Thursday, November 2, 2023

ಯುವ ಮುಖಂಡ ಮಂಗೋಟೆ ರುದ್ರೇಶ್ ನೂತನ ಜನಸಂಪರ್ಕ ಕಛೇರಿ ಉದ್ಘಾಟನೆ

ಭದ್ರಾವತಿ ಭಾರತೀಯ ಜನತಾ ಪಕ್ಷದ ನಗರದ ಯುವ ಮುಖಂಡ, ನ್ಯಾಯವಾದಿ ಮಂಗೋಟೆ ರುದ್ರೇಶ್‌ರವರ ಜನಸಂಪರ್ಕ ಕಛೇರಿ ಗುರುವಾರ ವಿಧಾನ ಪರಿಷತ್ ಸದಸ್ಯ ಎಸ್. ರುದ್ರೇಶ್ ಉದ್ಘಾಟಿಸಿದರು.
    ಭದ್ರಾವತಿ: ಭಾರತೀಯ ಜನತಾ ಪಕ್ಷದ ನಗರದ ಯುವ ಮುಖಂಡ, ನ್ಯಾಯವಾದಿ ಮಂಗೋಟೆ ರುದ್ರೇಶ್‌ರವರ ಜನಸಂಪರ್ಕ ಕಛೇರಿ ಗುರುವಾರ ವಿಧಾನ ಪರಿಷತ್ ಸದಸ್ಯ ಎಸ್. ರುದ್ರೇಶ್ ಉದ್ಘಾಟಿಸಿದರು.
    ಮಂಗೋಟೆ ರುದ್ರೇಶ್ ಈ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ಅಧಿಕೃತ ಅಭ್ಯರ್ಥಿಯಾಗಿ ಮೊದಲ ಬಾರಿಗೆ ಸ್ಪರ್ಧಿಸಿ ಹೆಚ್ಚಿನ ಮತಗಳನ್ನು ಪಡೆಯುವ ಮೂಲಕ ಗಮನ ಸೆಳೆದಿದ್ದರು. ಸಾರ್ವಜನಿಕವಾಗಿ ಹೆಚ್ಚಿನ ಜನಸಂಪರ್ಕ ಸಾಧಿಸುವ ಗುರಿ ಹಾಗು ಜನಸಾಮಾನ್ಯರ ಸಮಸ್ಯೆಗಳಿಗೆ ಪೂರಕವಾಗಿ ಸ್ಪಂದಿಸುವ ಉದ್ದೇಶದೊಂದಿಗೆ ನಗರದ ರಂಗಪ್ಪ ವೃತ್ತ, ಕೃಷ್ಣಮೂರ್ತಿ ಲೇ ಔಟ್‌ನಲ್ಲಿ ಕಛೇರಿಯನ್ನು ಆರಂಭಿಸಿದ್ದಾರೆ.
    ನೂತನ ಕಛೇರಿ ಉದ್ಘಾಟನೆ ಕಾರ್ಯಕ್ರಮದಲ್ಲಿ ಬಿಳಿಕಿ ಶ್ರೀ ರಾಚೋಟೇಶ್ವರ ಶಿವಾಚಾರ್ಯ ಸ್ವಾಮೀಜಿ ದಿವ್ಯ ಸಾನಿಧ್ಯ ವಹಿಸಿದ್ದರು. ಬಿಜೆಪಿ ಮಂಡಲ ತಾಲೂಕು ಅಧ್ಯಕ್ಷ ಜಿ. ಧರ್ಮಪ್ರಸಾದ್, ಮುಖಂಡರಾದ ತಾಲೂಕು ಕುರುಬ ಸಮಾಜದ ಅಧ್ಯಕ್ಷ ಎಂ. ಸಂತೋಷ್, ತಾಲೂಕು ವಕೀಲರ ಸಂಘದ ಅಧ್ಯಕ್ಷ ಉಮೇಶ್, ವೀರಶೈವ ಸಮಾಜದ ಅಧ್ಯಕ್ಷ ಎಚ್. ತೀರ್ಥಯ್ಯ, ಜಿ. ಆನಂದಕುಮಾರ್, ಮಂಗೋಟೆ ರುದ್ರೇಶ್, ಎನ್. ವಿಶ್ವನಾಥರಾವ್, ಶೋಭಾ ಪಾಟೀಲ್, ಮಂಜುಳಾ, ಶಶಿಕಲಾ ನಾರಾಯಣಪ್ಪ ಸೇರಿದಂತೆ ಪಕ್ಷದ ಮುಖಂಡರು, ಕಾರ್ಯಕರ್ತರು, ಅಭಿಮಾನಿಗಳು, ವಿವಿಧ ಸಂಘ-ಸಂಸ್ಥೆಗಳ ಪ್ರಮುಖರು ಪಾಲ್ಗೊಂಡು ಶುಭ ಹಾರೈಸಿದರು.

