Tuesday, March 7, 2023

ಜ್ಞಾನದ ಬೆಳಕು ನೀಡುವವರು ನಿಜವಾದ ಗುರುಗಳು : ಶ್ರೀ ಸದ್ಗುರು ಬಸವಾನಂದ ಭಾರತಿ ಮಹಾಸ್ವಾಮೀಜಿ


ಕುಳ್ಳೂರು ಸುಕ್ಷೇತ್ರದ ಶ್ರೀ ಶಿವಯೋಗಿಶ್ವರ ಸಂಸ್ಥಾನ ಮಠದ ಶ್ರೀ ಸದ್ಗುರು ಬಸವಾನಂದ ಭಾರತಿ ಮಹಾಸ್ವಾಮೀಜಿಯವರು ಭದ್ರಾವತಿ ತಾಲೂಕು ಬಲಿಜ ಸಂಘದ ವತಿಯಿಂದ ಮಂಗಳವಾರ ಹಮ್ಮಿಕೊಳ್ಳಲಾಗಿದ್ದ ಶ್ರೀ ಕೈವಾರ ಸದ್ಗುರು ಯೋಗಿನಾರೇಯಣ ತಾತಯ್ಯನವರ ೨೯೭ನೇ ಜಯಂತೋತ್ಸವ ಕಾರ್ಯಕ್ರಮದ ದಿವ್ಯಸಾನಿಧ್ಯವಹಿಸಿ ಉದ್ಘಾಟಿಸಿದರು. 
    ಭದ್ರಾವತಿ, ಮಾ. ೭: ಎಲ್ಲರೂ ಸಹ ಗುರುಗಳಾಗಲು ಸಾಧ್ಯವಿಲ್ಲ. ಜ್ಞಾನದ ಬೆಳಕು ನೀಡುವವರು ನಿಜವಾದ ಗುರುಗಳು ಎಂದು ಕುಳ್ಳೂರು ಸುಕ್ಷೇತ್ರದ ಶ್ರೀ ಶಿವಯೋಗಿಶ್ವರ ಸಂಸ್ಥಾನ ಮಠದ ಶ್ರೀ ಸದ್ಗುರು ಬಸವಾನಂದ ಭಾರತಿ ಮಹಾಸ್ವಾಮೀಜಿ ಹೇಳಿದರು.
    ಶ್ರೀಗಳು ಮಂಗಳವಾರ ತಾಲೂಕು ಬಲಿಜ ಸಂಘದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಶ್ರೀ ಕೈವಾರ ಸದ್ಗುರು ಯೋಗಿನಾರೇಯಣ ತಾತಯ್ಯನವರ ೨೯೭ನೇ ಜಯಂತೋತ್ಸವ ಕಾರ್ಯಕ್ರಮದ ದಿವ್ಯಸಾನಿಧ್ಯವಹಿಸಿ ಮಾತನಾಡಿದರು.  
    ಸಮಾಜದಲ್ಲಿ ಎಲ್ಲರನ್ನು ಒಗ್ಗೂಡಿಸಿ ಮುನ್ನಡೆಯುವಂತೆ ಮಾರ್ಗದರ್ಶನ ಮಾಡುವುದು ಗುರುಗಳ ಕೆಲಸವಾಗಿದೆ. ಈ ನಿಟ್ಟಿನಲ್ಲಿ ತಾತಯ್ಯ ನವರು  ಎಲ್ಲಾ ಸಮಾಜದವರನ್ನು ಒಗ್ಗೂಡಿಸುವ ಮೂಲಕ ಸಮಾಜಕ್ಕೆ ಬೆಳಕಾಗಿದ್ದರು.  ಅವರ ಆದರ್ಶಗಳನ್ನು ಮೈಗೂಡಿಸಿಕೊಂಡಿರುವ ಬಲಿಜ ಸಮಾಜ ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ,  ರಾಜಕೀಯವಾಗಿ ಹಿಂದುಳಿದಿದೆ. ಆದರೂ ಈ ಸಮಾಜ ಸದೃಢವಾಗಲು ಎಲ್ಲರೂ ಸಂಘಟಿತರಾಗಿ ಮುನ್ನಡೆಯುತ್ತಿರುವುದು ಶ್ಲಾಘನೀಯ ಎಂದರು.
   ಶಾಸಕ ಬಿ.ಕೆ ಸಂಗಮೇಶ್ವರ್, ನಗರಸಭಾ ಸದಸ್ಯ ಅನುಪಮಾ ಚೆನ್ನೇಶ್,  ಸಂಘದ ಗೌರವಾಧ್ಯಕ್ಷ ಎಸ್.ಎನ್ ಸುಬ್ರಮಣ್ಯ, ಉಪಾಧ್ಯಕ್ಷರಾದ ಜಂಗಮಪ್ಪ, ಶಕುಂತಲ, ಪ್ರಧಾನ ಕಾರ್ಯದರ್ಶಿ ಎಂ. ರಮೇಶ್, ಸಹ ಕಾರ್ಯದರ್ಶಿ ಟಿ. ರಮೇಶ್, ಖಜಾಂಚಿ ಬಿ.ಎ ನರೇಂದ್ರಬಾಬು, ಮಹಿಳಾ ಬಲಿಜ ಸಮಾಜದ ಅಧ್ಯಕ್ಷೆ ಶಾಂತಮ್ಮ, ಹಿಂದುಳಿದ ವರ್ಗಗಳ ಮುಖಂಡ ಟಿ. ವೆಂಕಟೇಶ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎಸ್. ಮಣಿಶೇಖರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಸಂಘದ ಅಧ್ಯಕ್ಷ ಜೆ.ಎಸ್ ಸಂಜೀವಮೂರ್ತಿ ಅಧ್ಯಕ್ಷತೆ ವಹಿಸಿದ್ದರು. ನಿರ್ದೇಶಕ ಎಚ್.ಆರ್ ರಂಗನಾಥ್ ಸ್ವಾಗತಿಸಿದರು. ಎಸ್‌ಎಸ್‌ಎಲ್‌ಸಿ, ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. 


