Friday, April 21, 2023

ಪಕ್ಷ ಸಂಘಟನೆ ಜೊತೆಗೆ ಅಭ್ಯರ್ಥಿ ಗೆಲುವಿಗೆ ಶ್ರಮಿಸಿ : ಶಾರದ ಅಪ್ಪಾಜಿ

ಭದ್ರಾವತಿ ಶುಕ್ರವಾರ ವಿವಿಧ ಪಕ್ಷಗಳನ್ನು ತೊರೆದು ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಗೊಂಡ ಪ್ರಮುಖರನ್ನು ಸ್ವಾಗತಿಸಿ ಅಭಿನಂದಿಸುವ ಮೂಲಕ ಜೆಡಿಎಸ್ ಅಭ್ಯರ್ಥಿ ಶಾರದ ಅಪ್ಪಾಜಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
    ಭದ್ರಾವತಿ, ಏ. ೨೧ : ಪಕ್ಷದ ಸ್ಥಳೀಯ ಮುಖಂಡರು, ಕಾರ್ಯಕರ್ತರು ಪಕ್ಷ ಸಂಘಟನೆ ಜೊತೆಗೆ ಅಭ್ಯರ್ಥಿ ಗೆಲುವಿಗೆ ಶ್ರಮಿಸಬೇಕೆಂದು ಶಾರದ ಅಪ್ಪಾಜಿ ಮನವಿ ಮಾಡಿದರು.
    ಅವರು ಶುಕ್ರವಾರ ವಿವಿಧ ಪಕ್ಷಗಳನ್ನು ತೊರೆದು ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಗೊಂಡ ಪ್ರಮುಖರನ್ನು ಸ್ವಾಗತಿಸಿ ಅಭಿನಂದಿಸುವ ಮೂಲಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
    ಜೆಡಿಎಸ್ ಪಕ್ಷದ ತತ್ವ ಸಿದ್ದಾಂತಗಳು, ಅಭಿವೃದ್ಧಿ ಕಾರ್ಯಗಳನ್ನು ಮೆಚ್ಚಿ ವಿವಿಧ ಪಕ್ಷಗಳಿಂದ ಸೇರ್ಪಡೆಗೊಳ್ಳುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ.  ಸಂಘಟನೆಗೆ ಹೆಚ್ಚಿನ ಗಮನ ನೀಡಬೇಕು. ಈ ಬಾರಿ ಗೆಲುವಿಗೆ ಎಲ್ಲರೂ ಒಗ್ಗಟ್ಟಿಗಾಗಿ ಶಕ್ತಿ ಮೀರಿ ಶ್ರಮಿಸಬೇಕೆಂದರು.
    ಪಕ್ಷಕ್ಕೆ ಸೇರ್ಪಡೆಗೊಂಡ ಮಹಮದ್ ಸನ್ನಾವುಲ್ಲಾ, ಇಬ್ರಾಹಿಂ ಖಾನ್ ಮತ್ತು ಎನ್. ಕೃಷ್ಣಪ್ಪರವರನ್ನು ಅಭಿನಂದಿಸಲಾಯಿತು. ಪಕ್ಷದ ನಗರ ಘಟಕದ ಅಧ್ಯಕ್ಷ ಆರ್. ಕರುಣಾಮೂರ್ತಿ, ರಾಜ್ಯ ಕಾರ್ಯದರ್ಶಿ ಜೆ.ಪಿ ಯೋಗೇಶ್, ಯುವ ಘಟಕದ ಜಿಲ್ಲಾಧ್ಯಕ್ಷ ಮಧುಸೂಧನ್, ಪ್ರಮುಖರಾದ ಡಿ.ಟಿ ಶ್ರೀಧರ್, ಮುರ್ತುಜಾಖಾನ್, ಸೈಯದ್ ಅಜ್ಮಲ್, ಎ. ಮಸ್ತಾನ್, ಮುಕ್ರಮ್ ಖಾನ್, ತರುಣ್‌ಕುಮಾರ್, ಲೋಕೇಶ್ವರ್‌ರಾವ್ ಸೇರಿದಂತೆ ಇನ್ನಿತರರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ಜೆಡಿಎಸ್ ಸೇರ್ಪಡೆಗೊಂಡ ಮಾಜಿ ಉಪಮೇಯರ್ ಮಹಮದ್ ಸನ್ನಾವುಲ್ಲಾ

