Sunday, January 14, 2024

ಜ.೧೫ರಂದು ವಿಐಎಸ್‌ಎಲ್ ಗುತ್ತಿಗೆ ಕಾರ್ಮಿಕರಿಂದ ಬೈಕ್ ರ್‍ಯಾಲಿ

    ಭದ್ರಾವತಿ: ಕೇಂದ್ರ ಸರ್ಕಾರ ಹಾಗೂ ಉಕ್ಕು ಪ್ರಾಧಿಕಾರ ಆಡಳಿತ ವರ್ಗ ಕೈಕೊಂಡಿರುವ ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಶಾಶ್ವತವಾಗಿ ಮುಚ್ಚುವ ತೀರ್ಮಾನದ ವಿರುದ್ಧ ಗುತ್ತಿಗೆ ಕಾರ್ಮಿಕರು ಕಾರ್ಖಾನೆ ಮುಂಭಾಗ ನಡೆಸುತ್ತಿರುವ ಹೋರಾಟ ಒಂದು ವರ್ಷ ಪೂರೈಸುತ್ತಿರುವ ಹಿನ್ನಲೆಯಲ್ಲಿ ಜ.೧೫ರಂದು ಬೆಳಿಗ್ಗೆ ೧೧ ಗಂಟೆಗೆ ಶಿವಮೊಗ್ಗ ಸಂಸದರ ನಿವಾಸದವರೆಗೆ ಬೈಕ್ ರ್‍ಯಾಲಿ ಹಮ್ಮಿಕೊಳ್ಳಲಾಗಿದೆ.
    ಹೋರಾಟ ಒಂದು ವರ್ಷ ಪೂರೈಸುತ್ತಿರುವ ಹಿನ್ನಲೆಯಲ್ಲಿ ಕೆಲವು ದಿನಗಳ ಹಿಂದೆ ಗುತ್ತಿಗೆ ಕಾರ್ಮಿಕರು ಹೋರಾಟ ಮತ್ತಷ್ಟು ತೀವ್ರಗೊಳಿಸುವ ನಿಟ್ಟಿನಲ್ಲಿ ಜ.೧೬ರಂದು ಕರಾಳ ದಿನ ಆಚರಣೆಯೊಂದಿಗೆ ಪಂಜಿನ ಮೆರವಣಿಗೆ  ಹಾಗು ೧೮ರಂದು ಸಂಸದರ ನಿವಾಸದವರೆಗೂ ಬೈಕ್ ರ್‍ಯಾಲಿ ನಡೆಸಲು ತೀರ್ಮಾನ ಕೈಗೊಂಡಿದ್ದರು. ಇದೀಗ ಬೈಕ್ ರ್‍ಯಾಲಿ ಜ.೧೫ರ ಸಂಕ್ರಾತಿ ಹಬ್ಬದಂದು ನಡೆಸಲು ಮುಂದಾಗಿದ್ದಾರೆ.
    ಈ ಸಂಬಂಧ ಗುತ್ತಿಗೆ ಕಾರ್ಮಿಕ ಸಂಘಟನೆಗಳ ಮುಖಂಡರು ಭಾನುವಾರ ಪತ್ರಿಕಾ ಹೇಳಿಕೆ ನೀಡಿದ್ದು, ಬೈಕ್ ರ್‍ಯಾಲಿ ಯಶಸ್ವಿಗೊಳಿಸುವ ನಿಟ್ಟಿನಲ್ಲಿ   ಗುತ್ತಿಗೆ ಕಾರ್ಮಿಕರು, ವಿವಿಧ ರಾಜಕೀಯ ಪಕ್ಷಗಳು, ಸಂಘ-ಸಂಸ್ಥೆಗಳು, ವಿದ್ಯಾರ್ಥಿಗಳು, ಮಹಿಳಾ ಸಂಘಟನೆಗಳು, ರೈತರು, ವ್ಯಾರಾರಸ್ಥರು ಸೇರಿದಂತೆ ನಾಗರೀಕರು ಸಹಕರಿಸುವಂತೆ ಮನವಿ ಮಾಡಿದ್ದಾರೆ.  

