ಶುಕ್ರವಾರ, ಅಕ್ಟೋಬರ್ 20, 2023

ಮೈದೊಳಲು ಗ್ರಾಮದಲ್ಲಿ ಆರೋಗ್ಯ ತಪಾಸಣಾ ಶಿಬಿರ

ಸಿಆರ್‌ಎಸ್ ಚಟುವಟಿಕೆಯಡಿ ಸೈಲ್-ವಿಐಎಸ್‌ಎಲ್ ಆಯೋಜನೆ

ಸೈಲ್-ವಿಐಎಸ್‌ಎಲ್ ಕಾರ್ಖಾನೆ ವತಿಯಿಂದ ನಗರದ ವಿಐಎಸ್‌ಎಲ್ ಆಸ್ಪತ್ರೆ, ಶಿವಮೊಗ್ಗ ಸಹ್ಯಾದ್ರಿ ನಾರಾಯಣಾ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಮತ್ತು ಶಂಕರ ಕಣ್ಣಿನ ಆಸ್ಪತ್ರೆ ಸಹಯೋಗದಲ್ಲಿ ಭದ್ರಾವತಿ ತಾಲೂಕಿನ ಮೈದೊಳಲು ಗ್ರಾಮದಲ್ಲಿ ಸಾಮಾಜಿಕ ಸಾಂಸ್ಥಿಕ ಹೊಣೆಗಾರಿಕೆ(ಸಿಎಸ್‌ಆರ್) ಕಾರ್ಯಕ್ರಮದ ಅಡಿಯಲ್ಲಿ ಆರೋಗ್ಯ ತಪಾಸಣಾ ಶಿಬಿರ ಆಯೋಜಿಸಲಾಗಿತ್ತು.
    ಭದ್ರಾವತಿ: ಸೈಲ್-ವಿಐಎಸ್‌ಎಲ್ ಕಾರ್ಖಾನೆ ವತಿಯಿಂದ ನಗರದ ವಿಐಎಸ್‌ಎಲ್ ಆಸ್ಪತ್ರೆ, ಶಿವಮೊಗ್ಗ ಸಹ್ಯಾದ್ರಿ ನಾರಾಯಣಾ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಮತ್ತು ಶಂಕರ ಕಣ್ಣಿನ ಆಸ್ಪತ್ರೆ ಸಹಯೋಗದಲ್ಲಿ ತಾಲೂಕಿನ ಮೈದೊಳಲು ಗ್ರಾಮದಲ್ಲಿ ಸಾಮಾಜಿಕ ಸಾಂಸ್ಥಿಕ ಹೊಣೆಗಾರಿಕೆ(ಸಿಎಸ್‌ಆರ್) ಕಾರ್ಯಕ್ರಮದ ಅಡಿಯಲ್ಲಿ ಆರೋಗ್ಯ ತಪಾಸಣಾ ಶಿಬಿರ ಆಯೋಜಿಸಲಾಗಿತ್ತು.
    ಸೈಲ್-ವಿಐಎಸ್‌ಎಲ್ ಕಾರ್ಖಾನೆ ಕಾರ್ಯಪಾಲಕ ನಿರ್ದೇಶಕ ಬಿ.ಎಲ್. ಚಂದ್ವಾನಿ, ಮುಖ್ಯ ಮಹಾಪ್ರಬಂಧಕರು (ಸ್ಥಾವರ) ಕೆ.ಎಸ್. ಸುರೇಶ್ ಹಾಗೂ ಮೈದೊಳಲು ಗ್ರಾಮ ಪಂಚಾಯಿತಿ ಅಧ್ಯಕ್ಷೆ  ಗೀತಮ್ಮ ಉದ್ಘಾಟಿಸಿದರು.
    ವಿಐಎಸ್‌ಎಲ್ ಆಸ್ಪತ್ರೆ ತಜ್ಞ ವೈದ್ಯರಾದ ಡಾ. ಎಮ್.ವೈ ಸುರೇಶ್ ಮತ್ತು ಡಾ. ಎಸ್.ಎನ್ ಸುರೇಶ್ ನೇತೃತ್ವ ತಂಡ ಸಾಮಾನ್ಯ ಆರೋಗ್ಯ, ಮೂಳೆ ಮತ್ತು ದಂತ ಸಮಸ್ಯೆಗಳ ಬಗ್ಗೆ ತಜ್ಞರ ಸಲಹೆಯನ್ನು ನೀಡಿತು. ತಂಡದಲ್ಲಿ ಅಪರ್ಣ, ಟಿ.ಎನ್. ಕೃಷ್ಣ, ಅಲೆನ್ ಜುಡೊ ಪಿಂಟೊ, ಮಧುಕರ್, ತುಳಸಿ ಮತ್ತು  ಆರ್. ಮಂಜುನಾಥ್ ಉಪಸ್ಥಿತರಿದ್ದರು.
    ಶಂಕರ ಕಣ್ಣಿನ ಆಸ್ಪತ್ರೆ ತಜ್ಞರಾದ ಡಾ. ಅಮೃತ ಮಧು, ಜುಮನ, ಕಾವ್ಯ ಮತ್ತು ಚಂದನ ಹಾಗು ಮಹೇಶ್ ರಾಯ್ಕರ್ ತಂಡ ನೇತ್ರ ಪರೀಕ್ಷೆ ನಡೆಸಿ ನೇತ್ರ ಆರೈಕೆಯ ಬಗ್ಗೆ ತಜ್ಞರ ಸಲಹೆಯನ್ನು ನೀಡಿತು.
    ಸಹ್ಯಾದ್ರಿ ನಾರಾಯಣ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ತಜ್ಞರಾದ ಡಾ. ಜೀನಾ, ಡಾ. ಹಂಸಲೇಖ, ತಾಸಿನಾ, ಪೂಜಾ, ಅತುಲ್ಯ ಮತ್ತು ಗಣೇಶ್ ನೇತೃತ್ವದ ತಂಡ ಹೃದಯ ಸಂಬಂಧಿ, ೨ಡಿ, ಇಸಿಎಚ್‌ಓ ಹಾಗು ಇಸಿಜಿ ಪರೀಕ್ಷೆಗಳನ್ನು ನಡೆಸಿ, ಹೃದ್ರೋಗ ಆರೈಕೆಯ ಬಗ್ಗೆ ತಜ್ಞರ ಸಲಹೆಯನ್ನು ನೀಡಿತು.
    ಮಹಾಪ್ರಬಂಧಕರು(ಸಿಬ್ಬಂದಿ ಮತ್ತು ಸಾರ್ವಜನಿಕ ಸಂಪರ್ಕ) ಎಲ್, ಪ್ರವೀಣ್ ಕುಮಾರ್, ಸಹಾಯಕ ಪ್ರಬಂಧಕರು (ಸಿಬ್ಬಂದಿ) ಕೆ.ಎಸ್. ಶೋಭ, ಮುಖ್ಯ ವೈದ್ಯಾಧಿಕಾರಿಗಳಾದ ಡಾ.ಎಮ್.ವೈ ಸುರೇಶ್, ಎಸ್.ಎನ್ ಸುರೇಶ್, ಸಹ್ಯಾದ್ರಿ ನಾರಾಯಣ ಹೃದಯಾಲಯದ ಹಾಗೂ ಶಂಕರ ಕಣ್ಣಿನ ಆಸ್ಪತ್ರೆಯ ವೈದ್ಯಕೀಯ ತಂಡ, ಮೈದೊಳಲು ಗ್ರಾಮಪಂಚಾಯಿತಿಯ ಸದಸ್ಯರು ಉಪಸ್ಥಿತರಿದ್ದರು.  
    ಸಾಮಾನ್ಯ ಆರೋಗ್ಯ, ಹೃದಯ, ಕಣ್ಣು, ಮೂಳೆ, ದಂತ ಚಿಕಿತ್ಸೆ ತಪಾಸಣೆ ಮತ್ತು ಉಚಿತ ಔಷಧಿಯ ವಿತರಣೆ ನಡೆಯಿತು. ೨೫೪ ಗ್ರಾಮಸ್ಥರು ಶಿಬಿರದ ಸದುಪಯೋಗ ಪಡೆದುಕೊಂಡರು.

ನ್ಯಾಯಬೆಲೆ ಅಂಗಡಿ ಮಾಲೀಕ ಗಂಗಪ್ಪ ನಿಧನ

ಗಂಗಪ್ಪ
    ಭದ್ರಾವತಿ :  ತಾಲೂಕಿನ ಮಾವಿನಕೆರೆ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ, ನ್ಯಾಯಬೆಲೆ ಅಂಗಡಿ ಮಾಲೀಕ ಗಂಗಪ್ಪ(೬೫) ನಿಧನ ಹೊಂದಿದರು.
     ಪತ್ನಿ, ೪ ಪುತ್ರಿಯರು, ಓರ್ವ ಪುತ್ರ ಇದ್ದರು. ಗಂಗಪ್ಪ ಕೆಂಚನಹಳ್ಳಿ ಗ್ರಾಮದ ನಿವಾಸಿಯಾಗಿದ್ದು, ಗ್ರಾಮ ಪಂಚಾಯಿತಿಗೆ ೩ ಬಾರಿ ಸದಸ್ಯರಾಗಿ ಆಯ್ಕೆಯಾಗುವ ಮೂಲಕ ಒಂದು ಬಾರಿ ಅಧ್ಯಕ್ಷರಾಗಿ, ಮತ್ತೊಂದು ಬಾರಿ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಅಲ್ಲದೆ ಕಾಳಿಂಗನಹಳ್ಳಿ ಮತ್ತು ಕೆಂಪೇಗೌಡ ನಗರ ನ್ಯಾಯಬೆಲೆ ಅಂಗಡಿ ಮಾಲೀಕರಾಗಿದ್ದರು.  
    ಇವರ ಅಂತ್ಯಕ್ರಿಯೆ ಕೆಂಚನಹಳ್ಳಿ ಗ್ರಾಮದಲ್ಲಿ ಶುಕ್ರವಾರ ನೆರವೇರಿತು. ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎಸ್ ಕುಮಾರ್, ಯುವ ಮುಖಂಡ ಬಿ. ಎಸ್ ಗಣೇಶ್, ಕರ್ನಾಟಕ ರಾಜ್ಯ ಸರ್ಕಾರಿ ಪಡಿತರ ವಿತರಕರ ಸಂಘದ ಜಿಲ್ಲಾಧ್ಯಕ್ಷರಾದ ಸಿದ್ದಲಿಂಗಯ್ಯ ಸೇರಿದಂತೆ ನ್ಯಾಯಬೆಲೆ ಅಂಗಡಿಗಳ ಮಾಲೀಕರು, ಗ್ರಾಮ ಪಂಚಾಯಿತಿ ಸದಸ್ಯರು ಹಾಗು ವಿವಿಧ ಸಂಘ-ಸಂಸ್ಥೆಗಳ ಪ್ರಮುಖರು ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿದ್ದರು.  

