Friday, February 14, 2025

ಫೆ.೧೫ರಂದು ನಗರಸಭೆ ಅಧ್ಯಕ್ಷರ ಚುನಾವಣೆ : ಪುನಃ ಗೀತಾ ರಾಜ್‌ಕುಮಾರ್ ಅಧ್ಯಕ್ಷೆ..?

ಗೀತಾ ರಾಜ್‌ಕುಮಾರ್ 
    ಭದ್ರಾವತಿ : ನಗರಸಭೆ ಅಧ್ಯಕ್ಷರ ಚುನಾವಣೆ ಫೆ.೧೫ರಂದು ನಡೆಯಲಿದ್ದು, ೨ನೇ ಅವಧಿಗೂ ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾಗಿದೆ. ಇದರಿಂದಾಗಿ ಈ ಹಿಂದೆ ಮೊದಲ ಅವಧಿಗೆ ಮೊದಲ ಬಾರಿಗೆ ಅಧ್ಯಕ್ಷರಾಗಿದ್ದ ಗೀತಾ ರಾಜ್‌ಕುಮಾರ್ ಪುನಃ ಅಧ್ಯಕ್ಷರಾಗುವುದು ಬಹುತೇಕ ಖಚಿತವಾಗಿದೆ. 
    ೩೫ ಸದಸ್ಯ ಬಲ ಹೊಂದಿರುವ ನಗರಸಭೆಯಲ್ಲಿ ಕಾಂಗ್ರೆಸ್ ಅತಿ ಹೆಚ್ಚಿನ ಸದಸ್ಯರನ್ನು ಹೊಂದುವ ಮೂಲಕ ಅಧಿಕಾರದ ಗದ್ದುಗೆ ಹಿಡಿದಿದೆ. ಮೊದಲ ಅವಧಿಯ ೩೦ ತಿಂಗಳಿಗೆ  ಅಧಿಕಾರ ಹಂಚಿಕೆ ಮಾಡಿಕೊಂಡು ಗೀತಾ ರಾಜ್‌ಕುಮಾರ್, ಅನುಸುಧಾ ಮೋಹನ್ ಪಳನಿ, ಶೃತಿ ವಸಂತಕುಮಾರ್ ಮತ್ತು ಲತಾ ಚಂದ್ರಶೇಖರ್ ಒಟ್ಟು ೪ ಮಹಿಳೆಯರು ಅಧಿಕಾರ ಅನುಭವಿಸಿದ್ದರು. ೨ನೇ ಅವಧಿಗೆ ಮೀಸಲಾತಿ ಘೋಷಣೆ ಸಂದರ್ಭದಲ್ಲಿ ಅಧ್ಯಕ್ಷ ಸ್ಥಾನದ ಮೀಸಲಾತಿಗೆ ಸಂಬಂಧಿಸಿದಂತೆ ನ್ಯಾಯಾಲಯ ತಡೆಯಾಜ್ಞೆ ನೀಡಿತ್ತು. ಈ ಹಿನ್ನಲೆಯಲ್ಲಿ ಉಪಾಧ್ಯಕ್ಷ ಸ್ಥಾನದ ಚುನಾವಣೆ ಮಾತ್ರ ನಡೆದು ಎಂ. ಮಣಿ ಎಎನ್‌ಎಸ್ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದರು. ನಂತರ ಇವರನ್ನು ಪ್ರಭಾರ ಅಧ್ಯಕ್ಷರಾಗಿ ನಿಯೋಜನೆಗೊಳಿಸಲಾಗಿತ್ತು. ನ್ಯಾಯಾಲಯದಲ್ಲಿ ತಡೆಯಾಜ್ಞೆ ತೆರವುಗೊಂಡಿರುವ ಹಿನ್ನಲೆಯಲ್ಲಿ ಚುನಾವಣೆ ಘೋಷಣೆಯಾಗಿದ್ದು, ಎರಡನೇ ಅವಧಿಗೂ ಮೊದಲ ಅವಧಿಗೆ ಮೊದಲ ಬಾರಿಗೆ ಅಧ್ಯಕ್ಷರಾಗಿದ್ದ ಗೀತಾ ರಾಜ್‌ಕುಮಾರ್ ಪುನಃ ಅಧ್ಯಕ್ಷರಾಗುವುದು ಬಹುತೇಕ ಖಚಿತವಾಗಿದೆ. 
    ಈಗಾಗಲೇ ಈ ಸಂಬಂಧ ಶಾಸಕರ ಸಮ್ಮುಖದಲ್ಲಿ ಮಾತುಕತೆ ನಡೆದು ಗೀತಾ ರಾಜ್‌ಕುಮಾರ್ ಅವರಿಗೆ ಅಧ್ಯಕ್ಷ ಸ್ಥಾನ ನೀಡಲು ತೀರ್ಮಾನಿಸಲಾಗಿದೆ. ಆದರೆ ಈ ಬಾರಿ ಅಧಿಕಾರ ಹಂಚಿಕೆ ಬಗ್ಗೆ ಇನ್ನೂ ಯಾವುದೇ ತೀರ್ಮಾನ ಕೈಗೊಂಡಿಲ್ಲ ಎನ್ನಲಾಗಿದೆ. ಈ ಹಿನ್ನಲೆಯಲ್ಲಿ ೨ನೇ ಅವಧಿ ಸಂಪೂರ್ಣ ಗೀತಾ ರಾಜ್‌ಕುಮಾರ್ ಅಧಿಕಾರ ಅನುಭವಿಸಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.  

