ಶನಿವಾರ, ಮೇ 27, 2023

ಕೈಗಾರಿಕಾ ಕ್ಷೇತ್ರಕ್ಕೆ ಮಂತ್ರಿಗಿರಿ ಸ್ಥಾನದ ಶಾಪ ವಿಮೋಚನೆ ಯಾವಾಗ..?

    * ಅನಂತಕುಮಾರ್
    ಭದ್ರಾವತಿ, ಮೇ. ೨೭ : ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಹಾಗು ಮೈಸೂರು ಕಾಗದ ಕಾರ್ಖಾನೆ ಸ್ಥಾಪನೆಯೊಂದಿಗೆ ಸುಮಾರು ೮ ದಶಕಗಳ ಹಿಂದೆಯೇ ವಿಶ್ವದ ಭೂಪಟದಲ್ಲಿ ಕೈಗಾರಿಕಾ ನಗರ ಎಂಬ ಹೆಗ್ಗಳಿಕೆಯಿಂದ ಗುರುತಿಸಿಕೊಂಡಿದ್ದ ಕ್ಷೇತ್ರಕ್ಕೆ ಇದುವರೆಗೂ ಮಂತ್ರಿ ಭಾಗ್ಯ ಒದಗಿ ಬಂದಿಲ್ಲ.
    ರಾಜಕೀಯವಾಗಿ ಕ್ಷೇತ್ರವನ್ನು ಆರಂಭದಿಂದಲೂ ಕಡೆಗಣಿಸಿಕೊಂಡು ಬರಲಾಗುತ್ತಿದ್ದು, ಇದು ಇಂದಿಗೂ ಮುಂದುವರೆದಿದೆ. ಪ್ರಸ್ತುತ ಕಾಲಘಟ್ಟದಲ್ಲಿ ಕ್ಷೇತ್ರ ಬೆಂಗಳೂರು ಮಹಾನಗರದಂತೆ ಬೆಳವಣಿಗೆ ಹೊಂದಬೇಕಾಗಿತ್ತು. ಆದರೆ ಈ ಕ್ಷೇತ್ರವನ್ನು ಪ್ರತಿನಿಧಿಸಿರುವ ಜನಪ್ರತಿನಿಧಿಗಳಿಗೆ ರಾಜಕೀಯವಾಗಿ ಸೂಕ್ತ ಸ್ಥಾನಮಾನಗಳು ಲಭಿಸದಿರುವುದು ವಿಪರ್ಯಾಸದ ಸಂಗತಿಯಾಗಿದೆ.  
    ೧೯೫೭ರಲ್ಲಿ ಕಾಂಗ್ರೆಸ್ ಪಕ್ಷದಿಂದ ಡಿ.ಟಿ ಸೀತಾರಾಮರಾವ್, ೧೯೬೨ರಲ್ಲಿ ಕಾಂಗ್ರೆಸ್ ಪಕ್ಷದಿಂದ ಟಿ.ಡಿ ದೇವೇಂದ್ರಪ್ಪ, ೧೯೬೭ರಲ್ಲಿ ಪ್ರಜಾ ಸೋಷಿಯಲಿಸ್ಟ್ ಪಾರ್ಟಿ(ಪಿಎಸ್‌ಪಿ)ಯಿಂದ ಅಬ್ದುಲ್ ಖುದ್ದೂಸ್ ಅನ್ವರ್, ೧೯೭೨ರಲ್ಲಿ ಕಾಂಗ್ರೆಸ್ ಪಕ್ಷದಿಂದ ಅಬ್ದುಲ್ ಖುದ್ದೂಸ್ ಅನ್ವರ್, ೧೯೭೮ರಲ್ಲಿ ಕಾಂಗ್ರೆಸ್(ಐ) ಪಕ್ಷದಿಂದ ಜಿ. ರಾಜಶೇಖರ್, ೧೯೮೩ರಲ್ಲಿ ಜೆಎನ್‌ಪಿ ಪಕ್ಷದಿಂದ ಸಾಲೇರ ಎಸ್ ಸಿದ್ದಪ್ಪ, ೧೯೮೫ರಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸಾಲೇರ ಎಸ್ ಸಿದ್ದಪ್ಪ, ೧೯೮೯ರಲ್ಲಿ ಕಾಂಗ್ರೆಸ್ ಪಕ್ಷದಿಂದ ಇಸಾಮಿಯಾ, ೧೯೯೪ರಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಎಂ.ಜೆ ಅಪ್ಪಾಜಿ, ೧೯೯೯ರಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಎಂ.ಜೆ ಅಪ್ಪಾಜಿ, ೨೦೦೪ರಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಬಿ.ಕೆ ಸಂಗಮೇಶ್ವರ್, ೨೦೦೮ರಲ್ಲಿ ಕಾಂಗ್ರೆಸ್ ಪಕ್ಷದಿಂದ ಬಿ.ಕೆ ಸಂಗಮೇಶ್ವರ್, ೨೦೧೩ರಲ್ಲಿ ಜೆಡಿಎಸ್ ಪಕ್ಷದಿಂದ ಎಂ.ಜೆ ಅಪ್ಪಾಜಿ, ೨೦೧೮ರಲ್ಲಿ ಕಾಂಗ್ರೆಸ್ ಪಕ್ಷದಿಂದ ಬಿ.ಕೆ ಸಂಗಮೇಶ್ವರ್ ಮತ್ತು ೨೦೨೩ರಲ್ಲಿ ಕಾಂಗ್ರೆಸ್ ಪಕ್ಷದಿಂದ ಬಿ.ಕೆ ಸಂಗಮೇಶ್ವರ್ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಈ ಪೈಕಿ ಅಬ್ದುಲ್ ಖುದ್ದೂಸ್ ಅನ್ವರ್ ಮತ್ತು ಸಾಲೇರ ಎಸ್ ಸಿದ್ದಪ್ಪ ತಲಾ ಎರಡು ಬಾರಿ, ಎಂ.ಜೆ ಅಪ್ಪಾಜಿ ೩ ಬಾರಿ ಹಾಗು ಬಿ.ಕೆ ಸಂಗಮೇಶ್ವರ್ ೪ ಬಾರಿ ಶಾಸಕರಾಗಿದ್ದಾರೆ. ಆದರೆ ಇದುವರೆಗೂ ಯಾರಿಗೂ ಮಂತ್ರಿಗಿರಿ ಸ್ಥಾನ ಲಭಿಸಿಲ್ಲ.
