Thursday, May 25, 2023

ಅರಳಿಹಳ್ಳಿ ಗ್ರಾಮದ ಬಡಕುಟುಂಬಗಳಿಗೆ ಮೂಲ ಸೌಕರ್ಯ ಕಲ್ಪಿಸಲು ಆಗ್ರಹ

ತಹಸೀಲ್ದಾರ್ ಮೂಲಕ ಸರ್ಕಾರಕ್ಕೆ ನಿವಾಸಿಗಳಿಂದ ಮನವಿ

ಭದ್ರಾವತಿ ತಾಲೂಕಿನ ಅರಳಿಹಳ್ಳಿ ಗ್ರಾಮದಲ್ಲಿ ವಾಸಿಸುತ್ತಿರುವ ಸುಮಾರು ೭೫ ಕುಟುಂಬಗಳಿಗೆ ಮೂಲ ಸೌಕರ್ಯಗಳನ್ನು ಸಮರ್ಪಕವಾಗಿ ಕಲ್ಪಿಸಿಕೊಡುವಂತೆ ಆಗ್ರಹಿಸಿ ಗುರುವಾರ ಸರ್ಕಾರಕ್ಕೆ ತಹಸೀಲ್ದಾರ್ ಗ್ರೇಡ್-೨ ರಂಗಮ್ಮ ಮೂಲಕ ಮನವಿ ಸಲ್ಲಿಸಲಾಯಿತು.
    ಭದ್ರಾವತಿ, ಮೇ. ೨೫: ತಾಲೂಕಿನ ಅರಳಿಹಳ್ಳಿ ಗ್ರಾಮದಲ್ಲಿ ವಾಸಿಸುತ್ತಿರುವ ಸುಮಾರು ೭೫ ಕುಟುಂಬಗಳಿಗೆ ಮೂಲ ಸೌಕರ್ಯಗಳನ್ನು ಸಮರ್ಪಕವಾಗಿ ಕಲ್ಪಿಸಿಕೊಡುವಂತೆ ಆಗ್ರಹಿಸಿ ಗುರುವಾರ ಸರ್ಕಾರಕ್ಕೆ ತಹಸೀಲ್ದಾರ್ ಗ್ರೇಡ್-೨ ರಂಗಮ್ಮ ಮೂಲಕ ಮನವಿ ಸಲ್ಲಿಸಲಾಯಿತು.
    ಕರ್ನಾಟಕ ರಾಷ್ಟ್ರ ಸಮಿತಿ(ಕೆಆರ್‌ಎಸ್) ಪಕ್ಷದ ಸಹಕಾರದೊಂದಿಗೆ ನಿವಾಸಿಗಳು ತಾಲೂಕು ಕಛೇರಿ ಮಿನಿವಿಧಾನಸೌಧದ ಮುಂಭಾಗ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.
    ಬಡ ಕುಟುಂಬಗಳಿಗೆ ಮೂಲ ಸೌಕರ್ಯಗಳನ್ನು ಕಲ್ಪಿಸಿಕೊಡುವಲ್ಲಿ ಸ್ಥಳೀಯ ಆಡಳಿತ, ಜನಪ್ರತಿನಿಧಿಗಳು ವಿಫಲವಾಗಿದ್ದು, ಇದರಿಂದಾಗಿ ಸಂಕಷ್ಟಕ್ಕೆ ಒಳಗಾಗುವಂತಾಗಿದೆ.  ಸರ್ಕಾರ ತಕ್ಷಣ ಸ್ಪಂದಿಸುವ ಮೂಲಕ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.  
    ಪಕ್ಷದ ತಾಲೂಕು ಅಧ್ಯಕ್ಷ ನಾಗರಾಜ್ ರಾವ್ ಸಿಂಧೆ, ಯುವ ಘಟಕದ ಅಧ್ಯಕ್ಷ ಅರಳಿಹಳ್ಳಿ ತ್ಯಾಗರಾಜ್, ಸಂಘಟನಾ ಕಾರ್ಯದರ್ಶಿ ರಾಜೇಂದ್ರ, ಮುಖಂಡರಾದ ಮಲ್ಲಿಕಾರ್ಜುನ್, ತೀರ್ಥ ಕುಮಾರ್, ಚಲಪತಿ, ಸಂತೋಷ್, ಉದಯಕುಮಾರ್, ಸುಮಿತ್ರ ಬಾಯಿ. ಚಂದನ ಮತ್ತು ಅರಳಿಹಳ್ಳಿ ಗ್ರಾಮಸ್ಥರು ಉಪಸಿತರಿದ್ದರು

ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ : ಬಂಜಾರ ಸಮುದಾಯದ ಶಾಸಕರಿಗೆ ಸಚಿವ ಸ್ಥಾನ ನೀಡಿ

ಶಾಸಕ ಬಿ.ಕೆ ಸಂಗಮೇಶ್ವರ್‌ಗೂ ಸಚಿವ ಸ್ಥಾನಕ್ಕೆ ಗೋರ ಸೇನಾ ತಾಲೂಕು ಶಾಖೆ ಒತ್ತಾಯ

ರುದ್ರಪ್ಪ ಮಾನಪ್ಪ ಲಮಾಣಿ
    ಭದ್ರಾವತಿ, ಮೇ. ೨೫: ರಾಜ್ಯದಲ್ಲಿ ಸುಮಾರು ೪೦ ಲಕ್ಷ ಜನಸಂಖ್ಯೆ ಹೊಂದಿರುವ ಬಂಜಾರ ಸಮುದಾಯ ಈ ಬಾರಿ ಚುನಾವಣೆಯಲ್ಲಿ ಪ್ರಮುಖ ಪಾತ್ರವಹಿಸಿದ್ದು, ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ಅಧಿಕಾರಕ್ಕೆ ಬರಲು ಕಾರಣವಾಗಿದೆ. ಈ ಹಿನ್ನಲೆಯಲ್ಲಿ ಸಮುದಾಯ ಪ್ರತಿನಿಧಿಸುತ್ತಿರುವ ಶಾಸಕರಿಗೆ ಸಚಿವ ಸ್ಥಾನ ನೀಡಬೇಕೆಂದು ಗೋರ ಸೇನಾ ತಾಲೂಕು ಶಾಖೆ ಒತ್ತಾಯಿಸಿದೆ.
    ಈ ಬಂಜಾರ ಸಮುದಾಯ ಒಳ ಮೀಸಲಾತಿ ವಿರುದ್ಧ ತಾಂಡಾ ಬಜಾವೋ ಬಿಜೆಪಿ ಹಟಾವೋ ಅಂದೋಲನ ನಡೆಸಿ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ ಬಹುಮತ ಪಡೆದುಕೊಳ್ಳುವಲ್ಲಿ ಕಾರಣವಾಗಿದೆ. ಅದರಲ್ಲೂ ವಿಶೇಷವಾಗಿ ಸುಮಾರು ೭೦ಕ್ಕಿಂತ ಹೆಚ್ಚು ಕ್ಷೇತ್ರಗಳಲ್ಲಿ ಸಾಮೂಹಿಕವಾಗಿ ಮತ ನೀಡುವ ಮೂಲಕ ನಿರ್ಣಾಯಕ ಪಾತ್ರ ವಹಿಸಿದೆ.
    ಸಮುದಾಯ ಪ್ರತಿನಿಧಿಸುತ್ತಿರುವ ಹಾವೇರಿ ಕ್ಷೇತ್ರದ ಶಾಸಕ ರುದ್ರಪ್ಪ ಮಾನಪ್ಪ ಲಮಾಣಿ ಮತ್ತು ವಿಧಾನಪರಿಷತ್ ಸದಸ್ಯ ಪ್ರಕಾಶ್ ರಾಠೋಡ್‌ರವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರದಲ್ಲಿ ಸಂಪುಟ ದರ್ಜೆ ಸಚಿವ ಸ್ಥಾನ ಹಾಗು ಚಿಂಚೋಳಿ ಕ್ಷೇತ್ರದಲ್ಲಿ ಕಡಿಮೆ ಮತಗಳ ಅಂತರದಿಂದ ಸೊಲು ಕಂಡಿರುವ ಸುಭಾಷ್ ರಾಥೋಡ್‌ರವರು ಸಮುದಾಯದಲ್ಲಿ ಉತ್ತಮ ಬಾಂಧವ್ಯದೊಂದಿಗೆ ಪ್ರಭಾವ ಹೊಂದಿದ್ದಾರೆ. ಈ ಹಿನ್ನಲೆಯಲ್ಲಿ ಇವರಿಗೆ ತಾಂಡಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಸ್ಥಾನ ನೀಡಬೇಕೆಂದು ಒತ್ತಾಯಿಸಲಾಗಿದೆ.


ಬಿ.ಕೆ ಸಂಗಮೇಶ್ವರ್
    ಭದ್ರಾವತಿ ವಿಧಾನಸಭಾ ಕ್ಷೇತ್ರದ ಶಾಸಕರಾಗಿ ಬಿ.ಕೆ ಸಂಗಮೇಶ್ವರ್‌ರವರು ೪ ಬಾರಿ ಆಯ್ಕೆಯಾಗಿದ್ದು, ಇವರಿಗೂ ಸಹ ಸಂಪುಟ ದರ್ಜೆ ಸಚಿವ ಸ್ಥಾನ ನೀಡಬೇಕೆಂದು ಆಗ್ರಹಿಸಲಾಗಿದೆ.

Wednesday, May 24, 2023

ಸಂಗಮೇಶ್ವರ್‌ಗೆ ಸಚಿವ ಸ್ಥಾನ ಖಚಿತ : ಬಿ.ವಿ ಶ್ರೀನಿವಾಸ್

ರಾಷ್ಟ್ರೀಯ ಯುವ  ಕಾಂಗ್ರೆಸ್ ಅಧ್ಯಕ್ಷ ಬಿ.ವಿ ಶ್ರೀನಿವಾಸ್,
    ಭದ್ರಾವತಿ, ಮೇ. ೨೪: ನಮ್ಮೂರಿನಲ್ಲಿ ಇದುವರೆಗೂ ಯಾರು ಸಚಿವರಾಗಿಲ್ಲ. ಶಾಸಕ ಬಿ.ಕೆ ಸಂಗಮೇಶ್ವರ್ ಸಚಿವರಾಗುವುದು ಖಚಿತ ಎಂದು ರಾಷ್ಟ್ರೀಯ ಯುವ ಕಾಂಗ್ರೆಸ್ ಅಧ್ಯಕ್ಷ ಬಿ.ವಿ ಶ್ರೀನಿವಾಸ್ ಹೇಳಿದರು.
    ಅವರು ಪತ್ರಿಕೆಗೆ ಜೊತೆ ಮಾತನಾಡಿ, ನಮ್ಮೂರಿನ ಮೇಲೆ ನನಗೆ ಅಭಿಮಾನವಿದೆ. ಶಾಸಕರು ಸಚಿವರಾಗಬೇಕೆಂಬ ಆಸೆ ನನಗೂ ಇದೆ. ಒಂದು ವೇಳೆ ವಿಳಂಬವಾಗಬಹುದು. ಆದರೆ ಅವರು ಸಚಿವರಾಗುವುದು ಖಚಿತ. ಇದರ ಬಗ್ಗೆ ಯಾರಿಗೂ ಆತಂಕಬೇಡ ಎಂದರು.
    ಸಂಗಮೇಶ್ವರ್‌ಗೆ ಸಚಿವ ಸ್ಥಾನ ಕೊಡಿಸುವ ನಿಟ್ಟಿನಲ್ಲಿ ಸಾಕಷ್ಟು ಪ್ರಯತ್ನಿಸುತ್ತಿದ್ದೇನೆ. ಈ ಸಂಬಂಧ ರಾಹುಲ್ ಗಾಂಧಿಯವರ ಗಮನ ಸೆಳೆಯುವುದಾಗಿ ಭರವಸೆ ವ್ಯಕ್ತಪಡಿಸಿದರು.
    ಶಾಸಕ ಬಿ.ಕೆ ಸಂಗಮೇಶ್ವರ್ ಮುಖ್ಯಮಂತ್ರಿ ಭೇಟಿ :
    ವಿಧಾನಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿದ ನಂತರ ಬೆಂಗಳೂರಿನಲ್ಲಿಯೇ ಉಳಿದುಕೊಂಡಿರುವ ಶಾಸಕ ಬಿ.ಕೆ ಸಂಗಮೇಶ್ವರ್ ಸಚಿವ ಸ್ಥಾನಕ್ಕಾಗಿ ತೀವ್ರ  ಕಸರತ್ತು ನಡೆಸುತ್ತಿದ್ದು, ಪಕ್ಷದ ಮೇಲೆ ನಾನಾ ರೀತಿಯಲ್ಲಿ ಒತ್ತಡ ಹಾಕುವ ತಂತ್ರಗಾರಿಕೆಗೆ ಮುಂದಾಗಿದ್ದಾರೆ.
ಈ ನಡುವೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಖುದ್ದಾಗಿ ಭೇಟಿ ಮಾಡಿ ಕ್ಷೇತ್ರದ ಜನತೆಗೆ ನೀಡಿರುವ ಭರವಸೆಯಂತೆ ನನಗೆ ಸಚಿವ ಸ್ಥಾನ ನೀಡುವಂತೆ ಒತ್ತಾಯಿಸಿದ್ದಾರೆ.


ಭದ್ರಾವತಿ ಶಾಸಕ ಬಿ.ಕೆ ಸಂಗಮೇಶ್ವರ್ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಖುದ್ದಾಗಿ ಭೇಟಿ ಮಾಡಿ ಅವರನ್ನು ಸನ್ಮಾನಿಸಿ ಅಭಿನಂದಿಸುವ ಮೂಲಕ ಕ್ಷೇತ್ರದ ಜನತೆಗೆ ನೀಡಿರುವ ಭರವಸೆಯಂತೆ ನನಗೆ ಸಚಿವ ಸ್ಥಾನ ನೀಡುವಂತೆ ಒತ್ತಾಯಿಸಿದ್ದಾರೆ.

ಸಂಗಮೇಶ್ವರ್‌ಗೆ ಸಚಿವ ಸ್ಥಾನಕ್ಕೆ ತಮಿಳು ಗೌಂಡರ್ ಸಮಾಜ ಆಗ್ರಹ

ನೀಡದ್ದಲ್ಲಿ 'ಭದ್ರಾವತಿ ಬಂದ್' : ಮಣಿ ಎಎನ್‌ಎಸ್

ಮಣಿ ಎಎನ್‌ಎಸ್
    ಭದ್ರಾವತಿ, ಮೇ. ೨೪: ಕ್ಷೇತ್ರದಲ್ಲಿ ತನ್ನದೇ ಆದ ಪ್ರಭಾವ ಮತ್ತು ಪ್ರತಿಷ್ಠೆ ಕಾಯ್ದುಕೊಳ್ಳುವ ಜೊತೆಗೆ ಪ್ರತಿಯೊಬ್ಬರ ಸಂಕಷ್ಟಗಳಿಗೆ ಸ್ಪಂದಿಸುವ ಮೂಲಕ ಜನರ ಮನಸ್ಸಿನಲ್ಲಿ ಉಳಿದುಕೊಂಡಿರುವ ಶಾಸಕ ಬಿ.ಕೆ ಸಂಗಮೇಶ್ವರ್‌ಗೆ ಈ ಬಾರಿ ಸಚಿವ ಸ್ಥಾನ ನೀಡಬೇಕೆಂದು ತಮಿಳು ಗೌಂಡರ್ ಸಮಾಜದ ತಾಲೂಕು ಅಧ್ಯಕ್ಷ, ನಗರಸಭಾ ಸದಸ್ಯ ಮಣಿ ಎಎನ್‌ಎಸ್ ಆಗ್ರಹಿಸಿದ್ದಾರೆ.
    ಬಿ.ಕೆ ಸಂಗಮೇಶ್ವರ್‌ರವರು ಕ್ಷೇತ್ರದ ಜನರಿಗೆ ಯಾವುದೇ ಸಮಸ್ಯೆ ಎದುರಾದರೂ ಸಹ ತಕ್ಷಣ ಸ್ಪಂದಿಸುವ ಮನೋಭಾವ  ಹೊಂದಿದ್ದಾರೆ. ಧರ್ಮ, ಜಾತಿ-ಭೇದಭಾವ ಮಾಡದೆ ಎಲ್ಲರನ್ನು ಸಮಾನವಾಗಿ ಕಾಣುತ್ತಿದ್ದಾರೆ. ಈ ಹಿನ್ನಲೆಯಲ್ಲಿ ಕ್ಷೇತ್ರದ ಮತದಾರರು ಇವರ ಬಳಿ ಧಾವಿಸುತ್ತಾರೆ. ಕ್ಷೇತ್ರದಲ್ಲಿ ೪ ಬಾರಿ ಶಾಸಕರಾಗಿರುವ ಏಕೈಕ ರಾಜಕಾರಣಿ ಸಂಗಮೇಶ್ವರ್ ಎಂಬುದು ಹೆಗ್ಗಳಿಕೆಯಾಗಿದೆ. ಅಲ್ಲದೆ ಇದುವರೆಗೂ ಕ್ಷೇತ್ರದಲ್ಲಿ ಯಾರು ಸಹ ಸಚಿವರಾಗಿಲ್ಲ. ಇವರಿಗೆ ಬಿಟ್ಟು ಬೇರೆಯವರಿಗೆ ಸಚಿವ ಸ್ಥಾನ ನೀಡುವುದು ಸರಿಯಲ್ಲ ಎಂದು  ಮನವರಿಕೆ ಮಾಡಿದ್ದಾರೆ.
    ಕ್ಷೇತ್ರದಲ್ಲಿ ಎಂಪಿಎಂ ಮತ್ತು ವಿಐಎಸ್‌ಎಲ್ ಎರಡೂ ಕಾರ್ಖಾನೆಗಳು ಪುನಶ್ಚೇತನಗೊಳ್ಳಬೇಕು. ನಿರುದ್ಯೋಗಿಗಳಿಗೆ ಉದ್ಯೋಗ ಲಭಿಸಬೇಕು. ಕ್ಷೇತ್ರದ ಆರ್ಥಿಕ ಮಟ್ಟ ಹೆಚ್ಚಾಗಬೇಕು. ಹಲವಾರು ಅಭಿವೃದ್ಧಿ ಕಾರ್ಯಗಳು ನಡೆಯಬೇಕಾಗಿದೆ. ಈ ಹಿನ್ನಲೆಯಲ್ಲಿ ಸಂಗಮೇಶ್ವರ್‌ಗೆ ಸಚಿವ ಸ್ಥಾನ ನೀಡಬೇಕೆಂದು ಆಗ್ರಹಿಸಿದ್ದಾರೆ.
    ಒಂದು ವೇಳೆ ಸಂಗಮೇಶ್ವರ್‌ಗೆ ಸಚಿವ ಸ್ಥಾನ ನೀಡದಿದ್ದಲ್ಲಿ ಮುಂದಿನ ದಿನಗಳಲ್ಲಿ  ತಮಿಳು ಗೌಂಡರ್ ಸಮಾಜದ ವತಿಯಿಂದ ಭದ್ರಾವತಿ ಬಂದ್ ನಡೆಸುವ ಮೂಲಕ ಕ್ಷೇತ್ರದಾದ್ಯಂತ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.  

