Friday, December 27, 2024

ವಿದ್ಯಾರ್ಥಿಗಳು ಅವಕಾಶಗಳ ಸದುಪಯೋಗ ಪಡೆದುಕೊಂಡು ಮುಂದೆ ಬನ್ನಿ : ಶ್ರೀ ಡಾ. ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ

ಭದ್ರಾವತಿ ಹೊಸಸಿದ್ಧಾಪುರ ಎನ್‌ಟಿಬಿ ಬಡಾವಣೆಯಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಸಹ್ಯಾದ್ರಿ ಪಬ್ಲಿಕ್ ಸ್ಕೂಲ್ ಕಟ್ಟಡ  ಶಿವಮೊಗ್ಗ ಬೆಕ್ಕಿನಕಲ್ಮಠದ ಶ್ರೀ ಡಾ. ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ, ಶ್ರೀ ಆದಿಚುಂಚನಗಿರಿ ಮಠದ ಕಾರ್ಯದರ್ಶಿ ಶ್ರೀ ಪ್ರಸನ್ನನಾಥ ಸ್ವಾಮೀಜಿ ಸೇರಿದಂತೆ ಇನ್ನಿತರರು ಉದ್ಘಾಟಿಸಿದರು. 
    ಭದ್ರಾವತಿ : ಆಧುನಿಕ ಯುಗದಲ್ಲಿ ಬೆಳವಣಿಗೆ ಹೊಂದಲು ವಿಫುಲವಾದ ಅವಕಾಶಗಳು ಮುಕ್ತವಾಗಿದ್ದು, ವಿದ್ಯಾರ್ಥಿಗಳು ತಮಗೆ ಲಭ್ಯವಾಗುವ ಅವಕಾಶಗಳ ಸದುಪಯೋಗ ಪಡೆದುಕೊಂಡು ಮುಂದೆ ಬರಬೇಕೆಂದು ಶಿವಮೊಗ್ಗ ಬೆಕ್ಕಿನಕಲ್ಮಠದ ಶ್ರೀ ಡಾ. ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ ಹೇಳಿದರು. 
    ಅವರು ಹೊಸಸಿದ್ಧಾಪುರ ಎನ್‌ಟಿಬಿ ಬಡಾವಣೆಯಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಸಹ್ಯಾದ್ರಿ ಪಬ್ಲಿಕ್ ಸ್ಕೂಲ್ ಕಟ್ಟಡ ಉದ್ಘಾಟಿಸಿ ಮಾತನಾಡಿದರು.
    ವಿದ್ಯಾರ್ಥಿಗಳಲ್ಲಿ ಸುಪ್ತವಾಗಿರುವ ಪ್ರತಿಭೆಯನ್ನು ಹೊರತರುವಲ್ಲಿ ಶಿಕ್ಷಣ ಸಂಸ್ಥೆಗಳ ಪಾತ್ರ ಮಹತ್ತರವಾಗಿದ್ದು, ಕೇವಲ ಅಕ್ಷರಾಭ್ಯಾಸ, ಅಂಕಗಳಿಕೆಯ ಸ್ಪರ್ಧೆಗೆ ಮಾತ್ರ ಮಕ್ಕಳನ್ನು ಮೀಸಲುಗೊಳಿಸಲು ಸಜ್ಜುಗೊಳಿಸುವ ಬದಲು ಕ್ರಿಯಾತ್ಮಕವಾಗಿ ರೂಪಿಸಬೇಕಾಗಿದೆ. ಪೋಷಕರ ಪಾತ್ರ ಈ ನಿಟ್ಟಿನಲ್ಲಿ ಪ್ರಮುಖವಾಗಿದೆ ಎಂದರು.
    ಶಿಕ್ಷಣ ಸಂಸ್ಥೆಯ ಪ್ರಮುಖರಾದ ಟ್ರಸ್ಟ್ ಕಾರ್ಯದರ್ಶಿ ಕಾಳೇಗೌಡರವರ ರಾಜೀರಹಿತ ತತ್ವ, ಸಿದ್ಧಾಂತ, ನಿಷ್ಟುರ ಸ್ವಭಾವ, ಕಾರ್ಮಿಕ ರಂಗದ ಜೊತೆಗೆ ಶಿಕ್ಷಣ ಕ್ಷೇತ್ರದಲ್ಲಿ ಅವರ ಬದ್ಧತೆ ಮಾದರಿಯಾಗಿದೆ ಎಂದು ಸ್ವಾಮೀಜಿಯವರು ಬಣ್ಣಿಸಿದರು. 