Wednesday, November 1, 2023

ಶ್ವೇತಾ ನಿಧನ

ಶ್ವೇತಾ 
    ಭದ್ರಾವತಿ: ತಾಲೂಕಿನ ಕಾಗೇಕೋಡಮಗ್ಗೆ ಗ್ರಾಮದ ನ್ಯಾಯಬೆಲೆ ಅಂಗಡಿ ಮಾಲೀಕರಾದ ಮಂಜುಳಾ ಬಸವರಾಜ್‌ರವರ ಪುತ್ರಿ ಶ್ವೇತಾ(೩೭) ಅನಾರೋಗ್ಯದಿಂದ ಬುಧವಾರ ಮೃತಪಟ್ಟಿದ್ದಾರೆ.
    ಪತಿ ಹೇಮಂತ್ ಕುಮಾರ್ ಇದ್ದರು. ಅನಾರೋಗ್ಯಕ್ಕೆ ಒಳಗಾಗಿದ್ದ ಶ್ವೇತಾರನ್ನು ಮಣಿಪಾಲ್ ಆಸ್ಪತ್ರೆಗೆ ಚಿಕಿತ್ಸೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದು, ಇವರ ಅಂತ್ಯಕ್ರಿಯೆ ಗ್ರಾಮದ ರುದ್ರಭೂಮಿಯಲ್ಲಿ ನೆರವೇರಿತು.
    ಕರ್ನಾಟಕ ಸರ್ಕಾರಿ ಪಡಿತರ ವಿತರಕರ ಸಂಘದ ಜಿಲ್ಲಾಧ್ಯಕ್ಷ ಸಿದ್ದಲಿಂಗಯ್ಯ ಸೇರಿದಂತೆ ನ್ಯಾಯಬೆಲೆ ಅಂಗಡಿ ಮಾಲೀಕರು ಸಂತಾಪ ಸೂಚಿಸಿದ್ದಾರೆ.

ಕನ್ನಡ ವರ್ಷದ ಎಲ್ಲಾ ದಿನ ನಿತ್ಯೋತ್ಸವವಾಗಲಿ : ಬಿ.ಕೆ ಸಂಗಮೇಶ್ವರ

ಭದ್ರಾವತಿ ಹಳೇನಗರದ ಕನಕಮಂಟಪ ಮೈದಾನದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ೬೮ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಶಾಸಕ ಬಿ.ಕೆ ಸಂಗಮೇಶ್ವರ್ ನಾಡಧ್ವಜಾರೋಹಣ ನೆರವೇರಿಸಿ, ವೇದಿಕೆ ಕಾರ್ಯಕ್ರಮ ಉದ್ಘಾಟಿಸಿದರು.
    ಭದ್ರಾವತಿ: ಕನ್ನಡದ ಬಗೆಗಿನ ಅಭಿಮಾನ ಅಂತರಾಳದಿಂದ ಬರಬೇಕು. ಕನ್ನಡ ರಾಜ್ಯೋತ್ಸವ ವರ್ಷದ ೩೬೦ ದಿನಗಳ ನಿತ್ಯೋತ್ಸವ ಆಗಬೇಕೆಂದರೆ ಜನರ ಮನೋಭಾವ ಹಾಗು ಪ್ರೀತಿ ಮುಖ್ಯ ಎಂದು ಶಾಸಕ ಬಿ.ಕೆ ಸಂಗಮೇಶ್ವರ್ ಹೇಳಿದರು.
    ಅವರು ಹಳೇನಗರದ ಕನಕಮಂಟಪ ಮೈದಾನದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ೬೮ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ನಾಡಧ್ವಜಾರೋಹಣ ನೆರವೇರಿಸಿ, ವೇದಿಕೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
    ರಾಜ್ಯದ ಆಡಳಿತ ಭಾಷೆ ಹಾಗು ಮಾತೃಭಾಷೆಯಾದ ಕನ್ನಷ ಭಾಷೆಗೆ ಇನ್ನೂ ಹೆಚ್ಚಿನ ಸ್ಥಾನಮಾನಗಳು ಲಭಿಸಬೇಕು. ತಾಯಿಯನ್ನು ಗೌರವಿಸುವಂತೆಯೇ ಕನ್ನಡ ಭಾಷೆಯನ್ನು ಗೌರವಿಸುವುದು ಕನ್ನಡನಾಡಿನ ಪ್ರತೊಯೊಬ್ಬರ ಕರ್ತವ್ಯ. ಅತ್ಯಂತ ಹೆಚ್ಚು ಜ್ಞಾನಪೀಠ ಪ್ರಶಸ್ತಿಗಳನ್ನು ಪಡೆದ ನಾಡು ಕರ್ನಾಟಕ ಎಂಬುದು ಪ್ರತಿಯೊಬ್ಬ ಕನ್ನಡಿಗರ ಹೆಮ್ಮೆ ಎಂದರು.
    ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ತಹಸೀಲ್ದಾರ್ ಕೆ.ಆರ್ ನಾಗರಾಜ್, ಕನ್ನಡ ಭಾಷೆಗೆ ೨ ಸಾವಿರ ವರ್ಷಗಳ ಇತಿಹಾಸವಿದೆ. ಭವ್ಯ ಪರಂಪರೆ ಇದ್ದು, ನಾಡು, ನುಡಿಗಾಗಿ ಶ್ರಮಿಸಿದ ಮಹನೀಯರನ್ನು ಸ್ಮರಿಸಿ ಅವರ ದಾರಿಯಲ್ಲಿ ನಾವೆಲ್ಲರೂ ಮುನ್ನಡೆಯುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದರು.
    ನಗರಸಭೆ ಅಧ್ಯಕ್ಷೆ ಶೃತಿ ಸಿ. ವಸಂತಕುಮಾರ್ ಕೆ.ಜಿ, ಉಪಾಧ್ಯಕ್ಷೆ ಬಿ.ಪಿ ಸರ್ವಮಂಗಳ ಭೈರಪ್ಪ , ಸ್ಥಾಯಿ ಸಮಿತಿ ಅಧ್ಯಕ್ಷ ಕೆ. ಸುದೀಪ್ ಕುಮಾರ್, ಪೌರಾಯುಕ್ತ ಎಚ್.ಎಂ ಮನುಕುಮಾರ್, ಸದಸ್ಯರಾದ ಬಸವರಾಜ್ ಆನೇಕೊಪ್ಪ, ಮಣಿ ಎಎನ್‌ಎಸ್, ಚನ್ನಪ್ಪ, ಕಾಂತರಾಜ್, ಸೈಯ್ಯದ್ ರಿಯಾಜ್, ಲತಾ ಚಂದ್ರಶೇಖರ್, ಶಶಿಕಲಾ ನಾರಾಯಣಪ್ಪ, ಮಂಜುಳ ಸುಬ್ಬಣ್ಣ, ಪೊಲೀಸ್ ಉಪಾಧೀಕ್ಷಕ ಕೆ.ಆರ್ ನಾಗರಾಜ್, ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ ನಾಗೇಂದ್ರಪ್ಪ,  ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿದ್ದಬಸಪ್ಪ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
    ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ ನಾಗೇಂದ್ರಪ್ಪ ಸ್ವಾಗತಿಸಿದರು. ಅಪೇಕ್ಷ ಮಂಜುನಾಥ್ ನಿರೂಪಿಸಿ, ವಂದಿಸಿದರು. ಇದಕ್ಕೂ ಮೊದಲು ನಗರದ ಬಿ.ಎಚ್ ರಸ್ತೆ ಡಾ. ಬಿ.ಆರ್ ಅಂಬೇಡ್ಕರ್ ವೃತ್ತದಿಂದ ಕನಕಮಂಟಪ ಮೈದಾನದವರಿಗೂ ತಾಯಿ ಭುವನೇಶ್ವರಿ ದೇವಿ ಭಾವಚಿತ್ರದೊಂದಿಗೆ ಮೆರವಣಿಗೆ ನಡೆಯಿತು.

