Wednesday, October 25, 2023

ಶ್ರೀ ವಿನಾಯಕ ಮೂರ್ತಿ ವಿಸರ್ಜನೆ : ಮೆರವಣಿಗೆ

ಭದ್ರಾವತಿ ನ್ಯೂಟೌನ್ ವಿಐಎಸ್‌ಎಲ್ ಆಸ್ಪತ್ರೆ, ಶ್ರೀ ಕರುಮಾರಿಯಮ್ಮ ದೇವಸ್ಥಾನದ ಬಳಿ ಪ್ರತಿಷ್ಠಾಪಿಸಲಾಗಿದ್ದ ಶ್ರೀ ವಿನಾಯಕ ಮೂರ್ತಿ ವಿಸರ್ಜನೆ ಬುಧವಾರ ನಡೆಯಿತು.
    ಭದ್ರಾವತಿ : ನಗರದ ನ್ಯೂಟೌನ್ ವಿಐಎಸ್‌ಎಲ್ ಆಸ್ಪತ್ರೆ, ಶ್ರೀ ಕರುಮಾರಿಯಮ್ಮ ದೇವಸ್ಥಾನದ ಬಳಿ ಪ್ರತಿಷ್ಠಾಪಿಸಲಾಗಿದ್ದ ಶ್ರೀ ವಿನಾಯಕ ಮೂರ್ತಿ ವಿಸರ್ಜನೆ ಬುಧವಾರ ನಡೆಯಿತು.
    ಸ್ಥಳೀಯ ಕೆಲ ಯುವಕರು ಕಳೆದ ಕೆಲವು ವರ್ಷಗಳಿಂದ ಮೂರ್ತಿ ಪ್ರತಿಷ್ಠಾಪನೆ ಮಾಡುವ ಮೂಲಕ ವಿನಾಯಕ ಚತುರ್ಥಿ ಆಚರಿಸಿಕೊಂಡು ಬರುತ್ತಿದ್ದಾರೆ. ವಿಸರ್ಜನೆ ಅಂಗವಾಗಿ ನ್ಯೂಟೌನ್ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಯಿತು. ಯುವಕರೊಂದಿಗೆ ಸ್ಥಳೀಯ ನಿವಾಸಿಗಳು ಮೆರವಣಿಗೆಯಲ್ಲಿ ಪಾಲ್ಗೊಂಡು ಸಂಭ್ರಮಿಸಿದರು. ಸಂಜೆ ಮೂರ್ತಿ ವಿಸರ್ಜಿಸಲಾಯಿತು.

ಬನ್ನಿ ಮುಡಿದ ತಹಸೀಲ್ದಾರ್ : ನಾಡಹಬ್ಬ ದಸರಾ ಸಂಪನ್ನ

ಭದ್ರಾವತಿ ನಗರಸಭೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ನಾಡಹಬ್ಬ ದಸರಾ ಆಚರಣೆಗೆ ತಹಸೀಲ್ದಾರ್ ಕೆ.ಆರ್ ನಾಗರಾಜು ಮಂಗಳವಾರ ರಾತ್ರಿ ಬನ್ನಿ ಮುಡಿಯುವ(ಶಮಿ ಪೂಜೆ) ಮೂಲಕ ತೆರೆ ಎಳೆದರು.
    ಭದ್ರಾವತಿ: ನಗರಸಭೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ನಾಡಹಬ್ಬ ದಸರಾ ಆಚರಣೆಗೆ ತಹಸೀಲ್ದಾರ್ ಕೆ.ಆರ್ ನಾಗರಾಜು ಮಂಗಳವಾರ ರಾತ್ರಿ ಬನ್ನಿ ಮುಡಿಯುವ(ಶಮಿ ಪೂಜೆ) ಮೂಲಕ ತೆರೆ ಎಳೆದರು.
    ಹಳೇನಗರದ ಕನಕಮಂಟಪ ಮೈದಾನದಲ್ಲಿ ಆಯೋಜಿಸಲಾಗಿದ್ದ ಬನ್ನಿ ಮುಡಿಯುವ ಕಾರ್ಯಕ್ರಮದಲ್ಲಿ ಪುರಾಣ ಪ್ರಸಿದ್ದ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ದೇವಸ್ಥಾನದ ಪ್ರಧಾನ ಅರ್ಚಕರಾದ ಉ||ವೇ||ಬ್ರ||ವಿ|| ಎಸ್. ರಂಗನಾಥ ಶರ್ಮ ನೇತೃತ್ವದಲ್ಲಿ ಧಾರ್ಮಿಕ ಆಚರಣೆಗಳು ಜರುಗಿದವು. ಕೊನೆಯಲ್ಲಿ ರಾವಣನ ಸಂಹಾರದೊಂದಿಗೆ ದಸರಾ ಆಚರಣೆಗೆ ತೆರೆ ಎಳೆಯಲಾಯಿತು. ನೆರೆದಿದ್ದ ಜನರು ಪರಿಸ್ಪರ ಬನ್ನಿ ಹಂಚಿಕೊಳ್ಳುವ ಮೂಲಕ ಹಬ್ಬದ ಶುಭಾಶಯ ಕೋರಿದರು.
    ಚಾಮುಂಡೇಶ್ವರಿ ದೇವಿ ಒಳಿತು ಮಾಡಲಿ : ಕೃತಜ್ಞತೆ
    ಇದಕ್ಕೂ ಮೊದಲು ಮಾತನಾಡಿದ ಶಾಸಕ ಬಿ.ಕೆ ಸಂಗಮೇಶ್ವರ್, ಕ್ಷೇತ್ರದಲ್ಲಿ ಇನ್ನೂ ಹೆಚ್ಚಿನ ಅಭಿವೃದ್ಧಿ ಕಾರ್ಯಗಳು ನಡೆಯುವಂತಾಗಲಿ. ಎಲ್ಲರಿಗೂ ತಾಯಿ ಚಾಮುಂಡೇಶ್ವರಿ ಒಳಿತು ಮಾಡಲಿ ಎಂದು ಪ್ರಾರ್ಥಿಸಿದರು.  ಪ್ರತಿ ವರ್ಷದಂತೆ ಈ ಬಾರಿ ಸಹ ವಿಜೃಂಭಣೆಯಿಂದ ನಾಡಹಬ್ಬ ದಸರಾ ಆಚರಣೆ ನಡೆದಿದ್ದು, ಯಶಸ್ವಿಗೆ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.
    ನಗರಸಭೆ ಅಧ್ಯಕ್ಷೆ ಶೃತಿ ವಸಂತಕುಮಾರ್, ಉಪಾಧ್ಯಕ್ಷೆ ಸರ್ವಮಂಗಳ ಭೈರಪ್ಪ, ಸ್ಥಾಯಿ ಸಮಿತಿ ಅಧ್ಯಕ್ಷ ಸುದೀಪ್ ಕುಮಾರ್, ಪೌರಾಯುಕ್ತ ಎಚ್.ಎಂ ಮನುಕುಮಾರ್, ದಸರಾ ಕ್ರೀಡಾ ಸಮಿತಿ ಅಧ್ಯಕ್ಷ ಚನ್ನಪ್ಪ ಹಾಗು ವಿವಿಧ ಸಮಿತಿಗಳ ಅಧ್ಯಕ್ಷರು, ಸದಸ್ಯರಾದ ಬಸವರಾಜ್, ಜಾರ್ಜ್, ಆರ್. ಮೋಹನ್ ಕುಮಾರ್, ಬಷೀರ್ ಅಹಮದ್, ವಿ. ಕದಿರೇಶ್, ಬಿ.ಟಿ ನಾಗರಾಜ್, ಬಿ.ಕೆ ಮೋಹನ್, ಅನುಸುಧಾ ಮೋಹನ್ ಪಳನಿ, ಲತಾ ಚಂದ್ರಶೇಖರ್, ಪ್ರೇಮ ಬದರಿನಾರಾಯಣ, ಶಶಿಕಲಾ ನಾರಾಯಣಪ್ಪ, ಗೀತಾ ರಾಜ್‌ಕುಮಾರ್, ಅನುಪಮ ಚನ್ನೇಶ್, ಕಾಂತರಾಜ್, ಕೋಟೇಶ್ವರರಾವ್, ಉದಯ್‌ಕುಮಾರ್, ರಿಯಾಜ್ ಅಹಮದ್, ಪಲ್ಲವಿ ದಿಲೀಪ್, ನಾಗರತ್ನ ಅನಿಲ್‌ಕುಮಾರ್, ಜಯಶೀಲ ಸುರೇಶ್, ಸವಿತಾ ಉಮೇಶ್, ರೇಖಾ ಪ್ರಕಾಶ್, ಮಂಜುಳ ಸುಬ್ಬಣ್ಣ, ಅನಿತಾ ಮಲ್ಲೇಶ್, ಆರ್. ಶ್ರೇಯಸ್(ಚಿಟ್ಟೆ), ಬಿ.ಎಂ ರವಿಕುಮಾರ್ ಹಾಗು ಅಧಿಕಾರಿಗಳಾದ ರಾಜ್‌ಕುಮಾರ್, ಪ್ರಭಾಕರ್, ಸುಹಾಸಿನಿ ಮತ್ತು ಪೌರಸೇವಾ ನೌಕರರ ಸೇವಾ ಸಂಘದ ಪದಾಧಿಕಾರಿಗಳು, ದಸರಾ ಉದ್ಘಾಟಕರು, ಸಮಾಜ ಸೇವಕರಾದ ಪಿ. ವೆಂಕಟರಮಣ ಶೇಟ್ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳ, ರಾಜಕೀಯ ಪಕ್ಷಗಳ ಪ್ರಮುಖರು, ವಿವಿಧ ಸರ್ಕಾರಿ ಇಲಾಖೆಗಳ ಅಧಿಕಾರಿಗಳು, ನೌಕರರು ಸೇರಿದಂತೆ ಇನ್ನಿತರರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು

೪ನೇ ಏಷ್ಯನ್ ಪ್ಯಾರಾ ಗೇಮ್ಸ್ ಪಂದ್ಯಾವಳಿ : ಭಾರತ ತಂಡಕ್ಕೆ ೨ ಪದಕ

ಚೀನಾದ ಹಾಂಗಝೌನಲ್ಲಿ ಜರುಗಿದ ೪ನೇ ಏಷ್ಯನ್ ಪ್ಯಾರಾ ಗೇಮ್ಸ್ ಪಂದ್ಯಾವಳಿಯಲ್ಲಿ ಭಾರತ ತಂಡದ ಕ್ರೀಡಾಪಟುಗಳು ೧,೫೦೦ ಮೀಟರ್ ಓಟದಲ್ಲಿ ಚಿನ್ನ ಹಾಗು ಬೆಳ್ಳಿ ಪದಕ ಪಡೆದುಕೊಂಡಿದ್ದಾರೆ.
    ಭದ್ರಾವತಿ : ಚೀನಾದ ಹಾಂಗಝೌನಲ್ಲಿ ಜರುಗಿದ ೪ನೇ ಏಷ್ಯನ್ ಪ್ಯಾರಾ ಗೇಮ್ಸ್ ಪಂದ್ಯಾವಳಿಯಲ್ಲಿ ಭಾರತ ತಂಡದ ಕ್ರೀಡಾಪಟುಗಳು ೧,೫೦೦ ಮೀಟರ್ ಓಟದಲ್ಲಿ ಚಿನ್ನ ಹಾಗು ಬೆಳ್ಳಿ ಪದಕ ಪಡೆದುಕೊಂಡಿದ್ದಾರೆ.
    ರಕ್ಷಿತಾ ಚಿನ್ನ ಹಾಗು ಲಲಿತಾ ಬೆಳ್ಳಿ ಪದಕ ತಮ್ಮದಾಗಿಸಿಕೊಂಡು ದೇಶಕ್ಕೆ ಕೀರ್ತಿ ತಂದಿದ್ದಾರೆ. ತರಬೇತಿದಾರ ರಾಹುಲ್ .ಬಿ ಮತ್ತು ನಗರದ ಹೊಸಮನೆ ನಿವಾಸಿ ಸಾವಂತ್‌ರವರ ಪುತ್ರಿ, ಸಹಾಯಕ ತರಬೇತಿದಾರರಾದ ಸೌಮ್ಯ ಸಾವಂತ್ ಹಾಗು ಗೈಡ್ ರನ್ನರ್ ತಬ್ರೇಶ್ ಅವರೊಂದಿಗೆ ತಂಡ ಪಂದ್ಯಾವಳಿ ಪಾಲ್ಗೊಂಡಿತ್ತು. ವಿಜೇತ ಕ್ರೀಡಾಪಟುಗಳನ್ನು ನಗರದ ಗಣ್ಯರು, ಕ್ರೀಡಾಭಿಮಾನಿಗಳು ಅಭಿನಂದಿಸಿದ್ದಾರೆ.