ಗುರುವಾರ, ಅಕ್ಟೋಬರ್ 19, 2023

ಕುಸ್ತಿ ಪಂದ್ಯಾವಳಿಯಿಂದಾಗಿ ದಸರಾ ಹಬ್ಬಕ್ಕೆ ಹೆಚ್ಚಿನ ಮೆರಗು : ಎಚ್.ಎಂ ಮನುಕುಮಾರ್

ಭದ್ರಾವತಿ ಹಳೇನಗರದ ಕನಕಮಂಟಪ ಮೈದಾನದಲ್ಲಿ ನಾಡಹಬ್ಬ ದಸರಾ ಅಂಗವಾಗಿ ನಗರಸಭೆ ವತಿಯಿಂದ ಆಯೋಜಿಸಲಾಗಿದ್ದ ಕುಸ್ತಿ ಪಂದ್ಯಾವಳಿಗೆ ಹಿರಿಯ ಕುಸ್ತಿಪಟು ಪೈಲ್ವಾನ್ ಸೀತಾರಾಮಣ್ಣ ಚಾಲನೆ ನೀಡಿದರು.
    ಭದ್ರಾವತಿ: ನಾಡಹಬ್ಬ ದಸರಾ ಆಚರಣೆಯಲ್ಲಿ ಕುಸ್ತಿ ಪಂದ್ಯಾವಳಿ ಹೆಚ್ಚಿನ ಮೆರಗು ನೀಡುವ ಜೊತೆಗೆ ಕುಸ್ತಿಪಟುಗಳು ಸ್ವಯಂ ಪ್ರೇರಿತವಾಗಿ ಪಾಲ್ಗೊಂಡು ಯಶಸ್ವಿಗೊಳಿಸುತ್ತಿರುವುದು ಶ್ಲಾಘನೀಯ ಎಂದು ನಗರಸಭೆ ಪೌರಾಯುಕ್ತ ಎಚ್.ಎಂ ಮನುಕುಮಾರ್ ಹೇಳಿದರು.
    ಅವರು ಗುರುವಾರ ಹಳೇನಗರದ ಕನಕಮಂಟಪ ಮೈದಾನದಲ್ಲಿ ನಾಡಹಬ್ಬ ದಸರಾ ಅಂಗವಾಗಿ ನಗರಸಭೆ ವತಿಯಿಂದ ಆಯೋಜಿಸಲಾಗಿದ್ದ ಕುಸ್ತಿ ಪಂದ್ಯಾವಳಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
    ಕುಸ್ತಿ ಪಂದ್ಯಾವಳಿಗೆ ಹೆಚ್ಚಿನ ಬೇಡಿಕೆ ಇದ್ದು, ಇಲ್ಲಿನ ಕುಸ್ತಿಪಟುಗಳಿಂದ ಹೆಚ್ಚಿನ ಸಹಕಾರ ಲಭಿಸುತ್ತಿದೆ. ಕುಸ್ತಿ ಪಂದ್ಯಾವಳಿ ನಾಡಹಬ್ಬಕ್ಕೆ ಕಳಸವಿದ್ದದಂತೆ ಕಂಡು ಬರುತ್ತಿದೆ ಎಂದರು.
    ಕ್ರೀಡಾಸಮಿತಿ ಅಧ್ಯಕ್ಷ ಚನ್ನಪ್ಪ ಮಾತನಾಡಿ, ಕುಸ್ತಿ ಪಂದ್ಯಾವಳಿ ಯಶಸ್ಸಿಗಾಗಿ ನಗರದ ಕುಸ್ತಿಪಟುಗಳು ಒಗ್ಗೂಡಿ ಬೆಂಬಲ ನೀಡುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ. ಮುಂದಿನ ದಿನಗಳಲ್ಲಿ ಕುಸ್ತಿಪಟುಗಳಿಗೆ ಇನ್ನೂ ಹೆಚ್ಚಿನ ಪ್ರೋತ್ಸಾಹ ಲಭಿಸುವಂತಾಗಬೇಕೆಂದರು.


ಭದ್ರಾವತಿ ಹಳೇನಗರದ ಕನಕಮಂಟಪ ಮೈದಾನದಲ್ಲಿ ನಾಡಹಬ್ಬ ದಸರಾ ಅಂಗವಾಗಿ ನಗರಸಭೆ ವತಿಯಿಂದ ಕುಸ್ತಿ ಪಂದ್ಯಾವಳಿ ಆಯೋಜಿಸಲಾಗಿತ್ತು.
    ಪಂದ್ಯಾವಳಿಗೆ ಮಡಿವಾಳ ಸಮಾಜದ ಹಿರಿಯ ಕುಸ್ತಿಪಟು ಪೈಲ್ವಾನ್ ಸೀತಾರಾಮಣ್ಣ ಚಾಲನೆ ನೀಡಿದರು. ಅಂತರಾಷ್ಟ್ರೀಯ ಕುಸ್ತಿಪಟು ಬಸವರಾಜ ಹಾರ್‍ನಳ್ಳಿ, ನಗರಸಭೆ ಅಧ್ಯಕ್ಷೆ ಶೃತಿ ವಸಂತಕುಮಾರ್, ಉಪಾಧ್ಯಕ್ಷೆ ಸರ್ವಮಂಗಳ ಭೈರಪ್ಪ, ಸದಸ್ಯರಾದ ಲತಾ ಚಂದ್ರಶೇಖರ್, ಕಾಂತರಾಜ್, ಮಾಜಿ ಸದಸ್ಯ ಬದರಿ ನಾರಾಯಣ, ಸಮುದಾಯ ಸಂಘಟನಾ ಅಧಿಕಾರಿ ಸುಹಾಸಿನಿ, ಫೈಲ್ವಾನ್‌ಗಳಾದ ನಂಜುಂಡಪ್ಪ, ಕೃಷ್ಣಮೂರ್ತಿ, ವಾಸುದೇವ್, ಚನ್ನಬಸಪ್ಪ, ಯಲ್ಲಪ್ಪ, ಲಕ್ಷ್ಮಣ್, ಪ್ರಮುಖರಾದ ಎಚ್.ಆರ್ ರಂಗನಾಥ(ಕಬಡ್ಡಿ), ವೈ. ನಟರಾಜ್, ಗೋಪಿ, ಶಿವಲಿಂಗೇಗೌಡ ಸೇರಿದಂತೆ ಇನ್ನಿತರರು ಉಪಸ್ಥಿರಿದ್ದರು.  
    ಕುಸ್ತಿ ಪಂದ್ಯಾವಳಿಗೆ ಚಾಲನೆ ನೀಡಿದ ಹಿರಿಯ ಕುಸ್ತಿಪಟು ಫೈಲ್ವಾನ್ ಸೀತಾರಾಮಣ್ಣ ಅವರನ್ನು ಮಡಿವಾಳ ಸಮಾಜದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ಸಮಾಜದ ಉಪಾಧ್ಯಕ್ಷರಾದ ಮಂಜಪ್ಪ(ಸಿದ್ದಾಪುರ), ಮಂಜಪ್ಪ(ನಲ್ಕೊಪ್ಪೆ), ನಿರ್ದೇಶಕರಾದ ಬಾಬಣ್ಣ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
  ಗುಲ್ಬರ್ಗ, ಧಾರವಾಡ, ಬೆಳಗಾವಿ, ಹರಿಹರ, ದಾವಣಗೆರೆ, ಶಿವಮೊಗ್ಗ, ತರೀಕೆರೆ ಸೇರಿದಂತೆ ವಿವಿಧೆಡೆಗಳಿಂದ ಸುಮಾರು ೧೫೦ಕ್ಕೂ ಹೆಚ್ಚು ಕುಸ್ತಿಪಟುಗಳು ಪಂದ್ಯಾವಳಿಯಲ್ಲಿ ಭಾಗವಹಿಸಿದ್ದರು.

