Tuesday, April 25, 2023

ಬಿಜೆಪಿ ೭ ವಿಧಾನಸಭಾ ಕ್ಷೇತ್ರಗಳಲ್ಲೂ ಗೆಲುವು : ಆರ್.ಕೆ ಸಿದ್ರಾಮಣ್ಣ

ಭದ್ರಾವತಿಯಲ್ಲಿ ಮಂಗಳವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ವಿಧಾನ ಪರಿಷತ್ ಮಾಜಿ ಸದಸ್ಯ ಆರ್.ಕೆ ಸಿದ್ರಾಮಣ್ಣ ಮಾತನಾಡಿದರು.
    ಭದ್ರಾವತಿ, ಏ. ೨೫: ಈ ಬಾರಿ ಚುನಾವಣೆಯಲ್ಲಿ ಶಿವಮೊಗ್ಗ ಜಿಲ್ಲೆಯಲ್ಲಿರುವ ೭ ವಿಧಾನಸಭಾ ಕ್ಷೇತ್ರಗಳಲ್ಲೂ ಬಿಜೆಪಿ ಪಕ್ಷ ಗೆಲುವು ಸಾಧಿಸುವ ವಿಶ್ವಾಸವಿದೆ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಆರ್.ಕೆ ಸಿದ್ರಾಮಣ್ಣ ಹೇಳಿದರು.
    ಅವರು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಬಿಜೆಪಿ ಪಕ್ಷ ಕೇಂದ್ರ ಹಾಗು ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ನಂತರ ಸಾಕಷ್ಟು ಬದಲಾವಣೆಗಳಾಗಿವೆ. ಮತದಾರರು ಬಿಜೆಪಿ ಪಕ್ಷದ ಪರವಾಗಿದ್ದಾರೆ. ರಾಜ್ಯ ಹಾಗು ಜಿಲ್ಲೆಯಲ್ಲಿ ಕೈಗೊಂಡಿರುವ ಅಭಿವೃದ್ಧಿ ಕಾರ್ಯಗಳು, ಕೇಂದ್ರ ಸರ್ಕಾರದ ಜನಪರ ಯೋಜನೆಗಳಿಂದಾಗಿ ಅದರಲ್ಲೂ ವಿಶೇಷವಾಗಿ ಜಿಲ್ಲೆಯಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪನವರ ಅವಧಿಯಲ್ಲಿ ಕೈಗೊಂಡಿರುವ ಅಭಿವೃದ್ಧಿ ಕಾರ್ಯಗಳು ಈ ಬಾರಿ ಜಿಲ್ಲೆಯಲ್ಲಿರುವ ೭ ವಿಧಾನಸಭಾ ಕ್ಷೇತ್ರಗಳಲ್ಲೂ ಅಭ್ಯರ್ಥಿಗಳು ಗೆಲುವು ಸಾಧಿಸುತ್ತಾರೆಂಬ ಭರವಸೆ ಮೂಡಿಸಿವೆ ಎಂದರು.
    ಈ ಬಾರಿ ಭದ್ರಾವತಿ ವಿಧಾನಸಭಾ ಕ್ಷೇತ್ರದಲ್ಲೂ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಬೇಕೆಂಬ ಗುರಿ ಹೊಂದಲಾಗಿದೆ. ಮಂಗೋಟೆ ರುದ್ರೇಶ್‌ರವರನ್ನು ಅಭ್ಯರ್ಥಿಯನ್ನಾಗಿಸಲಾಗಿದೆ. ಇವರ ಗೆಲುವಿಗೆ ಈಗಾಗಲೇ ಪಕ್ಷದ ಮುಖಂಡರು, ಕಾರ್ಯಕರ್ತರು ಒಗ್ಗಟ್ಟಿನಿಂದ ಶ್ರಮಿಸುತ್ತಿದ್ದಾರೆ. ದೇಶದ ವಿವಿಧ ರಾಜ್ಯಗಳಿಂದ ಪಕ್ಷದ ಪ್ರಮುಖರು ಪ್ರಚಾರ ಕಾರ್ಯದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಪ್ರಚಾರ ಕಾರ್ಯ ಮತ್ತಷ್ಟು ತೀವ್ರಗೊಳ್ಳಲಿದ್ದು, ಈ ಬಾರಿ ಚುನಾವಣೆಯಲ್ಲಿ ಮಂಗೋಟೆ ರುದ್ರೇಶ್‌ರವರು ಗೆಲುವು ಸಾಧಿಸಿದ್ದಲ್ಲಿ ಕ್ಷೇತ್ರದ ಚಿತ್ರಣ ಸಂಪೂರ್ಣವಾಗಿ ಬದಲಾಗುವ ಭರವಸೆ ಹೊಂದಿದ್ದೇನೆ. ಮತದಾರರು ಹೆಚ್ಚಿನ ಮತಗಳನ್ನು ನೀಡಿ ಗೆಲುವಿಗೆ ಸಹಕರಿಸಬೇಕೆಂದು ಮನವಿ ಮಾಡಿದರು.
    ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಪಕ್ಷದ ಮಂಡಲ ಅಧ್ಯಕ್ಷ ಜಿ. ಧರ್ಮಪ್ರಸಾದ್, ಕಾರ್ಯದರ್ಶಿಗಳಾದ ಚನ್ನೇಶ್, ರಂಗಸ್ವಾಮಿ, ಚುನಾವಣಾ ಪ್ರಭಾರಿ ಅಶೋಕ್‌ಮೂರ್ತಿ, ರಾಜ್ಯ ಕಾರ್ಯಕಾರಿಣಿ ಸದಸ್ಯೆ ಆರ್.ಎಸ್ ಶೋಭಾ, ಕೂಡ್ಲಿಗೆರೆ ಹಾಲೇಶ್, ಚುನಾವಣಾ ಸಂಚಾಲಕರಾದ ಎಂ. ಮಂಜುನಾಥ್, ಎಂ.ಎಸ್ ಸುರೇಶಪ್ಪ, ಗೋಕುಲ್ ಕೃಷ್ಣ, ಧನುಷ್‌ಬೋಸ್ಲೆ, ಅವಿನಾಶ್, ಕವಿತಾರಾವ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Monday, April 24, 2023

