Friday, March 24, 2023

ಮಾ.೨೫ರಂದು ಶಿವಾಜಿ ಮಹಾರಾಜರ ೩೯೬ನೇ ಜಯಂತ್ಯೋತ್ಸವ


    ಭದ್ರಾವತಿ, ಮಾ. ೨೪ : ತಾಲೂಕಿನ ಶ್ರೀ ಛತ್ರಪತಿ ಶಿವಾಜಿ ಮರಾಠ ಬಾಂಧವರು ಹಾಗು ಜೀಜಾಮಾತಾ ಮಹಿಳಾ ಮಂಡಳಿ ವತಿಯಿಂದ ಮಾ.೨೫ರಂದು ನಗರದ ಬಿ.ಎಚ್ ರಸ್ತೆ ಶ್ರೀ ಮಂಜುನಾಥಸ್ವಾಮಿ ಕಲ್ಯಾಣ ಮಂಟಪದಲ್ಲಿ ಶ್ರೀ ಛತ್ರಪತಿ ಶಿವಾಜಿ ಮಹಾರಾಜರ ೩೯೬ನೇ ಜಯಂತ್ಯೋತ್ಸವ ಮತ್ತು ಬೃಹತ್ ಭವ್ಯ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ.
    ಬೆಂಗಳೂರಿನ ಶ್ರೀ ಗೋಸಾಯಿ ಮಹಾ ಸಂಸ್ಥಾನ ಮಠ ಶ್ರೀ ಭವಾನಿ ಪೀಠದ ಶ್ರೀ ಮಂಜುನಾಥ ಸ್ವಾಮೀಜಿಯವರು ದಿವ್ಯ ಸಾನಿಧ್ಯವಹಿಸಲಿದ್ದು, ಮರಾಠ ಸಮಾಜದ ಪ್ರಮುಖರಾದ ರಘುನಾಥರಾವ್ ಗಿಡ್ಡೆ ಅಧ್ಯಕ್ಷತೆ ವಹಿಸಲಿದ್ದಾರೆ.
    ಬೆಳಿಗ್ಗೆ ೮.೩೦ಕ್ಕೆ ಹೊಸಮನೆ ಶಿವಾಜಿ ವೃತ್ತದಿಂದ ಆರಂಭಗೊಂಡು ಲೋಯರ್ ಹುತ್ತಾ ಬಸ್ ನಿಲ್ದಾಣದವರೆಗೂ ನಡೆಯಲಿರುವ ಭವ್ಯ ಮೆರವಣಿಗೆಯನ್ನು ಶಾಸಕ ಬಿ.ಕೆ ಸಂಗಮೇಶ್ವರ್ ಉದ್ಘಾಟಿಸಲಿದ್ದಾರೆ.
    ವೇದಿಕೆ ಕಾರ್ಯಕ್ರಮದಲ್ಲಿ ಚಿಕ್ಕಮಗಳೂರಿನ ತನ್‌ಮಹಿ ಸಿಂಗಾರ್ ವಿಶೇಷ ಉಪನ್ಯಾಸ ನೀಡಲಿದ್ದು, ಸಂಸದ ಬಿ.ವೈ ರಾಘವೇಂದ್ರ, ವಿಧಾನಸಭಾ ಸದಸ್ಯ ಅಶೋಕ್ ನಾಯ್ಕ, ವಿಧಾನಪರಿಷತ್ ಸದಸ್ಯರಾದ ಎಸ್. ರುದ್ರೇಗೌಡ, ಡಿ.ಎಸ್ ಅರುಣ್, ಮಾಜಿ ಶಾಸಕಿ ಶಾರದ ಪೂರ‍್ಯಾನಾಯ್ಕ, ಜೆಡಿಎಸ್ ಮುಖಂಡರಾದ ಶಾರದ ಅಪ್ಪಾಜಿ, ಎಎಪಿ ಪಕ್ಷದ ಮುಖಂಡ ಮೆಡಿಕಲ್ ಆನಂದ್, ಮಾಜಿ ವಿಧಾನಪರಿಷತ್ ಸದಸ್ಯ ಆರ್.ಕೆ ಸಿದ್ದರಾಮಣ್ಣ, ನಗರಸಭೆ ಅಧ್ಯಕ್ಷೆ ಅನುಸುಧಾ ಮೋಹನ್ ಪಳನಿ, ವಿವಿಧ ರಾಜಕೀಯ ಪಕ್ಷಗಳ ಅಧ್ಯಕ್ಷರಾದ ಜಿ. ಧರ್ಮಪ್ರಸಾದ್, ಟಿ. ಚಂದ್ರೇಗೌಡ, ಆರ್. ಕರುಣಾಮೂರ್ತಿ, ಕಾರ್ಯಪಾಲಕ ಅಭಿಯಂತರ ಸಂಪತ್ ಕುಮಾರ್ ಪಿಂಗ್ಳೆ, ತಹಸೀಲ್ದಾರ್ ಸುರೇಶ್ ಆಚಾರ್, ನಗರಸಭೆ ಪೌರಾಯುಕ್ತ ಮನುಕುಮಾರ್ ಸೇರಿದಂತೆ ಇನ್ನಿತರರು ಪಾಲ್ಗೊಳ್ಳಲಿದ್ದಾರೆ.
    ತಾಲೂಕಿನ ಮರಾಠ ಬಾಂಧವರು ಸೇರಿದಂತೆ ಸಮಸ್ತ ನಾಗರೀಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸುವಂತೆ ಕೋರಲಾಗಿದೆ.