Tuesday, May 23, 2023

ಶಿಮೂಲ್ ಮಾಜಿ ನಿರ್ದೇಶಕ ದಾದೇಗೌಡ ನಿಧನ

ದಾದೇಗೌಡ 
    ಭದ್ರಾವತಿ, ಮೇ. ೨೩ :  ತಾಲೂಕಿನ ಕಾಚಗೊಂಡನಹಳ್ಳಿ ನಿವಾಸಿ, ಶಿವಮೊಗ್ಗ, ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲಾ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ ಮಾಜಿ ನಿರ್ದೇಶಕ ದಾದೇಗೌಡ (೭೩) ನಿಧನ ಹೊಂದಿದರು.
     ಅನಾರೋಗ್ಯದಿಂದ ಶಿವಮೊಗ್ಗ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ನಿಧನರಾದರು. ಪತ್ನಿ ವಿಜಯಲಕ್ಷ್ಮೀ, ಶಿವಮೊಗ್ಗ, ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲಾ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ ಮಾಜಿ ಅಧ್ಯಕ್ಷ ಡಿ. ಆನಂದ್ ಸೇರಿದಂತೆ ಇಬ್ಬರು ಪುತ್ರರು, ಮೂವರು ಪುತ್ರಿಯರನ್ನು ಹೊಂದಿದ್ದರು.
    ದಾದೇಗೌಡ ಅವರು ಒಕ್ಕಲಿಗರ ಸಂಘದ ಮಹಾಪೋಷಕರು, ಶ್ರೀ ಕಾಲಭೈರವೇಶ್ವರ ಪತ್ತಿನ ಸಹಕಾರ ಸಂಘದ ಹಿರಿಯ ಸದಸ್ಯರಾಗಿದ್ದರು. ಮಂಗಳವಾರ ಕಾಚಗೊಂಡನಹಳ್ಳಿಯಲ್ಲಿ ಇವರ ಅಂತ್ಯಕ್ರಿಯೆ ನೆರವೇರಿತು.
    ಜೆಡಿಎಸ್ ಮುಖಂಡರಾದ ಶಾರದಾ ಅಪ್ಪಾಜಿ, ಎಂ.ಎ ಅಜಿತ್, ಒಕ್ಕಲಿಗರ ಸಂಘದ ಅಧ್ಯಕ್ಷ ಎ.ಟಿ.ರವಿ, ಬಿ.ಎಸ್ ಮಲ್ಲೇಶ್, ವಿವಿಧ ರಾಜಕೀಯ ಪಕ್ಷಗಳ, ಸಂಘ-ಸಂಸ್ಥೆಗಳ ಪ್ರಮುಖರು, ಶಿವಮೊಗ್ಗ, ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲಾ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ ಅಧ್ಯಕ್ಷರು, ನಿರ್ದೇಶಕರು ಸಂತಾಪ ಸೂಚಿಸಿದ್ದಾರೆ.

