ಭದ್ರಾವತಿ ತಾಲೂಕಿನ ಪುರಾಣ ಪ್ರಸಿದ್ದ ಸುಣ್ಣದಹಳ್ಳಿ ಶ್ರೀ ವೀರಾಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಗುರುವಾರ ಚಿತ್ರ ಪೂರ್ಣಿಮೆ ಪ್ರಯುಕ್ತ ಪವಮಾನ ಹೋಮ ಮತ್ತು ರಥೋತ್ಸವ ವಿಜೃಂಭಣೆಯಿಂದ ಜರಗಿತು.
ಭದ್ರಾವತಿ, ಏ. ೬ : ತಾಲೂಕಿನ ಪುರಾಣ ಪ್ರಸಿದ್ದ ಸುಣ್ಣದಹಳ್ಳಿ ಶ್ರೀ ವೀರಾಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಗುರುವಾರ ಚಿತ್ರ ಪೂರ್ಣಿಮೆ ಪ್ರಯುಕ್ತ ಪವಮಾನ ಹೋಮ ಮತ್ತು ರಥೋತ್ಸವ ವಿಜೃಂಭಣೆಯಿಂದ ಜರಗಿತು
. ಬೆಳಗ್ಗೆ ೬ ಗಂಟೆಗೆ ಪಂಚಾಮೃತ ಅಭಿಷೇಕ, ಪವಮಾನ ಹೋಮ, ೧೨ ಗಂಟೆಗೆ ರಥೋತ್ಸವ ಹಾಗೂ ಮಹಾಮಂಗಳಾರತಿ, ತೀರ್ಥಪ್ರಸಾದ ವಿನಿಯೋಗ ಸೇರಿದಂತೆ ಧಾರ್ಮಿಕ ಆಚರಣೆಗಳು ಸಂಕರ್ಷಣ ಧರ್ಮಸಂಸ್ಥೆ ನೇತೃತ್ವದಲ್ಲಿ ಜರುಗಿದವು
ವೇದಬ್ರಹ್ಮ ಶ್ರೀ ಗೋಪಾಲ ಆಚಾರ್, ಸಂಕರ್ಷಣ ಧರ್ಮಸಂಸ್ಥೆ ಅಧ್ಯಕ್ಷ ಯು.ಜಿ ಸುಬ್ರಹ್ಮಣ್ಯ, ರಾಘವೇಂದ್ರ, ವಾಸುದೇವಮೂರ್ತಿ, ಮಧುಸೂಧನ್, ಅನಂತರಾಮನ್, ರಮಾಕಾಂತ್, ವೆಂಕಟೇಶ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.
ಪ್ರತಿವರ್ಷದಂತೆ ಈ ಬಾರಿ ಸಹ ಭದ್ರಾವತಿ ತಾಲೂಕಿನ ಕೂಡ್ಲಿಗೆರೆ ಶ್ರೀ ಸುಬ್ರಮಣ್ಯ ಸ್ವಾಮಿ ದೇವಸ್ಥಾನ ಹಾಗು ಸಮೀಪದ ಶ್ರೀ ಕ್ಷೇತ್ರ ಭದ್ರಗಿರಿ ಶಿವಸುಬ್ರಮಣ್ಯ ಸ್ವಾಮಿ ದೇವಸ್ಥಾನದಲ್ಲಿ ಕಾವಡಿ ಉತ್ಸವ ವಿಜೃಂಭಣೆಯಿಂದ ಜರುಗಿತು. ಭಕ್ತರ ಕಾವಡಿ ಹರಕೆ ಸಮರ್ಪಿಸುವ ಪರಿ ನೋಡುಗರ ಮೈನವಿರೇಳಿಸಿತು.
ಭದ್ರಾವತಿ, ಏ. ೬ : ಪ್ರತಿವರ್ಷದಂತೆ ಈ ಬಾರಿ ಸಹ ತಾಲೂಕಿನ ಕೂಡ್ಲಿಗೆರೆ ಶ್ರೀ ಸುಬ್ರಮಣ್ಯ ಸ್ವಾಮಿ ದೇವಸ್ಥಾನ ಹಾಗು ಸಮೀಪದ ಶ್ರೀ ಕ್ಷೇತ್ರ ಭದ್ರಗಿರಿ ಶಿವಸುಬ್ರಮಣ್ಯ ಸ್ವಾಮಿ ದೇವಸ್ಥಾನದಲ್ಲಿ ಕಾವಡಿ ಉತ್ಸವ ವಿಜೃಂಭಣೆಯಿಂದ ಜರುಗಿತು.