ಭದ್ರಾವತಿ ತಾಲೂಕು ಬಲಿಜ ಸಂಘದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಶ್ರೀ ಕೈವಾರ ಸದ್ಗುರು ಯೋಗಿನಾರೇಯಣ ತಾತಯ್ಯನವರ ೨೯೭ನೇ ಜಯಂತೋತ್ಸವ ಕಾರ್ಯಕ್ರಮದಲ್ಲಿ ಶಾಸಕ ಬಿ.ಕೆ ಸಂಗಮೇಶ್ವರ್ ಪಾಲ್ಗೊಂಡಿದ್ದರು. 

ಬಗರ್ ಹುಕುಃ ಸಾಗುವಳಿದಾರರಿಗೆ ಅನ್ಯಾಯ : ಮನವಿ

    ಭದ್ರಾವತಿ, ಮಾ. ೭: ಬಗರ್ ಹುಕುಃ ಸಾಗುವಳಿದಾರರಿಗೆ ಅನ್ಯಾಯವಾಗಿದ್ದು, ಸಾಗುವಳಿ ಮಾಡಿಕೊಂಡು ಬರುವ ರೈತರಿಗೆ ಅವರ ಜಮೀನಿನ ಮೇಲೆ ಯಾವುದೇ ರೀತಿಯ ತೊಂದರೆ ನೀಡಬಾರದು ಹಾಗು ತಿದ್ದುಪಡಿಯಾಗಿರುವ ಪಹಣಿ ಮತ್ತು ಮುಟೇಷನ್ ಈ ಹಿಂದೆ ಇದ್ದ ದಾಖಲಾತಿಯಂತೆ ನಮೂದು ಮಾಡಬೇಕು ಮತ್ತು ರೈತರಿಗೆ ಸಾಗುವಳಿ ಚೀಟಿ ನೀಡಬೇಕೆಂದು ತಾಲೂಕಿನ ಕೋಡಿಹಳ್ಳಿ ಗ್ರಾಮದ ಬಗರ್ ಹುಕುಃ ಸಾಗುವಳಿದಾರ ಆರ್. ರುದ್ರಪ್ಪ ಸೇರಿದಂತೆ ಸುಮಾರು ೨೦ಕ್ಕೂ ಹೆಚ್ಚಿನ ರೈತರು ತಹಸೀಲ್ದಾರ್‌ಗೆ ಮಂಗಳವಾರ ಮನವಿ ಸಲ್ಲಿಸಿದ್ದಾರೆ.
   ತಾಲೂಕಿನ ಕೂಡ್ಲಿಗೆರೆ ಹೋಬಳಿ ಕೊಟ್ಟಿದಾಳು ಗ್ರಾಮದ ಸರ್ವೆ ನಂ.೧ ಮತ್ತು ೨ರಲ್ಲಿ ಸಾಗುವಳಿದಾರರು ಸಾಗು ಮಾಡುವ ಸರ್ಕಾರಿ ಹುಲ್ಲುಬನಿ ಜಮೀನಿಗೆ ಸುಮಾರು ೮೦ ಮತ್ತು ೯೦ ವರ್ಷಗಳಿಂದಲೂ ಸರ್ಕಾರಿ ಹುಲ್ಲುಬನಿ ಎಂದು ಪಹಣಿ ಮತ್ತು ಮುಟೇಷನ್ ನಲ್ಲಿ ಇದ್ದು,  ಇದೀಗ ಜನವರಿ ತಿಂಗಳ ೨೦೨೩ರಂದು ಅರಣ್ಯವೆಂದು ಪಹಣಿ ಮತ್ತು ಮುಟೇಷನಲ್ಲಿ ನಮೂದಾಗಿರುತ್ತದೆ. ಈ ಮೂಲಕ ಸಾಗುವಳಿ ರೈತರಿಗೆ ಅನ್ಯಾಯವಾಗಿರುತ್ತದೆ ಎಂದು ಆರೋಪಿಸಲಾಗಿದೆ.
    ಇದೇ ರೀತಿ ಹೊಳೆಹೊನ್ನೂರು ಹೋಬಳಿ ಉಕ್ಕುಂದ ಗ್ರಾಮದ ಸರ್ವೆ ನಂ. ೧೦ರಲ್ಲಿ ಸಹ ಮತ್ತು ಎರೆಹಳ್ಳಿ ಗ್ರಾಮದ ಸರ್ವೆ ನಂ ೧೩ ಮತ್ತು ೧೪ರಲ್ಲಿ ಇದೇ ರೀತಿ ಸಮಸ್ಯೆಯು ರೈತರು ಸಾಗುವಳಿ ಮಾಡುತ್ತಿದ್ದ ಗೋಮಾಳ ಜಮೀನು ಮತ್ತು ಸರ್ಕಾರಿ ಹುಲ್ಲುಬನಿ ಜಮೀನಿಗೆ ಜನವರಿ ೨೦೨೩ರಂದು ವಹಣಿ ಮತ್ತು ಮುಟೇಷ್‌ನಲ್ಲಿ ಅರಣ್ಯವೆಂದು ತಿದ್ದುಪಡಿಯಾಗಿರುತ್ತದೆ. ಕಸಬಾ ಹೋಬಳಿ ಸಿರಿಯೂರು ಗ್ರಾಮದ ಸರ್ವೆ ನಂ. ೧೨ ಮತ್ತು ೬೭ ರಲ್ಲಿ ಇದೇ ರೀತಿ ವಹಣಿ ಮತ್ತು ಮುಟೇಷನ್ ತಿದ್ದುಪಡಿಯಾಗಿದ್ದು,  ಸುಮಾರು ವರ್ಷಗಳಿಂದ ರೈತರು ಸಾಗುವಳಿ ಮಾಡುತ್ತಿದ್ದ ರೈತರ ಜಮೀನುಗಳು ರೈತರ ಗಮನಕ್ಕೆ ಬಾರದೆ ಮತ್ತು ನೋಟೀಸ್ ನೀಡದೆ ತಾಲೂಕಿನಾದ್ಯಂತ ಸಾಗುವಳಿ ಮಾಡುತ್ತಿರುವ ರೈತರಿಗೆ ಈ ಹಿಂದಿನ  ತಾಲೂಕು ದಂಡಾಧಿಕಾರಿಗಳು ಮತ್ತು ಅರಣ್ಯಾಧಿಕಾರಿಗಳು ಅನ್ಯಾಯ ಮಾಡಿರುತ್ತಾರೆ. ಆದುದರಿಂದ ಅನ್ಯಾಯವಾಗದಂತೆ ರೈತರಿಗೆ ಅನುಕೂಲವಾಗುವಂತೆ ಸಾಗುವಳಿ ಮಾಡಿಕೊಂಡು ಬರುವ ರೈತರಿಗೆ ಅವರ ಜಮೀನಿನ ಮೇಲೆ ಯಾವುದೇ ರೀತಿಯ ತೊಂದರೆ ನೀಡಬಾರದು ಮತ್ತು ತಿದ್ದುಪಡಿಯಾಗಿರುವ ಪಹಣಿ ಮತ್ತು ಮುಟೇಷನ್ ಈ ಹಿಂದೆ ಇದ್ದ ದಾಖಲಾತಿಯಂತೆ ನಮೂದು ಮಾಡಬೇಕು ಮತ್ತು ರೈತರಿಗೆ ಸಾಗುವಳಿ ಚೀಟಿಯನ್ನು ನೀಡಬೇಕೆಂದು ಮನವಿಯಲ್ಲಿ  ಒತ್ತಾಯಿಸಿದ್ದಾರೆ.
    ಕಿರಣ, ಸೈಯದ್ ಮೆಹಬೂಬ್, ನಾಗರಾಜ್, ಸುರೇಶ, ಬಸರಾಜಪ್ಪ, ಸಿ. ರಂಗಸ್ವಾಮಿ, ಎಸ್. ಜಗದೀಶ್, ಕೆ.ಆರ್ ಕಾರ್ತಿಕ್, ಯಶವಂತ, ಜಿ. ಕುಮಾರ, ಗಂಗಮ್ಮ, ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. 

