Thursday, February 20, 2025

ಹಾಡುಹಗಲೇ ಮನೆ ಬೀಗ ಮುರಿದು ಲಕ್ಷಾಂತರ ರು. ಚಿನ್ನಾಭರಣ, ನಗದು ಕಳ್ಳತನ

    ಭದ್ರಾವತಿ: ಹಾಡುಹಗಲೇ ಮನೆಯ ಬೀಗ ಮುರಿದು ಲಕ್ಷಾಂತರ ರು. ಮೌಲ್ಯದ ಚಿನ್ನಾಭರಣ ಹಾಗು ನಗದು ಕಳ್ಳತನ ಮಾಡಿರುವ ಘಟನೆ ನಗರದ ಬಿ.ಎಚ್ ರಸ್ತೆ, ಜೇಡಿಕಟ್ಟೆಯಲ್ಲಿ ನಡೆದಿದೆ. 
    ಜೇಡಿಕಟ್ಟೆ ವೇಬ್ರಿಡ್ಜ್ ಜಂಡಾಕಟ್ಟೆ ಸಮೀಪದ ಪೆಟ್ರೋಲ್ ಟ್ಯಾಂಕರ್ ಚಾಲಕ ತಾಜುದ್ದೀನ್ ಎಂಬುವರ ಮನೆಯ ಬಾಗಿಲಿನ ಬೀಗ ಮುರಿದು ಕಳ್ಳತನ ಮಾಡಲಾಗಿದೆ. ತಾಜುದ್ದೀನ್ ಕೆಲಸದ ನಿಮಿತ್ತ ಹೊರಹೋಗಿದ್ದು, ಉಳಿದಂತೆ ಇವರ ಪುತ್ರಿ ಶಾಲೆಗೆ ಹೋಗಿದ್ದು, ಮನೆಯ ಒಡತಿ ಅಮೀನಾ ಬುಧವಾರ ಮಧ್ಯಾಹ್ನ ೧೨.೩೦ರ ಸಮಯದಲ್ಲಿ ಮನೆಗೆ ಬೀಗ ಹಾಕಿಕೊಂಡು ಪೇಟೆಗೆ ಹೋಗಿದ್ದರು. ಸಂಜೆ ಮನೆಗೆ ವಾಪಸ್ ಬಂದಾಗ ಗೇಟ್‌ಗೆ ಹಾಕಿದ್ದ ಬೀಗ ಹಾಗೇ ಇದೆ. ಒಳ ಪ್ರವೇಶಿಸಿದಾಗ ಮುಂಬಾಗಿಲ ಬೀಗವನ್ನು ಒಡೆದು ಹಾಕಿ ಕಳ್ಳತನ ಮಾಡಿರುವುದು ಕಂಡು ಬಂದಿದೆ. 
    ಸುಮಾರು ೫೪ ಗ್ರಾಂ ತೂಕದ ನಕ್ಲೇಸ್, ಲಾಂಗ್ ಚೈನ್, ಜುಮ್ಕಿ ಮತ್ತು ಕಿವಿ ಓಲೆ ಸೇರಿದಂತೆ ಚಿನ್ನದ ಆಭರಣಗಳು ಮತ್ತು ಸುಮಾರು ೮೦ ಗ್ರಾಂ. ತೂಕದ ಬೆಳ್ಳಿಯ ಆಭರಣಗಳು ಹಾಗೂ ೮೦ ಸಾವಿರ ನಗದು ಕಳ್ಳತನ ಮಾಡಿರುವುದಾಗಿ ತಿಳಿದು ಬಂದಿದೆ. 
    ಸ್ಥಳಕ್ಕೆ ಶ್ವಾನದಳ ಹಾಗು ಬೆರಚ್ಚು ತಜ್ಞರು ತೆರಳಿ ತಪಾಸಣೆ ನಡೆಸಿದ್ದು, ನಗರದ ವೃತ್ತ ನಿರೀಕ್ಷಕ ಶ್ರೀಶೈಲಕುಮಾರ್ ಮತ್ತು ನ್ಯೂಟೌನ್ ಠಾಣೆ ಉಪ ನಿರೀಕ್ಷಕ ರಮೇಶ್ ಪರಿಶೀಲನೆ ನಡೆಸಿದರು. ಈ ಸಂಬಂಧ ನ್ಯೂಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಳ್ಳಲಾಗಿದೆ.  