ಮಾ.೨೫ರಂದು ಚುನಾವಣಾ ತರಬೇತಿ ಕಾರ್ಯಕ್ರಮ

    ಭದ್ರಾವತಿ, ಮಾ. ೨೪: ರಾಜ್ಯ ವಿಧಾನಸಭಾ ಚುನಾವಣೆ ಪ್ರಕ್ರಿಯೆಗಳು ಆರಂಭಗೊಳ್ಳುವ ಹಿನ್ನಲೆಯಲ್ಲಿ ಚುನಾವಣಾ ಆಯೋಗದ ಸೂಚನೆ ಮೇರೆಗೆ ಮಾ.೨೫ರ ಶನಿವಾರ ಬೆಳಿಗ್ಗೆ ೯:೩೦ಕ್ಕೆ ಸಿದ್ಧಾರೂಢ ನಗರದ ಶ್ರೀ ಬಸವೇಶ್ವರ ಸಭಾಭವನದಲ್ಲಿ ತರಬೇತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
    ಮತದಾರರ ಸಾಕ್ಷರತಾ ಸಂಘಗಳ ಸಂಚಾಲಕರು, ಚುನಾವಣಾ ಜಾಗೃತ ಸಂಘಗಳ ಸಂಚಾಲಕರು ಮತ್ತು ಕ್ಯಾಂಪಸ್ ಅಂಬಾಸಿಡರ್, ಬಿಎಲ್‌ಓಗಳು ತರಬೇತಿ ಕಾರ್ಯಾಕ್ರಮದಲ್ಲಿ ಕಡ್ಡಾಯವಾಗಿ ಪಾಲ್ಗೊಳ್ಳುವುದು. ಈಗಾಗಲೇ ರಾಜ್ಯ ಅಥವಾ ಜಿಲ್ಲಾ ಮಟ್ಟದಲ್ಲಿ ಪಡೆದುಕೊಂಡಿರುವ ಇಎಲ್‌ಸಿ ಮಾಹಿತಿ ಪರಸ್ಪರ ವಿನಿಮಯ ಮಾಡಿಕೊಳ್ಳುವುದು. ಸಂಪನ್ಮೂಲ ವ್ಯಕ್ತಿಗಳೊಂದಿಗೆ ಚರ್ಚಿಸಿ ಸೂಕ್ತ ಸಲಹೆ, ಮಾರ್ಗದರ್ಶನ ಪಡೆದುಕೊಳ್ಳುವುದು.
    ಸಂಪನ್ಮೂಲ ವ್ಯಕ್ತಿಗಳಾಗಿ ರಾಜ್ಯಮಟ್ಟದ ತರಬೇತುದಾರ ಬಿ.ಆರ್.ಸಿ ಕ್ಷೇತ್ರ ಸಂಪನ್ಮೂಲ ವ್ಯಕ್ತಿ ನವೀದ್ ಅಹಮದ್ ಪರ್ವೀಜ್, ಮೊ: ೯೮೮೬೨೧೪೧೬೦, ತಾಲೂಕು ಮಟ್ಟದ ಇಎಲ್‌ಸಿ ತರಬೇತುದಾರರಾದ ಸಹಾಯಕ ಪ್ರಾಧ್ಯಾಪಕ ಡಾ. ಎಚ್.ಎಸ್ ಶಿವರುದ್ರಪ್ಪ, ಮೊ: ೮೬೬೦೫೨೮೭೪೪,  ಸಹ ಶಿಕ್ಷಕ ಎಂ.ಜಿ ನವೀನ್‌ಕುಮಾರ್, ಮೊ: ೯೬೧೧೬೯೨೧೨೫, ಮುಖ್ಯ ಶಿಕ್ಷಕ ಸಿ.ಡಿ ಮಂಜುನಾಥ್, ಮೊ : ೯೯೪೫೧೦೨೮೩೮ ಮತ್ತು ಸಹ ಶಿಕ್ಷಕ ಬಿ. ಮಂಜಪ್ಪ, ಮೊ: ೯೭೩೧೩೦೯೩೯೮ ಪಾಲ್ಗೊಳ್ಳಲಿದ್ದಾರೆ.

ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ : ೨೦ ವರ್ಷ ಕಠಿಣ ಜೈಲು ಶಿಕ್ಷೆ

    ಭದ್ರಾವತಿ, ಮಾ. ೨೪: ಸುಮಾರು ೧೩ ವರ್ಷದ ಅಪ್ರಾಪ್ತ ವಯಸ್ಸಿನ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಯುವಕನೋರ್ವನಿಗೆ ೨೦ ವರ್ಷ ಕಠಿಣ ಜೈಲು ಶಿಕ್ಷೆ ವಿಧಿಸಿ ಶಿವಮೊಗ್ಗ ಪೋಕ್ಸೋ ನ್ಯಾಯಾಲಯ ತೀರ್ಪು ನೀಡಿದೆ.
    ತಾಲೂಕಿನ ಸುಮಾರು ೨೫ ವರ್ಷದ ಯುವಕ ಜೈಲು ಶಿಕ್ಷೆಗೆ ಗುರಿಯಾಗಿದ್ದು, ಆರೋಪ ದೃಢಪಟ್ಟ ಹಿನ್ನಲೆಯಲ್ಲಿ ಈತನಿಗೆ ೨೦ ವರ್ಷ ಕಠಿಣ ಜೈಲು ಶಿಕ್ಷೆ ಜೊತೆಗೆ ೧.೧೦ ಲಕ್ಷ ರೂ. ದಂಡ ವಿಧಿಸಲಾಗಿದೆ. ದಂಡ ಕಟ್ಟಲು ವಿಫಲವಾದಲ್ಲಿ, ಹೆಚ್ಚುವರಿಯಾಗಿ ೬ ತಿಂಗಳ ಕಾಲ ಸಾದಾ ಜೈಲು ಶಿಕ್ಷೆ ವಿಧಿಸಿ ನ್ಯಾಯಾಧೀಶರು ಆದೇಶಿಸಿದ್ದಾರೆ.  
    ಮಾ.೨೩ರಂದು ಹೆಚ್ಚುವರಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಫಾಸ್ಟ್ ಟ್ರ್ಯಾಕ್ ವಿಶೇಷ ನ್ಯಾಯಾಲಯ ಎಫ್‌ಟಿಎಸ್‌ಸಿ-FTSC-II(POCSO)  ನ್ಯಾಯಾಧೀಶರಾದ ಮೋಹನ ಜೆ.ಎಸ್ ಈ ತೀರ್ಪು ನೀಡಿದ್ದಾರೆ. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕ ಹರಿಪ್ರಸಾದ್ ವಾದ ಮಂಡಿಸಿದ್ದರು.
ಘಟನೆ ಹಿನ್ನೆಲೆ:
    ಶಿಕ್ಷೆಗೊಳಗಾದ ಯುವಕ ೨೦೧೯ರಲ್ಲಿ ಸುಮಾರು ೧೩ ವರ್ಷದ ಅಪ್ರಾಪ್ತ ವಯಸ್ಸಿನ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ್ದು, ನೊಂದ ಬಾಲಕಿಯ ತಂದೆ ಹಳೇನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
    ಅಂದಿನ ತನಿಖಾಧಿಕಾರಿಯಾಗಿದ್ದ ನಗರ ಪೊಲೀಸ್ ವೃತ್ತ ನಿರೀಕ್ಷಕ ನಂಜಪ್ಪ ನ್ಯಾಯಾಲಯಕ್ಕೆ ದೋಷಾರೋಪಣ ಪತ್ರ ಸಲ್ಲಿಸಿದ್ದರು. ವಿಜಯಕಲಾ ಎಂ.ಎಚ್.ಸಿ ತನಿಖಾ ಸಹಾಯಕರಾಗಿ ಕರ್ತವ್ಯ ನಿರ್ವಹಿಸಿದ್ದರು.

