ಬಿಜೆಪಿ, ಸಂಘ ಪರಿವಾರಗಳ ಏಕೈಕ ಮಾರ್ಗ : ಶಿವಬಸಪ್ಪ ಆರೋಪ
ಲೋಕಸಭೆ ಚಳಿಗಾಲದ ಅಧಿವೇಶನದಲ್ಲಿ ಕೇಂದ್ರ ಬಿಜೆಪಿ ಸರ್ಕಾರದ ಗೃಹ ಸಚಿವ ಅಮಿತ್ ಶಾರವರು ಅಂಬೇಡ್ಕರ್‌ರವರ ಬಗ್ಗೆ ಹಗುರವಾಗಿ ಮಾತನಾಡಿ ಅಪಮಾನ ಮಾಡಿರುವುದನ್ನು ಖಂಡಿಸಿ ಪ್ರೊ. ಬಿ. ಕೃಷ್ಣಪ್ಪ ಸ್ಥಾಪಿತ ಕರ್ನಾಟಕ ದಲಿತ ಸಂಘರ್ಷ ಸಮಿತಿ ಭದ್ರಾವತಿ ತಾಲೂಕು ಶಾಖೆ ವತಿಯಿಂದ ಮಂಗಳವಾರ ತಾಲೂಕು ಕಚೇರಿ ಮುಂಭಾಗ ಪ್ರತಿಭಟನೆ ಹಮ್ಮಿಕೊಳ್ಳುವ ಮೂಲಕ ತಹಸೀಲ್ದಾರ್ ಮೂಲಕ ಮನವಿ ಸಲ್ಲಿಸಲಾಯಿತು.
ಭದ್ರಾವತಿ : ಈ ದೇಶದಲ್ಲಿ ಮನಸ್ಮೃತಿಯನ್ನು ಮತ್ತೆ ಜಾರಿ ಮಾಡಿ ಅಸ್ಪೃಶ್ಯತೆ, ಜಾತಿ ವ್ಯವಸ್ಥೆ, ವರ್ಣಭೇದ ನೀತಿಯನ್ನು ಹುಟ್ಟುಹಾಕುವ ಮೂಲಕ ರಾಜಕೀಯ ಲಾಭ ಪಡೆಯುವುದು ಬಿಜೆಪಿ ಮತ್ತು ಸಂಘ ಪರಿವಾರಗಳಿಗೆ ಇರುವ ಏಕೈಕ ಮಾರ್ಗ ಎಂದು ದಲಿತ ಸಂಘರ್ಷ ಸಮಿತಿ ರಾಜ್ಯ ಸಮಿತಿ ಸದಸ್ಯ ಶಿವಬಸಪ್ಪ ಆರೋಪಿಸಿದರು.
ಲೋಕಸಭೆ ಚಳಿಗಾಲದ ಅಧಿವೇಶನದಲ್ಲಿ ಕೇಂದ್ರ ಬಿಜೆಪಿ ಸರ್ಕಾರದ ಗೃಹ ಸಚಿವ ಅಮಿತ್ ಶಾರವರು ಅಂಬೇಡ್ಕರ್‌ರವರ ಬಗ್ಗೆ ಹಗುರವಾಗಿ ಮಾತನಾಡಿ ಅಪಮಾನ ಮಾಡಿರುವುದನ್ನು ಖಂಡಿಸಿ ಪ್ರೊ. ಬಿ. ಕೃಷ್ಣಪ್ಪ ಸ್ಥಾಪಿತ ಕರ್ನಾಟಕ ದಲಿತ ಸಂಘರ್ಷ ಸಮಿತಿ ತಾಲೂಕು ಶಾಖೆ ವತಿಯಿಂದ ಮಂಗಳವಾರ ತಾಲೂಕು ಕಚೇರಿ ಮುಂಭಾಗ ಹಮ್ಮಿಕೊಳ್ಳಲಾಗಿದ್ದ ಪ್ರತಿಭಟನೆಯಲ್ಲಿ ಅವರು ಪಾಲ್ಗೊಂಡು ಮಾತನಾಡಿದರು.