ಡಿಎಫ್‌ಓ ಕಛೇರಿ ಮುಂಭಾಗ ಫೆ.೨೧ರಂದು ಜೆಡಿಎಸ್ ಪ್ರತಿಭಟನೆ

ಆರ್. ಕರುಣಾಮೂರ್ತಿ 
    ಭದ್ರಾವತಿ : ಅರಣ್ಯ ಇಲಾಖೆ ವತಿಯಿಂದ ರೈತರನ್ನು ಒಕ್ಕಲೆಬ್ಬಿಸುವುದನ್ನು ವಿರೋಧಿಸಿ ಫೆ.೨೧ರಂದು ಬೆಳಿಗ್ಗೆ ೧೦.೩೦ಕ್ಕೆ ಜಾತ್ಯತೀತ ಜನತಾದಳ ತಾಲೂಕು ಶಾಖೆ ವತಿಯಿಂದ ಉಪ ಅರಣ್ಯ ಸಂರಕ್ಷಣಾಧಿಕಾರಿಗಳ ಕಛೇರಿ ಮುಂಭಾಗ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. 
    ತಾಲೂಕಿನ ರೈತರು ಕಳೆದ ಸುಮಾರು ೫೦-೬೦ ವರ್ಷಗಳಿಂದ ಎಲ್ಲಾ ದಾಖಲೆಗಳನ್ನು ಹೊಂದಿ ಸಾಗುವಳಿ ಮಾಡಿಕೊಂಡು ಬರುತ್ತಿದ್ದು, ಇದೀಗ ಅರಣ್ಯ ಇಲಾಖೆಯವರು ನೋಟಿಸ್ ನೀಡುವ ಮೂಲಕ ವಿನಾಕಾರಣ ಉಪವಿಭಾಗೀಯ ದಂಡಾಧಿಕಾರಿಗಳ ನ್ಯಾಯಾಲಯಕ್ಕೆ ಅಲೆದಾಡುವಂತೆ ಮಾಡಿದ್ದು, ಇದರಿಂದ ರೈತರು ಆತಂಕಗೊಂಡಿದ್ದಾರೆ. 
    ರೈತರನ್ನು ಒಕ್ಕಲೆಬ್ಬಿಸುವುದನ್ನು ವಿರೋಧಿಸಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದ್ದು, ಪಕ್ಷದ ವಿವಿಧ ಘಟಕಗಳ ಅಧ್ಯಕ್ಷರು, ಪದಾಧಿಕಾರಿಗಳು, ಮುಖಂಡರು, ಕಾರ್ಯಕರ್ತರು, ರೈತರು, ಕೃಷಿ ಕೂಲಿ ಕಾರ್ಮಿಕರು, ಸ್ಥಳೀಯ ಸಂಸ್ಥೆಗಳ ಹಾಲಿ ಮತ್ತು ಮಾಜಿ ಚುನಾಯಿತ ಪ್ರತಿನಿಧಿಗಳು, ಮಹಿಳೆಯರು, ಮುಖಂಡರು, ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಪ್ರತಿಭಟನೆ ಯಶಸ್ವಿಗೊಳಿಸುವಂತೆ ಪಕ್ಷದ ಹಿರಿಯ ಮುಖಂಡ, ನಗರ ಘಟಕದ ಅಧ್ಯಕ್ಷ ಆರ್. ಕರುಣಾಮೂರ್ತಿ ಕೋರಿದ್ದಾರೆ. 