ಸುಮಾರು ೪ ದಶಕಗಳಿಗೂ ಹೆಚ್ಚು ಕಾಲ ಕಾಂಗ್ರೆಸ್ ಪಕ್ಷದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದ ಭದ್ರಾವತಿ ಅಲ್ಪಸಂಖ್ಯಾತ ಸಮುದಾಯದ ಮುಖಂಡ, ಮಾಜಿ ಉಪಮೇಯರ್ ಮಹಮದ್ ಸನ್ನಾವುಲ್ಲಾ ಜೆಡಿಎಸ್ ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆಗೊಂಡಿದ್ದಾರೆ.
    ಭದ್ರಾವತಿ, ಏ. ೨೧: ಸುಮಾರು ೪ ದಶಕಗಳಿಗೂ ಹೆಚ್ಚು ಕಾಲ ಕಾಂಗ್ರೆಸ್ ಪಕ್ಷದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದ ಅಲ್ಪಸಂಖ್ಯಾತ ಸಮುದಾಯದ ಮುಖಂಡ, ಮಾಜಿ ಉಪಮೇಯರ್ ಮಹಮದ್ ಸನ್ನಾವುಲ್ಲಾ ಜೆಡಿಎಸ್ ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆಗೊಂಡಿದ್ದಾರೆ.
    ಶುಕ್ರವಾರ ಪಕ್ಷದ ಅಭ್ಯರ್ಥಿ ಶಾರದ ಅಪ್ಪಾಜಿ ಸಮ್ಮುಖದಲ್ಲಿ ಮುಖಂಡರು ಸನ್ನಾವುಲ್ಲಾರವರನ್ನು ಸನ್ಮಾನಿಸಿ ಅಭಿನಂದಿಸುವ ಮೂಲಕ ಸ್ವಾಗತಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಸನ್ನಾವುಲ್ಲಾ, ಕಾಂಗ್ರೆಸ್ ಪಕ್ಷದ ಸಕ್ರಿಯ ಕಾರ್ಯಕರ್ತನಾಗಿ ಪಕ್ಷದ ವಿವಿಧ ಹುದ್ದೆಗಳನ್ನು ಜವಾಬ್ದಾರಿಯುತವಾಗಿ ನಿರ್ವಹಿಸಿದ್ದೇನೆ. ಪಕ್ಷ ಸಂಘಟನೆಗಾಗಿ ಸಾಕಷ್ಟು ಶ್ರಮಿಸಿದ್ದೇನೆ. ಆದರೂ ಸಹ ನನಗೆ ಇದುವರೆಗೂ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಲು ಅವಕಾಶ ನೀಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
    ಕಾಂಗ್ರೆಸ್ ಪಕ್ಷದಲ್ಲಿ ಸಾಕಷ್ಟು ಬದಲಾವಣೆಗಳಾಗಿದ್ದು, ಪ್ರಾಮಾಣಿಕವಾಗಿ ದುಡಿಯುವವರಿಗೆ ಬೆಲೆ ಇಲ್ಲದಂತಾಗಿದೆ. ಈ ಹಿನ್ನಲೆಯಲ್ಲಿ ಕಾಂಗ್ರೆಸ್ ಪಕ್ಷ ಬಿಟ್ಟು ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಗೊಂಡಿದ್ದೇನೆ. ಪಕ್ಷದ ರಾಜ್ಯಾಧ್ಯಕ್ಷರಾಗಿರುವ ಸಿ.ಎಂ ಇಬ್ರಾಹಿಂರವರು ನನ್ನನ್ನು ರಾಜ್ಯ ಸಂಘಟನಾ ಕಾರ್ಯದರ್ಶಿಯಾಗಿ ನೇಮಕಗೊಳಿಸಿ ಆದೇಶ ಹೊರಡಿಸಿದ್ದಾರೆ. ಜೆಡಿಎಸ್ ಪಕ್ಷದ ಸಂಘಟನೆಯಲ್ಲಿ ತೊಡಗಿಸಿಕೊಂಡು ಅಭ್ಯರ್ಥಿ ಗೆಲುವಿಗಾಗಿ ಶ್ರಮಿಸುತ್ತೇನೆ ಎಂದರು.

೧೭ ಮಂದಿಯಲ್ಲಿ ಒಬ್ಬರ ನಾಮಪತ್ರ ತಿರಸ್ಕೃತ : ರಾಜಕೀಯ ಪಕ್ಷಗಳಿಂದ ೭, ಪಕ್ಷೇತರರಾಗಿ ೯ ಮಂದಿ ಸ್ಪರ್ಧೆ


    ಭದ್ರಾವತಿ, ಏ. ೨೧ : ಈ ಬಾರಿ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಿ ಒಟ್ಟು ೧೭ ಮಂದಿ ೨೫ ನಾಮಪತ್ರ ಸಲ್ಲಿಸಿದ್ದು, ಈ ಪೈಕಿ ಶುಕ್ರವಾರ ನಾಮಪತ್ರ ಪರಿಶೀಲನೆ ನಡೆದು ೧೭ ಮಂದಿಯಲ್ಲಿ ಓರ್ವ ಪಕ್ಷೇತರ ಅಭ್ಯರ್ಥಿ ನಾಮಪತ್ರ ತಿರಸ್ಕೃತಗೊಂಡಿದೆ.
    ಚುನಾವಣಾಧಿಕಾರಿಯಾಗಿರುವ ಉಪವಿಭಾಗಾಧಿಕಾರಿ ರವಿಚಂದ್ರನಾಯಕ ಮತ್ತು ಸಹಾಯಕ ಚುನಾವಣಾಧಿಕಾರಿ ತಹಸೀಲ್ದಾರ್ ಸುರೇಶ್ ಆಚಾರ್ ನಾಮಪತ್ರ ಪರಿಶೀಲನೆ ನಡೆಸಿದ್ದು, ೧೬ ನಾಮಪತ್ರ ಸಿಂಧು ಆಗಿದ್ದು, ಪಕ್ಷೇತರ ಅಭ್ಯರ್ಥಿಯಾಗಿ ಮಾರ್ವಿನ್ ಅಕ್ಕಿದಾಸರಿ  ಸಲ್ಲಿಸಿದ್ದ ನಾಮಪತ್ರ ಅಸಿಂಧುಗೊಂಡಿದೆ.
    ಶಾಸಕ ಬಿ.ಕೆ ಸಂಗಮೇಶ್ವರ್(ಕಾಂಗ್ರೆಸ್), ಶಾರದ ಅಪ್ಪಾಜಿ(ಜೆಡಿಎಸ್), ಮಂಗೋಟೆ ರುದ್ರೇಶ್(ಬಿಜೆಪಿ), ಆನಂದ್(ಎಎಪಿ), ಸುಮಿತ್ರಾ ಬಾಯಿ (ಕೆಆರ್‌ಎಸ್), ಶಶಿಕುಮಾರ್ ಎಸ್. ಗೌಡ(ಜೆಡಿಯು), ಇ.ಪಿ ಬಸವರಾಜ(ಆರ್‌ಪಿಐಕೆ), ಬಿ.ಎನ್ ರಾಜು(ಪಕ್ಷೇತರ), ಅಹಮ್ಮದ್ ಅಲಿ(ಪಕ್ಷೇತರ), ನೀಲಂ(ಪಕ್ಷೇತರ), ಜಾನ್‌ಬೆನ್ನಿ(ಪಕ್ಷೇತರ), ಕೆ. ಮೋಹನ್(ಪಕ್ಷೇತರ), ಎಸ್.ಕೆ ಸುಧೀಂದ್ರ(ಪಕ್ಷೇತರ), ವೈ. ಶಶಿಕುಮಾರ್(ಪಕ್ಷೇತರ), ಡಿ. ಮೋಹನ್(ಪಕ್ಷೇತರ) ಮತ್ತು ರಾಜಶೇಖರ್(ಪಕ್ಷೇತರ) ನಾಮಪತ್ರ ಸಿಂಧುಗೊಂಡಿವೆ.
    ವಿವಿಧ ರಾಜಕೀಯ ಪಕ್ಷಗಳಿಂದ ೭ ಮಂದಿ ಹಾಗು ಪಕ್ಷೇತರರಾಗಿ ೯ ಮಂದಿ ಒಟ್ಟು ೧೬ ಮಂದಿ ಇದ್ದು, ನಾಮಪತ್ರ ಹಿಂಪಡೆಯಲು ಏ.೨೪ ಕೊನೆಯ ದಿನವಾಗಿದ್ದು, ನಂತರ ಅಂತಿಮ ಕಣದಲ್ಲಿ ಉಳಿದವರ ಮಾಹಿತಿ ಲಭ್ಯವಾಗಲಿದೆ.