Tuesday, October 24, 2023

ಮೈಸೂರು ದಸರಾ ನಾಡಹಬ್ಬ ಗೊಂಬೆ ಪ್ರದರ್ಶನ : ಜ್ಞಾನದ ಕೇಂದ್ರ

ಉಮೇಶ್ ಮತ್ತು ಕುಸುಮ ದಂಪತಿ ವಿಶಿಷ್ಟ ಕಾರ್ಯ

ಭದ್ರಾವತಿ ನ್ಯೂಕಾಲೋನಿ ಶ್ರೀ ಆದಿಚುಂಚನಗಿರಿ ವಿದ್ಯಾಸಂಸ್ಥೆ ಸಮೀಪದ ವಿಐಎಸ್‌ಎಲ್ ವಸತಿ ಗೃಹದಲ್ಲಿ ವಾಸವಾಗಿರುವ ಉಮೇಶ್ ಹಾಗು ಕುಸುಮ ದಂಪತಿ ಈ ಬಾರಿ ಸಹ ೧೦ ದಿನಗಳ ಕಾಲ ದಸರಾ ಗೊಂಬೆ ಪ್ರದರ್ಶನ ಏರ್ಪಡಿಸುವ ಮೂಲಕ ಗಮನ ಸೆಳೆದರು.     
    * ಅನಂತಕುಮಾರ್
     ಭದ್ರಾವತಿ: ವೈಭವದ ಮೈಸೂರು ದಸರಾ ನಾಡಹಬ್ಬ ಪರಂಪರೆ ಕೇವಲ ಗೊಂಬೆ ಪ್ರದರ್ಶನಕ್ಕೆ ಮಾತ್ರ ಸೀಮಿತವಾಗದೆ. ಹಲವು ವಿಶಿಷ್ಟತೆಯೊಂದಿಗೆ ಜ್ಞಾನ ತುಂಬುವ ಕೇಂದ್ರವನ್ನಾಗಿಸಿಕೊಳ್ಳುವ ಮೂಲಕ ನಗರದ ನಿವಾಸಿಗಳಾದ ಉಮೇಶ್ ಮತ್ತು ಕುಸುಮ ದಂಪತಿ ಜನರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ.


ನಗರದ ನ್ಯೂಕಾಲೋನಿ ಶ್ರೀ ಆದಿಚುಂಚನಗಿರಿ ವಿದ್ಯಾಸಂಸ್ಥೆ ಸಮೀಪ ವಿಐಎಸ್‌ಎಲ್ ಕಾರ್ಖಾನೆ ವಸತಿ ಗೃಹದಲ್ಲಿ ವಾಸವಾಗಿರುವ ಖಾಸಗಿ ಕಂಪನಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಉಮೇಶ್ ಹಾಗು ನ್ಯಾಯಾಂಗ ಇಲಾಖೆಯಲ್ಲಿ ಪ್ರಥಮ ದರ್ಜೆ ಸಹಾಯಕರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಕುಸುಮ ದಂಪತಿ ಕಳೆದ ಸುಮಾರು ೨೨ ವರ್ಷಗಳಿಂದ ಮೈಸೂರು ದಸರಾ ನಾಡಹಬ್ಬ ಪರಂಪರೆಯನ್ನು ಗೊಂಬೆ ಪ್ರದರ್ಶನದ ಮೂಲಕ ಉಕ್ಕಿನ ನಗರದ ಜನತೆಗೆ ಪರಿಚಯಿಸುವ ನಿಟ್ಟಿನಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ.
ಈ ಬಾರಿ ಸಹ ೧೦ ದಿನಗಳ ಕಾಲ ಪ್ರದರ್ಶನ ಕೈಗೊಳ್ಳಲಾಗಿತ್ತು. ವಿಶೇಷವಾಗಿ ಚಂದ್ರಯಾನ-೩ ಪ್ರದರ್ಶನಕ್ಕೆ ಮತ್ತಷ್ಟು ಮೆರಗು ನೀಡಿತ್ತು. ರಾಕೆಟ್ ಮೂಲಕ ಚಂದ್ರಯಾನ ಪ್ರಯಾಣ ವಿಸ್ಮಯಗೊಳಿಸುವಂತೆ ಕಂಡು ಬರುತ್ತಿತ್ತು. ಮತ್ತೊಂದು ವಿಶೇಷತೆ ಎಂದರೆ ಈಶ ಫೌಂಡೇಷನ್ ಧ್ಯಾನಾಸಕ್ತ ಜಗದೊಡೆಯ ಶಿವನ ವಿಗ್ರಹ ನೋಡುಗರ ಗಮನ ಸೆಳೆಯಿತು.

ತಾಯಿ ಮನೆಯಿಂದ ರೂಢಿಸಿಕೊಂಡು ಬಂದ ಭವ್ಯಪರಂಪರೆಯ ಈ ಆಚರಣೆಯನ್ನು ಅತ್ತೆಯ ಮನೆಯಲ್ಲೂ ಮುಂದುವರೆಸಿಕೊಂಡು ಹೋಗುತ್ತಿದ್ದೇನೆ. ಪ್ರತಿ ವರ್ಷ ವಿಭಿನ್ನತೆ ಕಾಯ್ದುಕೊಂಡು ಬರಲಾಗುತ್ತಿದೆ. ಈ ಗೊಂಬೆ ಪ್ರದರ್ಶನವನ್ನು ವೀಕ್ಷಿಸಲು ಪ್ರತಿ ವರ್ಷ ನೂರಾರು ಮಂದಿ ಆಗಮಿಸುತ್ತಿದ್ದು, ಮತ್ತಷ್ಟು ಸ್ಪೂರ್ತಿಯನ್ನುಂಟು ಮಾಡುತ್ತಿದೆ.
 - ಕುಸುಮ, ಭದ್ರಾವತಿ

     

    ವನ್ಯ ಜೀವಿ ತಾಣಗಳಾದ ಶಿವಮೊಗ್ಗ ತಾವರೆಕೊಪ್ಪ ಹುಲಿ ಮತ್ತು ಸಿಂಹ ಧಾಮ, ಸಕ್ರೆಬೈಲು ಆನೆ ಬಿಡಾರ, ಭದ್ರಾ ಅಭಯಾರಣ್ಯ, ಗುಡವಿ ಪಕ್ಷಿಧಾಮ, ಮತ್ಸ್ಯಧಾಮ ಹಾಗು ವಿಜಯನಗರ, ಚಾಮುಂಡಿ ಬೆಟ್ಟ, ಶ್ರೀ ಕ್ಷೇತ್ರ ಧರ್ಮಸ್ಥಳ, ಇಡಗುಂಜಿ, ಗಾಣಗಾಪುರ, ಗೋಕರ್ಣ ಸೇರಿದಂತೆ ಹಲವು ಪ್ರವಾಸಿ ತಾಣಗಳು ಹಾಗು ಧಾರ್ಮಿಕ ಕ್ಷೇತ್ರಗಳನ್ನು ಆಕರ್ಷಕವಾಗಿ ಅನಾವರಣಗೊಳಿಸಲಾಗಿತ್ತು. ಆಧುನಿಕ ಶೈಲಿಯ ಅಡುಗೆ ಮನೆ ಹಾಗು ಪ್ರಾಚಿನ ಕಾಲದ ಅಡುಗೆ ಮನೆ ಮತ್ತು ನಗರದ ಪದ್ಮನಿಲಯ ಹೋಟೆಲ್, ಪೂರ್ಣಪ್ರಜ್ಞ ವಿದ್ಯಾಸಂಸ್ಥೆ ಸಹ ಇಲ್ಲಿ ಕಂಡು ಬಂದವು.


    ಉಳಿದಂತೆ ತಾಯಿ ಶ್ರೀ ಚಾಮುಂಡೇಶ್ವರಿ ದೇವಿಯನ್ನೊಳಗೊಂಡಂತೆ ನವದುರ್ಗಿಯರು, ಶೃಂಗೇರಿ ಶಾರದಾಂಬೆ, ಆಚಾರ್ಯತ್ರಯರು, ದಶವತಾರ, ವಿಶ್ವರೂಪ, ಶ್ರೀ ತಿರುಪತಿ ವೆಂಕಟೇಶ್ವರ, ಸಪ್ತಋಷಿ, ಸಂಗೀತ ವಾದ್ಯಗಳು, ಬೆಣ್ಣೆಕೃಷ್ಣ, ಲಲಿತಾದೇವಿ ಅಷ್ಟ ಲಕ್ಷ್ಮಿಯರು, ತ್ರಿಶಕ್ತಿ, ಅನಂತಪದ್ಮನಾಭ, ರುಕ್ಮಿಣಿ ಪಾಂಡುರಂಗ, ಭಕ್ತೆ ಮೀರಾಬಾಯಿ, ಶಿರಡಿ ಸಾಯಿಬಾಬಾ, ಬಾಲಾಂಬಿಕೆ ಜೊತೆಗೆ ವಿಶೇಷವಾಗಿ ಸುಮಾರು ೧೦೦ ವರ್ಷ ಹಳೆಯದಾದ ಪಟ್ಟದ ಗೊಂಬೆ ಸಹ ಇದ್ದು, ಇವುಗಳ ನಡುವೆ ಸದಾ ಕಾಲ ನಮ್ಮೆಲ್ಲರನ್ನು ರಕ್ಷಿಸುತ್ತಿರುವ ವೀರಯೋಧರನ್ನು ಈ ದಂಪತಿ ಸ್ಮರಿಸಿರುವುದು ಮತ್ತೊಂದು ವಿಶೇಷವಾಗಿದೆ. ಸುತ್ತಮುತ್ತಲಿನ ನಿವಾಸಿಗಳು ಇವುಗಳನ್ನು ನೋಡಿ ಆನಂದಿಸುವ ಜೊತೆಗೆ ಕಣ್ತುಂಬಿ ಕೊಂಡರು.  



    ಉಮೇಶ್ ಅವರ ತಾಯಿ ನಾಗರತ್ನ ಅವರ ಮಾರ್ಗದರ್ಶನದಲ್ಲಿ ಮಕ್ಕಳಾದ ಸ್ಕಂದ ಭಾರದ್ವಾಜ್ ಮತ್ತು ಸ್ತುತಿ ಭಾರದ್ವಾಜ್ ಅವರ ಸಹಕಾರದೊಂದಿಗೆ ಈ ದಂಪತಿ ಬಿಡುವಿಲ್ಲದ ಕರ್ತವ್ಯದ ನಡುವೆಯೂ ಯಶಸ್ವಿಯಾಗಿ ಈ ಕಾರ್ಯವನ್ನು ಮುನ್ನೆಡೆಸಿಕೊಂಡು ಬರುತ್ತಿದ್ದಾರೆ. ಅಲ್ಲದೆ ಸುತ್ತಮುತ್ತಲಿನ ನಿವಾಸಿಗಳು ಪ್ರತಿ ವರ್ಷ ಇವರ ಮನೆಗೆ ಭೇಟಿ ನೀಡಿ ಗೊಂಬೆ ಪ್ರದರ್ಶನ ವೀಕ್ಷಿಸಿ ಕಣ್ತುಂಬಿಕೊಳ್ಳುತ್ತಿದ್ದಾರೆ.

ದಸರಾ ನಾಡಹಬ್ಬವಾಗಿದ್ದು, ನಮ್ಮ ನಾಡಿನ ಭವ್ಯ ಪರಂಪರೆ ಮುಂದಿನ ಪೀಳಿಗೆಗೂ ಉಳಿಯಬೇಕೆಂಬ ಆಶಯ ನಮ್ಮದಾಗಿದೆ. ಪ್ರತಿಮನೆಯಲ್ಲೂ ಹಬ್ಬ ಆಚರಿಸಬೇಕು. ಗೊಂಬೆ ಪ್ರದರ್ಶಿಸುವ ಸಂಪ್ರದಾಯ ನನ್ನ ಅಜ್ಜ-ಅಜ್ಜಿಯಿಂದ ಕಲಿತುಕೊಂಡಿದ್ದೇನೆ. ನನ್ನ ತಾಯಿ ನಾಗರತ್ನರವರ ಮಾರ್ಗದರ್ಶನದಲ್ಲಿ ಮುಂದುವರೆಸಿಕೊಂಡು ಹೋಗುವ ಮೂಲಕ ವಿಶಿಷ್ಟತೆ ಕಾಯ್ದುಕೊಂಡು ಬರಲಾಗುತ್ತಿದೆ. ಈ ಬಾರಿ ಚಂದ್ರಯಾನ-೩ ಅನಾವರಣಗೊಳಿಸಲಾಗಿತ್ತು. ಗೊಂಬೆ ಪ್ರದರ್ಶನ ವೀಕ್ಷಿಸಿದ ಎಲ್ಲರಿಂದಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.  
                                                                                                    - ಉಮೇಶ್, ಭದ್ರಾವತಿ
----------------------------------------------------------------------------------------------------------------------------