ದ್ವಿಚಕ್ರ ವಾಹನದಲ್ಲಿ ಮಕ್ಕಳನ್ನು ಕರೆದೊಯ್ಯಲು ಕಡ್ಡಾಯವಾಗಿ ಸುರಕ್ಷತಾ ಕ್ರಮಗಳನ್ನು ಪಾಲಿಸಿ : ಶಾಂತಲ

ದ್ವಿಚಕ್ರ ವಾಹನದಲ್ಲಿ ಮಕ್ಕಳನ್ನು ಸುರಕ್ಷಿತವಾಗಿ ಕರೆದೊಯ್ಯುವ ಸಂಬಂಧ ಭದ್ರಾವತಿ ನ್ಯೂಟೌನ್ ಸೆಂಟ್ ಚಾರ್ಲ್ಸ್ ಕಿಂಡರ್ ಗಾರ್ಡನ್ ಶಾಲೆಯಲ್ಲಿ ಶಾಲೆಯ ಶಿಕ್ಷಕರು ಮತ್ತು ಮಕ್ಕಳಿಗೆ ಠಾಣೆ ಉಪ ನಿರೀಕ್ಷಕಿ ಶಾಂತಲ ಜಾಗೃತಿ ಮೂಡಿಸಿದರು.
    ಭದ್ರಾವತಿ : ಇತ್ತೀಚೆಗೆ ರಸ್ತೆ ಅಪಘಾತಗಳು ಹೆಚ್ಚಾಗುತ್ತಿದ್ದು, ಅಪಘಾತದಲ್ಲಿ ತೀವ್ರ ಗಾಯಗೊಂಡು ಸಾವನ್ನಪ್ಪಿತ್ತಿರುವವರ ಸಂಖ್ಯೆ ಸಹ ಹೆಚ್ಚಾಗುತ್ತಿದೆ. ಅದರಲ್ಲೂ ದ್ವಿಚಕ್ರ ವಾಹನದಲ್ಲಿ ಸಂಚರಿಸುವಾಗ ಅಪಘಾತಗಳು ಸಂಭವಿಸಿ ಹೆಚ್ಚಾಗಿ ಮಕ್ಕಳು ಸಾವನ್ನಪ್ಪುತ್ತಿದ್ದಾರೆ. ಇದನ್ನು ತಪ್ಪಿಸಲು ಸುರಕ್ಷತಾ ಕ್ರಮಗಳನ್ನು ಅನುಸರಿಸುವಂತೆ ಸಂಚಾರಿ ಠಾಣೆ ಉಪ ನಿರೀಕ್ಷಕಿ ಶಾಂತಲ ಮನವಿ ಮಾಡಿದ್ದಾರೆ. 
    ಅವರು ನಗರದ ನ್ಯೂಟೌನ್ ಸೆಂಟ್ ಚಾರ್ಲ್ಸ್ ಕಿಂಡರ್ ಗಾರ್ಡನ್ ಶಾಲೆಯಲ್ಲಿ ಈ ಕುರಿತು ಶಾಲೆಯ ಶಿಕ್ಷಕರು ಮತ್ತು ಮಕ್ಕಳಿಗೆ ಜಾಗೃತಿ ಮೂಡಿಸಿದರು. ದ್ವಿಚಕ್ರ ವಾಹನ ಚಾಲಕರು ಕಡ್ಡಾಯವಾಗಿ ಹೆಲ್ಮೆಟ್ ಬಳಸುವಂತೆ ಕಾನೂನು ರೂಪಿಸಲಾಗಿದೆ. ಈ ನಡುವೆ ಮಕ್ಕಳ ಸುರಕ್ಷತೆ ಸಹ ಬಹಳ ಮುಖ್ಯವಾಗಿದ್ದು, ೯ ತಿಂಗಳಿನಿಂದ ೪ ವರ್ಷದೊಳಗಿನ ಮಕ್ಕಳಿಗೂ ಸಹ ಕಡ್ಡಾಯವಾಗಿ ಹೆಲ್ಮೆಟ್ ಬಳಸಬೇಕು. ಜೊತೆಗೆ ದೊಡ್ಡವರು ಮಕ್ಕಳನ್ನು ಸುತ್ತಿಕೊಂಡು ಕಟ್ಟಿಕೊಳ್ಳುವ ಸುರಕ್ಷತಾ ವಿಧಾನ (ಸೇಫ್ಟಿ ಹಾರ್ನೆಸ್) ಬಳಸಬೇಕು.  ಇದರಿಂದ ಅಪಘಾತ ಪ್ರಕರಣಗಳಲ್ಲಿ ಮಕ್ಕಳು ಸಾವನ್ನಪ್ಪುವುದು ಕಡಿಮೆಯಾಗಲಿದೆ ಎಂದರು. 
    ದ್ವಿಚಕ್ರ ವಾಹನದಲ್ಲಿ ಮಕ್ಕಳನ್ನು ಸುರಕ್ಷಿತವಾಗಿ ಕರೆದೊಯ್ಯುವ ಸಂಬಂಧ ಇಲಾಖೆಗೆ ಮಾರ್ಗದರ್ಶಿ ಸೂಚಿ ಬಂದಿದ್ದು, ಅದರಂತೆ ಎಲ್ಲೆಡೆ ಜಾಗೃತಿ ಮೂಡಿಸಲಾಗುತ್ತಿದೆ. ಸಾರ್ವಜನಿಕರು ಈ ಮಾರ್ಗಸೂಚಿಯಂತೆ ನಡೆದುಕೊಳ್ಳುವ ಮೂಲಕ ಅಪಘಾತ ಪ್ರಕರಣಗಳನ್ನು ನಿಯಂತ್ರಿಸುವ ಕಾರ್ಯದಲ್ಲಿ ಕೈಜೋಡಿಸುವಂತೆ ಕೋರಿದ್ದಾರೆ.   