Saturday, January 13, 2024

ರಂಗಕರ್ಮಿ, ಅಧ್ಯಾಪಕ ಜಿ.ಆರ್ ಲವ ಅವರಿಗೆ ಹಂಪಿ ವಿ.ವಿ ಡಾಕ್ಟರೇಟ್ ಪದವಿ

ಜಿ.ಆರ್ ಲವ
    ಭದ್ರಾವತಿ : ತಾಲೂಕಿನ ಗೋಣಿಬೀಡು, ಮಲ್ಲಿಗೇನಹಳ್ಳಿ ನಿವಾಸಿ, ಶಿವಮೊಗ್ಗ ಸಹ್ಯಾದ್ರಿ ಕಾಲೇಜಿನ ಕನ್ನಡ ವಿಭಾಗದ ಅಧ್ಯಾಪಕ ಜಿ.ಆರ್ ಲವ ಅವರು ಹಂಪಿ ಕನ್ನಡ ವಿಶ್ವವಿದ್ಯಾಲಯದಿಂದ ಡಾಕ್ಟರ್‌ರೇಟ್ ಪದವಿ ಪಡೆದುಕೊಂಡಿದ್ದಾರೆ.  
    ಹಲವಾರು ವರ್ಷಗಳಿಂದ ಅಧ್ಯಾಪಕ ವೃತ್ತಿಯೊಂದಿಗೆ ರಂಗಭೂಮಿ, ಸಾಹಿತ್ಯ, ನಾಟಕ ಹಾಗು ಜಾನಪದ ಕಲೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಜಿ.ಆರ್ ಲವ ಅವರು ವಿಶ್ವವಿದ್ಯಾಲಯದ ಕನ್ನಡ ಭಾಷಾ ನಿಕಾಯದ ಕುವೆಂಪು ಕನ್ನಡ ಅಧ್ಯಯನ ಕೇಂದ್ರ, ಕುಪ್ಪಳಿ. ಮುಖ್ಯಸ್ಥರು ಹಾಗು ಪ್ರಾಧ್ಯಾಪಕರಾ ಡಾ. ಬಿ.ಎಂ ಪುಟ್ಟಯ್ಯ ಅವರ ಮಾರ್ಗದರ್ಶನದಲ್ಲಿ  ಕನ್ನಡ ನಾಟಕಗಳು : ಓದಿನ ಆಯಾಮಗಳು (ಆಯ್ದ ನಾಟಕಗಳನ್ನು ಅನುಲಕ್ಷಿಸಿ) ಎಂಬ ಮಹಾಪ್ರಬಂಧ ಮಂಡಿಸಿದ್ದರು.
    ಜ.೧೦ ರಂದು ನಡೆದ ಹಂಪಿಯ ನುಡಿಹಬ್ಬ-೩೨ ಘಟಿಕೋತ್ಸವದಲ್ಲಿ ಉನ್ನತ ಶಿಕ್ಷಣ ಸಚಿವ, ಸಮಕುಲಾಧಿಪತಿ ಡಾ.ಎಂ.ಸಿ. ಸುಧಾಕರ್ ಅವರಿಂದ  ಪದವಿ ಸ್ವೀಕರಿಸಿದರು. ಕನ್ನಡ ನಾಟಕಕಾರ, ವಿಮರ್ಶಕ ಹಾಗು ಪ್ರಾಧ್ಯಾಪಕ ಡಾ. ರಾಜಪ್ಪ ದಳವಾಹಿ ಮಹಾಪ್ರಬಂಧಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಲವ ಅವರು ಗೋಣಿಬೀಡು, ಮಲ್ಲಿಗೇನಹಳ್ಳಿ ರಂಗಮ್ಮ-ರಾಮೇಗೌಡ ದಂಪತಿ ಪುತ್ರರಾಗಿದ್ದಾರೆ. ಕಳೆದ ಇಪ್ಪತ್ತು ವರ್ಷಗಳಿಂದ ಅಧ್ಯಾಪಕ ವೃತ್ತಿಯಲ್ಲಿ ತೊಡಗಿದ್ದು, ಹಲವು ವಿಭಿನ್ನತೆ ಹಾಗು ಕ್ರಿಯಾಶೀಲತೆಯೊಂದಿಗೆ ವಿದ್ಯಾರ್ಥಿಗಳ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
    ಲವ ಅವರಿಗೆ ತಾಯಿ ರಂಗಮ್ಮ, ಪತ್ನಿ ಲಾವಣ್ಯ ಮತ್ತು ಸಹೋದರ ಜಿ.ಆರ್ ತ್ಯಾಗರಾಜ ಹಾಗು ಜಯಕರ್ನಾಟಕ ಶಂಕರಘಟ್ಟ ಘಟಕ, ಸಹ್ಯಾದ್ರಿ ಕಲಾತಂಡ, ಸಹ್ಯಾದ್ರಿ ಕಾಲೇಜಿನ ಅಧ್ಯಾಪಕ ವೃಂದ, ಕನ್ನಡ ಅಧ್ಯಾಪಕರ ವೇದಿಕೆ ಹಾಗು ಜನ್ನಾಪುರ ಡಾ. ಬಿ.ಆರ್ ಅಂಬೇಡ್ಕರ್ ಜಾನಪದ ಕಲಾ ತಂಡ ಸೇರಿದಂತೆ ಇನ್ನಿತರ ಸಂಘ-ಸಂಸ್ಥೆಗಳು ಅಭಿನಂದಿಸಿವೆ.