ಮಾ.೨೫ರಂದು ನೂತನ ಖಾಸಗಿ ಬಸ್ ನಿಲ್ದಾಣ ಉದ್ಘಾಟನೆ

ಭದ್ರಾವತಿ ಕೆಎಸ್‌ಆರ್‌ಟಿಸಿ ಮುಖ್ಯ ಬಸ್ ನಿಲ್ದಾಣದ ಸಮೀಪ ನೂತನವಾಗಿ ೨.೧೭ ಕೋ.ರು. ವೆಚ್ಚದಲ್ಲಿ ನಿರ್ಮಿಸಲಾಗಿರುವ ಖಾಸಗಿ ಬಸ್ ನಿಲ್ದಾಣ.
    ಭದ್ರಾವತಿ, ಮಾ. ೨೪ : ಕರ್ನಾಟಕ ನಗರ ಭೂ ಸಾರಿಗೆ ನಿರ್ದೇಶನಾಲಯ ಮತ್ತು ನಗರಸಭೆ ಉದ್ದಿಮೆ ನಿಧಿ ವತಿಯಿಂದ ನಗರದ ಹೃದಯ ಭಾಗದಲ್ಲಿ ಕೆಎಸ್‌ಆರ್‌ಟಿಸಿ ಮುಖ್ಯ ಬಸ್ ನಿಲ್ದಾಣದ ಸಮೀಪ ನೂತನವಾಗಿ ೨.೧೭ ಕೋ.ರು. ವೆಚ್ಚದಲ್ಲಿ ನಿರ್ಮಿಸಲಾಗಿರುವ ಖಾಸಗಿ ಬಸ್ ನಿಲ್ದಾಣದ ಉದ್ಘಾಟನೆ ಮಾ.೨೫ರ ಮಧ್ಯಾಹ್ನ ೧೨ ಗಂಟೆಗೆ ನಡೆಯಲಿದೆ.
    ಚುನಾವಣೆ ಘೋಷಣೆಯಾಗುವ ಸಾಧ್ಯತೆ ಹೆಚ್ಚಾಗಿರುವ  ಹಿನ್ನಲೆಯಲ್ಲಿ ಮಾ.೨೬ರ ಭಾನುವಾರ ಆಯೋಜಿಸಲಾಗಿದ್ದ ಕಾರ್ಯಕ್ರಮ ಶನಿವಾರ ನಡೆಯುತ್ತಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಡಾ. ಕೆ.ಸಿ ನಾರಾಯಣಗೌಡ, ಗೃಹ ಸಚಿವ ಆರಗ ಜ್ಞಾನೇಂದ್ರ, ನಗರಾಭಿವೃದ್ಧಿ ಇಲಾಖೆ ಸಚಿವ ಭೈರತಿ ಬಸವರಾಜ್, ಪೌರಾಡಳಿತ ಇಲಾಖೆ ಸಚಿವ ಎನ್. ನಾಗರಾಜ್(ಎಂ.ಟಿ.