    ಸಮಾರಂಭದ ದಿವ್ಯ ಸಾನ್ನಿಧ್ಯವಹಿಸಿದ್ದ ಶ್ರೀ ಆದಿಚುಂಚನಗಿರಿ ಮಠದ ಕಾರ್ಯದರ್ಶಿ ಶ್ರೀ ಪ್ರಸನ್ನನಾಥ ಸ್ವಾಮೀಜಿ ಮಾತನಾಡಿ, ವಿದ್ಯಾರ್ಥಿಗಳಿಗೆ ಶಿಕ್ಷಣದ ಜೊತೆಗೆ ಸಂಸ್ಕೃತಿ-ಸಂಸ್ಕಾರ ಕಲಿಸಿದಾಗ ಮಾತ್ರ ಪರಿಪೂರ್ಣ ವ್ಯಕ್ತಿತ್ವ ರೂಪುಗೊಳ್ಳಲು ಸಾಧ್ಯ ಎಂದರು.
    ಹತ್ತು ಹಲವು ಸವಾಲು ಹಾಗೂ ಸಂಕಷ್ಟಗಳ ನಡುವೆಯೂ ಛಲಬಿಡದ ತ್ರಿವಿಕ್ರಮನಂತೆ ಶಿಕ್ಷಣ ಸಂಸ್ಥೆಯನ್ನು ಕಟ್ಟಿಬೆಳೆಸಿರುವ ಕಾರ್ಯದರ್ಶಿ ಕಾಳೇಗೌಡರವರ ಕಾರ್ಯವೈಖರಿ ಅನುಕರಣೀಯ ಎಂದು ಶ್ಲಾಘಿಸಿದರು.
    ಖಾಸಗಿ ಶಾಲೆಗಳ ಒಕ್ಕೂಟದ ತಾಲೂಕು ಅಧ್ಯಕ್ಷ ಡಾ. ಡಿ. ಪ್ರಭಾಕರ ಬೀರಯ್ಯ ಮತನಾಡಿ, ಶಿಕ್ಷಣ ಸಂಸ್ಥೆಗಳು ಮೌಲ್ಯಯುತ ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡಬೇಕಿದೆ ಎಂದರು.
    ಕಾರ್ಮಿಕ ಮುಖಂಡ ಡಿ.ಸಿ. ಮಾಯಣ್ಣ ಮಾತನಾಡಿ, ವಿದ್ಯಾವಂತರ ಸಂಖ್ಯೆಗೆ ಅನುಗುಣವಾಗಿ ಉದ್ಯೋಗ ಸೃಜನೆಮಾಡಿದಾಗ ಮಾತ್ರ ದೇಶ ಪ್ರಗತಿಪಥದತ್ತ ಸಾಗಲು ಸಾಧ್ಯ ಎಂದರು.
    ಕಾರ್ಯದರ್ಶಿ ಕಾಳೇಗೌಡ ಪ್ರಾಸ್ತವಿಕವಾಗಿ ಮಾತನಾಡಿ, ಶಿಕ್ಷಣ ಸಂಸ್ಥೆ ಬೆಳೆದುಬಂದ ದಾರಿ ಹಾಗೂ ಸಿದ್ಧಾಪುರ ಬಡಾವಣೆಯ ಪೋಷಕರು ನೀಡಿದ ಸಹಕಾರ ಸ್ಮರಿಸಿದರು. 
    ಟ್ರಸ್ಟ್ ಅಧ್ಯಕ್ಷ ಪಿ.ದೊರೈ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ನಗರಸಭಾ ಸದಸ್ಯೆ ಆರ್. ನಾಗರತ್ನ ಅನಿಲ್ ಕುಮಾರ್, ಟ್ರಸ್ಟಿ ಉಷಾ ಕಾಳೇಗೌಡ, ಲೆಕ್ಕ ಪರಿಶೋಧಕ ಜಿ. ಧರ್ಮಪ್ರಸಾದ್, ಶಿವಲಿಂಗೇಗೌಡ ಮುಂತಾದವರು ಉಪಸ್ಥಿತರಿದ್ದರು.  ಟ್ರಸ್ಟಿ ರವಿಕುಮಾರ್ ವಂದಿಸಿದರು. ಶಾಲಾ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಏರ್ಪಡಿಸಲಾಗಿತ್ತು.

