Friday, January 10, 2025

ನಮ್ಮ ನಾಡು, ನುಡಿ ಉಳಿವಿಗೆ ಬದ್ಧರಾಗಿ : ಮನಿಷ್ ಪಿ ಯಾದವ್

ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಭದ್ರಾವತಿ ತಾಲೂಕು ಘಟಕ, ಎಸ್‌ಎವಿ ಶಾಲೆಗಳು ಮತ್ತು ಕಾಲೇಜು, ಶಿಕ್ಷಣ ಇಲಾಖೆ ಸಹಯೋಗದೊಂದಿಗೆ ಗುರುವಾರ ನ್ಯೂಟೌನ್ ಆದಿಚುಂಚನಗಿರಿ ಶಾಲಾ ಆವರಣದಲ್ಲಿ ಆಯೋಜಿಸಲಾಗಿದ್ದ ತಾಲೂಕು ೧೧ನೇ ಮಕ್ಕಳ ಸಾಹಿತ್ಯ ಸಮ್ಮೇಳನ ನ್ಯೂಟೌನ್ ಅದಿಚುಂಚನಗಿರಿ ವಿದ್ಯಾಸಂಸ್ಥೆ ಪ್ರೌಢಶಾಲೆ ವಿದ್ಯಾರ್ಥಿ ಮನಿಷ್ ಪಿ ಯಾದವ್ ಉದ್ಘಾಟಿಸಿದರು. 
    ಭದ್ರಾವತಿ : ನಮ್ಮ ನಾಡು, ನುಡಿ ಉಳಿವಿಗೆ ನಾವುಗಳು ಬದ್ಧರಾಗಬೇಕು. ನಮ್ಮ ನಿರ್ಲಕ್ಷ್ಯದಿಂದ ನಮ್ಮ ಕನ್ನಡ ತಾಯಿ ಎಂದಿಗೂ ಸಾಯುವಂತಾಗಬಾರದು ಎಂದು ನಗರದ ನ್ಯೂಟೌನ್ ಅದಿಚುಂಚನಗಿರಿ ವಿದ್ಯಾಸಂಸ್ಥೆ ಪ್ರೌಢಶಾಲೆ ವಿದ್ಯಾರ್ಥಿ ಮನಿಷ್ ಪಿ ಯಾದವ್ ಹೇಳಿದರು. 
    ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ತಾಲೂಕು ಘಟಕ, ಎಸ್‌ಎವಿ ಶಾಲೆಗಳು ಮತ್ತು ಕಾಲೇಜು, ಶಿಕ್ಷಣ ಇಲಾಖೆ ಸಹಯೋಗದೊಂದಿಗೆ ಗುರುವಾರ ನ್ಯೂಟೌನ್ ಆದಿಚುಂಚನಗಿರಿ ಶಾಲಾ ಆವರಣದಲ್ಲಿ ಆಯೋಜಿಸಲಾಗಿದ್ದ ತಾಲೂಕು ೧೧ನೇ ಮಕ್ಕಳ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು. 
    ಕನ್ನಡ ನಾಡು, ನುಡಿಯನ್ನು ಕನ್ನಡ ತಾಯಿಯ ಮಕ್ಕಳಾದ ನಾವುಗಳು ಉಳಿಸಿ ಬೆಳೆಸಬೇಕು. ಈ ನಮ್ಮ ಕನ್ನಡ ನಾಡು ಶೈವ, ವೈಷ್ಣವ, ಜೈನ, ಬೌದ್ಧ, ಇಸ್ಲಾಂ, ಕ್ರೈಸ್ತ ಸೇರಿ ಹಲವಾರು ಧರ್ಮಗಳಿಗೆ ಆಶ್ರಯ ನೀಡಿದೆ.  ಪಂಪ, ರನ್ನ, ಬಸವಾದಿ ಶರಣರು, ದಾಸಶ್ರೇಷ್ಠರು, ಹರಿಹರ, ರಾಘವಾಂಕ, ಕುವೆಂಪು, ಬೇಂದ್ರೆ, ಜಿ.ಎಸ್ ಶಿವರುದ್ರಪ್ಪ, ಚಿನ್ನವೀರ ಕಣವಿ ಸೇರಿದಂತೆ ಸಾವಿರಾರು ಕವಿಗಳು, ಸಾಹಿತಿಗಳು ಕನ್ನಡ ಭಾಷೆಯನ್ನು ಸಮೃದ್ಧಿಗೊಳಿಸಿದ್ದಾರೆ ಎಂದರು. 
    ತಮಿಳು ಭಾಷೆಯು ದ್ರಾವಿಡ ಭಾಷೆಯಿಂದ ಬೇರ್ಪಟ್ಟ ಸಮಯದಲ್ಲಿಯೇ ಕನ್ನಡವೂ ಕೂಡ ಆಡುಭಾಷೆಯಾಗಿ ಬೇರ್ಪಟ್ಟು ೫ನೇ ಶತಮಾನದ ಹಲ್ಮಿಡಿ ಶಾಸನದ ಸಮಯಕ್ಕಾಗಲೇ ಸಾಕಷ್ಟು ಅಭಿವೃದ್ಧಿ ಹೊಂದಿತ್ತು ಎಂದರು.
    ಗಂಗ, ಕದಂಬ, ಚಾಲುಕ್ಯ, ಹೊಯ್ಸಳರು ಈ ಮುಂತಾದ ರಾಜವಂಶದವರು ಕನ್ನಡನಾಡಿನಲ್ಲಿ ಅಳ್ವಿಕೆ ನಡೆಸಿ, ರಾಷ್ಟ್ರದಲ್ಲಿ ಇತಿಹಾಸದಲ್ಲಿ ತಮ್ಮ ಕೀರ್ತಿಗಾಥೆಯನ್ನು ಸುವರ್ಣಾಕ್ಷರಗಳಿಂದ ದಾಖಲಿಸಿದ್ದಾರೆ. ಬೇಲೂರು, ಹಳೆಬೀಡು, ಹಂಪಿ, ಬಾದಾಮಿ ಸೇರಿ ಇನ್ನಿತರ ಸ್ಥಳಗಳು ನಮ್ಮ ಇತಿಹಾಸ, ಪರಂಪರೆಗೆ ಸಾಕ್ಷಿಯಾಗಿವೆ ಎಂದರು. 
    ಸಮ್ಮೇಳನದ ಸರ್ವಾಧ್ಯಕ್ಷೆ  ನಗರದ ಪೂರ್ಣಪ್ರಜ್ಞ ವಿದ್ಯಾಸಂಸ್ಥೆ ವಿದ್ಯಾರ್ಥಿನಿ ಜಿ.ಲಿಖಿತಾ ಮಾತನಾಡಿ, ನಾವು ಜ್ಞಾನಕ್ಕಾಗಿ, ತಿಳಿವಳಿಕೆಗಾಗಿ, ವ್ಯವಹಾರಕ್ಕೆ ಯಾವುದೇ ಭಾಷೆಯನ್ನು ಕಲಿತರೂ ನಮ್ಮ ಆಡುಭಾಷೆ ಕನ್ನಡವಾಗಿರಬೇಕು, ಮಾತೃಭಾಷೆಗೆ ಹೆಚ್ಚಿನ ಆದ್ಯತೆ ಕೊಡಬೇಕು ಎಂದರು. 
    ಜಿಲ್ಲೆಯು ಸಾಂಸ್ಕೃತಿಕ, ಸಾಹಿತ್ಯಿಕವಾಗಿಯೂ ಮಂಚೂಣಿಯಲ್ಲಿದೆ. ಮೊದಲ ಜ್ಞಾನಪೀಠ ಪ್ರಶಸ್ತಿ ಪಡೆದ ಕುವೆಂಪು ಹಾಗೂ ರಾಷ್ಟ್ರಕವಿ ಜಿ.ಎಸ್ ಶಿವರುದ್ರಪ್ಪ ನಮ್ಮ ಜಿಲ್ಲೆಯವರೇ ಎಂಬುದು ನಮ್ಮ ಹೆಮ್ಮೆ. ೮ ಜ್ಞಾನಪೀಠ ಪ್ರಶಸ್ತಿಗಳನ್ನು ತಂದುಕೊಟ್ಟ ಈ ಸುಂದರವಾದ ಕನ್ನಡ ಭಾಷೆಯನ್ನು ಉಳಿಸಿ, ಬೆಳೆಸುವುದು ನಮ್ಮೆಲ್ಲರ ಹೊಣೆ ಎಂದರು. 
    ಕಸಾಪ ಜಿಲ್ಲಾಧ್ಯಕ್ಷ ಡಿ.ಮಂಜುನಾಥ್, ಸಾಹಿತ್ಯ ಎಲ್ಲರಿಗೂ ಒಲಿಯುವುದಿಲ್ಲ. ಸಾಹಿತ್ಯದ ಓದು ಹಾಗೂ ಅರಿವಿನ ಪ್ರಜ್ಞೆ ಇದ್ದವರಿಗೆ ಮಾತ್ರ ಒಲಿಯುತ್ತದೆ. ಸಾಹಿತ್ಯವನ್ನು ಬಿತ್ತುವ ಕೆಲಸವನ್ನು ಕಸಾಪ ಕಾವ್ಯ, ಕಮ್ಮಟ, ಸಮ್ಮೇಳನಗಳು ಸೇರಿದಂತೆ ಇನ್ನಿತರ ಕಾರ್ಯಕ್ರಮಗಳ ಮೂಲಕ ಮಾಡುತ್ತಿದೆ. ಪ್ರತಿಭೆ ಯಾರ ಸ್ವತ್ತೂ ಅಲ್ಲ. ಪ್ರತಿಭೆಯನ್ನು ಹೊರತೆಗೆಯುವ ಕೆಲಸ ನಾವೆಲ್ಲರೂ ಒಟ್ಟಾಗಿ ಮಾಡಬೇಕು. ಯುನೆಸ್ಕೋ ವರದಿಯಂತೆ ದೇಶದಲ್ಲಿ ೮ ಸಾವಿರ ಭಾಷೆಗಳಿದ್ದು, ಎಲ್ಲವೂ ಉಳಿಯಬೇಕು. ಯಾವುದೂ ಸಾಯಬಾರದು ಎಂದರು. 
    ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ತಾಲೂಕು ಅಧ್ಯಕ್ಷ ಎಂ.ಎಸ್.ಸುಧಾಮಣಿ, ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ ನಾಗೇಂದ್ರಪ್ಪ, ಕಸಾಪ ತಾಲೂಕು ಅಧ್ಯಕ್ಷ ಕೋಡ್ಲು ಯಜ್ಜಯ್ಯ, ಉದ್ಯಮಿ ಬಿ.ಕೆ. ಜಗನ್ನಾಥ್, ಶಾಲಾ ಮುಖ್ಯಶಿಕ್ಷಕಿ ಕೋಮಲಾ, ಕೋಗಲೂರು ತಿಪ್ಪೇಸ್ವಾಮಿ, ಎಂ.ಆರ್. ರೇವಣಪ್ಪ, ಶಿಕ್ಷಕಿ ಗೀತಾ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ವಿವಿಧ ಶಾಲಾ ವಿದ್ಯಾರ್ಥಿಗಳಿಂದ ಕವಿಗೋಷ್ಠಿ, ಕಥಾಗೋಷ್ಠಿ ಹಾಗೂ ಪ್ರಚಲಿತ ವಿದ್ಯಮಾನಗಳ ಕುರಿತು ಗೋಷ್ಠಿಗಳು ಜರುಗಿದವು. 

ಶ್ರೀ ಕ್ಷೇತ್ರ ನಾಗರಕಟ್ಟೆಯಲ್ಲಿ ವೈಕುಂಠ ಏಕಾದಶಿ-ಸಹಸ್ರ ದೀಪೋತ್ಸವ


ಭದ್ರಾವತಿ ಕಾಗದನಗರ ೭ನೇ ವಾರ್ಡ್ ಶ್ರೀ ಕ್ಷೇತ್ರ ನಾಗರಕಟ್ಟೆಯಲ್ಲಿ ತಾಲೂಕು ವೈಷ್ಣವ ಪರಿಷತ್ ವತಿಯಿಂದ ಶುಕ್ರವಾರ ವೈಕುಂಠ ಏಕಾದಶಿ ಹಾಗು ಸಹಸ್ರ ದೀಪೋತ್ಸವ ಜರುಗಿತು. ಶ್ರೀಕ್ಷೇತ್ರದ ಪ್ರಧಾನ ಅರ್ಚಕ ರಮೇಶ್ ಭಟ್ಟರು ತರಳಿಮಠ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. 
    ಭದ್ರಾವತಿ : ಕಾಗದನಗರ ೭ನೇ ವಾರ್ಡ್ ಶ್ರೀ ಕ್ಷೇತ್ರ ನಾಗರಕಟ್ಟೆಯಲ್ಲಿ ತಾಲೂಕು ವೈಷ್ಣವ ಪರಿಷತ್ ವತಿಯಿಂದ ಶುಕ್ರವಾರ ವೈಕುಂಠ ಏಕಾದಶಿ ಹಾಗು ಸಹಸ್ರ ದೀಪೋತ್ಸವ ಜರುಗಿತು. 
    ಭಕ್ತರಿಗೆ ಬೆಳಿಗ್ಗೆ ೬ ಗಂಟೆಯಿಂದ ವೈಕುಂಠನಾಥ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗಿತ್ತು.  ನಂತರ ಪಲ್ಲಕ್ಕಿ ಉತ್ಸವ ಮತ್ತು ಸಂಜೆ ವೆಂಕಟೇಶ್ವರ ಸ್ವಾಮಿಯವರಿಗೆ ದಾಸನ ಸೇವೆ ಹಾಗು ದೀಪೋತ್ಸವ ಜರುಗಿತು. ಶ್ರೀಕ್ಷೇತ್ರದ ಪ್ರಧಾನ ಅರ್ಚಕ ರಮೇಶ್ ಭಟ್ಟರು ತರಳಿಮಠರವರ ನೇತೃತ್ವದಲ್ಲಿ ಧಾರ್ಮಿಕ ಆಚರಣೆಗಳು ಜರುಗಿದವು. ಸ್ಥಳೀಯ ಮುಖಂಡರು, ಸುತ್ತಮುತ್ತಲ ಪ್ರದೇಶಗಳ ಭಕ್ತರು ಪಾಲ್ಗೊಂಡಿದ್ದರು. 
    ಸಂಕಷ್ಟದ ನಡುವೆಯೂ ಅದ್ದೂರಿ ಆಚರಣೆ : 
    ಕಾರ್ಖಾನೆ ಸ್ಥಗಿತಗೊಂಡು ಸುಮಾರು ೯ ವರ್ಷಗಳು ಕಳೆದಿದ್ದು, ಕಾಗದನಗರ ಸಂಪೂರ್ಣ ತನ್ನ ಅಸ್ತಿತ್ವ ಕಳೆದುಕೊಂಡಿದೆ. ಕಾರ್ಮಿಕರ ವಸತಿ ಗೃಹಗಳು ಪಾಳು ಬಿದ್ದಿವೆ. ಈ ಭಾಗದಲ್ಲಿ ಸ್ಮಶಾನ ಮೌನ ಆವರಿಸಿಕೊಂಡಿದೆ. ಇಂತಹ ಸ್ಥಳದಲ್ಲಿರುವ ೭ನೇ ವಾರ್ಡ್ ಶ್ರೀ ಕ್ಷೇತ್ರ ನಾಗರಕಟ್ಟೆಯಲ್ಲಿ ಈ ಬಾರಿ ಸಹ ವಿಜೃಂಭಣೆಯಿಂದ ವೈಕುಂಠ ಏಕಾದಶಿ ಹಾಗು ಸಹಸ್ರ ದೀಪೋತ್ಸವ ಆಚರಿಸಲಾಯಿತು. 


ಭಕ್ತರ ಮನಸೂರೆಗೊಂಡ ವೈಕುಂಠನಾಥನ ದರ್ಶನ

ಭದ್ರಾವತಿ ಹಳೇನಗರದ ಪುರಾಣ ಪ್ರಸಿದ್ದ, ಕ್ಷೇತ್ರಪಾಲಕ ಶ್ರೀ ಲಕ್ಷ್ಮೀನರಸಿಂಹ ಸ್ವಾಮಿ ದೇವಸ್ಥಾನದಲ್ಲಿ ಶುಕ್ರವಾರ ವೈಕುಂಠ ಏಕಾದಶಿ ಪ್ರಯುಕ್ತ ಜರುಗಿದ ವೈಕುಂಠನಾಥನ ದರ್ಶನ ಭಕ್ತರ ಮನಸೂರೆಗೊಳಿಸಿತು. 
     ಭದ್ರಾವತಿ : ಹಳೇನಗರದ ಪುರಾಣ ಪ್ರಸಿದ್ದ, ಕ್ಷೇತ್ರಪಾಲಕ ಶ್ರೀ ಲಕ್ಷ್ಮೀನರಸಿಂಹ ಸ್ವಾಮಿ ದೇವಸ್ಥಾನದಲ್ಲಿ ಶುಕ್ರವಾರ ವೈಕುಂಠ ಏಕಾದಶಿ ಪ್ರಯುಕ್ತ ಜರುಗಿದ ವೈಕುಂಠನಾಥನ ದರ್ಶನ ಭಕ್ತರ ಮನಸೂರೆಗೊಳಿಸಿತು. 
    ದೇವಸ್ಥಾನದ ಆವರಣದಲ್ಲಿ ಬೆಳಿಗ್ಗೆ ೪.೩೦ಕ್ಕೆ ಶ್ರೀ ಸ್ವಾಮಿಯ ಉತ್ಸವ ನಡೆಯಿತು. ಉತ್ಸವ ಮೂರ್ತಿಯನ್ನು ವೈಕುಂಠ ಮಂಟಪದಲ್ಲಿನ ಜೋಕಾಲಿಯಲ್ಲಿ ಪ್ರತಿಷ್ಠಾಪಿಸಲಾಯಿತು. ನಂತರ ಶ್ರೀ ಗೋದಾದೇವಿ ಅಮ್ಮನವರ ಕಾರ್ಯಕ್ರಮ ಜರುಗಿತು. ಕಾರ್ಯಕ್ರಮದಲ್ಲಿ ಮಹಿಳೆಯರು, ಮಕ್ಕಳು ಹಾಗು ವಿದ್ಯಾರ್ಥಿಗಳಿಂದ ಕೋಲಾಟ ನೃತ್ಯ ನಡೆಯಿತು. ಅನಾಗ ಕಲಾನಿಧಿ ಶ್ರೀ ಮೈತಿಲಿ ಶ್ರೀನಿವಾಸ್‌ರವರ ತಂಡದಿಂದ ಸಹ ಕಾರ್ಯಕ್ರಮ ಜರುಗಿತು. 
    ದೇವಸ್ಥಾನದ ಪ್ರಧಾನ ಅರ್ಚಕ ಶ್ರೀ ರಂಗನಾಥಶರ್ಮ ಹಾಗು ಸಹಾಯಕ ಅರ್ಚಕ ಎಸ್. ಶ್ರೀನಿವಾಸನ್‌ರವರ ನೇತೃತ್ವದಲ್ಲಿ ಧಾರ್ಮಿಕ ಆಚರಣೆಗಳು ಜರುಗಿದವು. ತಾಲೂಕು ಮುಜರಾಯಿ ಅಧಿಕಾರಿಯಾಗಿರುವ ತಹಸೀಲ್ದಾರ್ ಕೆ. ಪರುಸಪ್ಪ, ದೇವಸ್ಥಾನದ ಆಡಳಿತಾಧಿಕಾರಿ ಕೆ.ಆರ್ ಪ್ರಶಾಂತ್, ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಜಿ. ರಮಾಕಾಂತ(ಪುಟ್ಟಣ್ಣ), ಮಲ್ಲಿಕಾರ್ಜುನ್, ನಾಗಣ್ಣ, ಕೃಷ್ಣಪ್ಪ, ಶ್ರೀಕಾಂತ್, ಶರತ್, ಸತೀಶ್ ಅಯ್ಯರ್, ಶ್ರೀವತ್ಸ ಮತ್ತುನರಸಿಂಹಾಚಾರ್ ಹಾಗು ವೇದ ಪಾಠ ಶಾಲೆಯ ವಿದ್ಯಾರ್ಥಿಗಳು ಹಾಗೂ ವಿಷ್ಣು ಸಹಸ್ರನಾಮ ಮಹಿಳಾ ಮಂಡಳಿ ಹಾಗೂ ಲಕ್ಷ್ಮೀನರಸಿಂಹ ಸ್ವಾಮಿಯ ಭಜನಾ ಮಂಡಳಿಯವರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. 

Thursday, January 9, 2025

ಉಕ್ಕಿನ ನಗರದ ವಿವಿಧೆಡೆ ವೈಕುಂಠನಾಥನ ದರ್ಶನಕ್ಕೆ ಸಕಲ ಸಿದ್ದತೆ

ಭದ್ರಾವತಿ : ಹಳೇನಗರದ ಪುರಾಣ ಪ್ರಸಿದ್ದ, ಕ್ಷೇತ್ರಪಾಲಕ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ದೇವಾಸ್ಥಾನ, ಕಾಗದನಗರ ೭ನೇ ವಾರ್ಡ್ ಶ್ರೀ ಕ್ಷೇತ್ರ ನಾಗರಕಟ್ಟೆ ಹಾಗು ಮಿಲ್ಟ್ರಿಕ್ಯಾಂಪ್ ಶ್ರೀನಿವಾಸ ಸ್ವಾಮಿ ದೇವಸ್ಥಾನ ಸೇರಿದಂತೆ ವಿವಿಧೆಡೆ ದೇವಸ್ಥಾನಗಳಲ್ಲಿ ವೈಕುಂಠ ಏಕಾದಶಿ ಆಚರಣೆಗೆ ಸಕಲ ಸಿದ್ದತೆಗಳನ್ನು ಕೈಗೊಳ್ಳಲಾಗಿದೆ.
    ಬಹುತೇಕ ದೇವಸ್ಥಾನಗಳಲ್ಲಿ ಬೆಳಿಗ್ಗೆ ೪.೩೦ರಿಂದಲೇ ಶ್ರೀ ವೈಕುಂಠನಾಥನ ದರ್ಶನ ಆರಂಭಗೊಳ್ಳಲಿದ್ದು, ಪ್ರತಿ ವರ್ಷದಂತೆ ಈ ಬಾರಿ ಸಹ ಮುಜರಾಯಿ ಇಲಾಖೆಗೆ ಸೇರಿರುವ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ದೇವಸ್ಥಾನದಲ್ಲಿ ವೈಕುಂಠ ಏಕಾದಶಿ ಅದ್ದೂರಿ ಆಚರಣೆಗೆ ಸಕಲ ಸಿದ್ದತೆಗಳನ್ನು ಕೈಗೊಳ್ಳಲಾಗಿದೆ. ಪ್ರತಿ ವರ್ಷ ನಿರೀಕ್ಷೆಗೂ ಮೀರಿ ಭಕ್ತರು ಪಾಲ್ಗೊಳ್ಳುತ್ತಿದ್ದು, ಜ.೧೦ ಮತ್ತು ೧೧ ಎರಡು ದಿನಗಳ ಕಾಲ ಧಾರ್ಮಿಕ ಆಚರಣೆಗಳು ಜರುಗಲಿವೆ. 
    ಬೆಳಿಗ್ಗೆ ೪.೩೦ಕ್ಕೆ ಪ್ರಾಕಾರ ಉತ್ಸವ, ಪರಮಪದ ಮಹಾದ್ವಾರದ ಪೂಜೆ, ಶ್ರೀ ವೈಕುಂಠನಾಥನ ದರ್ಶನ ನಂತರ ಶ್ರೀ ಗೋದಾದೇವಿ ಅಮ್ಮನವರ ಉತ್ಸವದೊಂದಿಗೆ ನಗರದ ಎಲ್ಲಾ ಭಜನಾ ಮಂಡಳಿಯವರಿಂದ ನಗರ ಸಂಕೀರ್ತನೆ ಹಾಗು ಜ.೧೧ರಂದು ಬೆಳಿಗ್ಗೆ ೪.೩೦ಕ್ಕೆ ನಿತ್ಯಪೂಜೆ, ಮಹಾಮಂಗಳಾರತಿ, ಸಂಜೆ ೬ಕ್ಕೆ ಮುಕ್ಕೋಟಿ ದ್ವಾದಶಿ ಪ್ರಯುಕ್ತ ರಥಬೀದಿಯಲ್ಲಿ ಶ್ರೀ ಸ್ವಾಮಿಯವರ ಉತ್ಸವ ಶ್ರೀ ವೈಕುಂಠನಾಥನ ದರ್ಶನ ಸೇರಿದಂತೆ ಇನ್ನಿತರ ಧಾರ್ಮಿಕ ಆಚರಣೆಗಳು ಜರುಗಲಿವೆ. 
ಮಿಲ್ಟ್ರಿಕ್ಯಾಂಪ್ ಶ್ರೀ ಶ್ರೀನಿವಾಸ ಸ್ವಾಮಿ ದೇವಸ್ಥಾನದಲ್ಲಿ ಪ್ರತಿವರ್ಷದಂತೆ ಈ ಬಾರಿ ಸಹ ವೈಕುಂಠ ಏಕಾದಶಿ ಹಮ್ಮಿಕೊಳ್ಳಲಾಗಿದ್ದು, ಬೆಳಿಗ್ಗೆ ೫ ಗಂಟೆಯಿಂದ ವೈಕುಂಠನಾಥ ದರ್ಶನ ನಡೆಯಲಿದೆ. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸುವಂತೆ ಕೋರಲಾಗಿದೆ. 
    ಕಾಗದನಗರ ೭ನೇ ವಾರ್ಡ್ ಶ್ರೀ ಕ್ಷೇತ್ರ ನಾಗರಕಟ್ಟೆಯಲ್ಲಿ ತಾಲೂಕು ವೈಷ್ಣವ ಪರಿಷತ್ ವತಿಯಿಂದ ವೈಕುಂಠ ಏಕಾದಶಿ ಹಾಗು ಸಹಸ್ರ ದೀಪೋತ್ಸವ ಹಮ್ಮಿಕೊಳ್ಳಲಾಗಿದೆ. ಬೆಳಿಗ್ಗೆ ೬ ಗಂಟೆಯಿಂದ ವೈಕುಂಠನಾಥ ದರ್ಶನ, ೧೦ ಗಂಟೆಯಿಂದ ಪಲ್ಲಕ್ಕಿ ಉತ್ಸವ ಮತ್ತು ಸಂಜೆ ೫.೩೦ಕ್ಕೆ ವೆಂಕಟೇಶ್ವರ ಸ್ವಾಮಿಯವರಿಗೆ  ದಾಸನ ಸೇವೆ ಹಾಗು ಸಂಜೆ ೬.೩೦ರಿಂದ ದೀಪೋತ್ಸವ ನಡೆಯಲಿದೆ. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸುವಂತೆ ಶ್ರೀಕ್ಷೇತ್ರದ ಪ್ರಧಾನ ಅರ್ಚಕ ರಮೇಶ್ ಭಟ್ಟರು ತರಳಿಮಠ ಕೋರಿದ್ದಾರೆ.
    ಬಿ.ಎಚ್ ರಸ್ತೆ, ಹುತ್ತಾಕಾಲೋನಿ, ಶ್ರೀ ತಿರುಮಲ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಪ್ರತಿವರ್ಷದಂತೆ ಈ ಬಾರಿ ವಿಜೃಂಭಣೆಯಿಂದ ವೈಕುಂಠ ಏಕಾದಶಿ ಆಚರಿಸಲಾಗುತ್ತಿದ್ದು, ಭಕ್ತರಿಗೆ ವೈಕುಂಠನಾಥನ ದರ್ಶನ ಪಡೆಯಲು ಸಕಲ ಸಿದ್ದತೆಗಳನ್ನು ದೇವಸ್ಥಾನ ಆಡಳಿತ ಮಂಡಳಿ ಕೈಗೊಂಡಿದೆ.

ಕುಡಿಯುವ ನೀರಿನ ಯೋಜನೆ ಗುದ್ದಲಿ ಪೂಜೆ, ಉದ್ಘಾಟನೆ ನೆರವೇರಿಸಿ

ಭದ್ರಾವತಿ ತಾಲೂಕಿನ ವಿವಿಧ ಗ್ರಾಮಪಂಚಾಯತಿ ವ್ಯಾಪ್ತಿಯಲ್ಲಿ ಶಿಷ್ಟಾಚಾರ ಪಾಲನೆ ಪ್ರಕಾರ ಗ್ರಾಮೀಣ ಕುಡಿಯುವ ನೀರಿನ ಯೋಜನೆಯ ಗುದ್ದಲಿಪೂಜೆ ಹಾಗೂ ಉದ್ಘಾಟನೆ ಕಾರ್ಯಗಳನ್ನು ನೆರವೇರಿಸುವಂತೆ ಆಗ್ರಹಿಸಿ ನಗರದ ಡಿ. ದೇವರಾಜ ಅರಸು ಜನಸ್ಪಂದನ ಸೇವಾ ಟ್ರಸ್ಟ್ ವತಿಯಿಂದ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎನ್. ಹೇಮಂತ್‌ರವರಿಗೆ ಮನವಿ ಸಲ್ಲಿಸಲಾಗಿದೆ. 
    ಭದ್ರಾವತಿ :  ತಾಲೂಕಿನ ವಿವಿಧ ಗ್ರಾಮಪಂಚಾಯತಿ ವ್ಯಾಪ್ತಿಯಲ್ಲಿ ಶಿಷ್ಟಾಚಾರ ಪಾಲನೆ ಪ್ರಕಾರ ಗ್ರಾಮೀಣ ಕುಡಿಯುವ ನೀರಿನ ಯೋಜನೆಯ ಗುದ್ದಲಿಪೂಜೆ ಹಾಗೂ ಉದ್ಘಾಟನೆ ಕಾರ್ಯಗಳನ್ನು ನೆರವೇರಿಸುವಂತೆ ಆಗ್ರಹಿಸಿ ನಗರದ ಡಿ. ದೇವರಾಜ ಅರಸು ಜನಸ್ಪಂದನ ಸೇವಾ ಟ್ರಸ್ಟ್ ವತಿಯಿಂದ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎನ್. ಹೇಮಂತ್‌ರವರಿಗೆ ಮನವಿ ಸಲ್ಲಿಸಲಾಗಿದೆ. 
    ಭದ್ರಾವತಿ ಹಾಗೂ ಶಿವಮೊಗ್ಗ ಗ್ರಾಮಾಂತರ ಪ್ರದೇಶ ವ್ಯಾಪ್ತಿಯ ಉಂಬ್ಳೆಬೈಲು ಹಾಗೂ ಕಲ್ಲಹಳ್ಳಿ ಗ್ರಾಮಪಂಚಾಯತಿ ಮತ್ತು ೨೮ ಹಳ್ಳಿಗಳಲ್ಲಿ ಹಾಗೂ ಸಿಂಗನಮನೆ ಗ್ರಾಮಪಂಚಾಯತಿ ವ್ಯಾಪ್ತಿಯ ಹಳ್ಳಿಗಳಲ್ಲಿ, ಮಾರಶೆಟ್ಟಿಹಳ್ಳಿ ಗ್ರಾಮಪಂಚಾಯತಿ ವ್ಯಾಪ್ತಿಯ ಮತ್ತು ೨೩ ಹಳ್ಳಿಗಳಲ್ಲಿ, ಆನವೇರಿ ಗ್ರಾಮಪಂಚಾಯತಿ ಮತ್ತು ೩೭ ಹಳ್ಳಿಗಳಲ್ಲಿ ಕುಂಸಿ ಮತ್ತು ಗಾಜನೂರು ಗ್ರಾಮಪಂಚಾಯತಿ ಮತ್ತು ೮೯ ಹಳ್ಳಿಗಳಲ್ಲಿ ಬಹುಗ್ರಾಮ ಕುಡಿಯುವ ಯೋಜನೆಯ ನೀರಿನ ಟೆಂಡರ್ ಪ್ರಕ್ರಿಯೆ ಈಗಾಗಲೇ ಮುಗಿದಿರುವುದರಿಂದ ಶಿಷ್ಟಾಚಾರ ಪಾಲನೆ  ಪ್ರಕಾರ ಗುದ್ದಲಿ ಪೂಜೆ ಕಾರ್ಯಕ್ರಮ ಕೈಗೆತ್ತಿಕೊಳ್ಳಲು ಸಂಬಂಧಪಟ್ಟವರಿಗೆ ಸೂಕ್ತ ನಿರ್ದೇಶನ ನೀಡುವಂತೆ ಕೋರಲಾಗಿದೆ. 
      ಅಂತರಗಂಗೆ ಮತ್ತು ೨೧ ಹಳ್ಳಿಗಳಿಗೆ, ದೊಡ್ಡೇರಿ ಮತ್ತು ಇತರೆ ೧೬ ಹಳ್ಳಿಗಳಲ್ಲಿ ಹಾಗೂ ತಡಸ ಮತ್ತು ೪ ಹಳ್ಳಿಗಳಲ್ಲಿ ಕುಡಿಯುವ ನೀರಿನ ಕಾಮಗಾರಿ ಯೋಜನೆ ಪೂರ್ಣಗೊಂಡಿರುವುದರಿಂದ ಶಿಷ್ಟಾಚಾರ ಪಾಲನೆ ಪ್ರಕಾರ ಯೋಜನೆಯ ಉದ್ಘಾಟನಾ ಕಾರ್ಯಕ್ರಮವನ್ನು ಕೈಗೆತ್ತಿಕೊಳ್ಳಲು ಸಂಬಂಧಪಟ್ಟವರಿಗೆ ಸೂಕ್ತ ನಿರ್ದೇಶನ ನೀಡುವಂತೆ ಒತ್ತಾಹಿಸಲಾಗಿದೆ. 
    ಟ್ರಸ್ಟ್ ಛೇರ್‍ಮನ್ ಆರ್. ವೇಣುಗೋಪಾಲ್ ನೇತೃತ್ವದಲ್ಲಿ ಮನವಿ ಸಲ್ಲಿಸಲಾಗಿದ್ದು, ಮನವಿ ಸ್ವೀಕರಿಸಿದ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎನ್. ಹೇಮಂತ್‌ರವರು ತಕ್ಷಣ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಿ, ತುರ್ತು ಕ್ರಮ ಕೈಗೊಳ್ಳುವಂತೆ ಸೂಚಿಸಿದರು. ಕಲ್ಲಹಳ್ಳಿ ಗ್ರಾಮ ಪಂಚಾಯಿತಿ ಸದಸ್ಯ ಆರ್. ಧರ್ಮಪ್ಪ ಉಪಸ್ಥಿತರಿದ್ದರು. 

ಜ.೧೬ರಿಂದ ೪೨ ದಿನ ಲ್ಲಿ ಸರ್.ಎಂ ವಿಶ್ವೇಶ್ವರಾಯ ಭದ್ರಾವತಿ ಉತ್ಸವ್-೨೦೨೫


ಭದ್ರಾವತಿ ವಿಐಎಸ್‌ಎಲ್ ಹಾಕಿ ಕ್ರೀಡಾಂಗಣದಲ್ಲಿ  ಸರ್.ಎಂ ವಿಶ್ವೇಶ್ವರಾಯ ಭದ್ರಾವತಿ ಉತ್ಸವ್-೨೦೨೫ ನಡೆಸುವ ಕುರಿತು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಲಾಯಿತು. 
    ಭದ್ರಾವತಿ: ಆರ್ ಕರ್ನಾಟಕ ಅಮ್ಯೂಸ್‌ಮೆಂಟ್ ಪಾರ್ಕ್ ವತಿಯಿಂದ ಈ ಬಾರಿ ನಗರದ ನ್ಯೂಟೌನ್ ವಿಐಎಸ್‌ಎಲ್ ಹಾಕಿ ಕ್ರೀಡಾಂಗಣದಲ್ಲಿ ಸರ್.ಎಂ ವಿಶ್ವೇಶ್ವರಾಯ ಭದ್ರಾವತಿ ಉತ್ಸವ್-೨೦೨೫ ಹಮ್ಮಿಕೊಳ್ಳಲಾಗಿದ್ದು, ಕಾರ್ಮಿಕರು, ಕುಟುಂಬ ವರ್ಗದವರು ಹಾಗು ಕ್ಷೇತ್ರದ ಜನತೆಗೆ ಸುಮಾರು ೪೨ ದಿನಗಳವರೆಗೆ ಹಬ್ಬದ ವಾತಾವರಣದಲ್ಲಿ ಕಾಲ ಕಳೆಯಲು ನೆರವಾಗುತ್ತಿದೆ. ಈ ಹಿನ್ನಲೆಯಲ್ಲಿ ಉತ್ಸವಕ್ಕೆ ಕಾರ್ಮಿಕ ಸಂಘದ ವತಿಯಿಂದ ಎಲ್ಲಾ ರೀತಿಯ ಸಹಕಾರ ನೀಡಲಾಗುವುದು ಎಂದು ವಿಐಎಸ್‌ಎಲ್ ಕಾರ್ಖಾನೆ ಕಾರ್ಮಿಕರ ಸಂಘದ ಅಧ್ಯಕ್ಷ ಜೆ. ಜಗದೀಶ್ ತಿಳಿಸಿದರು. 
    ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜ.೧೬ ರಿಂದ ಫೆಬ್ರವರಿ ೨೬ರವರೆಗೆ ಉತ್ಸವ ನಡೆಯಲಿದ್ದು, ಉತ್ಸವದ ಸಂಪೂರ್ಣ ಜವಾಬ್ದಾರಿ ಆರ್ ಕರ್ನಾಟಕ ಅಮ್ಯೂಸ್‌ಮೆಂಟ್ ಪಾರ್ಕ್ ತೆಗೆದುಕೊಂಡಿದೆ ಎಂದರು. 
    ಉತ್ಸವ ಕೇವಲ ವಸ್ತು ಪ್ರದರ್ಶನ ಹಾಗು ಮಕ್ಕಳ ಆಟಿಕೆಗಳಿಗೆ ಸೀಮಿತವಾಗದೆ ಸ್ಥಳೀಯ ಪ್ರತಿಭೆಗಳನ್ನು ಪ್ರೋತ್ಸಾಹಿಸಲು ಮನರಂಜನೆ ಹಾಗು ಶಾಲಾ-ಕಾಲೇಜು ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಅಲ್ಲದೆ ಅಮ್ಯೂಸ್‌ಮೆಂಟ್ ಪಾರ್ಕ್ ವತಿಯಿಂದ ಪ್ರೋತ್ಸಾಹ ಧನ ನೀಡಲಾಗುತ್ತಿದೆ. ಮನರಂಜನೆ ಹಾಗು ಸಾಂಸ್ಕೃತಿಕ ಕಾರ್ಯಕ್ರಮಗಳಿಂದ ಕಾರ್ಮಿಕರು, ಕುಟುಂಬ ವರ್ಗದವರು ಹಾಗು ಕ್ಷೇತ್ರದ ಜನತೆಗೆ ಕೆಲ ಸಮಯ ನೆಮ್ಮದಿಯಿಂದ ಕಾಲ ಕಳೆಯಲು ಅವಕಾಶ ಲಭಿಸಿದೆ. ಈ ಹಿನ್ನಲೆಯಲ್ಲಿ ಕಾರ್ಮಿಕ ಸಂಘ ಎಲ್ಲಾ ರೀತಿಯ ಸಹಕಾರ ನೀಡುತ್ತಿದೆ ಎಂದರು.
    ಕಾರ್ಖಾನೆ ಸಾರ್ವಜನಿಕ ಸಂಪರ್ಕಾಧಿಕಾರಿ ಎಲ್. ಪ್ರವೀಣ್ ಕುಮಾರ್ ಮಾತನಾಡಿ, ಪ್ರತಿ ವರ್ಷ ಕಾರ್ಖಾನೆ ವತಿಯಿಂದ ವಿಐಎಸ್‌ಎಲ್ ಉತ್ಸವ ನಡೆಸಿಕೊಂಡು ಬರಲಾಗುತ್ತಿತ್ತು. ಆದರೆ ಪ್ರಸ್ತುತ ಪರಿಸ್ಥಿತಿಯಲ್ಲಿ ಆಡಳಿತ ಮಂಡಳಿಗೆ ಉತ್ಸವ ನಡೆಸಲು ಸಾಧ್ಯವಾಗುತ್ತಿಲ್ಲ.  ಆರ್ ಕರ್ನಾಟಕ ಅಮ್ಯೂಸ್‌ಮೆಂಟ್ ಪಾರ್ಕ್ ವತಿಯಿಂದ ನಡೆಸಲಾಗುತ್ತಿರುವ ಉತ್ಸವ ಕುರಿತು ಮೇಲಾಧಿಕಾರಿಗಳಿಗೆ ಪತ್ರ ಬರೆಯಲಾಗಿದ್ದು, ಇದುವರೆಗೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ವಿಐಎಸ್ ಎಲ್ ಉತ್ಸವದ ರೀತಿಯಲ್ಲಿಯೇ ಈ ಉತ್ಸವ ಸಹ ನಡೆಸುವ ಉದ್ದೇಶ ಆರ್ ಕರ್ನಾಟಕ ಅಮ್ಯೂಸ್‌ಮೆಂಟ್ ಪಾರ್ಕ್ ಹೊಂದಿದೆ ಎಂದರು. 
    ಪತ್ರಿಕಾಗೋಷ್ಠಿಯಲ್ಲಿ ಆರ್ ಕರ್ನಾಟಕ ಅಮ್ಯೂಸ್‌ಮೆಂಟ್ ಪಾರ್ಕ್ ಆಯೋಜಕ ಎಚ್. ಪ್ರದೀಪ್ ಕುಮಾರ್ ಸೇರಿದಂತೆ ಇನ್ನಿತರರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು. 

Wednesday, January 8, 2025

ನಗರಸಭೆ ವ್ಯಾಪ್ತಿಯಲ್ಲಿಸರ್ಕಾರಿ, ಧಾರ್ಮಿಕ ಕಾರ್ಯಕ್ರಮಗಳು ಹೊರತು ಫ್ಲೆಕ್ಸ್ ಬಳಕೆ ಸಂಪೂರ್ಣ ನಿಷೇಧ

    ಭದ್ರಾವತಿ : ನಗರಸಭೆ ವ್ಯಾಪ್ತಿಯಲ್ಲಿ ಫ್ಲೆಕ್ಸ್ ಬಳಕೆಯನ್ನು ಜ.೧೬ರಿಂದ ಸಂಪೂರ್ಣವಾಗಿ ನಿಷೇಧಿಸಲಾಗಿದ್ದು, ಆದರೆ ಸರ್ಕಾರಿ ಹಾಗೂ ಧಾರ್ಮಿಕ ಕಾರ್ಯಕ್ರಮಗಳ ಪ್ರಚಾರಕ್ಕೆ ಪ್ಲೆಕ್ಸ್ ಬಳಸಲು ವಿನಾಯಿತಿ ನೀಡಲಾಗಿದೆ. ಯಾವುದೇ ರಾಜಕೀಯ ಪಕ್ಷ ಹಾಗೂ ಖಾಸಗಿ ವ್ಯಕ್ತಿಗಳ ಭಾವಚಿತ್ರ ಬಳಕೆಗೆ ಅವಕಾಶ ಇರುವುದಿಲ್ಲ ಎಂದು ನಗರಸಭೆ ಅಧ್ಯಕ್ಷ ಎಂ. ಮಣಿ ಎಎನ್‌ಎಸ್ ತಿಳಿಸಿದರು.
    ಅವರು ಬುಧವಾರ ಈ ಸಂಬಂಧ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಈಗಾಗಲೇ ನಗರದಲ್ಲಿ ಅಳವಡಿಸಲಾಗಿರುವ ಪ್ಲೆಕ್ಸ್‌ಗಳನ್ನು ಜ.೧೫ರಿಂದ ತೆರವುಗೊಳಿಸಲಾಗುವುದು ಎಂದರು. 
    ಪ್ಲಾಸ್ಟಿಕ್ ಬ್ಯಾನರ್/ಫ್ಲೆಕ್ಸ್ ಮತ್ತು ಕಟೌಟ್‌ಗಳಿಂದ ಪರಿಸರ ಮತ್ತು ನಗರದ ಸೌಂದರ್ಯ ಹಾಳಾಗುತ್ತಿರುವುದಲ್ಲದೆ ಸಾರ್ವಜನಿಕರಿಗೆ ಮತ್ತು ವರ್ತಕರಿಗೆ ತೊಂದರೆಯಾಗುವುದರಿಂದ ಸಂಪೂರ್ಣವಾಗಿ ನಿಷೇಧಿಸಲು ಈ ಹಿಂದಿನ ಹಲವಾರು ಸಭೆಗಳಲ್ಲಿ ನಿರ್ಣಯವಾಗಿದ್ದರೂ ಸಹ ಕ್ರಮವಹಿಸಿರುವುದಿಲ್ಲ. ಈ ಹಿನ್ನೆಲೆಯಲ್ಲಿ ಡಿ.೨೬ರಂದು ನಡೆದ ಕೌನ್ಸಿಲ್ ಸಾಮಾನ್ಯ ಸಭೆಯಲ್ಲಿ ತೀರ್ಮಾನಿಸಿರುವಂತೆ ಜ.೧೬ರಿಂದ ಫ್ಲೆಕ್ಸ್ ಬಳಕೆ ನಿಷೇಧಿಸಿ ಆದೇಶ ಹೊರಡಿಸಲಾಗಿದೆ ಎಂದರು.
ನಗರದ ಬಿ.ಎಚ್ ರಸ್ತೆ ಅಂಡರ್‌ಬ್ರಿಡ್ಜ್‌ನಿಂದ ಸಿ.ಎನ್ ರಸ್ತೆ ಕೃಷಿ ಉತ್ಪನ್ನ ಮಾರುಕಟ್ಟೆ (ಎಪಿಎಂಸಿ)ವರೆಗಿನ ರಸ್ತೆಗೆ ಡಾ. ರಾಜ್‌ಕುಮಾರ್ ರಸ್ತೆ ಹಾಗೂ ಮಾಧವಾಚಾರ್ ವೃತ್ತದಿಂದ ಬಾರಂದೂರು ಬೈಪಾಸ್‌ವರೆಗೆ ಮಹಾತ್ಮ ಗಾಂಧಿ ರಸ್ತೆ ಎಂದು ನಾಮಕರಣ ಮಾಡಲಾಗಿದ್ದು, ವರ್ತಕರು ಕಡ್ಡಾಯವಾಗಿ ಫಲಕಗಳಲ್ಲಿ ನಮೂದು ಮಾಡದಿದ್ದಲ್ಲಿ ನಗರಸಭೆ ವತಿಯಿಂದ ಕ್ರಮ ಜರುಗಿಸಲಾಗುವುದು ಎಂದರು.
    ಪತ್ರಿಕಾಗೋಷ್ಠಿಯಲ್ಲಿ ಪೌರಾಯುಕ್ತರಾದ ಪಿ.ಎಂ ಚನ್ನಪ್ಪನವರ್, ನಗರಸಭಾ ಸದಸ್ಯರುಗಳಾದ ಬಿ.ಕೆ. ಮೋಹನ್, ಬಿ.ಟಿ. ನಾಗರಾಜ್, ವಿ. ಕದಿರೇಶ್, ಚನ್ನಪ್ಪ, ಮೋಹನ್‌ಕುಮಾರ್, ಉದಯ್‌ಕುಮಾರ್, ಲತಾಚಂದ್ರಶೇಖರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.