Thursday, April 20, 2023

ವಿಧಾನಸಭಾ ಚುನಾವಣೆ : ಕೊನೆಯ ದಿನ ೪ ಪಕ್ಷೇತರರ ನಾಮಪತ್ರ ಸಲ್ಲಿಕೆ

ಭದ್ರಾವತಿ ನ್ಯೂಟೌನ್ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಸಾರ್ವಜನಿಕ ಕ್ಷೇಮಾಭಿವೃದ್ಧಿ ಸಂಘದ ಸಂಸ್ಥಾಪಕ ಅಧ್ಯಕ್ಷ, ಸಾಮಾಜಿಕ ಹೋರಾಟಗಾರ ಎಸ್.ಕೆ ಸುಧೀಂದ್ರ ವಿಧಾನಸಭಾ ಚುನಾವಣೆಗೆ ೨ನೇ ಬಾರಿಗೆ ಸ್ಪರ್ಧಿಸಿ ನಾಮಪತ್ರ ಸಲ್ಲಿಸಿದ್ದಾರೆ.
    ಭದ್ರಾವತಿ, ಏ. ೨೦: ವಿಧಾನಸಭಾ ಚುನಾವಣೆ ನಾಮಪತ್ರ ಸಲ್ಲಿಕೆಗೆ ಕಡೆಯ ದಿನವಾದ ಗುರುವಾರ ೪ ಮಂದಿ ಪಕ್ಷೇತರರು ನಾಮಪತ್ರ ಸಲ್ಲಿಸಿದ್ದಾರೆ.
    ನ್ಯೂಟೌನ್ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಸಾರ್ವಜನಿಕ ಕ್ಷೇಮಾಭಿವೃದ್ಧಿ ಸಂಘದ ಸಂಸ್ಥಾಪಕ ಅಧ್ಯಕ್ಷ, ಸಾಮಾಜಿಕ ಹೋರಾಟಗಾರ ಎಸ್.ಕೆ ಸುಧೀಂದ್ರ ೨ನೇ ಬಾರಿಗೆ ಸ್ಪರ್ಧಿಸಿ ನಾಮಪತ್ರ ಸಲ್ಲಿಸಿದ್ದಾರೆ. ಇದಕ್ಕೂ ಮೊದಲು ಜನ್ನಾಪುರ ಮಲ್ಲೇಶ್ವರ ದೇವಸ್ಥಾನದಿಂದ ಡೊಳ್ಳು ಕುಣಿತ, ಮಂಗಳವಾದ್ಯ, ನಾದಸ್ವರ ಸೇರಿದಂತೆ ಕಲಾತಂಡಗಳೊಂದಿಗೆ ಮೆರವಣಿಗೆ ಮೂಲಕ ಮಿನಿವಿಧಾನಸೌಧ ತಾಲೂಕು ಕಛೇರಿಗೆ ಆಗಮಿಸಲಾಯಿತು. ನಾಮಪತ್ರ ಸಲ್ಲಿಕೆ ಸಂದರ್ಭದಲ್ಲಿ ಪತ್ನಿ ರೇಷ್ಮಾ, ಬಿ. ಜಗದೀಶ್, ಸಂಜೀವರೆಡ್ಡಿ ಉಪಸ್ಥಿತರಿದ್ದರು.
    ಸುಧೀಂದ್ರ ಬಳಿ ೧.೫ ಲಕ್ಷ ರು. ನಗದು:
    ನಗರದ ನ್ಯೂಟೌನ್ ನಿವಾಸಿ, ೪೮ ವರ್ಷ ವಯಸ್ಸಿನ ಎಸ್.ಕೆ ಸುಧೀಂದ್ರರವರ ಬಳಿ ೧.೫ ಲಕ್ಷ ರು. ನಗದು, ಬ್ಯಾಂಕ್ ಖಾತೆಯಲ್ಲಿ ೧.೫ ಲಕ್ಷ ರು. ಇದೆ. ಉಳಿದಂತೆ ಆಸ್ತಿಗೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ಪ್ರಕರಣ ವಿಚಾರಣೆಯಲ್ಲಿರುವ ಹಿನ್ನಲೆಯಲ್ಲಿ ಆಸ್ತಿ ವಿವರ ಸಲ್ಲಿಕೆಯಾಗಿಲ್ಲ. ಸುಮಾರು ೪ ರಿಂದ ೫ ಲಕ್ಷ ರು. ಚಿನ್ನಾಭರಣ, ಮಾರುತಿ ಸುಜುಕಿ ಸ್ವಿಫ್ಟ್ ಕಾರು ಮತ್ತು ಒಂದು ದ್ವಿಚಕ್ರ ವಾಹನವಿದೆ. ಪ್ಯಾರಾ ಮೆಡಿಕಲ್ ವ್ಯಾಸಂಗ ಮಾಡಿದ್ದಾರೆ.