ರೈತರನ್ನು ಒಕ್ಕಲೆಬ್ಬಿಸುವ ಉದ್ದೇಶದಿಂದ ಭಯದ ವಾತಾವರಣ : ಬಿ.ಕೆ ಶಿವಕುಮಾರ್

ಭದ್ರಾವತಿ ತಾಲೂಕಿನ ಬೆಳ್ಳಿಗೆರೆ, ಉದಯನಗರ ಮತ್ತು ಬದನೆಹಾಳ್ ಗ್ರಾಮಗಳ ಹೊಳೆಹೊನ್ನೂರು ಹೋಬಳಿ ರೈತರ ಹಿತ ರಕ್ಷಣಾ ಸಮಿತಿ ವತಿಯಿಂದ ಅರಣ್ಯ ಮತ್ತು ಕಂದಾಯ ಇಲಾಖೆಗಳ ರೈತ ವಿರೋಧಿ ನೀತಿಯನ್ನು ಖಂಡಿಸಿ ಗುರುವಾರ ತಾಲೂಕು ಕಛೇರಿ ಮುಂಭಾಗ ಹಮ್ಮಿಕೊಳ್ಳಲಾಗಿದ್ದ ಪ್ರತಿಭಟನೆಯಲ್ಲಿ ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್(ಪಿಎಲ್‌ಡಿ ಬ್ಯಾಂಕ್) ಅಧ್ಯಕ್ಷ ಬಿ.ಕೆ ಶಿವಕುಮಾರ್ ಮಾತನಾಡಿದರು. 
    ಭದ್ರಾವತಿ : ಅರಣ್ಯ ಮತ್ತು ಕಂದಾಯ ಇಲಾಖೆಗಳು ರೈತರನ್ನು ಒಕ್ಕಲೆಬ್ಬಿಸುವ ಉದ್ದೇಶದಿಂದ ಭಯದ ವಾತಾವರಣ ಉಂಟು ಮಾಡುತ್ತಿವೆ. ಇದಕ್ಕೆ ಯಾರು ಸಹ ಆತಂಕಗೊಳ್ಳುವ ಅಗತ್ಯವಿಲ್ಲ ಎಂದು ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್(ಪಿಎಲ್‌ಡಿ ಬ್ಯಾಂಕ್) ಅಧ್ಯಕ್ಷ ಬಿ.ಕೆ ಶಿವಕುಮಾರ್ ಹೇಳಿದರು. 
    ತಾಲೂಕಿನ ಬೆಳ್ಳಿಗೆರೆ, ಉದಯನಗರ ಮತ್ತು ಬದನೆಹಾಳ್ ಗ್ರಾಮಗಳ ಹೊಳೆಹೊನ್ನೂರು ಹೋಬಳಿ ರೈತರ ಹಿತ ರಕ್ಷಣಾ ಸಮಿತಿ ವತಿಯಿಂದ ಅರಣ್ಯ ಮತ್ತು ಕಂದಾಯ ಇಲಾಖೆಗಳ ರೈತ ವಿರೋಧಿ ನೀತಿಯನ್ನು ಖಂಡಿಸಿ ಗುರುವಾರ ತಾಲೂಕು ಕಛೇರಿ ಮುಂಭಾಗ ಹಮ್ಮಿಕೊಳ್ಳಲಾಗಿದ್ದ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದರು. 