    ೪ ಬಾರಿ ಗೆದ್ದರೂ ಮಂತ್ರಿ ಭಾಗ್ಯ ಇಲ್ಲ :
    ರಾಜ್ಯದ ರಾಜಕೀಯದ ಇತಿಹಾಸದಲ್ಲಿ ಒಂದು ಅಥವಾ ಎರಡು ಬಾರಿ ಗೆದ್ದವರೇ ಮುಖ್ಯಮಂತ್ರಿ, ಮಂತ್ರಿಯಾಗಿರುವುದು ಕಾಣಬಹುದಾಗಿದೆ. ಸಂಗಮೇಶ್ವರ್ ೪ ಬಾರಿ ಗೆದ್ದರೂ ಮಂತ್ರಿಯಾಗದಿರುವುದು ವಿಪರ್ಯಾಸದ ಸಂಗತಿಯಾಗಿದೆ. ಸಂಗಮೇಶ್ವರ್ ಬಿಟ್ಟು ಕ್ಷೇತ್ರವನ್ನು ಪ್ರತಿನಿಧಿಸಿರುವ ಮಾಜಿ ಶಾಸಕರು ಯಾರು ಸಹ ಬದುಕಿಲ್ಲ. ಕಣ್ಮರೆಯಾಗಿ ಇತಿಹಾಸ ಪುಟಗಳಲ್ಲಿ ಸೇರ್ಪಡೆಗೊಂಡಿದ್ದಾರೆ. ಕ್ಷೇತ್ರದ ಜನರು ಈ ಬಾರಿ ಮಂತ್ರಿ ಸ್ಥಾನ ಲಭಿಸುವ ಕನಸು ಕಂಡಿದ್ದರು. ಆದರೆ ಇದೀಗ ಕನಸು ಕನಸಾಗಿಯೇ ಉಳಿದು ಬಿಟ್ಟಿದೆ.
    ನಿಗಮ ಮಂಡಳಿಗೆ ಸೀಮಿತ :
    ಕ್ಷೇತ್ರಕ್ಕೆ ಸಚಿವ ಸ್ಥಾನ ಲಭಿಸುವ ಬದಲು ನಿಗಮ ಮಂಡಳಿ ಸ್ಥಾನ ಲಭಿಸಿದ್ದು, ಅದರಲ್ಲೂ ವಿಶೇಷತೆ ಎಂದರೆ ಶಾಸಕರಾಗಿ ಆಯ್ಕೆಯಾಗದವರಿಗೆ ನಿಗಮ ಮಂಡಳಿ ಸ್ಥಾನ ಲಭಿಸಿದೆ. ಈ ಹಿಂದೆ ಯಡಿಯೂರಪ್ಪ ನೇತೃತ್ವದ ಸರ್ಕಾರದಲ್ಲಿ ಬಿಜೆಪಿ ತಾಲೂಕು ಮಂಡಲ ಮಾಜಿ ಅಧ್ಯಕ್ಷೆ ಸಿ. ಮಂಜುಳ ಅವರನ್ನು ಮಹಿಳಾ ಆಯೋಗದ ಅಧ್ಯಕ್ಷರನ್ನಾಗಿ ನೇಮಕಗೊಳಿಸಲಾಗಿತ್ತು. ನಂತರ ಸಿದ್ದರಾಮಯ್ಯ ನೇತೃತ್ವದ ಸರ್ಕಾರದಲ್ಲಿ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ ಬಲ್ಕೀಶ್ ಬಾನು ಅವರನ್ನು ಕರ್ನಾಟಕ ರಾಜ್ಯ ಅಲ್ಪ ಸಂಖ್ಯಾತರ ಆಯೋಗದ ಅಧ್ಯಕ್ಷರನ್ನಾಗಿ ನೇಮಕಗೊಳಿಸಲಾಗಿತ್ತು. ೨೦೧೯ರಲ್ಲಿ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲಿ ಶಾಸಕ ಬಿ.ಕೆ ಸಂಗಮೇಶ್ವರ್‌ರವರನ್ನು ಕೆಆರ್‌ಐಡಿಎಲ್ ಅಧ್ಯಕ್ಷರಾಗಿ ನೇಮಕಗೊಳಿಸಲಾಗಿತ್ತು. ಸುಮಾರು ೭ ತಿಂಗಳು ಸಂಗಮೇಶ್ವರ್ ಅಧ್ಯಕ್ಷರಾಗಿದ್ದರು.
    ಪಕ್ಷದಲ್ಲಿ ಉನ್ನತ ಸ್ಥಾನ :
    ಮೂಲತಃ ಕ್ಷೇತ್ರದವರಾದ ಬಿ.ವಿ ಶ್ರೀನಿವಾಸ್ ರಾಷ್ಟ್ರೀಯ ಯುವ ಕಾಂಗ್ರೆಸ್ ಅಧ್ಯಕ್ಷರಾಗಿದ್ದು, ಇದೆ ರೀತಿ ಮಹಮದ್ ನಲಪಾಡ್ ಕರ್ನಾಟಕ ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷರಾಗಿದ್ದಾರೆ. ಪಕ್ಷದಲ್ಲಿ ಮಾತ್ರ ಉನ್ನತ ಸ್ಥಾನ ಲಭಿಸಿದ್ದು, ಆದರೆ ಸರ್ಕಾರದಲ್ಲಿ ಇದುವರೆಗೂ ಮಂತ್ರಿಗಿರಿ ಸ್ಥಾನ ಲಭಿಸದಿರುವುದು ವಿಪರ್ಯಾಸದ ಸಂಗತಿಯಾಗಿದೆ.  ಮಂತ್ರಿಗಿರಿ ಸ್ಥಾನ ಎಂಬುದು ಒಂದು ರೀತಿ ಶಾಪದ ಕಗ್ಗಂಟಿನಲ್ಲಿಯೇ ಸಿಲುಕಿಕೊಂಡಿದೆಯೇ ಎಂಬ ಭಾವನೆ ಇದೀಗ ಕ್ಷೇತ್ರದ ಜನತೆಯಲ್ಲಿ ಮೂಡಿದೆ.