ಭದ್ರಾವತಿ ತಾಲೂಕಿನ ನಾಗತಿಬೆಳಗಲು ತಾಂಡ ನಿವಾಸಿ, ಕರುನಾಡು ಹಿತರಕ್ಷಣಾ ಸಮಿತಿ ರಾಜ್ಯಾಧ್ಯಕ್ಷ ಶಶಿಕುಮಾರ್ ವೈ. ಮೊದಲ ಬಾರಿಗೆ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಿ ನಾಮಪತ್ರ ಸಲ್ಲಿಸಿದ್ದಾರೆ.
    
    ತಾಲೂಕಿನ ನಾಗತಿಬೆಳಗಲು ತಾಂಡ ನಿವಾಸಿ, ಕರುನಾಡು ಹಿತರಕ್ಷಣಾ ಸಮಿತಿ ರಾಜ್ಯಾಧ್ಯಕ್ಷ ಶಶಿಕುಮಾರ್ ವೈ. ಮೊದಲ ಬಾರಿಗೆ ಚುನಾವಣೆಗೆ ಸ್ಪರ್ಧಿಸಿ ನಾಮಪತ್ರ ಸಲ್ಲಿಸಿದ್ದಾರೆ.
ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ತಂದೆ ಯೋಗೇಂದ್ರನಾಯ್ಕ, ಸಮಿತಿ ಪ್ರಮುಖರಾದ ಚೆನ್ನಾನಾಯ್ಕ, ನಂಜಾನಾಯ್ಕ ಮತ್ತು ರುಪ್ಲನಾಯ್ಕ ಉಪಸ್ಥಿತರಿದ್ದರು.
    ಶಶಿಕುಮಾರ್ ಬಳಿ ೧೦ ಸಾವಿರ ರು. ನಗದು :
    ಸಮಾಜ ಸೇವಕರು, ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ಮತ್ತು ಹೋರಾಟಗಾರರಾಗಿರುವ ಸುಮಾರು ೪೨ ವರ್ಷ ವಯಸ್ಸಿನ ಶಶಿಕುಮಾರ್‌ರವರ ಬಳಿ ೧೦ ಸಾವಿರ ರು. ನಗದು, ಬ್ಯಾಂಕ್ ಖಾತೆಯಲ್ಲಿ ೪೦ ಸಾವಿರ ರು. ಇದೆ. ಪ್ರಸ್ತುತ ಬಾಡಿಗೆ ಮನೆಯಲ್ಲಿದ್ದು, ಇವರ ಪತ್ನಿ ಹೆಸರಿನಲ್ಲಿ ನಿವೇಶನವಿದೆ. ಕಾರು ಮತ್ತು ಬೈಕ್ ಹೊಂದಿದ್ದು, ಇಬ್ಬರು ಮಕ್ಕಳಿದ್ದಾರೆ. ಎಸ್‌ಎಸ್‌ಎಲ್‌ಸಿ, ಜೆಓಸಿ ವ್ಯಾಸಂಗ ಮಾಡಿದ್ದಾರೆ.


ಭದ್ರಾವತಿ ಹಳೇನಗರದ ಎನ್‌ಎಸ್‌ಟಿ ರಸ್ತೆ (ಚಿನ್ನ-ಬೆಳ್ಳಿ ರಸ್ತೆ) ನಿವಾಸಿ ಎಸ್. ರಾಜಶೇಖರ್ ಮೊದಲ ಬಾರಿಗೆ ಪಕ್ಷೇತರ ಅಭ್ಯರ್ಥಿಯಾಗಿ ಚುನಾವಣೆಗೆ ಸ್ಪರ್ಧಿಸಿ ನಾಮಪತ್ರ ಸಲ್ಲಿಸಿದ್ದಾರೆ.
    ಹಳೇನಗರದ ಎನ್‌ಎಸ್‌ಟಿ ರಸ್ತೆ (ಚಿನ್ನ-ಬೆಳ್ಳಿ ರಸ್ತೆ) ನಿವಾಸಿ ಎಸ್. ರಾಜಶೇಖರ್ ಮೊದಲ ಬಾರಿಗೆ ಪಕ್ಷೇತರ ಅಭ್ಯರ್ಥಿಯಾಗಿ ಚುನಾವಣೆಗೆ ಸ್ಪರ್ಧಿಸಿ ನಾಮಪತ್ರ ಸಲ್ಲಿಸಿದ್ದಾರೆ. ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ಪ್ರಮುಖರಾದ ಬಿ.ವಿ ಚಂದನ್‌ರಾವ್, ಸುರೇಶ್, ಅರವಿಂದ್, ಅನಿಲ್ ಉಪಸ್ಥಿತರಿದ್ದರು.
    ರಾಜಶೇಖರ್ ಬಿ.ಕಾಂ ಪದವಿಧರ :
    ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ಕಾರ್ಯಕರ್ತನಾಗಿ, ಲಿಂಗಾಯತ ಸಮಾಜದ ಯುವ ಮುಖಂಡರಾಗಿ ಗುರುತಿಸಿಕೊಂಡಿರುವ ರಾಜಶೇಖರ್ ಬಿ.ಕಾಂ ಪದವಿಧರರಾಗಿದ್ದು, ಯಾವುದೇ ಆಸ್ತಿ ಹೊಂದಿರುವುದಿಲ್ಲ. ಇಬ್ಬರು ಮಕ್ಕಳಿದ್ದು, ಸ್ವಂತ ಮನೆ ಸಹ ಇರುವುದಿಲ್ಲ.


