Wednesday, December 20, 2023

ಪವರ್ ಲಿಪ್ಟಿಂಗ್ ಸ್ಪರ್ಧೆಯಲ್ಲಿ ಒಂದೇ ಕುಟುಂಬದ ಮೂವರ ಸಾಧನೆ

೩ ತಿಂಗಳ ಅಭ್ಯಾಸ, ಯುವ ಕ್ರೀಡಾಪಟುಗಳಿಗೆ ಸ್ಪೂರ್ತಿ

ಭದ್ರಾವತಿ ಸಿ.ಎನ್ ರಸ್ತೆ ನಿವಾಸಿ ವೈ. ನಟರಾಜ್ ಕುಟುಂಬ ಸದಸ್ಯರು ಶಿವಮೊಗ್ಗ ಜಿಲ್ಲಾ ಪವರ್‌ಲಿಫ್ಟಿಂಗ್ ಅಸೋಸಿಯೇಷನ್ ವತಿಯಿಂದ ನಗರದ ನ್ಯೂಟೌನ್ ಸರ್‌ಎಂವಿ ಸರ್ಕಾರಿ ಕಲಾ ಮತ್ತು ವಾಣಿಜ್ಯ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ೨ ದಿನಗಳ ಜಿಲ್ಲಾಮಟ್ಟದ ಪುರುಷರ ಹಾಗೂ ಮಹಿಳೆಯರ ಓಪನ್ ಪವರ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ಭಾಗವಹಿಸಿ ಉತ್ತಮ ಪ್ರದರ್ಶನ ನೀಡುವ ಬಹುಮಾನ ಪಡೆದುಕೊಂಡಿದ್ದಾರೆ.
    ಭದ್ರಾವತಿ: ಶಿವಮೊಗ್ಗ ಜಿಲ್ಲಾ ಪವರ್‌ಲಿಫ್ಟಿಂಗ್ ಅಸೋಸಿಯೇಷನ್ ವತಿಯಿಂದ ನಗರದ ನ್ಯೂಟೌನ್ ಸರ್‌ಎಂವಿ ಸರ್ಕಾರಿ ಕಲಾ ಮತ್ತು ವಾಣಿಜ್ಯ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ೨ ದಿನಗಳ ಜಿಲ್ಲಾಮಟ್ಟದ ಪುರುಷರ ಹಾಗೂ ಮಹಿಳೆಯರ ಓಪನ್ ಪವರ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ಒಂದೇ ಕುಟುಂಬದ ಮೂವರು ಭಾಗವಹಿಸಿ ಬಹುಮಾನ ಪಡೆಯುವ ಮೂಲಕ ಗಮನಸೆಳೆದಿದ್ದಾರೆ.
ಈ ಕುಟುಂಬದ ಸದಸ್ಯರು ಕಳೆದ ೩ ತಿಂಗಳಿನಿಂದ ಪವರ್ ಲಿಪ್ಟಿಂಗ್ ಅಭ್ಯಾಸದಲ್ಲಿ ತೊಡಗಿದ್ದು, ಕಡಿಮೆ ಅವಧಿಯಲ್ಲಿ ಉತ್ತಮ ಪ್ರದರ್ಶನ ನೀಡುವ ಮೂಲಕ ಪವರ್ ಲಿಪ್ಟಿಂಗ್ ಕ್ಷೇತ್ರದಲ್ಲಿ ಸಾಧನೆಯ ಪಯಣಕ್ಕೆ ಮುನ್ನುಡಿ ಬರೆದಿದ್ದಾರೆ.  
    ನಗರದ ಸಿ.ಎನ್ ರಸ್ತೆ ನಿವಾಸಿ ವೈ. ನಟರಾಜ್ ಕುಟುಂಬ ಸದಸ್ಯರು ಇಂತಹದೊಂದು ಪ್ರಯತ್ನದಲ್ಲಿ ಯಶಸ್ವಿಯಾಗಿದ್ದಾರೆ. ನಗರದ ಕಾರಂತ್ ಜಿಮ್ ವ್ಯಾಯಾಮ ಶಾಲೆಯಲ್ಲಿ ಕಳೆದ ೩ ತಿಂಗಳ ಹಿಂದೆ ತರಬೇತಿ ಆರಂಭಿಸಿದ ನಟರಾಜ್ ಕುಟುಂಬ ಸದಸ್ಯರು ಇತ್ತೀಚೆಗೆ ಶಿವಮೊಗ್ಗ ಜಿಲ್ಲಾ ಪವರ್ ಲಿಫ್ಟಿಂಗ್ ಅಸೋಸಿಯೇಷನ್ ವತಿಯಿಂದ ನಡೆದಸ್ಪರ್ಧೆಯಲ್ಲಿ ಬಹುಮಾನ ಗಳಿಸಿದ್ದಾರೆ.
    ೧೨೦ ಕೆ.ಜಿ ತೂಕದ ವಿಭಾಗದಲ್ಲಿ ವೈ. ನಟರಾಜ್ ತೃತೀಯ ಸ್ಥಾನ, ಇವರ ಪತ್ನಿ ಡಿ. ಸೌಮ್ಯ ೮೪ ಕೆ.ಜಿ. ವಿಭಾಗದಲ್ಲಿ ತೃತೀಯ ಸ್ಥಾನ ಹಾಗು ಈ ದಂಪತಿಗಳ ಕಿರಿಯ ಪುತ್ರ ಎನ್. ಮನ್ವಿತ್ ೫೩ಕೆ.ಜಿ. ವಿಭಾಗದಲ್ಲಿ ತೃತೀಯ ಸ್ಥಾನ ಪಡೆದಿದ್ದಾರೆ. ಇವರ ಹಿರಿಯ ಪುತ್ರ ಎನ್. ಪೂಜಿತ   ಸಹ ಕಳೆದ ಮೂರು ತಿಂಗಳ ಹಿಂದೆ ಅಭ್ಯಾಸ ಆರಂಭಿಸಿದ್ದು, ಒಂದು ಜಿಲ್ಲಾ ಮಟ್ಟದ ಸ್ಪರ್ಧೆ ಹಾಗು ಒಂದು ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಿ ಉತ್ತಮ ಪ್ರದರ್ಶನ ನೀಡಿದ್ದಾನೆ.
    ಒಟ್ಟಾರೆಯಾಗಿ ಕಳೆದ ೩ ತಿಂಗಳ ಹಿಂದೆ ಪವರ್ ಲಿಪ್ಟಿಂಗ್ ತರಬೇತಿ ಪಡೆದ ನಟರಾಜ್ ಕುಟುಂಬ ಸದಸ್ಯರು ಕೆಲವೇ ತಿಂಗಳಲ್ಲಿ ಉತ್ತಮ ಪ್ರದರ್ಶನ ನೀಡುವ ಮೂಲಕ ಯುವ ಕ್ರೀಡಾಪಟುಗಳಿಗೆ ಸ್ಪೂರ್ತಿಯಾಗಿದ್ದಾರೆ.  