ಚನ್ನಗಿರಿ ರಸ್ತೆಯ ಕೂಡ್ಲಿಗೆರೆ ಗ್ರಾಮದಲ್ಲಿರುವ ಶ್ರೀ ಸುಬ್ರಮಣ್ಯ ಸ್ವಾಮಿ ದೇವಸ್ಥಾನದಲ್ಲಿ ಪ್ರತಿವರ್ಷ ಕಾವಡಿ ಉತ್ಸವ ವಿಜೃಂಭಣೆಯಿಂದ ಜರುಗುತ್ತಿದ್ದು, ಸಾವಿರಾರು ಭಕ್ತಾಧಿಗಳು ಈ ಉತ್ಸವದಲ್ಲಿ ಪಾಲ್ಗೊಳ್ಳುವುದು ವಿಶೇಷವಾಗಿದೆ. ಅದರಲ್ಲೂ ಕಾವಡಿ ಹರಕೆ ಹೊತ್ತ ಭಕ್ತರನ್ನು ನೋಡುವುದೇ ಮತ್ತೊಂದು ವಿಶೇಷವಾಗಿದೆ. ಕಾವಡಿ ಹರಕೆ ಹೊತ್ತ ಭಕ್ತರು ತಾಲೂಕಿನ ವಿವಿಧ ಮೂಲೆಗಳಿಂದ ಮಾತ್ರವಲ್ಲದೆ ಶಿವಮೊಗ್ಗ, ಚನ್ನಗಿರಿ ತಾಲೂಕುಗಳಿಂದಲೂ ಕಾಲ್ನಡಿಗೆಯಲ್ಲಿ ದೇವಸ್ಥಾನಕ್ಕೆ ಆಗಮಿಸಿದ್ದರು. ಕೆಲ ಭಕ್ತರು ಬಾಯಿ, ನಾಲಿಗೆಗೆ ಲೋಹದ ತ್ರಿಶೂಲ ಚುಚ್ಚಿಕೊಂಡು, ಮತ್ತೆ ಕೆಲವು ಭಕ್ತರು ಲೋಹದ ಕೊಕ್ಕೆಗಳನ್ನು ಬೆನ್ನಿಗೆ ಸಿಕ್ಕಿಸಿಕೊಂಡು ಬೃಹತ್ ಗಾತ್ರದ ಅಲಂಕೃತಗೊಂಡ ಕಲ್ಲು ಬಂಡಿಯ ತೇರುಗಳನ್ನು ಹಾಗು ಇನ್ನೂ ಕೆಲ ಭಕ್ತರು ಲೋಹದ ಕೊಕ್ಕೆಗಳನ್ನು ಬೆನ್ನು ಹಾಗು ಕಾಲುಗಳಿಗೆ ಚುಚ್ಚಿಕೊಂಡು ಕ್ರೇನ್‌ಗಳ ನೆರವಿನಿಂದ ಪಕ್ಷಿಗಳಂತೆ ಜೋತು ಬಿದ್ದು ಕಾವಡಿ ಹರಕೆ ಸಮರ್ಪಿಸುವ ಪರಿ ನೋಡುಗರ ಮೈನವಿರೇಳಿಸಿತು.
ಇದಕ್ಕೂ ಮೊದಲು ಗ್ರಾಮದ ಅರಣ್ಯ ವ್ಯಾಪ್ತಿಯಲ್ಲಿರುವ ಭದ್ರಾ ಕಾಲುವೆ ಬಳಿ ಶ್ರೀ ಸುಬ್ರಮಣ್ಯ ಸ್ವಾಮಿ ದೇವರ ಉತ್ಸವ ಮೂರ್ತಿಯನ್ನು ಅಲಂಕೃತಗೊಳಿಸಿ ಮೆರವಣಿಗೆ ಮೂಲಕ ದೇವಸ್ಥಾನಕ್ಕೆ ತರಲಾಯಿತು. ಭಕ್ತರಿಗೆ ಮಜ್ಜಿಗೆ, ಪಾನಕ ಹಾಗು ಪ್ರಸಾದ ವಿತರಣೆ ನಡೆಯಿತು.
