ಕ್ರೈಸ್ತ ದೇವಾಲಯಗಳಲ್ಲಿ ಸಿಹಿ ಹಂಚಿ ಪರಸ್ಪರ ಶುಭಾಶಯಗಳು
![](https://blogger.googleusercontent.com/img/a/AVvXsEhMGRJx8zr_WTU3gg8Ggg-lTxhvR_SzNcMqQcQNgHNjHlA4FpBJZrvYKgwOmbehEmftAd6yoVOIJ7m70deXWZFr1CdJujygJ8yE_jrdcHAg4sUnty6fJ0tnny7ackNqtSyM-Eeelacvn-B-b2ig6rsQ-6PjDX1vAZ8AGS8GumaN3bPsCJThWUaKWs4kBTMr=w400-h300-rw)
ಜಗತ್ತಿಗೆ ತ್ಯಾಗ, ಪ್ರೀತಿಯ ಸಂದೇಶ ಸಾರಿದ ಯೇಸುಕ್ರಿಸ್ತರ ಜನ್ಮದಿನ ಬುಧವಾರ ಭದ್ರಾವತಿ ತಾಲೂಕಿನಾದ್ಯಂತ ಸಂಭ್ರಮದಿಂದ ಆಚರಿಸಲಾಯಿತು.
ಭದ್ರಾವತಿ : ಜಗತ್ತಿಗೆ ತ್ಯಾಗ, ಪ್ರೀತಿಯ ಸಂದೇಶ ಸಾರಿದ ಯೇಸುಕ್ರಿಸ್ತರ ಜನ್ಮದಿನ ಬುಧವಾರ ತಾಲೂಕಿನಾದ್ಯಂತ ಸಂಭ್ರಮದಿಂದ ಆಚರಿಸಲಾಯಿತು.
ತಾಲೂಕಿನ ಹಳೇನಗರ ಗಾಂಧಿನಗರದ ವೇಳಾಂಗಣಿ ಆರೋಗ್ಯ ಮಾತೆ ದೇವಾಲಯ, ನ್ಯೂಟೌನ್ ಅಮಲೋಧ್ಭವಿ ಮಾತೆ ದೇವಾಲಯ, ಕಾರೆಹಳ್ಳಿಯ ಸಂತ ಅಂತೋಣಿಯವರ ದೇವಾಲಯ, ಕಾಗದ ನಗರದ ಸಂತ ಜೋಸೆಫರ ದೇವಾಲಯಗಳು ಸೇರಿದಂತೆ ತಾಲೂಕಿನ ಇನ್ನಿತರ ಕ್ರೈಸ್ತ ದೇವಾಲಯಗಳಲ್ಲಿ ನಿರ್ಮಾಣ ಮಾಡಲಾದ ಕ್ರಿಸ್‌ಮಸ್ ಟ್ರೀ, ವಿವಿಧ ರೀತಿಯ ನಕ್ಷತ್ರಗಳು, ಯೇಸುವಿನ ಜನನ ಸಂದರ್ಭದ ಕ್ಷಣಗಳನ್ನು ನೆನಪಿಸುವ ಗೋದಲಿಗಳು ಗಮನ ಸೆಳೆದವು. ಮಂಗಳವಾರ ಮಧ್ಯರಾತ್ರಿ ಹಾಗೂ ಬುಧವಾರ ಮುಂಜಾನೆ ವಿಶೇಷ ಪ್ರಾರ್ಥನೆಗಳಲ್ಲಿ ಕ್ರೈಸ್ತ ಧರ್ಮೀಯರು ಪಾಲ್ಗೊಂಡಿದ್ದರು.
ಚರ್ಚ್‌ಗಳಲ್ಲಿ ಕೇಕ್, ಚಾಕೋಲೇಟ್, ಸಿಹಿತಿಂಡಿಗಳನ್ನು ಹಂಚಲಾಯಿತು. ಮನೆಗಳಲ್ಲಿ ವಿಶೇಷ ಖಾದ್ಯಗಳನ್ನು ತಯಾರಿಸಿ, ಹಬ್ಬಕ್ಕಾಗಿ ವಿಶೇಷ ಭೋಜನ ವ್ಯವಸ್ಥೆ ಕೈಗೊಂಡಿರುವುದು ಕಂಡು ಬಂದಿತು. ಕ್ರಿಸ್ತನ ಜನನದ ಶುಭ ಗಳಿಗೆಯ ಸ್ಮರಣೆಗೆ ಸಂಕೇತವಾಗಿ ಮೇಣದ ಬತ್ತಿಗಳನ್ನು ಬೆಳಗಿಸಲಾಯಿತು. ಪುಟ್ಟ ಮಕ್ಕಳು ಸಾಂತಾ ಕ್ಲಾಸ್ ವೇಷ ಧರಿಸಿ ಗಮನ ಸೆಳೆದರು.
ಶಾಂತಿ, ದೀನತೆಗಾಗಿ ಪ್ರಾರ್ಥನೆ ಸಲ್ಲಿದ ಭಕ್ತರು :
ಕ್ರಿಸ್‌ಮಸ್ ಬಾಹ್ಯ ಆಡಂಬರವಾಗಿರದೆ ಪರರ ಕಷ್ಟಕ್ಕೆ ಸಹಾಯ, ಸೇವೆ ಸಲ್ಲಿಸುವ ಹಬ್ಬವಾಗಿದೆ ಎಂದು ಕಾರೇಹಳ್ಳಿ ಸಂತ ಅಂತೋಣಿ ದೇವಾಲಯದ ಧರ್ಮಕೇಂದ್ರದ ಗುರುಗಳಾದ ಫಾದರ್ ಸಂತೋಷ್ ಅಲ್ಮೇಡ ತಿಳಿಸಿದರು.
ಪ್ರತಿಯೊಬ್ಬರ ಮನಸ್ಸು, ಹೃದಯದಲ್ಲಿ ಯೇಸು ಜನಿಸಬೇಕು. ಇರುವವರು ಇಲ್ಲದವರಿಗೆ ತಮ್ಮ ಕೈಲಾದಷ್ಟು ಸಹಾಯ ಮಾಡಬೇಕು ಎಂದು ಮನವಿ ಮಾಡಿದರು.
ದೇಶಗಳ ನಡುವೆ ನಡೆಯುತ್ತಿರುವ ಯುದ್ಧಗಳು, ದೇಶದ ಭ್ರಷ್ಟಾಚಾರದ ರಾಜಕಾರಣ ದೂರವಾಗಿ ಎಲ್ಲರ ನಡುವೆ ಐಕ್ಯತೆ, ಸಮಾನತೆ ಮೂಡಲಿ, ವಿಶ್ವದಲ್ಲಿ ಶಾಂತಿ ನೆಲೆಸಲಿ. ಯುವಜನರು ಆಧುನಿಕ ಜೀವನದ ಭರಾಟೆಯಲ್ಲಿ ದಾರಿ ತಪ್ಪದೆ ಉತ್ತಮ ಜೀವನ ನಡೆಸಲು ಬೇಕಾದ ಸ್ಥೈರ್ಯ, ಮನೋಬಲವನ್ನು ದೇವರು ನೀಡಲಿ ಎಂದು ಪ್ರಾರ್ಥಿಸಲಾಯಿತು.