Thursday, December 5, 2024

ಕಾಳೇಗೌಡರು ನಿಧನ

ಕಾಳೇಗೌಡರು 
    ಭದ್ರಾವತಿ : ನಗರದ ಅಪ್ಪರ್ ಹುತ್ತಾ ನಿವಾಸಿ, ತಾಲೂಕು ಒಕ್ಕಲಿಗರ ಸಂಘದ ಮಹಾಪೋಷಕರಾದ ಕಾಳೇಗೌಡರು(೯೪) ವಯೋಸಹಜವಾಗಿ ಗುರುವಾರ ನಿಧನ ಹೊಂದಿದರು. 
    ಇವರಿಗೆ ಪುತ್ರ ಹಾಗು ೮ ಜನ ಪುತ್ರಿಯರು ಇದ್ದಾರೆ. ಇವರ ಅಂತ್ಯಕ್ರಿಯೆ ಶುಕ್ರವಾರ ಲೋಯರ್ ಹುತ್ತಾ ಹಿಂದೂ ರುದ್ರಭೂಮಿಯಲ್ಲಿ ನೆರವೇರಲಿದ್ದು, ಕಾಳೇಗೌಡರು ಬೊಂಬು ಗುತ್ತಿಗೆದಾರರಾಗಿ ಜನಪ್ರಿಯರಾಗಿದ್ದರು. ತಾಲೂಕು ಒಕ್ಕಲಿಗರ ಸಂಘವನ್ನು ಮುಂಚೂಣಿಗೆ ತರುವಲ್ಲಿ ಸಾಕಷ್ಟು ಶ್ರಮಿಸಿದ್ದರು. ಇವರು ಮಾಜಿ ಶಾಸಕ ದಿವಂಗತ ಎಂ.ಜೆ ಅಪ್ಪಾಜಿಯವರ ಕುಟುಂಬ ಸಂಬಂಧಿಯಾಗಿದ್ದಾರೆ. 
    ಇವರ ನಿಧನಕ್ಕೆ ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಶಾರದ ಅಪ್ಪಾಜಿ, ಮುಖಂಡರಾದ ಆರ್. ಕರುಣಾಮೂರ್ತಿ, ಟಿ. ಚಂದ್ರೇಗೌಡ, ಕರಿಯಪ್ಪ, ಸಿ. ರಾಮಕೃಷ್ಣ, ಮಧುಸೂಧನ್ ಹಾಗು ತಾಲೂಕು ಒಕ್ಕಲಿಗರ ಸಂಘ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳು, ಗಣ್ಯರು ಸಂತಾಪ ಸೂಚಿಸಿದ್ದಾರೆ. 

ಕೋಮಾರನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕೆರೆ ಒತ್ತುವರಿ ಕಾರ್ಯಾಚರಣೆ

ಭದ್ರಾವತಿ ತಾಲೂಕಿನ ಕೂಡ್ಲಿಗೆರೆ ಹೋಬಳಿ ಕೋಮಾರನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಸರ್ವೆ ನಂಬರ್ ೮೨ರಲ್ಲಿರುವ ಸುಮಾರು ೨೬ ಗುಂಟೆ ವಿಸ್ತೀರ್ಣ ಹೊಂದಿರುವ ಕೆರೆ ಒತ್ತುವರಿ ಕಾರ್ಯಾಚರಣೆ ಗುರುವಾರ ಕಂದಾಯ ಇಲಾಖೆ ಅಧಿಕಾರಿಗಳು ಗ್ರಾಮಸ್ಥರ ನೆರವಿನೊಂದಿಗೆ ಕೈಗೊಂಡರು. 
    ಭದ್ರಾವತಿ: ತಾಲೂಕಿನ ಕೂಡ್ಲಿಗೆರೆ ಹೋಬಳಿ ಕೋಮಾರನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಸರ್ವೆ ನಂಬರ್ ೮೨ರಲ್ಲಿರುವ ಸುಮಾರು ೨೬ ಗುಂಟೆ ವಿಸ್ತೀರ್ಣ ಹೊಂದಿರುವ ಕೆರೆ ಒತ್ತುವರಿ ಕಾರ್ಯಾಚರಣೆ ಗುರುವಾರ ಕಂದಾಯ ಇಲಾಖೆ ಅಧಿಕಾರಿಗಳು ಗ್ರಾಮಸ್ಥರ ನೆರವಿನೊಂದಿಗೆ ಕೈಗೊಂಡರು. 
