ಬೃಹತ್ ಪ್ರತಿಭಟನಾ ಮೆರವಣಿಗೆ ಮೂಲಕ ಪ್ರಧಾನಮಂತ್ರಿಗೆ ಮನವಿ
![](https://blogger.googleusercontent.com/img/a/AVvXsEgjOA0yJVEqLRe_Vk4iDTSTV54oaUL79stn8e1kh5amWbsNqBPfx83oQC1ww2QstskL8xg2V94TO6yVvntd9fUAvciTw5kFSjmwoFvuVqGx62JiMaljGd2Bnes55o3wf75UTqSF_PZVVMgMqCwwCKWx9NzXJOyZAURM_N1OedHGYJu5hhFnEYZYRUSfRA=w400-h289-rw)
ಭದ್ರಾವತಿ ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಉಳಿವಿಗಾಗಿ ತಾಲೂಕು ಖಾಸಗಿ ಅನುದಾನರಹಿತ ಶಾಲಾ ಆಡಳಿತ ಮಂಡಳಿಗಳ ಒಕ್ಕೂಟದ ವತಿಯಿಂದ ಬುಧವಾರ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿ ತಹಸೀಲ್ದಾರ್ ಗ್ರೇಡ್-೨ ರಂಗಮ್ಮ ಮೂಲಕ ಪ್ರಧಾನಮಂತ್ರಿಗೆ ಮನವಿ ಸಲ್ಲಿಸಲಾಯಿತು.
ಭದ್ರಾವತಿ, ಫೆ. ೨೨: ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಉಳಿವಿಗಾಗಿ ತಾಲೂಕು ಖಾಸಗಿ ಅನುದಾನರಹಿತ ಶಾಲಾ ಆಡಳಿತ ಮಂಡಳಿಗಳ ಒಕ್ಕೂಟದ ವತಿಯಿಂದ ಬುಧವಾರ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿ ತಹಸೀಲ್ದಾರ್ ಗ್ರೇಡ್-೨ ರಂಗಮ್ಮ ಮೂಲಕ ಪ್ರಧಾನಮಂತ್ರಿಗೆ ಮನವಿ ಸಲ್ಲಿಸಲಾಯಿತು.
ಭಾರತರತ್ನ ಸರ್ ಎಂ. ವಿಶ್ವೇಶ್ವರಾಯ ಅವರ ದೂರ ದೃಷ್ಟಿಯ ಕಾರಣದಿಂದ ಅಂದಿನ ಮೈಸೂರು ಮಹಾರಾಜರಾಗಿದ್ದ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರಿಂದ ನಿರ್ಮಾಣಗೊಂಡು ಮೈಸೂರು ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಎನ್ನುವ ಹೆಸರಿನಿಂದ ಕರೆಯಲ್ಪಡುತ್ತಿದ್ದ ಈ ಕಾರ್ಖಾನೆ ೧೯೨೩ರಲ್ಲಿ ಉತ್ಪಾದನೆ ಪ್ರಾರಂಭಿಸಿತು. ಭಾರತದ ಸ್ವಾತಂತ್ರ್ಯ ಪೂರ್ವದಲ್ಲಿ ಪ್ರಾರಂಭಗೊಂಡ ಸರ್ಕಾರದ ಮಾಲಿಕತ್ವದ ಮೊದಲ ಏಕೈಕ ಕಾರ್ಖಾನೆ ಇದಾಗಿದ್ದು, ನಂತರ ವಿಶ್ವೇಶ್ವರಾಯ ಐರನ್ ಅಂಡ್ ಸ್ಟೀಲ್ ಕಂಪನಿ, ಸ್ಟೀಲ್ ಅಥಾರಿಟಿ ಆಫ್ ಇಂಡಿಯಾ ಎಂಬ ಬದಲಾದ ಹೆಸರಿನಿಂದ ವಿಶೇಷ ಉಕ್ಕು ಉತ್ಪಾದನೆಗೆ ದೇಶ ವಿದೇಶಗಳಲ್ಲಿ ಹೆಸರು ಮಾಡಿ ಪ್ರಸ್ತುತ ಭಾರತ ಸರ್ಕಾರದ ನೀತಿಯಿಂದಾಗಿ ಮುಚ್ಚಲ್ಪಡುವ ಹಂತಕ್ಕೆ ಬಂದು ನಿಂತಿರುವುದು ವಿಷಾದನೀಯ ಬೆಳವಣಿಗೆಯಾಗಿದೆ.