    ರೈತರು ಕಳೆದ ಸುಮಾರು ೬೫-೭೦ ವರ್ಷಗಳಿಂದ ಸಾಗುವಳಿ ಪತ್ರ ಪಡೆದು ಪಹಣಿ ಮತ್ತು ಇತರೆ ಎಲ್ಲಾ ದಾಖಲೆಗಳನ್ನು ಹೊಂದಿದ್ದರೂ ಸಹ ರೈತರ ಜಮೀನುಗಳಿಂದ ಒಕ್ಕಲೆಬ್ಬಿಸಲು ಮುಂದಾಗಿರುವುದು ಖಂಡನೀಯ. ರೈತರಲ್ಲಿ ಭಯ ಹುಟ್ಟಿಸುವ ನಿಟ್ಟಿನಲ್ಲಿ ಅರಣ್ಯ ಮತ್ತು ಕಂದಾಯ ಇಲಾಖೆಗಳು ವರ್ತಿಸುತ್ತಿವೆ. ಇದರ ವಿರುದ್ಧ ಉಗ್ರ ಹೋರಾಟ ನಡೆಸುವುದು ಅನಿವಾರ್ಯವಾಗಿದೆ. ರೈತರ ಜೊತೆ ಕಾಂಗ್ರೆಸ್ ಪಕ್ಷ ಹಾಗು ಶಾಸಕರು ಇದ್ದಾರೆ ಎಂದರು. 
    ಹಿರಿಯ ಮುಖಂಡ, ನಗರಸಭೆ ಸದಸ್ಯ ಬಿ.ಕೆ ಮೋಹನ್ ಮಾತನಾಡಿ, ತಾಲೂಕಿನ ಅರಣ್ಯ ವ್ಯಾಪ್ತಿಯಲ್ಲಿರುವ ಬಹುತೇಕ ಗ್ರಾಮಗಳ ರೈತರಿಗೆ ನೋಟಿಸ್ ನೀಡುವ ಮೂಲಕ ಭಯ ಹುಟ್ಟಿಸುವ ಕೆಲಸ ಮಾಡಲಾಗುತ್ತಿದೆ. ಇದಕ್ಕೆ ಯಾರು ಹೆದರುವ ಅಗತ್ಯವಿಲ್ಲ. ನಮ್ಮ ಹೋರಾಟ ನಾವು ಮುಂದುವರೆಸುವ ಮೂಲಕ ಅರಣ್ಯ ಮತ್ತು ಕಂದಾಯ ಇಲಾಖೆಗಳಿಗೆ ಎಚ್ಚರಿಕೆ ನೀಡಬೇಕೆಂದರು. 
    ಬ್ಲಾಕ್ ಕಾಂಗ್ರೆಸ್ ನಗರ ಘಟಕದ ಅಧ್ಯಕ್ಷ ಎಸ್. ಕುಮಾರ್, ನಗರಸಭೆ ಸದಸ್ಯ ಚನ್ನಪ್ಪ, ಸೂಡಾ ಸದಸ್ಯ ಎಚ್. ರವಿಕುಮಾರ್, ಯುವ ಮುಖಂಡ ಬಿ.ಎಸ್ ಗಣೇಶ್, ಸಿ. ಜಯಪ್ಪ, ಮುರುಗೇಶ್, ಜುಂಜ್ಯಾನಾಯ್ಕ ಸೇರಿದಂತೆ ಪಕ್ಷದ ಎಲ್ಲಾ ಘಟಕಗಳ ಅಧ್ಯಕ್ಷರು, ಪದಾಧಿಕಾರಿಗಳು, ಮುಖಂಡರು, ಕಾರ್ಯಕರ್ತರು ಹಾಗು ರೈತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. 