ಭದ್ರಾವತಿ ಜನ್ನಾಪುರ ರಾಜಪ್ಪ ಲೇ ಔಟ್ ನಿವಾಸಿ ಮೋಹನ್ ಮೊದಲ ಬಾರಿಗೆ ಪಕ್ಷೇತರ ಅಭ್ಯರ್ಥಿಯಾಗಿ ಚುನಾವಣೆಗೆ ಸ್ಪರ್ಧಿಸಿ ನಾಮಪತ್ರ ಸಲ್ಲಿಸಿದ್ದಾರೆ.
    ಜನ್ನಾಪುರ ರಾಜಪ್ಪ ಲೇ ಔಟ್ ನಿವಾಸಿ ಮೋಹನ್ ಮೊದಲ ಬಾರಿಗೆ ಪಕ್ಷೇತರ ಅಭ್ಯರ್ಥಿಯಾಗಿ ಚುನಾವಣೆಗೆ ಸ್ಪರ್ಧಿಸಿ ನಾಮಪತ್ರ ಸಲ್ಲಿಸಿದ್ದಾರೆ. ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ವೆಂಕಟೇಶ್‌ಮೂರ್ತಿ ಉಪಸ್ಥಿತರಿದ್ದರು.
    ಡಿಪ್ಲೋಮಾ ಎಂ.ಟೆಕ್ ಪದವಿಧರ :
    ಡಿಪ್ಲೋಮಾ ಎಂ.ಟೆಕ್ ಪದವಿಧರರಾಗಿರುವ ಸುಮಾರು ೪೩ ವರ್ಷ ವಯಸ್ಸಿನ ಮೋಹನ್ ಕೃಷಿಕರಾಗಿದ್ದು, ಇವರಿಗೆ ಓರ್ವ ಪುತ್ರ ಇದ್ದಾರೆ. ಇವರ ಬಳಿ ಒಂದು ದ್ವಿಚಕ್ರ ವಾಹನವಿದ್ದು, ಸುಮಾರು ೧೫೦ ಚಿನ್ನಾಭರಣ ಹೊಂದಿದ್ದಾರೆ. ೧ ಲಕ್ಷ ರು. ನಗದು ಇದ್ದು, ೫ ಸಾವಿರ ರು. ಬ್ಯಾಂಕ್ ಖಾತೆಯಲ್ಲಿದೆ.

