Thursday, July 27, 2023

ಕುಸ್ತಿ ಪಂದ್ಯಾವಳಿ : ಸರ್‌ಎಂವಿ ಕಾಲೇಜಿನ ವಿದ್ಯಾರ್ಥಿಗಳಿಗೆ ಪ್ರಶಸ್ತಿ

ಭದ್ರಾವತಿ ನ್ಯೂಟೌನ್‌ ಸರ್‌ಎಂವಿ ಸರ್ಕಾರಿ ಕಲಾ ಮತ್ತು ವಾಣಿಜ್ಯ ಕಾಲೇಜಿನ ವಿದ್ಯಾರ್ಥಿಗಳು ಕುಸ್ತಿ ಪಂದ್ಯಾವಳಿಯಲ್ಲಿ ಭಾಗವಹಿಸಿ ಉತ್ತಮ ಸಾಧನೆ ಮಾಡುವ ಮೂಲಕ ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. 
    ಭದ್ರಾವತಿ, ಜು. ೨೭:  ನಗರದ ನ್ಯೂಟೌನ್‌  ಸರ್‌ಎಂವಿ ಸರ್ಕಾರಿ ಕಲಾ ಮತ್ತು ವಾಣಿಜ್ಯ ಕಾಲೇಜಿನ ವಿದ್ಯಾರ್ಥಿಗಳು ಕುಸ್ತಿ ಪಂದ್ಯಾವಳಿಯಲ್ಲಿ ಭಾಗವಹಿಸಿ ಉತ್ತಮ ಸಾಧನೆ ಮಾಡುವ ಮೂಲಕ ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.
    ಆಯನೂರಿನಲ್ಲಿ ಜರುಗಿದ ೨ ದಿನಗಳ ಕುವೆಂಪು ವಿಶ್ವವಿದ್ಯಾನಿಲಯ ಅಂತರ ಕಾಲೇಜು ಪುರುಷ ಮತ್ತು ಮಹಿಳೆಯರ ಕುಸ್ತಿ ಪಂದ್ಯಾವಳಿಯಲ್ಲಿ ಕಾಲೇಜಿನ ಒಟ್ಟು ೨೨ ವಿದ್ಯಾರ್ಥಿಗಳು ಭಾಗಹಸಿದ್ದು,  ಯಶ್ವಂತ್ (79 ಕೆ.ಜಿ ವಿಭಾಗದಲ್ಲಿ) ಚಿನ್ನದ ಪದಕ, ಪವನ್ (125 ಕೆಜಿ ವಿಭಾಗದಲ್ಲಿ) ಬೆಳ್ಳಿ ಪದಕ, ಮನು ಮಂತೋರೆ (92 ಕೆಜಿ ವಿಭಾಗದಲ್ಲಿ) , ಸೈಯದ್‌ ಕುರ್ ( 65 ಕೆ.ಜಿ ವಿಭಾಗದಲ್ಲಿ), ಸಾಹಿಲ್ ಸಾಬ್ (97 ಕೆಜಿ
ವಿಭಾಗದಲ್ಲಿ) ಮತ್ತು ಅಮೀನ್ ಉಲ್ಲಾ ಹುಸೇನ್ ( 97+  ಅಧಿಕ ಕೆಜಿ ವಿಭಾಗದಲ್ಲಿ) ಕಂಚಿನ ಪದಕ
ಪಡೆದುಕೊಂಡು ಕೀರ್ತಿ ತಂದಿದ್ದಾರೆ.
    ಪ್ರಶಸ್ತಿ ಪಡೆದುಕೊಂಡ ವಿದ್ಯಾರ್ಥಿಗಳನ್ನು ಕಾಲೇಜಿನ ಪ್ರಾಂಶುಪಾಲರಾದ ಡಾ. ಶೈಲಜಾ ಎಸ್.ಹೊಸ ಳ್ಳೇರ್ ಹಾಗೂ ಡಾ. ಬಿ.ಎಂ ನಾಸಿರ್ ಖಾನ್, ಕ್ರೀಡಾ ವಿಭಾಗದ ಮುಖ್ಯಸ್ಥ ಡಾ. ಎಚ್.ಎಸ್‌ ಶಿವರುದ್ರಪ್ಪ ಮತ್ತು ದೈಹಿಕ ಶಿಕ್ಷಣ ವಿಭಾಗದ ಉಪನ್ಯಾಸಕರಾದ ಶಫಿ, ಎಲ್. ಯೋಗೇಶ್, ದೇವರಾಜ, ಜಿ.ಎನ್ ಅರಸ್, ಪಿ. ಎ ದಿಲೀಪ್ ಮತ್ತು ಅಧ್ಯಾಪಕ ಹಾಗು ಸಿಬ್ಬಂದಿ ವರ್ಗದವರು ಅಭಿನಂದಿಸಿದ್ದಾರೆ.