Wednesday, February 19, 2025

ಹಿಂದೂ ಧರ್ಮ ರಕ್ಷಣೆಗಾಗಿ ಶಿವಾಜಿ ಮಹಾರಾಜರ ಹೋರಾಟ ಅವಿಸ್ಮರಣೀಯ : ಬಿ.ಕೆ ಶಿವಕುಮಾರ್

ಭದ್ರಾವತಿಯಲ್ಲಿ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ತಾಲೂಕು ಆಡಳಿತ, ತಾಲೂಕು ಪಂಚಾಯಿತಿ ಮತ್ತು ನಗರಸಭೆ, ಛತ್ರಪತಿ ಶಿವಾಜಿ ಸೇವಾ ಸಂಘ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳ ಸಹಯೋಗದೊಂದಿಗೆ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಕಾರ್ಯಕ್ರಮ ನಡೆಯಿತು. 
    ಭದ್ರಾವತಿ : ಹಿಂದೂ ಧರ್ಮ ರಕ್ಷಣೆಗಾಗಿ ಛತ್ರಪತಿ ಶಿವಾಜಿ ಮಹಾರಾಜರು ನಡೆಸಿರುವ ಹೋರಾಟ ಇಂದಿಗೂ ಅವಿಸ್ಮರಣೀಯವಾಗಿದೆ ಎಂದು ಪಿಎಲ್‌ಡಿ ಅಧ್ಯಕ್ಷ ಬಿ.ಕೆ ಶಿವಕುಮಾರ್ ಹೇಳಿದರು. 
    ಅವರು ಬುಧವಾರ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ತಾಲೂಕು ಆಡಳಿತ, ತಾಲೂಕು ಪಂಚಾಯಿತಿ ಮತ್ತು ನಗರಸಭೆ, ಛತ್ರಪತಿ ಶಿವಾಜಿ ಸೇವಾ ಸಂಘ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳ ಸಹಯೋಗದೊಂದಿಗೆ ಹಮ್ಮಿಕೊಳ್ಳಲಾಗಿದ್ದ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಕಾರ್ಯಕ್ರಮ ಪಾಲ್ಗೊಂಡು ಮಾತನಾಡಿದರು 