Monday, March 6, 2023

ಇಸ್ಪೀಟ್ ಅಡ್ಡೆ ಮೇಲೆ ದಾಳಿ


    ಭದ್ರಾವತಿ, ಮಾ. ೬ : ಹೊಸಮನೆ ಶಿವಾಜಿ ಸರ್ಕಲ್ ಪೊಲೀಸ್ ಠಾಣೆ ವ್ಯಾಪ್ತಿಯ ತಾಲೂಕಿನ ಯರೇಹಳ್ಳಿಯಲ್ಲಿ ಇಸ್ಪೀಟ್ ಜೂಜಾಟದಲ್ಲಿ ತೊಡಗಿದ್ದ ಅಡ್ಡೆಯೊಂದರ ಮೇಲೆ ದಾಳಿ ನಡೆಸಿರುವ ಘಟನೆ ನಡೆದಿದೆ.
    ಯರೇಹಳ್ಳಿ ಅಶ್ವಥ್‌ಕಟ್ಟೆ ಹತ್ತಿರ ಚಾನಲ್ ಏರಿ ಮೇಲೆ ಮಾ.೫ರಂದು ರಾತ್ರಿ ೯.೩೦ರ ಸಮಯದಲ್ಲಿ ಮಹೇಶ ಸೇರಿದಂತೆ ಇನ್ನಿತರರು ಗುಂಪು ಸೇರಿಕೊಂಡು ಜೂಜಾಟದಲ್ಲಿ ತೊಡಗಿದ್ದು, ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಹೋಳಿ ಹಬ್ಬ : ವಿವಿಧೆಡೆ ರತಿಮನ್ಮಥರ ಪ್ರತಿಷ್ಠಾಪನೆ