ವಿಧಾನಸಭಾ ಚುನಾವಣೆ : ಅಂತಿಮ ಕಣದಲ್ಲಿ ೧೪ ಮಂದಿ

ಭದ್ರಾವತಿ ವಿಧಾನಸಭಾ ಕ್ಷೇತ್ರದ ೨೦೨೩ರ ಚುನಾವಣೆಯಲ್ಲಿ ಅಂತಿಮ ಕಣದಲ್ಲಿರುವ ಅಭ್ಯರ್ಥಿಗಳು
    ಭದ್ರಾವತಿ, ಏ. ೨೧ : ಈ ಬಾರಿ ವಿಧಾನಸಭಾ ಚುನಾವಣೆ ಅಂತಿಮ ಕಣದಲ್ಲಿ ಒಟ್ಟು ೧೪ ಮಂದಿ ಉಳಿದುಕೊಂಡಿದ್ದು, ನಾಮಪತ್ರ ಹಿಂಪಡೆಯಲು ಕೊನೆಯ ದಿನವಾದ ಸೋಮವಾರ ಇಬ್ಬರು ಪಕ್ಷೇತರ ಅಭ್ಯರ್ಥಿಗಳು ನಾಮಪತ್ರ ಹಿಂಪಡೆದಿದ್ದಾರೆ.
    ಚುನಾವಣೆಗೆ ಸ್ಪರ್ಧಿಸಿ ಒಟ್ಟು ೧೭ ಮಂದಿ ೨೫ ನಾಮಪತ್ರ ಸಲ್ಲಿಸಿದ್ದು, ಈ ಪೈಕಿ ಶುಕ್ರವಾರ ನಾಮಪತ್ರ ಪರಿಶೀಲನೆ ನಡೆದು ೧೭ ಮಂದಿಯಲ್ಲಿ ಓರ್ವ ಪಕ್ಷೇತರ ಅಭ್ಯರ್ಥಿ ನಾಮಪತ್ರ ತಿರಸ್ಕೃತಗೊಂಡಿತ್ತು. ೧೬ ನಾಮಪತ್ರಗಳ ಪೈಕಿ ಪಕ್ಷೇತರ ಅಭ್ಯರ್ಥಿಗಳಾದ ಕೆ. ಮೋಹನ್ ಮತ್ತು ನೀಲಂ ತಮ್ಮ ನಾಮಪತ್ರ ಹಿಂಪಡೆದುಕೊಂಡಿದ್ದಾರೆ.
     ಶಾಸಕ ಬಿ.ಕೆ ಸಂಗಮೇಶ್ವರ್(ಕಾಂಗ್ರೆಸ್), ಶಾರದ ಅಪ್ಪಾಜಿ(ಜೆಡಿಎಸ್), ಮಂಗೋಟೆ ರುದ್ರೇಶ್(ಬಿಜೆಪಿ), ಆನಂದ್(ಎಎಪಿ), ಸುಮಿತ್ರಾ ಬಾಯಿ (ಕೆಆರ್‌ಎಸ್), ಶಶಿಕುಮಾರ್ ಎಸ್. ಗೌಡ(ಜೆಡಿಯು), ಇ.ಪಿ ಬಸವರಾಜ(ಆರ್‌ಪಿಐಕೆ), ಬಿ.ಎನ್ ರಾಜು(ಪಕ್ಷೇತರ), ಅಹಮದ್ ಅಲಿ(ಪಕ್ಷೇತರ), ಜಾನ್‌ಬೆನ್ನಿ(ಪಕ್ಷೇತರ), ಎಸ್.ಕೆ ಸುಧೀಂದ್ರ(ಪಕ್ಷೇತರ), ವೈ. ಶಶಿಕುಮಾರ್(ಪಕ್ಷೇತರ), ಡಿ. ಮೋಹನ್(ಪಕ್ಷೇತರ) ಮತ್ತು ರಾಜಶೇಖರ್(ಪಕ್ಷೇತರ) ಅಂತಿಮ ಕಣದಲ್ಲಿ ಉಳಿದುಕೊಂಡಿರುವ ಅಭ್ಯರ್ಥಿಗಳಾಗಿದ್ದಾರೆ.
    ವಿವಿಧ ರಾಜಕೀಯ ಪಕ್ಷಗಳಿಂದ ೭ ಮಂದಿ ಹಾಗು ಪಕ್ಷೇತರರಾಗಿ ೭ ಮಂದಿ ಒಟ್ಟು ೧೪ ಮಂದಿ ಇದ್ದು, ಈ ಬಾರಿ ರಾಜಕೀಯ ಪಕ್ಷಗಳ ಅಭ್ಯರ್ಥಿಗಳು ಮತ್ತು ಪಕ್ಷೇತರರು ಸಮಾನವಾಗಿರುವುದು ವಿಶೇಷತೆಯಾಗಿದೆ.
    ಕಳೆದ ಚುನಾವಣೆ ೨೦೧೮ರಲ್ಲೂ ೧೪ ಮಂದಿ ಕಣದಲ್ಲಿದ್ದರು. ೨೦೧೩ರಲ್ಲಿ ಅತಿಹೆಚ್ಚು ೧೭ ಮಂದಿ ಹಾಗು ೨೦೦೮ರಲ್ಲಿ ಕೇವಲ ೭ ಮಂದಿ ಕಣದಲ್ಲಿದ್ದರು.