ರೈತರಿಗೆ ಸಮಗ್ರ ಕೃಷಿ ನೀರಾವರಿ, ಹೈನುಗಾರಿಕೆ ಮಾಹಿತಿ ಕಾರ್ಯಕ್ರಮ

ಭದ್ರಾವತಿ ತಾಲೂಕಿನ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ-೧ರ ವತಿಯಿಂದ ವಿದ್ಯಾಮಂದಿರ ವಲಯದ ತಿಮ್ಲಾಪುರ ಕಾರ್ಯಕ್ಷೇತ್ರದಲ್ಲಿ ರೈತರಿಗೆ ಸಮಗ್ರ ಕೃಷಿ ನೀರಾವರಿ, ಹೈನುಗಾರಿಕೆ ಮಾಹಿತಿ ಕಾರ್ಯಕ್ರಮ ನಡೆಸಲಾಯಿತು.
    ಭದ್ರಾವತಿ: ತಾಲೂಕಿನ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ-೧ರ ವತಿಯಿಂದ ವಿದ್ಯಾಮಂದಿರ ವಲಯದ ತಿಮ್ಲಾಪುರ ಕಾರ್ಯಕ್ಷೇತ್ರದಲ್ಲಿ ರೈತರಿಗೆ ಸಮಗ್ರ ಕೃಷಿ ನೀರಾವರಿ, ಹೈನುಗಾರಿಕೆ ಮಾಹಿತಿ ಕಾರ್ಯಕ್ರಮ ನಡೆಸಲಾಯಿತು.
  ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ರೈತರಿಗಾಗಿ ರೂಪಿಸಿರುವ ಯೋಜನೆಗಳನ್ನು ಸದ್ಭಳಕೆ ಮಾಡಿಕೊಳ್ಳುವ ಜೊತೆಗೆ ಮಾಹಿತಿ ಕಾರ್ಯಾಗಾರಗಳಲ್ಲಿ ಪಾಲ್ಗೊಂಡು ಲಾಭದಾಯಕ ಕೃಷಿ ಕೈಗೊಳ್ಳುವ ವಿಧಾನಗಳ  ಕುರಿತು ಸಮಗ್ರವಾಗಿ ಯೋಜನಾಧಿಕಾರಿ ಪ್ರಕಾಶ್ ವೈ ನಾಯ್ಕ ವಿವರಿಸಿದರು. ಕಾರ್ಯಕ್ರಮದಲ್ಲಿ ತಿಮ್ಲಾಪುರ ಕಾರ್ಯಕ್ಷೇತ್ರದ ರೈತರು, ಜನಜಾಗೃತಿ ವೇದಿಕೆ ಸದಸ್ಯೆ ಮಣಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಮನಮೋಹನ ಸಿಂಗ್ ನಿಧನಕ್ಕೆ ಶಾಸಕ ಸಂಗಮೇಶ್ವರ್ ಸಂತಾಪ

    ಭದ್ರಾವತಿ : ದೇಶದ ಆರ್ಥಿಕ ಸುಧಾರಣೆಗಳ ಹರಿಕಾರ, ಮಾಜಿ ಪ್ರಧಾನಿ ಮನಮೋಹನ ಸಿಂಗ್‌ರವರ ನಿಧನಕ್ಕೆ ಕರ್ನಾಟಕ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶಾಸಕ ಬಿ.ಕೆ ಸಂಗಮೇಶ್ವರ್ ಸಂತಾಪ ಸೂಚಿಸಿದ್ದಾರೆ. 
    ಮನಮೋಹನ ಸಿಂಗ್‌ರವರು ಅರ್ಥಶಾಸ್ತ್ರದ ಪ್ರಾಧ್ಯಾಪಕ, ಪ್ರಧಾನ ಆರ್ಥಿಕ ಸಲಹೆಗಾರ ಕೇಂದ್ರ ವಿತ್ತ ಕಾರ್ಯದರ್ಶಿ, ರಿಸರ್ವ್ ಬ್ಯಾಂಕ್ ಗವರ್ನರ್, ಯೋಜನಾ ಆಯೋಗದ ಉಪಾಧ್ಯಕ್ಷ,  ವಿಶ್ವ ವಿದ್ಯಾಲಯ ಧನಸಹಾಯ ಆಯೋಗದ ಅಧ್ಯಕ್ಷ, ಕೇಂದ್ರ ವಿತ್ತ ಸಚಿವ ಹಾಗು ೨ ಬಾರಿ ದೇಶದ ಪ್ರಧಾನಿಯಾಗಿ ಸೇವೆ ಸಲ್ಲಿಸುವ ಮೂಲಕ ತಮ್ಮದೇ ಆದ ಕೊಡುಗೆಯನ್ನು ನೀಡಿದ್ದಾರೆ. 
    ಧೀಮಂತ ನಾಯಕ, ದೇಶದ ಹಿರಿಯ ಮುತ್ಸದ್ದಿ, ಅಜಾತ ಶತೃ ಮನಮೋಹನ ಸಿಂಗ್‌ರವರ ನಿಧನ ದೇಶಕ್ಕೆ ತುಂಬಲಾರದ ನಷ್ಟವನ್ನುಂಟುಮಾಡಿದೆ. ಇವರ ನಿಧನದಿಂದ ಉಂಟಾಗಿರುವ ದುಃಖವನ್ನು ಭರಿಸುವ ಶಕ್ತಿ ಭಗವಂತ ಕುಟುಂಬ ವರ್ಗಕ್ಕೆ, ಅಭಿಮಾನಿಗಳಿಗೆ ಕರುಣಿಸಲಿ ಎಂದು ಪ್ರಾರ್ಥಿಸುವುದಾಗಿ ಸಂತಾಪ ಸೂಚಿಸಿದ್ದಾರೆ. 