ಮೇ.೩೧ರಂದು ಶಾಲಾ ಪ್ರಾರಂಭೋತ್ಸವಕ್ಕೆ ಹಬ್ಬದ ರೀತಿಯಲ್ಲಿ ಸಕಲ ಸಿದ್ದತೆ

ಪತ್ರಿಕಾಗೋಷ್ಠಿಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ ನಾಗೇಂದ್ರಪ್ಪ ಮಾಹಿತಿ

ಭದ್ರಾವತಿಯಲ್ಲಿ ಶನಿವಾರ ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ ನಾಗೇಂದ್ರಪ್ಪ ಶಿಕ್ಷಣ ಇಲಾಖೆಯ ಪ್ರಸಕ್ತ ಶೈಕ್ಷಣಿಕ ಸಾಲಿನ ಮಾಗದರ್ಶಿ ಬಿಡುಗಡೆಗೊಳಿಸಿದರು. 
    ಭದ್ರಾವತಿ, ಮೇ. ೨೭ : ತಾಲೂಕಿನ ಸರ್ಕಾರಿ ಶಾಲೆಗಳಲ್ಲಿ ಈ ಬಾರಿ ಪ್ರಸಕ್ತ ಶೈಕ್ಷಣಿಕ ಸಾಲಿನ ಶಾಲಾ ಪ್ರಾರಂಭೋತ್ಸವ ಮೇ.೩೧ರಂದು ಹಬ್ಬದ ರೀತಿಯಲ್ಲಿ ಆಚರಿಸಲು ಸಕಲ ಸಿದ್ದತೆಗಳನ್ನು ಕೈಗೊಳ್ಳಲಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ ನಾಗೇಂದ್ರಪ್ಪ ಹೇಳಿದರು.
    ಅವರು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಶಿಕ್ಷಣ ಇಲಾಖೆಯ ಪ್ರಸಕ್ತ ಶೈಕ್ಷಣಿಕ ಸಾಲಿನ ಮಾಗದರ್ಶಿ ಬಿಡುಗಡೆಗೊಳಿಸಿ ಮಾತನಾಡಿದರು. ಮೇ.೨೯ ಮತ್ತು ೩೦ ಎರಡು ದಿನ ಶಾಲಾ ಕೊಠಡಿ, ಆವರಣದ ಪರಿಸರ ಸ್ವಚ್ಛತೆ, ಕುಡಿಯುವ ನೀರು ಸೇರಿದಂತೆ ಮೂಲ ಸೌಕರ್ಯಗಳ ವ್ಯವಸ್ಥೆ ಕೈಗೊಳ್ಳುವುದು ಹಾಗು ಮಕ್ಕಳಿಗೆ ಪಠ್ಯ ಪುಸ್ತಕ, ಸಮವಸ್ತ್ರ ಸೇರಿದಂತೆ ಸರ್ಕಾರದ ಉಚಿತ ಸೌಲಭ್ಯಗಳ ವಿತರಣೆ ನಡೆಯಲಿದೆ ಎಂದರು.  
    ಮೇ.೩೧ರಂದು ಪ್ರಾರಂಭೋತ್ಸವ ನಡೆಯಲಿದ್ದು, ಆಯಾ ಶಾಲೆಗಳ ಶಾಲಾಭಿವೃದ್ಧಿ ಸಮಿತಿ ವತಿಯಿಂದ ಮಕ್ಕಳನ್ನು ಆಕರ್ಷಿಸಲು ತಳಿರು ತೋರಣಗಳಿಂದ ಅಲಂಕರಿಸಿ ಹಬ್ಬದ ರೀತಿಯ ವಾತಾವರಣ ರೂಪಿಸಲಾಗುವುದು. ಈಗಾಗಲೇ ಪೋಷಕರು, ಶಾಲಾಭಿವೃದ್ಧಿ ಸಮಿತಿ ಮತ್ತು ಶಿಕ್ಷಕರ ಪೂರ್ವಭಾವಿ ಸಭೆ ನಡೆಸಲಾಗಿದೆ. ಅಂದು ನಗರ ಭಾಗದಲ್ಲಿ ಶಾಸಕ ಬಿ.ಕೆ ಸಂಗಮೇಶ್ವರ್ ನ್ಯೂಟೌನ್ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನಲ್ಲಿ (ಪ್ರೌಢಶಾಲಾ ವಿಭಾಗ) ಬೆಳಿಗ್ಗೆ ೧೦.೩೦ಕ್ಕೆ ಪ್ರಾರಂಭೋತ್ಸವಕ್ಕೆ ಚಾಲನೆ ನೀಡಲಿದ್ದಾರೆ ಎಂದರು.