ಕ್ಷೇತ್ರದ ಅಭಿವೃದ್ಧಿ ಕಾರ್ಯಗಳು, ಪಕ್ಷದ ಜನಪರ ಯೋಜನೆಗಳು ಸಂಗಮೇಶ್ವರ್ ಗೆಲುವಿಗೆ ಸಹಕಾರಿ

ಪತ್ರಿಕಾಗೋಷ್ಠಿಯಲ್ಲಿ 'ಭದ್ರಾವತಿ ಕ್ಷೇತ್ರದಲ್ಲಿ ಶಾಸಕರ ಅಭಿವೃದ್ಧಿ ಕೆಲಸಗಳು' ಪ್ರಗತಿಯತ್ತ ಭದ್ರಾವತಿ ಬಿಡುಗಡೆ

ಭದ್ರಾವತಿಯಲ್ಲಿ ಸೋಮವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ 'ಭದ್ರಾವತಿ ಕ್ಷೇತ್ರದಲ್ಲಿ ಶಾಸಕರ ಅಭಿವೃದ್ಧಿ ಕೆಲಸಗಳು' ಪ್ರಗತಿಯತ್ತ ಭದ್ರಾವತಿ ಕಾಂಗ್ರೆಸ್ ಪಕ್ಷದ ಮುಖಂಡರು ಬಿಡುಗಡೆಗೊಳಿಸಿದರು.
    ಭದ್ರಾವತಿ, ಏ. ೨೪ : ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಶಾಸಕ ಬಿ.ಕೆ ಸಂಗಮೇಶ್ವರ್‌ರವರು ತಮ್ಮ ಅವಧಿಯಲ್ಲಿ ಕೋಟ್ಯಾಂತರ ರು. ವೆಚ್ಚದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದ್ದು, ಅಲ್ಲದೆ ಕಾಂಗ್ರೆಸ್ ಪಕ್ಷದ ಜನಪರ ಯೋಜನೆಗಳು ಅವರ ಗೆಲುವಿಗೆ ಸಹಕಾರಿಯಾಗಿವೆ ಎಂದು ಬ್ಲಾಕ್ ಕಾಂಗ್ರೆಸ್ ಸಮಿತಿ ಮುಖಂಡರು ಹೇಳಿದರು.
    ಅವರು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕ್ಷೇತ್ರದ ಎಲ್ಲಾ ಭಾಗಗಳಲ್ಲೂ ಶಾಸಕರು ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು  ಕೈಗೊಂಡಿದ್ದಾರೆ. ಅವರ ಅವಧಿಯಲ್ಲಿ ಕೈಗೊಂಡಿರುವ ಅಭಿವೃದ್ಧಿಗಳನ್ನು ಜನಸಾಮಾನ್ಯರಿಗೆ ತಿಳಿಸುವ ಕಾರ್ಯ ಕೈಗೊಳ್ಳಲಾಗುತ್ತಿದೆ. ಸುಮಾರು ೪೦ ಪುಟಗಳ 'ಭದ್ರಾವತಿ ಕ್ಷೇತ್ರದಲ್ಲಿ ಶಾಸಕರ ಅಭಿವೃದ್ಧಿ ಕೆಲಸಗಳು' ಪ್ರಗತಿಯತ್ತ ಭದ್ರಾವತಿ ಚುನಾವಣಾ ಆಯೋಗದ ಅನುಮತಿ ಪಡೆದು ಮುದ್ರಣಗೊಳಿಸಲಾಗಿದ್ದು, ಇದನ್ನು ಇದೀಗ ಬಿಡುಗಡೆಗೊಳಿಸಲಾಗುತ್ತಿದೆ ಎಂದರು.