Thursday, December 26, 2024

ನವಚೇತನ ವಿದ್ಯಾಸಂಸ್ಥೆಯ ಶಾಲಾ ವಾರ್ಷಿಕೋತ್ಸವ

ಭದ್ರಾವತಿ ನಗರಸಭೆ ವ್ಯಾಪ್ತಿಯ ಕಡದಕಟ್ಟೆ ನವಚೇತನ ವಿದ್ಯಾಸಂಸ್ಥೆಯ ಶಾಲಾ ವಾರ್ಷಿಕೋತ್ಸವ ಕರ್ನಾಟಕ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶಾಸಕ ಬಿ.ಕೆ ಸಂಗಮೇಶ್ವರ್ ಉದ್ಘಾಟಸಿದರು.
    ಭದ್ರಾವತಿ: ನಗರಸಭೆ ವ್ಯಾಪ್ತಿಯ ಕಡದಕಟ್ಟೆ ನವಚೇತನ ವಿದ್ಯಾಸಂಸ್ಥೆಯ ಶಾಲಾ ವಾರ್ಷಿಕೋತ್ಸವ ಕರ್ನಾಟಕ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶಾಸಕ ಬಿ.ಕೆ ಸಂಗಮೇಶ್ವರ್ ಉದ್ಘಾಟಸಿದರು.
    ವಾರ್ಷಿಕೋತ್ಸವದಲ್ಲಿ ರೈತ ಅಶೋಕ್, ಮಾಜಿ ಸೈನಿಕ ದೇವರಾಜು ಮತ್ತು ನವಚೇತನ ಶಾಲೆಯ ನಿವೃತ್ತ ಶಿಕ್ಷಕ ಎಂ. ಚನ್ನೇಶ್ವರಪ್ಪ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಅಲ್ಲದೆ ಕಳೆದ ವರ್ಷ ಎಸ್ಎಸ್ಎಲ್ ಸಿ ಪರೀಕ್ಷೆಯಲ್ಲಿ ಅತ ಹೆಚ್ಚು ಅಂಕಗಳಿಸಿದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಅಭಿನಂದಿಸಲಾಯಿತು.
    ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ ನಾಗೇಂದ್ರಪ್ಪ, ನಗರಸಭಾ ಸದಸ್ಯರಾದ ಶೃತಿ ವಸಂತ್ ಕುಮಾರ್ ಮತ್ತು ಗೀತಾ ರಾಜಕುಮಾರ್, ಶಿಮೂಲ್ ನಿರ್ದೇಶಕ ಕೆಂಚನಹಳ್ಳಿ ಎಸ್. ಕುಮಾರ್, ಜಮೀನ್ದಾರ್ ಪರಮೇಶ್ವರಪ್ಪ, ನಿವೃತ್ತ ಉಪನ್ಯಾಸಕ ನಿಂಗಪ್ಪ, ನಿವೃತ್ತ ಶಿಕ್ಷಕ ಜಿ. ಉಮೇಶ್ವರಪ್ಪ, ಸಿ.ಆರ್.ಪಿ ನಂದಿನಿ, ತಾಲೂಕು ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಟಿ. ಪೃಥ್ವಿರಾಜ್, ಎನ್.ಪಿ.ಎಸ್ ಅಧ್ಯಕ್ಷ ಎ. ರಂಗನಾಥ್, ಕುವೆಂಪು ವಿಶ್ವವಿದ್ಯಾಲಯ ಸಿಂಡಿಕೇಟ್ ಸದಸ್ಯ ಮುಸ್ವೀರ್ ಬಾಷಾ, ವಿದ್ಯಾಸಂಸ್ಥೆಯ ಸಲಹೆಗಾರರಾದ ಗೀತಾಬಾಯಿ ಸಿದ್ದೇಶ್ವರ, ಅಧ್ಯಕ್ಷ ಎಸ್. ವಿನಯ್, ಕಾರ್ಯದರ್ಶಿ ಎಸ್. ವಿವೇಕ್, ಶಾಲಾ ಶಿಕ್ಷಕರು ಮತ್ತು ಸಿಬ್ಬಂದಿ ವರ್ಗದವರು ಭಾಗವಹಿಸಿದ್ದರು. ಶಾಲಾ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮಗಳು ಮನಸೂರೆಗೊಂಡವು. ಶಿಕ್ಷಕಿ ಎಚ್.ಡಿ ಸುವರ್ಣ ಸ್ವಾಗತಿಸಿ, ಬಿ.ಎಂ ಲಿಂಗರಾಜ್ ನಿರೂಪಿಸಿ, ಕೆ.ಎಸ್ ಮಂಜುನಾಥ್ ವಂದಿಸಿದರು.

ನಗರಸಭೆ ವ್ಯಾಪ್ತಿಯಲ್ಲಿ ಮೂಲ ಸೌಕರ್ಯ ಸಮರ್ಪಕವಾಗಿ ಕಲ್ಪಿಸುವಲ್ಲಿ ಅಧಿಕಾರಿಗಳು ವಿಫಲ : ಸದಸ್ಯರ ಆರೋಪ

ಭದ್ರಾವತಿ ನಗರಸಭೆ ಸಾಮಾನ್ಯ ಸಭೆ ಗುರುವಾರ ಅಧ್ಯಕ್ಷ ಮಣಿ ಎಎನ್‌ಎಸ್ ಅಧ್ಯಕ್ಷತೆಯಲ್ಲಿ ನಡೆಯಿತು. 
    ಭದ್ರಾವತಿ: ನಗರಸಭೆ ವ್ಯಾಪ್ತಿಯಲ್ಲಿ ಮೂಲ ಸೌಕರ್ಯಗಳನ್ನು ಸಮರ್ಪಕವಾಗಿ ಕಲ್ಪಿಸುವಲ್ಲಿ ನಗರಸಭೆ ಅಧಿಕಾರಿಗಳು ವಿಫಲರಾಗಿದ್ದು, ಇದರಿಂದಾಗಿ ವಾರ್ಡ್‌ಗಳಲ್ಲಿ ಸದಸ್ಯರು ತಲೆ ತಗ್ಗಿಸುವಂತಾಗಿದೆ ಎಂದು ಗುರುವಾರ ನಡೆದ ಸಾಮಾನ್ಯಸಭೆಯಲ್ಲಿ ಆಕ್ರೋಶ ವ್ಯಕ್ತಪಡಿಸಲಾಯಿತು. 
    ನಗರಸಭೆ ಸಭಾಂಗಣದಲ್ಲಿ ಅಧ್ಯಕ್ಷ ಮಣಿ ಎಎನ್‌ಎಸ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಪಕ್ಷ ಭೇದಮರೆತು ಸದಸ್ಯರು ಮೂಲ ಸೌಕರ್ಯಗಳನ್ನು ಕಲ್ಪಿಸುವಲ್ಲಿ ನಗರಸಭೆ ಅಧಿಕಾರಿಗಳು ವಿಫಲರಾಗಿದ್ದಾರೆ. ವಾರ್ಡ್‌ಗಳಲ್ಲಿ ನಾಯಿಗಳ ಹಾವಳಿ ಹೆಚ್ಚಾಗಿದ್ದು, ಇವುಗಳನ್ನು ನಿಯಂತ್ರಿಸುವಲ್ಲಿ ಯಾವುದೇ ಕ್ರಮ ಕೈಗೊಂಡಿಲ್ಲ. ಅಲ್ಲದೆ ಚರಂಡಿಗಳಲ್ಲಿ ಸ್ವಚ್ಛತೆ ಇಲ್ಲವಾಗಿದೆ ಕಸಕಡ್ಡಿಕಟ್ಟಿಕೊಂಡು ದುರ್ವಾಸನೆ ಬೀರುತ್ತಿವೆ. ಸೊಳ್ಳೆಕಾಟ ಹೆಚ್ಚಾಗಿದೆ. ರೋಗರುಜಿನಗಳು ಹರಡುವ ಭೀತಿ ಉಂಟಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. 
    ಅಲ್ಲದೆ ಬಹುತೇಕ ವಾರ್ಡ್‌ಗಳಲ್ಲಿ ರಸ್ತೆ ಕಾಮಗಾರಿಗಳು ಸಮರ್ಪಕವಾಗಿ ನಡೆದಿಲ್ಲ. ಕಾಮಗಾರಿಗಳು ಅಪೂರ್ಣಗೊಂಡಿದ್ದು, ಯುಜಿಡಿ ಕಾಮಗಾರಿ ಸಹ ಸಮಪರ್ಕವಾಗಿ ನಡೆದಿಲ್ಲ. ಇದರಿಂದಾಗಿ ನಿವಾಸಿಗಳು ತೊಂದರೆ ಅನುಭವಿಸುವಂತಾಗಿದೆ. ಈ ಕುರಿತು ಹಲವಾರು ಬಾರಿ ಅಧಿಕಾರಿಗಳ ಗಮನಕ್ಕೆ ತಂದರೂ ಸಹ ಯಾವುದೇ ಪ್ರಯೋಜನವಾಗಿಲ್ಲ ಎಂದು ದೂರಿದರು. ಮೂಲ ಸೌಕರ್ಯಗಳನ್ನು ಸಮಪರ್ಕವಾಗಿ ಕಲ್ಪಿಸುವ ನಿಟ್ಟಿನಲ್ಲಿ ತಕ್ಷಣ ಕ್ರಮ ಕೈಗೊಳ್ಳುವಂತೆ ಸದಸ್ಯರು ಆಗ್ರಹಿಸಿದರು. 