ವಿಧಾನಸಭೆ ಚುನಾವಣೆ : ಭಾರತೀಯ ಮೂಲ ನಿವಾಸಿಗಳಾದ ದ್ರಾವಿಡರ ಅಳಿವು-ಉಳಿವಿನ ಹೋರಾಟದ ಚುನಾವಣೆ

ಸಂವಿಧಾನದ ಆಶಯದಂತೆ ಮುನ್ನಡೆಯುತ್ತಿರುವ ಕಾಂಗ್ರೆಸ್ ಪಕ್ಷ ಬೆಂಬಲಿಸಿ : ಡೇವಿಡ್ ಸಿಮೆಯೋನ್

ಭದ್ರಾವತಿಯಲ್ಲಿ ಗುರುವಾರ ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಉಪಾಧ್ಯಕ್ಷ, ಮಾಜಿ ಸಭಾಪತಿ ಡೇವಿಡ್ ಸಿಮೆಯೋನ್ ಮಾತನಾಡಿದರು.
    ಭದ್ರಾವತಿ, ಏ. ೨೦ : ಈ ಬಾರಿ ಚುನಾವಣೆಯನ್ನು ಇದೊಂದು ಐತಿಹಾಸಿಕ ಚುನಾವಣೆ ಅನ್ನುವುದರ ಬದಲು ಇದೊಂದು ಬಡವ-ಬಲ್ಲಿದರ ಅರ್ಥಾತ್ ಬಂಡವಾಳ ಶಾಹಿಗಳ-ಬಡವರ ಮಧ್ಯದ ಹೋರಾಟ. ಅಂದರೆ ಸುಮಾರು ೫೦೦ ವರ್ಷಗಳಿಂದ ತುಳಿತಕ್ಕೆ ಒಳಗಾಗಿದ್ದ ಭಾರತೀಯ ಮೂಲ ನಿವಾಸಿಗಳಾದ ದ್ರಾವಿಡರ ಅಳಿವು-ಉಳಿವಿನ ಹೋರಾಟದ ಚುನಾವಣೆ ಆಗಲಿದೆ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಉಪಾಧ್ಯಕ್ಷ, ಮಾಜಿ ಸಭಾಪತಿ ಡೇವಿಡ್ ಸಿಮೆಯೋನ್ ಹೇಳಿದರು.
    ಅವರು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಈ ಬಾರಿ ವಿಧಾನಸಭೆ ಚುನಾವಣೆ ರಾಜಕೀಯ ಪಕ್ಷಗಳ ರಾಜಕೀಯ ನೀತಿ ನಿರೂಪಣೆಗಳ ಪರೀಕ್ಷೆಯ ಚುನಾವಣೆಯಾಗಲಿದೆ. ೨೦೨೪ರ ಲೋಕಸಭಾ ಚುನಾವಣೆಗೆ ಇದೊಂದು ದಿಕ್ಸೂಚಿಯಾಗುವುದರಿಂದಾಗಿ ಇದಕ್ಕೆ ಎಲ್ಲಿಲ್ಲದ ಮಹತ್ವ ಎಂದರು.
    ಭಾರತೀಯ ಜನತಾ ಪಕ್ಷ(ಭಾಜಪ) ರಾಷ್ಟ್ರೀಯ ಸ್ವಯಂ ಸೇವಕದ ರಾಜಕೀಯ ಪಕ್ಷವಾಗಿದೆ. ಇದರ ನಿಲುವು, ನೀತಿ-ಸಿದ್ದಾಂತ ಬಂಡವಾಳ ಶಾಹಿಗಳ ಅನುಷ್ಠಾನವಾಗಿದೆ. ಈ ಹಿನ್ನಲೆಯಲ್ಲಿ ಕಳೆದ ೭-೮ ವರ್ಷಗಳಲ್ಲಿ ಸಾರ್ವಜನಿಕ ಉದ್ಯಮಗಳು, ರೈಲ್ವೆಗಳು, ವಿಮಾನ ನಿಲ್ದಾಣಗಳು ಕಾಲಕ್ರಮೇಣ ಖಾಸಗೀಕರಣವಾಗುತ್ತಿರುವುದು ಸರ್ವವಿಧಿತ ಎಂದು ಆರೋಪಿಸಿದರು
    ಭಾರತೀಯ ಜನತಾ ಪಕ್ಷದ ರಾಜಕೀಯ ನಿಲುವುಗಳು ಭಾರತೀಯ ಸಂವಿಧಾನದಲ್ಲಿ ನಿರೂಪಿಸಿರುವ ತುಳಿತಕ್ಕೆ ಒಳಗಾದವರ ಮೀಸಲಾತಿ, ಕಲ್ಯಾಣ ರಾಜ್ಯದ ಪರಿಕಲ್ಪನೆಗಳಿಗೆ, ವಾಕ್ ಸ್ವಾತಂತ್ರ್ಯಕ್ಕೆ ತದ್‌ವಿರುದ್ಧ ನಿಲುವು  ಹೊಂದಿದೆ ಎಂದು ದೂರಿದರು.
    ದೇಶಕ್ಕೆ ಸ್ವಾತಂತ್ರ್ಯ ಬಂದಾಗಿನಿಂದಲೂ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ರಾಜಕೀಯ ನಿಲುವು ಕಮ್ಯೂನಿಸ್ಟ್ ಪಕ್ಷಗಳಂತೆ  ಇದು ಎಡ ಪಂಥಿಯವೂ ಅಲ್ಲ ಹಾಗು ಬಂಡವಾಳಶಾಯಿಗಳಂತೆ ಬಲಪಂಥೀಯವೂ ಅಲ್ಲ. ಅಂದರೆ ಇವೆರಡರ ಮಧ್ಯದ ನಿಲುವು ಸ್ಪಷ್ಟವಾಗಿರುವುದರಿಂದಾಗಿ ಸಾರ್ವಜನಿಕ ಉದ್ಯಮಗಳ ಸ್ಥಾಪನೆಗಳಾದವು. ಕೃಷಿ ಕ್ಷೇತ್ರದಲ್ಲಿ ಉಳುವವನೇ ಒಡೆಯನೆಂಬ ನಿಲುವು ಹೀಗೆಯೇ ಹತ್ತಾರು ಯೋಜನೆಗಳು ಸಾರ್ವಜನಿಕರ ಹಿತದೃಷ್ಟಿಯಲ್ಲಿ ಸಂವಿಧಾನದ ಮೂಲ ಸ್ವರೂಪದಂತೆ ರಚನೆಯಾದವು. ಈ ಹಿನ್ನಲೆಯಲ್ಲಿ ಕಾಂಗ್ರೆಸ್ ಪಕ್ಷ ಬೆಂಬಲಿಸುವುದು ಅಗತ್ಯವಾಗಿದೆ ಎಂದರು.
    ಪತ್ರಿಕಾಗೋಷ್ಠಿಯಲ್ಲಿ ಉದ್ಯಮಿ ಬಿ.ಕೆ ಜಗನ್ನಾಥ್, ನಗರಸಭೆ ಮಾಜಿ ಸದಸ್ಯ ಮುಕುಂದಪ್ಪ, ಅಂತೋಣಿ ವಿಲ್ಸನ್ ಮತ್ತು ವಿಲ್ಸನ್ ಬಾಬು ಉಪಸ್ಥಿತರಿದ್ದರು.