    ಕಾಂಗ್ರೆಸ್ ಜನಪರ ಪಕ್ಷವಾಗಿದ್ದು, ಈಗಾಗಲೇ ಹೊಸ ಯೋಜನೆಗಳನ್ನು ಘೋಷಿಸಿ ಪ್ರತಿಯೊಬ್ಬರ ಮನೆ ಬಾಗಿಲಿಗೆ ಗ್ಯಾರಂಟಿ ಕಾರ್ಡ್ ನೀಡುವ ಮೂಲಕ ಭರವಸೆ ಮೂಡಿಸಿದೆ. ಪಕ್ಷ ಅಧಿಕಾರಕ್ಕೆ ಬಂದಲ್ಲಿ ಈ ಯೋಜನೆಗಳು ಜಾರಿಗೆ ಬರಲಿವೆ. ಬಿಜೆಪಿ ಪಕ್ಷದ ಸುಳ್ಳು ಭರವಸೆಗಳಿಗೆ ಮತದಾರರು ಕಿವಿಗೊಡಬಾರದು. ರಾಜ್ಯದಲ್ಲಿ ಈ ಬಾರಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲಿದೆ ಎಂದರು.
    ಕ್ಷೇತ್ರದ ಮತದಾರರು ಶಾಸಕರ ಪರವಾಗಿದ್ದು, ಈ ಬಾರಿ ಹೆಚ್ಚಿನ ಅಂತರದಿಂದ ಗೆಲುವು ಸಾಧಿಸುವ ವಿಶ್ವಾಸವಿದೆ. ಪಕ್ಷದ ಮುಖಂಡರು, ಕಾರ್ಯಕರ್ತರು ಅವರ ಗೆಲುವಿಗಾಗಿ ಒಗ್ಗಟ್ಟಿನಿಂದಾಗಿ ಶ್ರಮಿಸುತ್ತಿದ್ದಾರೆ ಎಂದರು.
    ಪತ್ರಿಕಾಗೋಷ್ಠಿಯಲ್ಲಿ ಬ್ಲಾಕ್ ಕಾಂಗ್ರೆಸ್ ಸಮಿತಿ ನಗರ ಘಟಕದ ಅಧ್ಯಕ್ಷ ಟಿ. ಚಂದ್ರೇಗೌಡ, ಗ್ರಾಮಾಂತರ ಘಟಕದ ಅಧ್ಯಕ್ಷ ಎಚ್.ಎಲ್ ಷಡಾಕ್ಷರಿ, ಯುವ ಘಟಕದ ಅಧ್ಯಕ್ಷ ಅಫ್ತಾಬ್ ಅಹಮದ್, ಮಹಿಳಾ ಘಟಕದ ಅಧ್ಯಕ್ಷೆ ಹೇಮಾವತಿ, ಪ್ರಮುಖರಾದ ಬಿ.ಕೆ ಮೋಹನ್, ಅನುಸುಧ ಮೋಹನ್ ಪಳನಿ, ಸರ್ವಮಂಗಳ ಬೈರಪ್ಪ, ಬಲ್ಕೀಶ್‌ಬಾನು, ಬಿ.ಟಿ ನಾಗರಾಜ್, ಲಕ್ಷ್ಮೀದೇವಿ, ಲತಾ ಚಂದ್ರಶೇಖರ್, ಅನುಸೂಯ, ಅಂತೋಣಿ ವಿಲ್ಸನ್, ಕಾಂತರಾಜ್, ದಿಲ್‌ದಾರ್, ಪೀರ್‌ಷರೀಫ್, ಅಬ್ದುಲ್ ಖದೀರ್, ಶಾಂತರಾಜ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Sunday, April 23, 2023