ದೇವರು, ಧರ್ಮದ ಹೆಸರಿನಲ್ಲಿ ಸಾವಿರಾರು ವರ್ಷಗಳಿಂದ ಶೋಷಣೆ ಮಾಡಿದ ಮನುವಾದಿಗಳಿಗೆ ಅಂಬೇಡ್ಕರ್ ಹಾಗೂ ಸಂವಿಧಾನದ ಬಗ್ಗೆ ಅಪಮಾನ ಮಾಡುತ್ತಿರುವುದು ಇದೇ ಮೊದಲೆನಲ್ಲ. ಗೃಹ ಸಚಿವ ಅಮಿತ್ ಶಾರನ್ನು ತಕ್ಷಣ ಸಚಿವ ಸ್ಥಾನದಿಂದ ವಜಾಗೊಳಿಸಬೇಕೆಂದು ಆಗ್ರಹಿಸಿದರು.
ಪ್ರತಿಭಟನೆ ನೇತೃತ್ವ ವಹಿಸಿದ್ದ ರಾಜ್ಯ ಸಂಚಾಲಕ ಎಂ. ಗುರುಮೂರ್ತಿ ಮಾತನಾಡಿ, ಸಂವಿಧಾನಕ್ಕೆ, ಡಾ. ಅಂಬೇಡ್ಕರ್ ಅವರಿಗೆ ಅಪಮಾನ ಮಾಡಿದ ಗೃಹ ಮಂತ್ರಿ ಅಮಿತ್ ಶಾರವರು ತಮ್ಮ ಸಚಿವ ಸ್ಥಾನಕ್ಕೆ ಕೂಡಲೇ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿದರು. ಅಲ್ಲದೆ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಅಂಬೇಡ್ಕರ್‌ರವರ ಬಗ್ಗೆ ಗೌರವ ಹೊಂದಿದ್ದರೆ ತಕ್ಷಣ ಗೃಹ ಮಂತ್ರಿ ಅಮಿತ್ ಶಾರವರ ರಾಜೀನಾಮೆ ಪಡೆಯಬೇಕೆಂದು ಆಗ್ರಹಿಸಿ ಇಲ್ಲವಾದರೆ ಅಮಿತ್ ಶಾ ರವರನ್ನು ಸಚಿವ ಸಂಪುಟದಿಂದ ಕಿತ್ತು ಹಾಕುವವರೆಗೂ ನಡೆಯುವ ಹೋರಾಟಗಳನ್ನು ಹತ್ತಿಕ್ಕಲು ಸಾಧ್ಯವಿಲ್ಲ ಎಂದು ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ಜಿಲ್ಲಾ ಸಂಚಾಲಕ ಎಂ. ಏಳು ಕೋಟಿ, ಜಿಲ್ಲಾ ಸಂಘಟನಾ ಸಂಚಾಲಕ ಆರ್. ತಮ್ಮಯ್ಯ, ಗ್ರಾಮಾಂತರ ವಿಭಾಗದ ಜಿಲ್ಲಾ ಸಂಘಟನಾ ಸಂಚಾಲಕ ಬಿ. ಕೃಷ್ಣಪ್ಪ, ತಾಲೂಕು ಸಂಚಾಲಕ ಕಾಚಗೊಂಡನಹಳ್ಳಿ ನಾಗರಾಜ್, ಶಿವಮೊಗ್ಗ ತಾಲೂಕು ಸಂಚಾಲಕ ರಮೇಶ್ ಚಿಕ್ಮರಡಿ, ಶಿವಮೊಗ್ಗ ನಗರ ಸಂಚಾಲಕ ಹರಿಗೆ ರವಿ, ಕಡದಕಟ್ಟೆ ರಾಜಶೇಖರ್, ಬೊಮ್ಮೇನಹಳ್ಳಿ ಶ್ರೀನಿವಾಸ್, ಮುತ್ತು ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.
ಇದಕ್ಕೂ ಮೊದಲು ರಂಗಪ್ಪ ವೃತ್ತದಲ್ಲಿ ಅರ್ಧ ಗಂಟೆಗೂ ಹೆಚ್ಚು ಸಮಯ ಮಾನವ ಸರಪಳಿ ನಿರ್ಮಿಸಿ ಪ್ರತಿಭಟಿಸಿ ಆಕ್ರೋಶ ವ್ಯಕ್ತಪಡಿಸಲಾಯಿತು. ನಂತರ ತಾಲೂಕು ಕಛೇರಿವರೆಗೂ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು.