Tuesday, September 19, 2023

ಭದ್ರಾ ಜಲಾಶಯದಲ್ಲಿ ರಾತ್ರಿಯೊಳಗೆ ನೀರು ನಿಲ್ಲಿಸದಿದ್ದಲ್ಲಿ ಪುನಃ ಹೋರಾಟ

 

ರೈತರಿಂದ ಎಕ್ಸಿಕ್ಯುಟಿವ್ಇಂಜಿನಿಯರ್ಗೆ ಎಚ್ಚರಿಕೆ

ಭದ್ರಾ ಜಲಾಶಯದಿಂದ ನಾಲೆಗಳಿಗೆ ಹರಿಸುತ್ತಿರುವ ನೀರು ತಕ್ಷಣ ನಿಲ್ಲಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ತಾಲೂಕು ಶಾಖೆ ವತಿಯಿಂದ ಮಂಗಳವಾರ ಭದ್ರಾವತಿ ಮಿಲ್ಟ್ರಿಕ್ಯಾಂಪ್ ನೀರಾವರಿ ಇಲಾಖೆ ಎಕ್ಸಿಕ್ಯುಟಿವ್ ಇಂಜಿನಿಯರ್ ಕಛೇರಿ ಎದುರು ಬೃಹತ್ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಲಾಯಿತು.

    ಭದ್ರಾವತಿ: ಭದ್ರಾ ಜಲಾಶಯದಿಂದ ನಾಲೆಗಳಿಗೆ ಹರಿಸುತ್ತಿರುವ ನೀರು ತಕ್ಷಣ ನಿಲ್ಲಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ತಾಲೂಕು ಶಾಖೆ ವತಿಯಿಂದ ಮಂಗಳವಾರ ನಗರದ ಮಿಲ್ಟ್ರಿಕ್ಯಾಂಪ್ ನೀರಾವರಿ ಇಲಾಖೆ ಎಕ್ಸಿಕ್ಯುಟಿವ್ ಇಂಜಿನಿಯರ್ ಕಛೇರಿ ಎದುರು ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.

    ಈ ಹಿಂದೆ ಹೋರಾಟ ನಡೆಸಿದ ಪರಿಣಾಮ ಭದ್ರಾ ಕಾಡಾ ಸಭೆಯಲ್ಲಿ ನೀರು ಹರಿಸಲು ಆಫ್ ಅಂಡ್ ಆನ್ ಪದ್ದತಿ ಅನುಸರಿಸಲು ತೀರ್ಮಾನಿಸಲಾಗಿತ್ತು. ಈ ತೀರ್ಮಾನದ ಪ್ರಕಾರ ಸೆ. 16ರಂದು  ನೀರು ನಿಲ್ಲಿಸಬೇಕಾಗಿತ್ತು. ಆದರೆ ಇಲ್ಲಿಯವರೆಗೂ ನೀರು ನಿಲ್ಲಿಸಿಲ್ಲ. ಈಗ ನೀರು ನಿಲ್ಲಿಸದ್ದಿದ್ದಲ್ಲಿ ಬೇಸಿಗೆಯಲ್ಲಿ ಅಡಕೆ ತೋಟಗಳು ಒಣಗಿಹೋಗುತ್ತವೆ. ಈ ಹಿನ್ನೆಲೆಯಿಂದ ತಕ್ಷಣವೇ ನೀರು ಹರಿಸುವುದನ್ನು ನಿಲ್ಲಿಸಬೇಕೆಂದು ಆಗ್ರಹಿಸಲಾಯಿತು.

    ಒಂದು ವೇಳೆ ನೀರು ನಿಲ್ಲಿಸದಿದ್ದಲ್ಲಿ ಹೋರಾಟ ತೀವ್ರಗೊಳಿಸುವುದಾಗಿ ಎಚ್ಚರಿಸಿ ಎಕ್ಸಿಕ್ಯುಟಿವ್ ಇಂಜಿನಿಯರ್ಗೆ ಮನವಿ ಸಲ್ಲಿಸಲಾಯಿತು. ಮನವಿ ಸ್ವೀಕರಿಸಿದ  ಇಂಜಿನಿಯರ್‌ ಬುಧವಾರದೊಳಗೆ ಸೂಕ್ತ ನಿರ್ಧಾರ  ಕೈಗೊಳ್ಳುವುದಾಗಿ ಭರವಸೆ ನೀಡಿದರು.