    ತಾಲೂಕಿನ ಸರ್ಕಾರಿ ಶಾಲೆಗಳಲ್ಲಿ ಆ.೩, ೨೦೨೨ರ ಮಾಹಿತಿಯಂತೆ ೧೯,೧೧೫ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು, ಗ್ರಾಮೀಣ ಭಾಗದಲ್ಲಿ ೯೭ ಕಿರಿಯ ಪ್ರಾಥಮಿಕ, ೧೧೨ ಹಿರಿಯ ಪ್ರಾಥಮಿಕ, ೧೬ ಪ್ರೌಢ ಶಾಲೆಗಳು, ಒಟ್ಟು ೨೨೫ ಹಾಗು ನಗರ ಭಾಗದಲ್ಲಿ ೧೮ ಕಿರಿಯ ಪ್ರಾಥಮಿಕ, ೩೬ ಹಿರಿಯ ಪ್ರಾಥಮಿಕ ಮತ್ತು ೮ ಪ್ರೌಢಶಾಲೆಗಳು, ಒಟ್ಟು ೬೨ ಸೇರಿದಂತೆ ತಾಲೂಕಿನಲ್ಲಿ ೨೮೭ ಸರ್ಕಾರಿ ಶಾಲೆಗಳಿವೆ. ೫೬ ಪ್ರಾಥಮಿಕ ಹಾಗು ೧೬ ಪ್ರೌಢಶಾಲೆ ಅತಿಥಿ ಶಿಕ್ಷಕರನ್ನು ನೇಮಕಗೊಳಿಸಲಾಗಿದೆ. ತಾಲೂಕಿನಲ್ಲಿ ಪ್ರಾಥಮಿಕ ಶಾಲಾ ವಿಭಾಗದಲ್ಲಿ ಒಟ್ಟು ೧೦೬೭ ಹುದ್ದೆಗಳಿದ್ದು, ಈ ಪೈಕಿ ೩೦ ಮುಖ್ಯ ಶಿಕ್ಷಕರು, ೧೩೧ ಸಹಾಯಕ ಶಿಕ್ಷಕರು ಹಾಗು ೧೧ ದೈಹಿಕ ಶಿಕ್ಷಣ ಶಿಕ್ಷಕರ ಹುದ್ದೆಗಳು ಸೇರಿದಂತೆ ಒಟ್ಟು ೧೭೨ ಹುದ್ದೆಗಳು ಖಾಲಿ ಉಳಿದಿವೆ. ಇದೆ ರೀತಿ ಪ್ರೌಢಶಾಲಾ ವಿಭಾಗದಲ್ಲಿ ಒಟ್ಟು ೨೫೭ ಹುದ್ದೆಗಳಿದ್ದು, ಈ ಪೈಕಿ ೨೨೭ ಹುದ್ದೆಗಳು ಭರ್ತಿಯಾಗಿ ೩೦ ಹುದ್ದೆಗಳು ಖಾಲಿ ಉಳಿದಿವೆ ಎಂದರು.
    ಗುಣಮಟ್ಟದ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದ್ದು, ಮಕ್ಕಳ ಸಂಖ್ಯೆ ಹೆಚ್ಚಿಸಲು ಆಯಾ ಶಾಲೆಗಳ ವ್ಯಾಪ್ತಿಯಲ್ಲಿ ಇಲಾಖೆಯ ಸಿಬ್ಬಂದಿಗಳು ಪೋಷಕರನ್ನು ಬಳಸಿಕೊಂಡು ಶಾಲಾ ದಾಖಲಾತಿ ಅಂದೋಲನ ಕೈಗೊಳ್ಳಲಾಗುತ್ತಿದೆ. ಅಲ್ಲದೆ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಪಡೆಯುವ ನಿಟ್ಟಿನಲ್ಲಿ ಈ ಬಾರಿ ಹೆಚ್ಚಿನ ಗಮನ ಹರಿಸಲಾಗುವುದು ಎಂದರು.
    ಪತ್ರಿಕಾಗೋಷ್ಠಿಯಲ್ಲಿ ದೈಹಿಕ ಶಿಕ್ಷಣ ಪರಿವೀಕ್ಷಕ ಪ್ರಭು, ಶಿಕ್ಷಣ ಸಂಯೋಜಕ ರವಿಕುಮಾರ್, ಸಿಆರ್‌ಪಿ ಸಿ. ಚನ್ನಪ್ಪ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಶುಕ್ರವಾರ, ಮೇ 26, 2023

