Thursday, May 4, 2023

ಬಾಡಿಗೆಗೆ ಬಂದಿದ್ದ ಚಾಲಕನ ಕಾರು ಕಳವು : ಪ್ರಕರಣ ದಾಖಲು

    ಭದ್ರಾವತಿ, ಮೇ. ೪: ಶಿವಮೊಗ್ಗಕ್ಕೆ ಬಾಡಿಗೆಗೆ ಬಂದಿದ್ದ ಕಾರು ಚಾಲಕನೋರ್ವ ರಸ್ತೆ ಬದಿ ತನ್ನ ಕಾರು ನಿಲ್ಲಿಸಿ ಸಮೀಪದಲ್ಲಿರುವ ಅಂಗಡಿಗೆ ತೆರಳಿ ಬರುವಷ್ಟರಲ್ಲಿ ಕಾರನ್ನು ಕಳವು ಮಾಡಿಕೊಂಡು ಹೋಗಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
    ಬೀರೂರಿನ ಬಳ್ಳಾರಿ ಕ್ಯಾಂಪ್‌ನಿಂದ ಸುಮಾರು ೨೭ ವರ್ಷ ವಯಸ್ಸಿನ ಚಾಲಕ ಎ. ರಜನಿಕಾಂತ್, ಏ.೨೮ರಂದು ಬೆಳಿಗ್ಗೆ ೩ ಗಂಟೆ ಸಮಯದಲ್ಲಿ ಶಿವಮೊಗ್ಗಕ್ಕೆ ಬಾಡಿಗೆಗೆ ತೆರಳಿದ್ದು, ಮಧ್ಯಾಹ್ನ ೩.೪೫ರ ಸಮಯದಲ್ಲಿ ನಗರದ ಹೊರವಲಯದ ರಾಷ್ಟ್ರೀಯ ಹೆದ್ದಾರಿ ಎನ್.ಎಚ್ ೨೦೬ ರಸ್ತೆಯ ಜೇಡಿಕಟ್ಟೆ ಹತ್ತಿರ ಕಾರನ್ನು ಅಲ್ಲೇ ನಿಲ್ಲಿಸಿ ಕಾರಿನ ಕೀ ಅಲ್ಲಿಯೇ ಬಿಟ್ಟು ಅಂಗಡಿಯ ಹತ್ತಿರ ಹೋಗಿ ಬರುವಷ್ಟರಲ್ಲಿ ಕಾರಿನ ಹಿಂಬದಿಯ ಆಸನದಲ್ಲಿ ಕುಳಿತಿದ್ದ ವ್ಯಕ್ತಿಯೋರ್ವ ಡಿಸೈರ್ ಕಾರನ್ನು ಶಿವಮೊಗ್ಗ ಕಡೆಗೆ ಕಳವು ಮಾಡಿಕೊಂಡು ಹೋಗಿದ್ದು, ಈ ಸಂಬಂಧ ಎ. ರಜನಿಕಾಂತ್ ನ್ಯೂಟೌನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಶ್ರೀ ಲಕ್ಷ್ಮೀನರಸಿಂಹ ಸ್ವಾಮಿ ದೇವಸ್ಥಾನದಲ್ಲಿ ಶ್ರೀ ನರಸಿಂಹ ಜಯಂತಿ ಉತ್ಸವ

ಮೇ.೫ರಂದು ಮಧ್ಯಾಹ್ನ ಬ್ರಹ್ಮರಥೋತ್ಸವ ೮ರಂದು ಸಂಪನ್ನ

ಭದ್ರಾವತಿ ಹಳೇನಗರದ ಪುರಾಣ ಪ್ರಸಿದ್ದ, ಕ್ಷೇತ್ರಪಾಲಕ ಶ್ರೀ ಲಕ್ಷ್ಮೀನರಸಿಂಹ ಸ್ವಾಮಿ ದೇವಸ್ಥಾನದಲ್ಲಿ ಮೇ.೮ರವರೆಗೆ ಶ್ರೀ ಲಕ್ಷ್ಮೀ ನರಸಿಂಹಸ್ವಾಮಿಯವರ ಬ್ರಹ್ಮರಥೋತ್ಸವ ನಡೆಯಲಿದ್ದು, ಗುರುವಾರ ಬೆಳಿಗ್ಗೆ ಶ್ರೀ ನರಸಿಂಹ ಜಯಂತಿ ಉತ್ಸವ ನಡೆಯಿತು.
    ಭದ್ರಾವತಿ, ಮೇ. ೪ : ಹಳೇನಗರದ ಪುರಾಣ ಪ್ರಸಿದ್ದ, ಕ್ಷೇತ್ರ ಪಾಲಕ ಶ್ರೀ ಲಕ್ಷ್ಮೀನರಸಿಂಹ ಸ್ವಾಮಿ ದೇವಸ್ಥಾನದಲ್ಲಿ ಮೇ.೮ರವರೆಗೆ ಶ್ರೀ ಲಕ್ಷ್ಮೀ ನರಸಿಂಹಸ್ವಾಮಿಯವರ ಬ್ರಹ್ಮರಥೋತ್ಸವ ನಡೆಯಲಿದ್ದು, ಗುರುವಾರ ಬೆಳಿಗ್ಗೆ ಶ್ರೀ ನರಸಿಂಹ ಜಯಂತಿ ಉತ್ಸವ ನಡೆಯಿತು.
    ನರಸಿಂಹ ಜಯಂತಿ ಉತ್ಸವ ಅಂಗವಾಗಿ ವಸಂತಸೇವೆ, ಅಷ್ಟಾವಧಾನ, ಮಹಾಮಂಗಳಾರತಿ ಸೇರಿದಂತೆ ಇನ್ನಿತರ ಧಾರ್ಮಿಕ ಆಚರಣೆಗಳು ಜರುಗಿದವು. ಸಂಜೆ ಕಲ್ಯಾಣೋತ್ಸವ ವಿಜೃಂಭಣೆಯಿಂದ ನೆರವೇರಿತು.  
    ಆಡಳಿತಾಧಿಕಾರಿ ಎ.ಟಿ ಬಸವರಾಜ್, ದೇವಸ್ಥಾನದ ಪ್ರಧಾನ ಅರ್ಚಕ ವೇದಬ್ರಹ್ಮ ಎಸ್. ರಂಗನಾಥ ಶರ್ಮ, ಸಹಾಯಕ ಅರ್ಚಕ ಎಸ್. ಶ್ರೀನಿವಾಸ್, ಹರಿ, ಅಭಿನಂದನ್, ಕೃಷ್ಣಪ್ಪ ಸೇರಿದಂತೆ ಭಕ್ತಾಧಿಗಳು ಪಾಲ್ಗೊಂಡಿದ್ದರು.
    ಮೇ.೫ರಂದು ಬ್ರಹ್ಮರಥೋತ್ಸವ :
    ಪ್ರತಿವರ್ಷದಂತೆ ಈ ಬಾರಿ ಸಹ ಮೇ.೫ರಂದು ಮಧ್ಯಾಹ್ನ ಅಭಿಜಿನ್ ಮುಹೂರ್ತದಲ್ಲಿ ಬ್ರಹ್ಮರಥೋತ್ಸವ ನಡೆಯಲಿದ್ದು, ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸುವಂತೆ ಕೋರಲಾಗಿದೆ.
    ೬ರಂದು ಬೆಳಿಗ್ಗೆ ಗಜವಾಹನೋತ್ಸವ, ಸಂಜೆ ಶೇಷವಾಹನೋತ್ಸವ, ೭ರಂದು ಸಂಜೆ ಹನುಮಂತೋತ್ಸವ, ಪೂರ್ಣಾಹುತಿ ಹಾಗು ೮ರಂದು ಬೆಳಿಗ್ಗೆ ಮಹಾಭಿಷೇಕ, ಸಂಜೆ ಪಲ್ಲಕ್ಕಿ ಉತ್ಸವ ನಡೆಯಲಿದೆ.

ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡಿಲ್ಲ : ಸ್ಪಷ್ಟನೆ

ಕೋಡ್ಲುಯಜ್ಞಯ್ಯ
    ಭದ್ರಾವತಿ, ಮೇ. ೪ : ಕನ್ನಡ ಸಾಹಿತ್ಯ ಪರಿಷತ್ ಸ್ವತಂತ್ರ ಸಾಂವಿಧಾನಿಕ ಸಂಸ್ಥೆಯಾಗಿದ್ದು, ಯಾವುದೇ ರಾಜಕೀಯ ಪಕ್ಷಕ್ಕೆ ಸೀಮಿತವಾಗಿಲ್ಲ ಎಂದು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕೋಡ್ಲುಯಜ್ಞಯ್ಯ ಸ್ಪಷ್ಟಪಡಿಸಿದ್ದಾರೆ.
    ಪರಿಷತ್ ಯಾವುದೇ ಪಕ್ಷದ ಮುಖವಾಣಿಯಲ್ಲ. ಇತ್ತೀಚೆಗೆ ನಾನು ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡಿದ್ದೇನೆ ಎಂದು ಪತ್ರಿಕೆಗಳಲ್ಲಿ ವರದಿಯಾಗಿದ್ದು, ಇದು ಸತ್ಯಕ್ಕೆ ದೂರವಾಗಿದೆ. ಯಾವುದೇ ರಾಜಕೀಯ ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆಗೊಂಡಿಲ್ಲ. ಯಾವುದೇ ರಾಜಕೀಯ ಪಕ್ಷಕ್ಕೆ ಸೇರ್ಪಡೆಗೊಳ್ಳುವ ಉದ್ದೇಶ ನಾನು ಹೊಂದಿಲ್ಲ. ಸುಳ್ಳು ಮಾಹಿತಿಗೆ ಕಿವಿಗೊಡದಂತೆ ಮನವಿ ಮಾಡಿದ್ದಾರೆ.

ಭದ್ರಾವತಿ ಸಮಗ್ರ ಅಭಿವೃದ್ಧಿಗೆ ಬಿಜೆಪಿ ಪೂರಕ ಪ್ರಣಾಳಿಕೆ

ಗೆಲುವು ಸಾಧಿಸುವ ಮೂಲಕ ಭರವಸೆ ಈಡೇರಿಸುವ ವಿಶ್ವಾಸ

ಭದ್ರಾವತಿಯಲ್ಲಿ ಗುರುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಭಾರತೀಯ ಜನತಾ ಪಕ್ಷದ ಜಿಲ್ಲಾ ಪ್ರಮುಖರು, ವೈದ್ಯರಾದ ಡಾ. ಧನಂಜಯ ಸರ್ಜಿ ಪ್ರಣಾಳಿಕೆ ಬಿಡುಗಡೆಗೊಳಿಸಿದರು.
    ಭದ್ರಾವತಿ, ಮೇ. ೪: ಈ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಲೇ ಬೇಕೆಂಬ ಹಠಕ್ಕೆ ಬಿದ್ದಿರುವ ಭಾರತೀಯ ಜನತಾ ಪಕ್ಷ ಇದೀಗ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಪೂರಕವಾಗಿ ಪ್ರಣಾಳಿಕೆ ಬಿಡುಗಡೆಗೊಳಿಸಿದೆ.
    ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಪಕ್ಷದ ಜಿಲ್ಲಾ ಪ್ರಮುಖರು, ವೈದ್ಯರಾದ ಡಾ. ಧನಂಜಯ ಸರ್ಜಿ ಪ್ರಣಾಳಿಕೆ ಬಿಡುಗಡೆಗೊಳಿಸಿದರು. ಕೃಷಿ, ಕೈಗಾರಿಕೆ, ಆರೋಗ್ಯ, ಶಿಕ್ಷಣ, ಆಡಳಿತ ಮತ್ತು ಅಭಿವೃದ್ಧಿ ಹಾಗು ವಿಶೇಷ ಆದ್ಯತೆಗಳಡಿ ಹಲವಾರು ಭರವಸೆಗಳನ್ನು ನೀಡಿದೆ.
    ಪ್ರಮುಖವಾಗಿ ವಿಐಎಸ್‌ಎಲ್ ಮತ್ತು ಎಂಪಿಎಂ ಬೆಳವಣಿಗೆಗೆ ಆದ್ಯತೆ, ಕೆಆರ್‌ಎಸ್ ಮಾದರಿಯಲ್ಲಿ ಭದ್ರಾ ಜಲಾಶಯ ಸಮಗ್ರ ಅಭಿವೃದ್ಧಿ, ಕೈಗಾರಿಕಾ ವಸಾಹತುಗಳ ಮೇಲ್ದರ್ಜೆ ಮತ್ತು ಗಾರ್ಮೆಂಟರ‍್ಸ್‌ಗಳ ಸ್ಥಾಪನೆ, ಮಹಿಳೆಯರಿಗೆ ಕೈಗಾರಿಕಾ ಕೇಂದ್ರಗಳಿಗೆ ತೆರಳಲು ಬಸ್ ವ್ಯವಸ್ಥೆ, ಸರ್ಕಾರಿ ಹೆರಿಗೆ ಆಸ್ಪತ್ರೆ ಮತ್ತು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ಆದ್ಯತೆ, ಸುಸಜ್ಜಿತ ಸರ್ಕಾರಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ, ಮೆಡಿಕಲ್ ಹಾಗು ಎಂಜಿನಿಯರಿಂಗ್ ಕಾಲೇಜು ಸ್ಥಾಪನೆ, ೧೮ ವರ್ಷ ಪೂರ್ಣಗೊಂಡವರಿಗೆ ಕಾಲೇಜುಗಳಲ್ಲೇ ಮತದಾರರ ಗುರುತಿನ ಚೀಟಿ, ವಾಹನ ಚಾಲನಾ ಪರವಾನಿಗೆ(ಡಿ.ಎಲ್) ನೀಡಲು ಆದ್ಯತೆ ಹಾಗು ಕ್ಷೇತ್ರದ ಅನ್ನದಾತ ಸರ್.ಎಂ ವಿಶ್ವೇಶ್ವರಾಯನವರ ಬೃಹತ್ ಪ್ರತಿಮೆ ಸ್ಥಾಪನೆ ಸೇರಿದಂತೆ ಹಲವು ಭರವಸೆಗಳನ್ನು ಈ ಬಾರಿ ಪ್ರಣಾಳಿಕೆಯಲ್ಲಿ ನೀಡಿದೆ.
    ಪಕ್ಷದ ಅಭ್ಯರ್ಥಿ ಮಂಗೋಟೆ ರುದ್ರೇಶ್ ಮಾತನಾಡಿ, ಈ ಚುನಾವಣೆಯಲ್ಲಿ ಗೆಲುವು ಸಾಧಿಸುವ ಮೂಲಕ ಪ್ರಣಾಳಿಕೆಯಲ್ಲಿರುವ ಬಹುತೇಕ ಭರವಸೆಗಳನ್ನು  ಈಡೇರಿಸುವ ವಿಶ್ವಾಸ ವ್ಯಕ್ತಪಡಿಸಿದರು.
    ಪತ್ರಿಕಾಗೋಷ್ಠಿಯಲ್ಲಿ ಪಕ್ಷದ ತಾಲೂಕು ಮಂಡಲ ಅಧ್ಯಕ್ಷ ಜಿ. ಧರ್ಮಪ್ರಸಾದ್, ಚುನಾವಣಾ ಪ್ರಭಾರಿ ಅಶೋಕ್ ಮೂರ್ತಿ, ಮುಖಂಡರಾದ ಕೂಡ್ಲಿಗೆರೆ ಹಾಲೇಶ್, ತೀರ್ಥಯ್ಯ, ಎಂ. ಮಂಜುನಾಥ್, ಆರ್.ಎಸ್ ಶೋಭಾ, ಎಂ.ಎಸ್ ಸುರೇಶಪ್ಪ, ಮಂಜುನಾಥ್ ಕದಿರೇಶ್, ಸಂಪತ್‌ರಾಜ್ ಬಾಂಟಿಯಾ, ಸುನಿಲ್ ಗಾಯಕ್‌ವಾಡ್, ಕವಿತಾ ರಾವ್, ಕೆ.ಎನ್ ಶ್ರೀಹರ್ಷ, ಬಿ.ಎಸ್ ಶ್ರೀನಾಥ್, ಕವಿತಾ ಸುರೇಶ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Wednesday, May 3, 2023

ಕಡ್ಡಾಯವಾಗಿ ಮತದಾನ ಹಕ್ಕು ಚಲಾಯಿಸಿ : ಚುನಾವಣಾ ಭ್ರಷ್ಟಾಚಾರ ತಡೆಗೆ ಕೈಜೋಡಿಸಿ

ರಾಜ್ಯಮಟ್ಟದ ತರಬೇತುದಾರ, ಸ್ವೀಪ್ ಜಿಲ್ಲಾ ಉಪ ನೋಡಲ್ ಅಧಿಕಾರಿ ನವೀದ್ ಅಹಮದ್ ಪರ್ವೇಜ್

ಭದ್ರಾವತಿಯಲ್ಲಿ ತಾಲೂಕು ಪಂಚಾಯತಿ, ನಗರಸಭೆ ಮತ್ತು ತಾಲೂಕು ಆಡಳಿತ ಹಾಗು ತಾಲೂಕು ಸ್ವೀಪ್ ಸಮಿತಿ ವತಿಯಿಂದ ಬುಧವಾರ ನಗರದ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಯುವ ಮತದಾರರಿಗೆ ಮತ್ತು ಸಾರ್ವಜನಿಕರಿಗೆ ಮತದಾನ ಜಾಗೃತಿ ಹಾಗು ಅರಿವು ಜಾಥಾ ಕಾರ್ಯಕ್ರಮ ಆಯೋಜಿಸಲಾಗಿತ್ತು.
    ಭದ್ರಾವತಿ, ಮೇ. ೩ : ಸಾರ್ವಜನಿಕರು ಸಿ ವಿಜಿಲ್ ಮೊಬೈಲ್ ಆಪ್ ಬಳಸುವ ಮೂಲಕ ಚುನಾವಣಾ ಭ್ರಷ್ಟಾಚಾರ ತಡೆಗೆ ಕೈಜೋಡಿಸಬೇಕು. ಅಲ್ಲದೆ ಪ್ರತಿಯೊಬ್ಬ ಮತದಾರರು ಕಡ್ಡಾಯವಾಗಿ ಮತದಾನ ಮಾಡಬೇಕೆಂದು ರಾಜ್ಯಮಟ್ಟದ ತರಬೇತುದಾರ, ಸ್ವೀಪ್ ಜಿಲ್ಲಾ ಉಪ ನೋಡಲ್ ಅಧಿಕಾರಿ ನವೀದ್ ಅಹಮದ್ ಪರ್ವೇಜ್ ಹೇಳಿದರು.
    ಅವರು ಬುಧವಾರ ತಾಲೂಕು ಪಂಚಾಯತಿ, ನಗರಸಭೆ ಮತ್ತು ತಾಲೂಕು ಆಡಳಿತ ಹಾಗು ತಾಲೂಕು ಸ್ವೀಪ್ ಸಮಿತಿ ವತಿಯಿಂದ ನಗರದ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಆಯೋಜಿಸಲಾಗಿದ್ದ ಯುವ ಮತದಾರರಿಗೆ ಮತ್ತು ಸಾರ್ವಜನಿಕರಿಗೆ ಮತದಾನ ಜಾಗೃತಿ ಹಾಗು ಅರಿವು ಜಾಥಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.


ಭದ್ರಾವತಿ ನಗರಸಭೆ ವತಿಯಿಂದ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಬುಧವಾರ ಮತ ಜಾಗೃತಿ ಮೂಡಿಸಲು ವಿದ್ಯಾರ್ಥಿಗಳಿಗೆ ಚುನಾವಣೆಯಲ್ಲಿ ವಿವಿಧ ನಮೂನೆಗಳ ಪರಿಚಯ ಸ್ಪರ್ಧೆ ಹಾಗೂ ಮೆಹಂದಿ ಸ್ಪರ್ಧೆ ಆಯೋಜಿಸಲಾಗಿತ್ತು.
    ಮತದಾನದಲ್ಲಿ ತಾರತಮ್ಯವಿಲ್ಲ. ಮತದಾನ ಮಾಡುವುದು ಪ್ರತಿಯೊಬ್ಬರ ಕರ್ತವ್ಯ. ಆ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆ ಗೌರವಿಸಬೇಕು. ತಮ್ಮ ಹಕ್ಕಿನಿಂದ ಯಾರೂ ಸಹ ವಂಚಿತರಾಗಬಾರದು. ನಿರ್ಭೀತಿಯಿಂದ ಮತದಾನದ ಹಕ್ಕು ಚಲಾಯಿಸಬೇಕು. ಅದರಲ್ಲೂ ವಿಶೇಷವಾಗಿ ಮತದಾನದಲ್ಲಿ ೧೮ ವರ್ಷ ಮೇಲ್ಪಟ್ಟ ಅರ್ಹ ಯುವ ಸಮುದಾಯ ಹೆಚ್ಚಿನ ಹೆಚ್ಚಿನ ಪ್ರಮಾಣದಲ್ಲಿ ಪಾಲ್ಗೊಳ್ಳಬೇಕು. ಯುವ ಮತದಾರರು ನೋಂದಣಿಯಾಗಲು ಪ್ರಸ್ತುತ ವರ್ಷದಲ್ಲಿ ೪ ಬಾರಿ ಅವಕಾಶ ಕಲ್ಪಿಸಿಕೊಡಲಾಗಿದೆ ಎಂದರು.  
  ಏಪ್ರಿಲ್ ೧೧ರ ವರೆಗೆ ಪರಿಷ್ಕರಣೆ ಆಗಿರುವ ಅಂತಿಮ ಮತದಾರರ ಪಟ್ಟಿಯಲ್ಲಿ ಹೆಸರು ಪರಿಶೀಲಿಸಲು ವಿಎಚ್‌ಎ ಮೊಬೈಲ್ ಆಪ್ ಬಳಸಬಹುದಾಗಿದೆ. ಈ ಬಾರಿ ಚುನಾವಣೆಯಲ್ಲಿ ಆಯೋಗವು ವಿಶೇಷಚೇತನ ಮತ್ತು ೮೦ ವರ್ಷ ಮೇಲ್ಪಟ್ಟ ಅರ್ಹ ಮತದಾರರಿಗೆ ಪೋಸ್ಟಲ್ ಬ್ಯಾಲೆಟ್ ೧೨ಡಿ ಮೂಲಕ ಮತ ಚಲಾಯಿಸಲು ಅವಕಾಶ ಈಗಲೇ ಪ್ರಾರಂಭವಾಗಿದೆ. ಸ್ಪರ್ಧಿಸಿರುವ ಅಭ್ಯರ್ಥಿಗಳಲ್ಲಿ ಯಾವುದೇ ಅಭ್ಯರ್ಥಿ ಇಷ್ಟವಿಲ್ಲ ಎಂದರೆ ನೋಟ ಚಲಾಯಿಸಬಹುದಾಗಿದೆ ಎಂದರು.  
ಚುನಾವಣಾ ಪ್ರಚಾರ ಸಮಯದಲ್ಲಿ ಯಾವುದೇ ಅಭ್ಯರ್ಥಿ ಮತದಾರರಿಗೆ ಆಸೆ, ಅಮಿಷಗಳನ್ನು ಒಡ್ಡಿದಲ್ಲಿ ತಕ್ಷಣವೇ ತಮ್ಮಲ್ಲಿರುವ ಮೊಬೈಲ್ ಮುಖೇನ ಚಿತ್ರೀಕರಿಸಿದ ವಿಡಿಯೋ, ಫೋಟೋ ಸಿ ವಿಜಿಲ್ ಮೊಬೈಲ್ ಆಪ್ ಬಳಸಿ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿದಲ್ಲಿ ಆಯೋಗ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸುತ್ತದೆ ಹಾಗೂ ದೂರುದಾರರ ಹೆಸರನ್ನು ಗೌಪ್ಯವಾಗಿರಿಸಲಿದೆ. ಸಾರ್ವಜನಿಕರು ಕೆವೈಸಿ ಮೊಬೈಲ್ ಅಪ್ ಮೂಲಕ ಚುನಾವಣಾ ಅಭ್ಯರ್ಥಿಗಳ ಎಲ್ಲ ಮಾಹಿತಿ ಪಡೆಯಬಹುದಾಗಿದೆ ಎಂದರು.
ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ರಮೇಶ್, ನಗರಸಭೆ ಪೌರಾಯುಕ್ತರು ಮನುಕುಮಾರ್,  ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ ನಾಗೇಂದ್ರಪ್ಪ, ನಗರಸಭೆ ಸಮುದಾಯ ಸಂಘಟನಾ ಅಧಿಕಾರಿ ಸುಹಾಸಿನಿ, ಪ್ರಾಂಶುಪಾಲ ಕಾಳಿದಾಸ, ಚುನಾವಣಾ ಅಧಿಕಾರಿಗಳು, ಸಿಬ್ಬಂದಿಗಳು, ಬಿಎಲ್‌ಓ ಗಳು ಪಾಲ್ಗೊಂಡಿದ್ದರು.
ಮಾನವ ಸರಪಳಿ ನಿರ್ಮಿಸಿ ಮತದಾರರ ಪ್ರತಿಜ್ಞಾವಿಧಿ ಬೋಧಿಸಲಾಯಿತು. ಸಂಸ್ಥೆಯ ಆವರಣದಿಂದ ಜಾಥಾ ಮೂಲಕ ಕಡ್ಡಾಯ ಮತದಾನ ಜಾಗೃತಿ ಕಾರ್ಯಕ್ಕೆ 'ಮೈ ಭಾರತ್ ಹೂ" ಮತದಾನ ಜಾಗೃತಿ ಗೀತೆಯೊಂದಿಗೆ ಚಾಲನೆ ನೀಡಲಾಯಿತು.  ಆನ್‌ಲೈನ್ ಮೂಲಕ ಹೊಸ ಮತದಾರರ ನೋಂದಣಿ ಮತ್ತು ತಿದ್ದುಪಡಿ ಮಾಡುವ ವಿಧಾನ  ಕುರಿತು ಮಾಹಿತಿ ನೀಡಲಾಯಿತು.  ನಗರಸಭೆ ವತಿಯಿಂದ ಮತ ಜಾಗೃತಿ ಮೂಡಿಸಲು ವಿದ್ಯಾರ್ಥಿಗಳಿಗೆ ಚುನಾವಣೆಯಲ್ಲಿ ವಿವಿಧ ನಮೂನೆಗಳ ಪರಿಚಯ ಸ್ಪರ್ಧೆ ಹಾಗೂ ಮೆಹಂದಿ ಸ್ಪರ್ಧೆ ಆಯೋಜಿಸಲಾಗಿತ್ತು. ವಿಜೇತರಿಗೆ ಬಹುಮಾನಗಳನ್ನು ವಿತರಿಸಲಾಯಿತು.