ಬಿ), ಮಾಜಿ ಬಿ.ಎಸ್ ಯಡಿಯೂರಪ್ಪ, ಶಾಸಕರಾದ ಆಯನೂರು ಮಂಜುನಾಥ್, ಎಸ್.ಎಲ್ ಭೋಜೇಗೌಡ, ಎಸ್. ರುದ್ರೇಗೌಡ, ಭಾರತಿ ಶೆಟ್ಟಿ, ಡಿ.ಎಸ್ ಅರುಣ್, ವಿವಿಧ ನಿಗಮ ಮಂಡಳಿ ಅಧ್ಯಕ್ಷರುಗಳಾದ ಡಾ. ರಾಜು ಎಂ. ತಲ್ಲೂರು, ಎಚ್.ಟಿ ಬಳಿಗಾರ, ಕೆ.ಎಸ್ ಗುರುಮೂರ್ತಿ, ಎಚ್.ಎಚ್ ಶ್ರೀಪಾದರಾವ್, ಕೆ.ಬಿ ಪವಿತ್ರ ರಾಮಯ್ಯ, ಎನ್.ಜಿ ನಾಗರಾಜ್, ನಗರಸಭೆ ಅಧ್ಯಕ್ಷೆ ಅನುಸುಧಾ ಮೋಹನ್ ಪಳನಿ, ಉಪಾಧ್ಯಕ್ಷೆ ಬಿ.ಪಿ ಸರ್ವಮಂಗಳ ಭೈರಪ್ಪ, ಸ್ಥಾಯಿ ಸಮಿತಿ ಅಧ್ಯಕ್ಷ ಕೆ. ಸುದೀಪ್ ಕುಮಾರ್, ಸದಸ್ಯ ಜಾರ್ಜ್ ಸೇರಿದಂತೆ ಇನ್ನಿತರರು ಉಪಸ್ಥಿತರಿರುವರು.
    ಸಂಸದ ಬಿ.ವೈ ರಾಘವೇಂದ್ರ ಉದ್ಘಾಟಿಸಲಿದ್ದು, ಶಾಸಕ ಬಿ.ಕೆ ಸಂಗಮೇಶ್ವರ್ ಅಧ್ಯಕ್ಷತೆ ವಹಿಸಲಿದ್ದಾರೆ. ಸರ್ಕಾರದ ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳು, ನಗರಸಭಾ ಸದಸ್ಯರು ಸೇರಿದಂತೆ ಇನ್ನಿತರರು ಭಾಗವಹಿಸಲಿದ್ದಾರೆ. ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಪೌರಾಯುಕ್ತ ಮನುಕುಮಾರ್ ಕೋರಿದ್ದಾರೆ.