Wednesday, July 26, 2023

ಮಕ್ಕಳಿಗೆ ಸೈನಿಕರ ಹೋರಾಟ, ಬದುಕು ತಿಳಿಯಲಿ : ಸುಬೇದಾರ್‌ ಗುಲ್ಗುಲೆ

ಭದ್ರಾವತಿ ಬಾರಂದೂರು  ಹಳ್ಳಿಕೆರೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬುಧವಾರ ತಾಲೂಕು ಮಾಜಿ ಸೈನಿಕರ ಸಂಘದ ವತಿಯಿಂದ ಕಾರ್ಗಿಲ್ ವಿಜಯೋತ್ಸವ ದಿನ ಆಚರಿಸಲಾಯಿತು.
    ಭದ್ರಾವತಿ, ಜು. ೨೬: ಕಾರ್ಗಿಲ್‌ ಯುದ್ಧದಲ್ಲಿ ಪಾಲ್ಗೊಂಡಿರುವುದು ಹೆಮ್ಮೆಯ ಸಂಗತಿಯಾಗಿದ್ದು, ನಮ್ಮ ಮಕ್ಕಳಿಗೆ ಸೈನಿಕರ ಹೋರಾಟ ಮತ್ತು ಬದುಕು ಕುರಿತು ತಿಳಿಸಿಕೊಡುವ ಅಗತ್ಯವಿದೆ ಎಂದು ಸುಬೇದಾರ್ ಗುಲ್ಗುಲೆ ಹೇಳಿದರು.
    ಅವರು ಬುಧವಾರ ಬಾರಂದೂರು  ಹಳ್ಳಿಕೆರೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ತಾಲೂಕು ಮಾಜಿ ಸೈನಿಕರ ಸಂಘದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಕಾರ್ಗಿಲ್ ವಿಜಯೋತ್ಸವ ದಿನಾಚರಣೆಯಲ್ಲಿ ಪಾಲ್ಗೊಂಡು ಮಾತನಾಡಿದರು.
    ನನಗೆ ಕಾರ್ಗಿಲ್‌ ಯುದ್ಧದಲ್ಲಿ ಪಾಲ್ಗೊಳ್ಳಲು ಅವಕಾಶ ಲಭಿಸಿತ್ತು. ಇದು ಹೆಮ್ಮೆ ಪಡುವ ವಿಚಾರವಾಗಿದೆ. ಮೈನಡುಗಿಸುವ ಚಳಿಯಲ್ಲಿ ಮೋಸದಿಂದ ದೇಶದ ಗಡಿ ನುಸುಳಿದಂತಹ ವೈರಿಗಳ ಆಕ್ರಮಣ, ಎದುರಿಸಿದ ಸಂಕಷ್ಟ.  ವೀರ ಯೋಧರ ಸಾಹಸದ ಹೋರಾಟ ಅದ್ಭುತವಾಗಿದೆ ಎಂದರು.     ಯುದ್ಧದಲ್ಲಿ ದೇಶಕ್ಕಾಗಿ ಪ್ರಾಣವನ್ನು ಅರ್ಪಿಸಿದಂತಹ ಹುತಾತ್ಮ ಯೋಧರನ್ನು ಸ್ಮರಿಸಿ ಗೌರವ ಸಮರ್ಪಿಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದರು.
    ತಾಲೂಕು ಮಾಜಿ ಸೈನಿಕರ ಸಂಘದ ಕಾರ್ಯದರ್ಶಿ ವೆಂಕಟಗಿರಿ ಮಾತನಾಡಿ,  26 ಜುಲೈ ಎಂದರೆ ಅಖಂಡ ಭಾರತದ ವಿಜಯೋತ್ಸವ.  ನಮ್ಮ ಸೈನಿಕರು ಪ್ರಾಣವನ್ನು ಲೆಕ್ಕಿಸದೆ ಸದಾ ದೇಶಕ್ಕಾಗಿ ಹೋರಾಡಲು  ಸಿದ್ಧರಾಗಿ ಗಡಿ ಕಾಯುತ್ತಿರುವ ಪರಿಣಾಮ  ನಾವೆಲ್ಲ ನೆಮ್ಮದಿಯಾಗಿರುವುದಕ್ಕೆ ಸಾಧ್ಯವಾಗಿದೆ. ಇದೀಗ  ಮಹಿಳೆಯರಿಗೂ ಸೈನ್ಯ ಸೇರುವ ಅವಕಾಶವಿದೆ. ಮಕ್ಕಳು ಬಾಲ್ಯದಿಂದಲೇ ದೇಶ ಭಕ್ತಿ, ಅಭಿಮಾನ, ಶಿಸ್ತು ಮೈಗೂಡಿಸಿಕೊಳ್ಳಬೇಕೆಂದರು.
    ಶಾಲೆಯ ಮುಖ್ಯೋಪಾಧ್ಯಾಯ ಎಚ್. ಶೇಖರಪ್ಪ, ಮಾಜಿ ಸೈನಿಕ ಹರೀಶ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದು ಮಾತನಾಡಿದರು.
    ಸಂಘದ ಖಜಾಂಚಿ ಬೋರೇಗೌಡ, ನಿರ್ದೇಶಕ ಮುದುಗಲ ರಾಮರೆಡ್ಡಿ,  ಸದಸ್ಯರಾದ ಪಿ.ಕೆ ಹರೀಶ್, ಅಭಿಲಾಶ್, ಕೃಷ್ಣೋಜಿ ರಾವ್, ಸುರೇಶ್, ರಾಮಚಂದ್ರ, ಉದಯ್, ದೇವರಾಜ್, ದಿವಾಕರ್, ಸತೀಶ್, ಪ್ರಸಾದ್, ಮಣಿ, ವೆಂಕಟೇಶ್, ಶ್ರೀನಿವಾಸ್,  ಸಮಾಜಸೇವಕರಾದ ಸುಲೋಚನಾ ಪ್ರಕಾಶ್ ಹಾಗೂ ಕವಿತಾ ರಾವ್,  ಜನತಾ ಪ್ರೌಢಶಾಲೆ ಶಿಕ್ಷಕರ ಕಾಂತರಾಜ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
  ವಿದ್ಯಾರ್ಥಿನಿಯರಾದ ಪ್ರೀತಿ ಹಾಗೂ ಗೌತಮಿ ಸೈನಿಕರ ಕುರಿತು ಮಾತನಾಡಿದರು. ಮಕ್ಕಳಿಂದ ದೇಶಭಕ್ತಿ ಗೀತೆ ಗಾಯನ ನಡೆಯಿತು.  ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಾದ ರಾಹುಲ್ ಮತ್ತು  ದೀಪಿಕಾ  ಅವರನ್ನು ಸನ್ಮಾನಿಸಿ ಅಭಿನಂದಿಸಲಾಯಿತು. ಶಿಕ್ಷಕಿಯರಾದ ಪಾರ್ವತಿ ಪ್ರಾರ್ಥಿಸಿ, ತನುಜ ಸ್ವಾಗತಿಸಿ, ಪವಿತ್ರ ಅವರು ವಂದಿಸಿದರು.

