Sunday, February 16, 2025

ಪ್ಯಾರಾ ಅಥ್ಲೆಟಿಕ್ಸ್ : ರಾಷ್ಟ್ರಮಟ್ಟಕ್ಕೆ ಎಂ.ಜಿ ಅಭಿಜಿತ್ ಆಯ್ಕೆ

ಎಂ.ಜಿ ಅಭಿಜಿತ್  
    ಭದ್ರಾವತಿ: ನಗರದ ನ್ಯೂಟೌನ್ ಸಿದ್ದಾರ್ಥ ಅಂಧರ ಕೇಂದ್ರದ ವಿಕಲಚೇತನ ಎಂ.ಜಿ ಅಭಿಜಿತ್ ೨೩ನೇ ರಾಷ್ಟ್ರೀಯ ಪ್ಯಾರಾ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್ ರಾಷ್ಟ್ರಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ. 
    ಚೆನ್ನೈ ಜವಾಹರಲಾಲ್ ನೆಹರು ಕ್ರೀಡಾಂಗಣದಲ್ಲಿ ಫೆ.೧೭ ರಿಂದ ೨೦ರವರೆಗೆ ಕ್ರೀಡಾಕೂಟ ನಡೆಯಲಿದ್ದು, ಅಭಿಜಿತ್ ೧೦೦ ಮೀಟರ್ ಹಾಗು ೪೦೦ ಮೀಟರ್ ಓಟದ ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆ. 
    ಅಭಿಜಿತ್ ಮೈಸೂರಿನಲ್ಲಿ ಆಯೋಜಿಸಲಾಗಿದ್ದ ರಾಜ್ಯ ಪ್ಯಾರಾ ಅಥ್ಲೆಟಿಕ್ ಚಾಂಪಿಯನ್‌ಶಿಪ್ ಕ್ರೀಡಾಕೂಟದಲ್ಲಿ ಭಾಗವಹಿಸಿ ಪ್ರಥಮ ಸ್ಥಾನದೊಂದಿಗೆ ಚಿನ್ನದ ಪದಕ ತಮ್ಮದಾಗಿಸಿಕೊಂಡಿದ್ದರು. ಇವರಿಗೆ ಸಿದ್ದಾರ್ಥ ಅಂಧರ ಕೇಂದ್ರ  ಅಧ್ಯಕ್ಷ ಶಿವಬಸಪ್ಪ, ಆಡಳಿತಾಧಿಕಾರಿ ಶಾರದ ಶಿವಬಸಪ್ಪ ಮತ್ತು ಕಾರ್ಯದರ್ಶಿ ಎಂ. ಗುರುಮೂರ್ತಿ ಅಭಿನಂದಿಸಿದ್ದಾರೆ.

ಶ್ರೀ ಕೃಷ್ಣ ದೇವಸ್ಥಾನದ ಮೊದಲ ವರ್ಷದ ವಾರ್ಷಿಕೋತ್ಸವ


ಭದ್ರಾವತಿ ತಾಲೂಕಿನ ಗೊಲ್ಲ-ಯಾದವ ಸಂಘದ ವತಿಯಿಂದ ನಗರದ ನ್ಯೂಟೌನ್ ವಿಐಎಸ್‌ಎಲ್ ಆಸ್ಪತ್ರೆ ರಸ್ತೆ, ಮೆಸ್ ಸರ್ಕಲ್ ಶ್ರೀ ಕೃಷ್ಣ ದೇವಸ್ಥಾನದ ಮೊದಲ ವರ್ಷದ ವಾರ್ಷಿಕೋತ್ಸವ ಅಂಗವಾಗಿ ವಿವಿಧ ಧಾರ್ಮಿಕ ಆಚರಣೆ ಜರುಗಿದವು. ಮೂಲ ವಿಗ್ರಹಕ್ಕೆ ವಿಶೇಷ ಅಲಂಕಾರ ಕೈಗೊಳ್ಳಲಾಗಿತ್ತು. 
    ಭದ್ರಾವತಿ : ತಾಲೂಕಿನ ಗೊಲ್ಲ-ಯಾದವ ಸಂಘದ ವತಿಯಿಂದ ನಗರದ ನ್ಯೂಟೌನ್ ವಿಐಎಸ್‌ಎಲ್ ಆಸ್ಪತ್ರೆ ರಸ್ತೆ, ಮೆಸ್ ಸರ್ಕಲ್ ಶ್ರೀ ಕೃಷ್ಣ ದೇವಸ್ಥಾನದ ಮೊದಲ ವರ್ಷದ ವಾರ್ಷಿಕೋತ್ಸವ ಅಂಗವಾಗಿ ವಿವಿಧ ಧಾರ್ಮಿಕ ಆಚರಣೆ ಜರುಗಿದವು. 
    ದೇವತಾ ಪ್ರಾರ್ಥನೆ, ಗುರು ಪ್ರಾರ್ಥನೆ, ಗಣಪತಿ ಪೂಜೆ, ಮಹಾ ಸಂಕಲ್ಪ, ಸ್ವಸ್ತಿ ಪುಣ್ಯಾಹವಾಚನ, ಪಂಚಗವ್ಯ ಪ್ರೋಕ್ಷಣೆ, ಆಚಾರ್ಯಾದಿ ಋತ್ವಿಗ್ವರಣ, ಕಳಶ ಪೂಜೆ, ಗಣಪತಿ ಮಂಡಲ ಆರಾಧನೆ, ನವಗ್ರಹ ಪೂಜೆ, ಕಲಾತತ್ವ ಕಳಶ ಪೂಜೆ, ಮಂಡಲ ಪೂಜೆ, ಅಗ್ನಿ ಪ್ರತಿಷ್ಠೆ, ಗಣಪತಿ ಹೋಮ, ನವಗ್ರಹ ಹೋಮ, ಪರಿವಾರ ದೇವತಾ ಹೋಮ, ಕಲಾತತ್ವ ಹೋಮ, ಪೂರ್ಣಾಹುತಿ, ಕಳಶಾಭಿಷೇಕ, ಅಲಂಕಾರ, ಮಹಾಮಂಗಳಾರತಿ ಮತ್ತು ತೀರ್ಥ ಪ್ರಸಾದ ವಿನಿಯೋಗ ಹಾಗು ರಾಜಬೀದಿ ಉತ್ಸವ ಸೇರಿದಂತೆ ಇನ್ನಿತರ ಧಾರ್ಮಿಕ ಆಚರಣೆಗಳು ಪ್ರಧಾನ ಅರ್ಚಕ ಗುರುಮೂರ್ತಿಯವರ ಸಾರಥ್ಯದಲ್ಲಿ ನೆರವೇರಿದವು. 
    ಗೊಲ್ಲ-ಯಾದವ ಸಂಘದ ಅಧ್ಯಕ್ಷರು, ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿ ಸದಸ್ಯರು ಹಾಗು ಗೊಲ್ಲ-ಯಾದವ ಸಮಾಜದವರು ಮತ್ತು ಗಣ್ಯರು, ದಾನಿಗಳು, ಸುತ್ತಮುತ್ತಲ ಪ್ರದೇಶಗಳ ಭಕ್ತರು ಪಾಲ್ಗೊಂಡಿದ್ದರು. 