ಹಿರಿಯ ಪತ್ರಕರ್ತ ನಿಟ್ಟೂರು ಶ್ರೀರಾಮ್ ನಿಧನ

ನಿಟ್ಟೂರು ಶ್ರೀರಾಮ್      
    ಭದ್ರಾವತಿ: ನಗರದ ಲೋಯರ್ ಹುತ್ತಾ ನಿವಾಸಿ, ಹಿರಿಯ ಪತ್ರಕರ್ತ, ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ನಿವೃತ್ತ ಉದ್ಯೋಗಿ ನಿಟ್ಟೂರು ಶ್ರೀರಾಮ್ (೭೯) ಮಂಗಳವಾರ ಸಂಜೆ ನಿಧನರಾದರು.
  ಪತ್ನಿ ಮನೋನ್ಮಣಿ ಶ್ರೀರಾಮ್, ಇಬ್ಬರು ಸೋದರರು ಇದ್ದಾರೆ. ಕಳೆದ ಕೆಲವು ತಿಂಗಳಿನಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಮೃತರು ೫ ದಶಕಗಳ ಕಾಲ ಪ್ರಜಾವಾಣಿ ಮತ್ತು ಡೆಕ್ಕನ್ ಹೆರಾಲ್ಡ್ ಪತ್ರಿಕೆ ಏಜೆಂಟರಾಗಿ, ಹಲವಾರು ಪತ್ರಿಕೆಗಳ ವರದಿಗಾರರಾಗಿ ಸೇವೆ ಸಲ್ಲಿಸಿದ್ದರು. ಬುಧವಾರ ಬೆಳಗ್ಗೆ ಅಪ್ಪರ್ ಹುತ್ತಾ ಹಿಂದೂ ರುದ್ರಭೂಮಿಯಲ್ಲಿ ಅಂತ್ಯ ಸಂಸ್ಕಾರ ನಡೆಯಲಿದೆ.
    ಸಂತಾಪ: ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ಎನ್ ಶ್ರೀಹರ್ಷ, ಮಾಜಿ ಅಧ್ಯಕ್ಷ ಎನ್.ಬಾಬು, ಪತ್ರಿಕಾ ಭವನ ಟ್ರಸ್ಟ್ ಅಧ್ಯಕ್ಷ ಕಣ್ಣಪ್ಪ, ಬಸವರಾಜ್, ಕೂಡ್ಲಿಗೆರೆ ಮಂಜುನಾಥ್, ಅನಂತಕುಮಾರ್, ಶಿವಶಂಕರ್, ಗಣೇಶ್‌ರಾವ್ ಸಿಂದ್ಯಾ, ಟಿ.ಎಸ್ ಆನಂದ್‌ಕುಮಾರ್, ಸುಭಾಷ್‌ರಾವ್ ಸಿಂದ್ಯಾ, ಸುಧೀಂದ್ರ, ಶಂಕರ್, ಸುದರ್ಶನ್, ಶೈಲೇಶ್ ಕೋಠಿ, ಸಯೀದ್ ಖಾನ್, ಕಿರಣ್, ಮಹಾಲಿಂಗಪ್ಪ ಸೇರಿದಂತೆ ಸಂತಾಪ ಸೂಚಿಸಿದರು.

ಕಾಂಗ್ರೆಸ್ ಕಾರ್ಯಕ್ರಮ ಎಂದರೆ ಕಾರ್ಯಕರ್ತರ ಕಾರ್ಯಕ್ರಮ : ಪಕ್ಷದ ಬಲವರ್ಧನೆಗೆ ಶ್ರಮಿಸಿ

ನೂತನ ಕಾಂಗ್ರೆಸ್ ಭವನ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿದ ಶಾಸಕ ಬಿ.ಕೆ ಸಂಗಮೇಶ್ವರ್

ಭದ್ರಾವತಿ ಹಳೇನಗರದ ಬಸವೇಶ್ವರ ವೃತ್ತದಲ್ಲಿ ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ಆಯೋಜಿಸಲಾಗಿದ್ದ ಕಾಂಗ್ರೆಸ್ ಭವನ ಶಂಕುಸ್ಥಾಪನೆ ಕಾರ್ಯಕ್ರಮ ಶಾಸಕ ಬಿ.ಕೆ ಸಂಗಮೇಶ್ವರ್ ಸೇರಿದಂತೆ ಇನ್ನಿತರರು ಉದ್ಘಾಟಿಸಿದರು.
    ಭದ್ರಾವತಿ: ಕಾಂಗ್ರೆಸ್ ಕಾರ್ಯಕ್ರಮ ಎಂದರೆ ಕಾರ್ಯಕರ್ತರ ಕಾರ್ಯಕ್ರಮ. ಕಾರ್ಯಕರ್ತರು ಸ್ವಯಂಪ್ರೇರಿತವಾಗಿ ಪಾಲ್ಗೊಂಡು ಪಕ್ಷದ ಬಲವರ್ಧನೆಗೆ ಶ್ರಮಿಸುವಂತೆ ಶಾಸಕ ಬಿ.ಕೆ.ಸಂಗಮೇಶ್ವರ್ ಕರೆ ನೀಡಿದರು
    ಅವರು ಮಂಗಳವಾರ ಹಳೇನಗರದ ಬಸವೇಶ್ವರ ವೃತ್ತದಲ್ಲಿ ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ಆಯೋಜಿಸಲಾಗಿದ್ದ ಕಾಂಗ್ರೆಸ್ ಭವನ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.
    ಪಕ್ಷದ ಕಾರ್ಯಕರ್ತರು ತಮ್ಮ ಮನೆಯ ಕಾರ್ಯಕ್ರಮ ಎಂದು ಭಾವಿಸಿಕೊಳ್ಳಬೇಕು. ಯಾರು ಸಹ ನಮಗೆ ಆಹ್ವಾನ ನೀಡಿಲ್ಲ ಎಂದುಕೊಳ್ಳಬಾರದು. ಭವನ ನಿರ್ಮಾಣಕ್ಕೆ ಪ್ರತಿಯೊಬ್ಬರೂ ಕೈಜೋಡಿಸಬೇಕೆಂದರು.
    ಪಕ್ಷದ ಜಿಲ್ಲಾಧ್ಯಕ್ಷ ಸುಂದರೇಶ್ ಮಾತನಾಡಿ, ಬುದ್ಧಿವಂತರ ಜಿಲ್ಲೆಯಾಗಿದ್ದ ಶಿವಮೊಗ್ಗವನ್ನು ಬಿಜೆಪಿ ತನ್ನ ಸ್ವಾರ್ಥ ರಾಜಕೀಯದಿಂದ ಸಂಘರ್ಷಗಳನ್ನು ಸೃಷ್ಟಿಸಿ ಜಿಲ್ಲೆಗೆ ಕಪ್ಪುಚುಕ್ಕೆ ತಂದಿದೆ ಎಂದು ಆರೋಪಿಸಿದರು.
    ಕಾಂಗ್ರೆಸ್ ಪಕ್ಷಕ್ಕೆ ಭವಿಷ್ಯವಿದೆ. ಕಾಂಗ್ರೆಸ್ ಏಳಿಗೆಗಾಗಿ ದುಡಿದ ಕಾರ್ಯಕರ್ತರು ಸಣ್ಣಪುಟ್ಟ ಕಾರಣಗಳಿಗಾಗಿ ಬೇರೆಕಡೆ ಮುಖಮಾಡಬೇಡಿ. ಕಳೆದ ಬಾರಿ ಪಕ್ಷದ ಕೆಲವು ತಪ್ಪು ನಿರ್ಣಯಗಳ ಕಾರಣದಿಂದ ಲೋಕಸಭಾ ಚುನಾವಣೆಯಲ್ಲಿ ಅಧಿಕಾರ ಕೈತಪ್ಪಿತು. ಈ ಬಾರಿ ಕಾಂಗ್ರೆಸ್ ಗೆಲುವು ನಿಶ್ಚಿತ ಎಂದರು.
    ಕೆಪಿಸಿಸಿ ಸದಸ್ಯೆ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ ಬಲ್ಕೀಶ್ ಭಾನು ಮಾತನಾಡಿ, ಭದ್ರಾವತಿ ರಾಜಕಾರಣದ ಇತಿಹಾಸವನ್ನು ಗಮನಿಸಿದರೆ ಈ ಕ್ಷೇತ್ರ ಜಾತ್ಯಾತೀತ(ಸೆಕ್ಯೂಲರ್) ಕ್ಷೇತ್ರ ಎಂಬುದು ತಿಳಿಯುತ್ತದೆ. ಬಿಜೆಪಿ ಯಾವ ಕ್ಷೇತ್ರದಲ್ಲಾದರೂ ಅಧಿಕಾರ ಗಳಿಸಬಹುದು; ಆದರೆ ಭದ್ರಾವತಿಯಲ್ಲಿ ಅಧಿಕಾರ ಪಡೆಯುವುದು ಅಸಾಧ್ಯ ಎಂದರು.
    ನಗರಸಭೆ ಹಿರಿಯ ಸದಸ್ಯ ಬಿ.ಕೆ.ಮೋಹನ್ ಮಾತನಾಡಿ, ಕಾರ್ಯಕರ್ತರು ತಾವು ಕೂಡ ನಾಯಕರು ಎಂದು ಭಾವಿಸಿ ಶ್ರಮಿಸಬೇಕು. ಆದರೆ ಬ್ಯಾನರ್, ಆಹ್ವಾನ ಪತ್ರಿಕೆಯಲ್ಲಿ ಹೆಸರು ಪ್ರಕಟಿಸಲಿಲ್ಲ ಎಂದು ಮುನಿಸಿಕೊಳ್ಳುವುದು ಸಣ್ಣತನ. ಹೆಸರು, ಫೋಟೋಗೆ ಸೀಮಿತವಾಗದೆ ಜವಾಬ್ದಾರಿಯಿಂದ ವರ್ತಿಸಬೇಕು. ಹಣದಂತೆಯೇ ಕಾರ್ಯಕರ್ತರ ಶ್ರಮವೂ ಮುಖ್ಯ ಎಂದರು.
    ನಗರಸಭೆ ಅಧ್ಯಕ್ಷೆ ಶೃತಿವಸಂತಕುಮಾರ್, ಉಪಾಧ್ಯಕ್ಷೆ ಸರ್ವಮಂಗಳ, ಬ್ಲಾಕ್ ಕಾಂಗ್ರೆಸ್ ನಗರಾಧ್ಯಕ್ಷ ಎಸ್.ಕುಮಾರ್, ಗ್ರಾಮಾಂತರ ಅಧ್ಯಕ್ಷ ಎಚ್.ಎಲ್. ಷಡಾಕ್ಷರಿ, ಮುಖಂಡರಾದ ರೇಣುಕಮ್ಮ ಸಿ.ಎಂ.ಖಾದರ್ , ಬಾಲಕೃಷ್ಣ, ಮಣಿ, ಕಾಂತರಾಜ್, ಚನ್ನಪ್ಪ, ಬದರಿನಾರಾಯಣ್, ಸುಧಾಮಣಿ, ಟಿಪ್ಪು, ಪ್ರವೀಣ್, ಗೋಪಿ, ಅಫ್ತಾಬ್, ಶೇಕ್ ಮೆಹಬೂಬ್, ಅಂತೋಣಿ ವಿಲ್ಸನ್, ಫ್ರಾನ್ಸಿಸ್, ಶಿವಕುಮಾರ್, ಜೆಬಿಟಿ ಬಾಬು, ಅಮೀರ್ ಜಾನ್ ಆಂಜನೇಯ ಹಾಗು ಪಕ್ಷದ ವಿವಿಧ ಘಟಕಗಳ ಅಧ್ಯಕ್ಷರು, ಪದಾಧಿಕಾರಿಗಳು ಇನ್ನಿತರ ಮುಖಂಡರು ಉಪಸ್ಥಿತರಿದ್ದರು.