Tuesday, October 31, 2023

೬೮ನೇ ಸುವರ್ಣ ಕನ್ನಡ ರಾಜ್ಯೋತ್ಸವ


ಭದ್ರಾವತಿ: ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ನ.೧ರಂದು ಹಳೇನಗರದ ಕನಕಮಂಟಪ ಮೈದಾನದಲ್ಲಿ ೬೮ನೇ ಸುವರ್ಣ ಕನ್ನಡ ರಾಜ್ಯೋತ್ಸವ ಹಮ್ಮಿಕೊಳ್ಳಲಾಗಿದೆ. 
ನಗರದ ಬಿ.ಎಚ್ ರಸ್ತೆ ಅಂಬೇಡ್ಕರ್ ವೃತ್ತದಿಂದ ಬೆಳಿಗ್ಗೆ ೮ ಗಂಟೆಗೆ ಶ್ರೀ ಭುವನೇಶ್ವರಿ ದೇವಿಯ ಭಾವಚಿತ್ರಕ್ಕೆ ಪೂಜೆ ಹಾಗು ಮೆರವಣಿಗೆ ನಡೆಯದ್ದು,  ೯ ಗಂಟೆಗೆ ಕನಕಮಂಟಪ ಮೈದಾನದಲ್ಲಿ ಧ್ವಜಾರೋಹಣ, ಪಥಸಂಚಲನ, ಸಾಂಸ್ಕೃತಿ ಹಾಗು ವೇದಿಕೆ ಕಾರ್ಯಕ್ರಮಗಳು ಜರುಗಲಿವೆ. 
ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದ ಶಾಸಕಿ ಶಾರದ ಪೂರ್‍ಯನಾಯ್ಕ ಉದ್ಘಾಟಿಸಲಿದ್ದು, ಶಾಸಕ ಬಿ.ಕೆ ಸಂಗಮೇಶ್ವರ್ ಅಧ್ಯಕ್ಷತೆ ವಹಿಸಲಿದ್ದಾರೆ. ನಗರಸಭೆ ಅಧ್ಯಕ್ಷೆ ಶೃತಿ ಸಿ. ವಸಂತಕುಮಾರ್ ಕೆ.ಜಿ, ಉಪಾಧ್ಯಕ್ಷೆ ಬಿ.ಪಿ ಸರ್ವಮಂಗಳ ಭೈರಪ್ಪ, ಸ್ಥಾಯಿ ಸಮಿತಿ ಅಧ್ಯಕ್ಷ ಕೆ. ಸುದೀಪ್‌ಕುಮಾರ್, ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕೋಡ್ಲು ಯಜ್ಞಯ್ಯ, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಬಿ. ಸಿದ್ದಬಸಪ್ಪ, ತಹಸೀಲ್ದಾರ್ ಕೆ.ಆರ್ ನಾಗರಾಜ್, ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಎಂ. ಗಂಗಣ್ಣ, ನಗರಸಭೆ ಪೌರಾಯುಕ್ತ ಮನುಕುಮಾರ್ ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ ನಾಗೇಂದ್ರಪ್ಪ ಸೇರಿದಂತೆ ಇನ್ನಿತರರು ಪಾಲ್ಗೊಳ್ಳಲಿದ್ದಾರೆ. 

ಅಧ್ಯಕ್ಷರಾಗಿ ಆರ್. ನಾಗರಾಜ್ ರಾವ್ ಸಿಂಘಾಡೆ

ಭದ್ರಾವತಿ ತಾಲೂಕು ಭತ್ತ ಮತ್ತು ಅಕ್ಕಿ ವರ್ತಕರ ಸಂಘದ ಅಧ್ಯಕ್ಷರಾಗಿ ಆರ್.ಎನ್.ಟಿ ಟ್ರೇಡರ್ಸ್ ಮಾಲೀಕ ಆರ್. ನಾಗರಾಜ್ ರಾವ್ ಸಿಂಘಾಡೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ
    ಭದ್ರಾವತಿ: ತಾಲೂಕು ಭತ್ತ ಮತ್ತು ಅಕ್ಕಿ ವರ್ತಕರ ಸಂಘದ ಅಧ್ಯಕ್ಷರಾಗಿ ಆರ್.ಎನ್.ಟಿ ಟ್ರೇಡರ್ಸ್ ಮಾಲೀಕ ಆರ್. ನಾಗರಾಜ್ ರಾವ್ ಸಿಂಘಾಡೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
    ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯಲ್ಲಿ ನಡೆದ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾಗಿದ್ದು, ತಾಲೂಕು ಭತ್ತ ಮತ್ತು ಅಕ್ಕಿ ವರ್ತಕರ ಸಂಘದ ಪದಾಧಿಕಾರಿಗಳಿಗೆ ನಾಗರಾಜ್ ರಾವ್ ಸಿಂಘಾಡೆ ಕೃತಜ್ಞತೆ ಸಲ್ಲಿಸಿದ್ದಾರೆ.

ಎಸ್. ಬಂಗಾರಪ್ಪ ಜನ್ಮ ದಿನಾಚರಣೆ, ಉಸ್ತುವಾರಿ ಜಿಲ್ಲಾ ಸಚಿವರ ನಿರ್ಲಕ್ಷ್ಯ ಖಂಡಿಸಿ ಪ್ರತಿಭಟನಾ ಧರಣಿ ಸತ್ಯಾಗ್ರಹ

ದೀನದಲಿತರ, ಶೋಷಿತರ, ರೈತರ, ಕಾರ್ಮಿಕರ, ಎಲ್ಲಾ ವರ್ಗದ, ಎಲ್ಲಾ ಧರ್ಮದವರ ಹಿತ ಚಿಂತಕರಾದ ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪನವರ ೯೦ನೇ ಜನ್ಮ ದಿನಾಚರಣೆ ಹಾಗು ಜಿಲ್ಲಾ ಉಸ್ತುವಾರಿ ಸಚಿವರಿಂದ ಕ್ಷೇತ್ರದ ನಿರ್ಲಕ್ಷ್ಯ ಖಂಡಿಸಿ ಮಂಗಳವಾರ ಭದ್ರಾವತಿಯಲ್ಲಿ ಮಾನವ ಹಕ್ಕುಗಳ ಹೋರಾಟ ಸಮಿತಿ ವತಿಯಿಂದ ಪ್ರತಿಭಟನಾ ಧರಣಿ ಸತ್ಯಾಗ್ರಹ ನಡೆಸಲಾಯಿತು. 
    ಭದ್ರಾವತಿ: ದೀನದಲಿತರ, ಶೋಷಿತರ, ರೈತರ, ಕಾರ್ಮಿಕರ, ಎಲ್ಲಾ ವರ್ಗದ, ಎಲ್ಲಾ ಧರ್ಮದವರ ಹಿತ ಚಿಂತಕರಾದ ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪನವರ ೯೦ನೇ ಜನ್ಮ ದಿನಾಚರಣೆ ಹಾಗು  ಜಿಲ್ಲಾ ಉಸ್ತುವಾರಿ ಸಚಿವರಿಂದ ಕ್ಷೇತ್ರದ ನಿರ್ಲಕ್ಷ್ಯ ಖಂಡಿಸಿ ಮಂಗಳವಾರ ನಗರದ ಮಾನವ ಹಕ್ಕುಗಳ ಹೋರಾಟ ಸಮಿತಿ ವತಿಯಿಂದ ಪ್ರತಿಭಟನಾ ಧರಣಿ ಸತ್ಯಾಗ್ರಹ ನಡೆಸಲಾಯಿತು.
    ಸಮಿತಿ ಅಧ್ಯಕ್ಷ ಬಿ.ಎನ್ ರಾಜು ಮಾತನಾಡಿ, ಎಸ್. ಬಂಗಾರಪ್ಪನವರ ಪುತ್ರರಾದ ಜಿಲ್ಲಾ ಉಸ್ತುವಾರಿ ಹಾಗು ಪ್ರಾಥಮಿಕ ಪ್ರೌಢ ಶಾಲಾ ಶಿಕ್ಷಣ ಸಚಿವರಾದ ಮಧು ಬಂಗಾರಪ್ಪರವರು ಕೇವಲ ಶಿವಮೊಗ್ಗ, ಸಾಗರ, ಸೊರಬ ಕ್ಷೇತ್ರಗಳಿಗೆ ಮಾತ್ರ ಪದೇ ಪದೇ ಭೇಟಿ ನೀಡುತ್ತಿದ್ದು, ಆದರೆ ಈ ಕ್ಷೇತ್ರಕ್ಕೆ ಇದುವರೆಗೂ ಭೇಟಿ ನೀಡದೆ ನಿರ್ಲಕ್ಷಿಸುತ್ತಿರುವುದು ದುರಾದೃಷ್ಟಕರ ಸಂಗತಿಯಾಗಿದೆ ಎಂದು ವಿಷಾದ ವ್ಯಕ್ತಪಡಿಸಿದರು.
    ಕ್ಷೇತ್ರದ ಸರ್ಕಾರಿ ಕಛೇರಿಗಳಲ್ಲಿ ಭ್ರಷ್ಟಾಚಾರ ಮಿತಿಮೀರಿದ್ದು, ಕಳಪೆ ಕಾಮಗಾರಿಗಳು ಹೆಚ್ಚಾಗಿ ಅವ್ಯವಸ್ಥೆ ಉಂಟಾಗಿದೆ. ಇದುವರೆಗೂ ಜಿಲ್ಲಾ ಉಸ್ತುವಾರಿ ಸಚಿವರು ಕೆಡಿಪಿ ಸಭೆ ನಡೆಸಿ ಸಮಸ್ಯೆಗಳ ಬಗ್ಗೆ ಅಹವಾಲುಗಳನ್ನು ಸ್ವೀಕರಿಸಿ ಬಗೆಹರಿಸದಿರುವುದರಿಂದ ಜನಸಾಮಾನ್ಯರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ೨೦೧೭ರಲ್ಲಿ ಪ್ರಾರಂಭವಾದ ಡಾ. ಬಿ.ಆರ್ ಅಂಬೇಡ್ಕರ್ ಭವನ ಕಾಮಗಾರಿ ಅರ್ಧಕ್ಕೆ ನಿಂತಿದ್ದು, ಪದೇ ಪದೇ ಹೋರಾಟಗಳ ಮೂಲಕ ಮನವಿ ಸಲ್ಲಿಸಿದ್ದರೂ ಸಹ ಸಂವಿಧಾನ ಶಿಲ್ಪಿ ಡಾ.ಬಿ.ಆರ್ ಅಂಬೇಡ್ಕರ್‌ರವರ ಹೆಸರಿಗೆ ಅವಮಾನವಾಗುತ್ತಿದ್ದರು ಸಹ ಇದುವರೆಗೂ ಪೂರ್ಣಗೊಳಿಸದೆ ನಿರ್ಲಕ್ಷ್ಯ ವಹಿಸಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
    ತಕ್ಷಣ ಜಿಲ್ಲಾ ಉಸ್ತುವಾರಿ ಸಚಿವರು ಧರಣಿ ಸತ್ಯಾಗ್ರಹ ಸ್ಥಳಕ್ಕೆ ಆಗಮಿಸಿ ಮನವಿ ಸ್ವೀಕರಿಸಿ ಸಮಸ್ಯೆ ಬಗಹರಿಸಬೇಕು. ಇಲ್ಲವಾದಲ್ಲಿ ಹೋರಾಟ ಮುಂದುವರೆಯಲಿದೆ ಎಂದು ಎಚ್ಚರಿಸಿದರು.
    ಸಮಿತಿ ಕಾರ್ಯಾಧ್ಯಕ್ಷ ಐ.ಎಲ್ ಅರುಣ್‌ಕುಮಾರ್, ಪ್ರಧಾನ ಕಾರ್ಯದರ್ಶಿ ಅಕ್ರಂ ಖಾನ್, ಉಪಾಧ್ಯಕ್ಷರಾದ ಬ್ರಹ್ಮಲಿಂಗಯ್ಯ, ರಂಗಪ್ಪ, ಶೌಕತ್, ಎಂ.ವಿ ಚಂದ್ರಣ್ಣ, ಕಾರ್ಯದರ್ಶಿಗಳಾದ ರಾಕೇಶ್ ಕುಮಾರ್, ವೀರೇಶ್, ಪ್ರಧಾನ ಸಂಚಾಲಕರಾದ ಶ್ರೀನಿವಾಸ್, ಬಸವರಾಜ್, ಸಂಚಾಲಕರಾದ ಅಜಿತ್, ಅಜಯ್, ಕೆ. ಶಿವಕುಮಾರ್, ಟಿ.ಎನ್ ನಾಗರಾಜ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Monday, October 30, 2023

ನ.೧, ೨ರಂದು ನೀರು ವ್ಯತ್ಯಯ

    ಭದ್ರಾವತಿ: ಹಳೇನಗರ ನೀರು ಶುದ್ಧೀಕರಣ ಘಟಕದಲ್ಲಿ ಅ.೩೧ ಹಾಗು ನ.೧ರಂದು ಜಾಕ್ವೆಲ್ ಶುದ್ಧೀಕರಣ ಮತ್ತು ೧೨೦ ಎಚ್.ಪಿ ಸಾಮರ್ಥ್ಯದ ಜಿಎಸ್‌ಎಲ್‌ಆರ್ ಸಂಪ್‌ನಲ್ಲಿ ಹೂಳು ತೆಗೆಯುವ ಕಾರ್ಯ ಹಮ್ಮಿಕೊಳ್ಳಲಾಗಿದೆ.
    ನ.೧ ಮತ್ತು ೨ರಂದು ಎರಡು ದಿನ ಹಳೇನಗರ ವ್ಯಾಪ್ತಿಯಲ್ಲಿ ನೀರು ಸರಬರಾಜು ವಿತರಣೆಯಲ್ಲಿ ವ್ಯತ್ಯಯ ಉಂಟಾಗಲಿದ್ದು, ಸಾರ್ವಜನಿಕರು ಸಹಕರಿಸುವಂತೆ ಪೌರಾಯುಕ್ತರು ಕೋರಿದ್ದಾರೆ.