ಭದ್ರಾವತಿ ಹಳೇನಗರದ ಕುಂಬಾರ ಬೀದಿಯಲ್ಲಿ ಶ್ರೀ ಹೋಳಿ ಮಹೋತ್ಸವ ಸೇವಾ ಸಮಿತಿವತಿಯಿಂದ ರತಿಮನ್ಮಥ ದೇವರನ್ನು ಪ್ರತಿಷ್ಠಾಪಿಸಲಾಗಿದೆ.
    ಭದ್ರಾವತಿ, ಮಾ. ೬ : ಪ್ರತಿ ವರ್ಷದಂತೆ ಈ ಬಾರಿ ಸಹ ನಗರದ ವಿವಿಧೆಡೆ ಕಳೆದ ೩ ದಿನಗಳಿಂದ ಹೋಳಿಹಬ್ಬ (ಶ್ರೀ ಕಾಮದೇವರ ಹಬ್ಬ)ದ ಆಚರಣೆ ನಡೆಯುತ್ತಿದ್ದು, ಹಬ್ಬದ ಹಿನ್ನಲೆಯಲ್ಲಿ ಪ್ರತಿಷ್ಠಾಪಿಸಲಾಗಿರುವ ರತಿಮನ್ಮಥ ದೇವರುಗಳು ಗಮನ ಸೆಳೆಯುತ್ತಿವೆ.


ಶ್ರೀ ನೇತಾಜಿ ಸೇವಾ ಸಮಿತಿ ಮತ್ತು ಶ್ರೀ ನೇತಾಜಿ ಯುವಕ ಸಂಘದ ವತಿಯಿಂದ ಭದ್ರಾವತಿ ಭೂತನಗುಡಿಯಲ್ಲಿ ೮೬ನೇ ವರ್ಷದ ಹೋಳಿಹಬ್ಬ ಆಚರಿಸಲಾಗುತ್ತಿದ್ದು, ಶ್ರೀ ಕೃಷ್ಣ ರುಕ್ಮಿಣಿ ದೇವಸ್ಥಾನದ ಆವರಣದಲ್ಲಿ ಫೆ.೪ರಂದು ಮನ್ಮಥ ದೇವರನ್ನು ಪ್ರತಿಷ್ಠಾಪಿಸಲಾಗಿದೆ.
    ಹಳೇನಗರದ ವಿವಿಧೆಡೆ ಹಾಗು ನಗರಸಭೆ ಸಮೀಪದ ಭೂತನಗುಡಿಯಲ್ಲಿ ಹೋಳಿಹಬ್ಬ ವಿಶೇಷವಾಗಿ ಆಚರಿಸಿಕೊಂಡು ಬರಲಾಗುತ್ತಿದೆ. ಶ್ರೀ ನೇತಾಜಿ ಸೇವಾ ಸಮಿತಿ ಮತ್ತು ಶ್ರೀ ನೇತಾಜಿ ಯುವಕ ಸಂಘದ ವತಿಯಿಂದ ಭೂತನಗುಡಿಯಲ್ಲಿ ೮೬ನೇ ವರ್ಷದ ಹೋಳಿಹಬ್ಬ ಆಚರಿಸಲಾಗುತ್ತಿದ್ದು, ಶ್ರೀ ಕೃಷ್ಣ ರುಕ್ಮಿಣಿ ದೇವಸ್ಥಾನದ ಆವರಣದಲ್ಲಿ ಫೆ.೪ರಂದು ಮನ್ಮಥ ದೇವರನ್ನು ಪ್ರತಿಷ್ಠಾಪಿಸಲಾಗಿದೆ. ಮಾ.೭ರಂದು ಸಂಜೆ ೬.೩೦ಕ್ಕೆ ಕೊಬ್ಬರಿ ತುಪ್ಪ ಗುಗ್ಗಳದ ಪೂಜೆ ನಡೆಯಲಿದೆ. ೮ರಂದು ಬೆಳಿಗ್ಗೆ ೧೦ರಿಂದ ಮಧ್ಯಾಹ್ನ ೩ ಗಂಟೆಗೆ ಓಕುಳಿ(ಬಣ್ಣದ ಆಟ) ನಡೆಯಲಿದೆ.


ಭದ್ರಾವತಿ ಹಳೇನಗರದ ಪುರಾಣ ಪ್ರಸಿದ್ದ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ದೇವಸ್ಥಾನ ಬಳಿ ಬ್ರಾಹ್ಮಣರ ಬೀದಿಯಲ್ಲಿ ಹೋಳಿಹಬ್ಬದ ಅಂಗವಾಗಿ ಮನ್ಮಥ ದೇವರನ್ನು ಪ್ರತಿಷ್ಠಾಪಿಸಲಾಗಿದೆ.
    ಹಳೇನಗರದ ಕುಂಬಾರ ಬೀದಿಯಲ್ಲಿ ಶ್ರೀ ಹೋಳಿ ಮಹೋತ್ಸವ ಸೇವಾ ಸಮಿತಿವತಿಯಿಂದ ರತಿಮನ್ಮಥ ದೇವರನ್ನು ಪ್ರತಿಷ್ಠಾಪಿಸಲಾಗಿದೆ. ಇಲ್ಲಿ ಪ್ರತಿ ವರ್ಷ ರತಿ ಮತ್ತು ಮನ್ಮಥ ಇಬ್ಬರನ್ನು ಸಹ ಪ್ರತಿಷ್ಠಾಪಿಸುವುದು ವಾಡಿಕೆಯಾಗಿದೆ. ಉಳಿದಂತೆ ಪುರಾಣ ಪ್ರಸಿದ್ದ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ದೇವಸ್ಥಾನ ಬಳಿ ಬ್ರಾಹ್ಮಣರ ಬೀದಿಯಲ್ಲಿ ಹಾಗು ಮರಾಠ ಬೀದಿಯಲ್ಲಿ ಮನ್ಮಥ ದೇವರನ್ನು ಪ್ರತಿಷ್ಠಾಪಿಸಲಾಗಿದೆ.
    ಪ್ರತಿ ದಿನ ವಿಶೇಷ ಪೂಜೆ, ಧಾರ್ಮಿಕ ಆಚರಣೆಗಳು ನಡೆಯುತ್ತಿವೆ. ಅಂತಿಮವಾಗಿ ರತಿಮನ್ಮಥರ ದಹನದೊಂದಿಗೆ ಹಬ್ಬ ಅಂತ್ಯಗೊಳ್ಳಲಿದೆ.