ಲಿಖಿತವಾಗಿ ದೂರು ನೀಡಿದಾಗ ಮಾತ್ರ ಸಮಸ್ಯೆ ಬಗೆಹರಿಸಲು ಸಾಧ್ಯ : ಉಮೇಶ್ ಈಶ್ವರ್ ನಾಯ್ಕ

ಭದ್ರಾವತಿ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ಲೋಕಾಯುಕ್ತ ಇಲಾಖೆ ವತಿಯಿಂದ ಸಾರ್ವಜನಿಕ ಕುಂದುಕೊರತೆ ಸಭೆ ನಡೆಯಿತು.
    ಭದ್ರಾವತಿ: ಲಿಖಿತವಾಗಿ ದೂರು ನೀಡಿದಾಗ ಮಾತ್ರ ಸಮಸ್ಯೆ ಬಗೆಹರಿಸಲು ಸಾಧ್ಯ ಎಂದು ಲೋಕಾಯುಕ್ತ ಪೊಲೀಸ್ ಉಪಾಧೀಕ್ಷಕ ಉಮೇಶ್ ಈಶ್ವರ್ ನಾಯ್ಕ ಹೇಳಿದರು.
    ಅವರು ಗುರುವಾರ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಲೋಕಾಯುಕ್ತ ಇಲಾಖೆ ವತಿಯಿಂದ ಆಯೋಜಿಸಲಾಗಿದ್ದ ಸಾರ್ವಜನಿಕ ಕುಂದುಕೊರತೆ ಸಭೆಯಲ್ಲಿ ದೂರುದಾರರಿಗೆ ಮಾಹಿತಿ ನೀಡಿದರು.
    ವಿನಾಕಾರಣ ಆರೋಪ ಮಾಡುವುದರಿಂದ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಸಾಧ್ಯವಿಲ್ಲ. ಆರೋಪಗಳಿಗಿಂತಲೂ ಲಿಖಿತ ದೂರು ಮುಖ್ಯ.  ದೂರುದಾರರು ಅಗತ್ಯ ದಾಖಲೆಗಳೊಂದಿಗೆ ಕುಂದುಕೊರತೆ ಸಭೆಯಲ್ಲಿ ಭಾಗವಹಿಸಿ ತಮ್ಮ ಸಮಸ್ಯೆಗಳನ್ನು ಬಗಹರಿಸಿಕೊಳ್ಳಲು ಮುಂದಾಗಬೇಕು. ನ್ಯಾಯಾಲಯಗಳಲ್ಲಿ ವಿಚಾರಣೆಯಲ್ಲಿರುವ ವ್ಯಾಜ್ಯಗಳನ್ನು ಕುಂದುಕೊರತೆ ಸಭೆಯಲ್ಲಿ ಬಗೆಹರಿಸಲು ಸಾಧ್ಯವಿಲ್ಲ. ಹೆಚ್ಚಿನ ದೂರುಗಳು ಬಾರದಂತೆ ನಗರಸಭೆ ಹಾಗು ತಾಲೂಕು ಆಡಳಿತ ಅಧಿಕಾರಿಗಳು ಸಾರ್ವಜನಿಕರ ಸಮಸ್ಯೆಗಳಿಗೆ ಪೂರಕವಾಗಿ ಸ್ಪಂದಿಸಬೇಕೆಂದು ಸಲಹೆ ನೀಡಿದರು.
    ಸಭೆಯಲ್ಲಿ ತಹಶೀಲ್ದಾರ್ ಕೆ.ಆರ್ ನಾಗರಾಜ್, ಪೌರಾಯುಕ್ತ ಎಚ್.ಎಂ ಮನುಕುಮಾರ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಜರಿದ್ದರು. ಸಭೆಯಲ್ಲಿ ಒಟ್ಟು ೬ ಲಿಖಿತ ದೂರುಗಳು ಸಲ್ಲಿಕೆಯಾಗಿದ್ದು, ವಿಚಾರಣೆ ನಡೆಸಲಾಯಿತು.