ಭದ್ರಾ ಜಲಾಶಯದಿಂದ ನಾಲೆಗಳಿಗೆ ಹರಿಸುತ್ತಿರುವ ನೀರು ತಕ್ಷಣ ನಿಲ್ಲಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ತಾಲೂಕು ಶಾಖೆ ವತಿಯಿಂದ ಮಂಗಳವಾರ ಭದ್ರಾವತಿ ಮಿಲ್ಟ್ರಿಕ್ಯಾಂಪ್ ನೀರಾವರಿ ಇಲಾಖೆ ಎಕ್ಸಿಕ್ಯುಟಿವ್ ಇಂಜಿನಿಯರ್ ಕಛೇರಿ ಎದುರು ಬೃಹತ್ ಪ್ರತಿಭಟನೆ ನಡೆಸಲಾಯಿತು.

ಇದಕ್ಕೆ ಪ್ರತಿಕ್ರಿಯಿಸಿದ ರೈತರು ಅಂತಿಮವಾಗಿ ಬುಧವಾರ ಬೆಳಿಗ್ಗೆವರೆಗೂ ಕಾದು ನೋಡಲಾಗುವುದು. ಒಂದು ವೇಳೆ ನೀರು ನಿಲ್ಲಿಸದಿದ್ದಲ್ಲಿ ಮುಂದಿನ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದರು.

ಪ್ರತಿಭಟನೆಯಲ್ಲಿ ಶಾಸಕ ಬಿ.ಕೆ ಸಂಗಮೇಶ್ವರ್‌, ಪ್ರಮುಖರಾದ ಎಸ್‌. ಕುಮಾರ್‌, ಎಚ್.ಎಲ್‌ ಷಡಾಕ್ಷರಿ, ಬಾಲಕೃಷ್ಣ, ಎಸ್.‌ ಮಣಿಶೇಖರ್‌, ಹನುಮಂತು, ಟಿ.ಡಿ ಶಶಿಕುಮಾರ್‌, ಎಚ್.‌ ರವಿಕುಮಾರ್‌, ರೈತ ಮುಖಂಡರಾದ ಎಸ್.‌ ಶಿವಮೂರ್ತಿ, ಜಿ.ಎನ್‌ ಪಂಚಾಕ್ಷರಿ ಸೇರಿದಂತೆ ನೂರಾರು ರೈತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Monday, September 18, 2023

ಸಂಕ್ಲೀಪುರದಲ್ಲಿ ಕತ್ತು ಹಿಸುಕಿ ಮಹಿಳೆ ಕೊಲೆ

 


   ಭದ್ರಾವತಿ:  ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ  ಮಹಿಳೆಯೋರ್ವಳು ಕೊಲೆಯಾಗಿರುವ ಘಟನೆ ಬೆಳಕಿಗೆ ಬಂದಿದೆ. 

ಜೊತೆಗಿದ್ದವನೆ ಕುತ್ತಿಗೆ ಹಿಸುಕಿ ಹಾಗೂ ಹೊಟ್ಟೆಗೆ ಬಲವಾಗಿ ಒದ್ದು  ಕೊಲೆ ಮಾಡಿರುವುದು ಪೊಲೀಸರ ವಿಚಾರಣೆ ವೇಳೆ ತಿಳಿದು ಬಂದಿದೆ. .

  ತಾಲೂಕಿನ ಸಂಕ್ಲೀಪುರ ಗ್ರಾಮದಲ್ಲಿ ಎಂಪಿಎಂ ನೀಲಗಿರಿ ಮರ ಕಟಾವು ಕೆಲಸ ಮಾಡುತ್ತಿದ್ದ ರೂಪ(30) ಎಂಬಾಕೆ ಕೊಲೆಯಾಗಿರುವ ಮಹಿಳೆ

    ಈಕೆ ಸಿಂಗಾರಿ(35) ಎಂಬಾತನ ಜತೆ ಕಳೆದ ಎರಡು ವರ್ಷದಿಂದ ಜೊತೆಯಲ್ಲಿ ವಾಸವಾಗಿದ್ದು, ಈ ಇಬ್ವರು ನೀಲಿಗಿರಿ ಕಟಾವು ಕೆಲಸಕ್ಕೆ ಹೋಗುತ್ತಿದ್ದರು. ನಿನ್ನೆ ಸಂಜೆ ಮೇಸ್ತ್ರಿಯಿಂದ ಸಂಬಳವಾಗಿದ್ದು, ಇಬ್ಬರು ಮದ್ಯ ಸೇವಿಸಿ ಪರಸ್ಪರ ಗಲಾಟೆಗೆ ಬಿದ್ದಿದ್ದಾರೆ. ಗಲಾಟೆಯಿಂದಾಗಿ ಸಿಂಗಾರಿ ರೂಪಳ ಕುತ್ತಿಗೆ ಹಿಸುಕಿ ಹಾಗೂ ಕಾಲಿನಲ್ಲಿ ಒದ್ದು ಕೊಲೆ ಮಾಡಿರುವುದಾಗಿ ತಿಳಿದುಬಂದಿದ್ದು, ರೂಪ ಚಿತ್ರದುರ್ಗ ಜಿಲ್ಲೆಯ ಭರಮಸಾಗರದ ನಿವಾಸಿ. ಈ ಸಂಬಂಧ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿ ಸಿಂಗಾರಿಯನ್ನ ಬಂಧಿಸಲಾಗಿದೆ.


ಭದ್ರಾ ಜಲಾಶಯದಲ್ಲಿ ನೀರು ನಿಲ್ಲಿಸುವಂತೆ ಆಗ್ರಹಿಸಿ ಸೆ.19ರಂದು ಹೋರಾಟ 

 


ಭದ್ರಾವತಿ: ಭದ್ರಾ ಜಲಾಶಯದಿಂದ ನಾಲೆಗಳಿಗೆ ಹರಿಸುತ್ತಿರುವ ನೀರು ತಕ್ಷಣ ನಿಲ್ಲಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ತಾಲೂಕು ಶಾಖೆ ವತಿಯಿಂದ ಸೆ.19ರಂದು ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.

   ಭದ್ರಾ ಕಾಡಾ ಸಭೆಯಲ್ಲಿ ನೀರು ಹರಿಸಲು ಆಫ್ ಅಂಡ್ ಆನ್ ಪದ್ದತಿ ಅನುಸರಿಸಲು ತೀರ್ಮಾನಿಸಲಾಗಿತ್ತು. ಈ ತೀರ್ಮಾನದ ಪ್ರಕಾರ ಸೆ. 16ರಂದು  ನೀರು ನಿಲ್ಲಿಸಬೇಕಾಗಿತ್ತು. ಆದರೆ ಇಲ್ಲಿಯವರೆಗೂ ನೀರು ನಿಲ್ಲಿಸಿಲ್ಲ. ಈಗ ನೀರು ನಿಲ್ಲಿಸದ್ದಿದ್ದಲ್ಲಿ ಬೇಸಿಗೆಯಲ್ಲಿ ಅಡಕೆ ತೋಟಗಳು ಒಣಗಿಹೋಗುತ್ತವೆ. ಈ ಹಿನ್ನೆಲೆಯಿಂದ ತಕ್ಷಣವೇ ನೀರು ಹರಿಸುವುದನ್ನು ನಿಲ್ಲಿಸಬೇಕೆಂದು ಆಗ್ರಹಿಸಿ ಬೆಳ್ಳಿಗ್ಗೆ 11-30ಕ್ಕೆ  ಮಿಲ್ಟ್ರಿಕ್ಯಾಂಪ್ ನೀರಾವರಿ ಎಕ್ಸಿಕ್ಯುಟಿವ್ ಇಂಜಿನಿಯರ್ ಕಛೇರಿ ಎದುರು ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. 

ರೈತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಹೋರಾಟ ಯಶಸ್ವಿಗೊಳಿಸುವಂತೆ ಕೋರಲಾಗಿದೆ.


ಶಾಂತಿ ಸಾಮಿಲ್ ಮಾಲೀಕ ರಾಮಣ್ಣ ನಿಧನ

 


ರಾಮಣ್ಣ

   ಭದ್ರಾವತಿ: ನಗರದ ಹೊಳೆಹೊನ್ನೂರು ರಸ್ತೆಯ ಶಾಂತಿ ಸಾಮಿಲ್ ಮಾಲೀಕರಾದ ಜಿ.ರಾಮಣ್ಣ(69) ಸೋಮವಾರ ನಿಧನ ಹೊಂದಿದರು.

   ಪತ್ನಿ, ಪುತ್ರಿ ಹಾಗು ಇಬ್ಬರು ಪುತ್ರರು ಇದ್ದಾರೆ. ಕೆಲವು ದಿನಗಳ ಹಿಂದೆ ಅನಾರೋಗ್ಯಕ್ಕೆ ಒಳಗಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. 

   ಇವರ ಅಂತ್ಯಸಂಸ್ಕಾರ ಮಂಗಳವಾರ ನಗರದ ಹೊಳೆಹೊನ್ನೂರು ರಸ್ತೆಯಲ್ಲಿರುವ ಹಿಂದೂ ರುದ್ರಭೂಮಿಯಲ್ಲಿ ನಡೆಯಲಿದೆ.

  ಇವರ ನಿಧನಕ್ಕೆ ತಮಿಳು ಸಮಾಜದ ಮುಖಂಡರು, ಗಣ್ಯರು, ಸಂತಾಪ ಸೂಚಿಸಿದ್ದಾರೆ.

 


ಅಲ್ ಖಸ್ವ ಟ್ರಸ್ಟ್ ಉದ್ಘಾಟನೆ

 


ಭದ್ರಾವತಿ ತಾಲೂಕಿನ ಹೊಳೆ ನೇರಲಕೆರೆ ಗ್ರಾಮದಲ್ಲಿ ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ಅಲ್ ಖಸ್ವ ಟ್ರಸ್ಟ್ ಶಾಸಕ ಬಿಕೆ ಸಂಗಮೇಶ್ವರ ಉದ್ಘಾಟಿಸಿದರು. ಶಾಸಕ ಬಿ.ಕೆ ಸಂಗಮೇಶ್ವರ್ ಸೇರಿದಂತೆ ಇನ್ನಿತರರನ್ನು ಸನ್ಮಾನಿಸಿ ಗೌರವಿಸಲಾಯಿತು.

   ಭದ್ರಾವತಿ: ತಾಲೂಕಿನ ಹೊಳೆ ನೇರಲಕೆರೆ ಗ್ರಾಮದಲ್ಲಿ ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ಅಲ್ ಖಸ್ವ ಟ್ರಸ್ಟ್ ಶಾಸಕ ಬಿಕೆ ಸಂಗಮೇಶ್ವರ ಉದ್ಘಾಟಿಸಿದರು. 

    ಉದ್ಘಾಟನೆ ಅಂಗವಾಗಿ ಮಕ್ಕಳಿಗೆ ನೋಟ್ ಬುಕ್ ಮತ್ತು ಪೆನ್ನು ವಿತರಿಸಲಾಯಿತು. ಶಾಸಕ ಬಿ.ಕೆ ಸಂಗಮೇಶ್ವರ್ ಸೇರಿದಂತೆ ಇನ್ನಿತರರನ್ನು ಸನ್ಮಾನಿಸಿ ಗೌರವಿಸಲಾಯಿತು.