ಅಣಬೆ ಕಡಿಮೆ ಜಾಗದಲ್ಲಿ ಅಧಿಕ ಲಾಭ ಗಳಿಸುವ ಬೆಳೆ : ರವಿಕುಮಾರ್‌

ಭದ್ರಾವತಿ ನ್ಯೂಟೌನ್‌ ಸೈಂಟ್ ಚಾರ್ಲ್ಸ್ ಸಂಸ್ಥೆ ಆಶ್ರಯದ ಕರುಣಾ ಸೇವಾ ಕೇಂದ್ರದ ವತಿಯಿಂದ ಅಣಬೆ ಉತ್ಪಾದನಾ ತರಬೇತಿ ಮತ್ತು ಚಿಕ್ಕ ಒಕ್ಕೂಟಗಳ ಮಾಹಿತಿ ಕಾರ್ಯಕ್ರಮ ಆಯೋಜಿಸಲಾಗಿತ್ತು.  
    ಭದ್ರಾವತಿ, ಜು. ೨೬: ಅಣಬೆ ಸಸ್ಯಹಾರಿಯಾಗಿದ್ದು, ಕಡಿಮೆ ಜಾಗದಲ್ಲಿ ಅಧಿಕ ಲಾಭಗಳಿಸುವ ಬೆಳೆಯಾಗಿದೆ.  ಅಲ್ಲದೆ ಅಣಬೆ ಬೆಳೆಯಲು ಹೆಚ್ಚಿನ ಶ್ರಮವಹಿಸುವ ಅಗತ್ಯವಿಲ್ಲ ಎಂದು ಕೃಷಿ ಇಲಾಖೆ ಸಹಾಯಕ ತಾಂತ್ರಿಕ ವ್ಯವಸ್ಥಾಪಕ ರವಿಕುಮಾರ್‌ ಹೇಳಿದರು.
    ಅವರು ನ್ಯೂಟೌನ್‌ ಸೈಂಟ್ ಚಾರ್ಲ್ಸ್ ಸಂಸ್ಥೆ ಆಶ್ರಯದ ಕರುಣಾ ಸೇವಾ ಕೇಂದ್ರದ ವತಿಯಿಂದ ಆಯೋಜಿಸಲಾಗಿದ್ದ ಅಣಬೆ ಉತ್ಪಾದನಾ ತರಬೇತಿ ಮತ್ತು ಚಿಕ್ಕ ಒಕ್ಕೂಟಗಳ ಮಾಹಿತಿ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡು ಮಾತನಾಡಿದರು.
    ಅಣಬೆಯಲ್ಲಿ ವಿಟಮಿನ್ ಬಿ ಪ್ರೋಟೀನ್ ಹೇರಳವಾಗಿದ್ದು, ವಯಸ್ಕರಿಗೂ, ಗರ್ಭಿಣಿಯರಿಗೂ, ಮಕ್ಕಳಿಗೂ, ಸಕ್ಕರೆ ಕಾಯಿಲೆಯವರಿಗೆ ದೇಹ ಕರಗಿಸಲು  ಸೂಕ್ತವಾಗಿದೆ.  ಇದು ಮಾಂಸಾಹಾರಿ  ಎಂಬ ತಪ್ಪು ಕಲ್ಪನೆ ಇದ್ದು,  ಅಣಬೆ ಸಸ್ಯಹಾರಿಯಾಗಿದೆ.  ಅಣಬೆ ಬೆಳೆಯುವುದನ್ನು ತಿಳಿದುಕೊಳ್ಳಬೇಕು. ಈ ನಿಟ್ಟಿನಲ್ಲಿ ತರಬೇತಿ ಕಾರ್ಯಕ್ರಮ ಸಹಕಾರಿಯಾಗಿದೆ ಎಂದರು.
    ಕರುಣಾ ಸೇವಾ ಕೇಂದ್ರದ ನಿರ್ದೇಶಕಿ ಹೆಲೆನ್ ಮೊರಸ್, ವಿಶೇಷ ಅಗತ್ಯತೆ ಉಳ್ಳ ಮಕ್ಕಳ ಮುಖ್ಯಸ್ಥೆ ಸಿಸ್ಟರ್ ಪ್ರಭ, ಕಾರ್ಯಕರ್ತರಾದ ಗ್ರೇಸಿ, ವಿನ್ನಿ, ಧನಲಕ್ಷ್ಮಿ ಸೇರಿದಂತೆ ಸುಮಾರು 150 ಮಹಿಳೆಯರು ತರಬೇತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಕಳಪೆ ಗುಣಮಟ್ಟದ ಹೆಲ್ಮೆಟ್ ಮಾರಾಟ : 4 ಅಂಗಡಿಗಳ ಮೇಲೆ ದಾಳಿ


ಭದ್ರಾವತಿಯಲ್ಲಿ  ಐಎಸ್‌ಐ ಪ್ರಮಾಣಿಕೃತ ಮಾರ್ಕ್ ಹೊಂದಿರದ ಹಾಗು ಕಳಪೆ  ಗುಣಮಟ್ಟದ ಹೆಲ್ಮೆಟ್ ಮಾರಾಟ ಮಾಡುತ್ತಿದ್ದ ಅಂಗಡಿಗಳ ಮೇಲೆ ಮಂಗಳವಾರ ಪೋಲಿಸ್ ನಗರ ವೃತ್ತ ನಿರೀಕ್ಷಕ  ರಾಘವೇಂದ್ರ ಕಾಂಡಿಕೆ ನೇತೃತ್ವದಲ್ಲಿ ಸಂಚಾರಿ ಠಾಣೆ ಪೊಲೀಸರು 4 ಅಂಗಡಿಗಳ ಮೇಲೆ ಕಾರ್ಯಾಚರಣೆ ನಡೆಸಿ 141 ಹೆಲ್ಮೆಟ್‌ಗಳನ್ನು ವಶಕ್ಕೆ ಪಡೆದಿದ್ದಾರೆ.   
    ಭದ್ರಾವತಿ, ಜು. 26:  ಐಎಸ್‌ಐ  ಪ್ರಮಾಣಿಕೃತ ಮಾರ್ಕ್ ಹೊಂದಿರದ ಹಾಗು ಕಳಪೆ  ಗುಣಮಟ್ಟದ ಹೆಲ್ಮೆಟ್ ಮಾರಾಟ ಮಾಡುತ್ತಿದ್ದ ಅಂಗಡಿಗಳ ಮೇಲೆ ಮಂಗಳವಾರ ದಾಳಿ ನಡೆಸಿರುವ ಘಟನೆ ನಡೆದಿದೆ.
       ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ  ಮಿಥುನ್ ಕುಮಾರ್, ಹೆಚ್ಚುವರಿ ವರಿಷ್ಠಾಧಿಕಾರಿ  ಅನಿಲ್ ಕುಮಾರ್ ಭೂಮರೆಡ್ಡಿ ಅವರ ಸೂಚನೆ ಹಿನ್ನೆಲೆಯಲ್ಲಿ     ಹಿರಿಯ ಪೊಲೀಸ್ ಉಪಾಧೀಕ್ಷಕ  ಜತೇಂದ್ರ ಕುಮಾರ್ ದಯಾಮ ಅವರ ಮಾರ್ಗದರ್ಶನದಲ್ಲಿ  ಪೋಲಿಸ್ ನಗರ ವೃತ್ತ ನಿರೀಕ್ಷಕ  ರಾಘವೇಂದ್ರ ಕಾಂಡಿಕೆ ನೇತೃತ್ವದಲ್ಲಿ ಸಂಚಾರಿ ಠಾಣೆ ಪೊಲೀಸರು 4 ಅಂಗಡಿಗಳ ಮೇಲೆ ಕಾರ್ಯಾಚರಣೆ ನಡೆಸಿ 141 ಹೆಲ್ಮೆಟ್‌ಗಳನ್ನು ವಶಕ್ಕೆ ಪಡೆದಿದ್ದಾರೆ.   
   ಇತ್ತೀಚೆಗೆ ರಸ್ತೆ ಅಪಘಾತಗಳು ಹೆಚ್ಚಾಗುತ್ತಿದ್ದು, ಇದರಲ್ಲಿ ತಲೆಗೆ ಪೆಟ್ಟುಬಿದ್ದು ಮೃತಪಡುತ್ತಿರುವ ಸವಾರರ ಸಂಖ್ಯೆ ಹೆಚ್ಚುತ್ತಿದೆ. ಈ ಹಿನ್ನೆಲೆಯಲ್ಲಿ ಕಳಪೆ ಹಾಗೂ ಹಾಫ್ ಹೆಲ್ಮೆಟ್  ಮಾರಾಟ ಮಾಡುತ್ತಿರುವ ಅಂಗಡಿಗಳ ಮೇಲೆ ದಾಳಿ ನಡೆಸಲಾಗಿದೆ.  ಅಲ್ಲದೆ ಅಂಗಡಿ ಮಾಲೀಕರಿಗೆ ಇನ್ನು ಮುಂದೆ ಐಎಸ್‌ಐ ಮಾರ್ಕ್ ಹೊಂದಿರದ ಕಳಪೆ ಗುಣಮಟ್ಟದ ಹಾಫ್ ಹೆಲ್ಮೆಟ್ ಮಾರಾಟ ಮಾಡದಂತೆ ಎಚ್ಚರಿಕೆ ನೀಡಲಾಗಿದೆ. ಒಂದು ವೇಳೆ ಮಾರಾಟ ಮಾಡಿದಲ್ಲಿ ದಂಡ ವಿಧಿಸುವುದಾಗಿ ನಗರ ವೃತ್ತ ನಿರೀಕ್ಷಕ  ರಾಘವೇಂದ್ರ ಕಾಂಡಿಕೆ ಎಚ್ಚರಿಸಿದ್ದಾರೆ.     
         ಕಾರ್ಯಾಚರಣೆಯಲ್ಲಿ ಸಂಚಾರಿ ಪೊಲೀಸ್ ಠಾಣಾಧಿಕಾರಿಗಳಾದ ಶಾಂತಲಾ, ಭಾರತಿ, ಹಳೇನಗರ ಪೊಲೀಸ್ ಠಾಣಾಧಿಕಾರಿ ಚಂದ್ರಶೇಖರ್ ಹಾಗೂ ಸಿಬ್ಬಂದಿ ಪಾಲ್ಗೊಂಡಿದ್ದರು.

Tuesday, July 25, 2023

ವಿಐಎಸ್ಎಲ್ ಕಾರ್ಖಾನೆಯಲ್ಲಿ ಚಿರತೆ ಪ್ರತ್ಯಕ್ಷ: ಎಚ್ಚರಿಕೆಯಿಂದಿರಲು ಸೂಚನೆ

ಭದ್ರಾವತಿ  ವಿಐಎಸ್ಎಲ್ ಕಾರ್ಖಾನೆಯ ಆವರಣದಲ್ಲಿ ಮಂಗಳವಾರ ಚಿರತೆಯೊಂದು ಕಾಣಿಸಿಕೊಂಡಿದೆ.
    ಭದ್ರಾವತಿ, ಜು. ೨೫: ನಗರದ ವಿಐಎಸ್ಎಲ್ ಕಾರ್ಖಾನೆಯ ಆವರಣದಲ್ಲಿ ಮಂಗಳವಾರ ಚಿರತೆಯೊಂದು ಕಾಣಿಸಿಕೊಂಡಿದ್ದು, ಆತಂಕಕ್ಕೆ ಕಾರಣವಾಗಿದೆ.
    ಕಾರ್ಖಾನೆ ಒಳಭಾಗದ ಬಿಜಿ ವೇಯಿಂಗ್ ಬ್ರಿಡ್ಜ್ ಪ್ರದೇಶದಲ್ಲಿ ಚಿರತೆ ಕಾಣಿಸಿಕೊಂಡಿದ್ದು, ಸನಿಹದಲ್ಲೇ ಇದ್ದ ಸಿಬ್ಬಂದಿಯೊಬ್ಬರು ಇದರ ಫೋಟೋ ತೆಗೆದಿದ್ದಾರೆ.
    ಈ ಕುರಿತಂತೆ ಮಾಹಿತಿ ಪ್ರಕಟಿಸಿರುವ ವಿಐಎಸ್'ಎಲ್ ಕಾರ್ಖಾನೆಯ ಹಿರಿಯ ಅಧಿಕಾರಿ ಪ್ರವೀಣ್ ಕುಮಾರ್ ಅವರು, ಕಾರ್ಖಾನೆಯ ಆವರಣದಲ್ಲಿ ಚಿರತೆ ಕಾಣಿಸಿಕೊಂಡಿದೆ. ಹೀಗಾಗಿ, ಸಿಬ್ಬಂದಿಗಳು ಎಚ್ಚರಿಕೆಯಿಂದ ಇರಬೇಕು. ರಾತ್ರಿ ವೇಳೆಯಲ್ಲಿ ಯಾರೂ ಸಹ ಒಬ್ಬರೇ ಓಡಾಡಬಾರದು ಎಂದು ತಿಳಿಸಿದ್ದಾರೆ.
    ಒಂದು ವೇಳೆ ಚಿರತೆ ಮತ್ತೆ ಕಾಣಸಿಕೊಂಡರೆ ತತಕ್ಷಣವೇ ಭದ್ರತಾ ವಿಭಾಗವನ್ನು ಸಂಪರ್ಕಿಸಿ ಮೊ: ೯೪೮೦೮೨೯೧೯೦ಎಂದು ಎಚ್ಚರಿಕೆ ನೀಡಿದ್ದಾರೆ.


        ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ :
    ಕಾರ್ಖಾನೆಯಲ್ಲಿ ಚಿರತೆ ಕಾಣಿಸಿಕೊಂಡಿರುವ ಹಿನ್ನಲೆಯಲ್ಲಿ ರಾತ್ರಿ ವಲಯ ಅರಣ್ಯಾಧಿಕಾರಿ ಕೆ.ಆರ್‌ ರಾಕೇಶ್‌ ಮತ್ತು ಉಪ ವಲಯ ಅರಣ್ಯಾಧಿಕಾರಿ ಬಿ.ಆರ್‌ ದಿನೇಶ್‌ ಕುಮಾರ್‌ ಮತ್ತು ಕಾರ್ಖಾನೆ ಭದ್ರತಾ ಸಿಬ್ಬಂದಿಗಳು ಸ್ಥಳದಲ್ಲಿ ಬೀಡುಬಿಟ್ಟು ಪರಿಶೀಲನೆ ನಡೆಸಿದರು.  ಚಿರತೆ ಪತ್ತೆಯಾದ ಸ್ಥಳಕ್ಕೆ ಶ್ವಾನ ಕರೆ ತರಲಾಗಿದ್ದು, ಕಾರ್ಯಾಚರಣೆ ಮುಂದುವರೆದಿದೆ.
    ಸುಮಾರು ಒಂದು ವರ್ಷದ ಹಿಂದೆ ನ್ಯೂಟೌನ್‌ ಶ್ರೀ ಸತ್ಯಸಾಯಿ ಬಾಬಾ ಸಮಗ್ರ ಶಿಕ್ಷಣ ಸಂಸ್ಥೆ ಸಮೀಪದ ಕಾರ್ಖಾನೆಯ ವಸತಿ ಗೃಹದಲ್ಲಿ ಚಿರತೆ ಪತ್ತೆಯಾಗಿತ್ತು. ಮಹಿಳೆಯೊಬ್ಬರ ಮೇಲೆ ದಾಳಿ ನಡೆಸಿತ್ತು. ಅರಣ್ಯ ಇಲಾಖೆ ಸಿಬ್ಬಂದಿಗಳು ಸುಮಾರು ೮ ಗಂಟೆಗೂ ಹೆಚ್ಚು ಸಮಯ ಕಾರ್ಯಾಚರಣೆ ನಡೆಸಿ ಚಿರತೆ ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದರು.

ಮುಜ್ಜು ಹತ್ಯೆ ಪ್ರಕರಣ : ೫ ಮಂದಿ ಬಂಧನ

ಹಳೇದ್ವೇಷದ ಹಿನ್ನಲೆಯಲ್ಲಿ ಹತ್ಯೆ

ಭದ್ರಾವತಿ ನಗರಸಭೆ ವ್ಯಾಪ್ತಿಯ ಬೊಮ್ಮನಕಟ್ಟೆಯಲ್ಲಿ ಇತ್ತೀಚೆಗೆ ಭೀಕರವಾಗಿ ಹತ್ಯೆಯಾದ ರೌಡಿ ಶೀಟರ್ ಮೊಹಮದ್ ಮುಜಾಯಿದ್ದೀನ್ ಅಲಿಯಾಸ್ ಮುಜ್ಜು (೩೨) ಪ್ರಕರಣಕ್ಕೆ ಸಂಬಂಧಿಸಿದಂತೆ  ಪೇಪರ್ ಟೌನ್ ಪೊಲೀಸರು ೫ ಮಂದಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
    ಭದ್ರಾವತಿ : ನಗರಸಭೆ ವ್ಯಾಪ್ತಿಯ ಬೊಮ್ಮನಕಟ್ಟೆಯಲ್ಲಿ ಇತ್ತೀಚೆಗೆ ಭೀಕರವಾಗಿ ಹತ್ಯೆಯಾದ ರೌಡಿ ಶೀಟರ್ ಮೊಹಮದ್ ಮುಜಾಯಿದ್ದೀನ್ ಅಲಿಯಾಸ್ ಮುಜ್ಜು (೩೨) ಪ್ರಕರಣಕ್ಕೆ ಸಂಬಂಧಿಸಿದಂತೆ  ಪೇಪರ್ ಟೌನ್ ಪೊಲೀಸರು ೫ ಮಂದಿ ಬಂಧಿಸಿದ್ದು, ವಿಚಾರಣೆ ವೇಳೆ  ಹಳೇದ್ವೇಷದ ಹಿನ್ನಲೆಯಲ್ಲಿ ಹತ್ಯೆ ಮಾಡಿರುವುದು ತಿಳಿದು ಬಂದಿದೆ.
    ಹತ್ಯೆಗೆ ಸಂಬಂಧಿಸಿದಂತೆ ಮೃತನ ಸಹೋದರ ನೀಡಿದ ದೂರಿನ ಮೇರೆಗೆ ಪೇಪರ್ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಹಿನ್ನಲೆಯಲ್ಲಿ ಗ್ರಾಮಾಂತರ ಠಾಣೆ ಪೊಲೀಸ್‌ ನಿರೀಕ್ಷಕ ಗುರುರಾಜ ಮೈಲಾರ್ (ಪೇಪರ್‌ ಟೌನ್ ಪೊಲೀಸ್‌ ಠಾಣೆ ಪ್ರಭಾರ) ಮತ್ತು ನಗರ ವೃತ್ತ ಪೊಲೀಸ್‌ ನಿರೀಕ್ಷಕ ರಾಘವೇಂದ್ರ ಕಾಂಡಿಕೆ ನೇತೃತ್ವದಲ್ಲಿ, ಪೇಪರ್ ಟೌನ್ ಪೊಲೀಸ್ ಠಾಣೆ ಉಪ ನಿರೀಕ್ಷಕಿ ಕವಿತಾ, ಸಹಾಯಕ ನಿರೀಕ್ಷಕ ರತ್ನಾಕರ್ ಮತ್ತು ಸಿಬ್ಬಂದಿಗಳಾದ ವೆಂಕಟೇಶ, ವಾಸುದೇವ, ಅರುಣ, ನಾಗರಾಜ, ಎಂ. ಚಿನ್ನಾನಾಯ, ಚನ್ನಕೇಶವ, ಹಾಲಪ್ಪ, ಮಂಜುನಾಥ್‌,  ಹಣಮಂತ ಅವಟಿ, ಆದರ್ಶ ಶೆಟ್ಟಿ, ವಿಕ್ರಮ್, ಶಿವಪ್ಪ, ಮಂಜುನಾಥ ಮಳೆ, ಮೌನೇಶ, ಈರಯ್ಯ ಮತ್ತು ಜಿಲ್ಲಾ ಪೊಲೀಸ್ ಕಛೇರಿಯ ತಾಂತ್ರಿಕ ಸಿಬ್ಬಂದಿಗಳಾದ ಇಂದ್ರೇಶ್, ಗುರುರಾಜ್, ವಿಜಯ್ ಕುಮಾರ್ ರವರುಗಳನ್ನು ಒಳಗೊಂಡ ವಿಶೇಷ ತನಿಖಾ ತಂಡವನ್ನು ರಚಿಸಲಾಗಿತ್ತು
    ತನಿಖಾ ತಂಡ  ಪ್ರಕರಣಕ್ಕೆ ಸಂಬಂಧಿಸಿದಂತೆ ಹಿರಿಯೂರಿನ ಸಂತೋಷ ಕುಮಾರ್ ಅಲಿಯಾಸ್ ಗುಂಡ ಅಲಿಯಾಸ್ ಕರಿಯಾ (೩೩), ಹೊಸಮನೆ ಸುರೇಂದ್ರ ಅಲಿಯಾಸ್ ಆಟೋ ಸೂರಿ (೩೬),  ಮಂಜುನಾಥ ಅಲಿಯಾಸ್ ಬಿಡ್ಡಾ(೩೩), ಭೂತನಗುಡಿ ವಿಜಯ್ ಕುಮಾರ್ ಅಲಿಯಾಸ್ ಪವರ್ (೨೫) ಮತ್ತು ಬಾರಂದೂರು ಹಳ್ಳಿಕೆರೆಯ ವೆಂಕಟೇಶ ಅಲಿಯಾಸ್ ಲೂಸ್ (೨೩) ರನ್ನು ಬಂಧಿಸಿದ್ದಾರೆ.
    ಬಂಧಿತರನ್ನು ವಿಚಾರಣೆ ಮಾಡಲಾಗಿ ಹತ್ಯೆಯಾದ ಮೊಹಮದ್ ಮುಜಾಯಿದ್ದೀನ್ ಅಲಿಯಾಸ್ ಮುಜ್ಜು 2019ನೇ ಸಾಲಿನಲ್ಲಿ ರಮೇಶ ಎಂಬುವರನ್ನು ಕೊಲೆಮಾಡಿ ಮೇಲ್ಕಂಡ ಆರೋಪಿತರಾದ ಸಂತೋಷ್ ಮತ್ತು ಸುರೇಂದ್ರ ಇವರ ಮೇಲೆ ಮಾರಣಾಂತಿಕ ಹಲ್ಲೆ ಮಾಡಿರುತ್ತಾನೆ. ಈ ಹಳೆ ದ್ವೇಷದ ಹಿನ್ನೆಲೆಯಲ್ಲಿ ಆರೋಪಿತರು ಮುಜ್ಜುನನ್ನು ಕೊಲೆ ಮಾಡಿರುವುದು ತಿಳಿದು ಬಂದಿದೆ ಎನ್ನಲಾಗಿದೆ. ತನಿಖಾ ತಂಡದ ಕಾರ್ಯಕ್ಕೆ ಜಿಲ್ಲಾ ರಕ್ಷಣಾಧಿಕಾರಿ ಜಿ.ಕೆ ಮಿಥುನ್‌ ಕುಮಾರ್‌ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ರೋಟರಿ ಇಂಟರಾಕ್ಟ್‌ ಕ್ಲಬ್‌ ಉದ್ಘಾಟನೆ

ಭದ್ರಾವತಿ ತಾಲೂಕಿನ ಕೂಡ್ಲಿಗೆರೆ  ಶ್ರೀ ಹರಿಹರೇಶ್ವರ ಪ್ರೌಢ ಶಾಲೆಯಲ್ಲಿ ಇಂಟರಾಕ್ಟ್ ಕ್ಲಬ್‌ ಗ್ರಾಮದ ಮುಖಂಡರಾದ  ಕೂಡ್ಲಿಗೆರೆ ಹಾಲೇಶ್ ಉದ್ಘಾಟಿಸಿದರು.
    ಭದ್ರಾವತಿ, ಜು. ೨೫: ತಾಲೂಕಿನ ಕೂಡ್ಲಿಗೆರೆ  ಶ್ರೀ ಹರಿಹರೇಶ್ವರ ಪ್ರೌಢ ಶಾಲೆಯಲ್ಲಿ ಇಂಟರಾಕ್ಟ್ ಕ್ಲಬ್‌ ಗ್ರಾಮದ ಮುಖಂಡರಾದ  ಕೂಡ್ಲಿಗೆರೆ ಹಾಲೇಶ್ ಉದ್ಘಾಟಿಸಿದರು.
    ಇತ್ತೀಚಿನ ವರ್ಷಗಳಲ್ಲಿ ರೋಟರಿ ತಾಲೂಕಿನ ಗ್ರಾಮೀಣ ಭಾಗಗಳಲ್ಲಿ ಮತ್ತಷ್ಟು ಕ್ರಿಯಾಶೀಲವಾಗಿದ್ದು, ಇಂಟರಾಕ್ಟ್‌ ಕ್ಲಬ್‌ ಮೂಲಕ ಹೆಚ್ಚಿನ ಸೇವಾಕಾರ್ಯಗಳನ್ನು ಕೈಗೊಳ್ಳಲು ಮುಂದಾಗಿದೆ. ಈ ನಿಟ್ಟಿನಲ್ಲಿ ಕೂಡ್ಲಿಗೆರೆ ಗ್ರಾಮದಲ್ಲಿ ಇಂಟರಾಕ್ಟ್ ಕ್ಲಬ್‌ ಅಸ್ತಿತ್ವಕ್ಕೆ ಬಂದಿದೆ.
    ರೊಟರಿ ಕ್ಲಬ್ ಅಧ್ಯಕ್ಷ ಡಾ.ಮಲ್ಲಿಕಾರ್ಜುನ್ ಜ್ಯೋತಿ ಅಧ್ಯಕ್ಷತೆ ವಹಿಸಿದ್ದರು. ರಾಘವೇಂದ್ರ ಉಪಾಧ್ಯಾಯ, ಟಿ.ಎಸ್ ದುಷ್ಯಂತ ರಾಜ್, ಶಾಲಾ ಮುಖ್ಯೋಪಾಧ್ಯಾಯರು ಹಾಗು ಶಿಕ್ಷಕರು ಉಪಸ್ಥಿತರಿದ್ದರು.