ಬುಧವಾರ, ಅಕ್ಟೋಬರ್ 18, 2023

ಶತಮಾನೋತ್ಸವ ಆಚರಣೆ ನಂತರ ಸರ್ವೋಚ್ಚ ನ್ಯಾಯಾಲಯದಲ್ಲಿ ಹೋರಾಟ

ವಿಐಎಸ್‌ಎಲ್ ಶತಮಾನೋತ್ಸವ ಸಂಘ ಸಂಸ್ಥೆಗಳ ಪೂರ್ವಭಾವಿ ಸಭೆಯಲ್ಲಿ ನಟ ದೊಡ್ಡಣ್ಣ

ಭದ್ರಾವತಿ ನ್ಯೂಟೌನ್ ಶಾರದಾ ಮಂದಿರದಲ್ಲಿ ನಡೆದ ವಿಐಎಸ್‌ಎಲ್ ಶತಮಾನೋತ್ಸವ ಆಚರಣಾ ಪೂರ್ವಭಾವಿ ಸಭೆಯಲ್ಲಿ ಚಲನಚಿತ್ರ ನಟ ದೊಡ್ಡಣ್ಣ ಮಾತನಾಡಿದರು.
    ಭದ್ರಾವತಿ: ಮೈಸೂರು ಮಹಾರಾಜರು ಆರಂಭಿಸಿದ ವಿಐಎಸ್‌ಎಲ್ ಕಾರ್ಖಾನೆ ಇದೀಗ ೧೦೦ ವರ್ಷ ಪೂರೈಸಿರುವ ಹಿನ್ನಲೆಯಲ್ಲಿ ನಮ್ಮನ್ನಾಳುವವರ ಕಣ್ಣು ತೆರೆಸಲು ಕಾರ್ಖಾನೆಯ ಅನ್ನತಿಂದು ಬೆಳೆದ ಸಮಾನ ಮನಸ್ಕರು ಒಗ್ಗೂಡಿ ಚಿಂತಿಸಿದ ಫಲವಾಗಿ ಶತಮಾನೋತ್ಸವ ಆಚರಣೆ ರೂಪುಗೊಂಡಿದ್ದು, ಇದರಲ್ಲಿ ಯಾವುದೇ ರಾಜಕೀಯವಿಲ್ಲ. ಜಾತ್ಯಾತೀತವಾಗಿ, ಪಕ್ಷಾತೀತವಾಗಿ ಶತಮಾನೋತ್ಸವ  ಹಬ್ಬದ ರೀತಿಯಲ್ಲಿ ಆಚರಿಸಲು ಎಲ್ಲರ ಸಹಕಾರ ಅಗತ್ಯವಿದೆ ಎಂದು ಶತಮಾನೋತ್ಸವ ಆಚರಣೆ ಸಮಿತಿ ಅಧ್ಯಕ್ಷ, ಹಿರಿಯ ಚಲನಚಿತ್ರ ನಟ ದೊಡ್ಡಣ್ಣ ಹೇಳಿದರು.
    ಅವರು ಬುಧವಾರ ನ್ಯೂಟೌನ್ ಶಾರದಾ ಮಂದಿರದಲ್ಲಿ ಆಯೋಜಿಸಿದ್ದ ಸಂಘ ಸಂಸ್ಥೆಗಳ ಸಭೆಯಲ್ಲಿ ಮಾತನಾಡಿ,  ನ: ೩ ರಿಂದ ೫ ರವರೆಗೆ ಆಯೋಜಿಸಿರುವ ಅದ್ದೂರಿ ಕಾರ್ಯಕ್ರಮಕ್ಕೆ ಸಕಲ ಸಿದ್ದತೆ ಮಾಡಿಕೊಳ್ಳಲಾಗುತ್ತಿದೆ. ಅದಕ್ಕಾಗಿ ೧೨ ಸಮಿತಿಗಳನ್ನು ರಚಿಸಲಾಗಿದೆ. ಆಸಕ್ತರು ಸ್ವಇಚ್ಚೆಯಿಂದ ಆ ಸಮಿತಿಗಳಲ್ಲಿ ಸೇರಿಕೊಂಡು ನಮ್ಮ ಮನೆಯ ಹಬ್ಬವೆಂದುಕೊಂಡು ಸೇವೆ ಮಾಡಲು ಮುಂದೆ ಬನ್ನಿ ಎಂದು ಮನವಿ ಮಾಡಿದರು.
    ಶತಮಾನೋತ್ಸವಕ್ಕೆ ಮೈಸೂರು ಮಹಾರಾಜ ಯದುವೀರ್ ಒಡೆಯರ್ ಆಗಮಿಸಲು ಒಪ್ಪಿದ್ದಾರೆ. ರಾಷ್ಟ್ರಪತಿ ಮುರ್ಮು, ಪ್ರಧಾನ ಮಂತ್ರಿಗಳನ್ನು ಆಹ್ವಾನಿಸಲು ಸತತ ಪ್ರಯತ್ನ ನಡೆಯುತ್ತಿದೆ. ಕೇಂದ್ರ ಸಚಿವರಾದ ನಿರ್ಮಲಾ ಸೀತಾರಾಮನ್, ಜ್ಯೋತಿರಾದಿತ್ಯ ಸಿಂಧ್ಯಾ, ಪ್ರಹ್ಲಾದ ಜೋಷಿ, ನಾರಾಯಣಸ್ವಾಮಿ, ಮಾಜಿ ಸಿಎಂಗಳಾದ ಎಸ್.ಎಂ.ಕೃಷ್ಣ, ಹೆಚ್.ಡಿ.ದೇವೇಗೌಡರು, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಮಧುಬಂಗಾರಪ್ಪ, ಸಂಸದ ಬಿ.ವೈ.ರಾಘವೇಂದ್ರ, ಶಾಸಕ ಬಿ.ಕೆ.ಸಂಗಮೇಶ್ವರ್ ಸೇರಿದಂತೆ ಸರ್ಕಾರದ ಎಲ್ಲಾ ಸಚಿವರು, ವಿಧಾನಸಭೆ ಹಾಗು ವಿಧಾನಪರಿಷತ್ ಅಧ್ಯಕ್ಷರು, ಸದಸ್ಯರನ್ನು ಈಗಾಗಲೇ ಆಹ್ವಾನಿಸಲಾಗಿದೆ ಎಂದರು.