    ಟ್ರಸ್ಟ್ ಅಧ್ಯಕ್ಷ ಮಹಮದ್ ರಿಯಾಜ್, ಉಪಾಧ್ಯಕ್ಷ ಮಹಮದ್ ಪಸೀಉಲ್ಲಾ, ಕಾರ್ಯದರ್ಶಿ ಮಹಮದ್ ಇರ್ಫಾನ್ ಖದಂಜಿ, ಪೈರೋಜ್ ಖಾನ್, ಮಹಮದ್ ಸಲೀಂ, ಮಹಮದ್ ಸುಹೇಲ್, ಮುಜಾಮಿಲ್,  ಪೀರ್ ಸಾಬ್, ಮಹಮದ್ ಫಪಿ, ಮಹಮದ್ ಶಬೀರ್, ಹಯಾತ್ ಖಾನ್, ಸೈಯದ್ ಸಲಾಂ, ಸೈಯದ್ ಅಸ್ಲಾಂ, ಹಫೀಜ್ ಇಂತೆಜಾರ್, ಹಫೀಜ್ ಇಸಾಬ್, ಮಹಮದ್ ಸೈಪುಲ್ಲ, ಉಬೇದ್ ಉಲ್ಲಾ, ಅಯೂಬ್ ಖಾನ್,  ಸೈಯದ್ ಅಹಮದ್, ನಜೀರ್ ಸಾಬ್ ಯುವ ಮುಖಂಡ ಬಿ ಎಸ್ ಗಣೇಶ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.







Sunday, September 17, 2023

ಸೇವಾ ಪಾಕ್ಷಿಕ : ಬಿಜೆಪಿ ಯುವ ಮೋರ್ಚಾದಿಂದ ರಕ್ತದಾನ ಶಿಬಿರ

 

ಪ್ರಧಾನಮಂತ್ರಿ ನರೇಂದ್ರ ಮೋದಿಯವರ 73ನೇ ವರ್ಷದ ಜನ್ಮದಿನ ಸೇವಾ ಪಾಕ್ಷಿಕ ಪ್ರಯುಕ್ತ ಭದ್ರಾವತಿ ನಗರದಲ್ಲಿ ಬಿಜೆಪಿ ಯುವ ಮೋರ್ಚಾ ವತಿಯಿಂದ ಭಾನುವಾರ ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಗಿತ್ತು.

    ಭದ್ರಾವತಿ: ಪ್ರಧಾನಮಂತ್ರಿ ನರೇಂದ್ರ ಮೋದಿಯವರ 73ನೇ ವರ್ಷದ ಜನ್ಮದಿನ ಸೇವಾ ಪಾಕ್ಷಿಕ ಪ್ರಯುಕ್ತ ನಗರದಲ್ಲಿ ಬಿಜೆಪಿ ಯುವ ಮೋರ್ಚಾ ವತಿಯಿಂದ ಭಾನುವಾರ ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಗಿತ್ತು.

    ಬಿಜೆಪಿ ಕಾರ್ಯಾಲಯದಲ್ಲಿ ಆಯೋಜಿಸಲಾಗಿದ್ದ ಶಿಬಿರ ತಾಲೂಕು ಮಂಡಲ ಅಧ್ಯಕ್ಷ ಜಿ. ಧರ್ಮಪ್ರಸಾದ್ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು ರಕ್ತದಾನ ಮಹಾದಾನವಾಗಿದ್ದು, ರಕ್ತದಾನ ದಾನ ಮಾಡುವ ಮೂಲಕ ಸೇವಾಕಾರ್ಯ ನಡೆಸಿದ ದಾನಿಗಳಿಗೆ ಅಭಿನಂದಿಸಿದರು.

    ಯುವ ಮೋರ್ಚಾ ಪ್ರಮುಖರಾದ ಗೋಕುಲ ಕೃಷ್ಣ, ಧನುಷ್ ಬೋಸ್ಲೆ, ಹೇಮಂತ್, ಪ್ರದೀಪ್ ಗೌಂಡರ್ ಹಾಗು ಕಾರ್ಯಕರ್ತರು ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡಿದರು.