ಶಾಸಕ ಸಂಗಮೇಶ್ವರ್‌ಗೆ ಕೈ ತಪ್ಪಿದ ಸಚಿವ ಸ್ಥಾನ : ಕ್ಷೇತ್ರದ ಜನತೆಯಲ್ಲಿ ನಿರಾಸೆ

    ಭದ್ರಾವತಿ, ಮೇ. ೨೬ : ಕ್ಷೇತ್ರದ ಶಾಸಕರಾಗಿ ೪ನೇ ಬಾರಿಗೆ ಆಯ್ಕೆಯಾದರೂ ಸಹ ಬಿ.ಕೆ ಸಂಗಮೇಶ್ವರ್‌ಗೆ ಈ ಬಾರಿ ಸಹ ಸಚಿವ ಸ್ಥಾನ ಕೈ ತಪ್ಪಿದ್ದು, ಕ್ಷೇತ್ರದ ಜನತೆಯಲ್ಲಿ ನಿರಾಸೆಯನ್ನುಂಟು ಮಾಡಿದೆ.
    ಸರ್ಕಾರ ರಚನೆ ಸಂದರ್ಭದಲ್ಲಿಯೇ ಸಚಿವ ಸ್ಥಾನ ಸಿಗುವ ವಿಶ್ವಾಸ ಹೊಂದಲಾಗಿತ್ತು. ಇದೀಗ ಸಂಪುಟ ವಿಸ್ತರಣೆ ಸಂದರ್ಭದಲ್ಲೂ ಸಚಿವ ಸ್ಥಾನದಿಂದ ವಂಚಿತರಾಗಿರುವುದು ವಿಪರ್ಯಾಸದ ಸಂಗತಿಯಾಗಿದೆ. ಚುನಾವಣೆಯಲ್ಲಿ ಗೆಲುವು ಸಾಧಿಸಿದ ನಂತರ ಬೆಂಗಳೂರಿನಲ್ಲಿಯೇ ಉಳಿದುಕೊಂಡು ಸಚಿವ ಸ್ಥಾನಕ್ಕಾಗಿ ತೀವ್ರ ಪೈಪೋಟಿಗೆ ಮುಂದಾಗಿದ್ದ ಬಿ.ಕೆ ಸಂಗಮೇಶ್ವರ್ ಇದೀಗ ಬರಿ ಕೈಯಲ್ಲಿ ಹಿಂದಿರುಗುವಂತಾಗಿದೆ.
    ಈ ಹಿಂದೆ ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದಲ್ಲೂ  ಸಹ ಸಚಿವ ಸ್ಥಾನಕ್ಕಾಗಿ ಸಂಗಮೇಶ್ವರ್ ತೀವ್ರ ಪೈಪೋಟಿ ನಡೆಸಿದ್ದರು. ಕೊನೆ ಹಂತದಲ್ಲಿ  ಇವರನ್ನು ನಿಗಮ ಮಂಡಳಿಗೆ ಅಧ್ಯಕ್ಷರನ್ನಾಗಿ ನೇಮಕಗೊಳಿಸಲಾಗಿತ್ತು. ಇದೀಗ ೪ನೇ ಬಾರಿಗೆ ಗೆಲುವು ಸಾಧಿಸಿದ್ದು, ಅಲ್ಲದೆ ಪಕ್ಷದ ವರಿಷ್ಠರು ಈ ಬಾರಿ ಗೆಲುವು ಸಾಧಿಸಿದ್ದಲ್ಲಿ ಸಚಿವರಾಗುವುದು ಖಚಿತ ಎಂದು ಬಹಿರಂಗ ಸಭೆಯಲ್ಲಿ ಘೋಷಿಸಿದ್ದರು. ಆದರೆ ಇದೀಗ ಸಚಿವ ಸ್ಥಾನದಿಂದ ವಂಚಿತರಾಗಿರುವುದು ಪಕ್ಷದ ಸ್ಥಳೀಯ ಮುಖಂಡರು, ಕಾರ್ಯಕರ್ತರು, ಅಭಿಮಾನಿಗಳು ಸೇರಿದಂತೆ ಕ್ಷೇತ್ರದ ಜನತೆಯಲ್ಲಿ ನಿರಾಸೆಯನ್ನುಂಟು ಮಾಡಿದೆ.
    ಸಂಗಮೇಶ್ವರ್‌ಗೆ ಯಾವುದೇ ರಾಜಕೀಯ ಹಿನ್ನಲೆಯೂ ಇಲ್ಲ, ಗುರುಗಳು ಸಹ ಯಾರು ಇಲ್ಲ. ಅನಿರೀಕ್ಷಿತವಾಗಿ ರಾಜಕೀಯಕ್ಕೆ ಬಂದವರು. ಸ್ವಂತ ಬಲದ ಮೇಲೆ ರಾಜಕೀಯ ಅಸ್ತಿತ್ವ ಕಂಡುಕೊಂಡವರು. ತಮ್ಮದೇ ವರ್ಚಸ್ಸನ್ನು ಉಳಿಸಿಕೊಳ್ಳುವ ಜೊತೆಗೆ ಪಕ್ಷ ನಿಷ್ಠೆಯಲ್ಲಿ ಮುಂದುವರೆದವರು. ಕಾಂಗ್ರೆಸ್ ಪಕ್ಷದ ಶಾಸಕರಲ್ಲಿ ಜಿಲ್ಲೆಯಲ್ಲಿಯೇ ಹಿರಿಯರಾಗಿದ್ದು, ೪ ಬಾರಿ ಗೆದ್ದರೂ ಸಹ ಸೂಕ್ತ ಸ್ಥಾನಮಾನ ಸಿಗದಿರುವುದು ನಿಜಕ್ಕೂ ವಿಷಾದನೀಯ ಸಂಗತಿಯಾಗಿದೆ.
    ಸಚಿವ ಸ್ಥಾನ ಕೈ ತಪ್ಪಲು ಹಲವು ಕಾರಣ :
    ಶಾಸಕ ಬಿ.ಕೆ ಸಂಗಮೇಶ್ವರ್ ಸಚಿವ ಸ್ಥಾನ ಕೈ ತಪ್ಪಲು ಹಲವು ಕಾರಣಗಳಿದ್ದು, ಪ್ರಮುಖರಾಗಿ ಸಂಗಮೇಶ್ವರ್ ಕ್ಷೇತ್ರಕ್ಕೆ ಮಾತ್ರ ಸೀಮಿತವಾಗಿ ಗುರುತಿಸಿಕೊಂಡಿದ್ದಾರೆ. ಜಿಲ್ಲಾಮಟ್ಟದ ನಾಯಕರಾಗಿ ಗುರುತಿಸಿಕೊಳ್ಳಲು ಪ್ರಯತ್ನಿಸಲಿಲ್ಲ. ಹೈಕಮಾಂಡ್ ಮಟ್ಟದಲ್ಲಿ ಸಂಗಮೇಶ್ವರ್ ಪರ ಲಾಭಿ ನಡೆಸಲು ಯಾರು ಇಲ್ಲದಿರುವುದು. ಕ್ಷೇತ್ರದವರೇ ರಾಷ್ಟ್ರೀಯ ಯುವ ಕಾಂಗ್ರೆಸ್ ಅಧ್ಯಕ್ಷರಾಗಿದ್ದರೂ ಸಹ ಸಂಗಮೇಶ್ವರ್ ನೇರವಾಗಿ ಹೈಕಮಾಂಡ್ ಸಂಪರ್ಕ ಬೆಳೆಸಿಕೊಳ್ಳದಿರುವುದು. ಹೀಗೆ ಹಲವು ಕಾರಣಗಳಿಂದ ಸಚಿವ ಸ್ಥಾನ ಕೈ ತಪ್ಪಿದೆ ಎನ್ನಲಾಗಿದೆ.