    ನಗರಸಭೆಯಿಂದ ಪೂರೈಕೆ ಮಾಡುತ್ತಿರುವ ಕುಡಿಯುವ ನೀರು ಕಲುಷಿತವಾಗಿದ್ದು, ಈ ಕುರಿತು ನಿವಾಸಿಗಳಿಂದ ಸಾಕಷ್ಟು ದೂರುಗಳು ಬರುತ್ತಿವೆ. ಶುದ್ಧ ಕುಡಿಯುವ ನೀರು ಪೂರೈಕೆ ಮಾಡುವಂತೆ ಬಹುತೇಕ ಸದಸ್ಯರು ಆಗ್ರಹಿಸಿದರು. 
    ನಗರಸಭೆ ಸಾಮಾನ್ಯಸಭೆಗೆ  ಸರ್ಕಾರದ ಸಂಬಂಧಪಟ್ಟ ಎಲ್ಲಾ ಇಲಾಖೆಗಳ ಅಧಿಕಾರಿಗಳು ಕಡ್ಡಾಯವಾಗಿ ಹಾಜರಿರಬೇಕು. ಈ ನಿಟ್ಟಿನಲ್ಲಿ ಕಟ್ಟುನಿಟ್ಟಿನ ಕ್ರಮವಹಿಸುವಂತೆ ಸದಸ್ಯರು ಒತ್ತಾಯಿಸಿ ನಗರದ ಹೃದಯ ಭಾಗದಲ್ಲಿ ಹಾದು ಹೋಗಿರುವ  ಬಿ.ಎಚ್ ರಸ್ತೆಗೆ ಹುತ್ತಾ ಕಾಲೋನಿಯಿಂದ ಸಿ.ಎನ್ ರಸ್ತೆವರೆಗೂ ಹಲವು ವರ್ಷಗಳ ಹಿಂದೆಯೇ ಡಾ. ರಾಜ್‌ಕುಮಾರ್ ರಸ್ತೆ ಎಂದು ನಾಮಕರಣ ಮಾಡಲಾಗಿದ್ದರೂ ಸಹ ಎಲ್ಲೂ ಸಹ ಇದುವರೆಗೂ ನಾಮಫಲಕ ಅಳವಡಿಸಿಲ್ಲ. ಇದರಿಂದಾಗಿ ಸಾರ್ವಜನಿಕರು ಈ ರಸ್ತೆಯನ್ನು ರಾಜ್‌ಕುಮಾರ್ ರಸ್ತೆ ಎಂದು ಕರೆಯುತ್ತಿಲ್ಲ. ಇದು ಡಾ. ರಾಜ್‌ಕುಮಾರ್‌ರವರಿಗೆ ಮಾಡಿರುವ ಅಪಮಾನವಾಗಿದೆ. ಈ ಹಿನ್ನಲೆಯಲ್ಲಿ ತಕ್ಷಣ ನಾಮಫಲಕಗಳನ್ನು ಅಳವಡಿಸುವಂಗೆ ಆಗ್ರಹಿಸಿದರು.    
    ಸ್ಥಾಯಿ ಸಮಿತಿ ಅಧ್ಯಕ್ಷ ಕಾಂತರಾಜ್, ಪೌರಾಯುಕ್ತ ಪ್ರಕಾಶ್ ಎಂ ಚನ್ನಪ್ಪನವರ್ ಉಪಸ್ಥಿತರಿದ್ದರು. ನಗರಸಭೆ ಬಹುತೇಕ ಸದಸ್ಯರು, ಅಧಿಕಾರಿಗಳು, ಸಿಬ್ಬಂದಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು. 
    ಬೆಳಿಗ್ಗೆ ೧೧ ಗಂಟೆಗೆ ಆರಂಭಗೊಂಡ ಸಭೆಯಲ್ಲಿ ಮಧ್ಯಾಹ್ನ ೧.೩೦ರ ವರೆಗೆ ಕೇವಲ ಸಾಮಾನ್ಯ ಚರ್ಚೆಗಳು ನಡೆದವು. ಅಜೆಂಡಾದಲ್ಲಿರುವ ಪ್ರಸ್ತಾವನೆಗಳ ಕುರಿತು ಯಾವುದೇ ಚರ್ಚೆ ನಡೆಯಲಿಲ್ಲ. 