ಭದ್ರಗಿರಿಯಲ್ಲೂ ಹರಿದು ಬಂದ ಭಕ್ತ ಸಮೂಹ :
ಶ್ರೀ ಕ್ಷೇತ್ರ ಭದ್ರಗಿರಿಯಲ್ಲೂ ಶಿವಮೊಗ್ಗ ಹಾಗು ಚಿಕ್ಕಮಗಳೂರು ಜಿಲ್ಲೆಗಳ ವಿವಿಧ ತಾಲೂಕುಗಳಿಂದ ಭಕ್ತರು ಆಗಮಿಸಿದ್ದರು. ದೂರದ ಪ್ರದೇಶಗಳಿಂದ ಕಾಲ್ನಡಿಗೆಯಲ್ಲಿ ಆಗಮಿಸಿದ್ದ ಕಾವಡಿ ಹರಕೆ ಹೊತ್ತ ಭಕ್ತರು ಗಮನ ಸೆಳೆದರು. ಶ್ರೀ ಕ್ಷೇತ್ರದಲ್ಲಿ ವಿಶೇಷ ಧಾರ್ಮಿಕ ಆಚರಣೆಗಳು ಜರುಗಿದವು. ಮಹಾಮಂಗಳಾರತಿ, ತೀರ್ಥಪ್ರಸಾದ ವಿತರಣೆ ಹಾಗು ಅನ್ನಸಂತರ್ಪಣೆ ನೆರವೇರಿತು.
ರಾಜ್ಯ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಬುಧವಾರ ಭದ್ರಾವತಿ ನಗರದ ಪ್ರಮುಖ ರಸ್ತೆಗಳಲ್ಲಿ ಪೊಲೀಸ್ ಉಪ ವಿಭಾಗ ಹಾಗು ಸಿಆರ್‌ಪಿಎಫ್ ವತಿಯಿಂದ ಪಥ ಸಂಚಲನ (ರೂಟ್ ಮಾರ್ಚ್) ನಡೆಸಲಾಯಿತು.
ಭದ್ರಾವತಿ, ಏ. ೫ : ರಾಜ್ಯ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಬುಧವಾರ ನಗರದ ಪ್ರಮುಖ ರಸ್ತೆಗಳಲ್ಲಿ ಪೊಲೀಸ್ ಉಪ ವಿಭಾಗ ಹಾಗು ಸಿಆರ್‌ಪಿಎಫ್ ವತಿಯಿಂದ ಪಥ ಸಂಚಲನ (ರೂಟ್ ಮಾರ್ಚ್) ನಡೆಸಲಾಯಿತು.
ಉಪ ವಿಭಾಗದ ಉಪಾಧೀಕ್ಷಕ ಜಿತೇಂದ್ರ ಕುಮಾರ್ ದಯಾಮ ಮತ್ತು ಸಿಆರ್‌ಪಿಎಫ್ ಅಸಿಸ್ಟೆಂಟ್ ಕಮಾಂಡೆಂಟ್ ಶಿವಾರೆಡ್ಡಿ ನೇತೃತ್ವದಲ್ಲಿ ನಗರದ ರಂಗಪ್ಪ ವೃತ್ತದಿಂದ ಆರಂಭಗೊಂಡ ಪಥ ಸಂಚಲನ ಮಾಧವಾಚಾರ್ ವೃತ್ತ, ತರೀಕೆರೆ ರಸ್ತೆಯ ಗಾಂಧಿ ವೃತ್ತ, ಓಎಸ್‌ಎಂ ರಸ್ತೆ ಮುಖಾಂತರ ಹೊಸಮನೆ ಶಿವಾಜಿ ವೃತ್ತದವರೆಗೂ ನಡೆಯಿತು
ನಗರ ಪೊಲೀಸ್ ವೃತ್ತ ನಿರೀಕ್ಷಕ ಶಾಂತಿನಾಥ್, ವಿವಿಧ ಪೊಲೀಸ್ ಠಾಣೆಗಳ ಠಾಣಾಧಿಕಾರಿಗಳು, ಸಿಆರ್‌ಪಿಎಫ್(ಕೇಂದ್ರ ಮೀಸಲು ಪೊಲೀಸ್ ಪಡೆ)ಅಧಿಕಾರಿ ಮತ್ತು ಸಿಬ್ಬಂಧಿಗಳು ಪಥ ಸಂಚಲನದಲ್ಲಿ ಪಾಲ್ಗೊಂಡಿದ್ದರು.
ವಿಧಾನಸಭಾ ಚುನಾವಣೆ ಹಿನ್ನಲೆಯಲ್ಲಿ ಬುಧವಾರ ಭದ್ರಾವತಿಯಲ್ಲಿ ವಿಕಲಚೇತನರಿಂದ ಮತದಾನ ಜಾಗೃತಿ ಜಾಥಾ ನಗರದ ರಂಗಪ್ಪ ವೃತ್ತದಿಂದ ತಾಲೂಕು ಪಂಚಾಯಿತಿವರೆಗೂ ನಡೆಸಲಾಯಿತು.
ಭದ್ರಾವತಿ, ಏ. ೫ : ವಿಧಾನಸಭಾ ಚುನಾವಣೆ ಹಿನ್ನಲೆಯಲ್ಲಿ ಬುಧವಾರ ವಿಕಲಚೇತನರಿಂದ ಮತದಾನ ಜಾಗೃತಿ ಜಾಥಾ ನಗರದ ರಂಗಪ್ಪ ವೃತ್ತದಿಂದ ತಾಲೂಕು ಪಂಚಾಯಿತಿವರೆಗೂ ನಡೆಸಲಾಯಿತು.
ಭಾರತ ಚುನಾವಣಾ ಆಯೋಗ, ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ವಿಕಲಚೇತನರ ಹಾಗು ಹಿರಿಯ ನಾಗರೀಕರ ಸಬಲೀಕರಣ ಇಲಾಖೆ ಹಾಗು ವಿಆರ್‌ಡಬ್ಲ್ಯೂ ಮತ್ತು ಎಂಆರ್‌ಡಬ್ಲ್ಯೂ, ಜಿಲ್ಲೆಯ ಎಲ್ಲಾ ಸ್ವಯಂ ಸೇವಾ ಸಂಘ-ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಜಾಗೃತಿ ಜಾಥಾ ಹಮ್ಮಿಕೊಳ್ಳಲಾಗಿತ್ತು.
ತಹಸೀಲ್ದಾರ್ ಸುರೇಶ್ ಆಚಾರ್, ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ರಮೇಶ್ ಸೇರಿದಂತೆ ಇನ್ನಿತರರು ಜಾಥಾದಲ್ಲಿ ಪಾಲ್ಗೊಂಡಿದ್ದರು.
ಭದ್ರಾವತಿ, ಏ. ೫ : ಗಾಂಜಾ ಮಾದಕ ವಸ್ತು ಮಾರಾಟದಲ್ಲಿ ತೊಡಗಿದ್ದ ವ್ಯಕ್ತಿಯೋರ್ವನನ್ನು ಬಂಧಿಸಿ ಸುಮಾರು ೬ ಸಾವಿರ ರು. ಮೌಲ್ಯದ ಒಟ್ಟು ೧೫೦ ಗ್ರಾಂ. ಒಣ ಗಾಂಜಾ ಹಾಗು ೫೩೦ ರು. ನಗದು ವಶಪಡಿಸಿಕೊಂಡಿರುವ ಘಟನೆ ನಡೆದಿದೆ.
ಸತ್ಯಸಾಯಿ ನಗರದ ನಿವಾಸಿ ಮುತ್ಯಾನ್ ಸಾಬ್ ಅಲಿಯಾಸ್ ಮುಕ್ತುಂ ಸಾಬ್(೬೬) ಬಂಧಿತ ವ್ಯಕ್ತಿಯಾಗಿದ್ದು, ಈತ ಮಂಗಳವಾರ ಮಧ್ಯಾಹ್ನ ಸತ್ಯಸಾಯಿ ನಗರದ ನೀರಿನ ಟ್ಯಾಂಕ್ ಹತ್ತಿರ ಗಾಂಜಾ ಮಾದಕ ವಸ್ತು ಮಾರಾಟದಲ್ಲಿ ತೊಡಗಿದ್ದಾಗ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ ಬಂಧಿಸಲಾಗಿದೆ.
ಪೊಲೀಸ್ ಉಪಾಧೀಕ್ಷಕ ಜಿತೇಂದ್ರ ಕುಮಾರ್ ದಯಾಮ ಮಾರ್ಗದರ್ಶನದಲ್ಲಿ ಹೊಸಮನೆ ಶಿವಾಜಿ ಸರ್ಕಲ್ ಪೊಲೀಸ್ ಠಾಣೆಯ ಠಾಣಾಧಿಕಾರಿ ನಿಂಗಪ್ಪ ಕರಕಣ್ಣನವರ್ ನೇತೃತ್ವದ ಸಿಬ್ಬಂದಿಗಳನ್ನೊಳಗೊಂಡ ತಂಡ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿತ್ತು.
ಈ ಸಂಬಂಧ ಬಂಧಿತ ಮುತ್ಯಾನ್ ಸಾಬ್ ಅಲಿಯಾಸ್ ಮುಕ್ತುಂ ಸಾಬ್ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಳ್ಳಲಾಗಿದೆ.
ಭದ್ರಾವತಿಯಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಬುಧವಾರ ಹಸಿರು ಕ್ರಾಂತಿ ಹರಿಕಾರ, ಮಾಜಿ ಉಪ ಪ್ರಧಾನಿ ಡಾ. ಬಾಬು ಜಗಜೀವನ ರಾಂರವರ ೧೧೬ನೇ ಜಯಂತಿ ಆಚರಿಸಲಾಯಿತು.
ಭದ್ರಾವತಿ, ಏ. ೫ : ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಬುಧವಾರ ಹಸಿರು ಕ್ರಾಂತಿ ಹರಿಕಾರ, ಮಾಜಿ ಉಪ ಪ್ರಧಾನಿ ಡಾ. ಬಾಬು ಜಗಜೀವನ ರಾಂರವರ ೧೧೬ನೇ ಜಯಂತಿ ಆಚರಿಸಲಾಯಿತು.
ಚುನಾವಣೆ ನೀತಿ ಸಂಹಿತೆ ಹಿನ್ನಲೆಯಲ್ಲಿ ತಹಸೀಲ್ದಾರ್ ಸುರೇಶ್ ಆಚಾರ್ ನೇತೃತ್ವದಲ್ಲಿ ಸರಳವಾಗಿ ಆಚರಿಸಲಾಯಿತು. ಡಾ. ಬಾಬು ಜಗಜೀವನ ರಾಂರವರ ಭಾವಚಿತ್ರಕ್ಕೆ ಪುಷ್ಪ ನಮನದೊಂದಿಗೆ ಗೌರವ ಸಲ್ಲಿಸಲಾಯಿತು.
ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ರಮೇಶ್, ಸಮಾಜ ಕಲ್ಯಾಣ ನಿರ್ದೇಶಕ ಸಹಾಯಕ ನಿರ್ದೇಶಕ ಗೋಪಾಲಪ್ಪ ಹಾಗು ತಾಲೂಕು ಕಛೇರಿ ವಿವಿಧ ಶಾಖೆಗಳ ಅಧಿಕಾರಿಗಳು, ಸಿಬ್ಬಂದಿಗಳು, ದಲಿತ ಸಂಘರ್ಷ ಸಮಿತಿ ಪ್ರಮುಖರು ಪಾಲ್ಗೊಂಡಿದ್ದರು.
ಭದ್ರಾವತಿ ವಿಐಎಸ್‌ಎಲ್ ಗುತ್ತಿಗೆ ಕಾರ್ಮಿಕ ಸಂಘಟನೆಗಳ ಮುಖಂಡರು ಶ್ರೀ ಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ, ರಾಜ್ಯಸಭಾ ಸದಸ್ಯರಾದ ಡಾ. ವೀರೇಂದ್ರ ಹೆಗ್ಗಡೆಯವರನ್ನು ಭೇಟಿ ಮಾಡಿ ಕಾರ್ಖಾನೆ ಉಳಿಸುವಂತೆ ಮನವಿ ಮಾಡಿದ್ದಾರೆ.
ಭದ್ರಾವತಿ, ಏ. ೫: ಕೇಂದ್ರ ಉಕ್ಕು ಪ್ರಾಧಿಕಾರದ ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಉಳಿವಿಗಾಗಿ ಹೋರಾಟ ಮುಂದುವರೆದಿದ್ದು, ಗುತ್ತಿಗೆ ಕಾರ್ಮಿಕರ ಅನಿರ್ಧಿಷ್ಟಾವಧಿ ಹೋರಾಟ ಈಗಾಗಲೇ ೭೫ ದಿನಗಳನ್ನು ಪೂರೈಸಿದೆ. ಈ ಹಿಂದೆ ಮಾ.೩೧ರಿಂದ ಕಾರ್ಖಾನೆಯಲ್ಲಿ ಉತ್ಪಾದನೆ ಸ್ಥಗಿತಗೊಳ್ಳಲಿದೆ ಎಂಬ ಸುದ್ದಿ ವ್ಯಾಪಕವಾಗಿ ಹರಿದಾಡುತ್ತಿತ್ತು. ಆದರೆ ಈ ಕುರಿತು ಆಡಳಿತ ಮಂಡಳಿ ಇದುವರೆಗೂ ಯಾವುದೇ ಸ್ಪಷ್ಟನೆ ನೀಡಿಲ್ಲ. ಈ ನಡುವೆ ಗುತ್ತಿಗೆ ಕಾರ್ಮಿಕರು ಅತಂತ್ರದಲ್ಲಿ ಹೋರಾಟ ಮುಂದುವರೆಸುವಂತಾಗಿದೆ.