ಹಾಡುಹಗಲೇ ಮದ್ಯದಂಗಡಿಯಲ್ಲಿ ಆಟೋಚಾಲಕನ ಹತ್ಯೆ : ಪೊಲೀಸರ ಮುಂಚಿನ ಕಾರ್ಯಾಚರಣೆ ಮೂವರ ಸೆರೆ

ಭದ್ರಾವತಿ: ನಗರದ ಬಿ.ಹೆಚ್.ರಸ್ತೆಯ ಭದ್ರಾವೈನ್ಸ್ ಮದ್ಯದಂಗಡಿಯಲ್ಲಿ ವ್ಯಕ್ತಿಯೋರ್ವನನ್ನು ಹತ್ಯೆಗೈದಿರುವ ಘಟನೆ ಬುಧವಾರ ಮಧ್ಯಾಹ್ನ ನಡೆದಿದ್ದು, ಅಂಗಡಿ ಮುಂಭಾಗ ಜನಸಂದಣಿ ಕಂಡು ಬಂದಿತು.
    ಭದ್ರಾವತಿ: ನಗರದ ಬಿ.ಹೆಚ್.ರಸ್ತೆಯ ಭದ್ರಾವೈನ್ಸ್ ಮದ್ಯದಂಗಡಿಯಲ್ಲಿ ವ್ಯಕ್ತಿಯೋರ್ವನನ್ನು ಹತ್ಯೆಗೈದಿರುವ ಘಟನೆ ಬುಧವಾರ ಮಧ್ಯಾಹ್ನ ನಡೆದಿದೆ.
    ಹತ್ಯೆಯಾದ ವ್ಯಕ್ತಿ ಹಿರಿಯೂರು ಗ್ರಾಮದ ನಿವಾಸಿ, ಆಟೋಚಾಲಕ ಹೇಮಂತ್(೪೦) ಅಲಿಯಾಸ್ ಕರಿಚುಕ್ಕಿ ಎಂಬುದಾಗಿ ಗುರುತಿಸಲಾಗಿದೆ. ಈತ ಮಧ್ಯಾಹ್ನ ೧೧.೩೦ರ ಸುಮಾರಿಗೆ ಮದ್ಯದಂಗಡಿಯಲ್ಲಿ ಕುಳಿತಿರುವ ವೇಳೆ ಈ ಕೃತ್ಯ ನಡೆದಿದೆ.
    ಹಳೆದ್ವೇಷದ ಹಿನ್ನೆಲೆಯಲ್ಲಿ ಹತ್ಯೆ ಮಾಡಲಾಗಿದೆ ಎನ್ನಲಾಗಿದೆ. ಘಟನೆ ನಡೆದ ಕೆಲವೇ ನಿಮಿಷಗಳಲ್ಲಿ ಪೊಲೀಸರು ಮೂವರನ್ನು ಬಂಧಿಸಿದ್ದಾರೆ. ಉಳಿದ ಇಬ್ಬರ ಪತ್ತೆಗಾಗಿ ಬಲೆ ಬೀಸಿದ್ದಾರೆ.  ಬೊಮ್ಮನಕಟ್ಟೆ ಗ್ರಾಮದ ಮುಬಾರಕ್, ಸತ್ಯಾನಂದ, ಕಲೀಲ್ ಬಂಧಿತ ಆರೋಪಿಗಳಾಗಿದ್ದಾರೆ. ಘಟನೆ ಕುರಿತಂತೆ ಹಳೆನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Tuesday, December 19, 2023

ಪುರಾಣ ಪ್ರಸಿದ್ದ ಶ್ರೀಲಕ್ಷ್ಮೀನರಸಿಂಹಸ್ವಾಮಿ ದೇವಸ್ಥಾನದಲ್ಲಿ ಡಿ.೨೩, ೨೪ರಂದು ಎರಡು ವೈಕುಂಠ ಏಕಾದಶಿ

ಭದ್ರಾವತಿ ಹಳೇನಗರದ ಪುರಾಣ ಪ್ರಸಿದ್ದ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ದೇವಸ್ಥಾನ.
    ಭದ್ರಾವತಿ: ಪ್ರತಿವರ್ಷದಂತೆ ಈ ವರ್ಷ ಸಹ ಡಿ.೨೩ ಮತ್ತು ೨೪ರಂದು ಹಳೇನಗರದ ಪುರಾಣ ಪ್ರಸಿದ್ದ, ಕ್ಷೇತ್ರಪಾಲಕ ಶ್ರೀಲಕ್ಷ್ಮೀನರಸಿಂಹಸ್ವಾಮಿ ದೇವಾಲಯದಲ್ಲಿ ವೈಕುಂಠ ಏಕಾದಶಿ ಅದ್ದೂರಿಯಿಂದ ಆಚರಿಸಲು ಸಕಲ ಸಿದ್ಧತೆ ಕೈಗೊಂಡಿರುವುದಾಗಿ ಮುಜರಾಯಿ ಅಧಿಕಾರಿಯಾಗಿರುವ ತಹಸೀಲ್ದಾರ್ ಕೆ.ಆರ್ ನಾಗರಾಜು ತಿಳಿಸಿದರು.
    ಅವರು ಮಂಗಳವಾರ ತಾಲೂಕು ಕಛೇರಿ ತಹಸೀಲ್ದಾರ್ ಸಭಾಂಗಣದಲ್ಲಿ ಈ ಕುರಿತು ಮಾಹಿತಿ ನೀಡಿ, ಶ್ರೀಲಕ್ಷ್ಮೀನರಸಿಂಹಸ್ವಾಮಿ ದೇವಾಲಯದಲ್ಲಿ ನಡೆಯುವ ಎರಡು ದಿನಗಳ ಕಾರ್ಯಕ್ರಮದಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಉತ್ಸವ ಯಶಸ್ವಿಗೊಳಿಸಬೇಕು. ಕೋವಿಡ್ ಮುಂಜಾಗ್ರತೆ ಹಿನ್ನೆಲೆಯಲ್ಲಿ ಪ್ರತಿಯೊಬ್ಬರು ಮಾಸ್ಕ್ ಧರಿಸುವುದು ಕಡ್ಡಾಯ ಎಂದರು.
    ದೇವಾಲಯ ಸಮಿತಿ ಅಧ್ಯಕ್ಷ ಮಾರುತಿ ಮಾತನಾಡಿ, ಡಿ.೨೩ರಂದು ಬೆಳಗ್ಗೆ ೪.೩೦ರಿಂದ ಪೂಜಾ ಕಾರ್ಯಕ್ರಮಗಳು ಆರಂಭಗೊಳ್ಳಲಿವೆ. ಭಕ್ತರ ಸಂಖ್ಯೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ವಿಶೇಷ ದರ್ಶನಕ್ಕೆ ಟಿಕೆಟ್ ವಿತರಣೆ ಮಾಡಲಾಗುತ್ತಿದ್ದು, ಇಬ್ಬರ ಪ್ರವೇಶಕ್ಕೆ ಟಿಕೆಟ್ ಬೆಲೆ ರು. ೫೦೦ ಮತ್ತು ನಾಲ್ವರ ಪ್ರವೇಶಕ್ಕೆ ರು. ೧೦೦೦ ನಿಗದಿಪಡಿಸಲಾಗಿದೆ ಎಂದು ಮಾಹಿತಿ ನೀಡಿದರು.
    ದೇವಾಲಯದ ಪ್ರಧಾನ ಅರ್ಚಕರಾದ ವೇ||ಬ್ರ|| ಶ್ರೀ ರಂಗನಾಥ ಶರ್ಮ ಮಾತನಾಡಿ, ಉತ್ಸವಗಳಿಂದ ದೇವರಿಗೆ ಶಕ್ತಿ ದೊರೆಯುತ್ತದೆ. ಆದ್ದರಿಂದ ಉತ್ಸವಗಳ ಸಂಖ್ಯೆ ಹೆಚ್ಚಾಗಬೇಕು ಎಂದರು.
    ದೇವಾಲಯದ ಸಹಾಯಕ ಅರ್ಚಕ ಶ್ರೀನಿವಾಸ್, ದೇವಾಲಯ ಸಮಿತಿ ಪದಾಧಿಕಾರಿಗಳಾದ ಆಶಾ ಪುಟ್ಟಸ್ವಾಮಿ, ಗಿರಿನಾಯ್ಡು, ವಿಶ್ವೇಶ್ವರಗಾಯಕ್ವಾಡ್, ಉಪ ತಹಸೀಲ್ದಾರ್ ಅರಸು, ಮಂಜಾನಾಯ್ಕ, ಕಂದಾಯ ನಿರೀಕ್ಷಕ ಪ್ರಶಾಂತ್, ಹಿರಿಯ ಆರೋಗ್ಯ ನಿರೀಕ್ಷಕ ಆನಂದಮೂರ್ತಿ, ನಾಗರಾಜು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಕ್ಷೇತ್ರದ ಅಭಿವೃದ್ಧಿ ಕಾರ್ಯಗಳಿಗೆ ಬಿಜೆಪಿ-ಜೆಡಿಎಸ್ ಕೈಜೋಡಿಸಲಿ : ಇಸ್ಪೀಟ್ ಸೇರಿದಂತೆ ಯಾವುದೇ ಜೂಜಾಟಕ್ಕೆ ಕಾಂಗ್ರೆಸ್ ಬೆಂಬಲವಿಲ್ಲ

ತಾಲೂಕು ಕಚೇರಿ ಅವರಣದಲ್ಲಿ ನಡೆದ ಪ್ರತಿಭಟನೆಯಲ್ಲಿ ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ್

ಬಿಜೆಪಿ ಹಾಗೂ ಜೆಡಿಎಸ್ ಮುಖಂಡರ ಗೂಂಡಾ ವರ್ತನೆ, ಕಾಂಗ್ರೆಸ್ ಕಾರ್ಯಕರ್ತನ ಮೇಲೆ ಹಲ್ಲೆ ಹಾಗೂ ಸಂಸತ್ ಭವನದಲ್ಲಿ ನಡೆದ ಭದ್ರತಾ ವೈಫಲ್ಯ ಖಂಡಿಸಿ ಕಾಂಗ್ರೆಸ್ ಪಕ್ಷದ ನಗರ ಮತ್ತು ಗ್ರಾಮಾಂತರ ಘಟಕದ ವತಿಯಿಂದ ಭದ್ರಾವತಿ ತಾಲೂಕು ಕಚೇರಿ ಅವರಣದಲ್ಲಿ ಮಂಗಳವಾರ ಹಮ್ಮಿಕೊಳ್ಳಲಾಗಿದ್ದ ಪ್ರತಿಭಟನೆಯಲ್ಲಿ ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ್ ಮಾತನಾಡಿದರು.
    ಭದ್ರಾವತಿ : ಕ್ಷೇತ್ರದಲ್ಲಿ ಓಸಿ, ಇಸ್ಪೀಟ್ ಯಾರಿಂದ ಆರಂಭವಾಯಿತು ಎಂಬುದು ಎಲ್ಲರಿಗೂ ತಿಳಿದಿದೆ. ಇಸ್ಪೀಟ್ ಸ್ಪರ್ಧೆ ನಡೆಸಿದ ಕರಾಳ ಇತಿಹಾಸ ಕೂಡ ಜನತೆಗೆ ತಿಳಿದಿದೆ. ಗೂಂಡಾಗಿರಿ, ಇಸ್ಪೀಟ್ ಸೇರಿದಂತೆ ಯಾವುದೇ ಜೂಜಾಟ ಕಾಂಗ್ರೆಸ್ ಪಕ್ಷ ಬೆಂಬಲಿಸುವುದಿಲ್ಲ. ಇವುಗಳ ವಿರುದ್ಧ ಹೋರಾಟಕ್ಕೆ ನಮ್ಮ ಬೆಂಬಲ ಸಹ ಇದೆ ಎಂದು ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ್ ಹೇಳಿದರು.
    ಅವರು ಮಂಗಳವಾರ ಬಿಜೆಪಿ ಹಾಗೂ ಜೆಡಿಎಸ್ ಮುಖಂಡರ ಗೂಂಡಾ ವರ್ತನೆ, ಕಾಂಗ್ರೆಸ್ ಕಾರ್ಯಕರ್ತನ ಮೇಲೆ ಹಲ್ಲೆ ಹಾಗೂ ಸಂಸತ್ ಭವನದಲ್ಲಿ ನಡೆದ ಭದ್ರತಾ ವೈಫಲ್ಯ ಖಂಡಿಸಿ ಕಾಂಗ್ರೆಸ್ ಪಕ್ಷದ ನಗರ ಮತ್ತು ಗ್ರಾಮಾಂತರ ಘಟಕದ ವತಿಯಿಂದ ತಾಲೂಕು ಕಚೇರಿ ಅವರಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದರು.
    ಕ್ಷೇತ್ರದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ಅಭಿವೃದ್ಧಿ ಕೆಲಸಗಳಿಗೆ ಬೆಂಬಲ ನೀಡಲಿ, ಇಲ್ಲವಾದರೆ ಸುಮ್ಮನಿದ್ದು ಬಿಡಲಿ. ಗೊಂದಲ ಸೃಷ್ಟಿಸಿ ರಾಜಕಾರಣ ಮಾಡುವುದು ಸರಿಯಲ್ಲ. ಯಾವುದೋ ಸಣ್ಣ ಗಲಾಟೆಯನ್ನು ದೊಡ್ಡ ವಿಷಯವನ್ನಾಗಿಸಿಕೊಂಡು ಪೊಲೀಸರ ವಿರುದ್ಧ ಪ್ರತಿಭಟನೆ ಮಾಡುವುದು ಬಿಜೆಪಿ ಮತ್ತು ಜೆಡಿಎಸ್ ಎರಡು ಪಕ್ಷಗಳ ವೈಫಲ್ಯ ಎದ್ದು ಕಾಣುವಂತಾಗಿದೆ. ಪೊಲೀಸರು ತಮ್ಮ ಕರ್ತವ್ಯ ಸಮರ್ಥವಾಗಿ ನಿರ್ವಹಿಸುತ್ತಿದ್ದಾರೆ. ಅವರ ದಿಕ್ಕು ತಪ್ಪಿಸುವ ಕೆಲಸ ಮಾಡದಿರುವುದು ಒಳ್ಳೆಯದು. ಈಗಾಗಲೇ ಬಿಜೆಪಿ ಮತ್ತು ಜೆಡಿಎಸ್ ಪಕ್ಷದ ಕುತಂತ್ರ ಕೆಲಸಗಳು ಪೊಲೀಸ್ ಇಲಾಖೆಗೂ ತಿಳಿದಿದೆ. ಯಾರು ತಪ್ಪು ಮಾಡುತ್ತಾರೋ ಅವರ ವಿರುದ್ಧ ಕ್ರಮ ಕೈಗೊಳ್ಳುತ್ತಾರೆ ಎಂದರು.
    ಬೆಳಗಾವಿಯಲ್ಲಿ ನಡೆದ ವಿಧಾನಸಭೆ ಅಧಿವೇಶನದಲ್ಲಿ ಕ್ಷೇತ್ರದ ಅನೇಕ ಸಮಸ್ಯೆಗಳನ್ನು ಪ್ರಶ್ನಿಸುವ ಬದಲು ಕ್ಷುಲ್ಲಕ ಹಲ್ಲೆ ಪ್ರಕರಣ ಪ್ರಸ್ತಾಪಿಸಿ, ಬಿಜೆಪಿ ತನ್ನ ಜವಾಬ್ದಾರಿ ಮರೆತ್ತಿರುವುದನ್ನು ಸ್ಪಷ್ಟಪಡಿಸಿದೆ. ರಾಜ್ಯದಲ್ಲಿ ಬಿಜೆಪಿ ಪಕ್ಷದ ೨೫ ಲೋಕಸಭಾ ಸದಸ್ಯರಿದ್ದು, ಇವರು ಸಂಸತ್ ಸಭೆಯಲ್ಲಿ ವಿಐಎಸ್‌ಎಲ್ ಕಾರ್ಖಾನೆ ಅಭಿವೃದ್ಧಿಗೊಳಿಸುವ ವಿಚಾರ, ಕಾವೇರಿ ವಿಚಾರ, ರಾಜ್ಯದಲ್ಲಿ ಉಂಟಾಗಿರುವ ಬರ ಪರಿಸ್ಥಿತಿ ಕುರಿತು, ಪ್ರವಾಹ ಪೀಡಿತರಿಗೆ ಪರಿಹಾರ ನೀಡುವ ವಿಚಾರ ಸೇರಿದಂತೆ ಯಾವುದೇ ವಿಚಾರಗಳನ್ನು ಪ್ರಸ್ತಾಪಿಸಿಲ್ಲ. ಆದರೆ ಕ್ಷೇತ್ರಕ್ಕೆ ಆಗಮಿಸಿದಾಗ ವಿಐಎಸ್‌ಎಲ್ ಕಾರ್ಖಾನೆ ಅಭಿವೃದ್ಧಿ ಬಗ್ಗೆ ಮೊಸಳೆ ಕಣ್ಣೀರು ಸುರಿಸುತ್ತಾರೆ. ಬಿಜೆಪಿ ನಾಯಕರ ಈ ನಡೆಗೆ ತಕ್ಕ ಉತ್ತರ ದೊರೆಯಲಿದೆ. ಮತದಾರರು ಮುಂದಿನ ಲೋಕಸಭಾ ಚುನಾವಣೆಯಲ್ಲಿ ತಕ್ಕಪಾಠ ಕಲಿಸಲಿದ್ದಾರೆ ಎಂದರು.
    ಪೊಲೀಸ್ ಇಲಾಖೆ ದುರ್ಬಳಕೆ:
    ಅಧಿಕಾರ ಇಲ್ಲದಿದ್ದರೂ ಪೊಲೀಸ್ ಭದ್ರತೆ ಪಡೆಯುವ ಮೂಲಕ ಪೊಲೀಸ್ ಇಲಾಖೆಯನ್ನು ಕೆ.ಎಸ್.ಈಶ್ವರಪ್ಪ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆಂದು ಆರೋಪಿಸಿದರು.
    ಕೆ.ಎಸ್ ಈಶ್ವರಪ್ಪ ಬಾಯಿಬಿಟ್ಟರೆ ಬೆಂಕಿಯ ಮಾತುಗಳನ್ನಾಡುತ್ತಾರೆ. ಜೊತೆಗೆ ಇವರು ಮಾತುಗಳ ಮೂಲಕವೇ ಬೆಂಕಿಹಚ್ಚಿ ಅಶಾಂತಿ ಸೃಷ್ಟಿಸುತ್ತಾರೆಂದು ಆರೋಪಿಸಿ ಇಂತಹ ಕಾರಣದಿಂದಾಗಿಯೇ ಮೆದುಳು-ನಾಲಗೆಗೂ ಸಂಬಂಧವಿಲ್ಲದ ಮನುಷ್ಯ ಈಶ್ವರಪ್ಪ ಎಂದು ಸಿದ್ದರಾಮಯ್ಯರ ಟೀಕೆ ಮಾಡಿರುವುದು ಸರಿಯಾಗಿದೆ ಎಂದು ಸಮರ್ಥಿಸಿಕೊಂಡರು.
    ಹಿರಿಯ ನಗರಸಭಾ ಸದಸ್ಯ ಬಿ.ಕೆ ಮೋಹನ್ ಮಾತನಾಡಿ, ಕ್ಷೇತ್ರದಲ್ಲಿ ಬಿ.ಕೆ ಸಂಗಮೇಶ್ವರ್‌ರವರು ೪ ಬಾರಿ ಶಾಸಕರಾಗಿದ್ದಾರೆ. ಅವರಾಗಲಿ ಅಥವಾ ಕುಟುಂಬ ವರ್ಗದವರಾಗಲಿ ಎಂದಿಗೂ ಗೂಂಡಾಗಿರಿ, ಓ.ಸಿ, ಇಸ್ಪೀಟ್ ಸೇರಿದಂತೆ ಯಾವುದೇ ಜೂಜಾಟ, ಕಾನೂನುಬಾಹಿರ ಕೃತ್ಯಗಳನ್ನು ಬೆಂಬಲಿಸಿಲ್ಲ. ಶಾಸಕರು ಕೈಗೊಳ್ಳುತ್ತಿರುವ ಅಭಿವೃದ್ಧಿ ಕಾರ್ಯಗಳನ್ನು ಸಹಿಸಿಕೊಳ್ಳದ ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ಅವರ ವಿರುದ್ಧ ಅಪಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ. ಕ್ಷೇತ್ರದಲ್ಲಿ ಪೊಲೀಸರು ತಮ್ಮ ಕರ್ತವ್ಯ ಪ್ರಾಮಾಣಿಕವಾಗಿ ಕೈಗೊಳ್ಳುತ್ತಿದ್ದು, ಅವರ ದಿಕ್ಕು ತಪ್ಪಿಸುವ ಕೆಲಸದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ತೊಡಗಿಸಿಕೊಂಡಿವೆ. ಶಾಸಕರು ಮತ್ತು ಅವರ ಕುಟುಂಬ ವರ್ಗದವರ ವಿರುದ್ಧ ಹಲವಾರು ಕುತಂತ್ರಗಳನ್ನು ನಡೆಸಲಾಗಿದ್ದು, ಎಲ್ಲವೂ ವಿಫಲವಾಗಿವೆ. ಎಲ್ಲವೂ ಕ್ಷೇತ್ರದ ಜನರಿಗೆ ತಿಳಿದಿದ್ದು, ಮುಂದಿನ ದಿನಗಳಲ್ಲಿ ತಕ್ಕ ಪಾಠ ಕಲಿಸಲಿದ್ದಾರೆ ಎಂದರು.
    ಪ್ರತಿಭಟನೆಯಲ್ಲಿ ಕಾಂಗ್ರೆಸ್ ನಗರ ಘಟಕದ ಅಧ್ಯಕ್ಷ ಎಸ್. ಕುಮಾರ್, ಗ್ರಾಮಾಂತರ ಅಧ್ಯಕ್ಷ ಎಚ್.ಎಲ್ ಷಡಾಕ್ಷರಿ, ಮುಖಂಡರಾದ ಎಸ್. ಮಣಿಶೇಖರ್, ಬಿ.ಟಿ ನಾಗರಾಜ್, ವೈ. ರೇಣುಕಮ್ಮ, ಬಾಲಕೃಷ್ಣ, ಸಿ.ಎಂ ಖಾದರ್, ವೈ.ಎಚ್ ನಾಗರಾಜ್, ರಮೇಶ್ ಶಂಕರಘಟ್ಟ, ಸುಕನ್ಯ, ಶೃತಿ ಸಿ. ವಸಂತಕುಮಾರ್ ಕೆ.ಸಿ, ಸರ್ವಮಂಗಳ ಭೈರಪ್ಪ, ಕೆ. ಸುದೀಪ್ ಕುಮಾರ್, ಲತಾ ಚಂದ್ರಶೇಖರ್, ಮಣಿ ಎಎನ್‌ಎಸ್, ಚನ್ನಪ್ಪ, ಜಾರ್ಜ್, ಕಾಂತರಾಜ್, ಗೋಪಿ, ರವಿಕುಮಾರ್, ಬದರಿನಾರಾಯಣ, ಪ್ರಾನ್ಸಿಸ್, ಬಿ. ಗಂಗಾಧರ್, ಸಿ. ಜಯಪ್ಪ, ಅಂತೋಣಿ ವಿಲ್ಸನ್, ಅಂತರಗಂಗೆ ನಾಗೇಶ್, ಗೌರವಪುರ ಶಿವರಾಂ, ವೈ. ನಟರಾಜ್, ವೆಂಕಟಯ್ಯ, ಕೇಸರಿಪಡೆ ಗಿರೀಶ್, ಮಂಜುನಾಥ್(ಕೊಯ್ಲಿ), ಕುಮಾರ್, ಲಕ್ಷ್ಮೀಕಾಂತ್, ರೂಪ ನಾಗರಾಜ್, ವಿಜಯಲಕ್ಷ್ಮೀ, ರೇಷ್ಮಬಾನು, ಶೋಭಾ ರವಿಕುಮಾರ್ ಸೇರಿದಂತೆ ಮುಖಂಡರು, ಕಾರ್ಯಕರ್ತರು ಪಾಲ್ಗೊಂಡಿದ್ದರು.

Monday, December 18, 2023

ಜಿಲ್ಲಾಮಟ್ಟದ ಪವರ್ ಲಿಫ್ಟಿಂಗ್ ಸ್ಪರ್ಧೆ : ವಿಐಎಸ್‌ಎಲ್ ವ್ಯಾಯಾಮ ಶಾಲೆಗೆ ಸಮಗ್ರ ಪ್ರಶಸ್ತಿ

ಶಿವಮೊಗ್ಗ ಜಿಲ್ಲಾ ಪವರ್‌ಲಿಫ್ಟಿಂಗ್ ಅಸೋಸಿಯೇಷನ್ ವತಿಯಿಂದ ಭದ್ರಾವತಿ ನ್ಯೂಟೌನ್ ಸರ್‌ಎಂವಿ ಸರ್ಕಾರಿ ಕಲಾ ಮತ್ತು ವಾಣಿಜ್ಯ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ೨ ದಿನಗಳ ಜಿಲ್ಲಾಮಟ್ಟದ ಪುರುಷರ ಹಾಗೂ ಮಹಿಳೆಯರ ಓಪನ್ ಪವರ್ ಲಿಫ್ಟಿಂಗ್ ಸ್ಪರ್ಧೆ ಹಾಗೂ ರಾಜ್ಯಮಟ್ಟದ ಎಲ್ಲಾ ವಿಭಾಗದ ಸ್ಪರ್ಧೆಗಳಿಗೆ ಆಯ್ಕೆ ಪ್ರಕ್ರಿಯೆಯಲ್ಲಿ ವಿಐಎಸ್‌ಎಲ್ ವ್ಯಾಯಾಮ ಶಾಲೆ ಕ್ರೀಡಾಪಟುಗಳು ಸಮಗ್ರ ಪ್ರಶಸ್ತಿ ತಮ್ಮದಾಗಿಸಿಕೊಂಡಿದ್ದಾರೆ.
    ಭದ್ರಾವತಿ: ಶಿವಮೊಗ್ಗ ಜಿಲ್ಲಾ ಪವರ್‌ಲಿಫ್ಟಿಂಗ್ ಅಸೋಸಿಯೇಷನ್ ವತಿಯಿಂದ ನಗರದ ನ್ಯೂಟೌನ್ ಸರ್‌ಎಂವಿ ಸರ್ಕಾರಿ ಕಲಾ ಮತ್ತು ವಾಣಿಜ್ಯ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ೨ ದಿನಗಳ ಜಿಲ್ಲಾಮಟ್ಟದ ಪುರುಷರ ಹಾಗೂ ಮಹಿಳೆಯರ ಓಪನ್ ಪವರ್ ಲಿಫ್ಟಿಂಗ್ ಸ್ಪರ್ಧೆ ಹಾಗೂ ರಾಜ್ಯಮಟ್ಟದ ಎಲ್ಲಾ ವಿಭಾಗದ ಸ್ಪರ್ಧೆಗಳಿಗೆ ಆಯ್ಕೆ ಪ್ರಕ್ರಿಯೆಯಲ್ಲಿ ವಿಐಎಸ್‌ಎಲ್ ವ್ಯಾಯಾಮ ಶಾಲೆ ಕ್ರೀಡಾಪಟುಗಳು ಸಮಗ್ರ ಪ್ರಶಸ್ತಿ ತಮ್ಮದಾಗಿಸಿಕೊಂಡಿದ್ದಾರೆ.
    ಒಟ್ಟು ೨೯೮ ಅಂಕಗಳೊಂದಿಗೆ ಸಮಗ್ರ ಪ್ರಶಸ್ತಿ ತಮ್ಮದಾಗಿಸಿಕೊಂಡಿದ್ದು, ಶಿವಮೊಗ್ಗ ಫಿಟ್‌ಕೇರ್ ವ್ಯಾಯಾಮ ಶಾಲೆ ಕ್ರೀಡಾಪಟುಗಳು ಒಟ್ಟು ೨೦೫ ಅಂಕಗಳೊಂದಿಗೆ ಪ್ರತಿಸ್ಪರ್ಧಿ ಸ್ಥಾನ ಪಡೆದುಕೊಂಡಿದ್ದಾರೆ.
    ಮಹಿಳೆಯರ ಜ್ಯೂನಿಯರ್ ವಿಭಾಗದಲ್ಲಿ ಕಾರಂತ್ ವ್ಯಾಯಾಮ ಶಾಲೆಯ ಜೆ. ಪ್ರತಿಕ್ಷಾ ಮತ್ತು ಶಿವಮೊಗ್ಗ ಫಿಟ್‌ಕೇರ್ ವ್ಯಾಯಾಮ ಶಾಲೆಯ ಅಶ್ವಿನಿ ಹಾಗು ವರ್ಲ್ಡ್ ಸ್ಪೋರ್ಟ್ಸ್ ವ್ಯಾಯಾಮ ಶಾಲೆಯ ಎಸ್.ವಿ ಸಿಂಧೂರ ಬೆಸ್ಟ್ ಲಿಫ್ಟರ್ ಬಿರುದು ಪಡೆದುಕೊಂಡಿದ್ದಾರೆ.
    ಪುರುಷರ ಜ್ಯೂನಿಯರ್ ವಿಭಾಗದಲ್ಲಿ ಶಿವಮೊಗ್ಗ ಫಿಟ್‌ಕೇರ್ ವ್ಯಾಯಾಮ ಶಾಲೆಯ ವಿ. ಸುಹಾಸ್ ಮತ್ತು ವಿಐಎಸ್‌ಎಲ್ ವ್ಯಾಯಾಮ ಶಾಲೆಯ ಎಂ. ಫಜಿಲ್ ಹಾಗು ಹಿರಿಯರ ವಿಭಾಗದಲ್ಲಿ  ಎಸ್. ರಂಜಿತ್ ಬೆಸ್ಟ್ ಲಿಫ್ಟರ್ ಬಿರುದು ಪಡೆದುಕೊಂಡಿದ್ದಾರೆ.
ಉಳಿದಂತೆ ಪುರುಷರ ಮಾಸ್ಟರ್ ವಿಭಾಗದಲ್ಲಿ ವಿಐಎಸ್‌ಎಲ್ ವ್ಯಾಯಾಮ ಶಾಲೆಯ ರಾಘವೇಂದ್ರ ಶೆಟ್ಟಿ ಮತ್ತು ಸಿಲ್ವರ್ ಸ್ಟೋನ್ ವ್ಯಾಯಮ ಶಾಲೆಯ ಎಸ್. ದೇವಕುಮಾರ್ ಪ್ರಥಮ ಸ್ಥಾನ ಹಾಗು ಶಿವಮೊಗ್ಗ ಫಿಟ್‌ಕೇರ್ ವ್ಯಾಯಾಮ ಶಾಲೆಯ ಸಿ. ಕುಮಾರ್ ಪ್ರಥಮ ಹಾಗು ವಿಐಎಸ್‌ಎಲ್ ವ್ಯಾಯಾಮ ಶಾಲೆಯ ಶಫಿ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ.
    ಪುರುಷರ ಮಾಸ್ಟರ್-೨ ವಿಭಾಗದಲ್ಲಿ ವಿಐಎಸ್‌ಎಲ್ ವ್ಯಾಯಾಮ ಶಾಲೆಯ ಡಾ ವರದರಾಜ ಹಾಗು ಶ್ರೀನಿವಾಸ್ ಪ್ರಥಮ ಸ್ಥಾನ ಹಾಗು ಲೋಕನಾಥ್ ಪ್ರಥಮ ಮತ್ತು ಕಾರಂತ್ ವ್ಯಾಯಾಮ ಶಾಲೆಯ ಎ. ಮಸ್ತಾನ್ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ.
    ಪುರುಷರ ಸಬ್ ಜ್ಯೂನಿಯರ್ ವಿಭಾಗದಲ್ಲಿ ಮೊಹೊಜಿಯನ್ ಪ್ರಥಮ, ಭರತ್‌ಕುಮಾರ್ ದ್ವಿತೀಯ ಮತ್ತು ಎ. ವಿನಯ್ ತೃತೀಯ ಸ್ಥಾನ ಪಡೆದುಕೊಂಡಿದ್ದು, ಓವೈಸ್ ಅಹಮದ್ ಖಾನ್ ಪ್ರಥಮ, ಎಂ.ಬಿ ನಿತಿನ್ ದ್ವಿತೀಯ ಮತ್ತು ಎಸ್.ವಿ ಪ್ರಜ್ವಲ್ ತೃತೀಯ ಸ್ಥಾನ ಕಾಯ್ದುಕೊಂಡಿದ್ದು, ೮೮ ಕೆ.ಜಿ ತೂಕದಲ್ಲಿ ವಿ. ಪ್ರಮೋದ್ ಮತ್ತು ೯೮ ಕೆ.ಜಿ ತೂಕದಲ್ಲಿ ಪಿ. ದರ್ಶನ್ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ.
    ಸಬ್ ಜ್ಯೂನಿಯರ್ ಮಹಿಳೆಯರ ವಿಭಾಗದ ೭೬ಕೆ.ಜಿ ತೂಕದಲ್ಲಿ ಎಂ.ಕೆ ಜ್ಞಾನವಿ ಪ್ರಥಮ, ಜ್ಯೂನಿಯರ್ ವಿಭಾಗದಲ್ಲಿ ಜ್ಞಾನಿತಾ ಪ್ರಥಮ, ಅಶ್ವಿನಿ ದ್ವಿತೀಯ ಮತ್ತು ಸೀನಿಯರ್ ವಿಭಾಗದಲ್ಲಿ ವಹೀದಾ ಬೇಗಂ ಪ್ರಥಮ, ಎ. ಸುನೀತಾ ದ್ವಿತೀಯ ಮತ್ತು ಎಸ್.ಡಿ ಮಂಜುಶ್ರೀ ತೃತೀಯ, ಮಾಸ್ಟರ್ ವಿಭಾಗದಲ್ಲಿ ಸಂಧ್ಯಾ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ.
    ಜ್ಯೂನಿಯರ್ ೮೪ ಕೆ.ಜಿ ಒಳಗಿನ ವಿಭಾಗದಲ್ಲಿ ಟಿ.ಜೆ ಮೋನಿಕಾ ಪ್ರಥಮ, ಸೀನಿಯರ್ ವಿಭಾಗದಲ್ಲಿ ಎಂ.ಕೆ ಸೌಮ್ಯ ಪ್ರಥಮ, ಕೆ. ಸ್ವಪ್ನ ದ್ವಿತೀಯ ಹಾಗು ಡಿ. ಸೌಮ್ಯ ತೃತೀಯ ಮತ್ತು ಮಾಸ್ಟರ್ ವಿಭಾಗದಲ್ಲಿ ಶಶಿಕಲಾ ಪ್ರಥಮ ಸ್ಥಾನ ಕಾಯ್ದುಕೊಂಡಿದ್ದು,  ೮೪ ಕೆ.ಜಿ ಮೇಲ್ಪಟ್ಟ ಸೀನಿಯರ್ ವಿಭಾಗದಲ್ಲಿ ಆರ್. ಸಂಗೀತ ಪ್ರಥಮ, ಎನ್. ತಾರಾ ದ್ವಿತೀಯ ಹಾಗು ಮಾಸ್ಟರ್ ವಿಭಾಗದಲ್ಲಿ ಕೆ. ಕವಿತಾ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ.
    ಸಬ್ ಜ್ಯೂನಿಯರ್ ೪೭ ಕೆ.ಜಿ ವಿಭಾಗದಲ್ಲಿ ಜೆ. ಪ್ರತಿಕ್ಷಾ ಪ್ರಥಮ, ಜ್ಯೂನಿಯರ್ ವಿಭಾಗದಲ್ಲಿ ಸಿ. ಭಾವನಾ ಪ್ರಥಮ, ಸೀನಿಯರ್ ಎಸ್.ವಿ ಸಿಂಧೂರಾ ಪ್ರಥಮ ಸ್ಥಾನ ಕಾಯ್ದುಕೊಂಡಿದ್ದು, ಸಬ್ ಜ್ಯೂನಿಯರ್ ೫೨ ಕೆ.ಜಿ ವಿಭಾಗದಲ್ಲಿ ಎಂ. ಸಾನಿಯಾ ಪ್ರಥಮ, ಜ್ಯೂನಿಯರ್ ಅರ್ಷಿತಾ ಪ್ರಥಮ, ೫೭ ಕೆ.ಜಿ ಮಾಸ್ಟರ್ ವಿಭಾಗದಲ್ಲಿ ಗೀತಾ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ.
    ಸಬ್ ಜ್ಯೂನಿಯರ್ ೬೩ ಕೆ.ಜಿ ವಿಭಾಗದಲ್ಲಿ ಅನಿತಾ ಪ್ರಥಮ, ೬೯ ಕೆ.ಜಿ ವಿಭಾಗದಲ್ಲಿ ಕೆ. ಜನ್ನಿಫರ್ ಪ್ರಥಮ, ಸೀನಿಯರ್ ವಿಭಾಗದಲ್ಲಿ ಎನ್.ಪಿ ಚಂದನ ಪ್ರಥಮ ಹಾಗು ಮಾಸ್ಟರ್ ವಿಭಾಗದಲ್ಲಿ ಎಚ್. ಅನ್ನಪೂರ್ಣೇಶ್ವರಿ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ.


ಶಿವಮೊಗ್ಗ ಜಿಲ್ಲಾ ಪವರ್‌ಲಿಫ್ಟಿಂಗ್ ಅಸೋಸಿಯೇಷನ್ ವತಿಯಿಂದ ಭದ್ರಾವತಿ ನ್ಯೂಟೌನ್ ಸರ್‌ಎಂವಿ ಸರ್ಕಾರಿ ಕಲಾ ಮತ್ತು ವಾಣಿಜ್ಯ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ೨ ದಿನಗಳ ಜಿಲ್ಲಾಮಟ್ಟದ ಪುರುಷರ ಹಾಗೂ ಮಹಿಳೆಯರ ಓಪನ್ ಪವರ್ ಲಿಫ್ಟಿಂಗ್ ಸ್ಪರ್ಧೆ ಹಾಗೂ ರಾಜ್ಯಮಟ್ಟದ ಎಲ್ಲಾ ವಿಭಾಗದ ಸ್ಪರ್ಧೆಗಳಿಗೆ ಆಯ್ಕೆ ಪ್ರಕ್ರಿಯೆಯಲ್ಲಿ ೬ ಮಂದಿ ಕ್ರೀಡಾಪಟುಗಳು ಬೆಸ್ಟ್ ಲಿಫ್ಟರ್ ಬಿರುದು ಪಡೆದುಕೊಂಡರು.  

ಮುಖಂಡರ ವಿರುದ್ಧ ವಿನಾಕಾರಣ ಕೊಲೆಯತ್ನ ಪ್ರಕರಣ ದಾಖಲು ಆರೋಪ

ಜೆಡಿಎಸ್-ಬಿಜೆಪಿ ಮುಖಂಡರು, ಕಾರ್ಯಕರ್ತರು ಪೊಲೀಸ್ ಠಾಣೆ ಮುಂಭಾಗ ಪ್ರತಿಭಟನೆ

ಭದ್ರಾವತಿ ತಾಲೂಕಿನ ಕಾಚಗೊಂಡನಹಳ್ಳಿ ಗ್ರಾಮದಲ್ಲಿ ಡೈರಿ ಚುನಾವಣೆ ಸಂಬಂಧ ಭಾನುವಾರ ಯಾವುದೇ ರೀತಿಯ ಗಂಭೀರವಾದ ಘಟನೆಗಳು ನಡೆದಿರುವುದಿಲ್ಲ. ವಿನಾಕಾರಣ ಇಬ್ಬರು ಮುಖಂಡರ ಮೇಲೆ ಪೊಲೀಸರು ಕೊಲೆ ಯತ್ನ ಪ್ರಕರಣ ದಾಖಲಿಸಿಕೊಂಡಿರುವುದು ಸರಿಯಲ್ಲ. ತಕ್ಷಣ ಪ್ರಕರಣ ಹಿಂಪಡೆಯಬೇಕೆಂದು ಆಗ್ರಹಿಸಿ ಸೋಮವಾರ ನಗರದ ಹೊಸಮನೆ ಶಿವಾಜಿ ಸರ್ಕಲ್ ಪೊಲೀಸ್ ಠಾಣೆ ಮುಂಭಾಗ ಜೆಡಿಎಸ್ ಮತ್ತು ಬಿಜೆಪಿ ಪಕ್ಷದ ಮುಖಂಡರು, ಕಾರ್ಯಕತರು ಪ್ರತಿಭಟನೆ ನಡೆಸಿರುವ ಘಟನೆ ನಡೆದಿದೆ.
    ಭದ್ರಾವತಿ : ತಾಲೂಕಿನ ಕಾಚಗೊಂಡನಹಳ್ಳಿ ಗ್ರಾಮದಲ್ಲಿ ಡೈರಿ ಚುನಾವಣೆ ಸಂಬಂಧ ಭಾನುವಾರ ಯಾವುದೇ ರೀತಿಯ ಗಂಭೀರವಾದ ಘಟನೆಗಳು ನಡೆದಿರುವುದಿಲ್ಲ. ವಿನಾಕಾರಣ ಇಬ್ಬರು ಮುಖಂಡರ ಮೇಲೆ ಪೊಲೀಸರು ಕೊಲೆ ಯತ್ನ ಪ್ರಕರಣ ದಾಖಲಿಸಿಕೊಂಡಿರುವುದು ಸರಿಯಲ್ಲ. ತಕ್ಷಣ ಪ್ರಕರಣ ಹಿಂಪಡೆಯಬೇಕೆಂದು ಆಗ್ರಹಿಸಿ ಸೋಮವಾರ ನಗರದ ಹೊಸಮನೆ ಶಿವಾಜಿ ಸರ್ಕಲ್ ಪೊಲೀಸ್ ಠಾಣೆ ಮುಂಭಾಗ ಜೆಡಿಎಸ್ ಮತ್ತು ಬಿಜೆಪಿ ಪಕ್ಷದ ಮುಖಂಡರು, ಕಾರ್ಯಕತರು ಪ್ರತಿಭಟನೆ ನಡೆಸಿರುವ ಘಟನೆ ನಡೆದಿದೆ.
    ಕಾಚಗೊಂಡನಹಳ್ಳಿ ಗ್ರಾಮದ ನಿವಾಸಿ ಸಿ. ರವಿಕುಮಾರ್ ಎಂಬುವರು ಡೈರಿ ಚುನಾವಣೆ ನಾಮಪತ್ರ ಪರಿಶೀಲನೆ ಸಂದರ್ಭದಲ್ಲಿ ಡಿ. ಚಂದ್ರಶೇಖರ್ ಮತ್ತು ಡಿ. ಆನಂದ ಎಂಬುವರು ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿದ್ದಾರೆಂದು ದೂರು ನೀಡಿದ್ದು, ಈ ಹಿನ್ನಲೆಯಲ್ಲಿ ಪೊಲೀಸರು ಈ ಇಬ್ಬರ ಮೇಲೆ ಕೊಲೆಯತ್ನ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇದನ್ನು ಪ್ರಶ್ನಿಸಿ ಜೆಡಿಎಸ್ ಮತ್ತು ಬಿಜೆಪಿ ಪಕ್ಷದ ಮುಖಂಡರು, ಕಾರ್ಯಕರ್ತರು ಠಾಣೆ ಮುಂಭಾಗ ಏಕಾಏಕಿ ಪ್ರತಿಭಟನೆ ನಡೆಸಿದರು.
    ಪೊಲೀಸರು ವಾಸ್ತವಾಂಶ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಳ್ಳಬೇಕು. ಗ್ರಾಮದಲ್ಲಿ ಕೊಲೆಯತ್ನ ಅಥವಾ ಯಾವುದೇ ರೀತಿಯ ಗಂಭೀರವಾದ ಪ್ರಕರಣ ನಡೆದಿರುವುದಿಲ್ಲ. ವ್ಯಕ್ತಿಯೊಬ್ಬರು ದೂರು ನೀಡಿದ ಮಾತ್ರಕ್ಕೆ ವಿನಾಕಾರಣ ಕೊಲೆಯತ್ನ ಪ್ರಕರಣ ದಾಖಲಿಸುವುದು ಸರಿಯಲ್ಲ. ಉದ್ದೇಶ ಪೂರ್ವಕವಾಗಿ ಪ್ರಕರಣ ದಾಖಲಿಸಲಾಗಿದೆ. ಈ ಹಿನ್ನಲೆಯಲ್ಲಿ ಸೂಕ್ತ ತನಿಖೆ ಕೈಗೊಂಡು ಪ್ರಕರಣ ದಾಖಲಿಸಬೇಕೆಂದು ಆಗ್ರಹಿಸಿದರು.
    ಪ್ರತಿಭಟನೆಯಲ್ಲಿ ಪ್ರಮುಖರಾದ ಆರ್. ಕರುಣಾಮೂರ್ತಿ, ಎಂ.ಎ ಅಜಿತ್, ಜಿ. ಧರ್ಮಪ್ರಸಾದ್, ಎಚ್.ಬಿ ರವಿಕುಮಾರ್, ಮಂಗೋಟೆ ರುದ್ರೇಶ್, ಎಂ. ಮಂಜುನಾಥ್, ರಂಗಸ್ವಾಮಿ, ಸಾವಿತ್ರಮ್ಮ ಪುಟ್ಟೇಗೌಡ, ಉಮೇಶ್ ಸೇರಿದಂತೆ ಇನ್ನಿತರ ಮುಖಂಡರು, ಕಾರ್ಯಕರ್ತರು ಪಾಲ್ಗೊಂಡಿದ್ದರು.

ಭದ್ರಾವತಿ ಉಪವಿಭಾಗದ ಪೊಲೀಸರ ಕಾರ್ಯಾಚರಣೆ : ಕಳವು ಮಾಡಲಾಗಿದ್ದ ೧೪ ದ್ವಿಚಕ್ರ ವಶ

ಕೃತ್ಯಕ್ಕೆ ಬಳಸಿದ ೨ ದ್ವಿಚಕ್ರ ವಾಹನ ಸೇರಿ ಒಟ್ಟು ೫.೮೦ ಲಕ್ಷ ರು. ಮೌಲ್ಯ, ೩ ಮಂದಿ ಸೆರೆ

ಭದ್ರಾವತಿ ಉಪವಿಭಾಗದ ಪೊಲೀಸರು ವಿವಿಧೆಡೆ ಕಳವು ಮಾಡಲಾಗಿದ್ದ ೧೪ ಹಾಗು ಕಳವು ಕೃತ್ಯಕ್ಕೆ ಬಳಸಿಕೊಳ್ಳಲಾಗಿದ್ದ ೨ ದ್ವಿಚಕ್ರ ವಾಹನಗಳು ಸೇರಿದಂತೆ ಒಟ್ಟು ೫.೮೦ ಲಕ್ಷ ರು. ಮೌಲ್ಯದ ಒಟ್ಟು ೧೬ ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
    ಭದ್ರಾವತಿ: ಉಪವಿಭಾಗದ ಪೊಲೀಸರು ವಿವಿಧೆಡೆ ಕಳವು ಮಾಡಲಾಗಿದ್ದ ೧೪ ಹಾಗು ಕಳವು ಕೃತ್ಯಕ್ಕೆ ಬಳಸಿಕೊಳ್ಳಲಾಗಿದ್ದ ೨ ದ್ವಿಚಕ್ರ ವಾಹನಗಳು ಸೇರಿದಂತೆ ಒಟ್ಟು ೫.೮೦ ಲಕ್ಷ ರು. ಮೌಲ್ಯದ ಒಟ್ಟು ೧೬ ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆಂದು ಹೆಚ್ಚುವರಿ ಜಿಲ್ಲಾ ರಕ್ಷಣಾಧಿಕಾರಿ ಅನಿಲ್ ಕುಮಾರ್ ಭೂಮಾರೆಡ್ಡಿ ತಿಳಿಸಿದರು.
    ಅವರು ಸೋಮವಾರ ನಗರದ ನ್ಯೂಟೌನ್ ಪೊಲೀಸ್ ಠಾಣೆಯಲ್ಲಿ ಈ ಕುರಿತು ಮಾಹಿತಿ ನೀಡಿ, ತಾಲೂಕಿನ ಸಿದ್ದಾಪುರ ಹೊಸೂರು ಉರ್ದು ಶಾಲೆಯ ಹಿಂಭಾಗ ನಿವಾಸಿಗಳಾದ ಅಬುಲ್ ಕರೀಂ ಅಲಿಯಾಸ್ ಮನ್ನಾ(೨೭) ಮತ್ತು ಅರ್ಷೀಲ್ ಪಾಷಾ ಅಲಿಯಾಸ್ ಹರ್ಷೀಲ್(೩೪) ಹಾಗು  ಶಿವಮೊಗ್ಗ ರಾಗಿಗುಡ್ಡ ಮೊರಾರ್ಜಿ ಶಾಲೆಯ ಬಳಿ ನಿವಾಸಿ ಪ್ರಭು ಅಲಿಯಾಸ್ ಕೋಳಿ(೨೭) ಒಟ್ಟು ೩ ಮಂದಿಯನ್ನು ಬಂಧಿಸಿ ನ್ಯೂಟೌನ್ ಪೊಲೀಸ್ ಠಾಣೆಗೆ ಸೇರಿದ ೭, ತರೀಕೆರೆ ಪೊಲೀಸ್ ಠಾಣೆಗೆ ೧, ಶಿವಮೊಗ್ಗ ದೊಡ್ಡಪೇಟೆ ಪೊಲೀಸ್ ಠಾಣೆಗೆ ಸೇರಿದ ೧, ಪೇಪರ್‌ಟೌನ್ ಪೊಲೀಸ್ ಠಾಣೆಗೆ ಸೇರಿದ ೧, ಹೊಸಮನೆ ಶಿವಾಜಿ ಸರ್ಕಲ್ ಪೊಲೀಸ್ ಠಾಣೆಗೆ ಸೇರಿದ ೨, ಹೊಳೆ ಹೊನ್ನೂರು ಪೊಲೀಸ್ ಠಾಣೆಗೆ ಸೇರಿದ ೧ ಮತ್ತು ಶಿವಮೊಗ್ಗ ಕೋಟೆ ಪೊಲೀಸ್ ಠಾಣೆಗೆ ಸೇರಿದ ೧ ಹಾಗು ಕೃತ್ಯಕ್ಕೆ ಬಳಸಿದ ೨ ದ್ವಿಚಕ್ರ ವಾಹನಗಳನ್ನು ವಶಕ್ಕೆ ಪಡೆಯಲಾಗಿದೆ ಎಂದರು.
    ಪತ್ತೆ ಕಾರ್ಯಕ್ಕೆ ಜಿಲ್ಲಾ ರಕ್ಷಣಾಧಿಕಾರಿ ಜಿ.ಕೆ ಮಿಥುನ್ ಕುಮಾರ್ ಮತ್ತು ಹೆಚ್ಚುವರಿ ಜಿಲ್ಲಾ ರಕ್ಷಣಾಧಿಕಾರಿ ಅನೀಲ್ ಕುಮಾರ್ ಭೂಮರೆಡ್ಡಿ ಮಾರ್ಗದರ್ಶನದಲ್ಲಿ, ಉಪ ವಿಭಾಗದ ಪೊಲೀಸ್ ಉಪಾಧೀಕ್ಷಕ ಕೆ.ಆರ್ ನಾಗರಾಜ್ ಮೇಲ್ವಿಚಾರಣೆಯಲ್ಲಿ ವೃತ್ತ ನಿರೀಕ್ಷಕರಾದ ಶ್ರೀ ಶ್ರೀಶೈಲ್ ಕುಮಾರ್ ಮತ್ತು ಜಗದೀಶ ಸೋಮನಾಳ, ಪೇಪರ್‌ಟೌನ್ ಪೊಲೀಸ್ ಠಾಣೆ ನಿರೀಕ್ಷಕಿ ನಾಗಮ್ಮ  ಮತ್ತು ಹೊಳೆಹೊನ್ನೂರು ಪೊಲೀಸ್ ಠಾಣೆ ನಿರೀಕ್ಷಕ ಲಕ್ಷ್ಮೀಪತಿ ನೇತ್ರತ್ವದಲ್ಲಿ ಠಾಣಾಧಿಕಾರಿಗಳಾದ ಸುರೇಶ್ ಮತ್ತು ರಮೇಶ್, ಉಪ ಠಾಣಾಧಿಕಾರಿ ಚಂದ್ರಶೇಖರ್ ಹಾಗು ಪೊಲೀಸ್ ಸಿಬ್ಬಂದಿಗಳಾದ ನವೀನ್, ಚನ್ನಕೇಶವ, ನಾಗರಾಜ ಹಾಗು ಆದರ್ಶ ಅವರನ್ನೊಳಗೊಂಡ ವಿಶೇಷ ತಂಡ ರಚಿಸಲಾಗಿತ್ತು. ಈ ತಂಡ ಡಿ. ೧೬ರಂದು ೩ ಜನರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ. ಜಿಲ್ಲಾ ರಕ್ಷಣಾಧಿಕಾರಿ ಜಿ.ಕೆ ಮಿಥುನ್‌ಕುಮಾರ್‌ರವರು ತಂಡವನ್ನು ಪ್ರಶಂಸಿಸಿ ಅಭಿನಂದಿಸಿದ್ದಾರೆ ಎಂದರು.