ಮಾಡೆಲ್ ಹೌಸಿಂಗ್ ಕೋ-ಆಪರೇಟಿವ್ ಸೊಸೈಟಿಗೆ ನೂತನ ನಿರ್ದೇಶಕರು

    ಭದ್ರಾವತಿ : ಹಳೇನಗರದ ಮಾಡೆಲ್ ಹೌಸಿಂಗ್ ಕೋ-ಆಪರೇಟಿವ್ ಸೊಸೈಟಿಗೆ ನೂತನವಾಗಿ ೧೨ ಮಂದಿ ನಿರ್ದೇಶಕರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ. 
    ಈ ಕುರಿತು ಡಿ.೨೪ರಂದು ಚುನಾವಣಾಧಿಕಾರಿ ಅವಿರೋಧ ಆಯ್ಕೆ ಘೋಷಿಸಿದ್ದಾರೆ. ಸಾಮಾನ್ಯ ಸ್ಥಾನದಿಂದ ಸಿದ್ಧಾರೂಢನಗರದ ನಿವಾಸಿ ವಿಶ್ವನಾಥ ಕೋಠಿ, ನ್ಯೂಕಾಲೋನಿ ನಿವಾಸಿ ಜಿ.ಟಿ ಬಸವರಾಜಪ್ಪ, ಹುತ್ತಾ ಕಾಲೋನಿ, ಸಹ್ಯಾದ್ರಿ ಬಡಾವಣೆ ನಿವಾಸಿ  ಕೆ.ಎನ್ ಭೈರಪ್ಪಗೌಡ, ಜನ್ನಾಪುರ ಮರಾಠ ಬೀದಿ ನಿವಾಸಿ ಟಿ.ಎನ್ ರಮೇಶ್, ಸಿದ್ಧಾರೂಢ ನಗರದ ನಿವಾಸಿ ಬಿ.ಪಿ ಶಂಕರ್, ಜನ್ನಾಪುರ ಕೆ.ಸಿ ರಸ್ತೆ ನಿವಾಸಿ ನರಸಿಂಹಸ್ವಾಮಿ ಮತ್ತು ಹೊಸಮನೆ ಮುಖ್ಯರಸ್ತೆ ವಿನಾಯಕ ಚಿತ್ರಮಂದಿರದ ಮುಂಭಾಗದ ನಿವಾಸಿ ಎಂ.ಎನ್ ಸತೀಶ್, ಪರಿಶಿಷ್ಟ ಜಾತಿ ಸ್ಥಾನದಿಂದ ಗೋಲ್ಡನ್ ಜ್ಯೂಬಿಲಿ ನಿವಾಸಿ ಎಂ. ನಾಗರಾಜ, ಪ್ರವರ್ಗ ಎ ಸ್ಥಾನದಿಂದ ಅಪ್ಪರ್ ಹುತ್ತಾ ನಿವಾಸಿ ಸಣ್ಣಯ್ಯ, ಪ್ರವರ್ಗ ಬಿ ಸ್ಥಾನದಿಂದ ತಾಲೂಕಿನ ಗೌರಾಪುರ ಗ್ರಾಮದ ನಿವಾಸಿ ಸಿ.ಆರ್ ಶಿವರಾಮು, ಮಹಿಳಾ ಮೀಸಲು ಸ್ಥಾನದಿಂದ ನ್ಯೂಕಾಲೋನಿ ನಿವಾಸಿ ಉಮಾ ರಮೇಶ್ ಹಾಗು ಜನ್ನಾಪುರ ನಿವಾಸಿ ಟಿ.ಎಸ್ ವಿಜಯಲಕ್ಷ್ಮಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. 