ಒಂದೆಡೆ ರಾಜ್ಯ ವಿಧಾನಸಭಾ ಚುನಾವಣೆ ಹಿನ್ನಲೆಯಲ್ಲಿ ಈಗಾಗಲೇ ಚುನಾವಣಾ ನೀತಿ ಸಂಹಿತೆ ಜಾರಿಯಾಗಿದ್ದು, ಇದರಿಂದಾಗಿ ಹೋರಾಟಕ್ಕೆ ಬೆಂಬಲ ನೀಡುವವರು ಮೌನಕ್ಕೆ ಒಳಗಾಗುವಂತಾಗಿದೆ. ಮತ್ತೊಂದೆಡೆ ಕೇಂದ್ರ ಸರ್ಕಾರಕ್ಕೆ ಅಥವಾ ಆಡಳಿತ ಮಂಡಳಿಗೆ ಕಾರ್ಖಾನೆ ಕುರಿತು ಸೂಕ್ತ ನಿರ್ಧಾರ ಕೈಗೊಂಡು ಪ್ರಕಟಿಸಲು ಸಹ ಸಾಧ್ಯವಾಗುತ್ತಿಲ್ಲ. ಈ ಹಿನ್ನಲೆಯಲ್ಲಿ ಚುನಾವಣೆ ಪ್ರಕ್ರಿಯೆ ಮುಕ್ತಾಯಗೊಳ್ಳುವವರೆಗೂ ಗುತ್ತಿಗೆ ಕಾರ್ಮಿಕರು ತಮ್ಮ ಮುಂದಿನ ಹೋರಾಟ ಕುರಿತು ಯಾವುದೇ ನಿರ್ಧಾರ ಕೈಗೊಳ್ಳಲು ಸಾಧ್ಯವಾಗುತ್ತಿಲ್ಲ. ಒಟ್ಟಾರೆ ಅತಂತ್ರ ಸ್ಥಿತಿ ಎದುರಾಗಿದ್ದು, ಸಂಕಷ್ಟದಲ್ಲಿಯೇ ಗುತ್ತಿಗೆ ಕಾರ್ಮಿಕರು ತಮ್ಮ ಹೋರಾಟ ಮುನ್ನಡೆಸಿಕೊಂಡು ಹೋಗುತ್ತಿದ್ದಾರೆ.
ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರಿಗೆ ಮನವಿ :
ಗುತ್ತಿಗೆ ಕಾರ್ಮಿಕ ಸಂಘಟನೆಗಳ ಮುಖಂಡರು ಶ್ರೀ ಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ, ರಾಜ್ಯಸಭಾ ಸದಸ್ಯರಾದ ಡಾ. ವೀರೇಂದ್ರ ಹೆಗ್ಗಡೆಯವರನ್ನು ಭೇಟಿ ಮಾಡಿ ಕಾರ್ಖಾನೆ ಉಳಿಸುವಂತೆ ಮನವಿ ಮಾಡಿದ್ದಾರೆ.
ಮನವಿಗೆ ಸ್ಪಂದಿಸಿರುವ ಡಾ. ವೀರೇಂದ್ರ ಹೆಗ್ಗಡೆಯವರು ಪೂರಕವಾಗಿ ಸ್ಪಂದಿಸಿದ್ದಾರೆ. ಸಿಐಟಿಯು ಉಪಾಧ್ಯಕ್ಷ ಮಂಜುನಾಥ್, ಕಾರ್ಯದರ್ಶಿ ವಿನಯ್ ಕುಮಾರ್, ಅವಿನಾಶ್, ಎಐಟಿಯುಸಿ ಅಧ್ಯಕ್ಷ ಕುಮಾರ ಸ್ವಾಮಿ, ಶಿವನಾಗು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.