ವಿದ್ಯಾರ್ಥಿಗಳು ಭವಿಷ್ಯದ ಪ್ರಜೆಗಳಾಗಿದ್ದು, ಇವರ ಉತ್ತಮ ಭವಿಷ್ಯದ ಹಿನ್ನಲೆಯಲ್ಲಿ ಹಾಗು ಕಾರ್ಖಾನೆಯನ್ನು ನಂಬಿ ಬದುಕುವ ಕಾರ್ಮಿಕರು, ಕುಟುಂಬ ವರ್ಗದವರ ಮತ್ತು ಸಮಸ್ತ ನಾಗರೀಕರಿಗಾಗಿ ಈ ಕಾರ್ಖಾನೆ ಉಳಿಯುವುದು ಅಗತ್ಯವಾಗಿದೆ. ಈ ಹಿನ್ನಲೆಯಲ್ಲಿ ದೇಶದ ಪ್ರಧಾನಮಂತ್ರಿಗಳು ಮನಸ್ಸು ಮಾಡಿ ಈ ಕಾರ್ಖಾನೆಯನ್ನು ಉಳಿಸಿಕೊಡುವ ಮೂಲಕ ನೆರವಿಗೆ ಮುಂದಾಗಬೇಕು.
- ಶ್ರೀ ಪ್ರಸನ್ನನಾಥ ಸ್ವಾಮೀಜಿ,
ಕಾರ್ಯದರ್ಶಿಗಳು, ಶ್ರೀ ಕ್ಷೇತ್ರ ಆದಿಚುಂಚನಗಿರಿ ಮಹಾಸಂಸ್ಥಾನ ಮಠ.
ಲಕ್ಷಾಂತರ ಕಾರ್ಮಿಕರ ಕುಟುಂಬಗಳ ಜೀವನ ನಿರ್ವಹಣೆಗೆ ಕಾರಣವಾಗಿದ್ದ ಈ ಕಾರ್ಖಾನೆ ದೇಶದ ಪ್ರಗತಿಗೆ ತನ್ನ ಕೊಡುಗೆಯನ್ನು ನೀಡಿದೆ. ನೂರು ವರ್ಷಗಳ ಇತಿಹಾಸವನ್ನು ಹೊಂದಿರುವ ಕರ್ನಾಟಕದ ಹೆಮ್ಮೆಯ ಆಸ್ತಿಯನ್ನು ತನ್ನ ನೀತಿಯ ಹೊರತಾಗಿಯು ಈಗಿನ ತಂತ್ರಜ್ಞಾನ ಬಳಸಿ, ಆಧುನೀಕರಣಗೊಳಿಸಿ ಮುಂದಿನ ಪೀಳಿಗೆಗೆ ಉಳಿಸಿಕೊಳ್ಳುವುದು ಕೇಂದ್ರ ಸರ್ಕಾರದ ಜವಾಬ್ದಾರಿಯಾಗಿರುತ್ತದೆ.
ಈ ಹಿನ್ನಲೆಯಲ್ಲಿ ಪ್ರಧಾನಮಂತ್ರಿಯವರು ದೇಶದ ಪ್ರತಿಷ್ಠಿತ ಸರ್ಕಾರಿ ಕ್ಷೇತ್ರದ ಕಾರ್ಖಾನೆಗಳಲ್ಲಿ ಹಿರಿಯದಾದ ಈ ಕಾರ್ಖಾನೆಯನ್ನು ಸ್ಥಗಿತಗೊಳಿಸುವ ನಿರ್ಧಾರವನ್ನು ತಕ್ಷಣವೇ ಕೈಬಿಟ್ಟು, ಆಧುನಿಕ ತಂತ್ರಜ್ಞಾನ ಬಳಸಿ ಆಧುನೀಕರಣಗೊಳಿಸಲು ಬೇಕಾಗುವ ಬಂಡವಾಳ ತೊಡಗಿಸಿ ಅಭಿವೃದ್ಧಿಪಡಿಸಬೇಕಾಗಿ ಮನವಿಯಲ್ಲಿ ಕೋರಲಾಗಿದೆ.