ಕರಪತ್ರ ಮುದ್ರಣ ಆರೋಪ : ಶಾರದ ಅಪ್ಪಾಜಿ ವಿರುದ್ಧ ದೂರು ದಾಖಲು

ಜೆಡಿಎಸ್ ಅಭ್ಯರ್ಥಿ ಶಾರದ ಅಪ್ಪಾಜಿ
    ಭದ್ರಾವತಿ, ಏ. ೨೩ : ಚುನಾವಣಾಧಿಕಾರಿಗಳ ಅನುಮತಿ ಪಡೆಯದೆ ಕರಪತ್ರಗಳನ್ನು ಮುದ್ರಿಸಿ ನೀತಿ ಸಂಹಿತೆ ಉಲ್ಲಂಘಿಸಿದ್ದಾರೆಂದು ಆರೋಪಿಸಿ
    ಜಾತ್ಯತೀತ ಜನತಾದಳ ಅಭ್ಯರ್ಥಿ ಶಾರದಾ ಅಪ್ಪಾಜಿ ಹಾಗು ಶಿವಮೊಗ್ಗ ಕೆ.ಆರ್ ಪುರಂ ಸ್ಟಾರ್ ಪ್ರಿಂಟಿಂಗ್ ಪ್ರೆಸ್ ಮಾಲೀಕ ಅಬ್ದುಲ್ ಸಲಾಂ ವಿರುದ್ಧ ದೂರು ನೀಡಿರುವುದು ತಿಳಿದು ಬಂದಿದೆ.
ಶಾರದಾ ಅಪ್ಪಾಜಿಯವರಿಗೆ ಸಂಬಂಧಿಸಿದ ಕರಪತ್ರಗಳು ಕನ್ನಡ ಮತ್ತು ಉರ್ದು ಭಾಷೆಯಲ್ಲಿ ಪ್ರಿಂಟ್ ಮಾಡಲಾಗುತ್ತಿದ್ದು, ಈ ವೇಳೆ ಚುನಾವಣಾ ಅಧಿಕಾರಿಗಳು ಮತ್ತು ಪೊಲೀಸರು ದಾಳಿ ನಡೆಸಿ ಪರಿಶೀಲಿಸಿದಾಗ ಕರಪತ್ರಗಳು ಲಭ್ಯವಾಗಿದೆ ಎನ್ನಲಾಗಿದೆ.
    ಕನ್ನಡ ಭಾಷೆಯಲ್ಲಿ ಹಾಗು ಉರ್ದು ಭಾಷೆಯಲ್ಲಿ ತಲಾ ೫ ಸಾವಿರ ಮುದ್ರಣ ಎಂದು ಕರಪತ್ರದಲ್ಲಿ ಕಂಡು ಬಂದಿದೆ. ಈ ಸಂಬಂಧ ಶಾರದ ಅಪ್ಪಾಜಿ ಹಾಗು ಅಬ್ದುಲ್ ಸಲಾಂ ವಿರುದ್ಧ ದೊಡ್ಡಪೇಟೆ ಠಾಣೆಯಲ್ಲಿ ಚುನಾವಣಾಧಿಕಾರಿಗಳು ದೂರು ದಾಖಲಿಸಿದ್ದಾರೆ.

ಶಾಸಕ ಸಂಗಮೇಶ್ವರ್ ಗೆಲುವಿಗೆ ತಮಿಳುನಾಡಿನ ಕ್ರೈಸ್ತ ದೇವಾಲಯದಲ್ಲಿ ಪ್ರಾರ್ಥನೆ

ತಮಿಳುನಾಡಿನ ವೆಳ್ಳಾಂಗಣಿ ಮಾತೆ ದೇವಾಲಯದಲ್ಲಿ ಈ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಭದ್ರಾವತಿ ಶಾಸಕ ಬಿ.ಕೆ ಸಂಗಮೇಶ್ವರ್ ಗೆಲುವು ಸಾಧಿಸುವಂತೆ ಪ್ರಾರ್ಥಿಸಲಾಯಿತು. 
    ಭದ್ರಾವತಿ, ಏ. ೨೩ : ತಮಿಳುನಾಡಿನ ವೆಳ್ಳಾಂಗಣಿ ಮಾತೆ ದೇವಾಲಯದಲ್ಲಿ ಈ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಶಾಸಕ ಬಿ.ಕೆ ಸಂಗಮೇಶ್ವರ್ ಗೆಲುವು ಸಾಧಿಸುವಂತೆ ಪ್ರಾರ್ಥಿಸಲಾಯಿತು.
    ಕ್ರೈಸ್ತರ ಪುಣ್ಯ ಕ್ಷೇತ್ರವಾಗಿರುವ ವೆಳ್ಳಾಂಗಣಿ ಮಾತೆ ದೇವಾಲಯದಲ್ಲಿ ಮಾಜಿ ನಗರಸಭಾ ಸದಸ್ಯ ಪ್ರಾನ್ಸಿಸ್ ಮತ್ತು ಕುಟುಂಬ ವರ್ಗದವರು ಪ್ರಾರ್ಥನೆ ಸಲ್ಲಿಸಿದ್ದು, ಈ ಬಾರಿ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಧಿಕೃತ ಅಭ್ಯರ್ಥಿಯಾಗಿರುವ ಶಾಸಕ ಬಿ.ಕೆ ಸಂಗಮೇಶ್ವರ್‌ರವರು ಗೆಲುವು ಸಾಧಿಸುವ ಮೂಲಕ ಸಚಿವರಾಗಿ ಕ್ಷೇತ್ರವನ್ನು ಇನ್ನೂ ಹೆಚ್ಚಿನ ರೀತಿಯಲ್ಲಿ ಅಭಿವೃದ್ಧಿ ಪಡಿಸುವಂತಾಗಲಿ ಎಂದು ಪ್ರಾರ್ಥಿಸಿದ್ದಾರೆ.
    ಪ್ರಾನ್ಸಿಸ್ ಶಾಸಕ ಬಿ.ಕೆ ಸಂಗಮೇಶ್ವರ್ ಅಭಿಯಾನಿಯಾಗಿದ್ದು, ಹಲವಾರು ವರ್ಷಗಳಿಂದ ಕಾಂಗ್ರೆಸ್ ಪಕ್ಷದಲ್ಲಿ ಹಾಗು ವಿವಿಧ ಸಂಘಟನೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಈ ಹಿಂದೆ ನಗರಸಭೆಯಲ್ಲಿ ನಾಮನಿರ್ದೇಶನ ಸದಸ್ಯರಾಗಿ ಸೇವೆ ಸಲ್ಲಿಸಿದ್ದರು.