    ಕಂದಾಯ ಇಲಾಖೆ ರಾಜಸ್ವ ನಿರೀಕ್ಷಕ ಜಗನ್ನಾಥ್, ಗ್ರಾಮ ಲೆಕ್ಕಾಧಿಕಾರಿ ಜ್ಞಾನೇಶ್ ಸಹಾಯಕ ರಂಗನಾಥ್, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಕೇಶವಮೂರ್ತಿ ಹಾಗೂ ಸಿಬ್ಬಂದಿ ವರ್ಗ, ಸರ್ವೆ ಇಲಾಖೆಯ ರಾಜಶೇಖರಯ್ಯ ಮತ್ತು ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಪ್ರಧಾನ ಕಾರ್ಯದರ್ಶಿ ತೀರ್ಥೇಶ್, ಕಾರ್ತಿಕ್, ಡಿಎಸ್‌ಎಸ್ ಮುಖಂಡ ನಾಗರಾಜ್ ಹಾಗೂ ಕಬಳಿಕಟ್ಟೆ ಮಂಜುನಾಥ್, ಭಂಡಾರಹಳ್ಳಿ ಕಿರಣ್, ಜೈ ಕರ್ನಾಟಕ ಸಂಘದ ಮುಕುಂದ, ಸಾಮಾಜಿಕ ಹೋರಾಟಗಾರ ಕೆಂಚೇನಹಳ್ಳಿ ಶ್ರೀನಿವಾಸ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ನೂತನ ವರ್ಷಕ್ಕೆ ರೈಲ್ವೆ ಮೇಲ್ಸೇತುವೆ ಲೋಕಾರ್ಪಣೆ

ಭದ್ರಾವತಿ ಕಡದಕಟ್ಟೆ ರೈಲ್ವೆ ಮೇಲ್ಸೇತುವೆ ಕಾಮಗಾರಿ ಗುರುವಾರ ಸಂಸದ ಬಿ.ವೈ ರಾಘವೇಂದ್ರ ಪರಿಶೀಲನೆ ನಡೆಸಿದರು. 
    ಭದ್ರಾವತಿ: ನಗರದ ಕಡದಕಟ್ಟೆ ರೈಲ್ವೆ ಮೇಲ್ಸೇತುವೆ ಕಾಮಗಾರಿ ಮುಕ್ತಾಯ ಹಂತಕ್ಕೆ ತಲುಪಿದ್ದು, ಜನವರಿ ೨೦೨೫ ನೂತನ ವರ್ಷಕ್ಕೆ ಲೋಕಾರ್ಪಣೆ ಗೊಳಿಸಲಾಗುವುದು ಎಂದು ಸಂಸದ ಬಿ .ವೈ ರಾಘವೇಂದ್ರ ಹೇಳಿದರು. 
    ಅವರು ಗುರುವಾರ ರೈಲ್ವೆ ಮೇಲ್ಸೇತುವೆ ಕಾಮಗಾರಿ ಪರಿಶೀಲನೆ ನಡೆಸಿ ಮಾತನಾಡಿದರು. ೨೦೨೨ ಜನವರಿಯಲ್ಲಿ ಸುಮಾರು ೨೩ಕೋ.ರು. ವೆಚ್ಚದಲ್ಲಿ ಆರಂಭಗೊಂಡ ಎಲ್.ಸಿ-೩೪ ರೈಲ್ವೆ ಮೇಲ್ಸೇತುವೆ ಸೇತುವೆ ಕಾಮಗಾರಿ ಇದೀಗ ಸುಮಾರು ಎರಡು ವರ್ಷಗಳ ಅವಧಿಯಲ್ಲಿ ಮುಕ್ತಾಯಗೊಳ್ಳುತ್ತಿದೆ. ಈ  ಹಿನ್ನೆಲೆಯಲ್ಲಿ  ಅಧಿಕಾರಿಗಳ ವರ್ಗಕ್ಕೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು. 
    ಸುಮಾರು ಎರಡು ವರ್ಷಗಳವರೆಗೆ ಶಿವಮೊಗ್ಗ ಜಿಲ್ಲಾ ಕೇಂದ್ರಕ್ಕೆ ಸಂಪರ್ಕ ಹೊಂದಿರುವ ಪ್ರಮುಖ ರಸ್ತೆಯಲ್ಲಿ ವಾಹನಗಳ ಸಂಚಾರ ಸ್ಥಗಿತಗೊಂಡು ವಾಹನ ಸವಾರರು, ಪಾದಚಾರಿಗಳು ಹಾಗೂ ಸ್ಥಳೀಯರು  ಸಾಕಷ್ಟು ಸಮಸ್ಯೆ ಎದುರಿಸುವಂತಾಗಿದೆ. ಸುಮಾರು ೧೫ ಕಿ.ಮೀ ಬಳಸಿಕೊಂಡು ನಗರ ಪ್ರವೇಶಿಸಬೇಕಾಗಿದೆ. ಒಟ್ಟಾರೆ ಕಾಮಗಾರಿಗೆ ಸಹಕರಿಸಿರುವ ಎಲ್ಲರಿಗೂ ಹಾಗೂ ಕ್ಷೇತ್ರದ ಜನತೆಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.


    ಅಧಿಕಾರಿಗಳು ಈಗಾಗಲೇ ಜನವರಿಯಲ್ಲಿ ಮೇಲ್ಸೇತುವೆ ಲೋಕಾರ್ಪಣೆಗೊಳಿಸುವ ಸಂಬಂಧ ರೂಪುರೇಷೆಗಳನ್ನು ಸಿದ್ಧಪಡಿಸಿಕೊಂಡಿದ್ದು, ಸಾರ್ವಜನಿಕರು ಸೇತುವೆ ಉಪಯೋಗಿಸಿಕೊಳ್ಳಬಹುದಾಗಿದೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುವುದಾಗಿ ಭರವಸೆ ನೀಡಿದರು.