ಜೀವ ಸಂಜೀವಿನಿ ಸ್ವಯಂಪ್ರೇರಿತ ರಕ್ತ ಕೇಂದ್ರ ಉದ್ಘಾಟನೆ

ಭದ್ರಾವತಿ ನಗರದ ಬಿ.ಎಚ್ ರಸ್ತೆ, ಎಸ್.ಎಸ್ ಕಾಂಪ್ಲೆಕ್ಸ್(ನಮ್ಮ ಬಜಾರ್) ಮೊದಲನೇ ಮಹಡಿಯಲ್ಲಿ ನೂತನವಾಗಿ ಆರಂಭಗೊಂಡಿರುವ ಜೀವ ಸಂಜೀವಿನಿ ಸ್ವಯಂಪ್ರೇರಿತ ರಕ್ತ ಕೇಂದ್ರ ಗುರುವಾರ ಸಾಣೇಹಳ್ಳಿ ತರಳಬಾಳು ಶಾಖಾ ಮಠದ ಶ್ರೀ ಡಾ. ಪಂಡಿತರಾಧ್ಯ ಶಿವಾಚಾರ್ಯ ಸ್ವಾಮೀಜಿ ಉದ್ಘಾಟಿಸಿದರು. 
    ಭದ್ರಾವತಿ : ನಗರದ ಬಿ.ಎಚ್ ರಸ್ತೆ, ಎಸ್.ಎಸ್ ಕಾಂಪ್ಲೆಕ್ಸ್(ನಮ್ಮ ಬಜಾರ್) ಮೊದಲನೇ ಮಹಡಿಯಲ್ಲಿ ನೂತನವಾಗಿ ಆರಂಭಗೊಂಡಿರುವ ಜೀವ ಸಂಜೀವಿನಿ ಸ್ವಯಂಪ್ರೇರಿತ ರಕ್ತ ಕೇಂದ್ರ ಗುರುವಾರ ಸಾಣೇಹಳ್ಳಿ ತರಳಬಾಳು ಶಾಖಾ ಮಠದ ಶ್ರೀ ಡಾ. ಪಂಡಿತರಾಧ್ಯ ಶಿವಾಚಾರ್ಯ ಸ್ವಾಮೀಜಿ ಉದ್ಘಾಟಿಸಿದರು. 
    ನಗರದಲ್ಲಿ ತುರ್ತು ಸಂದರ್ಭದಲ್ಲಿ ರಕ್ತ ಕೇಂದ್ರದ ಅವಶ್ಯಕತೆ ಇದ್ದು, ಪ್ರಸ್ತುತ ಶಿವಮೊಗ್ಗದಲ್ಲಿರುವ ವಿವಿಧ ರಕ್ತ ನಿಧಿ ಕೇಂದ್ರಗಳಿಂದ ತುರ್ತು ಸಂದರ್ಭದಲ್ಲಿ ರಕ್ತ ಪೂರೈಕೆ ಮಾಡಿಕೊಳ್ಳಲಾಗುತ್ತಿದೆ. ಇದೀಗ ಸಿರಿ ವೆಲ್‌ಫೇರ್ ಫೌಂಡೇಷನ್‌ರವರು ರಕ್ತ ಕೇಂದ್ರದ ಘಟಕ ಆರಂಭಿಸಿದ್ದು, ರಕ್ತ ಮತ್ತು ರಕ್ತದ ಅಂಶಗಳು ಸುಲಭವಾಗಿ ಲಭ್ಯವಾಗಲಿವೆ. 


    ಶಿವಮೊಗ್ಗ-ಚಿಕ್ಕಮಗಳೂರು ಬಸವಕೇಂದ್ರದ ಶ್ರೀ ಬಸವ ಮರುಳಸಿದ್ದಸ್ವಾಮೀಜಿ, ಮುಸ್ಲಿಂ ಧರ್ಮಗುರು ಶಾಹುಲ್ ಹಮೀದ್ ಮಡಾಡಿ, ನಗರಸಭೆ ಸದಸ್ಯರಾದ ಬಿ.ಕೆ ಮೋಹನ್, ಬಷೀರ್ ಅಹಮದ್, ತಾಲೂಕು ಬಗರ್‌ಹುಕುಂ ಸಮಿತಿ ಅಧ್ಯಕ್ಷ ಎಸ್. ಮಣಿಶೇಖರ್, ಎಸ್.ಎಸ್ ಕಾಂಪ್ಲೆಕ್ಸ್ ಮಾಲೀಕ ಶಶಿಕುಮಾರ್, ಮುಖಂಡರಾದ ಜೆಬಿಟಿ ಬಾಬು, ಕೇಸರಿಪಡೆ ಗಿರೀಶ್ ಹಾಗು ರಕ್ತ ಕೇಂದ್ರದ ಪ್ರಮುಖರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.  ಉದ್ಘಾಟನೆ ಅಂಗವಾಗಿ ರಕ್ತದಾನ ಶಿಬಿರ ಆಯೋಜಿಸಲಾಗಿತ್ತು.