ವಿಐಎಸ್‌ಎಲ್ ಕಾರ್ಖಾನೆ ಉಳಿಸಿ ಬೆಳೆಸಿ ಕಾರ್ಮಿಕರ ಹೋರಾಟಕ್ಕೆ ಕಾಶಿ ಶ್ರೀ ಬೆಂಬಲ

ಭದ್ರಾವತಿ ವಿಐಎಸ್‌ಎಲ್ ಕಾರ್ಖಾನೆ ಮುಚ್ಚುವ ಆದೇಶದ ವಿರುದ್ಧ ಕಾರ್ಖಾನೆ ಮುಂಭಾಗದಲ್ಲಿ ಗುತ್ತಿಗೆ ಕಾರ್ಮಿಕರು ಕಳೆದ ಸುಮಾರು ೩ ತಿಂಗಳಿನಿಂದ ನಡೆಸುತ್ತಿರುವ ಹೋರಾಟಕ್ಕೆ ಶ್ರೀಮದ್ ಕಾಶಿ ಜ್ಞಾನ ಸಿಂಹಾಸನಾಧೀಶ್ವರ ಶ್ರೀ ಡಾ.ಮಲ್ಲಿಕಾರ್ಜುನ ವಿಶ್ವಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಬೆಂಬಲ ಸೂಚಿಸಿ ಮಾತನಾಡಿದರು.
    ಭದ್ರಾವತಿ, ಏ. ೨೦ : ದೇಶದ ಸ್ವಾತಂತ್ರ್ಯ ಪೂರ್ವದಲ್ಲಿ ಆರಂಭಗೊಂಡು ಶತಮಾನೋತ್ಸವ ಸಂಭ್ರಮಾಚರಣೆಯಲ್ಲಿರುವ ಕೇಂದ್ರ ಉಕ್ಕು ಪ್ರಾಧಿಕಾರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಗೆ ಅಗತ್ಯವಿರುವ ಬಂಡವಾಳ ಹೂಡಿ ಆಧುನೀಕರಣಗೊಳಿಸುವಂತೆ ಶ್ರೀಮದ್ ಕಾಶಿ ಜ್ಞಾನ ಸಿಂಹಾಸನಾಧೀಶ್ವರ ಶ್ರೀ ಡಾ.ಮಲ್ಲಿಕಾರ್ಜುನ ವಿಶ್ವಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಆಗ್ರಹಿಸಿದರು.
    ಕಾರ್ಖಾನೆ ಮುಚ್ಚುವ ಆದೇಶದ ವಿರುದ್ಧ ಕಾರ್ಖಾನೆ ಮುಂಭಾಗದಲ್ಲಿ ಗುತ್ತಿಗೆ ಕಾರ್ಮಿಕರು ಕಳೆದ ಸುಮಾರು ೩ ತಿಂಗಳಿನಿಂದ ನಡೆಸುತ್ತಿರುವ ಹೋರಾಟಕ್ಕೆ ಬೆಂಬಲ ಸೂಚಿಸಿ ಶ್ರೀಗಳು ಮಾತನಾಡಿದರು.
    ಮನೆಯಲ್ಲಿರುವ ಹಸುವಿಗೆ ಉತ್ತಮವಾದ ಮೇವು, ಹಿಂಡಿ, ಹುಲ್ಲು ಇತ್ಯಾದಿಗಳನ್ನು ನೀಡಿದಾಗ ಅದು ಸದೃಢವಾಗಿ ಬೆಳವಣಿಗೆ ಹೊಂದುವ ಮೂಲಕ ಹಾಲಿನ ಪ್ರಮಾಣ ಹೆಚ್ಚಾಗುತ್ತದೆ. ಅಲ್ಲದೆ ಆರ್ಥಿಕ ಸದೃಢತೆ ಕಾಯ್ದುಕೊಳ್ಳಲು ಸಾಧ್ಯವಾಗುತ್ತದೆ. ಇದೆ ರೀತಿ ಈ ಕಾರ್ಖಾನೆಗೆ ಅಗತ್ಯವಿರುವ ಬಂಡವಾಳ ಹೂಡಿ ಆಧುನಿಕ ತಂತ್ರಜ್ಞಾನ ಅಳವಡಿಸಿದರೆ ಅಭಿವೃದ್ಧಿ ಹೊಂದುವ ಮೂಲಕ ಕಾರ್ಮಿಕರಿಗೆ ಉದ್ಯೋಗ ಲಭಿಸುವ ಜೊತೆಗೆ ಜಿಲ್ಲೆಯಲ್ಲಿನ ಆರ್ಥಿಕ ಪರಿಸ್ಥಿತಿಯಲ್ಲಿ ಸುಧಾರಣೆ ಕಾಯ್ದುಕೊಳ್ಳಬಹುದಾಗಿದೆ ಎಂದರು.
    ಕಾರ್ಖಾನೆಯ ಪ್ರಸ್ತುತ ಪರಿಸ್ಥಿತಿ ಕುರಿತು ಪ್ರಧಾನ ಮಂತ್ರಿ ಸೇರಿದಂತೆ ಸಂಬಂಧಿಸಿದ ಕೇಂದ್ರ ಮಂತ್ರಿಗಳು, ಅಧಿಕಾರಿಗಳು ಸೇರಿದಂತೆ ಇತರರ ಜೊತೆ ಮಾತುಕತೆ ನಡೆಸಿ ಗಮನಹರಿಸಲು ಪ್ರಯತ್ನಿಸುವುದಾಗಿ ಭರವಸೆ ನೀಡಿದರು.
    ಬಿಳಿಕಿ ಹಿರೇಮಠದ ಶ್ರೀ ರಾಚೋಟೇಶ್ವರ ಶಿವಾಚಾರ್ಯ ಸ್ವಾಮೀಜಿ, ವೀರಶೈವ ಸಮಾಜದ ಮುಖಂಡರುಗಳಾದ ಸಿದ್ದಲಿಂಗಯ್ಯ, ಸುರೇಶಯ್ಯ, ಎಸ್.ಆರ್ ಮಂಜುನಾಥ್, ಎನ್.ಸಿ ಲೋಕೇಶ್, ವಾಗೀಶ್, ಎಸ್. ನರಸಿಂಹಾಚಾರ್, ಗುತ್ತಿಗೆ ಕಾರ್ಮಿಕರ ಸಂಘದ ಪದಾಧಿಕಾರಿಗಳಾದ ರಾಕೇಶ್, ಸುರೇಶ್, ವಿನೋದ, ಅಮೃತ್, ದಾಸ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

Wednesday, April 19, 2023

ಜೆಡಿಯು ಅಭ್ಯರ್ಥಿಯಾಗಿ ೨ನೇ ಬಾರಿಗೆ ಶಶಿಕುಮಾರ್ ಎಸ್. ಗೌಡ ನಾಮಪತ್ರ ಸಲ್ಲಿಕೆ

ಭದ್ರಾವತಿಯಲ್ಲಿ ವಿಧಾನಸಭಾ ಚುನಾವಣೆಗೆ ಸಂಯುಕ್ತ ಕರ್ನಾಟಕ ಜನತಾದಳ(ಜೆಡಿಯು) ಅಭ್ಯರ್ಥಿಯಾಗಿ ಸ್ಪರ್ಧಿಸಿ ಪಕ್ಷದ ರಾಜ್ಯ ಕಾರ್ಯದರ್ಶಿ ಶಶಿಕುಮಾರ್ ಎಸ್ ಗೌಡ ನಾಮಪತ್ರ ಸಲ್ಲಿಸಿದರು. 
    ಭದ್ರಾವತಿ, ಏ. ೧೯ : ವಿಧಾನಸಭಾ ಚುನಾವಣೆಗೆ ಸಂಯುಕ್ತ ಕರ್ನಾಟಕ ಜನತಾದಳ(ಜೆಡಿಯು) ಅಭ್ಯರ್ಥಿಯಾಗಿ ಸ್ಪರ್ಧಿಸಿ ಪಕ್ಷದ ರಾಜ್ಯ ಕಾರ್ಯದರ್ಶಿ ಶಶಿಕುಮಾರ್ ಎಸ್ ಗೌಡ ನಾಮಪತ್ರ ಸಲ್ಲಿಸಿದರು.
    ಶಶಿಕುಮಾರ್ ಎಸ್ ಗೌಡ್‌ರವರು ಬೆಳಿಗ್ಗೆ ಮಿನಿವಿಧಾನಸೌಧ ತಾಲೂಕು ಕಛೇರಿಗೆ ತೆರಳಿ ಚುನಾವಣಾಧಿಕಾರಿ ರವಿಚಂದ್ರನಾಯಕರವರಿಗೆ ನಾಮಪತ್ರ ಸಲ್ಲಿಸಿದರು.
    ಜೆಡಿಯು ಯುವ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ಬಾಬು ದೀಪಕ್ ಕುಮಾರ್, ತಾಲೂಕು ಘಟಕದ ಅಧ್ಯಕ್ಷ ರಘು ಸಂಕ್ಲಿಪುರ, ದಿವ್ಯಶ್ರೀ ಶಶಿಕುಮಾರ್ ಎಸ್ ಗೌಡ ಉಪಸ್ಥಿತರಿದ್ದರು.
    ಕೊಳಚೆ ಪ್ರದೇಶದ ನಿವಾಸಿ ಶಶಿಕುಮಾರ್ :  
    ಸುಮಾರು ೪೧ ವರ್ಷ ವಯಸ್ಸಿನ ಜನ್ನಾಪುರ ಹಾಲಪ್ಪ ಶೆಡ್ ಕೊಳಚೆ ಪ್ರದೇಶದ ನಿವಾಸಿ ಶಶಿಕುಮಾರ್ ಎಸ್. ಗೌಡ ೨ನೇ ಬಾರಿಗೆ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಿ ನಾಮಪತ್ರ ಸಲ್ಲಿಸಿದ್ದಾರೆ. ಹಲವಾರು ವರ್ಷಗಳಿಂದ ಕೊಳಚೆ ಪ್ರದೇಶದಲ್ಲಿ ವಾಸವಿದ್ದರೂ ಇನ್ನೂ ಹಕ್ಕುಪತ್ರ ನೀಡಿಲ್ಲ. ಈ ಹಿನ್ನಲೆಯಲ್ಲಿ ಇವರ ಹೆಸರಿನಲ್ಲಿ ಸ್ವಂತ ಮನೆ ಇಲ್ಲ. ಇಬ್ಬರು ಮಕ್ಕಳಿದ್ದು, ಇವರು ೫೦ ಸಾವಿರ ರು. ನಗದು ಹೊಂದಿದ್ದಾರೆ. ಬ್ಯಾಂಕ್ ಖಾತೆಯಲ್ಲಿ ೧ ಸಾವಿರು ರು. ಹಣವಿದ್ದು, ಉಳಿದಂತೆ ಯಾವುದೇ ನಿವೇಶನ, ಜಮೀನು ಹೊಂದಿಲ್ಲ. ಇವರ ಬಳಿ ಸುಮಾರು ೨೫ ಗ್ರಾಂ ಚಿನ್ನಾಭರಣವಿದೆ. ಎಸ್‌ಎಸ್‌ಎಲ್‌ಸಿ ವ್ಯಾಸಂಗ ಮಾಡಿದ್ದಾರೆ.