ನಾಡಹಬ್ಬ ದಸರಾ ಉತ್ಸವ ಮೆರವಣಿಗೆಗೆ ಶಾಸಕ ಬಿ.ಕೆ ಸಂಗಮೇಶ್ವರ್ ಚಾಲನೆ

ಭದ್ರಾವತಿಯಲ್ಲಿ ನಾಡಹಬ್ಬ ದಸರಾ ಅಂಗವಾಗಿ ನಗರಸಭೆ ವತಿಯಿಂದ ಮಂಗಳವಾರ ಆಯೋಜಿಸಲಾಗಿದ್ದ ಉತ್ಸವ ಮೆರವಣಿಗೆಗೆ ಶಾಸಕ ಬಿ.ಕೆ ಸಂಗಮೇಶ್ವರ್ ಚಾಲನೆ ನೀಡಿದರು.
    ಭದ್ರಾವತಿ: ನಾಡಹಬ್ಬ ದಸರಾ ಅಂಗವಾಗಿ ನಗರಸಭೆ ವತಿಯಿಂದ ಮಂಗಳವಾರ ಆಯೋಜಿಸಲಾಗಿದ್ದ ಉತ್ಸವ ಮೆರವಣಿಗೆಗೆ ಶಾಸಕ ಬಿ.ಕೆ ಸಂಗಮೇಶ್ವರ್ ಚಾಲನೆ ನೀಡಿದರು.
        ನಗರದ ಬಿ.ಎಚ್ ರಸ್ತೆ, ಅಪ್ಪರ್ ಹುತ್ತಾ ಶ್ರೀ ತಿರುಮಲ ವೆಂಕಟೇಶ್ವರ ಸ್ವಾಮಿ ದೇವಸ್ಥಾನದ ಬಳಿ ಸಂಜೆ ೫ ಗಂಟೆಗೆ ಶ್ರೀ ಚಾಮುಂಡೇಶ್ವರಿ ದೇವಿ ಹಾಗು ನಂದಿ ಧ್ವಜಕ್ಕೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಲಾಯಿತು.
    ಡೊಳ್ಳು ಕುಣಿತ, ವೀರಗಾಸೆ ಸೇರಿದಂತೆ ವಿವಿಧ ಕಲಾತಂಡಗಳು, ವಿವಿಧ ಶಾಲೆಗಳ ಸ್ಥಬ್ದ ಚಿತ್ರಗಳು, ಹಳೇನಗರದ ಶ್ರೀ ಲಕ್ಷ್ಮೀನರಸಿಂಹ ಸ್ವಾಮಿ, ಶ್ರೀ ಮೈಲಾರಲಿಂಗೇಶ್ವರ ಸ್ವಾಮಿ, ಶ್ರೀ ಆಂಜನೇಯ ಸ್ವಾಮಿ, ಶ್ರೀ ರಾಮೇಶ್ವರ ಸ್ವಾಮಿ, ಶ್ರೀ ಹಳದಮ್ಮ ದೇವಿ, ಶ್ರೀ ಕಾಳಿಕಾಂಬ ದೇವಿ, ಶ್ರೀ ಕೋಟೆ ಬಸವಣ್ಣ ಸ್ವಾಮಿ, ಭೋವಿ ಕಾಲೋನಿ ಶ್ರೀ ಪಿಳ್ಳಗಮ್ಮ ದೇವಿ, ಶ್ರೀ ಸವದತ್ತಿ ಯಲ್ಲಮ್ಮ, ಶ್ರೀ ಶೆಟ್ಟಮ್ಮದೇವಿ, ಶ್ರೀ ಲಕ್ಷ್ಮಮ್ಮ ದೇವಿ, ಶ್ರೀ ಸಿಗಂದೂರು ಚೌಡೇಶ್ವರಿ, ಶ್ರೀ ಕಾಲರಮ್ಮ ದೇವಿ, ಕುಕ್ಕುವಾಡೇಶ್ವರಿ ದೇವಿ, ಶ್ರೀ ಕೋಟೆ ಮಾರಿಯಮ್ಮ ದೇವಿ, ದಾನವಾಡಮ್ಮ, ತಮ್ಮಣ್ಣ ಕಾಲೋನಿ ಶ್ರೀ ಚೌಡೇಶ್ವರಿ ದೇವಿ, ಸಂತೇ ಮೈದಾನದ ಶ್ರೀ ಸುಂಕಲಮ್ಮ ದೇವಿ, ನ್ಯೂಟೌನ್ ಫ್ಲೇಗ್ ಮಾರಿಯಮ್ಮ, ಭೂತನಗುಡಿ ಶ್ರೀ ಶನೇಶ್ವರ ಸ್ವಾಮಿ, ವಿಜಯನಗರ ಶ್ರೀ ಶನಿದೇವರು, ಬಿ.ಎಚ್ ರಸ್ತೆ ಶ್ರೀ ವಿಶ್ವಸ್ವರೂಪಿಣಿ ಮಾರಿಯಮ್ಮ ದೇವಿ, ತಮ್ಮಣ್ಣ ಕಾಲೋನಿ ಮರದಮ್ಮ ದೇವಿ, ಚಾಮೇಗೌಡ ಏರಿಯಾ, ಮೀನುಗಾರರ ಬೀದಿ, ಜನ್ನಾಪುರ ಶ್ರೀ ಮಾರಿಯಮ್ಮ ದೇವಿ, ಚನ್ನಗಿರಿ ರಸ್ತೆ ಶ್ರೀ ಮಾರಿಕಾಂಬ ದೇವಿ, ನ್ಯೂಟೌನ್ ಶ್ರೀ ಮಾತಂಗಮ್ಮ ದೇವಿ, ಹಳೇನಗರ ಉಪ್ಪಾರಕೇರಿ ಶ್ರೀ ಅಂತರಘಟ್ಟಮ್ಮ, ಗೌಳಿಗರ ಬೀದಿ ಶ್ರೀ ರಾಮೇಶ್ವರ ಸ್ವಾಮಿ, ದೊಣಬಘಟ್ಟ ರಸ್ತೆ ಶ್ರೀ ರಂಗನಾಥ ಸ್ವಾಮಿ, ಶಿವರಾಮನಗರ ಶ್ರೀ ಯಲ್ಲಮ್ಮ ದೇವಿ, ಗೌಳಿಗರ ಬೀದಿ ಶ್ರೀ ಕರುಮಾರಿಯಮ್ಮ ದೇವಿ, ಬಸವೇಶ್ವರ ವೃತ್ತದ ಶ್ರೀ ಕುರುಪೇಶ್ವರಿ ದೇವಿ, ಶ್ರೀ ಕುಕ್ಕುವಾಡೇಶ್ವರಿ ದೇವಿ, ಹೊಸಮನೆ ಶ್ರೀ ಕೆರೆಕೋಡಮ್ಮ ದೇವಿ, ರಂಗಪ್ಪ ವೃತ್ತ ಶ್ರೀ ಗುಳ್ಳಮ್ಮ ದೇವಿ, ಅಂಬೇಡ್ಕರ್‌ನಗರ(ಕಂಚಿನ ಬಾಗಿಲು ವೃತ್ತ) ದುರ್ಗಾಂಬ ದೇವಿ, ದುರ್ಗಿ ನಗರದ ಶ್ರೀ ದುರ್ಗಮ್ಮ ದೇವಿ, ಜೈಭೀಮ್ ನಗರದ ಶ್ರೀ ದೊಡ್ಡಮ್ಮ ದೇವಿ, ಕಂಚಿನಬಾಗಿಲು ಮತ್ತು ಬಿ.ಎಚ್ ರಸ್ತೆ ಶ್ರೀ ಚೌಡೇಶ್ವರಿ ದೇವಿ ಹಾಗು ತರೀಕೆರೆ ರಸ್ತೆಯ ಶ್ರೀ ಧರ್ಮಶಾಸ್ತ ಅಯ್ಯಪ್ಪಸ್ವಾಮಿ ಸೇರಿದಂತೆ ಸುಮಾರು ೫೦ ದೇವಸ್ಥಾನಗಳ ಅಲಂಕೃತಗೊಂಡ ದೇವಾನುದೇವತೆಗಳು ಮೆರವಣಿಗೆಯಲ್ಲಿ ಗಮನ ಸೆಳೆದವು.


    ನಗರಸಭೆ ಅಧ್ಯಕ್ಷೆ ಶೃತಿ ವಸಂತಕುಮಾರ್, ಉಪಾಧ್ಯಕ್ಷೆ ಸರ್ವಮಂಗಳ ಭೈರಪ್ಪ, ಸ್ಥಾಯಿ ಸಮಿತಿ ಅಧ್ಯಕ್ಷ ಸುದೀಪ್ ಕುಮಾರ್, ಪೌರಾಯುಕ್ತ ಎಚ್.ಎಂ ಮನುಕುಮಾರ್, ದಸರಾ ಕ್ರೀಡಾ ಸಮಿತಿ ಅಧ್ಯಕ್ಷ ಚನ್ನಪ್ಪ ಹಾಗು ವಿವಿಧ ಸಮಿತಿಗಳ ಅಧ್ಯಕ್ಷರು, ಸದಸ್ಯರಾದ ಬಸವರಾಜ್, ಜಾರ್ಜ್, ಆರ್. ಮೋಹನ್ ಕುಮಾರ್, ಬಷೀರ್ ಅಹಮದ್, ವಿ. ಕದಿರೇಶ್, ಬಿ.ಟಿ ನಾಗರಾಜ್, ಬಿ.ಕೆ ಮೋಹನ್, ಅನುಸುಧಾ ಮೋಹನ್ ಪಳನಿ, ಲತಾ ಚಂದ್ರಶೇಖರ್, ಪ್ರೇಮ ಬದರಿನಾರಾಯಣ, ಶಶಿಕಲಾ ನಾರಾಯಣಪ್ಪ, ಗೀತಾ ರಾಜ್‌ಕುಮಾರ್, ಅನುಪಮ ಚನ್ನೇಶ್, ಕಾಂತರಾಜ್, ಕೋಟೇಶ್ವರರಾವ್, ಉದಯ್‌ಕುಮಾರ್, ರಿಯಾಜ್ ಅಹಮದ್, ಪಲ್ಲವಿ ದಿಲೀಪ್, ನಾಗರತ್ನ ಅನಿಲ್‌ಕುಮಾರ್, ಜಯಶೀಲ ಸುರೇಶ್, ಸವಿತಾ ಉಮೇಶ್, ರೇಖಾ ಪ್ರಕಾಶ್, ಮಂಜುಳ ಸುಬ್ಬಣ್ಣ, ಅನಿತಾ ಮಲ್ಲೇಶ್, ಆರ್. ಶ್ರೇಯಸ್(ಚಿಟ್ಟೆ), ಬಿ.ಎಂ ರವಿಕುಮಾರ್ ಹಾಗು ಅಧಿಕಾರಿಗಳಾದ ರಾಜ್‌ಕುಮಾರ್, ಪ್ರಭಾಕರ್, ಸುಹಾಸಿನಿ ಮತ್ತು ಪೌರಸೇವಾ ನೌಕರರ ಸೇವಾ ಸಂಘದ ಪದಾಧಿಕಾರಿಗಳು, ದಸರಾ ಉದ್ಘಾಟಕರು, ಸಮಾಜ ಸೇವಕರಾದ ಪಿ. ವೆಂಕಟರಮಣ ಶೇಟ್ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳ, ರಾಜಕೀಯ ಪಕ್ಷಗಳ ಪ್ರಮುಖರು, ವಿವಿಧ ಸರ್ಕಾರಿ ಇಲಾಖೆಗಳ ಅಧಿಕಾರಿಗಳು, ನೌಕರರು ಸೇರಿದಂತೆ ಇನ್ನಿತರರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.
    ಮೆರವಣಿಗೆ ಬಿ.ಎಚ್ ರಸ್ತೆ ಅಂಬೇಡ್ಕರ್ ವೃತ್ತ, ಹಾಲಪ್ಪ ವೃತ್ತ, ಮಾಧವಚಾರ್ ವೃತ್ತ, ರಂಗಪ್ಪ ವೃತ್ತ ಮೂಲಕ ಕನಕಮಂಟಪ ಮೈದಾನ ತಲುಪಿತು. ನಂತರ ಬನ್ನಿ ಮುಡಿಯುವ ಕಾರ್ಯಕ್ರಮ ಜರುಗಿತು. ಹಳೇನಗರದ ಪುರಾಣ ಪ್ರಸಿದ್ದ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ದೇವಸ್ಥಾನದ ಪ್ರಧಾನ ಅರ್ಚಕರಾದ ವೆ||ಬ್ರ|| ರಂಗನಾಥಶರ್ಮರವರ ನೇತೃತ್ವದಲ್ಲಿ ಧಾರ್ಮಿಕ ಆಚರಣೆಗಳು ಜರುಗಿದವು.