Monday, May 22, 2023

ನಗರಸಭೆ ವ್ಯಾಪ್ತಿಯಲ್ಲಿ ಮೂಲ ಸೌಕರ್ಯಗಳ ಉಲ್ಬಣ : ತುರ್ತಾಗಿ ಸಾಮಾನ್ಯ ಸಭೆ ನಡೆಯಲಿ

ಭದ್ರಾವತಿ ನಗರಸಭೆ 
    ಭದ್ರಾವತಿ, ಮೇ. ೨೨ : ವಿಧಾನಸಭಾ ಚುನಾವಣೆ ಘೋಷಣೆಯಾದ ಹಿನ್ನಲೆಯಲ್ಲಿ ಕಳೆದ ೨ ತಿಂಗಳಿನಿಂದ ನಗರಸಭೆ ಸಾಮಾನ್ಯ ಸಭೆ ನಡೆದಿಲ್ಲ. ಇದರಿಂದಾಗಿ ವಾರ್ಡ್‌ಗಳಲ್ಲಿ ಸಮಸ್ಯೆಗಳು ಉಲ್ಬಣಗೊಂಡಿವೆ.
    ೩೫ ವಾರ್ಡ್‌ಗಳನ್ನು ಒಳಗೊಂಡಿರುವ ನಗರಸಭೆಯಲ್ಲಿ ಮೂಲ ಸೌಕರ್ಯಗಳನ್ನು ಸಮರ್ಪಕವಾಗಿ ಕಲ್ಪಿಸಿಕೊಡಲು ಸಾಧ್ಯವಾಗುತ್ತಿಲ್ಲ. ಪ್ರತಿ ಬಾರಿ ಸಾಮಾನ್ಯ ಸಭೆಯಲ್ಲಿ ಸದಸ್ಯರು ಕುಡಿಯುವ ನೀರು, ರಸ್ತೆ, ತ್ಯಾಜ್ಯ ವಿಲೇವಾರಿ ಸೇರಿದಂತೆ ಹಲವು ಮೂಲ ಸೌಕರ್ಯಗಳನ್ನು ಸಮರ್ಪಕವಾಗಿ ಕೈಗೊಳ್ಳುವಂತೆ ಆಗ್ರಹಿಸಿಕೊಂಡು ಬರುತ್ತಿದ್ದಾರೆ.
    ಮಾ.೧೮ರಂದು ನಡೆದ ಸಾಮಾನ್ಯ ಸಭೆಯಲ್ಲಿ ಬಹುತೇಕ ಸದಸ್ಯರು ಕುಡಿಯುವ ನೀರಿನ ಸಮಸ್ಯೆ ಬಗೆಹರಿಸುವಂತೆ ಒಕ್ಕೊರಲಿನಿಂದ ಆಗ್ರಹಿಸಿದ್ದರು. ಪ್ರಸ್ತುತ ೨ ತಿಂಗಳು ಮುಕ್ತಾಯಗೊಂಡಿದ್ದು, ಈ ನಡುವೆ ಇದೀಗ ಮತ್ತಷ್ಟು  ಸಮಸ್ಯೆಗಳು ಎದುರಾಗುತ್ತಿವೆ. ಬಹುತೇಕ ಚರಂಡಿ, ರಸ್ತೆಗಳು ಹಾಳಾಗಿದ್ದು,  ಬೇಸಿಗೆ ಮುಕ್ತಾಯಗೊಂಡು ಮಳೆಗಾಲ ಎದುರಾಗುತ್ತಿರುವ ಹಿನ್ನಲೆಯಲ್ಲಿ ತಕ್ಷಣ ಕ್ರಮ ಕೈಗೊಳ್ಳಬೇಕಾಗಿದೆ. ವಿಧಾನಸಭಾ ಚುನಾವಣೆ ಎಲ್ಲಾ ಪ್ರಕ್ರಿಯೆಗಳು ಇದೀಗ ಮುಕ್ತಾಯಗೊಂಡಿದ್ದು, ವಿಳಂಬ ಮಾಡದೆ ತಕ್ಷಣ ಸಾಮಾನ್ಯಸಭೆ ನಡೆಸಬೇಕಾಗಿದೆ.
    ರಾಜ್ಯದಲ್ಲಿ ಹೊಸ ಸರ್ಕಾರ ಅಸ್ತಿತ್ವಕ್ಕೆ ಬಂದಿದ್ದು, ನೆನೆಗುದಿಗೆ ಬಿದ್ದಿರುವ ಕಾಮಗಾರಿಗಳಿಗೆ ಮರು ಚಾಲನೆ ನೀಡಬೇಕಾಗಿದೆ. ಇದರ ಜೊತೆಗೆ ಹೊಸ ಕಾಮಗಾರಿಗಳಿಗೆ ಸಂಬಂಧಿಸಿದಂತೆ ರೂಪುರೇಷೆ ಸಿದ್ದಪಡಿಸಿಕೊಳ್ಳಬೇಕಾಗಿದೆ. ಈ ಹಿನ್ನಲೆಯಲ್ಲಿ ನಗರಸಭೆ ಆಡಳಿತ ಗಮನ ಹರಿಸಬೇಕಾಗಿದೆ.