ಭದ್ರಾವತಿ ನಗರಸಭೆ ವತಿಯಿಂದ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಬುಧವಾರ ಮತ ಜಾಗೃತಿ ಮೂಡಿಸಲು ವಿದ್ಯಾರ್ಥಿಗಳಿಗೆ ಚುನಾವಣೆಯಲ್ಲಿ ವಿವಿಧ ನಮೂನೆಗಳ ಪರಿಚಯ ಸ್ಪರ್ಧೆ ಹಾಗೂ ಮೆಹಂದಿ ಸ್ಪರ್ಧೆ ಆಯೋಜಿಸಲಾಗಿತ್ತು.

ಕಾರ್ಮಿಕರ ದಿನಾಚರಣೆ : ಪೌರಕಾರ್ಮಿಕರಿಗೆ ಸನ್ಮಾನ

ಕಾರ್ಮಿಕ ದಿನಾಚರಣೆ ಅಂಗವಾಗಿ ನಗರದ ರಂಗಪ್ಪ ವೃತ್ತ ಮಧು ಲ್ಯಾಬೋರೇಟರಿ ವತಿಯಿಂದ ಪೌರಕಾರ್ಮಿಕರನ್ನು ಸನ್ಮಾನಿಸಿ ಗೌರವಿಸಲಾಯಿತು.
    ಭದ್ರಾವತಿ, ಮೇ. ೩: ಕಾರ್ಮಿಕ ದಿನಾಚರಣೆ ಅಂಗವಾಗಿ ನಗರದ ರಂಗಪ್ಪ ವೃತ್ತ ಮಧು ಲ್ಯಾಬೋರೇಟರಿ ವತಿಯಿಂದ ಪೌರಕಾರ್ಮಿಕರನ್ನು ಸನ್ಮಾನಿಸಿ ಗೌರವಿಸಲಾಯಿತು.
    ನಗರಸಭೆ ವ್ಯಾಪ್ತಿಯ ಕೇಶವಪುರ ಬಡಾವಣೆ ಮತ್ತು ರಂಗಪ್ಪ ವೃತ್ತದಲ್ಲಿ ಸ್ವಚ್ಛತಾ ಕಾರ್ಯ ಕೈಗೊಳ್ಳುವ ಪೌರಕಾರ್ಮಿಕರಾದ ಲಕ್ಷ್ಮಮ್ಮ, ಸಂಜೀವ ಮತ್ತು ಶರವಣ ಅವರನ್ನು ಸನ್ಮಾನಿಸಲಾಯಿತು.
ಪೌರಕಾರ್ಮಿಕರನ್ನು ಗುರುತಿಸಿ ಸನ್ಮಾನಿಸಿರುವುದು ವಿಶೇಷವಾಗಿದೆ. ಸಿಂಧು, ಲೀಲಾವತಿ, ಎಸ್.ಆರ್ ಜಗದೀಶ್, ನಾರಾಯಣಪ್ಪ ದೊಡ್ಮನೆ ಮತ್ತು ಸ್ಥಳೀಯ ನಿವಾಸಿಗಳು ಉಪಸ್ಥಿತರಿದ್ದರು.

ಮೇ.೫ರಂದು ಕನ್ನಡ ಸಾಹಿತ್ಯ ಪರಿಷತ್ ೧೦೮ನೇ ಸಂಸ್ಥಾಪನಾ ದಿನಾಚರಣೆ


    ಭದ್ರಾವತಿ, ಮೇ. ೩ : ಕನ್ನಡ ಸಾಹಿತ್ಯ ಪರಿಷತ್ ೧೦೮ನೇ ಸಂಸ್ಥಾಪನಾ ದಿನಾಚರಣೆ ಮೇ.೫ರಂದು ಸಂಜೆ ೫.೩೦ಕ್ಕೆ ಪರಿಷತ್ ನ್ಯೂಟೌನ್ ಕಛೇರಿ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ.
    ಸ್ತ್ರೀ ರೋಗ ತಜ್ಞೆ, ಸಾಹಿತಿ ಡಾ. ವೀಣಾ ಎಸ್. ಭಟ್ ಉದ್ಘಾಟಿಸಲಿದ್ದು, ತಾಲೂಕು ಪರಿಷತ ಅಧ್ಯಕ್ಷ ಕೋಡ್ಲು ಯಜ್ಞಯ್ಯ ಅಧ್ಯಕ್ಷತೆ ವಹಿಸಲಿದ್ದಾರೆ. ನಿವೃತ್ತ ಉಪನ್ಯಾಸಕ ಎಚ್.ಎಂ ರವಿಶಂಕರ್ ಉಪನ್ಯಾಸ ನೀಡಲಿದ್ದು, ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಅಧ್ಯಕ್ಷೆ ಎಂ.ಎಸ್ ಸುಧಾಮಣಿ, ಕರ್ನಾಟಕ ಜಾನಪದ ಪರಿಷತ್ ಅಧ್ಯಕ್ಷ ಎಂ.ಆರ್ ರೇವಣಪ್ಪ ಉಪಸ್ಥಿತರಿರುವರು. ಹಿರಿಯ ಸಾಹಿತಿಗಳಾದ ಜೆ.ಎನ್ ಬಸವರಾಜಪ್ಪ ಮತ್ತು ಬಿ. ಕಾಂತಪ್ಪ ಕಥೆ ಹಾಗು ಸಿ.ಎಚ್ ನಾಗೇಂದ್ರ, ಬಿ.ಕೆ ನಿತೀನ್, ಎನ್.ಎಸ್ ನಿಹಾರಿಕಾ, ಪೂರ್ಣಿಮಾ ಉಡುಪ ಕವನ ವಾಚಿಸಲಿದ್ದು, ಹಳೇನಗರ ಮಹಿಳಾ ಸೇವಾ ಸಮಾಜ ತಂಡದವರಿಂದ, ಎಚ್.ಆರ್ ಶ್ರೀಧರೇಶ್ ಮತ್ತು ತಂಡದವರಿಂದ ಹಾಗು ಸುಮತಿ ಕಾರಂತ್ ಅವರಿಂದ ಹಾಡುಗಾರಿಕೆ ನಡೆಯಲಿದೆ.