![](https://blogger.googleusercontent.com/img/a/AVvXsEiG-VrjZWucrzgHA7ZfzMcrN1i03he-nvQ7McgM-pHxNP8AIb2BttvBr9jOAD92cV4X0H4evsvpzl1efWkrp4t95Bw27rYIhxEeozuIRqpzZfvegAzOK1KUf9aUMrdB31Mn6spnbwoUVtnWd23qpk7ikEzfdbECQ4f-8lr3HpL0XsbstOipYFeuP_8Nsg=w274-h400-rw)
ಎಚ್.ಡಿ ಕುಮಾರಸ್ವಾಮಿ
ಭದ್ರಾವತಿ, ಫೆ. ೧೬ : ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಫೆ.೨೧ರಂದು ನಗರಕ್ಕೆ ಪಂಚರತ್ನ ಯಾತ್ರೆ ಮೂಲಕ ಆಗಮಿಸಲಿದ್ದು, ಒಂದೇ ತಿಂಗಳಿನಲ್ಲಿ ೨ನೇ ಬಾರಿಗೆ ಕ್ಷೇತ್ರಕ್ಕೆ ಆಗಮಿಸುತ್ತಿರುವುದು ವಿಶೇಷತೆಯಾಗಿದೆ.
ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಮುಚ್ಚುವ ಆದೇಶದ ವಿರುದ್ಧ ಗುತ್ತಿಗೆ ಕಾರ್ಮಿಕರು ನಡೆಸುತ್ತಿರುವ ಅನಿರ್ಧಿಷ್ಟಾವಧಿ ಹೋರಾಟಕ್ಕೆ ಬೆಂಬಲ ಸೂಚಿಸಿ ಫೆ.೩ರಂದು ಬಹಿರಂಗ ಸಭೆಯಲ್ಲಿ ಪಾಲ್ಗೊಂಡು ಮಾತನಾಡುವ ಮೂಲಕ ವಿಐಎಸ್‌ಎಲ್ ಕಾರ್ಖಾನೆ ಉಳಿಸಿಕೊಳ್ಳುವ ಭರವಸೆ ನೀಡಿದ್ದರು. ಈ ನಡುವೆ ಕೇಂದ್ರ ಸರ್ಕಾರ ಕಾರ್ಖಾನೆ ಮುಚ್ಚುವ ಕುರಿತು ಸ್ಪಷ್ಟಪಡಿಸಿದೆ. ಇದರಿಂದಾಗಿ ಕಾರ್ಮಿಕ ವಲಯದಲ್ಲಿ ಆತಂಕದ ಕಾರ್ಮೋಡ ಆವರಿಸಿಕೊಂಡಿದೆ. ಕಾರ್ಖಾನೆ ಉಳಿಸುವ ಸಂಬಂಧ ಕುಮಾರಸ್ವಾಮಿಯವರ ಮುಂದಿನ ನಿಲುವಿಗಾಗಿ ಎದುರು ನೋಡುವಂತಾಗಿದೆ.
ರಾಜ್ಯಾದ್ಯಂತ ಪಂಚರತ್ನ ಯಾತ್ರೆ ಸಂಚರಿಸುತ್ತಿದ್ದು, ಫೆ.೨೧ರಂದು ಬೆಳಿಗ್ಗೆ ೯ ಗಂಟೆಗೆ ತಾಲೂಕಿನ ಗಡಿ ಭಾಗ ಕಾರೇಹಳ್ಳಿಗೆ ಆಗಮಿಸಲಿದ್ದು, ನಂತರ ಯಾತ್ರೆ ಕೆಂಪೇಗೌಡ ನಗರ, ಬಾರಂದೂರು, ಕೆಂಚೇನಹಳ್ಳಿ, ಮಾವಿನಕೆರೆ, ತಾಷ್ಕೆಂಟ್‌ನಗರ, ಯರೇಹಳ್ಳಿ, ಮಾರುತಿನಗರ, ಶಿವನಿಕ್ರಾಸ್, ಗೌರಾಪುರ, ಬಸವನಗುಡಿ, ಕೆ.ಎಚ್ ನಗರ, ಅಂತರಗಂಗೆ, ಕಾಚಗೊಂಡನಹಳ್ಳಿ, ಅಶ್ವಥ್‌ನಗರ, ಶಿವಾಜಿ ವೃತ್ತ, ರಂಗಪ್ಪ ವೃತ್ತ, ಮಾಧವಚಾರ್ ವೃತ್ತ, ಹಾಲಪ್ಪ ವೃತ್ತ, ಅಂಡರ್‌ಬ್ರಿಡ್ಜ್, ಹೊಸ ಸೇತುವೆ, ಕೆಎಸ್‌ಆರ್‌ಟಿಸಿ ಬಸ್ ಡಿಪೋ ವೃತ್ತ, ಕಂಚಿಬಾಗಿಲು ವೃತ್ತ ಮೂಕ ಕನಕಮಂಟಪ ಮೈದಾನ ತಲುಪಲಿದೆ.
ಸಂಜೆ ೪ ಗಂಟೆಗೆ ಕನಕಮಂಟಪ ಮೈದಾನದಲ್ಲಿ ನಡೆಯಲಿರುವ ವೇದಿಕೆ ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ, ಜೆಡಿಎಸ್ ಪಕ್ಷದ ರಾಜ್ಯಾಧ್ಯಕ್ಷ ಸಿ.ಎಂ ಇಬ್ರಾಹಿಂ, ವಿಧಾನ ಪರಿಷತ್ ಸದಸ್ಯ ಭೋಜೇಗೌಡ, ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಶಾರದ ಅಪ್ಪಾಜಿ, ಪಕ್ಷದ ನಗರ ಘಟಕದ ಅಧ್ಯಕ್ಷ ಆರ್. ಕರುಣಾಮೂರ್ತಿ, ಯುವ ಘಟಕದ ಜಿಲ್ಲಾಧ್ಯಕ್ಷ ಮಧುಕುಮಾರ್ ಸೇರಿದಂತೆ ಇನ್ನಿತರರು ಪಾಲ್ಗೊಳ್ಳಲಿದ್ದಾರೆ.