ಭದ್ರಾವತಿ ಹಳೇನಗರದ ಪುರಾಣ ಪ್ರಸಿದ್ದ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ದೇವಸ್ಥಾನ ಬಳಿ ಮರಾಠ ಬೀದಿಯಲ್ಲಿ ಹೋಳಿಹಬ್ಬದ ಅಂಗವಾಗಿ ಮನ್ಮಥ ದೇವರನ್ನು ಪ್ರತಿಷ್ಠಾಪಿಸಲಾಗಿದೆ.


Sunday, March 5, 2023

ಭದ್ರಾವತಿ ಉಳಿಸಿ ವಿಐಎಸ್‌ಎಲ್-ಎಂಪಿಎಂ ಚಳುವಳಿಗೆ ಪೂರಕ ಸ್ಪಂದನೆ

ಹಿರಿಯ ಸಾಹಿತಿ, ಸಂಶೋಧಕ ಜೆ.ಎನ್ ಬಸವರಾಜಪ್ಪ ಕವನ ರಚನೆ


ಭದ್ರಾವತಿ, ಮಾ. ೫ : ಭದ್ರಾವತಿ ಉಳಿಸಿ ವಿಐಎಸ್‌ಎಲ್-ಎಂಪಿಎಂ ಚಳುವಳಿ ಹೆಸರಿನಲ್ಲಿ ಅಂತರ್ಜಾಲದಲ್ಲಿ ಹಮ್ಮಿಕೊಳ್ಳಲಾಗಿರುವ ಹೋರಾಟಕ್ಕೆ ಪೂರಕ ಸ್ಪಂದನೆ ವ್ಯಕ್ತವಾಗುತ್ತಿದೆ. ಇದುವರೆಗೂ ಸುಮಾರು ೩೧೫ ಮಂದಿ ಹೋರಾಟಕ್ಕೆ ಪೂರಕವಾಗಿ ಸ್ಪಂದಿಸಿದ್ದು, ಈ ಪೈಕಿ ೩೧೩ ಮಂದಿ ಬೆಂಬಲ ಹಾಗು ಇಬ್ಬರು ವಿರೋಧ ವ್ಯಕ್ತಪಡಿಸಿದ್ದಾರೆ.
೧೯೫ ನಾಗರೀಕರು, ೭೮ ಗುತ್ತಿಗೆ ಕಾರ್ಮಿಕರು, ೨೨ ಕಾಯಂ ಹಾಗು ನಿವೃತ್ತ ಕಾರ್ಮಿಕರು, ಓರ್ವ ರೈತ, ಓರ್ವ ಸರ್ಕಾರಿ ಉದ್ಯೋಗಿ, ಇಬ್ಬರು ಖಾಸಗಿ ಉದ್ಯೋಗಿ, ೫ ವಿದ್ಯಾರ್ಥಿಗಳು ಸೇರಿದಂತೆ ಒಟ್ಟು ೩೧೩ ಮಂದಿ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಇಬ್ಬರು ನಾಗರೀಕರು ವಿರೋಧಿಸಿದ್ದಾರೆ. ಅಂತರ್ಜಾಲದಲ್ಲಿ ನಡೆಯುತ್ತಿರುವ ಈ ಹೋರಾಟ ಮತ್ತಷ್ಟು ತೀವ್ರತೆ ಪಡೆದುಕೊಳ್ಳಬೇಕಾಗಿದೆ. ಸಮಸ್ತ ನಾಗರೀಕರು ತಮ್ಮ  ನಿಲುವು ವ್ಯಕ್ತಪಡಿಸಬೇಕಾಗಿದೆ.
ಹಿರಿಯ ಸಾಹಿತಿ ಜೆ.ಎನ್ ಬಸವರಾಜಪ್ಪ ಕವನ ರಚನೆ :
ನಗರದ ಹಿರಿಯ ಸಾಹಿತಿ, ಸಂಶೋಧಕ ಜೆ.ಎನ್ ಬಸವರಾಜಪ್ಪನವರು ವಿಐಎಸ್‌ಎಲ್ ಮತ್ತು ಎಂಪಿಎಂ ಕಾರ್ಖಾನೆಗಳ ಇಂದಿನ ಪರಿಸ್ಥಿತಿ ಕುರಿತು ಕವನ ರಚಿಸಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ.