ಗೌರಿ-ಗಣೇಶ ಹಬ್ಬದ ಆಚರಣೆಗೆ ಭರದ ಸಿದ್ಧತೆ

 ಕಲಾವಿದರಿಂದ ಮೂರ್ತಿಗಳಿಗೆ ಅಂತಿಮ ಸ್ಪರ್ಶ

ಭದ್ರಾವತಿ ಹಳೇನಗರದ ಹಿರಿಯ ಕಲಾವಿದ ಜಯರಾಂ ಅವರು ಈ ಬಾರಿ ಹಾಲಪ್ಪ ವೃತ್ತದಲ್ಲಿ ಪ್ರತಿಷ್ಠಾಪನೆಗೊಳ್ಳಲಿರುವ ಗಣೇಶ ಮೂರ್ತಿಗೆ ಅಂತಿಮ ಸ್ಪರ್ಶ ನೀಡುತ್ತಿರುವುದು.

ಭದ್ರಾವತಿ: ನಗರದೆಲ್ಲೆಡೆ ಗೌರಿ-ಗಣೇಶ ಹಬ್ಬ ಆಚರಣೆಗೆ ಭರದ ಸಿದ್ದತೆಗಳು ನಡೆಯುತ್ತಿದ್ದು, ಪ್ರಮುಖ ಸಾರ್ವಜನಿಕ ಸ್ಥಳಗಳಲ್ಲಿ ಈ ಬಾರಿ ಸಹ ಗಣೇಶ ಮೂರ್ತಿ ಪ್ರತಿಷ್ಠಾಪನೆ ನಡೆಯುತ್ತಿದೆ. ಈ ನಡುವೆ ಗಣೇಶ ಮೂರ್ತಿಗಳ ತಯಾರಿಕೆಯಲ್ಲಿ ತೊಡಗಿರುವ ಕಲಾವಿದರು ಮೂರ್ತಿಗಳಿಗೆ ಅಂತಿಮ ಸ್ಪರ್ಶ ನೀಡುತ್ತಿದ್ದು, ಈಗಾಗಲೇ ಆಕರ್ಷಕವಾದ ವಿಭಿನ್ನ ಮೂರ್ತಿಗಳು ಪ್ರತಿಷ್ಠಾಪನೆಗೆ ಸಿದ್ದಗೊಂಡಿವೆ.

ಹಳೇನಗರದ ಕುಂಬಾರಬೀದಿ ಗಣೇಶಮೂರ್ತಿ ತಯಾರಿಕೆಯ ಪ್ರಮುಖ ಸ್ಥಳವಾಗಿದ್ದು, ಈ ಬೀದಿಯಲ್ಲಿ ನೂರಾರು ಗಣೇಶಮೂರ್ತಿಗಳು ಪ್ರತಿಷ್ಠಾಪನೆಗಾಗಿ ತಯಾರುಗೊಂಡು ಕಂಗೊಳಿಸುತ್ತಿವೆ.



ಭದ್ರಾವತಿ ಹೊಸಸೇತುವೆ ರಸ್ತೆ ಶ್ರೀ ಬನಶಂಕರಿ ದೇವಸ್ಥಾನದ ಬಳಿ ಕಲಾವಿದ ಸೋಮಶೇಖರ್ ಶ್ರೀನಿಧಿ ಕಲಾಕೇಂದ್ರದ ಹೆಸರಿನಲ್ಲಿ ಗಣಪತಿ ಮೂರ್ತಿಗಳ ತಯಾರಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ.

    ನಗರದ ಬಿ.ಎಚ್ ರಸ್ತೆ ಹಾಲಪ್ಪ ವೃತ್ತ ಶ್ರೀ ಮಹಾಗಣಪತಿ ದೇವಸ್ಥಾನದ ಬಳಿ ಪ್ರತಿಷ್ಠಾಪನೆಗೊಳ್ಳಲಿರುವ ಗಣೇಶ ಮೂರ್ತಿ ಹಿರಿಯ ಕಲಾವಿದ ಜಯರಾಂ ತಯಾರಿಸಿದ್ದು, ಮೂರ್ತಿ 9 ಅಡಿ ಎತ್ತರವಿದ್ದು, ಆಕರ್ಷಕವಾಗಿದೆ. ಈ ಬಾರಿ ಜಯರಾಂ ಅವರು ಆಕರ್ಷಕವಾದ ಸುಮಾರು 20 ಮೂರ್ತಿಗಳನ್ನು ತಯಾರಿಸಿದ್ದಾರೆ. ಇವರು ಸುಮಾರು 30 ವರ್ಷಗಳಿಗೂ ಅಧಿಕ ಕಾಲದಿಂದ ಮೂರ್ತಿಗಳ ತಯಾರಿಕೆಯಲ್ಲಿ ತೊಡಗಿಸಿಕೊಂಡಿದ್ದು, ಕಲ್ಲಿನ ಮೂರ್ತಿ ಹಾಗು ಸಿಮೆಂಟ್ ಮೂರ್ತಿಗಳ ತಯಾರಿಕೆಯಲ್ಲೂ ಪರಿಣಿತರಾಗಿದ್ದಾರೆ.

    ಹೊಸಸೇತುವೆ ರಸ್ತೆ ಶ್ರೀ ಬನಶಂಕರಿ ದೇವಸ್ಥಾನದ ಬಳಿ ಕಲಾವಿದ ಸೋಮಶೇಖರ್ ಶ್ರೀನಿಧಿ ಕಲಾಕೇಂದ್ರದ ಹೆಸರಿನಲ್ಲಿ ಗಣಪತಿ ಮೂರ್ತಿಗಳ ತಯಾರಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ.

    ಇವರ ಕೈಚಳಕದಲ್ಲಿ ಈ ಬಾರಿ 16 ಮೂರ್ತಿಗಳು ತಯಾರುಗೊಂಡಿವೆ. ಇವುಗಳಲ್ಲಿ ಕೃಷ್ಣ-ರಾಧೆ ಗಣಪ, ಈಶ್ವರ ಗಣಪ, ಆಂಜನೇಯ ಗಣಪ ವಿಶೇಷವಾಗಿ ಗಮನಸೆಳೆದಿವೆ.


ಭದ್ರಾವತಿ ಹೊಸಮನೆ ಹಿಂದೂ ಮಹಾಸಭಾ-ಹಿಂದೂ ರಾಷ್ಟ್ರ ಸೇನಾ ಶ್ರೀ ವಿನಾಯಕ ಸೇವಾ ಸಮಿತಿ ವತಿಯಿಂದ 51ನೇ ವರ್ಷದ ಆಚರಣೆ ಹಿನ್ನಲೆಯಲ್ಲಿ ನಗರದ ಪ್ರಮುಖ ವೃತ್ತಗಳಲ್ಲಿ ಆಕರ್ಷಕವಾದ ಮಹಾದ್ವಾರಗಳನ್ನು ನಿರ್ಮಿಸಲಾಗಿದೆ.

    ಮಹಾದ್ವಾರಗಳ ನಿರ್ಮಾಣ :

    ನಗರದ ಪ್ರಮುಖ ವಿನಾಯಕ ಸೇವಾ ಸಮಿತಿಗಳಲ್ಲಿ ಒಂದಾಗಿರುವ ಹೊಸಮನೆ ಹಿಂದೂ ಮಹಾಸಭಾ-ಹಿಂದೂ ರಾಷ್ಟ್ರ ಸೇನಾ ಶ್ರೀ ವಿನಾಯಕ ಸೇವಾ ಸಮಿತಿ ವತಿಯಿಂದ 51ನೇ ವರ್ಷದ ಆಚರಣೆಗೆ ಭರದ ಸಿದ್ದತೆಗಳನ್ನು ಕೈಗೊಳ್ಳಲಾಗುತ್ತಿದೆ. ನಗರದ ಅಂಬೇಡ್ಕರ್ ವೃತ್ತ, ಮಾಧವಚಾರ್ ವೃತ್ತ, ರಂಗಪ್ಪ ವೃತ್ತ ಸೇರಿದಂತೆ ಪ್ರಮುಖ ವೃತ್ತಗಳಲ್ಲಿ ಆಕರ್ಷಕವಾದ ಮಹಾದ್ವಾರಗಳನ್ನು ನಿರ್ಮಿಸಲಾಗಿದೆ. ಸೆ.26ರಂದು ಬೃಹತ್ ರಾಜಬೀದಿ ಉತ್ಸವ ನಡೆಯಲಿದೆ.