    ರಾಷ್ಟ್ರಭಕ್ತರಾಗಿ, ಧರ್ಮ ರಕ್ಷಕರಾಗಿ, ಶಿವಾಜಿ ಮಹಾರಾಜರು ನೀಡಿರುವ ಕೊಡುಗೆ ಯಾರು ಮರೆವಂತಿಲ್ಲ. ಸನಾತನ ಕಾಲದಿಂದಲೂ ಹಿಂದೂ ಧರ್ಮ ನಾಶಪಡಿಸಲು ನಡೆಸುತ್ತಿದ್ದ ಕುತಂತ್ರ ಹಾಗು ಹಿಂದೂಗಳ ಮೇಲೆ ನಡೆಯುತ್ತಿದ್ದ ದೌರ್ಜನ್ಯ, ದಬ್ಬಾಳಿಕೆ ಬಾಲ್ಯದಲ್ಲಿಯೇ ಅರಿತುಕೊಂಡಿದ್ದ ಶಿವಾಜಿ ಮಹಾರಾಜರು ತಮ್ಮ ಜೀವನದ ಕೊನೆಯವರೆಗೂ ಹಿಂದೂ ಧರ್ಮ ರಕ್ಷಣೆಗಾಗಿ ಹೋರಾಟ ನಡೆಸಿದರು ಎಂದರು. 
    ಶಿವಾಜಿ ಮಹಾರಾಜರಿಗೆ ತಾಯಿಯೇ ಮೊದಲ ಗುರು. ರಾಷ್ಟ್ರ ಭಕ್ತರಾಗಿ, ಹಿಂದೂ ರಕ್ಷಕರಾಗಿ ಜಾತಿ, ಧರ್ಮ ಬೇಧಭಾವವಿಲ್ಲದೆ ಪ್ರಜೆಗಳಿಗೆ ಉತ್ತಮ ಆಡಳಿತ ನೀಡುವ ಮೂಲಕ ಇತಿಹಾಸದ ಪುಟದಲ್ಲಿ ಉಳಿದುಕೊಂಡಿದ್ದಾರೆ. ಅವರ ಆದರ್ಶ ಗುಣಗಳನ್ನು ನಾವೆಲ್ಲರೂ ಅನುಸರಿಸಬೇಕಾಗಿದೆ ಎಂದರು. 
    ಉಪ ತಹಸೀಲ್ದಾರ್ ಮಂಜಾನಾಯ್ಕ, ಉದ್ಯಮಿ ಬಿ.ಕೆ ಜಗನ್ನಾಥ್,  ಛತ್ರಪತಿ ಶಿವಾಜಿ ಸೇವಾ ಸಂಘದ ತಾಲೂಕು ಅಧ್ಯಕ್ಷ ಎಚ್.ಆರ್ ಲೋಕೇಶ್ವರ್‌ರಾವ್ ದೊಂಬಾಳೆ, ಪುರಸಭೆ ಮಾಜಿ ಉಪಾಧ್ಯಕ್ಷ ಟಿ. ವೆಂಕಟೇಶ್, ಡಿಎಸ್‌ಎಸ್ ಮುಖಂಡ ಈಶ್ವರಪ್ಪ, ಬಸವಂತಪ್ಪ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳ ಮುಖಂಡರು, ಸರ್ಕಾರದ ವಿವಿಧ ಇಲಾಖೆಗಳ ಅಧಿಕಾರಿಗಳು, ತಾಲೂಕು ಕಛೇರಿ ಸಿಬ್ಬಂದಿಗಳು, ಛತ್ರಪತಿ ಶಿವಾಜಿ ಸೇವಾ ಸಂಘದ ಪದಾಧಿಕಾರಿಗಳು, ನಿರ್ದೇಶಕರು ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು. 