ಫೆ.೧೫ರಂದು ವಿದ್ಯುತ್ ವ್ಯತ್ಯಯ



    ಭದ್ರಾವತಿ : ನಗರದ ಜೆಪಿಎಸ್ ಕಾಲೋನಿಯಲ್ಲಿರುವ ೧೧೦/೩೩/೧೧ ಕೆವಿ ವಿದ್ಯುತ್ ವಿತರಣಾ ಕೇಂದ್ರ ಹಾಗೂ ಮಾಚೇನಹಳ್ಳಿ ೧೧೦/೧ ಕೆವಿ ಕೇಂದ್ರಗಳಲ್ಲಿ `ತ್ರೈ ಮಾಸಿಕ ನಿರ್ವಹಣಾ' ಕಾರ್ಯ ಹಮ್ಮಿಕೊಂಡಿರುವುದರಿಂದ ಫೆ. ೧೫ರ ಶನಿವಾರದಂದು ಬೆಳಗ್ಗೆ ೯ ಘಂಟೆಯಿಂದ ಸಂಜೆ ೬ ಘಂಟೆಯವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. 
    ನ್ಯೂಟೌನ್, ನ್ಯೂ ಕಾಲೋನಿ, ವಿದ್ಯಾಮಂದಿರ, ಆಂಜನೇಯ ಅಗ್ರಹಾರ, ಆಕಾಶವಾಣಿ, ಕಾಗದನಗರ, ಸುರಗಿತೋಪು, ಆನೆಕೊಪ್ಪ, ಉಜ್ಜನೀಪುರ, ಬುಳ್ಳಾಪುರ, ಹುಡ್ಕೋ ಕಾಲೋನಿ, ಬೊಮ್ಮನಕಟ್ಟೆ,  ಹೊಸಸಿದ್ದಾಪುರ, ಎನ್‌ಟಿಬಿ ಬಡಾವಣೆ, ಹಳೇಸಿದ್ದಾಪುರ, ಹೊಸೂರು, ಹೊಸೂರು ತಾಂಡ್ಯ, ಸಂಕ್ಲೀಪುರ, ಹುತ್ತಾ ಕಾಲೋನಿ, ಐಟಿಐ, ಜನ್ನಾಪುರ, ಬಿ.ಎಚ್ ರಸ್ತೆ, ಅಪ್ಪರ್‌ಹುತ್ತಾ, ಲೋಯರ್ ಹುತ್ತಾ, ಜಿಂಕ್‌ಲೈನ್, ಸಿರಿಯೂರು, ತರೀಕೆರೆ ರಸ್ತೆ, ಸಾದತ್ ಕಾಲೋನಿ, ನೆಹರುನಗರ, ಸುಣ್ಣದಹಳ್ಳಿ, ಬಸವನಗುಡಿ, ಶಿವಾನಿ ವೃತ್ತ, ಹಿರಿಯೂರು, ಹೊಸ ನಂಜಾಪುರ, ಸಿದ್ದರಹಳ್ಳಿ, ಗೊಂದಿ, ತಾರೀಕಟ್ಟೆ, ಬಿಳಿಕಿ, ಬಿಳಿಕಿ ತಾಂಡ, ಹೊಳೆಗಂಗೂರು, ರಬ್ಬರ್‌ಕಾಡು, ಸುಲ್ತಾನಮಟ್ಟಿ, ಕಾರೇಹಳ್ಳಿ, ಬಾಳೆಮಾರನಹಳ್ಳಿ, ಕಂಬದಾಳ್ ಹೊಸೂರು, ಹೊನ್ನಹಟ್ಟಿ ಹೊಸೂರು, ಹುಣಸೇಕಟ್ಟೆ, ಕಾಳನಕಟ್ಟೆ, ಹೊಳೆನೇರಳೇಕೆರೆ, ಅಂತರಗಂಗೆ, ದೊಣಬಘಟ್ಟ, ತಡಸ, ಚಿಕ್ಕಗೊಪ್ಪೇನಹಳ್ಳಿ, ಬಾರಂದೂರು, ಕಲ್ಲಹಳ್ಳಿ, ಯರೇಹಳ್ಳಿ, ಮಾವಿನಕೆರೆ, ದೊಡ್ಡೇರಿ, ಮಜ್ಜಿಗೇನಹಳ್ಳಿ, ಪದ್ಮೇನಹಳ್ಳಿ, ಲಕ್ಷ್ಮೀಪುರ, ಕೆಂಪೇಗೌಡನಗರ, ಬೊಮ್ಮನಹಳ್ಳಿ, ಕುಂಬಾರ ಗುಂಡಿ, ಹಳೇ ಬಾರಂದೂರು, ಹಳ್ಳಿಕೆರೆ, ಅಪ್ಪಾಜಿ ಬಡಾವಣೆ, ಉಕ್ಕುಂದ, ರತ್ನಾಪುರ, ಕೆಂಚೇನಹಳ್ಳಿ, ಗಂಗೂರು, ಬಿಸಿಲುಮನೆ, ದೇವರನರಸೀಪುರ, ಶಿವಪುರ, ಅಡ್ಲಘಟ್ಟ, ಅಂಬುದಹಳ್ಳಿ, ಅರಳಿಕೊಪ್ಪ  ಮಾಚೇನಹಳ್ಳಿ ಕೈಗಾರಿಕಾ ಪ್ರದೇಶ, ಜೇಡಿಕಟ್ಟೆ, ಹಳೇ ಜೇಡಿಕಟ್ಟೆ, ಡೈರಿ ವೃತ್ತ, ಮಲವಗೊಪ್ಪ, ನಿದಿಗೆ ಕೈಗಾರಿಕಾ ಪ್ರದೇಶ, ಹೊನ್ನವಿಲೆ, ಮಜ್ಜಿಗೇನಹಳ್ಳಿ, ಕಲ್ಲಹಳ್ಳಿ ಗ್ರಾ.ಪಂ. ವ್ಯಾಪ್ತಿ, ಶಿವರಾಮನಗರ, ವಿಶ್ವೇಶ್ವರಯ್ಯ ನಗರ, ಜೇಡಿಕಟ್ಟೆ ಹೊಸೂರು, ಜಯಂತಿ ಗ್ರಾಮ, ವೀರಾಪುರ, ಹುಲಿ ರಾಮನಕೊಪ್ಪ, ಹಾಗಲಮನೆ, ಸಂಕ್ಲಿಮರ, ಸಿರಿಯೂರು, ಸಿರಿಯೂರು ತಾಂಡ್ಯ, ಸಿರಿಯೂರು ಕ್ಯಾಂಪ್, ವೀರಾಪುರ, ಮತಿಘಟ್ಟ ಮತ್ತು ಹಾತಿಕಟ್ಟೆ ಇತ್ಯಾದಿ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದ್ದು, ಗ್ರಾಹಕರು ಸಹಕರಿಸಲು ಕೋರಲಾಗಿದೆ.  

ಮಹಿಳಾ ಅಧಿಕಾರಿಗೆ ಶಾಸಕರ ಪುತ್ರ ಅವಾಚ್ಯ ಶಬ್ದಗಳಿಂದ ಹೀನಾಯವಾಗಿ ನಿಂದಿಸಿರುವ ಪ್ರಕರಣ

ಜೆಡಿಎಸ್ ಪಕ್ಷದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಮನವಿ : ಸೂಕ್ತ ಕ್ರಮ ಕೈಗೊಳ್ಳಲು ಆಗ್ರಹ 

ಅಕ್ರಮ ಮರಳು ಗಣಿಗಾರಿಕೆ ನಿಯಂತ್ರಣಕ್ಕೆ ಮುಂದಾದ ಮಹಿಳಾ ಅಧಿಕಾರಿಗೆ ಶಾಸಕರ ಪುತ್ರ ಅವಾಚ್ಯ ಶಬ್ದಗಳಿಂದ ಹೀನಾಯವಾಗಿ ನಿಂದಿಸಿರುವ ಪ್ರಕರಣ ಖಂಡಿಸಿ ಭದ್ರಾವತಿಯಲ್ಲಿ  ಶುಕ್ರವಾರ ಜಾತ್ಯತೀತ ಜನತಾದಳ ವತಿಯಿಂದ ಪ್ರತಿಭಟನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯರವರಿಗೆ ತಹಸೀಲ್ದಾರ್ ಮೂಲಕ ಮನವಿ ಸಲ್ಲಿಸಲಾಯಿತು. 
    ಭದ್ರಾವತಿ: ಅಕ್ರಮ ಮರಳು ಗಣಿಗಾರಿಕೆ ನಿಯಂತ್ರಣಕ್ಕೆ ಮುಂದಾದ ಮಹಿಳಾ ಅಧಿಕಾರಿಗೆ ಶಾಸಕರ ಪುತ್ರ ಅವಾಚ್ಯ ಶಬ್ದಗಳಿಂದ ಹೀನಾಯವಾಗಿ ನಿಂದಿಸಿರುವ ಪ್ರಕರಣ ಖಂಡಿಸಿ ಶುಕ್ರವಾರ ಜಾತ್ಯತೀತ ಜನತಾದಳ ವತಿಯಿಂದ ಪ್ರತಿಭಟನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯರವರಿಗೆ ತಹಸೀಲ್ದಾರ್ ಮೂಲಕ ಮನವಿ ಸಲ್ಲಿಸಲಾಯಿತು. 
    ಇತ್ತೀಚಿನ ವರ್ಷಗಳಲ್ಲಿ ಕ್ಷೇತ್ರಗಳಲ್ಲಿ ಎಗ್ಗಿಲ್ಲದೆ ನಡೆಯುತ್ತಿರುವ ಭ್ರಷ್ಟಾಚಾರ, ಅಕ್ರಮ ದಂಧೆಗಳು, ಕಾನೂನು ಬಾಹಿರ ಕೃತ್ಯಗಳು, ದೌರ್ಜನ್ಯ-ದಬ್ಬಾಳಿಕೆ-ಸ್ವೇಚ್ಛಾಚಾರ-ಗೂಂಡಾ ಪ್ರವೃತ್ತಿಯ ಆಡಳಿತದ ಮೂಲಕ ಭದ್ರಾವತಿ ಮತ್ತೊಮ್ಮೆ `ಬೆಂಕಿಪುರ'ವನ್ನಾಗಿಸುವ ಪ್ರಯತ್ನ ನಡೆದಿದೆ. ಸ್ಥಳೀಯ ಶಾಸಕರ ಕುಟುಂಬದ ಪೋಷಣೆಯಲ್ಲಿ ರಾಜಾರೋಷವಾಗಿ ನಡೆಯುತ್ತಿರುವ ಅಕ್ರಮ ಮರಳು ಗಣಿಗಾರಿಕೆ ತಪಾಸಣೆಗೆ ಬಂದ ಹಿಂದುಳಿದ ವರ್ಗದ ದಕ್ಷ ಮಹಿಳಾ ಅಧಿಕಾರಿಗೆ ಬಾಯಿಗೆ ಬಂದಂತೆ ಮೂರನೇ ದರ್ಜೆಯ ಅವಾಚ್ಯ ಶಬ್ದ ಬಳಸಿ ನಿಂದಿಸಿ, ಬೆದರಿಕೆ ಹಾಕಿರುವ, ರಾಜ್ಯವ್ಯಾಪಿ ಸುದ್ದಿಯಾಗಿರುವ ಇಲ್ಲಿನ ಆಡಳಿತ ವೈಖರಿಗೆ ತಾಜಾ ಉದಾಹರಣೆಯಾಗಿದೆ ಎಂದು ಮನವಿಯಲ್ಲಿ ಕ್ಷೇತ್ರದ ಇಂದಿನ ಸ್ಥಿತಿಯನ್ನು ಮನವಿಯಲ್ಲಿ ತಿಳಿಸಲಾಗಿದೆ. 
    ಮಹಿಳಾ ಅಧಿಕಾರಿಗೆ ಬಾಯಿಗೆ ಬಂದಂತೆ ಮೂರನೇ ದರ್ಜೆಯ ಅವಾಚ್ಯ ಶಬ್ದ ಬಳಸಿ ನಿಂದಿಸಿ, ಬೆದರಿಕೆ ಹಾಕಿರುವ ಪ್ರಕರಣದಲ್ಲಿ  ಸ್ಥಳೀಯ ಶಾಸಕ ಬಿ.ಕೆ ಸಂಗಮೇಶ್ವರ್‌ರವರ ಪುತ್ರ ಬಿ.ಎಸ್ ಬಸವೇಶ್ ಪ್ರಮುಖ ಆರೋಪಿಯಾಗಿದ್ದು, ಪೊಲೀಸರು ಇದುವರೆಗೂ ಬಂಧಿಸದಿರುವುದು ಅಚ್ಚರಿಯ ಸಂಗತಿಯಾಗಿದೆ. ಇದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದ್ದು, ಇದರಿಂದಾಗಿ ಪ್ರಾಮಾಣಿಕ ಅಧಿಕಾರಿಗಳು ದಕ್ಷತೆಯಿಂದ ಕೆಲಸು ಮಾಡುವುದು ಅಸಾಧ್ಯವಾಗಿದೆ. ಕ್ಷೇತ್ರದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದ್ದು, ಅಕ್ರಮ ದಂಧೆಗಳ ತಾಣವಾಗಿ ಮಾರ್ಪಟ್ಟಿದೆ ಮನವಿಯಲ್ಲಿ ಆರೋಪಿಸಲಾಗಿದೆ. 
    ಪ್ರಜಾತಂತ್ರ-ಸಂವಿಧಾನ-ಮೌಲ್ಯಾಧಾರಿತ ರಾಜಕಾರಣದ ಆಶಯ ಹೊಂದಿರುವ ಮುಖ್ಯಮಂತ್ರಿಗಳು ತಕ್ಷಣ ಗಮನಹರಿಸಿ ನಿಷ್ಪಕ್ಷಪಾತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಹಾಗು ಸಂಪೂರ್ಣ ಹದಗೆಟ್ಟಿರುವ ಆಡಳಿತ ವ್ಯವಸ್ಥೆಯನ್ನು ತಹಬದಿಗೆ ತರಲು ಅಗತ್ಯ ಕ್ರಮ ಕೈಗೊಳ್ಳುವಂತೆ ಮನವಿಯಲ್ಲಿ ಕೋರಲಾಗಿದೆ.  
    ಚಲನಚಿತ್ರ ನಟ, ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ, ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಶಾರದ ಅಪ್ಪಾಜಿ, ಶಿವಮೊಗ್ಗ ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಶಾಸಕಿ ಶಾರದ ಪೂರ್‍ಯಾನಾಯ್ಕ, ಮಾಜಿ ಶಾಸಕ ಕೆ.ಬಿ ಪ್ರಸನ್ನಕುಮಾರ್, ಪಕ್ಷದ ಜಿಲ್ಲಾಧ್ಯಕ್ಷ ಕಡಿದಾಳ್ ಗೋಪಾಲ್, ಜೆಡಿಎಸ್ ಪಕ್ಷದ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಗೀತಾ ಸತೀಶ್, ಯುವ ಘಟಕದ ಜಿಲ್ಲಾಧ್ಯಕ್ಷ ಮಧುಕುಮಾರ್, ತಾಲೂಕು ನಗರ ಅಧ್ಯಕ್ಷ ಆರ್. ಕರುಣಾಮೂರ್ತಿ, ಯುವ ಘಟಕದ ಅಧ್ಯಕ್ಷ ಅಧ್ಯಕ್ಷ ಎಂ.ಎ ಅಜಿತ್, ಬಿಜೆಪಿ ಮಂಡಲ ಅಧ್ಯಕ್ಷ ಜಿ. ಧರ್ಮಪ್ರಸಾದ್, ಟಿ. ಚಂದ್ರೇಗೌಡ ಸೇರಿದಂತೆ ಎರಡು ಪಕ್ಷಗಳ ವಿವಿಧ ಘಟಕಗಳ ಅಧ್ಯಕ್ಷರು, ಪದಾಧಿಕಾರಿಗಳು, ಕಾರ್ಯಕರ್ತರು ಪಾಲ್ಗೊಂಡಿದ್ದರು. 

ಜೆಡಿಎಸ್, ಬಿಜೆಪಿಗೆ ಒಂದು ಕಾನೂನು, ಕಾಂಗ್ರೆಸ್‌ಗೆ ಮತ್ತೊಂದು ಕಾನೂನು

ಶಾಸಕರ ಪುತ್ರನ ವಿರುದ್ಧ ತಕ್ಷಣ ಪ್ರಕರಣ ದಾಖಲಿಸಿ ಬಂಧಿಸಿ, ತನಿಖೆ ಕೈಗೊಳ್ಳಿ : ನಿಖಿಲ್ ಕುಮಾರಸ್ವಾಮಿ 

ಅಕ್ರಮ ಮರಳು ಗಣಿಗಾರಿಕೆ ನಿಯಂತ್ರಣಕ್ಕೆ ಮುಂದಾದ ಮಹಿಳಾ ಅಧಿಕಾರಿಗೆ ಶಾಸಕರ ಪುತ್ರ ಅವಾಚ್ಯ ಶಬ್ದಗಳಿಂದ ಹೀನಾಯವಾಗಿ ನಿಂದಿಸಿರುವ ಪ್ರಕರಣ ಖಂಡಿಸಿ ತಕ್ಷಣ ಶಾಸಕರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಹಾಗು ಶಾಸಕರ ಪುತ್ರನನ್ನು ಬಂಧಿಸುವಂತೆ ಆಗ್ರಹಿಸಿ ಶುಕ್ರವಾರ ಭದ್ರಾವತಿ ತಾಲೂಕು ಕಛೇರಿ ಮುಂಭಾಗ ಜಾತ್ಯತೀತ ಜನತಾ ಪಕ್ಷದಿಂದ ಹಮ್ಮಿಕೊಳ್ಳಲಾಗಿದ್ದ ಪ್ರತಿಭಟನೆಯಲ್ಲಿ ಚಲನಚಿತ್ರ ನಟ, ಜಾತ್ಯತೀತ ಜನತಾದಳ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಪಾಲ್ಗೊಂಡು ಮಾತನಾಡಿದರು. 
    ಭದ್ರಾವತಿ : ರಾಜ್ಯದಲ್ಲಿ ಜೆಡಿಎಸ್ ಮತ್ತು ಬಿಜೆಪಿ ಪಕ್ಷದವರಿಗೆ ಒಂದು ಕಾನೂನು, ಕಾಂಗ್ರೆಸ್ ಪಕ್ಷದವರಿಗೆ ಮತ್ತೊಂದು ಕಾನೂನು ಎಂಬಂತಾಗಿದೆ. ಮಹಿಳಾ ಅಧಿಕಾರಿಗೆ ಅವಾಚ್ಯ ಶಬ್ದಗಳಿಂದ ಹೀನಾಯವಾಗಿ ನಿಂದಿಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ತಕ್ಷಣ ಸ್ಥಳೀಯ ಶಾಸಕರ ಪುತ್ರನ ವಿರುದ್ಧ ಪ್ರಕರಣ ದಾಖಲಿಸಿ ಬಂಧಿಸುವ ಮೂಲಕ ಮೊಬೈಲ್ ಸಂಭಾಷಣೆಯ ಧ್ವನಿಯನ್ನು ಎಫ್‌ಎಸ್‌ಎಲ್ ಪರೀಕ್ಷೆಗೆ ಒಳಪಡಿಸಬೇಕೆಂದು ಚಲನಚಿತ್ರ ನಟ, ಜಾತ್ಯತೀತ ಜನತಾದಳ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಆಗ್ರಹಿಸಿದರು. 
    ಅಕ್ರಮ ಮರಳು ಗಣಿಗಾರಿಕೆ ನಿಯಂತ್ರಣಕ್ಕೆ ಮುಂದಾದ ಮಹಿಳಾ ಅಧಿಕಾರಿಗೆ ಶಾಸಕರ ಪುತ್ರ ಅವಾಚ್ಯ ಶಬ್ದಗಳಿಂದ ಹೀನಾಯವಾಗಿ ನಿಂದಿಸಿರುವ ಪ್ರಕರಣ ಖಂಡಿಸಿ ತಕ್ಷಣ ಶಾಸಕರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಹಾಗು ಶಾಸಕರ ಪುತ್ರನನ್ನು ಬಂಧಿಸುವಂತೆ ಆಗ್ರಹಿಸಿ ಶುಕ್ರವಾರ ತಾಲೂಕು ಕಛೇರಿ ಮುಂಭಾಗ ಜಾತ್ಯತೀತ ಜನತಾ ಪಕ್ಷದಿಂದ ಹಮ್ಮಿಕೊಳ್ಳಲಾಗಿದ್ದ ಪ್ರತಿಭಟನೆಯಲ್ಲಿ ಅವರು ಪಾಲ್ಗೊಂಡು ಮಾತನಾಡಿದರು. 
    ಇಲ್ಲಿನ ಶಾಸಕರ ದೌರ್ಜನ್ಯ ಮತ್ತು ದಬ್ಬಾಳಿಕೆ ಬಹಳ ದಿನ ನಡೆಯುವುದಿಲ್ಲ. ಶಾಸಕರಿಗೆ ಮತ ಹಾಕಿ ಅವರ ಇಡೀ ಕುಟುಂಬಕ್ಕೆ ತಲೆತಗ್ಗಿಸುವ ಪರಿಸ್ಥಿತಿ ಪ್ರಸ್ತುತ ಇಲ್ಲಿನ ನಾಗರೀಕರಿಗೆ ಬಂದಿದೆ. ಈ ಹಿಂದೆ ಅವರ ಸುಪುತ್ರರ ಬಗ್ಗೆ ಕೇಳಿದ್ದೆ, ತಿಳಿದುಕೊಂಡಿದ್ದೆ. ಆದರೆ ಈ ಘಟನೆಯಿಂದಾಗಿ ಮಾಧ್ಯಮದ ಮೂಲಕ ಅವರ ಪದ ಬಳಕೆ ಕೇಳಿದ್ದೇನೆ. ನಿಜಕ್ಕೂ ನಾಗರೀಕ ಸಮಾಜ ತಲೆತಗ್ಗಿಸುವಂತಾಗಿದೆ ಎಂದರು. 
    ವಿಧಾನ ಪರಿಷತ್‌ನಲ್ಲಿ ಪ್ರಭಾವಿ ಸಚಿವೆಯೊಬ್ಬರಿಗೆ ಅವಾಚ್ಯ ಶಬ್ದ ಬಳಕೆ ಮಾಡಲಾಗಿದೆ ಎಂದು ಬಿಜೆಪಿ ಪಕ್ಷದ ವಿಧಾನ ಪರಿಷತ್ ಸದಸ್ಯರೊಬ್ಬರನ್ನು ಬಂಧಿಸಿ ಠಾಣೆಯಿಂದ ಠಾಣೆಗೆ ಶಿಫ್ಟ್ ಮಾಡಿ ನಂತರ ಅವರ ಆಡಿಯೋ, ವಿಡಿಯೋ ಎಫ್‌ಎಸ್‌ಎಲ್ ಪರೀಕ್ಷೆಗೆ ಕಳುಹಿಸಲಾಗಿತ್ತು. ಅಲ್ಲಿದ್ದ ಧಮ್ಮು, ತಾಕತ್ತು ಇಲ್ಲಿನ ಶಾಸಕರ ಪುತ್ರನ ವಿರುದ್ಧ ಯಾಕಿಲ್ಲ. ಇವರ ಆಡಿಯೋ ಮತ್ತು ವಿಡಿಯೋ ಎಫ್‌ಎಸ್‌ಎಲ್ ಪರೀಕ್ಷೆಗೆ ಕಳುಹಿಸಿ ಕೊಟ್ಟಿಲ್ಲ. ರಾಮನಗರದಲ್ಲಿ ನಿಂತು ಅಬ್ಬರಿಸುವ ಡಿಸಿಎಂ ಇಲ್ಲಿನ ಶಾಸಕರ ಪುತ್ರನ ವಿರುದ್ಧ ಯಾಕೆ ಮಾತಾಡುತ್ತಿಲ್ಲ. ರಾಜ್ಯದಲ್ಲಿ ಕಾನೂನು ಜೆಡಿಎಸ್, ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳಿಗೆ ಬೇರೆ ಬೇರೆ ಇದೆಯಾ ಎಂದು ಪ್ರಶ್ನಿಸಿದರು. 