    ಬೆಂಗಳೂರು ಜಯದೇವ ಆಸ್ಪತ್ರೆಯ ಡಾ. ಸಿ. ಮಂಜುನಾಥ್, ಇನ್ಪೋಸಿಸ್ ಪ್ರತಿಷ್ಠಾನದ ಅಧ್ಯಕ್ಷೆ ಸುಧಾಮೂರ್ತಿ, ಉದ್ಯಮಿಗಳಾದ ವಿಜಯಸಂಕೇಶ್ವರ್, ಪ್ರಭಾಕರ ಕೋರೆ ಮುಂತಾದವರನ್ನು ಗೌರವಿಸಲಾಗುವುದು. ಸುತ್ತೂರು ಶ್ರೀಗಳು, ಸಿದ್ದಗಂಗಾ ಶ್ರೀಗಳು, ಕೋಡಿಮಠದ ಶ್ರೀಗಳು, ಆದಿಚುಂಚನಗಿರಿ ಮಠದ ನಿರ್ಮಲಾ ನಂದನಾಥ ಸ್ವಾಮೀಜಿ ಸಾನಿಧ್ಯವಹಿಸುವರು ಎಂದರು.
    ರಾಜ್ಯ ಉಚ್ಛ ನ್ಯಾಯಾಲಯದ ನ್ಯಾಯಾವಾದಿ, ಶತಮಾನೋತ್ಸವ ಆಚರಣೆ ಸಮಿತಿಯ ಪ್ರಧಾನ ಕಾರ್ಯದರ್ಶಿ ಎಂ.ವಿ.ರೇವಣಸಿದ್ದಯ್ಯ ಮಾತನಾಡಿ, ಕಾರ್ಖಾನೆಯಲ್ಲಿ ಅನ್ನ ತಿಂದ ನಾವೆಲ್ಲರೂ ಕೂಡಿ ಕಾರ್ಖಾನೆಗೆ ಕಾಯಕಲ್ಪ ನೀಡಲು ಮುಂದಾಗಿದ್ದೇವೆ. ಅದಕ್ಕೆ ನಿಮ್ಮೆಲ್ಲರ ಸಹಕಾರ ಅತ್ಯಮೂಲ್ಯವಾಗಿ ಬೇಕಾಗಿದೆ. ಶತಮಾನೋತ್ಸವದ ಹೆಸರಲ್ಲಿ ನಮ್ಮದು ಹೋರಾಟವಾಗಿದೆ. ಈ ಹಿಂದೆ ವಿಜಯನಗರ ಸಾಮ್ರಾಜ್ಯದಂತೆ ಕಂಗೊಳಿಸುತ್ತಿದ್ದ ಕಾರ್ಖಾನೆಯು ಇಂದು ಸೊರಗಿದೆ. ವಿಐಎಸ್‌ಎಲ್ ಉಳಿಸಿ ಎಂಬ ಹೆಸರಲ್ಲಿ ಹೋರಾಟ ರೂಪಿಸಿದ್ದ ನಾವು ಶತಮಾನೋತ್ಸವ ಆಚರಿಸುವ ಹೆಸರಲ್ಲಿ ಹೋರಾಟಕ್ಕೆ ಮುಂದಾಗಿದ್ದೇವೆ ಎಂದರು.
    ವೇದಿಕೆಯಲ್ಲಿ ಕಾರ್ಖಾನೆಯ ಕಾರ್ಮಿಕ ಸಂಘದ ಬಸಂತಕುಮಾರ್, ನಿವೃತ್ತ ಅಧಿಕಾರಿ ಎಸ್. ಅಡವೀಶಯ್ಯ, ಮಂಜುನಾಥ್, ಉದ್ಯೋಗಿಗಳ ಸಂಘದ ಕುಮಾರಸ್ವಾಮಿ ಇದ್ದರು.
    ಸಭೆಯಲ್ಲಿ ವಿಐಎಸ್‌ಎಲ್ ಕಾರ್ಮಿಕ ಸಂಘದ ಮೋಹನ್, ಅಮೃತ್, ತ್ರಿವೇಣಿ, ಗುತ್ತಿಗೆ ಕಾರ್ಮಿಕ ಸಂಘದ ಸುರೇಶ್, ರಾಕೇಶ್, ನಿವೃತ್ತ ಕಾರ್ಮಿಕ ಸಂಘದ ನರಸಿಂಹಾಚಾರ್, ಶಂಕರ್, ನಂಜಪ್ಪ, ಕೇರಳ ಸಮಾಜಂ ಅಧ್ಯಕ್ಷ ಗಂಗಾಧರನ್, ಮಾನವ ಹಕ್ಕುಗಳ ಹೋರಾಟ ಸಮಿತಿ ಅಧ್ಯಕ್ಷ ಬಿ.ಎನ್.ರಾಜು, ಅಖಿಲ ಭಾರತ ವೀರಶೈವ ಮಹಾಸಭಾದ ಸಿದ್ದಲಿಂಗಯ್ಯ, ಕಲಾವಿದರ ಸಂಘದ ಮಂಜುನಾಥ್, ಚಿದಾನಂದ್, ಶಂಕರ್ ಬಾಬು, ಸುಂದರಬಾಬು, ಬಿಜೆಪಿ ಮುಖಂಡ ಟಿ.ವೆಂಕಟೇಶ್, ಹೇಮಾವತಿ ವಿಶ್ವನಾಥರಾವ್, ಒಕ್ಕಲಿಗರ ಸಂಘದ ಅಧ್ಯಕ್ಷ ಎ.ಟಿ. ರವಿ, ಎಂಪಿಎಂ ಚೆನ್ನಿಗಪ್ಪ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.