ಕಷ್ಟದಲ್ಲಿರುವವರಿಗೆ ಕೈಲಾದಷ್ಟು ನೆರವು ನೀಡಿದಾಗ ಅವರು ಅದನ್ನು ಜೀವನ ಪೂರ್ತಿ ಸ್ಮರಿಸುತ್ತಾರೆ : ಡಾ.ಎಲ್.ಎಚ್ ಮಂಜುನಾಥ್

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮಹಿಳಾ ಜ್ಞಾನವಿಕಾಸ ಕಾರ್ಯಕ್ರಮದಡಿ ಭದ್ರಾವತಿ ತಾಲೂಕಿನ ಗ್ರಾಮಾಭಿವೃದ್ಧಿ ಯೋಜನೆ-೨ರ ವ್ಯಾಪ್ತಿಯ ತಾಲೂಕಿನ ನಾಗತಿಬೆಳಗಲು ವಲಯದ ಕಾಗೆಕೊಡಮಗ್ಗಿ (ಕೆ.ಕೆ ಮಗ್ಗಿ) ಕೆ.ಕೆ ಹೊಸೂರು ಕಾರ್ಯಕ್ಷೇತ್ರದ ವಾತ್ಸಲ್ಯ ಸದಸ್ಯೆ ಕುಪ್ಪಮ್ಮರವರಿಗೆ ವಾತ್ಸಲ್ಯ ಮನೆ ಹಸ್ತಾಂತರಿಸಲಾಯಿತು.
    ಭದ್ರಾವತಿ : ಕಷ್ಟದಲ್ಲಿರುವವರಿಗೆ ಕೈಲಾದಷ್ಟು ನೆರವು ನೀಡಿದಾಗ ಅವರು ಅದನ್ನು ಜೀವನ ಪೂರ್ತಿ ಸ್ಮರಿಸುತ್ತಾರೆಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮುಖ್ಯ ಕಾರ್ಯನಿರ್ವಾಹಕ ನಿರ್ದೇಶಕ ಡಾ. ಎಲ್.ಎಚ್ ಮಂಜುನಾಥ್ ಹೇಳಿದರು.  
    ಅವರು ಶುಕ್ರವಾರ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮಹಿಳಾ ಜ್ಞಾನವಿಕಾಸ ಕಾರ್ಯಕ್ರಮದಡಿ ತಾಲೂಕಿನ ಗ್ರಾಮಾಭಿವೃದ್ಧಿ ಯೋಜನೆ-೨ರ ವ್ಯಾಪ್ತಿಯ ತಾಲೂಕಿನ ನಾಗತಿಬೆಳಗಲು ವಲಯದ  ಕಾಗೆಕೊಡಮಗ್ಗಿ (ಕೆ.ಕೆ ಮಗ್ಗಿ) ಕೆ.ಕೆ ಹೊಸೂರು ಕಾರ್ಯಕ್ಷೇತ್ರದ ವಾತ್ಸಲ್ಯ ಸದಸ್ಯೆ ಕುಪ್ಪಮ್ಮರವರಿಗೆ ವಾತ್ಸಲ್ಯ ಮನೆ ಹಸ್ತಾಂತರಿಸಿ ಮಾತನಾಡಿರು.  
    ಆಧುನಿಕ ಯುಗದಲ್ಲಿ ತಂದೆ, ತಾಯಿ-ಮಕ್ಕಳ ಸಂಬಂಧ ಯಾವ ರೀತಿಯಲ್ಲಿ ಇದ್ದರೆ ಕೌಟುಂಬಿಕ ಸಾಮರಸ್ಯ ಸಾಧ್ಯ, ನಾವು ನಮ್ಮ ಜೀವನದಲ್ಲಿ ಯಾವುದೇ ಸಣ್ಣ ಸಹಾಯವನ್ನು ಅವಶ್ಯಕತೆ ಇರುವವರ ಜೀವನಕ್ಕೆ ಮುಡಿಪಾಗಿಟ್ಟರೆ ಅವರ ಜೀವನದ ಕೊನೆಯುಸಿರು ಇರುವವರೆಗೂ ನೆನಪಲ್ಲಿಡುತ್ತಾರೆ. ಗುರು ಹಿರಿಯರಿಗೆ ಕೊಡುವ ಗೌರವದ ಪಾಠವು ನಮ್ಮ ಮನೆಯಿಂದಲೇ ಆರಂಭವಾಗಬೇಕೆಂದರು.
    ಕೆ.ಕೆ ಹೊಸೂರು ಗ್ರಾಮ ಪಂಚಾಯತ್ ಅಧ್ಯಕ್ಷ ಬಿ.ಶಿವಲಿಂಗಯ್ಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಯೋಜನೆಯ ಜಿಲ್ಲಾ ನಿರ್ದೇಶಕ ಜೆ. ಚಂದ್ರಶೇಖರ್, ಜ್ಞಾನ ವಿಕಾಸ ವಿಭಾಗದ ಯೋಜನಾಧಿಕಾರಿ ರತ್ನ ಮೈಪಾಲ್, ತಾಲೂಕಿನ ಗ್ರಾಮಾಭಿವೃದ್ಧಿ ಯೋಜನೆ-೧ ಮತ್ತು ೨ರ ಯೋಜನಾಧಿಕಾರಿಗಳಾದ ಮಾಧವ ಮತ್ತು  ಪ್ರಕಾಶ್, ಮುಖಂಡರಾದ ಎಂ.ಎಲ್  ಯಶೋದರಯ್ಯ, ಜಿಲ್ಲಾ ಜನಜಾಗೃತಿ ವೇದಿಕೆ ಮಾಜಿ ಅಧ್ಯಕ್ಷ ಜಿ. ಆನಂದ ಕುಮಾರ್, ಉಪಾಧ್ಯಕ್ಷ ಎಂ. ಪಾಲಕ್ಷಪ್ಪ, ಸದಸ್ಯ ಆರ್. ಕರುಣಾಮೂರ್ತಿ, ಪಾರ್ವತಮ್ಮ, ಹೊನ್ನಪ್ಪ, ರಾಜು ರೇವಣಕರ್, ಮನೆ ಕಟ್ಟಲು ಜಾಗ ನೀಡಿದ ಜಾಗದ ದಾನಿಗಳಾದ ವಸಂತಲಕ್ಷ್ಮಿ ಮತ್ತು ವೆಂಕಟೇಶ್ ಹಾಗು ಕುಟುಂಬದ ವರ್ಗದವರು, ಯೋಜನೆಯ ಕಾರ್ಯಕರ್ತರು ಸೇರಿದಂತೆಉಪಸ್ಥಿತರಿದ್ದರು.

Friday, January 12, 2024

ಎಲ್. ದೇವರಾಜ್ ೫೦ನೇ ಬಾರಿಗೆ ರಕ್ತದಾನ

ಭದ್ರಾವತಿಯಲ್ಲಿ ಲಯನ್ಸ್ ಇಂಟರ್ ನ್ಯಾಷನಲ್, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ತಾಲೂಕು ಶಾಖೆ ಹಾಗು ವಿಶ್ವೇಶ್ವರಾಯ ವಿದ್ಯಾಸಂಸ್ಥೆ ವತಿಯಿಂದ ಸ್ವಾಮಿ ವಿವೇಕಾನಂದ ಜಯಂತಿ ಅಂಗವಾಗಿ ಶುಕ್ರವಾರ ಹಮ್ಮಿಕೊಳ್ಳಲಾಗಿದ್ದ ಸ್ವಯಂ ಪ್ರೇರಿತ ರಕ್ತದಾನ ಶಿಬಿರದಲ್ಲಿ ಲಯನ್ಸ್ ಕ್ಲಬ್ ಪ್ರಾಂತೀಯ ಅಧ್ಯಕ್ಷ ಎಲ್. ದೇವರಾಜ್ ಅವರು ೫೦ನೇ ಬಾರಿಗೆ ರಕ್ತದಾನ ಮಾಡುವ ಮೂಲಕ ಗಮನ ಸೆಳೆದರು.
    ಭದ್ರಾವತಿ : ಲಯನ್ಸ್ ಇಂಟರ್ ನ್ಯಾಷನಲ್, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ತಾಲೂಕು ಶಾಖೆ ಹಾಗು ವಿಶ್ವೇಶ್ವರಾಯ ವಿದ್ಯಾಸಂಸ್ಥೆ ವತಿಯಿಂದ ಸ್ವಾಮಿ ವಿವೇಕಾನಂದ ಜಯಂತಿ ಅಂಗವಾಗಿ ಶುಕ್ರವಾರ ಹಮ್ಮಿಕೊಳ್ಳಲಾಗಿದ್ದ ಸ್ವಯಂ ಪ್ರೇರಿತ ರಕ್ತದಾನ ಶಿಬಿರದಲ್ಲಿ ಲಯನ್ಸ್ ಕ್ಲಬ್ ಪ್ರಾಂತೀಯ ಅಧ್ಯಕ್ಷ ಎಲ್. ದೇವರಾಜ್ ಅವರು ೫೦ನೇ ಬಾರಿಗೆ ರಕ್ತದಾನ ಮಾಡುವ ಮೂಲಕ ಗಮನ ಸೆಳೆದರು.
    ಹಲವಾರು ವರ್ಷಗಳಿಂದ ಲಯನ್ಸ್ ಕ್ಲಬ್ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳ ಸೇವಾ ಕಾರ್ಯಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ದೇವರಾಜ್ ಅವರು ರಕ್ತದಾನದ ಮಹತ್ವ ಅರಿತುಕೊಳ್ಳುವ ಜೊತೆಗೆ ಸ್ವಯಂ ಪ್ರೇರಣೆಯಿಂದ ರಕ್ತದಾನ ಮಾಡುತ್ತಿದ್ದು, ವಿಶೇಷವಾಗಿ ೫೦ನೇ ಬಾರಿಗೆ ರಕ್ತದಾನ ಮಾಡಿರುವುದು ಶ್ಲಾಘನೀಯ ಕಾರ್ಯವಾಗಿದೆ. ಇವರ ಕಾರ್ಯ ಯುವ ಸಮುದಾಯಕ್ಕೆ ಮಾದರಿಯಾಗಿದ್ದು, ನಗರದ ವಿವಿಧ ಸಂಘ-ಸಂಸ್ಥೆಗಳು, ಗಣ್ಯರು ಅಭಿನಂದಿಸಿದ್ದಾರೆ.

Thursday, January 11, 2024

ಕಾಂಗ್ರೆಸ್ ಪಕ್ಷದಿಂದ ಚಂದ್ರೇಗೌಡ, ಬಾಲಕೃಷ್ಣ ಉಚ್ಛಾಟನೆ : ಎಸ್. ಕುಮಾರ್

ಟಿ. ಚಂದ್ರೇಗೌಡ
ಭದ್ರಾವತಿ: ಬ್ಲಾಕ್ ಕಾಂಗ್ರೆಸ್ ನಗರ ಘಟಕದ ಮಾಜಿ ಅಧ್ಯಕ್ಷ ಟಿ. ಚಂದ್ರೇಗೌಡ ಹಾಗೂ ನಗರಸಭೆ ಮಾಜಿ ಸದಸ್ಯ ಬಾಲಕೃಷ್ಣ ಅವರನ್ನು ಜಿಲ್ಲಾಧ್ಯಕ್ಷರ ಆದೇಶದ ಮೇರೆಗೆ ಪಕ್ಷದಿಂದ ೬ ವರ್ಷಗಳ ಕಾಲ ಉಚ್ಚಾಟನೆ ಮಾಡಿ ಆದೇಶ ಹೊರಡಿಸಲಾಗಿದೆ.


ಬಾಲಕೃಷ್ಣ
    ಹಲವಾರು ವರ್ಷಗಳಿಂದ ಕಾಂಗ್ರೆಸ್ ಪಕ್ಷದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು, ನಗರ ಘಟಕದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿರುವ ಟಿ. ಚಂದ್ರೇಗೌಡ ಮತ್ತು ಬಾಲಕೃಷ್ಣ ಅವರು ಜೆಡಿಎಸ್ ಮತ್ತು ಬಿಜೆಪಿ ಪಕ್ಷದವರ ಜೊತೆ ಸೇರಿ ಕಾಂಗ್ರೆಸ್ ಪಕ್ಷದ ವಿರುದ್ಧ, ಪಕ್ಷದ ನಾಯಕರ ವಿರುದ್ಧ, ಶಾಸಕರ ಮಕ್ಕಳ ಹಾಗೂ ಪಕ್ಷದ ಅಧ್ಯಕ್ಷರ ವಿರುದ್ಧ ಸಾರ್ವಜನಿಕ ಸಭೆಗಳಲ್ಲಿ ಮತ್ತು ಸ್ಥಳಗಳಲ್ಲಿ ಇಲ್ಲ ಸಲ್ಲದ ರೀತಿಯಲ್ಲಿ ಅವಹೇಳನಕಾರಿ ಹೇಳಿಕೆಗಳನ್ನು ನೀಡಿ ಪಕ್ಷಕ್ಕೆ ತೀವ್ರ ಮುಜುಗರ ಉಂಟುಮಾಡಿರುವ ಹಿನ್ನಲೆಯಲ್ಲಿ ಪಕ್ಷದಿಂದ ಉಚ್ಛಾಟನೆ ಮಾಡಿರುವುದಾಗಿ ಬ್ಲಾಕ್ ಕಾಂಗ್ರೆಸ್ ನಗರ ಘಟಕದ ಅಧ್ಯಕ್ಷ ಎಸ್. ಕುಮಾರ್ ಬುಧವಾರ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ. 

ಡಾ.ಎನ್.ಕೆ ಹೇಮಕೇಶವರವರಿಗೆ ಡಾಕ್ಟರೇಟ್ ಪದವಿ

ಡಾ. ಎನ್.ಕೆ ಹೇಮಕೇಶವ
    ಭದ್ರಾವತಿ: ಶಿವಮೊಗ್ಗ ಶೆಟ್ಟಿಹಳ್ಳಿ ಸರ್ಕಾರಿ ಪದವಿಪೂರ್ವ ಕಾಲೇಜಿನ ಅರ್ಥಶಾಸ್ತ್ರ ಉಪನ್ಯಾಸಕ ಡಾ. ಎನ್.ಕೆ ಹೇಮಕೇಶವ ಅವರು ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯದ ಡಾಕ್ಟರೇಟ್ ಪದವಿ ಪಡೆದುಕೊಂಡಿದ್ದಾರೆ.
    ಹೇಮಕೇಶವರವರು ವಿಶ್ವವಿದ್ಯಾಲಯದ ಅರ್ಥಶಾಸ್ತ್ರ ಅಧ್ಯಯನ ವಿಭಾಗದ ಪ್ರೊ. ಡಾ. ಆರ್.ಆರ್ ಬಿರಾದಾರ ಅವರ ಮಾರ್ಗದರ್ಶನದಲ್ಲಿ `ಪಬ್ಲಿಕ್ ಎಕ್ಸ್‌ಪೆಂಡಿಚರ್ ಆನ್ ಹೆಲ್ತ್‌ಕೇರ್ ಸರ್ವಿಸಸ್ ಇನ್ ಕರ್ನಾಟಕ ಎ ಸ್ಟಡಿ ಆಫ್ ಎನ್‌ಆರ್‌ಎಚ್‌ಎಂ' ವಿಷಯ ಕುರಿತು ಮಹಾಪ್ರಬಂಧ ಮಂಡಿಸಿದ್ದರು.
    ಹೇಮಕೇಶವರವರು ನಗರಸಭೆ ವಾರ್ಡ್ ನಂ.೯ರ ಭದ್ರಾಕಾಲೋನಿ ನಿವಾಸಿಗಳಾದ ದಿವಂಗತ ಕರಿಯಪ್ಪ ಮತ್ತು ಕಮಲಮ್ಮ ದಂಪತಿ ಸುಪುತ್ರರಾಗಿದ್ದಾರೆ.

ಅರಣ್ಯ ಇಲಾಖೆ ರಾಜ್ಯಮಟ್ಟದ ಕ್ರೀಡಾಕೂಟ : ಭದ್ರಾವತಿ ವಿಭಾಗದ ಕ್ರೀಡಾಪಟುಗಳಿಗೆ ಪದಕ

ಗುಲ್ಬರ್ಗದಲ್ಲಿ ನಡೆದ ಅರಣ್ಯ ಇಲಾಖೆಯ ೨೬ನೇ ರಾಜ್ಯಮಟ್ಟದ ಕ್ರೀಡಾಕೂಟದಲ್ಲಿ ಭದ್ರಾವತಿ ಅರಣ್ಯ ವಿಭಾಗದ ಕ್ರೀಡಾಪಟುಗಳು ಭಾಗವಹಿಸಿ ವಿವಿಧ ಸ್ಪರ್ಧೆಗಳಲ್ಲಿ ಪದಕಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.
    ಭದ್ರಾವತಿ: ಗುಲ್ಬರ್ಗದಲ್ಲಿ ನಡೆದ ಅರಣ್ಯ ಇಲಾಖೆಯ ೨೬ನೇ ರಾಜ್ಯಮಟ್ಟದ ಕ್ರೀಡಾಕೂಟದಲ್ಲಿ ಭದ್ರಾವತಿ ಅರಣ್ಯ ವಿಭಾಗದ ಕ್ರೀಡಾಪಟುಗಳು ಭಾಗವಹಿಸಿ ವಿವಿಧ ಸ್ಪರ್ಧೆಗಳಲ್ಲಿ ಪದಕಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.
    ಪವರ್ ಲಿಪ್ಟಿಂಗ್ ಸ್ಪರ್ಧೆಯಲ್ಲಿ ಎಸ್. ಭಾಸ್ಕರ್,  ಮಾಲತೇಶ್ ಸೂರ್ಯವಂಶಿ, ಕೆ.ವಿ ಪ್ರತಾಪ್ ಮತ್ತು ಆರ್. ರಂಗಸ್ವಾಮಿ ಪ್ರಥಮ ಸ್ಥಾನ ಗಳಿಸಿದ್ದಾರೆ. ಈಜು ಸ್ಪರ್ಧೆಯಲ್ಲಿ ಮಡಿವಾಳಪ್ಪ ಪ್ರಥಮ, ಜಗದೀಶ್ ದ್ವಿತೀಯ ಮತ್ತು ಸಿ. ನಾಗೇಂದ್ರ ತೃತೀಯ ಸ್ಥಾನ ಹಾಗು ಓಟದ ಸ್ಪರ್ಧೆಯಲ್ಲಿ ಸರೋಜಮ್ಮ ಪ್ರಥಮ ಸ್ಥಾನ ಹಾಗು ಟೇಬಲ್ ಟೆನಿಸ್ ಸ್ಪರ್ಧೆಯಲ್ಲಿ ಸದಾಶಿವ ದ್ವಿತೀಯ ಸ್ಥಾನದೊಂದಿಗೆ ಒಟ್ಟು ೬ ಚಿನ್ನ, ೨ ಬೆಳ್ಳಿ ಹಾಗು ೧ ಕಂಚಿನ ಪದಕ ಪಡೆದುಕೊಂಡಿದ್ದಾರೆ.  
    ಈ ಕ್ರೀಡಾಪಟುಗಳನ್ನು ಉಪ ಅರಣ್ಯ ಸಂರಕ್ಷಣಾಧಿಕಾರಿ ಆಶೀಶ್ ರೆಡ್ಡಿ ಹಾಗು ವಲಯ ಅರಣ್ಯಾಧಿಕಾರಿ ದಿನೇಶ್ ಕುಮಾರ್ ಅಭಿನಂದಿಸಿ ಪ್ರಶಂಸಿಸಿದ್ದಾರೆ.