ಒಕ್ಕೂಟದ ಮಹಾ ಪೋಷಕರು, ಶ್ರೀ ಕ್ಷೇತ್ರ ಆದಿಚುಂಚನಗಿರಿ ಕ್ಷೇತ್ರದ ಕಾರ್ಯದರ್ಶಿ ಶ್ರೀ ಪ್ರಸನ್ನನಾಥಸ್ವಾಮೀಜಿ, ಉಪಾಧ್ಯಕ್ಷರಾದ ಡಾ. ವಿನೀತ್ ಆನಂದ್, ಲತಾ ರಾಬರ್ಟ್, ಕಾರ್ಯದರ್ಶಿ ಶಿವಲಿಂಗೇಗೌಡ, ಸಹಕಾರ್ಯದರ್ಶಿಗಳಾದ ಬಿ.ಎಂ ಸಂತೋಷ್, ಬಿ. ದೇವರಾಜ, ಖಜಾಂಚಿ ರೆವರೆಂಡ್ ಫಾಸ್ಟರ್ ಹೇನ್ಸ್ ಜಾನ್, ನಿರ್ದೇಶಕರಾದ ಬಿ. ಜಗದೀಶ್, ಜಿ.ಎಸ್ ಮಹೇಶ್ವರಪ್ಪ, ಕೆ. ನಾಗರಾಜ್, ಸಿಸ್ಟರ್ ರೀತಾ, ಜರೇನಾ ಬೇಗಂ, ಆರ್. ಸುರೇಶ್ ಬಾಬು, ಪ್ರಭಾಕರ್, ಬಿ.ಸಿ ಪ್ರಸಾದ್, ಸಲಹೆಗಾರರಾದ ಬಿ.ಎಲ್ ರಂಗಸ್ವಾಮಿ, ಡಾ. ಮಹಾಬಲೇಶ್ವರ ಮತ್ತು ಕಾಳೇಗೌಡ, ಗುತ್ತಿಗೆ ಕಾರ್ಮಿಕರ ಸಂಘಟನೆಗಳ ಅಧ್ಯಕ್ಷರು, ಪದಾಧಿಕಾರಿಗಳು, ವಿವಿಧ ಸಂಘ-ಸಂಸ್ಥೆಗಳ ಮುಖಂಡರು ಸೇರಿದಂತೆ ತಾಲೂಕಿನ ಎಲ್ಲಾ ಅನುದಾನರಹಿತ ಶಾಲೆಗಳ ಸುಮಾರು ೫ ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು, ಪೋಷಕರು, ಶಿಕ್ಷಕರು, ಸಿಬ್ಬಂದಿ ವರ್ಗದವರು ಪ್ರತಿಭಟನಾ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.
ವಿಐಎಸ್‌ಎಲ್ ಕಾರ್ಖಾನೆ ಮುಂಭಾಗದಿಂದ ಆರಂಭಗೊಂಡ ಮೆರವಣಿಗೆ ಡಬ್ಬಲ್ ರಸ್ತೆ ಮೂಲಕ ಅಂಬೇಡ್ಕರ್ ವೃತ್ತ, ಹಾಲಪ್ಪವೃತ್ತ, ಮಾಧವಚಾರ್ ವೃತ್ತ ಮತ್ತು ರಂಗಪ್ಪ ವೃತ್ತ ಮೂಲಕ ತಾಲೂಕು ಕಛೇರಿ ತಲುಪಿತು.
ವಿದ್ಯಾರ್ಥಿಗಳು, ನಾಗರೀಕರ ಹಿತರಕ್ಷಣೆ ಬಹಳ ಮುಖ್ಯವಾಗಿದ್ದು, ಕಾರ್ಖಾನೆಯನ್ನು ಅನಗತ್ಯವಾಗಿ ರಾಜಕೀಯಕ್ಕೆ ಬಳಸಿಕೊಳ್ಳದೆ ಎಲ್ಲಾ ರಾಜಕೀಯ ಪಕ್ಷಗಳು, ಜನಪ್ರತಿನಿಧಿಗಳು ಈ ಕಾರ್ಖಾನೆ ಉಳಿಸಿಕೊಡುವ ನಿಟ್ಟಿನಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಈ ಕಾರ್ಖಾನೆಗೆ ಅಗತ್ಯವಿರುವ ಬಂಡವಾಳ ತೊಡಗಿಸಿ ಅಭಿವೃದ್ಧಿಗೊಳಿಸುವಂತೆ ಕೋರುತ್ತೇವೆ.
- ಕಾಳೇಗೌಡ, ಸಲಹೆಗಾರರು, ಹಿರಿಯ ಕಾರ್ಮಿಕರು ಮುಖಂಡರು.