ಸರ್ಕಾರಿ ಕಾಲೇಜು ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕಾರ್ಯಾಗಾರ

    ಭದ್ರಾವತಿ, ಡಿ. ೨೬ : ನಗರದ ಹೊಸಮನೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವತಿಯಿಂದ ಶಿವಮೊಗ್ಗ ಸ್ಪರ್ಧಾ ಕರ್ನಾಟಕ ಅಕಾಡೆಮಿ ಸಹಯೋಗದೊಂದಿಗೆ ಕಾಲೇಜಿನ ಚಂದನ ಸಭಾಂಗಣದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿತ್ತು.
    ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡಿದ್ದ ಡಿ. ನಂಜನಾಯ್ಕರವರು, ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳ ಸಿದ್ಧತೆ, ಪಿಯುಸಿ ಹಾಗೂ ಪದವಿ ಶಿಕ್ಷಣದ ನಂತರ ಉದ್ಯೋಗವಕಾಶಗಳು ಮತ್ತು ಸಂದರ್ಶನದಲ್ಲಿ ಭಾಗವಹಿಸುವ ಬಗೆಯನ್ನು ಕುರಿತು ಸಮಗ್ರ ಮಾಹಿತಿ ನೀಡಿದರು.
    ಇದೆ ಸಂದರ್ಭದಲ್ಲಿ ಕಾಲೇಜು ಆಡಳಿತ ಮಂಡಳಿ ಮತ್ತು ಸ್ಪರ್ಧಾ ಕರ್ನಾಟಕ ಅಕಾಡೆಮಿ ನಡುವೆ ಪರಸ್ಪರ ಐದು ವರ್ಷಗಳ ತಿಳುವಳಿಕೆ ಒಪ್ಪಂದಕ್ಕೆ ಸಹಿ
ಹಾಕಲಾಯಿತು.
    ಕಾರ್ಯಕ್ರಮದ ಅಧ್ಯಕ್ಷತೆ ಕಾಲೇಜಿನ ಪ್ರಾಂಶುಪಾಲ ಡಾ. ಮಂಜುನಾಥ ಸಕಲೇಶ್ ವಹಿಸಿದ್ದರು.  ಐಕ್ಯೂಎಸಿ ಸಂಚಾಲಕ ಡಾ. ಟಿ. ಪ್ರಸನ್ನ ಮತ್ತು ಪ್ಲೇಸ್‌ಮೆಂಟ್ ಸಂಚಾಲಕ ಪರಶುರಾಮ ಮತ್ತು ಕಾಲೇಜಿನ ಬೋಧಕ ಮತ್ತು ಬೋಧಕೇತರರು, ವಿದ್ಯಾರ್ಥಿಗಳು ಭಾಗವಹಿಸಿರುತ್ತಾರೆ.