   ರೈಲ್ವೆ ಇಲಾಖೆ ಎಂಜಿನಿಯರ್ ರಾಜ್‌ಕುಮಾರ್(ಎಇಇ), ನಗರಸಭೆ ಪೌರಾಯುಕ್ತ ಪ್ರಕಾಶ್ ಎಂ. ಚನ್ನಪ್ಪನವರ್, ಎಂಜಿನಿಯರ್‌ಗಳಾದ ಬಿ.ಬಿ ಶಿವಪ್ರಸಾದ್, ಕೆ. ಪ್ರಸಾದ್ ಸೇರಿದಂತೆ ಇನ್ನಿತರ ಅಧಿಕಾರಿಗಳು,  ಬಿಜೆಪಿ ಮಂಡಲ ಅಧ್ಯಕ್ಷ ಜಿ. ಧರ್ಮಪ್ರಸಾದ್, ಮುಖಂಡರಾದ ಮಂಗೋಟೆ ರುದ್ರೇಶ್, ರಾಜು ತಲ್ಲೂರು, ಪ್ರಕಾಶ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Wednesday, December 4, 2024

ಡಿ.5ರಂದು ವಿದ್ಯುತ್ ವ್ಯತ್ಯಯ

ಭದ್ರಾವತಿ: ನಗರದ ಜೆ.ಪಿ.ಎಸ್ ಕಾಲೋನಿ ಮೆಸ್ಕಾಂ110/33/11 ಕೆವಿ ಹಾಗೂ ಮಾಚೇನಹಳ್ಳಿ 110/11 ಕೆವಿ ವಿದ್ಯುತ್ ವಿತರಣಾ ಕೇಂದ್ರಗಳಲ್ಲಿ ತ್ರೈಮಾಸಿಕ ನಿರ್ವಹಣಾ ಕಾರ್ಯ ಹಮ್ಮಿಕೊಂಡಿರುವ ಹಿನ್ನಲೆಯಲ್ಲಿ ಡಿ.5 ರ ಬೆಳಗ್ಗೆ 9 ಘಂಟೆಯಿಂದ ಸಂಜೆ 6 ಘಂಟೆಯವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.
    ನ್ಯೂಟೌನ್, ನ್ಯೂಕಾಲೋನಿ, ಐ.ಟಿ.ಐ, ಆಕಾಶವಾಣಿ, ಕಾಗದನಗರ, ಸುರಗಿತೋಪು, ಅನೆಕೊಪ್ಪ, ಉಜ್ಜನೀಪುರ, ಬುಳ್ಳಾಪುರ, ಹುಡ್ಕೋ ಕಾಲೋನಿ, ಬೊಮ್ಮನಕಟ್ಟೆ, ಹೊಸ ಸಿದ್ದಾಪುರ, ಎನ್.ಟಿ.ಬಿ ಬಡಾವಣೆ, ಹಳೇಸಿದ್ದಾಪುರ, ಹೊಸೂರು, ಹೊಸೂರು ತಾಂಡ, ಸಂಕ್ಲಿಪುರ, ಹುತ್ತಾ ಕಾಲೋನಿ, ಜನ್ನಾಪುರ, ಬಿ.ಹೆಚ್.ರಸ್ತೆ, ಅಪ್ಪರ್ ಹುತ್ತಾ, ಲೋಯರ್ ಹುತ್ತಾ, ಜಿಂಕ್‌ ಲೈನ್, ಸಿರಿಯೂರು, ತರೀಕೆರೆ ರಸ್ತೆ, ಸಾದತ್ ಕಾಲೋನಿ, ನೆಹರು ನಗರ, ಸುಣ್ಣದಹಳ್ಳಿ, ಬಸವನಗುಡಿ, ಶಿವನಿ ವೃತ್ತ, ಹಿರಿಯೂರು, ಹೊಸ ನಂಜಾಪುರ, ಸಿದ್ದರಹಳ್ಳಿ, ಗೊಂದಿ, ತಾರೀಕಟ್ಟೆ, ಬಿಳಕಿ, ಬಿಳಕಿ ತಾಂಡ, ಹೊಳೆ ಗಂಗೂರು, ರಬ್ಬರ್ ಕಾಡು, ಸುಲ್ತಾನ ಮಟ್ಟಿ, ಕಾರೇಹಳ್ಳಿ, ಬಾಳೆಮಾರನಹಳ್ಳಿ, ಕಂಬದಾಳ್ ಹೊಸೂರು, ಹೊನ್ನಹಟ್ಟಿ ಹೊಸೂರು, ಹುಣಸೇಕಟ್ಟೆ ಕಾಳನಕಟ್ಟೆ, ಹೊಳೆ ನೇರಳೇಕೆರೆ, ಅಂತರಗಂಗೆ, ದೊಣಬಘಟ್ಟ, ತಡಸ, ಚಿಕ್ಕಗೊಪ್ಪೇನ ಹಳ್ಳಿ, ಬಾರಂದೂರು, ಕಲ್ಲಹಳ್ಳಿ, ಯರೇಹಳ್ಳಿ, ಮಾವಿನಕೆರೆ, ದೊಡ್ಡೆ ರಿ, ಮಜ್ಜಿಗೇನಹಳ್ಳಿ, ಪದ್ಮೇನ ಹಳ್ಳಿ, ಲಕ್ಷ್ಮಿಪುರ, ಕೆಂಪೇಗೌಡನಗರ, ಬೊಮ್ಮನಹಳ್ಳಿ, ದೇವನರಸೀಪುರ, ಶಿವಪುರ, ಅಡ್ಲಘಟ್ಟ, ಅಂಬುದಹಳ್ಳಿ, ಅರಳಿಕೊಪ್ಪ, ಮಾಚೇನಹಳ್ಳಿ ಕೈಗಾರಿಕಾ ಪ್ರದೇಶ, ಜೇಡಿಕಟ್ಟೆ, ಹಳೆಜೇಡಿ ಕಟ್ಟೆ, ಡೈರಿ ವೃತ್ತ, ಮಲವಗೊಪ್ಪ, ನಿದಿಗೆ ಕೈಗಾರಿಕಾ ಪ್ರದೇಶ, ಹೊನ್ನವಿಲೆ, ಮಜ್ಜಿಗೇನಹಳ್ಳಿ, ಕಲ್ಲಹಳ್ಳಿ ಗ್ರಾ.