ಕುಡಿಯುವ ನೀರಿನ ಯೋಜನೆಯ ಗುದ್ದಲಿಪೂಜೆ, ಉದ್ಘಾಟನೆಗೆ ಕ್ರಮ ಕೈಗೊಳ್ಳಿ

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಸೂಚನೆ 

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎನ್. ಹೇಮಂತ್ 
    ಭದ್ರಾವತಿ : ಶಿವಮೊಗ್ಗ ಮತ್ತು ಭದ್ರಾವತಿ ತಾಲೂಕಿನ ವಿವಿಧ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಶಿಷ್ಟಾಚಾರ ಪಾಲನೆ(ಪ್ರೋಟೋ ಕಾಲ್) ಪ್ರಕಾರ ಗ್ರಾಮೀಣ ಕುಡಿಯುವ ನೀರಿನ ಯೋಜನೆಯ ಗುದ್ದಲಿಪೂಜೆ ಹಾಗು ಉದ್ಘಾಟನೆ ಕಾರ್ಯ ನೆರವೇರಿಸುವಂತೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎನ್. ಹೇಮಂತ್‌ರವರು ಜಿಲ್ಲಾ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಕಾರ್ಯಪಾಲಕ ಇಂಜಿನಿಯರ್‌ರವರಿಗೆ ಸೂಚಿಸಿದ್ದಾರೆ. 
    ಕಳೆದ ಸುಮಾರು ೧ ತಿಂಗಳ ಹಿಂದೆ ಜನ್ನಾಪುರ ಡಿ. ದೇವರಾಜ ಅರಸು ಜನಸ್ಪಂದನ ಸೇವಾ ಟ್ರಸ್ಟ್ ವತಿಯಿಂದ ನಗರಸಭೆ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ, ಟ್ರಸ್ಟ್ ಛೇರ್‍ಮನ್ ಆರ್. ವೇಣುಗೋಪಾಲ್‌ರವರ ನೇತೃತ್ವದಲ್ಲಿ ಮನವಿ ಸಲ್ಲಿಸಿ, ತಾಲೂಕಿನ ಗ್ರಾಮಾಂತರ ವ್ಯಾಪ್ತಿಯ ಉಂಬ್ಳೆಬೈಲು ಹಾಗು ಕಲ್ಲಹಳ್ಳಿ ಗ್ರಾ ಪಂಚಾಯಿತಿ ಮತ್ತು ೨೮ ಹಳ್ಳಿಗಳಲ್ಲಿ ಹಾಗು ಸಿಂಗನಮನೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಳ್ಳಿಗಳಲ್ಲಿ ಹಾಗು ಶಿವಮೊಗ್ಗ ಗ್ರಾಮಾಂತರ ವ್ಯಾಪ್ತಿಯ ಮಾರಶೆಟ್ಟಿಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮತ್ತು ೨೩ ಹಳ್ಳಿಗಳಲ್ಲಿ, ಆನವೇರಿ ಗ್ರಾಮ ಪಂಚಾಯಿತಿ ಮತ್ತು ೩೭ ಹಳ್ಳಿಗಳಲ್ಲಿ ಕುಂಸಿ ಮತ್ತು ಗಾಜನೂರು ಗ್ರಾಮ ಪಂಚಾಯಿತಿ ಮತ್ತು ೮೯ ಹಳ್ಳಿಗಳಲ್ಲಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯ ಟೆಂಡರ್ ಪ್ರಕ್ರಿಯೆ ಈಗಾಗಲೇ ಮುಗಿದಿರುವುದರಿಂದ ಶಿಷ್ಟಾಚಾರ ಪಾಲನೆ ಪ್ರಕಾರ ಗುದ್ದಲಿ ಪೂಜೆ ಕಾರ್ಯಕ್ರಮ ಕೈಗೆತ್ತಿಕೊಳ್ಳಲು ಹಾಗು ತಾಲೂಕಿನ ಅಂತರಗಂಗೆ ಮತ್ತು ೨೧ ಹಳ್ಳಿಗಳಿಗೆ, ದೊಡ್ಡೇರಿ ಮತ್ತು ಇತರೆ ೧೬ ಹಳ್ಳಿಗಳಲ್ಲಿ ಹಾಗು ತಡಸ ಮತ್ತು ೪ ಹಳ್ಳಿಗಳಲ್ಲಿ ಕುಡಿಯುವ ನೀರಿನ ಕಾಮಗಾರಿ ಯೋಜನೆ ಪೂರ್ಣಗೊಂಡಿರುವುದರಿಂದ ಶಿಷ್ಟಾಚಾರ ಪಾಲನೆ ಪ್ರಕಾರ ಯೋಜನೆಯ ಉದ್ಘಾಟನಾ ಕಾರ್ಯಕ್ರಮ ಕೈಗೆತ್ತಿಕೊಳ್ಳಲು ಸಂಬಂಧಪಟ್ಟವರಿಗೆ ಸೂಕ್ತ ನಿರ್ದೇಶನ ನೀಡುವಂತೆ ಕೋರಲಾಗಿತ್ತು. 
    ಇದಕ್ಕೆ ಸ್ಪಂದಿಸಿರುವ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಯವರು ಜಿಲ್ಲಾ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಕಾರ್ಯಪಾಲಕ ಇಂಜಿನಿಯರ್‌ರವರಿಗೆ ಸೂಕ್ತ ಕ್ರಮ ಕೈಗೊಳ್ಳಲು ಸೂಚಿಸಿದ್ದಾರೆ. 