ಪ್ರಥಮ ವರ್ಷದ ಡಿಪ್ಲೋಮಾ ಕೋರ್ಸಿಗೆ ಅರ್ಜಿ ಆಹ್ವಾನ

ಭದ್ರಾವತಿ ನ್ಯೂಟೌನ್ ವಿಐಎಸ್‌ಎಸ್‌ಜೆ ಸರ್ಕಾರಿ ಪಾಲಿಟೆಕ್ನಿಕ್.
    ಭದ್ರಾವತಿ, ಮೇ. ೨೬ : ನಗರದ ನ್ಯೂಟೌನ್ ವಿಐಎಸ್‌ಎಸ್‌ಜೆ ಸರ್ಕಾರಿ ಪಾಲಿಟೆಕ್ನಿಕ್ ವತಿಯಿಂದ ೨೦೨೩-೨೪ನೇ ಸಾಲಿನ ಪ್ರಥಮ ಸೆಮಿಸ್ಟರ್ ಡಿಪ್ಲೋಮಾ ಕೋರ್ಸಿಗೆ ಪ್ರವೇಶ ಪಡೆಯಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ.
    ಸಿವಿಲ್ ಇಂಜಿನಿಯರಿಂಗ್, ಎಲೆಕ್ಟಿಕಲ್ ಅಂಡ್ ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್, ಮೆಕ್ಯಾನಿಕಲ್ ಇಂಜಿನಿಯರಿಂಗ್ ಮತ್ತು (೪)ಮೆಟಲರ್ಜಿ ಇಂಜಿನಿಯರಿಂಗ್ ವಿಭಾಗಗಳು ಲಭ್ಯವಿರುತ್ತವೆ.
    ಮೇ. ೯ರಿಂದ ಪ್ರವೇಶ ಪ್ರಕ್ರಿಯೆಗಳು ಆರಂಭಗೊಂಡಿದ್ದು, ಎಸ್‌ಎಸ್‌ಎಲ್‌ಸಿ ಮತ್ತು ಜೆಟಿಎಸ್ ಪರೀಕ್ಷೆಯಲ್ಲಿ ಪಾಸಾದ ವಿದ್ಯಾರ್ಥಿಗಳು ಪ್ರಥಮ ಸೆಮಿಸ್ಟರ್/ ೧ನೇ ವರ್ಷಕ್ಕೆ, ಡಿಪ್ಲೋಮಾಗೆ ಪ್ರವೇಶವನ್ನು ಪಡೆಯಲು ಅರ್ಹರಾಗಿದ್ದು, ಸೀಟು ಹಂಚಿಕೆಯಾದ ನಂತರ ಭರ್ತಿಯಾಗದ ಉಳಿಕೆ ಸೀಟುಗಳನ್ನು ಮೇ.೨೯ ರಿಂದ ಜೂ. ೩ರವರೆಗೆ ಆಫ್‌ಲೈನ್ ಮೂಲಕ ಸೀಟು ಹಂಚಿಕೆ ಮಾಡಲಾಗುವುದು, ಇಚ್ಛೆಯುಳ್ಳ ವಿದ್ಯಾರ್ಥಿಗಳು ನೇರವಾಗಿ ಹಾಜರಾಗಿ ಪ್ರವೇಶ ಅರ್ಜಿಯನ್ನು ಸಲ್ಲಿಸಲು ತಿಳಿಸಲಾಗಿದೆ. ಹೆಚ್ಚಿನ ಮಾಹಿತಿಗೆ ಪ್ರಾಂಶುಪಾಲರು, ಮೊ. ೮೮೬೯೩೧೫೩೯, ೯೪೮೦೩೯೪೯೦೯ ಮತ್ತು ೯೯೮೬೪೦೬೯೪೧ ಸಂಖ್ಯೆಗೆ ಸಂಪರ್ಕಿಸಬಹುದಾಗಿದೆ.

ಮೇ.೨೮ರವರೆಗೆ ೪೩ನೇ ವರ್ಷದ ಕರಗ ಮಹೋತ್ಸವ

ಭದ್ರಾವತಿ ನ್ಯೂಟೌನ್ ವಿಐಎಸ್‌ಎಲ್ ಆಸ್ಪತ್ರೆ ಸಮೀಪದ ಶ್ರೀ ಕರುಮಾರಿಯಮ್ಮ ದೇವಿ.
    ಭದ್ರಾವತಿ, ಮೇ. ೨೬: ನ್ಯೂಟೌನ್ ವಿಐಎಸ್‌ಎಲ್ ಆಸ್ಪತ್ರೆ ಸಮೀಪದ ಶ್ರೀ ಕರುಮಾರಿಯಮ್ಮ ದೇವಸ್ಥಾನದ ೪೩ನೇ ವರ್ಷದ ಕರಗ ಮಹೋತ್ಸವ ಮೇ.೨೮ರವರೆಗೆ ನಡೆಯಲಿದೆ.
    ಶುಕ್ರವಾರ ಬೆಳಿಗ್ಗೆ ದೇವತಾ ಪ್ರಾರ್ಥನೆ, ಶುದ್ಧ ಪುಣ್ಯಾಹ್ನ ಮತ್ತು ಧ್ವಜಾರೋಹಣ ಸಂಜೆ ಕಂಕಣ ಬಂಧನ ನೆರವೇರಿತು. ಮೇ.೨೭ರ ಶನಿವಾರ ಬೆಳಿಗ್ಗೆ ೧೦ ಗಂಟೆಗೆ ಅಮ್ಮನವರಿಗೆ ಪಂಚಾಮೃತ ಅಭಿಷೇಕ, ಮಧ್ಯಾಹ್ನ ೧೨ ಗಂಟೆಗೆ ಮಹಾಮಂಗಳಾರತಿ, ತೀರ್ಥಪ್ರಸಾದ ವಿನಿಯೋಗ ಸೇರಿದಂತೆ ಇನ್ನಿತರ ಧಾರ್ಮಿಕ ಆಚರಣೆಗಳು ಜರುಗಲಿವೆ. ಸಂಜೆ ೬ ಗಂಟೆಗೆ ಉಮಾ ಮಹಿಳಾ ಭಜನ ಮಂಡಳಿ ವತಿಯಿಂದ ಭಕ್ತಿಗೀತೆ ನಡೆಯಲಿದೆ.
    ಮೇ.೨೮ರಂದು ಬೆಳಿಗ್ಗೆ ೯ ಗಂಟೆಗೆ ಎಳನೀರು ಅಭಿಷೇಕ, ಪಂಚಾಮೃತ ಮತ್ತು ತೀರ್ಥ ಪ್ರಸಾದ ವಿನಿಯೋಗ, ಮಧ್ಯಾಹ್ನ ೧೨ ಗಂಟೆಗೆ ಅಮ್ಮನವರ ಶಕ್ತಿ ಕರಗ ಸ್ಥಾಪನೆ ನಂತರ ಮಹಾಮಂಗಳಾರತಿಯೊಂದಿಗೆ ತೀರ್ಥಪ್ರಸಾದ ವಿನಿಯೊಗ ಹಾಗು ಶ್ರಿ ದೇವಿಗೆ ಅಂಬಲಿ ಮತ್ತು ಅನ್ನದಾನ ಸಂತರ್ಪಣೆ ನಡೆಯಲಿದೆ. ಭಕ್ತರು ಹೆಚ್ಚಿನಯಲ್ಲಿ ಪಾಲ್ಗೊಂಡು ಕರಗ ಮಹೋತ್ಸವ ಯಶಸ್ವಿಗೊಳಿಸುವಂತೆ ಕೋರಲಾಗಿದೆ.

ಗುರುವಾರ, ಮೇ 25, 2023

ಸರ್ವತೋಮುಖ ಅಭಿವೃದ್ಧಿಗಾಗಿ ಸಂಗಮೇಶ್ವರ್‌ಗೆ ಸಚಿವ ಸ್ಥಾನ ನೀಡಿ

ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಯುವ ಘಟಕ ಆಗ್ರಹ

ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಯುವ ಘಟಕ ಅಧ್ಯಕ್ಷ ಮಂಜುನಾಥ್
    ಭದ್ರಾವತಿ, ಮೇ. ೨೫: ಕ್ಷೇತ್ರದಲ್ಲಿ ೪ನೇ ಬಾರಿಗೆ ಆಯ್ಕೆಯಾಗಿರುವ ಏಕೈಕ ಶಾಸಕರು ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ, ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗೆ ಬದ್ಧರಾಗಿರುವ ಶಾಸಕ ಬಿ.ಕೆ ಸಂಗಮೇಶ್ವರ್‌ಗೆ ಈ ಬಾರಿ ಸಚಿವ ಸ್ಥಾನ ನೀಡಬೇಕೆಂದು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಯುವ ಘಟಕ ಆಗ್ರಹಿಸಿದೆ.
    ಬಿ.ಕೆ ಸಂಗಮೇಶ್ವರ್‌ರವರು ಕ್ಷೇತ್ರದ ಜನರಿಗೆ ಯಾವುದೇ ಸಮಸ್ಯೆ ಎದುರಾದರೂ ಸಹ ತಕ್ಷಣ ಸ್ಪಂದಿಸುವ ಮನೋಭಾವ ಹೊಂದಿದ್ದಾರೆ. ಧರ್ಮ, ಜಾತಿ-ಭೇದಭಾವ ಮಾಡದೆ ಎಲ್ಲರನ್ನು ಸಮಾನವಾಗಿ ಕಾಣುತ್ತಿದ್ದಾರೆ. ತನ್ನದೇ ಆದ ಪ್ರಭಾವ ಮತ್ತು ಪ್ರತಿಷ್ಠೆ ಕಾಯ್ದುಕೊಳ್ಳುವ ಮೂಲಕ ೪ನೇ ಬಾರಿಗೆ ಆಯ್ಕೆಯಾಗಿರುವುದು ವಿಶೇಷತೆಯಾಗಿದೆ. ಕ್ಷೇತ್ರವನ್ನು ಸರ್ವತೋಮುಖವಾಗಿ ಅಭಿವೃದ್ಧಿಗೊಳಿಸುವ ಕನಸು ಕಂಡಿದ್ದಾರೆ. ಅವರ ಕನಸು ನನಸಾಗಿಸುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್‌ರವರು ಹೆಚ್ಚಿನ ಸಹಕಾರಬೇಕಾಗಿದೆ ಎಂದು ಮನವಿ ಮಾಡಿದೆ.
    ಕ್ಷೇತ್ರದಲ್ಲಿ ಎಂಪಿಎಂ ಮತ್ತು ವಿಐಎಸ್‌ಎಲ್ ಎರಡೂ ಕಾರ್ಖಾನೆಗಳು ಪುನಶ್ಚೇತನಗೊಳ್ಳಬೇಕು. ನಿರುದ್ಯೋಗಿಗಳಿಗೆ ಉದ್ಯೋಗ ಲಭಿಸಬೇಕು. ಕ್ಷೇತ್ರದ ಆರ್ಥಿಕ ಮಟ್ಟ ಹೆಚ್ಚಾಗಬೇಕು. ಉನ್ನತ ಶಿಕ್ಷಣ, ಆರೋಗ್ಯ ಮತ್ತು ಗುಣಮಟ್ಟದ ಮೂಲ ಸೌಲಭ್ಯಗಳನ್ನು ಕಲ್ಪಿಸಿಕೊಡುವುದು ಸೇರಿದಂತೆ ಹಲವಾರು ಅಭಿವೃದ್ಧಿ ಕಾರ್ಯಗಳು ನಡೆಯಬೇಕಾಗಿದೆ. ಈ ಹಿನ್ನಲೆಯಲ್ಲಿ ಸಂಗಮೇಶ್ವರ್‌ಗೆ ಸಚಿವ ಸ್ಥಾನ ನೀಡಬೇಕೆಂದು ಆಗ್ರಹಿಸಿದೆ.
    ಒಂದು ವೇಳೆ ಸಂಗಮೇಶ್ವರ್‌ಗೆ ಸಚಿವ ಸ್ಥಾನ ನೀಡದಿದ್ದಲ್ಲಿ ಮುಂದಿನ ದಿನಗಳಲ್ಲಿ ಕ್ಷೇತ್ರದಾದ್ಯಂತ ಉಗ್ರ ಹೋರಾಟ ನಡೆಸಲಿದೆ ಎಂದು ಯುವ ಘಟಕದ ಅಧ್ಯಕ್ಷ ಮಂಜುನಾಥ್ ಹಾಗು ಪದಾಧಿಕಾರಿಗಳಾದ ಬಿ.ಎಂ ರಮೇಶ್, ಮಹಾದೇವ್, ವಿನಯ್ ಮತ್ತು ಬಿ. ಮಂಜುನಾಥ್ ಸೇರಿದಂತೆ ಇನ್ನಿತರರು ಎಚ್ಚರಿಸಿದ್ದಾರೆ.