ಎಸ್. ಮಹಬೂಬ್ ಬೀ ನಿಧನ

ಭದ್ರಾವತಿ, ಮಾ. ೨೪ :  ಗುತ್ತಿಗೆದಾರ ದಿವಂಗತ ಎಸ್.ಎಚ್ ಪೀರಾನ್‌ರವರ ಪತ್ನಿ, ಬೊಮ್ಮನಕಟ್ಟೆ ನಿವಾಸಿ ಎಸ್. ಮಹಬೂಬ್ ಬೀ(೭೮) ಗುರುವಾರ ನಿಧನ ಹೊಂದಿದರು.
  ರಾಜ್ಯ ಮಾನವ ಹಕ್ಕುಗಳ ವೇದಿಕೆ ಅಧ್ಯಕ್ಷ ಎಚ್.ಎಂ ಖಾದ್ರಿ ಸೇರಿದಂತೆ ಇಬ್ಬರು ಮಕ್ಕಳು, ಮೊಮ್ಮಕ್ಕಳು ಇದ್ದರು. ಮಹಬೂಬ್ ಬೀ ಕೆಲವು ದಿನಗಳಿಂದ ಅನಾರೋಗ್ಯಕ್ಕೆ ಒಳಗಾಗಿದ್ದರು. ಇವರ ಅಂತ್ಯಕ್ರಿಯೆ ರಾತ್ರಿ ನೆರವೇರಿತು.
 ವಿಧಾನಸಭೆ ಪ್ರತಿಪಕ್ಷ ಉಪನಾಯಕ ಯು.ಟಿ ಖಾದರ್, ಶಾಸಕರಾದ ಪ್ರಿಯಾಂಕ್ ಖರ್ಗೆ, ಬಿ.ಕೆ ಸಂಗಮೇಶ್ವರ್, ಜಾತ್ಯತೀತ ಜನತಾ ದಳ ರಾಜ್ಯಾಧ್ಯಕ್ಷ ಸಿ. ಎಂ ಇಬ್ರಾಹಿಂ, ರಾಜ್ಯ ವಕೀಲರ ಸಂಘದ ಮಾಜಿ ಅಧ್ಯಕ್ಷ ಎಲ್. ಶ್ರೀನಿವಾಸ ಬಾಬು, ನಗರಸಭೆ ಮಾಜಿ ಅಧ್ಯಕ್ಷ ಬಿ.ಕೆ ಮೋಹನ್, ಪ್ರಗತಿಪರ ಸಂಘಟನೆಗಳ ಮುಖಂಡರಾದ ಜಿ. ರಾಜು, ಸುರೇಶ್(ಪೇಪರ್), ಸುಧೀಂದ್ರ ಕಾಂಗ್ರೆಸ್ ಮುಖಂಡ ಎಚ್. ರವಿಕುಮಾರ್ ಸೇರಿಂದತೆ ಇನ್ನಿತರರು ಸಂತಾಪ ಸೂಚಿಸಿದ್ದಾರೆ.

