಿಯಿಂದ ಪ್ರಶಂಸನಾ ಪತ್ರ ನೀಡಿ ಅಭಿನಂದಿಸಲಾಯಿತು.
    ಭದ್ರಾವತಿ, ಫೆ. ೧೫ : ೨೦೧೮ನೇ ಸಾಲಿನಲ್ಲಿ ಹಳೇನಗರದ ಪೊಲೀಸ್ ಠಾಣೆಯಲ್ಲಿ ದಾಖಲಾದ ಮಾರಣಾಂತಿಕ ಹಲ್ಲೆ ಪ್ರಕರಣದಲ್ಲಿ ತನಿಖಾ ಸಹಾಯಕರಾಗಿ ಕತವ್ಯ ನಿರ್ವಹಿಸಿ, ಆರೋಪಿಗಳಿಗೆ ಶಿಕ್ಷೆಯಾಗುವಲ್ಲಿ ಪ್ರಮುಖ ಪಾತ್ರ ವಹಿಸಿರುವ ಠಾಣೆಯ ಸಿಬ್ಬಂದಿ(ಸಿಎಚ್‌ಸಿ) ಚಂದ್ರಕಲಾ ಅವರನ್ನು ಜಿಲ್ಲಾ ಪೊಲೀಸ್ ವತಿಯಿಂದ ಪ್ರಶಂಸನಾ ಪತ್ರ ನೀಡಿ ಅಭಿನಂದಿಸಲಾಯಿತು.
    ಜಿಲ್ಲಾ ರಕ್ಷಣಾಧಿಕಾರಿ ಜಿ.ಕೆ ಮಿಥುನ್‌ಕುಮಾರ್ ಚಂದ್ರಕಲಾ ಅವರನ್ನು ಅಭಿನಂದಿಸಿದರು. ಶಿವಮೊಗ್ಗ ಪೊಲೀಸ್ ಉಪವಿಭಾಗದ ಪೊಲೀಸ್ ಉಪಾಧೀಕ್ಷಕ ಎಂ. ಸುರೇಶ್, ಡಿಸಿಆರ್ ಉಪ ನಿರೀಕ್ಷಕ ಮೋಹನ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
    ಚಂದ್ರಕಲಾ ಅವರು ಹೊಸಸೇತುವೆ ರಸ್ತೆಯಲ್ಲಿರುವ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಆಶ್ರಿತದ ವಿಶ್ವೇಶ್ವರಾಯ ವಿದ್ಯಾಸಂಸ್ಥೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಜಾನಪದ ಕಲಾವಿದ ದಿವಾಕರ್ ಅವರ ಪತ್ನಿಯಾಗಿದ್ದಾರೆ. ಇವರಿಗೆ ಹಳೇನಗರ ಪೊಲೀಸ್ ಠಾಣೆ ಸಿಬ್ಬಂದಿಗಳು ಅಭಿನಂದಿಸಿದ್ದಾರೆ.