ಪಂ. ವ್ಯಾಪ್ತಿ, ಶಿವರಾಂನಗರ, ವಿಶ್ವೇಶ್ವರಾಯ ನಗರ, ಜೇಡಿಕಟ್ಟೆ ಹೊಸೂರು, ಜಯಂತಿ ಗ್ರಾಮ, ವೀರಾಪುರ, ಹುಲಿ ರಾಮನಕೊಪ್ಪ, ಹಾಗಲಮನೆ, ಸಂಕ್ಷಿಪುರ, ಸಿರಿಯೂರು, ಸಿರಿಯೂರು ತಾಂಡ, ಸಿರಿಯೂರು ಕ್ಯಾಂಪ್, ವೀರಾಪುರ, ಮತ್ತಿಘಟ್ಟ, ಹಾತಿಕಟ್ಟೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ವಾಗಲಿದ್ದು ಗ್ರಾಹಕರು ಸಹಕರಿಸುವಂತೆ ಕೋರಲಾಗಿದೆ.

ಕಾನೂನು ಬಾಹಿರವಾಗಿ ಮದ್ಯ ಸೇವನೆಗೆ ಅವಕಾಶ : ೨ ಪ್ರಕರಣ ದಾಖಲು


    ಭದ್ರಾವತಿ:  ಸಾರ್ವಜನಿಕ ಸ್ಥಳದಲ್ಲಿ ಕಾನೂನು ಬಾಹಿರವಾಗಿ ಮದ್ಯ ಸೇವನೆಗೆ ಅವಕಾಶ ನೀಡಿರುವ ಸಂಬಂಧ ಒಂದೇ ದಿನ ೨ ಪ್ರತ್ಯೇಕ ಪ್ರಕರಣಗಳು ಮಹಿಳೆ ಮತ್ತು ವ್ಯಕ್ತಿಯೊಬ್ಬರ ವಿರುದ್ಧ ನ್ಯೂಟೌನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದಾಖಲಾಗಿವೆ. 
    ನ್ಯೂಟೌನ್ ಪೊಲೀಸ್ ಠಾಣೆ ಸಿಬ್ಬಂದಿ ಮಾರುತಿ ಆರ್ ಪಾಟೀಲ್ ಡಿ.೧ರಂದು ಗಸ್ತಿನಲ್ಲಿದ್ದಾಗ ನಗರದ ಬಿ.ಎಚ್ ರಸ್ತೆ ಕೆಎಸ್‌ಆರ್‌ಟಿಸಿ ಮುಖ್ಯ ಬಸ್ ನಿಲ್ದಾಣದ ಬಳಿ ಅಂಗಡಿ ಮುಂಭಾಗ ಸಾರ್ವಜನಿಕ ಸ್ಥಳದಲ್ಲಿ ಬೆಳಿಗ್ಗೆ ೭.೧೫ರ ಸಮಯದಲ್ಲಿ ಕಾನೂನು ಬಾಹಿರವಾಗಿ ಮದ್ಯ ಸೇವನೆ ಮಾಡಲು ಅವಕಾಶ ನೀಡಿರುವುದು ಕಂಡು ಬಂದಿದೆ. ಈ ಸಂಬಂಧ ಮಹಿಳೆಯೊಬ್ಬರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. 
    ಪೊಲೀಸ್ ನಗರ ವೃತ್ತ ನಿರೀಕ್ಷಕ ಶ್ರೀಶೈಲ ಕುಮಾರ್‌ರವರು ಡಿ.೧ರಂದು ಗಸ್ತು ಕರ್ತವ್ಯದಲ್ಲಿದ್ದಾಗ  ಬಿ.ಎಚ್ ರಸ್ತೆ ಕೆಎಸ್‌ಆರ್‌ಟಿಸಿ ಮುಖ್ಯ ಬಸ್ ನಿಲ್ದಾಣದ ಬಳಿ ಅಂಗಡಿ ಮುಂಭಾಗ ಸಾರ್ವಜನಿಕ ಸ್ಥಳದಲ್ಲಿ ಬೆಳಿಗ್ಗೆ ೮.೧೫ರ ಸಮಯದಲ್ಲಿ ಕಾನೂನು ಬಾಹಿರವಾಗಿ ಮದ್ಯ ಸೇವನೆ ಮಾಡಲು ಅವಕಾಶ ನೀಡಿರುವುದು ಕಂಡು ಬಂದಿದೆ. ಈ ಸಂಬಂಧ ವ್ಯಕ್ತಿಯೊಬ್ಬರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. 