ಮೀನಾಕ್ಷಮ್ಮ ನಿಧನ

ಮೀನಾಕ್ಷಮ್ಮ
    ಭದ್ರಾವತಿ: ನಗರದ ಜನ್ನಾಪುರ ಕಾರುಣ್ಯ ಚಾರಿಟಬಲ್ ಟ್ರಸ್ಟ್ ಗೌರವಾಧ್ಯಕ್ಷ ಡಾ.ಜಿ. ವಿಜಯ್‌ರವರ ತಾಯಿ ಮೀನಾಕ್ಷಮ್ಮ(೭೬) ದುಬೈನಲ್ಲಿ ನಿಧನ ಹೊಂದಿ
    ಡಾ.ಜಿ. ವಿಜಯ್ ಸೇರಿದಂತೆ ಓರ್ವ ಪುತ್ರಿ ಇದ್ದರು. ಮೀನಾಕ್ಷಮ್ಮ ಮೂಲತಃ ಗಾಂಧಿನಗರದ ನಿವಾಸಿಯಾಗಿದ್ದು, ಕಳೆದ ಸುಮಾರು ೨೦ ವರ್ಷಗಳಿಂದ ದುಬೈನಲ್ಲಿ ನೆಲೆಸಿದ್ದರು. ಹಲವಾರು ಧಾರ್ಮಿಕ ಹಾಗು ಸಾಮಾಜಿಕ ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದರು. ಇವರ ನಿಧನಕ್ಕೆ ಕಾರುಣ್ಯ ಚಾರಿಟಬಲ್ ಟ್ರಸ್ಟ್ ಸಂತಾಪ ಸೂಚಿಸಿದೆ.

ಅ.೧೯ರಂದು ಉಚಿತ ಆರೋಗ್ಯ ತಪಾಸಣಾ ಶಿಬಿರ


    ಭದ್ರಾವತಿ: ಭಾರತೀಯ ಉಕ್ಕು ಪ್ರಾಧಿಕಾರದ ನಗರದ ಸೈಲ್-ವಿಐಎಸ್‌ಎಲ್ ಆಸ್ಪತ್ರೆ ವತಿಯಿಂದ ಶಿವಮೊಗ್ಗ ಸಹ್ಯಾದ್ರಿ ನಾರಾಯಣ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಮತ್ತು ಶಂಕರ ಕಣ್ಣಿನ ಆಸ್ಪತ್ರೆ ಹಾಗು ಮೈದೊಳಲು ಗ್ರಾಮ ಪಂಚಾಯಿತಿ ಸಹಯೋಗದೊಂದಿಗೆ ಅ.೧೯ರಂದು ತಾಲೂಕಿನ ಮೈದೊಳಲು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ `ಆರೋಗ್ಯವೇ ಭಾಗ್ಯ' ಯೋಜನೆಯಡಿ ಉಚಿತ ಆರೋಗ್ಯ ತಪಾಸಣೆ ಮತ್ತು ಔಷಧಿ ವಿತರಣೆ ಹಮ್ಮಿಕೊಳ್ಳಲಾಗಿದೆ.
    ತಜ್ಞ ವೈದ್ಯರಿಂದ ಮೂಳೆ, ನರ, ಹೃದಯ, ೩ಡಿ ಎಕೋ, ಇಸಿಜಿ, ಕಣ್ಣು, ಹಲ್ಲು, ಬಿ.ಪಿ, ಮಧುಮೇಹ(ಸಕ್ಕರೆ ಕಾಯಿಲೆ) ಕಾಯಿಲೆಗಳ ಉಚಿತ ತಪಾಸಣೆ ಹಾಗು ಔಷಧಿ ವಿತರಣೆ ಬೆಳಿಗ್ಗೆ ೯ ರಿಂದ ಮಧ್ಯಾಹ್ನ ೨ ಗಂಟೆವರೆಗೆ ನಡೆಯಲಿದೆ. ಮೈದೊಳಲು ಸೇರಿದಂತೆ ಸುತ್ತಮುತ್ತಲಿನ ಗ್ರಾಮಸ್ಥರು ಶಿಬಿರ ಸದುಪಯೋಗ ಪಡೆದುಕೊಳ್ಳುವಂತೆ ವಿಐಎಸ್‌ಎಲ್ ಆಡಳಿತ ಮಂಡಳಿ ಕೋರಿದೆ.