Thursday, March 23, 2023

ಹೊಸ ಉತ್ಸಾಹ, ಹಲವು ಭರವಸೆಗಳೊಂದಿಗೆ ಜಾನ್ ಬೆನ್ನಿ ವಿಧಾನಸಭಾ ಚುನಾವಣೆಗೆ ಸ್ಪರ್ಧೆ

ಸುಮಾರು ೧ ವರ್ಷದಿಂದ ಕ್ಷೇತ್ರದಾದ್ಯಂತ ವ್ಯಾಪಕ ಪ್ರಚಾರ

ಜಾನ್ ಬೆನ್ನಿ
    ಭದ್ರಾವತಿ, ಮಾ. ೨೩ : ಈ ಬಾರಿ ಸಹ ವಿಧಾನಸಭಾ ಚುನಾವಣೆಗೆ ಪಕ್ಷೇತರ ಅಭ್ಯರ್ಥಿಯಾಗಿ ಜಾನ್ ಬೆನ್ನಿ ಹೊಸ ಉತ್ಸಾಹ ಹಾಗು ಹಲವು ಭರವಸೆಗಳೊಂದಿಗೆ ಸ್ಪರ್ಧಿಸುತ್ತಿದ್ದು, ಕಳೆದ ಸುಮಾರು ೧ ವರ್ಷದಿಂದ ಕ್ಷೇತ್ರದಾದ್ಯಂತ ವ್ಯಾಪಕ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಕೆಲವು ದಿನಗಳಿಂದ ಪ್ರಚಾರ ಮತ್ತಷ್ಟು ತೀವ್ರಗೊಳಿಸಿದ್ದು, ಕ್ಷೇತ್ರದ ಪ್ರತಿಯೊಂದು ಮನೆಗೆ ತೆರಳಿ ಮತದಾರರಲ್ಲಿ ವಿಶ್ವಾಸ ಮೂಡಿಸುವ ಮೂಲಕ ಮತಯಾಚನೆ ಕೈಗೊಂಡಿದ್ದಾರೆ.
    ಸಾಮಾನ್ಯ ಕುಟುಂಬದ ವ್ಯಕ್ತಿಯಾಗಿರುವ ಜಾನ್ ಬೆನ್ನಿ ನಗರದಲ್ಲಿ ಸುಮಾರು ೩-೪ ದಶಕಗಳಿಂದ ವಾಹನ ಚಾಲನಾ ತರಬೇತಿ ಶಿಕ್ಷಕರಾಗಿ ಗುರುತಿಸಿಕೊಂಡು ಚಿರಪರಿಚಿತರಾಗಿದ್ದಾರೆ. ಕ್ಷೇತ್ರದ ಜನರ ಭವಿಷ್ಯದ ಬದುಕಿಗೆ ಹೊಸ ಮುನ್ನುಡಿ ಬರೆಯಬೇಕೆಂಬ ಹಂಬಲದೊಂದಿಗೆ ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ. ವಿಶೇಷ ಎಂದರೆ ಇವರು ಯಾವುದೇ ರಾಜಕೀಯಗಳ ಪಕ್ಷಗಳಿಗೆ ಜೋತು ಬೀಳದೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ.   ತಿಂಗಳಿನಿಂದ
    ನಗರದ ಜನರ ಜೀವನಾಡಿಯಾಗಿರುವ ವಿಐಎಸ್‌ಎಲ್ ಮತ್ತು ಎಂಪಿಎಂ ಎರಡು ಕಾರ್ಖಾನೆಗಳು ಅವನತಿ ದಾರಿ ಹಿಡಿದು ಸಾವಿರಾರು ಕಾರ್ಮಿಕರು, ಲಕ್ಷಾಂತರ ಕುಟುಂಬಗಳು ಬೀದಿ ಪಾಲಾಗಿದ್ದು, ನಿರುದ್ಯೋಗ ಸಮಸ್ಯೆ ಉಲ್ಬಣಗೊಂಡಿದೆ, ಬೇರೆಡೆಗೆ ವಲಸೆ ಹೋಗುವವರ ಸಂಖ್ಯೆ ಹೆಚ್ಚಾಗುತ್ತಿದೆ, ಆರ್ಥಿಕ ಮಟ್ಟ ಕುಸಿತವಾಗಿದೆ ಹಾಗು ಅಭಿವೃದ್ಧಿ ಕಾರ್ಯಗಳು ಕುಂಠಿತಗೊಂಡಿವೆ. ಇಂತಹ ಸಂದಿಗ್ದ ಪರಿಸ್ಥಿತಿಯಲ್ಲಿ ಎದುರಾಗುತ್ತಿರುವ ಚುನಾವಣೆ ನಮ್ಮೆಲ್ಲರ ಪಾಲಿಗೆ ಮಹತ್ವದ್ದಾಗಿದೆ. ನಿಮ್ಮ ಅಧಿಕಾರ ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿದೆ. "ನಿಂತಿರುವುದು ನಾನಲ್ಲ ನೀವೇ" ಅಭ್ಯರ್ಥಿ ಎಂದು ಪರಿಗಣಿಸಿ ನನಗೆ ಒಂದು ಅವಕಾಶ ಕೊಡಿ. ಅವಕಾಶ ನೀಡಿ ಎಂಬ ಮನವಿ ಇವರದ್ದಾಗಿದೆ. ಅಲ್ಲದೆ ಸುಮಾರು ೧೧ ಭರವಸೆಗಳೊಂದಿಗೆ ಮತಯಾಚನೆಯಲ್ಲಿ ತೊಡಗಿಸಿಕೊಂಡಿದ್ದಾರೆ.