ಭದ್ರಾವತಿಯ ದುಃಸ್ಥಿತಿ-ಕವನ

ಬದುಕು ನಂಬಿ ಬಂದವರಿಗೆಲ್ಲ
ಬದುಕು ಕೊಟ್ಟಿದ್ದು ಭದ್ರಾವತಿ
ಆಶ್ರಯ ಬಯಸಿ ಬಂದವರಿಗೆಲ್ಲ
ಆಶ್ರಯ ನೀಡಿದ್ದು ಭದ್ರಾವತಿ
ಇಂಥಾ ಕೈಗಾರಿಕಾ ನಗರಕ್ಕೆ
ಈಗ ಬಂದೊದಗಿದೆ ದುಃಸ್ಥಿತಿ
ವಿಐಎಸ್‌ಎಲ್ - ಎಂಪಿಎಂ ಕಾರ್ಖಾನೆಗಳ ಅವನತಿ
ಕಾರ್ಮಿಕರ ಬದುಕಾಗಿದೆ ಅಧೋಗತಿ
ರಾಜಕೀಯ ನಾಯಕರಾರೂ
ವಹಿಸಲಿಲ್ಲ ಮುಂಜಾಗ್ರತಿ
ಅವರಿಗೆ ಬೇಕಿಲ್ಲ.
ಕಾರ್ಮಿಕರ ಹಿತಾಸಕ್ತಿ
ಈಗಲಾದರೂ ಸರ್ಕಾರ
ಅರಿಯಬೇಕಿದೆ ಕಾರ್ಮಿಕರ ಪರಿಸ್ಥಿತಿ
ಕಡೆಗಣಿಸಿದರೆ, ಕಾರ್ಮಿಕರ ಹೋರಾಟಕ್ಕೆ
ಇರುವುದಿಲ್ಲ ಇತಿ ಮಿತಿ
ಒಪ್ಪಿ ನಡೆದರೆ ಭದ್ರಾವತಿ
ತಪ್ಪಿ ನಡೆದರೆ ಅಧೋಗತಿ
ನಾವು ಸುಮ್ಮನಿದ್ದರೆ ವಂಕಿಪುರ
ಎದ್ದು ನಿಂತರೆ ಬೆಂಕಿಪುರ
ಎಚ್ಚರ ಎಚ್ಚರ ಎಚ್ಚರ...
      - ಜೆ.ಎನ್ ಬಸವರಾಜಪ್ಪ