ನೆಲಕ್ಕುರುಳುವ ಸ್ಥಿತಿಯಲ್ಲಿ ತೆಂಗಿನ ಮರ : ಅವಘಡ ಸಂಭವಿಸುವ ಮೊದಲು ಎಚ್ಚೆತ್ತುಕೊಳ್ಳಿ

ಭದ್ರಾವತಿ ಹಳೇನಗರದ ಬಸವೇಶ್ವರ ವೃತ್ತ ಮಾರುಕಟ್ಟೆ ಸಮೀಪದ ರಸ್ತೆಯೊಂದರಲ್ಲಿ ಬೃಹತ್ ಗಾತ್ರದ ತೆಂಗಿನ ಮರ ನೆಲಕ್ಕುರುಳುವ ಸ್ಥಿತಿಯಲ್ಲಿದ್ದು, ಅವಘಡ ಸಂಭವಿಸುವ ಮೊದಲು ಎಚ್ಚೆತ್ತುಕೊಳ್ಳಬೇಕಾಗಿದೆ.
    ಭದ್ರಾವತಿ, ಮೇ. ೨೨: ಹಳೇನಗರದ ಬಸವೇಶ್ವರ ವೃತ್ತ ಮಾರುಕಟ್ಟೆ ಸಮೀಪದ ರಸ್ತೆಯೊಂದರಲ್ಲಿ ಬೃಹತ್ ಗಾತ್ರದ ತೆಂಗಿನ ಮರ ನೆಲಕ್ಕುರುಳುವ ಸ್ಥಿತಿಯಲ್ಲಿದ್ದು, ಅವಘಡ ಸಂಭವಿಸುವ ಮೊದಲು ಎಚ್ಚೆತ್ತುಕೊಳ್ಳಬೇಕಾಗಿದೆ.
    ಮಾರುಕಟ್ಟೆಯಿಂದ ನ್ಯಾಯಾಲಯದ ಮುಂಭಾಗದ ರಸ್ತೆಗೆ ಸಂಪರ್ಕಗೊಂಡಿರುವ ಕಿರು ರಸ್ತೆ ಇದಾಗಿದ್ದು, ಈ ರಸ್ತೆಯಲ್ಲಿ ಪಾದಚಾರಿಗಳು ಹೆಚ್ಚಾಗಿ ಸಂಚರಿಸುತ್ತಾರೆ. ಈ ರಸ್ತೆಯಲ್ಲಿ ತೆಂಗಿನ ಮರ ಬಹುತೇಕ ಒಂದೆಡೆ ಬಾಗಿದ್ದು, ಮಳೆ ಬಿರುಗಾಳಿಗೆ ನೆಲಕ್ಕುರುಳುವ ಸಾಧ್ಯತೆ ಹೆಚ್ಚಾಗಿದೆ.
    ಒಂದು ವೇಳೆ ತೆಂಗಿನ ಮರ ನೆಲಕ್ಕುರುಳಿದ್ದಲ್ಲಿ ಕಟ್ಟಡಕ್ಕೆ ಹಾನಿ ಉಂಟಾಗಲಿದ್ದು, ಅಲ್ಲದೆ ಕೆಳ ಭಾಗದಲ್ಲಿರುವ ವಿದ್ಯುತ್ ಕಂಬ ಮುರಿದು ಬಿದ್ದು, ವಿದ್ಯುತ್ ತಂತಿ ಕತ್ತರಿಸಿ ಹೋಗಲಿದೆ. ಅಲ್ಲದೆ ಪ್ರಾಣಹಾನಿಯಂತಹ ದುರ್ಘಟನೆ ಸಹ ಸಂಭವಿಸುವ ಸಾಧ್ಯತೆ ಇದ್ದು, ಈ ಹಿನ್ನಲೆಯಲ್ಲಿ ಸಂಬಂಧಪಟ್ಟವರು ಗಮನ ಹರಿಸಬೇಕಾಗಿದೆ.