ಭಿನ್ನಾಭಿಪ್ರಾಯ ಶಮನಗೊಳಿಸಿ ಪಕ್ಷದ ವರ್ಚಸ್ಸು ಹೆಚ್ಚಿಸಿ : ಹಿರಿಯ ಕಾರ್ಯಕರ್ತರ ಆಗ್ರಹ

ಭದ್ರಾವತಿಯಲ್ಲಿ ಭಾರತೀಯ ಜನಸಂಘದ ಹಿರಿಯ ಕಾರ್ಯಕರ್ತರ ಸಭೆ ನಡೆಯಿತು. 
    ಭದ್ರಾವತಿ: ರಾಜ್ಯದಲ್ಲಿ ಭಾರತೀಯ ಜನತಾ ಪಕ್ಷದಲ್ಲಿನ ಇತ್ತೀಚಿನ ಬೆಳವಣಿಗೆಗಳು ಭಾರತೀಯ ಜನಸಂಘದಿಂದ ಇಲ್ಲಿಯವರೆಗೂ ಬಂದಿರುವ ಹಿರಿಯ ಕಾರ್ಯಕರ್ತರಿಗೆ ತುಂಬಾ ನೋವುಂಟು ಮಾಡಿದೆ ಎಂದು ಹಿರಿಯ ಕಾರ್ಯಕರ್ತ ಎಸ್.ಎನ್ ಬಾಲಕೃಷ್ಣ ವಿಷಾದ ವ್ಯಕ್ತಪಡಿಸಿದರು. 
    ನಗರದ ಹಿರಿಯ ಕಾರ್ಯಕತರ ಸಭೆಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಭಿನ್ನಾಭಿಪ್ರಾಯಗಳ ಮೂಲಕ ಒಬ್ಬರಿಗೊಬ್ಬರು ಕೆಸರು ಎರಚುವ ಕಾರ್ಯದಲ್ಲಿ ತೊಡಗಿರುವುದು ಭಾರತೀಯ ಜನಸಂಘದಿಂದ ಇಲ್ಲಿಯವರೆಗೂ ಬಂದಿರುವ ಹಿರಿಯ ಕಾರ್ಯಕರ್ತರಿಗೆ ಮಾತ್ರವಲ್ಲ ಹೊಸದಾಗಿ ಬಂದಿರುವ ಕಾರ್ಯಕರ್ತರ ಮೇಲೆ ಋಣಾತ್ಮಕ ಪರಿಣಾಮವನ್ನುಂಟು ಮಾಡುತ್ತಿದೆ.
    ಭಾರತೀಯ ಜನತಾ ಪಕ್ಷ ಶಿಸ್ತಿನ ಪಕ್ಷವಾಗಿದ್ದು, ಇತ್ತೀಚಿನ ಬೆಳವಣಿಗೆಗಳು ಹಿರಿಯರೆಲ್ಲರಿಗೂ ಭ್ರಮನಿರಸನವನ್ನುಂಟುಮಾಡಿದೆ. ಹಿರಿಯ ಕಾರ್ಯಕರ್ತರಾದ ನಾವುಗಳು ಯಾವುದೇ ಬಣಗಳಲ್ಲಿ ಗುರುತಿಸಿಕೊಳ್ಳದೇ ಕೇವಲ ಸಂಘಟನೆಯ ದೃಷ್ಟಿಯಿಂದ ತಕ್ಷಣವೇ ಭಿನ್ನ ಬಣದವರನ್ನು ಒಟ್ಟಿಗೆ ಸೇರಿಸಿ ಸಂಘಟನೆಗೆ ತೊಂದರೆಯಾಗದಂತೆ ಕ್ರಮ ಕೈಗೊಳ್ಳಬೇಕೆಂದು ಕೋರುತ್ತಿದ್ದೇವೆ. 
        ಅಲ್ಲದೆ ಪಕ್ಷದಿಂದ ಯಾರನ್ನೂ ಹೊರಗೆ ಹಾಕದೆ ಎಲ್ಲರನ್ನು ಒಟ್ಟಿಗೆ ಸೇರಿಸಿ, ಚರ್ಚಿಸಿ ಸಂಘಟನಾತ್ಮಕವಾಗಿ ಕ್ರಮ ಕೈಗೊಂಡು ಮುಂದೆ ರಾಜ್ಯಾದ್ಯಂತ ಇರುವ ಜ್ವಲಂತ ಸಮಸ್ಯೆಗಳ ಬಗ್ಗೆ ಹಾಗೂ ಜನವಿರೋಧಿ ಸರ್ಕಾರದ ವಿರುದ್ಧ ಸಂಘಟನಾತ್ಮಕ ಹೋರಾಟ ರೂಪಿಸಿ ಪಕ್ಷದ ವರ್ಚಸ್ಸು ಹೆಚ್ಚಿಸಬೇಕೆಂದು ಆಗ್ರಹಿಸುತ್ತೇವೆ ಎಂದರು. 
    ಹಿರಿಯ ಕಾರ್ಯಕರ್ತರಾದ ವಿಶ್ವನಾಥ ಕೋಠಿ, ಕೆ.ಎಸ್. ಚನ್ನಪ್ಪ, ತೋಪೇಗೌಡ, ಗಾಯಿತ್ರಿ, ರತ್ನಮ್ಮ, ಉಕ್ಕುಂದ ಶಾಂತಣ್ಣ, ತಳ್ಳಿಕಟ್ಟೆ ಗಂಗಪ್ಪ, ಸಿದ್ದರಾಮಣ್ಣ, ರಂಗೋಜಿರಾವ್, ಸುಬ್ರಹ್ಮಣ್ಯ, ಕುಮಾರಸ್ವಾಮಿ, ಜಯರಾಮ್‌ಸಿಂಗ್ ಸೇರಿದಂತೆ ಇನ್ನಿತರರು ಸಭೆಯಲ್ಲಿ ಪಾಲ್ಗೊಂಡಿದ್ದರು. ವೆಂಕಟೇಶ್ ಸ್ವಾಗತಿಸಿ, ನರಸಿಂಹಚಾರ್ ನಿರೂಪಿಸಿದರು. 

ನಗರಸಭೆ ಆಯವ್ಯಯ ಪೂರ್ವಭಾವಿ ಸಭೆ : ಆದಾಯ ಹೆಚ್ಚಿಸಿಕೊಂಡು ಮೂಲ ಸೌಕರ್ಯ ಕಲ್ಪಿಸಿ ಕೊಡಿ


ಭದ್ರಾವತಿ ನಗರಸಭೆ ೨೦೨೫-೨೬ನೇ ಸಾಲಿನ ಆಯವ್ಯಯ ಪೂರ್ವಭಾವಿ ಸಭೆ ಬುಧವಾರ ನಗರಸಭೆ ಅಧ್ಯಕ್ಷ ಎಂ. ಮಣಿ ಎಎನ್‌ಎಸ್ ಅಧ್ಯಕ್ಷತೆಯಲ್ಲಿ ನಡೆಯಿತು. 
    ಭದ್ರಾವತಿ: ನಗರಸಭೆ ೨೦೨೫-೨೬ನೇ ಸಾಲಿನ ಆಯವ್ಯಯ ಪೂರ್ವಭಾವಿ ಸಭೆ ಬುಧವಾರ ನಗರಸಭೆ ಅಧ್ಯಕ್ಷ ಎಂ. ಮಣಿ ಎಎನ್‌ಎಸ್ ಅಧ್ಯಕ್ಷತೆಯಲ್ಲಿ ನಡೆಯಿತು. 
   ಈ ಬಾರಿ ನಗರಸಭೆಯ ಸ್ವಂತ ಆದಾಯಗಳಾದ ಸ್ವಯಂ ಘೋಷಿತ ಆಸ್ತಿ ತೆರಿಗೆ, ನೀರಿನ ತೆರಿಗೆ ಮತ್ತು ಇತರೆ ಆದಾಯ ಹಾಗೂ ಸರ್ಕಾರದ ಅನುದಾನಗಳು ಸೇರಿ ಒಟ್ಟು ೭,೮೮೫.೧೦ ಲಕ್ಷ ರು. ಆದಾಯದ ನಿರೀಕ್ಷೆಯೊಂದಿಗೆ ಆಯವ್ಯಯ ಸಿದ್ಧಪಡಿಸಲಾಗುತ್ತಿದೆ ಎಂದು ಸಭೆಯಲ್ಲಿ ಪೌರಾಯುಕ್ತ ಪ್ರಕಾಶ್ ಎಂ. ಚನ್ನಪ್ಪನವರ್ ತಿಳಿಸಿದರು.
    ಗುಣಮಟ್ಟದ ರಸ್ತೆ ಅಭಿವೃದ್ದಿ ಕಾಮಗಾರಿ ಸೇರಿದಂತೆ ನಾಗರೀಕರಿಗೆ ಮೂಲ ಸೌಕರ್ಯಗಳನ್ನು ಓದಗಿಸುವ ನಿಟ್ಟಿನಲ್ಲಿ ಆಯವ್ಯಯ ಸಿದ್ದಪಡಿಸಲಾಗುತ್ತಿದೆ. ೨೦೨೪-೨೫ ನೇ ಸಾಲಿನಲ್ಲಿ ಆರಂಭವಾದ ಕಾಮಗಾರಿಗಳನ್ನು ಪೂರ್ಣಗೊಳಿಸುವ ಮೂಲಕ ಈ ಬಾರಿ ಹೆಚ್ಚುವರಿ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿದೆ. ನೀರಿನ ಶುಲ್ಕ ಹೆಚ್ಚಿಸುವ ಮೂಲಕ ಆದಾಯದ ಮೂಲ ಸಹ ಹೆಚ್ಚಿಸಿಕೊಳ್ಳುವ ಅನಿವಾರ್ಯತೆ ಇದ್ದು,  ಸಾರ್ವಜನಿಕರು ಸಹಕರಿಸಬೇಕೆಂದು ಮನವಿ ಮಾಡಿದರು.
    ನಗರದ ಬಿ.ಎಚ್ ರಸ್ತೆ ಹಾಗು ಬಸವೇಶ್ವರ ವೃತ್ತದಲ್ಲಿ ಫುಡ್ ಕೋರ್ಟ್ ನಿರ್ಮಾಣ, ಸೈಕಲ್ ಸ್ಟ್ಯಾಂಡ್ ನಿರ್ಮಾಣ, ನ್ಯೂಟೌನ್ ವ್ಯಾಪ್ತಿಯಲ್ಲಿ ಒಳಚರಂಡಿ ಕಾಮಗಾರಿ, ಹಾಳಾದ ರಸ್ತೆ ಸರಿಪಡಿಸುವುದು, ತೆರಿಗೆ ಪಾವತಿಸಲು ಕೌಂಟರ್ ತೆರೆಯುವುದು, ಬೀದಿ ದೀಪಗಳ ಅಳವಡಿಕೆ, ನೀರಿನ ಸಮರ್ಪಕ ಪೂರೈಕೆ ಸೇರಿದಂತೆ ಹಲವಾರು ಯೋಜನೆಗಳಿಗೆ ಕ್ರಮವಹಿಸಲಾಗಿದೆ ಎಂದರು.
    ದಲಿತ ಮುಖಂಡ ಸತ್ಯ ಭದ್ರಾವತಿ ಮಾತನಾಡಿ, ನೀರಿನ ತೆರಿಗೆ ಹೆಚ್ಚಳಕ್ಕೆ ವಿರೋಧವಿಲ್ಲ. ಆದರೆ ನಮಗೆ ಸಮರ್ಪಕವಾಗಿ ಗುಣಮಟ್ಟದ ನೀರು ಪೂರೈಕೆ ಮಾಡಬೇಕು.  ಬಿ.ಎಚ್ ರಸ್ತೆ ತಿಮ್ಮಯ್ಯ ಮಾರುಕಟ್ಟೆಯಲ್ಲಿ ನಿರ್ವಹಣೆ ಕೊರತೆಯಿಂದ ಮಳಿಗೆಗಳು ಪಾಳುಬಿದ್ದು ನಗರಸಭೆಗೆ ಸಾಕಷ್ಟು ನಷ್ಟವಾಗುತ್ತಿದೆ. ನಗರಸಭೆಯ ಆಸ್ತಿಗಳ ನಿರ್ವಹಣೆ ಸರಿಯಾದ ರೀತಿಯಲ್ಲಿ ಮಾಡಿದರೆ ಆದಾಯದ ಪ್ರಮಾಣ ಹೆಚ್ಚುತ್ತದೆ ಎಂದು ಸಲಹೆ ವ್ಯಕ್ತಪಡಿಸಿದರು.
    ಜನ್ನಾಪುರ -ಹುತ್ತಾ ತೆರಿಗೆದಾರರ ಸಂಘದ ಕಾರ್ಯದರ್ಶಿ ಚಂದ್ರಪ್ಪ, ಮಾತನಾಡಿ, ರಸ್ತೆ ಅಭಿವೃದ್ದಿ ಕಾಮಗಾರಿ ಹೆಸರಿನಲ್ಲಿ ರಸ್ತೆಯಲ್ಲಿ ಗುಂಡಿ ತೆಗೆದು ಹಲವು ತಿಂಗಳಿನಿಂದ ಕಾಮಗಾರಿ ಮುಂದುವರೆಸಿಲ್ಲ. ಇದರಿಂದಾಗಿ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಈ ಸಂಬಂಧ ಗುತ್ತಿಗೆದಾರನಿಗೆ ಕೇಳಿದರೆ ಬಿಲ್ ಆಗಿಲ್ಲ ಎಂದು ಹೇಳುತ್ತಾರೆ. ಹಾಗಾದರೆ ರಸ್ತೆ ಕಾಮಗಾರಿ ಆರಂಭಿಸಿದ್ದು ಏಕೆ ಎಂದು ಪ್ರಶ್ನಿಸಿ ಕಾಮಗಾರಿ ನೆಪದಲ್ಲಿ ಸಾರ್ವಜನಿಕರಿಗೆ ತೊಂದರೆ ಕೊಡುವುದು ಬೇಡ. ಮಂದಿನ ದಿನಗಳಲ್ಲಿ ಈ ರೀತಿಯಾಗದಂತೆ ಎಚ್ಚರವಹಿಸಿ. ಪ್ರಸ್ತುತ ನೀಡುತ್ತಿರುವ ನೀರಿನ ತೆರಿಗೆಯೇ ಹೆಚ್ಚಾಗಿದ್ದು, ಮತ್ತಷ್ಟು ಏರಿಕೆ ಮಾಡುವುದು ಬಿಟ್ಟು ಸೋರಿಕೆಯಾಗುತ್ತಿರುವ ನೀರನ್ನು ತಡೆಯಲು ಪ್ರಯತ್ನಿಸಿ ಎಂದರು. 
    ಮಾಚೇನಹಳ್ಳಿ ಕೈಗಾರಿಕಾ ಪ್ರದೇಶದಲ್ಲಿನ ಕೈಗಾರಿಕೆಗಳಿಂದ ವಾರ್ಷಿಕ ೮೦ ಲಕ್ಷ ರು. ಕಂದಾಯ ವಸೂಲಿ ಮಾಡಲಾಗುತ್ತಿದ್ದು, ಆದರೆ ಯಾವುದೇ ಮೂಲ ಸೌಕರ್ಯಗಳನ್ನು ಸಮರ್ಪಕವಾಗಿ ಕಲ್ಪಿಸಿಕೊಟ್ಟಿಲ್ಲ ಎಂದು ಮಾಚೇನಹಳ್ಳಿ ಕೈಗಾರಿಕೆಗಳ ಸಂಘದ ಅಧ್ಯಕ್ಷ ರಮೇಶ್ ಹೆಗ್ಡೆ ಆರೋಪಿಸಿದರು.
  ಈ ವ್ಯಾಪ್ತಿಯಲ್ಲಿ ಕೇವಲ ೧ ಸಿಸಿ ಕ್ಯಾಮರ ಹೊರತುಪಡಿಸಿ ಇದುವರೆಗೂ ಯಾವುದೇ ರಸ್ತೆ ಅಭಿವೃದ್ದಿ ಕಾಮಗಾರಿ ನಡೆದಿಲ್ಲ.  ಬೀದಿ ದೀಪಗಳ ವ್ಯವಸ್ಥೆ ಇಲ್ಲ. ಮಹಿಳಾ ನೌಕರರು ಕರ್ತವ್ಯ ಮುಗಿಸಿ ಈ ರಸ್ತೆಯಲ್ಲಿ ಮನೆಗೆ ತೆರಳುವುದೇ ಕಷ್ಟವಾಗಿದೆ. ವಿಮಾನ ನಿಲ್ದಾಣ ನಿರ್ಮಾಣದ ನಂತರ ವಿದೇಶಿ ವ್ಯಾಪಾರಸ್ಥರು ಆಗಮಿಸುತ್ತಿದ್ದಾರೆ. ಈ ವ್ಯಾಪ್ತಿಯ ರಸ್ತೆಗಳ ಬದಿಯಲ್ಲಿ ಕಸದ ರಾಶಿಗಳು ಕಂಡು ಬರುತ್ತಿದ್ದು, ಪ್ರತಿದಿನ ಸ್ವಚ್ಛತಾ ಕಾರ್ಯ ನಡೆಸುವ ಜೊತೆಗೆ ಅಭಿವೃದ್ದಿ ಕಾಮಗಾರಿಗಳನ್ನು ಕೈಗೊಳ್ಳಿ  ಎಂದರು.
    ಹಳೇನಗರ ಮನೆ ಮಾಲೀಕರ ಸಂಘದ ಬಸವರಾಜಯ್ಯ ಮಾತನಾಡಿ, ಕಳೆದ ವರ್ಷದಲ್ಲಿ ಎಷ್ಟು ಆದಾಯ ಬಂದಿದೆ. ಎಷ್ಟು ಖರ್ಚಾಗಿದೆ ಎಂಬುದರ ಬಗ್ಗೆ ಲೆಕ್ಕ ಕೊಡಬೇಕು. ಕನಕ ಮಂಟಪ ರಸ್ತೆಯಲ್ಲಿ ಸೈಕಲ್ ಪಾತ್ ಮಾಡಿ ಅಗಲವಿದ್ದ ರಸ್ತೆಯನ್ನು ೬ ಅಡಿ ಕಡಿಮೆ ಮಾಡಿ ಅವೈಜ್ಞಾನಿಕವಾಗಿ ಕಾಮಗಾರಿ ನಡೆಸಿ ನಮ್ಮ ತೆರಿಗೆ ಹಣ ಹಾಳು ಮಾಡಿದ್ದೀರ ಎಂದು ದೂರಿದರು.
    ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಕಾಂತರಾಜು, ನಗರ ಆಶ್ರಯ ಸಮಿತಿಯ ಅಧ್ಯಕ್ಷ ಗೋಪಾಲ್  ಉಪಸ್ಥಿತರಿದ್ದರು. 
    ವಿವಿಧ ಸಂಘ ಸಂಸ್ಥೆಗಳ ಮುಖಂಡರಾದ ಸತ್ಯ ಭದ್ರಾವತಿ, ಚಿನ್ನಯ್ಯ,  ವಿ. ವಿನೋದ್, ತೀರ್ಥೇಶ, ಬಸವರಾಜಯ್ಯ, ಎಲ್.ವಿ ರುದ್ರಪ್ಪ, ಚಂದ್ರಪ್ಪ ಅಮೀರ್ ಜಾನ್, ಜಹೀರ್ ಜಾನ್ ಹಾಗೂ ನಗರಸಭೆ ಸದಸ್ಯರಾದ ಬಿ.ಕೆ ಮೋಹನ್, ಬಸವರಾಜ ಬಿ. ಆನೇಕೊಪ್ಪ, ಸವಿತಾ ಉಮೇಶ್, ಲತಾ ಚಂದ್ರಶೇಖರ್, ಅನಿತಾ ಮಲ್ಲೇಶ್, ಬಿ.ಎಂ ರವಿಕುಮಾರ್, ಶಶಿಕಲಾ ಬಿ.ಎಸ್ ನಾರಾಯಣಪ್ಪ, ಕೋಟೇಶ್ವರ ರಾವ್, ಎಸ್. ಪಲ್ಲವಿ, ಶೃತಿ ಸಿ. ವಸಂತಕುಮಾರ್ ಕೆ.ಜಿ ಹಾಗು ನಗರಸಭೆ ವ್ಯವಸ್ಥಾಪಕಿ ಸುನಿತಾಕುಮಾರಿ ಸೇರಿದಂತೆ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.