ಪುರಂದರದಾಸರ, ತ್ಯಾಗರಾಜರ, ಕನಕದಾಸರ ಆರಾಧನೆ : ವಿದೂಷಿ ದಿವಂಗತ ಹನುಮಂತಮ್ಮ ಸ್ವಾರಕ ಪ್ರಶಸ್ತಿ ವಿತರಣೆ

ಭದ್ರಾವತಿ ಹಳೇನಗರದ ಮಹಿಳಾ ಸೇವಾ ಸಮಾಜದಲ್ಲಿ ಪ್ರತಿ ವರ್ಷದಂತೆ ಈ ಬಾರಿ ಸಹ ಪುರಂದರದಾಸರ, ತ್ಯಾಗರಾಜರ ಮತ್ತು ಕನಕದಾಸರ ಆರಾಧನೆ ನಡೆಯಿತು.  
    ಭದ್ರಾವತಿ, ಏ. ೨೩ : ಹಳೇನಗರದ ಮಹಿಳಾ ಸೇವಾ ಸಮಾಜದಲ್ಲಿ ಪ್ರತಿ ವರ್ಷದಂತೆ ಈ ಬಾರಿ ಸಹ ಪುರಂದರದಾಸರ, ತ್ಯಾಗರಾಜರ ಮತ್ತು ಕನಕದಾಸರ ಆರಾಧನೆ ನಡೆಯಿತು.  
    ಪ್ರತಿವರ್ಷ ಸಂಗೀತ, ಭರತನಾಟ್ಯ, ವೀಣಾವಾದನದಲ್ಲಿ ತಾಲೂಕಿಗೆ ಪ್ರಥಮ ದರ್ಜೆಯಲ್ಲಿ ತೇರ್ಗಡೆ ಹೊಂದಿದವರಿಗೆ ವಿದೂಷಿ ದಿವಂಗತ ಹನುಮಂತಮ್ಮ ಸ್ವಾರಕ ಪ್ರಶಸ್ತಿ ನೀಡುತ್ತಿದ್ದು, ಈ ಬಾರಿ ಸಂಗೀತ ಸೀನಿಯರ್ ವಿಭಾಗದಲ್ಲಿ ಶೋಭಾ ಗಂಗರಾಜ್, ಜ್ಯೂನಿಯರ್ ವಿಭಾಗದಲ್ಲಿ ಚರಿತಾ, ವೀಣಾವಾದನದಲ್ಲಿ ವೀಣಾ, ಭರತನಾಟ್ಯ ವಿದ್ವತ್ ವಿಭಾಗದಲ್ಲಿ ಅರ್ಚನಾ, ಸೀನಿಯರ್ ವಿಭಾಗದಲ್ಲಿ ಕೃತಿಕಾ, ಜ್ಯೂನಿಯರ್ ವಿಭಾಗದಲ್ಲಿ ಕೀರ್ತನ, ರವರುಗಳಿಗೆ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.
    ಸಮಾಜದ ಅಧ್ಯಕ್ಷೆ ಹೇಮಾವತಿ ವಿಶ್ವನಾಥರಾವ್ ಅಧ್ಯಕ್ಷತೆ ವಹಿಸಿದ್ದರು. ವೀಣಾವಾದನ ಶಿಕ್ಷಕ ಸೋಮಶೇಖರ್ ವಿದೂಷಿ ದಿವಂಗತ ಹನುಮಂತಮ್ಮರವರ ಪರಿಚಯ ಮಾಡಿ ನಂತರ ಇವರ ನೇತೃತ್ವದಲ್ಲಿ ವೀಣಾವಾದನ ಕಾರ್ಯಕ್ರಮ ನಡೆಯಿತು. ವಿದೂಷಿ ಪುಷ್ಪಾ ಸುಬ್ರಮಣ್ಯಂ ನೇತೃತ್ವದಲ್ಲಿ ಪಂಚರತ್ನ ಕೃತಿ ಹಾಡುಗಾರಿಕೆ ನಡೆಸಿದರು.
       ಶಾಂತಿ ಶೇಟ್ ಸ್ವಾಗತಿಸಿದರು. ಪುಷ್ಪಾ ಸುಬ್ರಮಣ್ಯ ಪ್ರಸ್ತಾವಿಕ ನುಡಿಗಳನ್ನಾಡಿದರು. ಪುರಂದರದಾಸರ ಕುರಿತು ಚಂದನ, ತ್ಯಾಗರಾಜರ ಕುರಿತು ಶೋಭಾ ಮಾತನಾಡಿದರು. ಅನ್ನಪೂರ್ಣ ಸತೀಶ್ ಕಾರ್ಯಕ್ರಮ ನಿರೂಪಿಸಿದರು.