--

ಜಗದ್ಗುರು ರೇಣುಕಾಚಾರ್ಯರ ಸಮಾಜಮುಖಿ ಕಾರ್ಯಗಳು ಎಂದಿಗೂ ಪ್ರಸ್ತುತ : ಸುರೇಶಾಚಾರ್ಯ

ಭದ್ರಾವತಿ ತಾಲೂಕು ಕಚೇರಿಯಲ್ಲಿ ಸರಕಾರದ ಆದೇಶದಂತೆ ಪ್ರಥಮ ವರ್ಷವಾಗಿ ಜಗದ್ಗುರು ಶ್ರೀ ರೇಣುಕಾಚಾರ್ಯರ ಜಯಂತ್ಯೋತ್ಸವ ಆಚರಿಸಲಾಯಿತು.
    ಭದ್ರಾವತಿ, ಮಾ. ೫ :  ಸಾವಿರಾರು ವರ್ಷಗಳ ಇತಿಹಾಸವಿರುವ ಜಗದ್ಗುರು ಶ್ರೀ ರೇಣುಕಾಚಾರ್ಯರ ಸಮಾಜಮುಖಿ ಕಾರ್ಯಗಳು ಸೂರ್ಯ ಚಂದ್ರರಿರುವಂತೆ ಎಂದೆಂದಿಗೂ ಶಾಶ್ವತವಾಗಿರುತ್ತವೆ. ಸಮಾಜಕ್ಕೆ ನೀಡಿದ ಕೊಡುಗೆಗಳು ಅಪಾರ. ಸಮಾಜದಲ್ಲಿನ ಅನಿಷ್ಟತೆ ಜಾತಿ ವ್ಯವಸ್ಥೆಗಳು ದೂರಾಗುವಂತೆ ಶ್ರಮಿಸಿ ಮಾನವ ಧರ್ಮ ಒಂದೇ, ಮಾನವ ಧರ್ಮಕ್ಕೆ ಜಯವಾಗಲೆಂದು ಆಶಿಸಿದವರು ರೇಣುಕಾಚಾರ್ಯರು ಎಂದು ತಹಸೀಲ್ದಾರ್ ಸುರೇಶಾಚಾರ್ಯ ಹೇಳಿದರು.
    ಅವರು ಭಾನುವಾರ ತಾಲೂಕು ಕಚೇರಿ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಜಗದ್ಗುರು ಶ್ರೀ ರೇಣುಕಾಚಾರ್ಯರ ಜಯಂತ್ಯೋತ್ಸವ ಕಾರ್ಯಕ್ರಮದಲ್ಲಿ ರೇಣುಕಾಚಾರ್ಯ ಜಗದ್ಗುರುಗಳ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿ, ಜನರಲ್ಲಿ ಮಾಹಿತಿ ಅಷ್ಟಾಗಿಲ್ಲದ ಕಾರಣ ಜಗದ್ಗುರುಗಳ ಕುರಿತು ಸರ್ವರಲ್ಲೂ ಮಾಹಿತಿ ಮೂಡಿಸಲು ಜಯಂತಿಯನ್ನು ಸರ್ಕಾರಿ ಕಾರ್ಯಕ್ರಮವಾಗಿ ಆಚರಿಸಲು ಮುಂದಾಗಿರುವುದು ಸಂತಸ ತಂದಿದೆ. ಇದರಿಂದ ಸಮಾಜಕ್ಕೆ ಬೆಳಕು ಚೆಲ್ಲಿದಂತಾಗುತ್ತದೆ ಎಂದರು.
    ವೀರಶೈವ ಸೇವಾ ಸಮಿತಿ ಕಾರ್ಯದರ್ಶಿ ವಾಗೀಶ್ ಕೋಠಿ ಮಾತನಾಡಿ, ಸರ್ಕಾರ ಇದೇ ಮೊದಲ ಬಾರಿಗೆ ಜಗದ್ಗುರುಗಳ ಜಯಂತಿ ಆಚರಿಸುತ್ತಿರುವುದು ಶ್ಲಾಘನೀಯವಾಗಿದೆ. ಮುಂದಿನ ವರ್ಷದಿಂದ ವೀರಶೈವ ಸಮಾಜಗಳು ಸೇರಿದಂತೆ ಇತರೆ ಸಮಾಜಗಳನ್ನು ಒಗ್ಗೂಡಿಸಿಕೊಂಡು ಪೂರ್ವ ಭಾವಿ ಸಭೆ ನಡೆಸಿ ಅದ್ದೂರಿಯಾಗಿ ಸಮಾರಂಭ ಆಯೋಜಿಸಲು ಕ್ರಮ ಕೈಗೊಳ್ಳಬೇಕೆಂದರು.
ವೀರಶೈವ ಲಿಂಗಾಯತ ಮಹಿಳಾ ಸಮಾಜದ ಅಧ್ಯಕ್ಷೆ ಆರ್.ಎಸ್.ಶೋಭಾ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಗ್ರೇಡ್-೨ ತಹಸೀಲ್ದಾರ್ ರಂಗಮ್ಮ, ನಗರಸಭಾ ಸದಸ್ಯ ಬಿ.ಕೆ ಮೋಹನ್, ಡಾ. ಜಿ.ಎಂ ನಟರಾಜ್, ಶಿವಯೋಗಿ ಮಠದ್, ಇಂಜಿನಿಯರ್ ದಯಾನಂದ್ ಮುಂತಾದವರು ಮಾತನಾಡಿದರು.
    ಉಪ ತಹಸೀಲ್ದಾರ್ ರಾಧಾಕೃಷ್ಣಭಟ್ ಸ್ವಾಗತಿಸಿದರು. ಭಾಗ್ಯ ಮೂರ್ತಿ ಸಂಗಡಿಗರು ಸಿದ್ದಾಂತ ಶಿಖಾಮಣಿಯ ಕುರಿತು ನುಡಿಗಳನ್ನಾಡಿದರು. ನಗರಸಭಾ ಸದಸ್ಯೆ ಅನುಪಮ, ಮುಖಂಡರಾದ ಬಿ.ಕೆ ಜಗನ್ನಾಥ್, ಟಿ.ಎಸ್ ಆನಂದಕುಮಾರ್, ಚನ್ನೇಶ್, ಷಣ್ಮುಖಪ್ಪ, ಬಸವರಾಜಪ್ಪ, ಮಹೇಶ್‌ಮೂರ್ತಿ, ನಾಗರಾಜ್, ನಾಗರತ್ನ ಕೋಠಿ ಮುಂತಾದವರಿದ್ದರು.

ವಿಐಎಸ್‌ಎಲ್-ಎಂಪಿಎಂ ಉಳಿವಿಗಾಗಿ ಹೋರಾಟಕ್ಕೆ ಬೆಂಬಲ ಸೂಚಿಸಲು ನಿರ್ಣಯ

ಭದ್ರಾವತಿ ಬೈಪಾಸ್ ರಸ್ತೆ ಮಿಲ್ಟ್ರಿಕ್ಯಾಂಪ್‌ನಲ್ಲಿರುವ ಲೋಕೋಪಯೋಗಿ ಇಲಾಖೆ ಪ್ರವಾಸಿ ಮಂದಿರದ ಸಭಾಂಗಣದಲ್ಲಿ ಭಾನುವಾರ ಡಿಎಸ್‌ಎಸ್ (ಅಂಬೇಡ್ಕರ್‌ವಾದ) ಕಾರ್ಯಕರ್ತರ ಸಭೆ ಹಾಗು ವಿಐಎಸ್‌ಎಲ್ ಮತ್ತು ಎಂಪಿಎಂ ಕಾರ್ಖಾನೆಗಳ ಉಳಿವಿಗಾಗಿ ಬೆಂಬಲ ಸೂಚಿಸಿ ಹಮ್ಮಿಕೊಳ್ಳಲಾಗಿದ್ದ ಪೂರ್ವಭಾವಿ ಸಭೆಯಲ್ಲಿ ಶ್ರೀ ಮಹರ್ಷಿ ವಾಲ್ಮೀಕಿ ನಾಯಕ ಸಂಘದ ಅಧ್ಯಕ್ಷ, ನಗರಸಭೆ ಸದಸ್ಯ ಬಸವರಾಜ್ ಬಿ ಆನೆಕೊಪ್ಪ ಮಾತನಾಡಿದರು.
    ಭದ್ರಾವತಿ, ಮಾ. ೫ : ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಉಳಿವಿಗಾಗಿ ಗುತ್ತಿಗೆ ಕಾರ್ಮಿಕರು ನಡೆಸುತ್ತಿರುವ ಅನಿರ್ಧಿಷ್ಟಾವಧಿ ಹೋರಾಟಕ್ಕೆ ಕರ್ನಾಟಕ ದಲಿತ ಸಂಘರ್ಷ ಸಮಿತಿ(ಅಂಬೇಡ್ಕರ್ ವಾದ), ಶ್ರೀ ಮಹರ್ಷಿ ವಾಲ್ಮೀಕಿ ನಾಯಕ ಸಂಘ ಮತ್ತು ಡಾ. ಬಿ.ಆರ್ ಅಂಬೇಡ್ಕರ್ ಪಡೆ ವತಿಯಿಂದ ಬೆಂಬಲ ಸೂಚಿಸಿ ನಗರದ ವಿವಿಧ ಸಂಘ-ಸಂಸ್ಥೆಗಳ ಸಹಯೋಗದೊಂದಿಗೆ ಹೋರಾಟ ನಡೆಸಲು ತೀರ್ಮಾನಿಸಲಾಯಿತು.
    ಭಾನುವಾರ ನಗರದ ಬೈಪಾಸ್ ರಸ್ತೆ ಮಿಲ್ಟ್ರಿಕ್ಯಾಂಪ್‌ನಲ್ಲಿರುವ ಲೋಕೋಪಯೋಗಿ ಇಲಾಖೆ ಪ್ರವಾಸಿ ಮಂದಿರದ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಕಾರ್ಯಕರ್ತರ ಸಭೆ ಹಾಗು ವಿಐಎಸ್‌ಎಲ್ ಮತ್ತು ಎಂಪಿಎಂ ಕಾರ್ಖಾನೆಗಳ ಉಳಿವಿಗಾಗಿ ಬೆಂಬಲ ಸೂಚಿಸಿ ಹಮ್ಮಿಕೊಳ್ಳಲಾಗಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಪ್ರಮುಖರು, ಪ್ರಸ್ತುತ ವಿಐಎಸ್‌ಎಲ್ ಮತ್ತು ಎಂಪಿಎಂ ಕಾರ್ಖಾನೆಗಳ ಉಳಿವಿಗಾಗಿ ಹೋರಾಟದ ಅಗತ್ಯವಿದೆ. ಈ ಹಿನ್ನಲೆಯಲ್ಲಿ ನಾವುಗಳು ಒಗ್ಗಟ್ಟಾಗಿ ಹೋರಾಟ ನಡೆಸಬೇಕಾಗಿದೆ. ಗುತ್ತಿಗೆ ಕಾರ್ಮಿಕರು ನಡೆಸುತ್ತಿರುವ ಹೋರಾಟಕ್ಕೆ ಬೆಂಬಲ ಸೂಚಿಸಬೇಕಾಗಿದೆ ಎಂದರು.
    ನಂತರ ಬೆಂಬಲ ಸೂಚಿಸುವ ನಿರ್ಣಯ ಕೈಗೊಂಡು ಹೋರಾಟದ ರೂಪುರೇಷೆಗಳ ಕುರಿತು ಚರ್ಚಿಸಲಾಯಿತು. ಕರ್ನಾಟಕ ದಲಿತ ಸಂಘರ್ಷ ಸಮಿತಿ(ಅಂಬೇಡ್ಕರ್ ವಾದ) ಜಿಲ್ಲಾ ಸಂಘಟನಾ ಸಂಚಾಲಕ ಆರ್ ಹರೀಶ್ ಅಧ್ಯಕ್ಷತೆ ವಹಿಸಿದ್ದರು.
    ಶ್ರೀ ಮಹರ್ಷಿ ವಾಲ್ಮೀಕಿ ನಾಯಕ ಸಂಘದ ಅಧ್ಯಕ್ಷ, ನಗರಸಭೆ ಸದಸ್ಯ ಬಸವರಾಜ್ ಬಿ ಆನೆಕೊಪ್ಪ, ಡಿಎಸ್‌ಎಸ್ ತಾಲೂಕು ಪ್ರಧಾನ ಸಂಚಾಲಕ ಎಸ್. ಪುಟ್ಟರಾಜು, ಡಾ. ಬಿ.ಆರ್ ಅಂಬೇಡರ್ ಎಸ್.ಸಿ/ಎಸ್‌ಟಿ ಪಡೆ ಅಧ್ಯಕ್ಷ ವೆಂಕಟೇಶ್ ಉಜ್ಜನಿಪುರ, ದಲಿತ ಮುಖಂಡ ಸಂಪತ್, ಜಮೀರ್ (ಕೆಂಪು ಸೇನೆ), ಹನುಮಂತಪ್ಪ, ಅಣ್ಣಪ್ಪ, ಸಂತೋಷ್, ಶಿವಕುಮಾರ್, ಶ್ರೀನಿವಾಸ್, ಮಂಜುನಾಥ್ ಸೇರಿದಂತೆ ಇನ್ನಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ನಾಗೇಶ್ ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿದರು.