Tuesday, August 22, 2023

ಬೆರಳು ಮುದ್ರೆ ಪರಿಶೀಲನೆ : ತಲೆಮರೆಸಿಕೊಂಡಿದ್ದ ವ್ಯಕ್ತಿ ಸೆರೆ

ಭದ್ರಾವತಿ ಬೆರಳು ಮುದ್ರೆ ಪರಿಶೀಲನೆ ಮೂಲಕ ೬ ಪ್ರಕರಣಗಳಲ್ಲಿ ಭಾಗಿಯಾಗಿರುವ ವ್ಯಕ್ತಿಯೋರ್ವನನ್ನು ಪತ್ತೆ ಮಾಡುವಲ್ಲಿ ಇಲ್ಲಿನ ಗ್ರಾಮಾಂತರ ಠಾಣೆ ಪೊಲೀಸರು ಯಶಸ್ವಿಯಾಗಿರುವ ಘಟನೆ ನಡೆದಿದೆ.
    ಭದ್ರಾವತಿ, ಆ. ೨೨: ಬೆರಳು ಮುದ್ರೆ ಪರಿಶೀಲನೆ ಮೂಲಕ ೬ ಪ್ರಕರಣಗಳಲ್ಲಿ ಭಾಗಿಯಾಗಿರುವ ವ್ಯಕ್ತಿಯೋರ್ವನನ್ನು ಪತ್ತೆ ಮಾಡುವಲ್ಲಿ ಇಲ್ಲಿನ ಗ್ರಾಮಾಂತರ ಠಾಣೆ ಪೊಲೀಸರು ಯಶಸ್ವಿಯಾಗಿರುವ ಘಟನೆ ನಡೆದಿದೆ.


    ಆಕಾಶ್ ಗೌಡ ಅಲಿಯಾಸ್ ಅಪ್ಪ ಎಂಬ ವ್ಯಕ್ತಿಯನ್ನು ಬಂಧಿಸಲಾಗಿದ್ದು, ರಾತ್ರಿ ಗಸ್ತು ವೇಳೆಯಲ್ಲಿ ಈತ ಅನುಮಾನಸ್ಪದವಾಗಿ ಸಿಕ್ಕಿ ಬಿದ್ದಿದ್ದಾನೆ. ತಕ್ಷಣ ಜಾಗೃತರಾದ ಪೊಲೀಸರು ಎಂಸಿಸಿಟಿಎನ್‌ಎಸ್ ಫಿಂಗರ್ ಪ್ರಿಂಟ್ ಸ್ಕ್ಯಾನರ್‌ನ ಮೂಲಕ ಈತನ ಬೆರಳು ಮುದ್ರೆ ಪರಿಶೀಲನೆ ನಡೆಸಿದ್ದು, ೬ ಪ್ರಕರಣಗಳಲ್ಲಿ ಭಾಗಿಯಾಗಿ ತಲೆ ಮರೆಸಿಕೊಂಡಿರುವುದು ಪತ್ತೆಯಾಗಿದೆ. ಈ ಹಿನ್ನಲೆಯಲ್ಲಿ ಈತನನ್ನು ಬಂಧಿಸಿ ಮುಂದಿನ ಕ್ರಮ ಕ್ರೈಗೊಂಡಿದ್ದಾರೆ.
    ಪೊಲೀಸ್ ಜಿಲ್ಲಾ ರಕ್ಷಣಾಧಿಕಾರಿ ಜಿ.ಕೆ ಮಿಥುನ್‌ಕುಮಾರ್ ಹಾಗು ಪೊಲೀಸ್ ಉಪಾಧೀಕ್ಷಕ ನಾಗರಾಜ್ ಅಭಿನಂದಿಸಿದ್ದಾರೆ.

ಆ.೨೯ರಂದು ಶ್ರೀಕೃಷ್ಣ ವೇಷ ಪ್ರದರ್ಶನ

    ಭದ್ರಾವತಿ, ಆ. ೨೨ : ತರುಣಭಾರತಿ ವಿಶ್ವಸ್ಥ ಮಂಡಳಿ ವತಿಯಿಂದ ಪ್ರತಿ ವರ್ಷದಂತೆ ಈ ಬಾರಿ ಸಹ ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಶ್ರೀಕೃಷ್ಣ ವೇಷ ಪ್ರದರ್ಶನ ಆ.೨೯ರ ಮಂಗಳವಾರ ಹಮ್ಮಿಕೊಳ್ಳಲಾಗಿದೆ.
    ಬಿ.ಎಚ್ ರಸ್ತೆ ಶ್ರೀ ಮಂಜುನಾಥಸ್ವಾಮಿ ಕಲ್ಯಾಣ ಮಂಟಪದಲ್ಲಿ ಪ್ರದರ್ಶನ ಮಧ್ಯಾಹ್ನ ೧.೩೦ಕ್ಕೆ ನಡೆಯಲಿದ್ದು, ಪ್ರದರ್ಶನದಲ್ಲಿ ೫ ವರ್ಷದೊಳಗಿನ ಮಕ್ಕಳು ಭಾಗವಹಿಸಬಹುದಾಗಿದೆ. ಪ್ರದರ್ಶನದಲ್ಲಿ ಪಾಲ್ಗೊಳ್ಳುವ ಎಲ್ಲಾ ಮಕ್ಕಳಿಗೂ ಬಹುಮಾನ ಹಾಗು ಸಿಹಿ ವಿತರಿಸಲಾಗುವುದು ಎಂದು ತರುಣಭಾರತಿ ಶಿಶುಮಂದಿರದ ಸಂಚಾಲಕಿ ಸರ್ವಮಂಗಳ ತಿಳಿಸಿದ್ದಾರೆ.

Monday, August 21, 2023

ಕುಮಾರ್‌ಗೆ `ಶ್ರೀ ರಾಘವೇಂದ್ರ ಸದ್ಭಾವನಾ ಪ್ರಶಸ್ತಿ'

ಕುಮಾರ್
    ಭದ್ರಾವತಿ, ಆ. ೨೧:  ಬೆಂಗಳೂರಿನ ಆರ್ಯಭಟ ಸಾಂಸ್ಕೃತಿಕ ಸಂಸ್ಥೆವತಿಯಿಂದ ನೀಡಲಾಗುವ `ಶ್ರೀ ರಾಘವೇಂದ್ರ ಸದ್ಭಾವನಾ ಪ್ರಶಸ್ತಿ' ಜನ್ನಾಪುರ ನಿವಾಸಿ ಕುಮಾರ್  ಅವರಿಗೆ ಲಭಿಸಿದೆ.  
    ಸಾಹಿತ್ಯ ಮತ್ತು ರಂಗಭೂಮಿ ಕ್ಷೇತ್ರದಲ್ಲಿ ಸಲ್ಲಿಸಿರುವ ಸೇವೆಯನ್ನು ಪರಿಗಣಿಸಿ ಶ್ರೀ ರಾಘವೇಂದ್ರ ಸ್ವಾಮಿಗಳ ೩೫೨ನೇ ಆರಾಧನಾ ಮಹೋತ್ಸವ ಸಂಧರ್ಭದಲ್ಲಿ ಕುಮಾರ್ ಅವರಿಗೆ ಈ ಪ್ರಶಸ್ತಿಯನ್ನು ನೀಡಲಾಗುತ್ತಿದೆ.
    ಸೆ.೧ರಂದು ಬೆಳಿಗ್ಗೆ ೧೦.೩೦ಕ್ಕೆ ಬೆಂಗಳೂರಿನ ಕುಮಾರ ಪಾರ್ಕ್ ವೆಸ್ಟ್ ಸಮೀಪದಲ್ಲಿರುವ ಕೋದಂಡರಾಮ ವಿದ್ಯಾರ್ಥಿ ನಿಲಯದಲ್ಲಿ ನಡೆಯಲಿರುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ.

ವಿದ್ಯುತ್‌ ಕಂಬಕ್ಕೆ ಡಿಕ್ಕಿ ಹೊಡೆದು ದ್ವಿಚಕ್ರ ವಾಹನ ಸವಾರ ಸಾವು


    ಭದ್ರಾವತಿ, ಆ. ೨೧: ದ್ವಿಚಕ್ರ ವಾಹನ ಸವಾರನೋರ್ವ ಆಕಸ್ಮಿಕವಾಗಿ ವಿದ್ಯುತ್‌ ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮ ತೀವ್ರಗಾಯಗೊಂಡು ಮೃತಪಟ್ಟಿರುವ ಘಟನೆ ನಗರದ ಹೊಸಮನೆ ಮುಖ್ಯ ರಸ್ತೆಯಲ್ಲಿ ನಡೆದಿದೆ.
    ದರ್ಶನ್‌ ಮೃತಪಟ್ಟಿದ್ದು, ಈತ ಆ.೨೦ರ ಬೆಳಗಿನ ಜಾವ  ತನ್ನ ರಾಯಲ್ ಎನ್ಫೀಲ್ಡ್ ಹಿಮಾಲಯ ದ್ವಿಚಕ್ರವಾಹನದಲ್ಲಿ ಹೊಸಮನೆ ಮುಖ್ಯ ರಸ್ತೆಯ ಭವಾನಿ ಶಾಮಿಯಾನ ಅಂಗಡಿ ಮುಂಭಾಗ ಹೋಗುತ್ತಿರುವಾಗ ನಾಯಿಯೊಂದು ಅಡ್ಡ ಬಂದಿದ್ದರಿಂದ ಅದನ್ನು ತಪ್ಪಿಸಲು ಹೋಗಿ ನಿಯಂತ್ರಣ ಕಳೆದುಕೊಂಡು  ರಸ್ತೆಯ ಪಕ್ಕದಲ್ಲಿರುವ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದ್ದು, ತಕ್ಷಣ ಈತನನ್ನು ನಗರದ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಈತನನ್ನು ಪರೀಕ್ಷಿಸಿದ ವೈದ್ಯರು ಮೃತಪಟ್ಟಿರುವುದನ್ನು ಖಚಿತ ಪಡಿಸಿದ್ದಾರೆ. ಈ ಸಂಬಂಧ ಈತನ ತಾಯಿ ಸಂಚಾರಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಕೇರಳ ಸಮಾಜಂ ನೂತನ ಪದಾಧಿಕಾರಿಗಳ ಆಯ್ಕೆ : ಅಧ್ಯಕ್ಷರಾಗಿ ಗಂಗಾಧರ್

ಭದ್ರಾವತಿ ಕೇರಳ ಸಮಾಜಂ ನೂತನ ಪದಾಧಿಕಾರಿಗಳ ಆಯ್ಕೆ ನಡೆದಿದ್ದು, ಅಧ್ಯಕ್ಷರಾಗಿ ಗಂಗಾಧರ್ ಪುನರ್ ಆಯ್ಕೆಯಾಗಿದ್ದಾರೆ.
    ಭದ್ರಾವತಿ, ಆ. ೨೧:  ನಗರದ ಕೇರಳ ಸಮಾಜಂ ನೂತನ ಪದಾಧಿಕಾರಿಗಳ ಆಯ್ಕೆ ನಡೆದಿದ್ದು,  ಅಧ್ಯಕ್ಷರಾಗಿ ಗಂಗಾಧರ್ ಪುನರ್ ಆಯ್ಕೆಯಾಗಿದ್ದಾರೆ.
  ಇತ್ತೀಚೆಗೆ ನಡೆದ ಸಭೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ನಡೆದಿದ್ದು, ಉಪಧ್ಯಕ್ಷರಾಗಿ ವಿ.ಕೆ ಮಾಹೀನ್, ಪ್ರಧಾನ ಕಾರ್ಯದರ್ಶಿಯಾಗಿ ವಿಜಯ ಕುಮಾರ್,  ಜಂಟಿ ಕಾರ್ಯದರ್ಶಿಯಾಗಿ ಪಿ.ಆರ್ ಪ್ರಭಾಕರನ್, ಖಜಂಚಿಯಾಗಿ ಎ. ಚಂದ್ರಶೇಖರ್, ಸಲಹೆಗಾರಾಗಿ ಹಾಗೂ ಆಂತರಿಕ ಲೆಕ್ಕ ಪರಿಶೋಧಕರಾಗಿ ಜಿ. ರಾಮಚಂದ್ರನ್  ಮತ್ತು ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ರಾಧಾಕೃಷ್ಣನ್, ಎಸ್.ಎಚ್ ಕಲ್ಯಾಣಿ ಶಶಿಧರನ್, ಕೆ. ರಾಜೇಂದ್ರನ್, ರೇಖಾಚಂದ್ರನ್, ಪ್ರಸನ್ನಕುಮಾರ್, ಕೆ.ಸಿ ರಾಜಶೇಖರ್, ಸುನೀತಾ ಸುರೇಶ್ ಹಾಗು ನಾಮ ನಿರ್ದೇಶಕರ ಸಮಿತಿ ಸದಸ್ಯರಾಗಿ ಮಿಥುನ್, ಶೈಲಜಾ ಸುರೇಶ್, ಪ್ರಶಾಂತ್ (ಅಪ್ಪು), ಬಾಲ ಸುಬ್ರಹ್ಮಣ್ಯ, ಫ್ರಾನ್ಸಿಸ್ ಕ್ಸೇವಿಯರ್ ಮತ್ತು ಯಶೋಧ ಆಯ್ಕೆಯಾಗಿದ್ದಾರೆ.

ವೇಳಾಪಟ್ಟಿಯಲ್ಲಿ ಪ್ರತಿ ವಿಷಯಕ್ಕೂ ದಿನ ಅಂತರಗೊಳಿಸಿ

ಪರೀಕ್ಷಾಂಗ ಕುಲಸಚಿವರಿಗೆ ವಿದ್ಯಾರ್ಥಿಗಳಿಂದ ಮನವಿ

ಕುವೆಂಪು ವಿಶ್ವ ವಿದ್ಯಾಲಯದಲ್ಲಿ ಪ್ರಸ್ತುತ ಹೊರಡಿಸಲಾಗಿರುವ ಪರೀಕ್ಷಾ ವೇಳಾಪಟ್ಟಿಯಲ್ಲಿ ಪ್ರತಿ ವಿಷಯಕ್ಕೂ ೨ ರಿಂದ ೩ ದಿನ ಅಂತರಗೊಳಿಸಿ ವಿದ್ಯಾರ್ಥಿಗಳು ಸಮರ್ಥವಾಗಿ ಪರೀಕ್ಷೆ ಎದುರಿಸಲು ಸಹಕರಿಸಬೇಕೆಂದು ವಿದ್ಯಾರ್ಥಿಗಳು ಪರೀಕ್ಷಾಂಗ ಕುಲಸಚಿವರಿಗೆ ಸೋಮವಾರ ಮನವಿ ಸಲ್ಲಿಸಿದ್ದಾರೆ.
    ಭದ್ರಾವತಿ, ಆ. ೨೧: ಕುವೆಂಪು ವಿಶ್ವ ವಿದ್ಯಾಲಯದಲ್ಲಿ ಪ್ರಸ್ತುತ ಹೊರಡಿಸಲಾಗಿರುವ ಪರೀಕ್ಷಾ ವೇಳಾಪಟ್ಟಿಯಲ್ಲಿ ಪ್ರತಿ ವಿಷಯಕ್ಕೂ ೨ ರಿಂದ ೩ ದಿನ ಅಂತರಗೊಳಿಸಿ ವಿದ್ಯಾರ್ಥಿಗಳು ಸಮರ್ಥವಾಗಿ ಪರೀಕ್ಷೆ ಎದುರಿಸಲು ಸಹಕರಿಸಬೇಕೆಂದು ವಿದ್ಯಾರ್ಥಿಗಳು ಪರೀಕ್ಷಾಂಗ ಕುಲಸಚಿವರಿಗೆ ಸೋಮವಾರ ಮನವಿ ಸಲ್ಲಿಸಿದ್ದಾರೆ.
    ಹೊರಡಿಸಲಾಗಿರುವ ವೇಳಾಪಟ್ಟಿಯಲ್ಲಿ ಯಾವುದೇ ಅಂತರವಿಲ್ಲದ ಕಾರಣ ವಿದ್ಯಾರ್ಥಿಗಳಿಗೆ ಸಮಸ್ಯೆ ಎದುರಾಗಿದೆ. ಪ್ರತಿ ವಿಷಯಕ್ಕೂ ೨ ರಿಂದ ೩ ದಿನ ಅಂತರಗೊಳಿಸುವುದರಿಂದ ಹೆಚ್ಚಿನ ಅನುಕೂಲವಾಗಲಿದೆ. ಈ ಹಿನ್ನಲೆಯಲ್ಲಿ ವಿದ್ಯಾರ್ಥಿಗಳ ಕೋರಿಕೆಗೆ ಸ್ಪಂದಿಸುವಂತೆ ಎನ್‌ಎಸ್‌ಯುಐ ನೇತೃತ್ವದಲ್ಲಿ ಉಪ ಕುಲಸಚಿವ ಡಿಎಆರ್ ಮಂಜುನಾಥ್ ಮೂಲಕ ಕುಲಸಚಿವರಿಗೆ ಮನವಿ ಸಲ್ಲಿಸಲಾಯಿತು.
    ವಿದ್ಯಾರ್ಥಿಗಳಾದ ಬಿ.ಎಂ ಪ್ರೀತಮ್ ಗೌಡ, ಎನ್. ಕೀರ್ತಿನಾಯ್ಕ್, ಕೆ.ಟಿ ರಮೇಶ್, ಕೆ.ಕೆ ಭೂಮಿಕಾ, ಯು. ಕಾವ್ಯ, ಪುಷ್ಪರಾಜ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Sunday, August 20, 2023

ಡಿ. ದೇವರಾಜ ಅರಸುರವರ ೧೦೮ನೇ ಜನ್ಮದಿನಾಚರಣೆ

ಭದ್ರಾವತಿ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಭಾನುವಾರ ಹಮ್ಮಿಕೊಳ್ಳಲಾಗಿದ್ದ ಮಾಜಿ ಮುಖ್ಯಮಂತ್ರಿ, ಹಿಂದುಳಿದ ವರ್ಗಗಳ ನೇತಾರ, ಸಾಮಾಜಿಕ ನ್ಯಾಯದ ಹರಿಕಾರ  ಡಿ. ದೇವರಾಜ ಅರಸುರವರ ೧೦೮ನೇ ಜನ್ಮದಿನಾಚರಣೆಯಲ್ಲಿ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನಗಳನ್ನು ವಿತರಿಸಲಾಯಿತು.
    ಭದ್ರಾವತಿ, ಆ. ೨೦: ತಾಲೂಕು ಆಡಳಿತ, ತಾಲೂಕು ಪಂಚಾಯಿತಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಹಾಗು ನಗರಸಭೆ ವತಿಯಿಂದ ಭಾನುವಾರ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಮಾಜಿ ಮುಖ್ಯಮಂತ್ರಿ, ಹಿಂದುಳಿದ ವರ್ಗಗಳ ನೇತಾರ, ಸಾಮಾಜಿಕ ನ್ಯಾಯದ ಹರಿಕಾರ  ಡಿ. ದೇವರಾಜ ಅರಸುರವರ ೧೦೮ನೇ ಜನ್ಮದಿನಾಚರಣೆಯನ್ನು ನಗರಸಭೆ ಮಾಜಿ ಅಧ್ಯಕ್ಷ ಬಿ.ಕೆ ಮೋಹನ್‌ ಉದ್ಘಾಟಿಸಿದರು.
    ಹಿಂದುಳಿದ ವರ್ಗಗಳ ಮುಖಂಡ ಟಿ. ವೆಂಕಟೇಶ್‌, ಮಾನವ ಹಕ್ಕುಗಳ ಹೋರಾಟ ಸಮಿತಿ ಅಧ್ಯಕ್ಷ ಬಿ.ಎನ್‌ ರಾಜು ಡಿ. ದೇವರಾಜ ಅರಸು ಅವರ ಕುರಿತು ಮಾತನಾಡಿದರು.
    ನಗರಸಭೆ ಅಧ್ಯಕ್ಷೆ ಶೃತಿ ವಸಂತಕುಮಾರ್‌, ಉಪಾಧ್ಯಕ್ಷೆ ಸರ್ವಮಂಗಳ ಭೈರಪ್ಪ, ತಹಸೀಲ್ದಾರ್‌ ಗ್ರೇಡ್‌-೨ ರಂಗಮ್ಮ, ನಗರಸಭಾ ಸದಸ್ಯ ಬಸವರಾಜ ಬಿ. ಆನೆಕೊಪ್ಪ, ಡಿಎಸ್‌ಎಸ್‌ ಮುಖಂಡ ರಂಗನಾಥ್‌, ತಾಲೂಕು ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಟಿ. ರಾಜೇಶ್ವರಿ ಸೇರಿದಂತೆ ಇನ್ನಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
    ವಿವಿಧ ಸರ್ಕಾರಿ ಇಲಾಖೆಗಳ ತಾಲೂಕು ಮಟ್ಟದ ಅಧಿಕಾರಿಗಳು, ವಿವಿಧ ಸಂಘ-ಸಂಸ್ಥೆಗಳ ಮುಖಂಡರು ಪಾಲ್ಗೊಂಡಿದ್ದರು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನಗಳನ್ನು ವಿತರಿಸಲಾಯಿತು.