ರಸ್ತೆ ಅಪಘಾತ : ದ್ವಿಚಕ್ರ ವಾಹನ ಸವಾರ ಸಾವು

    ಭದ್ರಾವತಿ, ಏ. ೨೩ : ದ್ವಿಚಕ್ರ ವಾಹನ ಸವಾರನೋರ್ವ ರಸ್ತೆ ಅಪಘಾತದಲ್ಲಿ ಮೃತಪಟ್ಟಿರುವ ಘಟನೆ ಏ.೨೨ರ ಶನಿವಾರ ಮಧ್ಯಾಹ್ನ ನಗರದ ಸೀಗೆಬಾಗಿಯಲ್ಲಿ ನಡೆದಿದೆ.
    ಪವನು ಅಪಘಾತದಲ್ಲಿ ತೀವ್ರ ಗಾಯಗೊಂಡಿದ್ದು, ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಇವರು ಹೋಂಡಾ ಎಕ್ಟಿವಾ ದ್ವಿಚಕ್ರ ವಾಹನದಲ್ಲಿ ಹಿಂಬದಿಯಲ್ಲಿ ಉಲ್ಲಾಸ್ ಎಂಬುವರನ್ನು ಕೂರಿಸಿಕೊಂಡು ಸೀಗೆಬಾಗಿ ಕಡೆ ಹೋಗುತ್ತಿದ್ದು, ಈ ಸಂದರ್ಭದಲ್ಲಿ ಇನ್ನೋವಾ ಕಾರು  ದ್ವಿಚಕ್ರವಾಹನಕ್ಕೆ ಡಿಕ್ಕಿ ಹೊಡೆದಿದೆ. ಈ ಹಿನ್ನಲೆಯಲ್ಲಿ ಪವನು ಮತ್ತು ಉಲ್ಲಾಸ್ ಇಬ್ಬರು ಗಾಯಗೊಂಡಿದ್ದು, ಇಬ್ಬರನ್ನು ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಪವನು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆಂದು ಇವರ ಸಹೋದರ ಹೊಸಮನೆ ನಿವಾಸಿ ಸಚಿನ್ ಸಂಚಾರಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.