Saturday, February 15, 2025

ನಾನು ಮಹಿಳಾ ಅಧಿಕಾರಿ ನೋಡೇ ಇಲ್ಲ, ಅವಾಚ್ಯ ಶಬ್ದಗಳಿಂದ ನಿಂದನೆಯೂ ಮಾಡಿಲ್ಲ

ಜೆಡಿಎಸ್, ಬಿಜೆಪಿ ಪಕ್ಷಗಳಿಂದ ನನ್ನ ವಿರುದ್ಧ ಷಡ್ಯಂತ್ರ, ಅಪಪ್ರಚಾರ : ಬಿ.ಎಸ್ ಬಸವೇಶ್ 

ಭದ್ರಾವತಿ ಶಾಸಕ ಬಿ.ಕೆ ಸಂಗಮೇಶ್ವರ್ ಪುತ್ರ ಬಿ.ಎಸ್ ಬಸವೇಶ್ ಶನಿವಾರ ನಗರಸಭೆ ಅಧ್ಯಕ್ಷರಾಗಿ ಪುನಃ ೨ನೇ ಬಾರಿಗೆ ಆಯ್ಕೆಯಾದ ಗೀತಾರಾಜ್‌ಕುಮಾರ್ ಅವರನ್ನು ಅಭಿನಂದಿಸಿದರು. 
    ಭದ್ರಾವತಿ: ಅಕ್ರಮ ಮರಳು ಗಣಿಗಾರಿಕೆ ನಿಯಂತ್ರಣಕ್ಕೆ ಮುಂದಾದ ಮಹಿಳಾ ಅಧಿಕಾರಿಗೆ ಅವಾಚ್ಯ ಶಬ್ದಗಳಿಂದ ಹೀನಾಯವಾಗಿ ನಿಂದಿಸಿರುವುದಾಗಿ ಆರೋಪಿಸಿ ನನ್ನ ವಿರುದ್ಧ ಜೆಡಿಎಸ್ ಮತ್ತು ಬಿಜೆಪಿ ಪಕ್ಷಗಳು ಷಡ್ಯಂತ್ರ ನಡೆಸುತ್ತಿದ್ದು, ನನಗೂ ಈ ಪ್ರಕರಣಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಶಾಸಕ ಬಿ.ಕೆ ಸಂಗಮೇಶ್ವರ್ ಪುತ್ರ ಬಿ.ಎಸ್ ಬಸವೇಶ್ ಹೇಳಿದರು. 
    ಅವರು ಶನಿವಾರ ಮಾಧ್ಯಮಗಳೊಂದಿಗೆ ಮಾತನಾಡಿ, ನನ್ನ ವಿರುದ್ಧ ಸುಳ್ಳು ಆರೋಪಗಳನ್ನು ಮಾಡಲಾಗುತ್ತಿದೆ. ನನಗೂ ಈ ಘಟನೆಗೂ ಯಾವುದೇ ಸಂಬಂಧವಿಲ್ಲದಿದ್ದರೂ ಸಹ ವಿನಾಕಾರಣ ಅಪಪ್ರಚಾರ ನಡೆಸಲಾಗುತ್ತಿದೆ. ನಾನು ಆ ಮಹಿಳಾ ಅಧಿಕಾರಿಯನ್ನು ಇದುವರೆಗೂ ನೋಡೇ ಇಲ್ಲ. ಟಿ.ವಿ ಹಾಗೂ ಪತ್ರಿಕೆಗಳಲ್ಲಿ ಬಂದ ಮೇಲೆಯೇ ನನಗೆ ಆ ಮಹಿಳಾ ಅಧಿಕಾರಿ ಗೊತ್ತಾಗಿರುವುದು. ನಾನು  ಇದುವರೆಗೂ ಯಾವ ಅಧಿಕಾರಿಗಳು ಆ ರೀತಿ ಮಾತಾಡಿಲ್ಲ ಎಂದರು. 
    ಈ ಘಟನೆ ಸಂಬಂಧ ನನ್ನ ವಿರುದ್ಧ ಯಾವುದೇ ದೂರು ಸಹ ದಾಖಲಾಗಿಲ್ಲ. ಇದುವರೆಗೂ ಪೊಲೀಸರು ಸಹ ನನ್ನನ್ನು ಸಂಪರ್ಕಿಸಿಲ್ಲ. ನನ್ನ ವಿರುದ್ಧ ನಡೆಸಲಾಗುತ್ತಿರುವ ಅಪಪ್ರಚಾರದ ವಿರುದ್ಧ ನ್ಯಾಯಾಲಯದಲ್ಲಿ ಹೋರಾಟ ಮಾಡುತ್ತೇನೆ ಎಂದರು. 

ಶಾಸಕ ಸಂಗಮೇಶ್ವರ್ ಪುತ್ರ ಬಸವೇಶ್‌ಗೆ ಹಾಲಿನ ಅಭಿಷೇಕ : ಬಿಜೆಪಿ, ಜೆಡಿಎಸ್ ವಿರುದ್ಧ ಆಕ್ರೋಶ

ಭದ್ರಾವತಿಯಲ್ಲಿ ಅಕ್ರಮ ಮರಳು ಗಣಿಗಾರಿಕೆ ನಿಯಂತ್ರಣಕ್ಕೆ ಮುಂದಾದ ಮಹಿಳಾ ಅಧಿಕಾರಿಗೆ ಶಾಸಕರ ಪುತ್ರ ಅವಾಚ್ಯ ಶಬ್ದಗಳಿಂದ ಹೀನಾಯವಾಗಿ ನಿಂದಿಸಿರುವುದಾಗಿ ಆರೋಪಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಕಳೆದ ಕೆಲವು ದಿನಗಳಿಂದ ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ಹೋರಾಟ ನಡೆಸುತ್ತಿವೆ. ಈ ನಡುವೆ ಇದೀಗ ಶಾಸಕರ ಪುತ್ರನಿಗೆ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು, ಅಭಿಮಾನಿಗಳು ಹಾಲಿನ ಅಭಿಷೇಕ ನಡೆಸುವ ಮೂಲಕ ಗಮನ ಸೆಳೆದಿದ್ದಾರೆ. 
    ಭದ್ರಾವತಿ: ಅಕ್ರಮ ಮರಳು ಗಣಿಗಾರಿಕೆ ನಿಯಂತ್ರಣಕ್ಕೆ ಮುಂದಾದ ಮಹಿಳಾ ಅಧಿಕಾರಿಗೆ ಶಾಸಕರ ಪುತ್ರ ಅವಾಚ್ಯ ಶಬ್ದಗಳಿಂದ ಹೀನಾಯವಾಗಿ ನಿಂದಿಸಿರುವುದಾಗಿ ಆರೋಪಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಕಳೆದ ಕೆಲವು ದಿನಗಳಿಂದ ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ಹೋರಾಟ ನಡೆಸುತ್ತಿವೆ. ಈ ನಡುವೆ ಇದೀಗ ಶಾಸಕರ ಪುತ್ರನಿಗೆ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು, ಅಭಿಮಾನಿಗಳು ಹಾಲಿನ ಅಭಿಷೇಕ ನಡೆಸುವ ಮೂಲಕ ಗಮನ ಸೆಳೆದಿದ್ದಾರೆ. 
    ಶನಿವಾರ ನಗರಸಭೆ ಅಧ್ಯಕ್ಷರ ಚುನಾವಣೆ ಹಿನ್ನಲೆಯಲ್ಲಿ ನಗರಸಭೆ ಮುಂಭಾಗ ಕಾಂಗ್ರೆಸ್ ಪಕ್ಷದ ಮುಖಂಡರು, ಕಾರ್ಯಕರ್ತರು, ಅಭಿಮಾನಿಗಳು ಜಮಾಯಿಸಿದ್ದರು. ಅಲ್ಲದೆ ಮಹಾತ್ಮಗಾಂಧಿ ರಸ್ತೆಯಲ್ಲಿ(ಟಿ.ಕೆ ರಸ್ತೆ) ಬೈಕ್ ರ್‍ಯಾಲಿ ಸಹ ನಡೆಸಿದರು. ಈ ಸಂದರ್ಭದಲ್ಲಿ ಆಗಮಿಸಿದ ಶಾಸಕ ಸಂಗಮೇಶ್ವರ್ ಕಿರಿಯ ಪುತ್ರ ಬಿ.ಎಸ್ ಬಸವೇಶ್‌ಗೆ ಕಾರ್ಯಕರ್ತರು, ಅಭಿಮಾನಿಗಳು ೨-೩ ಕೊಡ ಹಾಲಿನ ಅಭಿಷೇಕ ಮಾಡುವ ಮೂಲಕ ಜೈಕಾರ ಹಾಕಿದರು. 
    ಬಸವೇಶ್ ವಿರುದ್ಧ ಶುಕ್ರವಾರ ಜೆಡಿಎಸ್ ಪಕ್ಷದ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ನೇತೃತ್ವದಲ್ಲಿ ಜೆಡಿಎಸ್ ಮತ್ತು ಬಿಜೆಪಿ ಪಕ್ಷಗಳು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದವು. ಈ ಹಿನ್ನಲೆಯಲ್ಲಿ ಪಕ್ಷದ ಕಾರ್ಯಕರ್ತರು, ಅಭಿಮಾನಿಗಳು ಹಾಲಿನ ಅಭಿಷೇಕ ನಡೆಸುವ ಮೂಲಕ ಬಸವೇಶ್ ವಿರುದ್ಧದ ಆರೋಪಗಳು ನಿರಾಧಾರವಾಗಿದ್ದು, ಶಾಸಕರ ಅಭಿವೃದ್ಧಿ ಕಾರ್ಯಗಳನ್ನು ಹಾಗು ಜನಪ್ರಿಯತೆಯನ್ನು ಸಹಿಸದೆ ಈ ರೀತಿ ಕುತಂತ್ರ ನಡೆಸಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿರು.     

ಸಚಿವೆ ಲಕ್ಷ್ಮೀಹೆಬ್ಬಾಳ್ಕರ್ ಜನ್ಮದಿನ : ರೋಗಿಗಳಿಗೆ ಬ್ರೆಡ್, ಹಣ್ಣು ವಿತರಣೆ

ಎನ್‌ಎಸ್‌ಯುಐ ವತಿಯಿಂದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಅಂಗವಿಕಲರ ಮತ್ತು ಹಿರಿಯ ನಾಗರೀಕರ ಸಬಲೀಕರಣ ಇಲಾಖೆ ಸಚಿವೆ ಲಕ್ಷ್ಮೀಹೆಬ್ಬಾಳ್ಕರ್‌ರವರ ಜನ್ಮದಿನದ ಅಂಗವಾಗಿ ಭದ್ರಾವತಿ ಹಳೇನಗರದ ತಾಲೂಕು ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ  ಒಳರೋಗಿಗಳಿಗೆ ಬ್ರೆಡ್ ಮತ್ತು ಹಣ್ಣು ವಿತರಣೆ ನಡೆಯಿತು. 
    ಭದ್ರಾವತಿ : ಸಹೋದರಿ, ಸಚಿವೆ ಲಕ್ಷ್ಮೀಹೆಬ್ಬಾಳ್ಕರ್ ಅವರಿಗೆ ಜನರ ಸೇವೆ ಮಾಡಲು ಭಗವಂತ ಇನ್ನೂ ಹೆಚ್ಚಿನ ಆಯುರಾರೋಗ್ಯ ಕರುಣಿಸಲಿ ಎಂದು ನಗರದ ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್(ಪಿಎಲ್‌ಡಿ ಬ್ಯಾಂಕ್) ಅಧ್ಯಕ್ಷ ಬಿ.ಕೆ ಶಿವಕುಮಾರ್ ಹೇಳಿದರು. 
    ಅವರು ಎನ್‌ಎಸ್‌ಯುಐ ವತಿಯಿಂದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಅಂಗವಿಕಲರ ಮತ್ತು ಹಿರಿಯ ನಾಗರೀಕರ ಸಬಲೀಕರಣ ಇಲಾಖೆ ಸಚಿವೆ ಲಕ್ಷ್ಮೀಹೆಬ್ಬಾಳ್ಕರ್‌ರವರ ಜನ್ಮದಿನದ ಅಂಗವಾಗಿ ಹಳೇನಗರದ ತಾಲೂಕು ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ಒಳರೋಗಿಗಳಿಗೆ ಬ್ರೆಡ್ ಮತ್ತು ಹಣ್ಣು ವಿತರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. 
    ಅಧಿಕಾರ ಇರಲಿ, ಇಲ್ಲದಿರಲಿ ಜನರ ಬಗ್ಗೆ ಕಾಳಜಿ ಹೊಂದುವ ಮೂಲಕ ನಿರಂತರವಾಗಿ ಅವರ ಸೇವೆಯಲ್ಲಿ ತೊಡಗಿಸಿಕೊಂಡಿರುವ ಸಚಿವೆ ಲಕ್ಷ್ಮೀಹೆಬ್ಬಾಳ್ಕರ್‌ರವರಿಗೆ ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಅಧಿಕಾರ ಲಭಿಸುವ ಮೂಲಕ ಅವರು ಜನಸಾಮಾನ್ಯರ ಸೇವೆ ಇನ್ನೂ ಹೆಚ್ಚಿನ ರೀತಿಯಲ್ಲಿ ಮಾಡುವಂತಾಗಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದರು.  
ಹಿರಿಯ ಪತ್ರಕರ್ತ ಕಣ್ಣಪ್ಪ, ತಾಲೂಕು ಆರೋಗ್ಯಾಧಿಕಾರಿ ಡಾ.ಎಂ.ವಿ ಅಶೋಕ್, ಕುವೆಂಪು ವಿ.ವಿ ಸಿಂಡಿಕೇಟ್ ಸದಸ್ಯ ಮುಸ್ವೀರ್ ಬಾಷಾ, ಎನ್‌ಎಸ್‌ಯುಐ ಕಾರ್ಯಾಧ್ಯಕ್ಷ ಮಹಮ್ಮದ್, ಸಲಹೆಗಾರ ಶ್ರೀನಿವಾಸ್, ತಾಲೂಕು ಬಗರ್ ಹುಕುಂ ಸಮಿತಿ ಸದಸ್ಯ ಮುರುಗೇಶ್, ಮುಖಂಡರಾದ ಬಸವಂತಪ್ಪ, ಮಲ್ಲಿಕಾರ್ಜುನ್, ದಿಲ್ದಾರ್, ಸುರೇಶ್ ವರ್ಮ, ಗಂಗಾಧರ್, ಅಮೀರ್‌ಜಾನ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. 

ಭದ್ರಾವತಿ ನಗರಸಭೆ ಅಧ್ಯಕ್ಷರಾಗಿ ಪುನಃ ಗೀತಾ ರಾಜ್‌ಕುಮಾರ್

ಈ ಹಿಂದೆ ಭದ್ರಾವತಿ ನಗರಸಭೆಯ ಮೀಸಲಾತಿಯ ಮೊದಲ ಅವಧಿಗೆ ಮೊದಲ ಬಾರಿಗೆ ಅಧ್ಯಕ್ಷರಾಗಿದ್ದ ಗೀತಾ ರಾಜ್‌ಕುಮಾರ್ ಶನಿವಾರ ನಡೆದ ಚುನಾವಣೆಯಲ್ಲಿ ಪುನಃ ಮೀಸಲಾತಿಯ ಎರಡನೇ ಅವಧಿಯ ಮೊದಲ ಅಧ್ಯಕ್ಷರಾಗಿ ಆಯ್ಕೆಯಾದರು. 
    ಭದ್ರಾವತಿ :  ಈ ಹಿಂದೆ ನಗರಸಭೆಯ ಮೀಸಲಾತಿಯ ಮೊದಲ ಅವಧಿಗೆ ಮೊದಲ ಬಾರಿಗೆ ಅಧ್ಯಕ್ಷರಾಗಿದ್ದ ಗೀತಾ ರಾಜ್‌ಕುಮಾರ್ ಶನಿವಾರ ನಡೆದ ಚುನಾವಣೆಯಲ್ಲಿ ಪುನಃ ಮೀಸಲಾತಿಯ ಎರಡನೇ ಅವಧಿಯ ಮೊದಲ ಅಧ್ಯಕ್ಷರಾಗಿ ಆಯ್ಕೆಯಾದರು. 
     ಚುನಾವಣಾಧಿಕಾರಿಯಾಗಿರುವ ಉಪ ವಿಭಾಗಾಧಿಕಾರಿ ಜಿ.ಎಚ್ ಸತ್ಯನಾರಾಯಣರವರು ಗೀತಾ ರಾಜ್ ಕುಮಾರ್ ಅಧ್ಯಕ್ಷರಾಗಿ ಆಯ್ಕೆಯಾಗಿರುವುದಾಗಿ ಮಧ್ಯಾಹ್ನ ೧.೩೦ಕ್ಕೆ ಘೋಷಿಸಿದರು. ಪೌರಾಯುಕ್ತ ಪ್ರಕಾಶ್ ಎಂ ಚನ್ನಪ್ಪನವರ್ ಉಪಸ್ಥಿತರಿದ್ದರು. 
ಚುನಾವಣೆಯಲ್ಲಿ ಕಾಂಗ್ರೆಸ್-೧೮, ಜೆಡಿಎಸ್-೪, ಬಿಜೆಪಿ-೩ ಮತ್ತು ಪಕ್ಷೇತರ-೧ ಸದಸ್ಯ ಸೇರಿದಂತೆ ಒಟ್ಟು ೨೬ ಸದಸ್ಯರು ಹಾಗು ವಿಧಾನ ಪರಿಷತ್ ಸದಸ್ಯೆ ಬಲ್ಕೀಷ್ ಬಾನು ಸೇರಿ ಒಟ್ಟು ೨೭ ಮಂದಿ ಚುನಾವಣೆ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದರು.  
     ೩೫ ಸದಸ್ಯ ಬಲ ಹೊಂದಿರುವ ನಗರಸಭೆಯಲ್ಲಿ ಕಾಂಗ್ರೆಸ್ ಅತಿ ಹೆಚ್ಚಿನ ಸದಸ್ಯರನ್ನು ಹೊಂದುವ ಮೂಲಕ ಅಧಿಕಾರದ ಗದ್ದುಗೆ ಹಿಡಿದಿದೆ. ಮೊದಲ ಅವಧಿಯ ೩೦ ತಿಂಗಳಿಗೆ  ಅಧಿಕಾರ ಹಂಚಿಕೆ ಮಾಡಿಕೊಂಡು ಗೀತಾ ರಾಜ್‌ಕುಮಾರ್, ಅನುಸುಧಾ ಮೋಹನ್ ಪಳನಿ, ಶೃತಿ ವಸಂತಕುಮಾರ್ ಮತ್ತು ಲತಾ ಚಂದ್ರಶೇಖರ್ ಒಟ್ಟು ೪ ಮಹಿಳೆಯರು ಅಧಿಕಾರ ಅನುಭವಿಸಿದ್ದರು. ೨ನೇ ಅವಧಿಗೆ ಮೀಸಲಾತಿ ಘೋಷಣೆ ಸಂದರ್ಭದಲ್ಲಿ ಅಧ್ಯಕ್ಷ ಸ್ಥಾನದ ಮೀಸಲಾತಿಗೆ ಸಂಬಂಧಿಸಿದಂತೆ ನ್ಯಾಯಾಲಯ ತಡೆಯಾಜ್ಞೆ ನೀಡಿತ್ತು. ಈ ಹಿನ್ನಲೆಯಲ್ಲಿ ಉಪಾಧ್ಯಕ್ಷ ಸ್ಥಾನದ ಚುನಾವಣೆ ಮಾತ್ರ ನಡೆದು ಎಂ. ಮಣಿ ಎಎನ್‌ಎಸ್ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದರು. ನಂತರ ಇವರನ್ನು ಪ್ರಭಾರ ಅಧ್ಯಕ್ಷರಾಗಿ ನಿಯೋಜನೆಗೊಳಿಸಲಾಗಿತ್ತು.  ನ್ಯಾಯಾಲಯದಲ್ಲಿ ತಡೆಯಾಜ್ಞೆ ತೆರವುಗೊಂಡ ಹಿನ್ನಲೆಯಲ್ಲಿ ಚುನಾವಣೆ ಘೋಷಣೆಯಾಗಿತ್ತು.
    ಕಾಂಗ್ರೆಸ್ ಪಕ್ಷದೊಂದಿಗೆ ಗುರುತಿಸಿಕೊಂಡಿರುವ ಬಿಜೆಪಿ-ಜೆಡಿಎಸ್ ಸದಸ್ಯರು: 
    ನಗರಸಭೆ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದಿಂದ ಆಯ್ಕೆಯಾಗಿದ್ದ ಪ್ರೇಮ ಬದರಿನಾರಾಯಣ, ಬಸವರಾಜ ಬಿ ಆನೇಕೊಪ್ಪ, ಪಲ್ಲವಿ ದಿಲೀಪ್ ಮತ್ತು ಕೋಟೇಶ್ವರರಾವ್ ಹಾಗು ಬಿಜೆಪಿ ಪಕ್ಷದಿಂದ ಆಯ್ಕೆಯಾಗಿದ್ದ ವಿ. ಕದಿರೇಶ್, ಅನಿತಾ ಮಲ್ಲೇಶ್ ಮತ್ತು ಶಶಿಕಲಾ ನಾರಾಯಣಪ್ಪರವರು ಇತ್ತೀಚಿಗೆ ಕಾಂಗ್ರೆಸ್ ಪಕ್ಷದೊಂದಿಗೆ ಗುರುತಿಸಿಕೊಂಡಿದ್ದಾರೆ. ಈ ಸದಸ್ಯರು ಚುನಾವಣೆಯಲ್ಲಿ ಪಾಲ್ಗೊಂಡು ಗಮನ ಸೆಳೆದರು. 
    ಪಟಾಕಿ ಸಿಡಿಸಿ ಸಂಭ್ರಮಾಚರಣೆ: 
    ಚುನಾವಣಾಧಿಕಾರಿಯಾಗಿರುವ ಉಪ ವಿಭಾಗಾಧಿಕಾರಿ ಜಿ.ಎಚ್ ಸತ್ಯನಾರಾಯಣರವರು ಗೀತಾ ರಾಜ್ ಕುಮಾರ್ ಅಧ್ಯಕ್ಷರಾಗಿ ಆಯ್ಕೆಯಾಗಿರುವುದಾಗಿ ಘೋಷಣೆ ಮಾಡುತ್ತಿದ್ದಂತೆ ಕಾಂಗ್ರೆಸ್ ಪಕ್ಷದ ಮುಖಂಡರು, ಕಾರ್ಯಕರ್ತರು, ಅಭಿಮಾನಿಗಳು ನಗರಸಭೆ ಮುಂಭಾಗ ಕಾಂಗ್ರೆಸ್ ಧ್ವಜ ಹಿಡಿದು ಪಟಾಕಿ ಸಿಡಿಸಿ ಸಂಭ್ರಮಾಚರಣೆ ನಡೆಸಿದರು. 
    ಶಾಸಕ ಬಿ.ಕೆ ಸಂಗಮೇಶ್ವರ್ ಅಧ್ಯಕ್ಷೆ ಗೀತಾ ರಾಜ್‌ಕುಮಾರ್‌ಗೆ ವಿಡಿಯೋ ಕರೆ ಮೂಲಕ ಮೊಬೈಲ್‌ನಲ್ಲಿಯೇ ಶುಭ ಕೋರಿದರು. ಉಳಿದಂತೆ ವಿಧಾನಪರಿಷತ್ ಸದಸ್ಯೆ ಬಲ್ಕೀಷ್ ಬಾನು, ನಗರಸಭೆ ಉಪಾಧ್ಯಕ್ಷ ಎಂ. ಮಣಿ ಎಎನ್‌ಎಸ್, ಸ್ಥಾಯಿ ಸಮಿತಿ ಅಧ್ಯಕ್ಷ ಸೈಯದ್ ರಿಯಾಜ್, ಪೌರಾಯುಕ್ತ ಪ್ರಕಾಶ್ ಎಂ. ಚನ್ನಪ್ಪನವರ್, ಬ್ಲಾಕ್ ಕಾಂಗ್ರೆಸ್ ನಗರ ಘಟಕದ ಅಧ್ಯಕ್ಷ ಎಸ್. ಕುಮಾರ್, ಗ್ರಾಮಾಂತರ ಘಟಕದ ಅಧ್ಯಕ್ಷ ಎಚ್.ಎಲ್ ಷಡಾಕ್ಷರಿ, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಬಿ.ಕೆ ಶಿವಕುಮಾರ್, ಬಗರ್ ಹುಕುಂ ಸಮಿತಿ ಅಧ್ಯಕ್ಷ ಎಸ್. ಮಣಿಶೇಖರ್ ಸೇರಿದಂತೆ ನಗರಸಭೆ ಸದಸ್ಯರು, ಅಧಿಕಾರಿಗಳು, ಸಿಬ್ಬಂದಿಗಳು, ಪೌರಕಾರ್ಮಿಕರು, ವಿವಿಧ ಸಂಘ-ಸಂಸ್ಥೆಗಳ ಮುಖಂಡರು ಗೀತಾ ರಾಜ್‌ಕುಮಾರನ್ನು ಅಭಿನಂದಿಸಿದರು. 
    ಗೀತಾ ರಾಜ್‌ಕುಮಾರ್ : 
    ವಾರ್ಡ್ ನಂ.೨ರ ಸದಸ್ಯೆಯಾಗಿರುವ ಗೀತಾರಾಜ್‌ಕುಮಾರ್‌ರವರು ಮೊದಲ ಬಾರಿಗೆ ನಗರಸಭೆ ಸದಸ್ಯರಾಗಿ ಆಯ್ಕೆಯಾಗಿದ್ದರು. ವಿಶೇಷತೆ ಎಂದರೆ ಮೊದಲ ಅವಧಿಯಲ್ಲಿಯೇ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಇದೀಗ ೨ನೇ ಬಾರಿಗೆ ಅಧ್ಯಕ್ಷರಾಗಿ ಆಯ್ಕೆಯಾಗುವ ಮೂಲಕ ಒಂದೇ ಬಾರಿ ೨ ಅವಧಿಯ ಅಧ್ಯಕ್ಷರಾಗಿರುವ ಏಕೈಕ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. 


ಗೀತಾ ರಾಜ್‌ಕುಮಾರ್ 
    ಗೀತಾರವರ ಪತಿ ಕೆ.ಜಿ ರಾಜ್‌ಕುಮಾರ್‌ರವರ ಕುಟುಂಬ ಕ್ಷೇತ್ರದಲ್ಲಿ ಚಿರಪರಿಚಿತವಾಗಿದ್ದು, ಕಡದಕಟ್ಟೆ ಬಳಿ ವಿದ್ಯಾಸಂಸ್ಥೆ ನಿರ್ಮಾಣದ ಜೊತೆಗೆ ಆನೇಕ ಸಮಾಜ ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದು, ಪ್ರತಿಷ್ಠಿತ ಕುಟುಂಬವಾಗಿದೆ. ರಾಜ್‌ಕುಮಾರ್‌ರವರ ತಂದೆ ರಾಮನಗೌಡ್ರು ಮೂಲತಃ ಕಾಂಗ್ರೆಸ್ ಪಕ್ಷದವರಾಗಿದ್ದು, ತಾಲೂಕು ಬೋರ್ಡ್ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ತದ ನಂತರ ಈ ಕುಟುಂಬದ ಯಾರೊಬ್ಬರೂ ಸಹ ರಾಜಕೀಯದ ಕಡೆ ಗಮನ ಹರಿಸಿರಲಿಲ್ಲ. ಹಲವಾರು ಬಾರಿ ಅವಕಾಶಗಳು ಲಭಿಸಿದರೂ ಸಹ ರಾಜಕೀಯದಿಂದ ಅಂತರ ಕಾಯ್ದುಕೊಂಡಿತ್ತು. ನಗರಸಭೆ ಚುನಾವಣೆಗೆ ಸ್ಪರ್ಧಿಸುವಂತೆ ಸ್ಥಳೀಯರಿಂದ ಹೆಚ್ಚಿನ ಒತ್ತಡಗಳು ಬಂದ ಹಿನ್ನಲೆಯಲ್ಲಿ ಹಾಗು ರಾಮನಗೌಡ್ರುರವರ ರಾಜಕಾರಣಕ್ಕೆ ಪುನಃ ಮರುಜೀವ ನೀಡಬೇಕೆಂಬ ಆಶಯದೊಂದಿಗೆ ಗೀತಾರವರು ಕಣಕ್ಕಿಳಿಯುವುದು ಅನಿವಾರ್ಯವಾಯಿತು. ಇದಕ್ಕೆ ಪೂರಕವೆಂಬಂತೆ ಗೀತಾರವರು ಗೆಲುವು ಸಾಧಿಸುವ ಜೊತೆಗೆ ೨ ಬಾರಿ ಅಧ್ಯಕ್ಷರಾಗಿ ಮುನ್ನಡೆಯುತ್ತಿದ್ದಾರೆ.