    ನಮ್ಮ ತಂದೆ ಎರಡು ಬಾರಿ ರಾಜ್ಯದ ಮುಖ್ಯಮಂತ್ರಿಯಾಗಿದ್ದು, ಯಾವತ್ತು ಅಧಿಕಾರ ಬಳಸಿಕೊಂಡು ನಾನು ಕೆಲಸ ಮಾಡಿಲ್ಲ. ಆದರೆ ಇಲ್ಲಿನ ಶಾಸಕರ ಪುತ್ರರು ಹಾಗು ಕುಟುಂಬಸ್ಥರಿಗೆ ಅಧಿಕಾರ ಕೊಟ್ಟವರು ಯಾರು. ನಾನು ಈಗ ರಾಜಕೀಯ ಜೀವನ ಆರಂಭಿಸಿದ್ದೇನೆ. ಅಧಿಕಾರ ದುರ್ಬಳಕೆ ಮಾಡಿಕೊಂಡಿದ್ದು ಕಂಡು ಬಂದರೆ ಸಾರ್ವಜನಿಕ ಬದುಕನ್ನು ಈಗಲೇ ಬಿಟ್ಟು ಹೋಗುವೆ ಎಂದರು. 
    ಇಲ್ಲಿ ಓ.ಸಿ, ಮಟ್ಕಾ, ಇಸ್ಪೀಟ್ ಸೇರಿದಂತೆ ಇನ್ನಿತರ ಜೂಜಾಟ, ಅಕ್ರಮವಾಗಿ ಮರಗಳ ಕಡಿತಲೆ, ಮರಳು ದಂಧೆ ಸೇರಿದಂತೆ ಕಾನೂನು ಬಾಹಿರ ಚಟುವಟಿಕೆಗಳು ಹೆಚ್ಚಾಗುತ್ತಿವೆ. ಇವುಗಳಿಗೆ ಕಡಿವಾಣ ಹಾಕುವುದು ಅನಿವಾರ್ಯವಾಗಿದೆ. ಮತದಾರರು ಮುಂದಿನ ಚುನಾವಣೆಯಲ್ಲಿ ಇವುಗಳಿಗೆ ತಕ್ಕ ಉತ್ತರ ನೀಡಲಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. 
    ಜೆಡಿಎಸ್ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಶಾರದ ಅಪ್ಪಾಜಿ ಮಾತನಾಡಿ, ಈ ಹಿಂದೆ ವಿಐಎಸ್‌ಎಲ್ ಕಾರ್ಖಾನೆಯಲ್ಲಿ ಶಿಫ್ಟ್ ಆಧಾರದಲ್ಲಿ ಕಾರ್ಮಿಕರು ಕೆಲಸ ಮಾಡುತ್ತಿರುವುದನ್ನು ನಾನು ನೋಡಿದ್ದೇನೆ. ಆದರೆ ಇದೀಗ ಕ್ಷೇತ್ರದಲ್ಲಿ ಶಿಫ್ಟ್ ಆಧಾರದಲ್ಲಿ ಇಸ್ಪೀಟ್ ದಂಧೆ ನಡೆಯುತ್ತಿದ್ದು, ರಾಜ್ಯದ ಬೇರೆ ಬೇರೆ ಜಿಲ್ಲೆಗಳಿಂದ ಬಂದು ಇಲ್ಲಿನ ಇಸ್ಪೀಟ್  ಜೂಜಾಟ ಆಡಿಕೊಂಡು ಹೋಗುತ್ತಿದ್ದಾರೆ. ಇಸ್ಪೀಟ್ ಆಟಕ್ಕೆ ಇದೀಗ ಕ್ಷೇತ್ರ ಪ್ರಸಿದ್ದಿಯಾಗಿದೆ. ಅಲ್ಲದೆ ನಗರದಲ್ಲಿ ಪ್ರತಿ ಎರಡು ಅಂಗಡಿಗೆ ಒಂದು ಅಂಗಡಿಯಂತೆ ಓಸಿ ಬರೆಯುತ್ತಾರೆ. ಅದಕ್ಕೆ ಶಾಸಕರ ಬೆಂಬಲಿಗರಿದ್ದಾರೆ. ಅಧಿಕಾರಿಗಳು ಕಣ್ಣು ಮುಚ್ಚಿಕೊಂಡು ಕುಳಿತುಕೊಂಡಿದ್ದಾರೆ. ಮರಗಳನ್ನು ಕಡಿದು ಲೂಟಿ ಮಾಡಲಾಗುತ್ತಿದ್ದು, ಅರಣ್ಯಾಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ದೂರಿದರು. 
    ಕ್ಷೇತ್ರದಲ್ಲಿ ಶಾಸಕರು ಇಲ್ಲ. ದೇವರು ಅವರಿಗೆ ಇನ್ನೂ ಹೆಚ್ಚಿನ ಆಯಸ್ಸು ಕೊಡಲಿ. ಅಭಿವೃದ್ಧಿ ಆಗಿದ್ದು ಬಿಟ್ಟರೆ, ಈಗ ಅಭಿವೃದ್ಧಿ ಇಲ್ಲ. ಅಭಿವೃದ್ಧಿ ಇದ್ದರೆ ನನಗೆ ಕಾಣಿಸುತ್ತಿಲ್ಲ. ಇಂತಹ ರಾಜಕೀಯ ನಾಯಕರು ಈ ಕ್ಷೇತ್ರದ ಜನರಿಗೆ ಬೇಕಿಲ್ಲ. ಕ್ಷೇತ್ರದಲ್ಲಿ ಅಕ್ರಮ ದಂಧೆಗಳು, ಲೂಟಿ ಹೆಚ್ಚಾಗುವ ಜೊತೆಗೆ ಅವರ ಪಾಪದ ಕೊಡ ಸಹ ತುಂಬಿದೆ. ಅಧಿಕಾರದ ಮದದಲ್ಲಿ ಅವರಿಗೆ ಕಣ್ಣು, ಕಿವಿ ಕೇಳಿಸುತ್ತಿಲ್ಲ. ಮಕ್ಕಳು ಮಾಡಿರುವ ತಪ್ಪನ್ನು ಒಪ್ಪಿಕೊಳ್ಳದ ಶಾಸಕರು ಮುಂದಿನ ದಿನಗಳಲ್ಲಿ ಇವರು ನನ್ನ ಮಕ್ಕಳು ಅಲ್ಲ ಎಂದರೂ ಎನ್ನಬಹುದು. ಮತದಾರರು ಇದಕ್ಕೆ ತಕ್ಕ ಪಾಠ ಕಲಿಸುತ್ತಾರೆ ಎಂದರು. 
    ಶಿವಮೊಗ್ಗ ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಶಾಸಕಿ ಶಾರದ ಪೂರ್‍ಯಾನಾಯ್ಕ, ಮಾಜಿ ಶಾಸಕ ಕೆ.ಬಿ ಪ್ರಸನ್ನಕುಮಾರ್, ಪಕ್ಷದ ಜಿಲ್ಲಾಧ್ಯಕ್ಷ ಕಡಿದಾಳ್ ಗೋಪಾಲ್, ಜೆಡಿಎಸ್ ಪಕ್ಷದ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಗೀತಾ ಸತೀಶ್, ಯುವ ಘಟಕದ ಜಿಲ್ಲಾಧ್ಯಕ್ಷ ಮಧುಕುಮಾರ್, ತಾಲೂಕು ನಗರ ಅಧ್ಯಕ್ಷ ಆರ್. ಕರುಣಾಮೂರ್ತಿ, ಯುವ ಘಟಕದ ಅಧ್ಯಕ್ಷ ಅಧ್ಯಕ್ಷ ಎಂ.ಎ ಅಜಿತ್, ಬಿಜೆಪಿ ಮಂಡಲ ಅಧ್ಯಕ್ಷ ಜಿ. ಧರ್ಮಪ್ರಸಾದ್, ಟಿ. ಚಂದ್ರೇಗೌಡ ಸೇರಿದಂತೆ ಎರಡು ಪಕ್ಷಗಳ ವಿವಿಧ ಘಟಕಗಳ ಅಧ್ಯಕ್ಷರು, ಪದಾಧಿಕಾರಿಗಳು, ಕಾರ್ಯಕರ್ತರು ಪಾಲ್ಗೊಂಡಿದ್ದರು. 

Thursday, February 13, 2025

ಶಾಸಕರ ಮೇಲಿನ ಆಪಾದನೆ ಸತ್ಯಕ್ಕೆ ದೂರವಾದದು : ಚನ್ನಪ್ಪ

ಚನ್ನಪ್ಪ 
    ಭದ್ರಾವತಿ :  ಕರ್ನಾಟಕ ರಾಜ್ಯ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶಾಸಕ ಬಿ.ಕೆ ಸಂಗಮೇಶ್ವರ್‌ರವರು ಕ್ಷೇತ್ರದಲ್ಲಿ ಕೈಗೊಂಡಿರುವ ಅಭಿವೃದ್ಧಿ ಕಾರ್ಯಗಳು ಹಾಗೂ ಜನಬೆಂಬಲ ಸಹಿಸಿಕೊಳ್ಳಲು ಸಾಧ್ಯವಾಗದೆ ಜೆಡಿಎಸ್ ಹಾಗೂ ಬಿಜೆಪಿ ಪಕ್ಷಗಳ ಮುಖಂಡರು ವಿನಾಕಾರಣ ಮಾದ್ಯಮಗಳ ಮೂಲಕ ಅವರ ವಿರುದ್ಧ ತಪ್ಪು ಸಂದೇಶ ನೀಡುತ್ತಿದ್ದಾರೆಂದು ನಗರಸಭೆ ಸದಸ್ಯ ಚನ್ನಪ್ಪ ಆರೋಪಿಸಿದ್ದಾರೆ. 
    ಶಾಸಕರ ಅಭಿವೃದ್ಧಿಯನ್ನು ಗುರುತಿಸಿ ಕ್ಷೇತ್ರದ ಜನತೆ ಅವರನ್ನು ೪ ಬಾರಿ ಚುನಾವಣೆಯಲ್ಲಿ ಗೆಲ್ಲಿಸಿದ್ದಾರೆ. ಅವರ ರಾಜಕೀಯ ಜೀವನದಲ್ಲಿ ಯಾವುದೇ ಕಪ್ಪು ಚುಕ್ಕಿ ಇಲ್ಲದೆ ಸಜ್ಜನ ರಾಜಕಾರಣ ಮಾಡಿಕೊಂಡು ಬಂದಿದ್ದಾರೆ. ಪ್ರತಿ ದಿನ ಜನ ಸೇವೆ ಮಾಡುವುದರ ಜೊತೆಗೆ ಅವರ ಕುಟುಂಬದ ಎಲ್ಲಾ ಸದಸ್ಯರು ಸೇವೆ ಮಾಡುತ್ತಿದ್ದಾರೆ. ಯಾವುದೇ ಅಕ್ರಮ ಚಟುವಟಿಕೆಗಳಿಗೆ ಬೆಂಬಲ ನೀಡುತ್ತಿಲ್ಲ. ಇದು ಸತ್ಯಕ್ಕೆ ದೂರವಾದ ವಿಚಾರವಾಗಿದೆ ಎಂದು ತಿಳಿಸಿದ್ದಾರೆ. 
    ಸರ್ಕಾರಿ ಬಾಲಕಿಯರ ಶಾಲೆಯಲ್ಲಿ ಇಸ್ಪೀಟ್ ಜೂಜು ನಡೆಸಿದವರು ಯಾರು ಎಂಬುದು ಕ್ಷೇತ್ರದ ಜನತೆಗೆ ಗೊತ್ತಿದೆ. ಜೆಡಿಎಸ್ ಶಾಸಕರು ಅಧಿಕಾರದಲ್ಲಿದ್ದಾಗ ಅತಿ ಹೆಚ್ಚು ಅಕ್ರಮ ಚಟುವಟಿಕೆ, ಮರಳು ದಂಧೆ, ಇಸ್ಪೀಟ್ ದಂಧೆ ನಡೆಯುತ್ತಿತ್ತು. ಅದು ಈಗಲೂ ಮುಂದುವರೆಯುವುದು ಬೇಡ ಎಂದು ಶಾಸಕರು ಪೊಲೀಸ್ ಇಲಾಖೆಗೆ ಸ್ಪಷ್ಟ ಸಂದೇಶವನ್ನು ನೀಡಿರುತ್ತಾರೆ. ಅಲ್ಲದೆ ಕ್ಷೇತ್ರದ ಅಭಿವೃದ್ಧಿಗಾಗಿ ಸರ್ಕಾರದಿಂದ ಹೆಚ್ಚು ಅನುದಾನ ತರುವ ಮೂಲಕ ರಸ್ತೆ, ಚರಂಡಿ ಸಮುದಾಯ ಭವನಗಳ ನಿರ್ಮಾಣ ಹಾಗೂ ಎಲ್ಲಾ ದೇವಸ್ಥಾನದ ಅಭಿವೃದ್ಧಿಗೂ ಹಾಗು ಎಲ್ಲಾ ಸಮಾಜದ ಅಭಿವೃದ್ಧಿಗೂ ಶ್ರಮಿಸಿದ್ದಾರೆಂದು ಪ್ರಶಂಸೆ ವ್ಯಕ್ತಪಡಿಸಿದ್ದಾರೆ .
    ಕೆಲವು ದಿನಗಳ ಹಿಂದೆ ಅಕ್ರಮ ಮರಳು ಗಣಿಗಾರಿಕೆ ನಿಯಂತ್ರಿಸಲು ದಾಳಿ ನಡೆಸಿದ ಸಂದರ್ಭದಲ್ಲಿ ಯಾರೋ ಶಾಸಕರ ಏಳಿಗೆಯನ್ನು ಸಹಿಸದ ರಾಜಕೀಯ ಶತೃಗಳು ಶಾಸಕರ ಪುತ್ರ  ಬಿ.ಎಸ್ ಬಸವೇಶ್‌ರವರ ಧ್ವನಿಯನ್ನು ತಿರುಚಿ ಮಹಿಳಾ ಅಧಿಕಾರಿಗೆ ಅವ್ಯಾಚ್ಯ ಶಬ್ದದಿಂದ ನಿಂದಿಸಿದ್ದು, ಇದು ಬಸವೇಶ್‌ರವರು ಎಂದು ಮಾದ್ಯಮದಲ್ಲಿ ಹೇಳಿರುವುದು ಸತ್ಯಕ್ಕೆ ದೂರವಾದ ವಿಚಾರ. ಸ್ವತಃ ಆ ಮಹಿಳಾ ಅಧಿಕಾರಿಯೇ ನನಗೆ ನಿಂದಿಸಿ ಮಾತನಾಡಿರುವುದು ಯಾರು ಎಂಬುದು ಗೊತ್ತಿಲ್ಲಾ ಎಂದು ಮಾದ್ಯಮಕ್ಕೆ ತಿಳಿಸಿದ್ದಾರೆ. ಶಾಸಕರ ಅವದಿಯಲ್ಲಿ ಯಾವುದೇ ಅಕ್ರಮ ಚಟುವಟಿಕೆ ಇಸ್ಪೀಟ್, ಓ.ಸಿ ನಡೆದಿಲ್ಲ. ಇದು ಸುಳ್ಳು ಸುದ್ದಿಯನ್ನು ಹಬ್ಬಿಸಲು, ಶಾಸಕರಿಗೆ ಕೆಟ್ಟ ಹಸರು ಬರಲಿ ಎಂದು ಈ ರೀತಿಯ ಕೃತ್ಯ ನಡೆಸಿದ್ದಾರೆಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯ ಉಪಾಧ್ಯಕ್ಷರಾಗಿ ಬಿ. ಸಿದ್ದಬಸಪ್ಪ ಆಯ್ಕೆ : ಸನ್ಮಾನ

ಭದ್ರಾವತಿ ಹೊಸ ಸೇತುವೆ ರಸ್ತೆ, ಸಿದ್ದಾರೂಢನಗರದ ವಿಶ್ವೇಶ್ವರಾಯ ವಿದ್ಯಾಸಂಸ್ಥೆ ಅಧ್ಯಕ್ಷರಾದ ಬಿ. ಸಿದ್ದಬಸಪ್ಪ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. 
    ಭದ್ರಾವತಿ : ನಗರದ ಹೊಸ ಸೇತುವೆ ರಸ್ತೆ, ಸಿದ್ದಾರೂಢನಗರದ ವಿಶ್ವೇಶ್ವರಾಯ ವಿದ್ಯಾಸಂಸ್ಥೆ ಅಧ್ಯಕ್ಷರಾದ ಬಿ. ಸಿದ್ದಬಸಪ್ಪ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. 
    ಸಿದ್ದಬಸಪ್ಪ ಪ್ರಸ್ತುತ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷರಾಗಿದ್ದು, ಇದೀಗ ರಾಜ್ಯ ಉಪಾಧ್ಯಕ್ಷರಾಗಿ ಸಹ ಆಯ್ಕೆಯಾಗಿದ್ದಾರೆ. ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಆಶ್ರಿತದ ವಿಶ್ವೇಶ್ವರಾಯ ವಿದ್ಯಾಸಂಸ್ಥೆ ವತಿಯಿಂದ ಸಿದ್ದಬಸಪ್ಪರನ್ನು ಸನ್ಮಾನಿಸಿ ಗೌರವಿಸಲಾಯಿತು. 
    ವಿದ್ಯಾಸಂಸ್ಥೆ ಕಾರ್ಯದರ್ಶಿ ಎಸ್. ಕೆ ಮೋಹನ್, ಆಡಳಿತಾಧಿಕಾರಿ ಡಾ. ಎಸ್.ಪಿ ರಾಕೇಶ್, ದೈಹಿಕ ಶಿಕ್ಷಣ ನಿರ್ದೇಶಕ ಶಿವಲಿಂಗೇಗೌಡ, ವಿವಿಧ ವಿಭಾಗಗಳ ಮುಖ್ಯಸ್ಥರು ಹಾಗು ಶಿಕ್ಷಕರು ಉಪಸ್ಥಿತರಿದ್ದರು. 

ಶಿಕ್ಷಣ ನಿಯಮ ಉಲ್ಲಂಘಿಸಿ ಕೆಲಸಕ್ಕೆ ನೇಮಿಸಿಕೊಂಡು ವಂಚನೆ

ಕ್ರಮಕ್ಕೆ ಆಗ್ರಹಿಸಿ ಫೆ.೧೭ರಂದು ಬಿಇಓ ಕಛೇರಿ ಮುಂಭಾಗ ಧರಣಿ ಸತ್ಯಾಗ್ರಹ 

ಭದ್ರಾವತಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾನವ ಹಕ್ಕುಗಳ ಹೋರಾಟ ಸಮಿತಿ ಅಧ್ಯಕ್ಷ ಬಿ.ಎನ್ ಮಾತನಾಡಿದರು. 
    ಭದ್ರಾವತಿ : ನೆಪಮಾತ್ರಕ್ಕೆ ಶಿಕ್ಷಣ ಸಂಸ್ಥೆಯಲ್ಲಿ ಕೆಲಸಕ್ಕೆ ನೇಮಿಸಿಕೊಂಡು ನಂತರ ಅವರನ್ನು ಬೇರೆ ಬೇರೆ ಕೆಲಸಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ಶಿಕ್ಷಣ ನಿಯಮಗಳನ್ನು ಉಲ್ಲಂಘಿಸಿರುವ ಜೊತೆಗೆ ಅವರಿಗೆ ನ್ಯಾಯ ಬದ್ಧವಾಗಿ ಸಿಗಬೇಕಾದ ಸೌಲಭ್ಯದಿಂದ ವಂಚಿಸುತ್ತಿರುವ ಘಟನೆ ನಗರದ ನ್ಯೂಟೌನ್ ಸೆಂಟ್ ಚಾರ್ಲ್ಸ್ ಹೈಸ್ಕೂಲ್‌ನಲ್ಲಿ ನಡೆಯುತ್ತಿದ್ದು, ಇದನ್ನು ಖಂಡಿಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಂಡು ವಂಚನೆಗೊಳಗಾದವರಿಗೆ ನ್ಯಾಯ ಒದಗಿಸಿಕೊಡುವಂತೆ ಒತ್ತಾಯಿಸಿ ಫೆ.೧೭ರಂದು ಬೆಳಿಗ್ಗೆ ೧೧ ಗಂಟೆಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಮುಂಭಾಗಪ್ರತಿಭಟನಾ ಧರಣಿ ಸತ್ಯಾಗ್ರಹ ನಡೆಸಲಾಗುತ್ತಿದೆ ಎಂದು ನಗರದ ಮಾನವ ಹಕ್ಕುಗಳ ಹೋರಾಟ ಸಮಿತಿ ಅಧ್ಯಕ್ಷ ಬಿ.ಎನ್ ರಾಜು ತಿಳಿಸಿದರು. 
    ಅವರು ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ದೇಶದ ಸಂವಿಧಾನ ಪ್ರತಿಯೊಬ್ಬ ಪ್ರಜೆಗೂ ಉಚಿತ ಶಿಕ್ಷಣ ಕಡ್ಡಾಯ ಮಾಡಿದ್ದರೂ ಸರ್ಕಾರಿ ಶಾಲಾ-ಕಾಲೇಜುಗಳು ದುಸ್ಥಿತಿಗೊಂಡು, ಖಾಸಗಿ ಶಾಲಾ-ಕಾಲೇಜುಗಳು ನಿಯಮ ಮೀರಿ ಕಾನೂನು ಉಲ್ಲಂಘನೆ ಮಾಡುತ್ತಿರುವ ಕ್ರಮ ಸಮಿತಿ ಖಂಡಿಸುತ್ತದೆ ಎಂದರು. 
    ದೇಶದಲ್ಲಿ ಶಿಕ್ಷಣ ವಂಚಿತರಿಗೆ ಕ್ರೈಸ್ತ ಸಮಾಜ ಶಿಕ್ಷಣದ ಸೇವೆ ಮಾಡಿರುವುದು ಅಪಾರವಾದದ್ದು. ದೀನ ದಲಿತರಿಗೆ ಸೇವೆ ಸಲ್ಲಿಸಿದ, ಕುಷ್ಠ ರೋಗಿಗಳ ಸೇವೆ ಮಾಡಿದ ಮದರ್ ತೆರೇಸಾರವರ ಮಾನವೀಯತೆ ಮರೆಯುವಂತದ್ದಲ್ಲ. ಆದರೆ ನಗರದ ಸೆಂಟ್ ಚಾರ್ಲ್ಸ್ ಹೈಸ್ಕೂಲ್‌ನಲ್ಲಿ ಶಿಕ್ಷಣ ನಿಯಮಗಳನ್ನು ಉಲ್ಲಂಘಸಿ ಸೇವೆ ಸಲ್ಲಿಸುತ್ತಿರುವ ಸಿಬ್ಬಂದಿಗಳಿಗೆ ಅನ್ಯಾಯ ಮಾಡುತ್ತಿರುವುದು ಬೆಳಕಿಗೆ ಬಂದಿದೆ. ಈ ಸಂಬಂಧ ಕ್ಷೇತ್ರ ಶಿಕ್ಷಣಾಧಿಕಾರಿಗಳು ಹೈಸ್ಕೂಲ್‌ಗೆ ನೋಟಿಸ್ ಜಾರಿ ಮಾಡಿದ್ದಾರೆ ಎಂದರು. 
    ನ್ಯೂಟೌನ್ ಅಮಲೋದ್ಭವಿ ಮಾತೆ ದೇವಾಲಯದ ಸದಸ್ಯರಾದ ವಿನ್ನಿ ಡಿಸೋಜಾ ಕೋಂ ಲಿಗೋರಿಯಾ ಎಂಬುವರು ಕಳೆದ ೧೭ ವರ್ಷಗಳಿಂದ ಸೆಂಟ್ ಚಾರ್ಲ್ಸ್ ಹೈಸ್ಕೂಲ್ ಸಮ್ಮುಖದಲ್ಲಿರುವ ಕರುಣ ಸೇವಾ ಕೇಂದ್ರ ಮತ್ತು ಕರುಣ ಮಹಿಳಾ ಮಂಡಳಿಗಳ ಒಕ್ಕೂಟದಲ್ಲಿ ಕೆಲಸ ನಿರ್ವಹಿಸಿಕೊಂಡು ಬಂದಿದ್ದಾರೆ. ಇವರ ಪಿ.ಎಫ್ ಹಣ ಹೈಸ್ಕೂಲ್ ಮತ್ತು ಸೊಸೈಟಿ ಆಫ್ ದ ಸಿಸ್ಟರ್ ಆಫ್ ಎಸ್.ಟಿ ಚಾರ್ಲ್ಸ್ ಹೆಸರಿನಲ್ಲಿ ಶಿವಮೊಗ್ಗದ ಪಿ.ಎಫ್ ಕಛೇರಿಯಲ್ಲಿರುವ ಖಾತೆಗೆ ಜಮಾ ಮಾಡಲಾಗಿದೆ. ಅಲ್ಲದೆ ಇವರ ವೇತನ ಪ್ರತಿ ತಿಂಗಳು ಇವರ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗಿದೆ. ಆದರೆ ಕಳೆದ ೫ ವರ್ಷಗಳಿಂದ ಸಿಸ್ಟರ್ ಹೆಲೆನ್ ಮೊರಾಸ್‌ರವರು ಇವರಿಗೆ ಸಾಕಷ್ಟು ಕಿರುಕುಳ ನೀಡುತ್ತಿದ್ದು, ಮೂಡುಬಿದರೆಯಲ್ಲಿರುವ ಇವರ ಸ್ವಂತ ಮನೆಯಲ್ಲಿ ಮನೆ ಕೆಲಸ ಮಾಡುವಂತೆ ಪೀಡಿಸುತ್ತಿದ್ದು, ಇದಕ್ಕೆ ಒಪ್ಪದ ಹಿನ್ನಲೆಯಲ್ಲಿ ಇವರ ವಿರುದ್ಧ ಸ್ವಸಹಾಯ ಸಂಘಗಳ ಸದಸ್ಯರಿಗೆ ಸುಳ್ಳು ಸುದ್ದಿಗಳನ್ನು ಹರಡುವ ಜೊತೆಗೆ ೧೦ ವರ್ಷಗಳವರೆಗೆ ನಿರಂತರವಾಗಿ ಇವರ ಪಿ.ಎಫ್ ಹಣ ಪಾವತಿಸಿದರೆ ೬೦ ವರ್ಷಗಳ ನಂತರ ಪ್ರತಿ ತಿಂಗಳು ೨ ರಿಂದ ೩ ಸಾವಿರ ರು. ಪಿಂಚಣಿ ಬರುತ್ತದೆ ಎಂಬ ಸಂಕಟದಿಂದ ಇವರ ಜೊತೆಗೆ ಶಿವಮೊಗ್ಗದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ೧೦ ರಿಂದ ೧೨ ಜನರನ್ನು ಸಹ ಅರ್ಧದಲ್ಲಿಯೇ ಕೆಲಸದಿಂದ ತೆಗೆದು ಹಾಕಿದ್ದಾರೆಂದು ಆರೋಪಿಸಿದರು. 
    ಈ ಸಂಬಂಧ ವಿನ್ನಿ ಡಿಸೋಜಾರವರು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ದೂರು ಸಲ್ಲಿಸಿದ್ದರು. ಈ ಹಿನ್ನಲೆಯಲ್ಲಿ ಹೈಸ್ಕೂಲ್‌ಗೆ ನೋಟಿಸ್ ನೀಡಲಾಗಿತ್ತು. ಆದರೆ ನೋಟಿಸ್‌ಗೆ ಸುಳ್ಳು ಮಾಹಿತಿ ನೀಡಲಾಗಿದೆ. ವಿನ್ನಿ ಡಿಸೋಜಾರವರು ಸ್ಕೂಲ್ ಅಥವಾ ಸೇವಾ ಕೇಂದ್ರ ಅಥವಾ ಮಹಿಳಾ ಮಂಡಳಿಗಳ ಒಕ್ಕೂಟದಲ್ಲಿ ಯಾವುದೇ ಕೆಲಸ ನಿರ್ವಹಿಸಿರುವುದಿಲ್ಲ. ಈ ಹಿನ್ನಲೆಯಲ್ಲಿ ಇವರಿಗೆ ಯಾವುದೇ ವೇತನವಾಗಲಿ, ಪಿ.ಎಫ್ ಹಣವಾಗಲಿ ಪಾವತಿಸಿರುವುದಿಲ್ಲ ಎಂದು ತಿಳಿಸಿರುತ್ತಾರೆ ಸುಳ್ಳು ಮಾಹಿತಿ ನೀಡಿರುವುದನ್ನು ಸಮಿತಿ ಖಂಡಿಸುವ ಜೊತೆಗೆ ತಕ್ಷಣ ಕ್ಷೇತ್ರ ಶಿಕ್ಷಣಾಧಿಕಾರಿಗಳು ಮತ್ತು ಕಾರ್ಮಿಕ ಇಲಾಖಾಧಿಕಾರಿಗಳು ಸೂಕ್ತ ತನಿಖೆ ನಡೆಸಿ ಸ್ಕೂಲ್ ನೋಂದಣಿ ರದ್ದುಗೊಳಿಸಿ ವಂಚನೆಗೊಳಗಾದವರಿಗೆ ನ್ಯಾಯ ಒದಗಿಸಿಕೊಡಬೇಕೆಂದು ಆಗ್ರಹಿಸಿ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ ಎಂದರು.   
    ಪತ್ರಿಕಾಗೋಷ್ಠಿಯಲ್ಲಿ ಟಿ.ಜಿ ಬಸವರಾಜಯ್ಯ, ಬ್ರಹ್ಮಲಿಂಗಯ್ಯ, ಎಂ.ವಿ ಚಂದ್ರಶೇಖರ್, ಸೀನಪ್ಪ, ವಿನ್ನಿ ಡಿಸೋಜಾ, ಮೇರಿಯಮ್ಮ ಮತ್ತು ಗ್ರೇಸಿ ಉಪಸ್ಥಿತರಿದ್ದರು.