ಮಾ.೨೫ರಂದು ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ

    ಭದ್ರಾವತಿ, ಮಾ. ೨೩ : ತಾಲೂಕು ವೀರಶೈವ ಲಿಂಗಾಯತ ಮಹಿಳಾ ಸಮಾಜದ ವತಿಯಿಂದ ಮಾ.೨೫ರ ಮಧ್ಯಾಹ್ನ ೩ ಗಂಟೆಗೆ ಹಳೇನಗರದ ತಾಲೂಕು ಕಛೇರಿ ರಸ್ತೆಯಲ್ಲಿರುವ ಶ್ರೀ ವೀರಭದ್ರೇಶ್ವರ ಸಮುದಾಯ ಭವನದಲ್ಲಿ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಮತ್ತು ಸರ್ವಮಂಗಳಮ್ಮ ಶಿವಶಂಕರಯ್ಯ ಪ್ರಶಸ್ತಿ ಪ್ರಧಾನ ಸಮಾರಂಭ ಹಮ್ಮಿಕೊಳ್ಳಲಾಗಿದೆ.
    ಪ್ರಶಸ್ತಿ ಪುರಸ್ಕೃತರಾದ ಬೆಂಗಳೂರಿನ ಸುಮಂಗಲಿ ಸೇವಾ ಆಶ್ರಮದ ಅಧ್ಯಕ್ಷೆ ಡಾ.ಎಸ್.ಜಿ ಸುಶೀಲಮ್ಮ ಸಮರಂಭ ಉದ್ಘಾಟಿಸುವರು. ತಾಲೂಕು ವೀರಶೈವ ಲಿಂಗಾಯತ ಮಹಿಳಾ ಸಮಾಜದ ಅಧ್ಯಕ್ಷೆ ಆರ್.ಎಸ್ ಶೋಭ ಅಧ್ಯಕ್ಷತೆ ವಹಿಸಲಿದ್ದಾರೆ.
    ಪ್ರಶಸ್ತಿ ಸ್ಥಾಪಕರಾದ ಎಮೆರಿಟಸ್ ಪ್ರಾಧ್ಯಾಪಕಿ ಡಾ. ವಿಜಯದೇವಿ ಉಪಸ್ಥಿತರಿರುವರು. ಬೆಂಗಳೂರಿನ ವಕೀಲರಾದ ಶ್ರೀದೇವಿ ಅಂಚಿ ಚೀಟಿ ಮತ್ತು ಮಹಿಳೆ ಕುರಿತು ವಿಶೇಷ ಉಪನ್ಯಾಸ ನೀಡಲಿದ್ದು, ಸಮಾಜದ ಉಪಾಧ್ಯಕ್ಷೆ ಬಿ.ಎಸ್ ಭಾಗ್ಯಲಕ್ಷ್ಮಿ, ರಾಜ್ಯಮಟ್ಟದ ಕರಾಟೆಪಟು ಸಿಂಚನ ಅವರಿಗೆ ಸನ್ಮಾನ ನಡೆಯಲಿದೆ.
    ಸಮಾಜದ ಗೌರವಾಧ್ಯಕ್ಷೆ ಗೌರಮ್ಮ ಶಂಕರಯ್ಯ, ಸಲಹೆಗಾರರಾದ ಯಶೋಧ ವೀರಭದ್ರಪ್ಪ, ಪ್ರಧಾನ ಕಾರ್ಯದರ್ಶಿ ನಾಗರತ್ನ ವಾಗೀಶ್ ಕೋಠಿ ಮತ್ತು ವೀರಶೈವ ಸೇವಾಸಮಿತಿ ಅಧ್ಯಕ್ಷ ಆರ್. ಮಹೇಶ್‌ಕುಮಾರ್ ಸೇರಿದಂತೆ ಇನ್ನಿತರರು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ. ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಸಮಾಜದ ಅಧ್ಯಕ್ಷೆ ಆರ್.ಎಸ್ ಶೋಭ ಕೋರಿದ್ದಾರೆ.