ಹಿಂದೂಪರ ಕಾರ್ಯಕರ್ತರಿಂದ ಮಹಾ ಕುಂಭಮೇಳ ಕುರಿತು ಜಾಗೃತಿ

ಭದ್ರಾವತಿ ನಗರದ  ಹಿಂದೂಪರ ಕಾರ್ಯಕರ್ತರ ತಂಡ ಉತ್ತರ ಪ್ರದೇಶ  ಮಹಾ ಕುಂಭಮೇಳದಲ್ಲಿ ಪಾಲ್ಗೊಂಡು ಗಮನ ಸೆಳೆದಿದ್ದಾರೆ. ಪ್ರಸ್ತುತ ದೇಶದಲ್ಲಿ ಕುಂಭಮೇಳ ಕುರಿತು ಜಾಗೃತಿ ಮೂಡಿಸುವ ಅಗತ್ಯವಿದೆ ಎಂದು ಪ್ರತಿಪಾದಿಸಿದ್ದಾರೆ.
    ಭದ್ರಾವತಿ :  ನಗರದ  ಹಿಂದೂಪರ ಕಾರ್ಯಕರ್ತರ ತಂಡ ಉತ್ತರ ಪ್ರದೇಶ  ಮಹಾ ಕುಂಭಮೇಳದಲ್ಲಿ ಪಾಲ್ಗೊಂಡು ಗಮನ ಸೆಳೆದಿದ್ದಾರೆ. ಪ್ರಸ್ತುತ ದೇಶದಲ್ಲಿ ಕುಂಭಮೇಳ ಕುರಿತು ಜಾಗೃತಿ ಮೂಡಿಸುವ ಅಗತ್ಯವಿದೆ ಎಂದು ಪ್ರತಿಪಾದಿಸಿದ್ದಾರೆ.
    ಕುಂಭಮೇಳ ಕುರಿತು ಹಲವು ರೀತಿ ವಿಭಿನ್ನ ಹೇಳಿಕೆಗಳು ವ್ಯಕ್ತವಾಗುತ್ತಿರುವ ಸಂದರ್ಭದಲ್ಲಿ ಪ್ರಯಾಗ್ ರಾಜ್   ಕುಂಭಮೇಳ ತ್ರಿವೇಣಿ ಸಂಗಮದಲ್ಲಿ ಅಮೃತ ಸ್ನಾನ ಮಾಡಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಹಿಂದುತ್ವ ಹಾಗೂ  ಸನಾತನ ಧರ್ಮಕ್ಕೆ ಕುಂಭ ಮೇಳ ಕೊಡುಗೆ  ಅಪಾರವಾಗಿದೆ.  144 ವರ್ಷಗಳ ಬಳಿಕ ಬಂದಿರುವ ಮಹಾ ಕುಂಭಮೇಳ ಹಿಂದುತ್ವ ಸನಾತನ ಪರಂಪರೆಯನ್ನು ಎತ್ತಿ ಸಾರುತ್ತಿದೆ ಎಂದು  ತಿಳಿಸಿದ್ದಾರೆ.
    ಹಿಂದೂಪರ ಕಾರ್ಯಕರ್ತರಾದ ರುದ್ರೇಶ್, ಕಿರಣ್, ಗಂಗಾಧರ್, ನವೀನ ಹಾಗೂ ಸೋಮ ಸೇರಿದಂತೆ ಇನ್ನಿತರರು ತಂಡದಲ್ಲಿ ಪಾಲ್ಗೊಂಡಿದ್ದಾರೆ.

ಯರೇಹಳ್ಳಿ ಸರ್ಕಾರಿ ಶಾಲೆಗೆ `ಅತ್ಯುತ್ತಮ ಶಾಲೆ ರಾಜ್ಯ ಪ್ರಶಸ್ತಿ'


ಚೇತನ ಫೌಂಡೇಷನ್ ಕರ್ನಾಟಕ, ಪವರ್ ಆಫ್ ಯೂತ್ಸ್ ಫೌಂಡೇಷನ್ ಹುಬ್ಬಳಿ ಮತ್ತು ಅಪ್ನಾದೇಶ್ ಫೌಂಡೇಷನ್ ಧಾರವಾಡ ವತಿಯಿಂದ ಭದ್ರಾವತಿ ತಾಲೂಕಿನ ಯರೇಹಳ್ಳಿ ಗ್ರಾಮದ ಸರ್ಕಾರಿ ಉನ್ನತೀಕರಿಸಿದ ಕನ್ನಡ ಮತ್ತು ಆಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆಯ ಉತ್ತಮ ಕಾರ್ಯ ಚಟುವಟಿಕೆಗಳನ್ನು ಗುರುತಿಸಿ ಅತ್ಯುತ್ತಮ ಶಾಲೆ ರಾಜ್ಯ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ. 
    ಭದ್ರಾವತಿ : ಚೇತನ ಫೌಂಡೇಷನ್ ಕರ್ನಾಟಕ, ಪವರ್ ಆಫ್ ಯೂತ್ಸ್ ಫೌಂಡೇಷನ್ ಹುಬ್ಬಳಿ ಮತ್ತು ಅಪ್ನಾದೇಶ್ ಫೌಂಡೇಷನ್ ಧಾರವಾಡ ವತಿಯಿಂದ ತಾಲೂಕಿನ ಯರೇಹಳ್ಳಿ ಗ್ರಾಮದ ಸರ್ಕಾರಿ ಉನ್ನತೀಕರಿಸಿದ ಕನ್ನಡ ಮತ್ತು ಆಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆಯ ಉತ್ತಮ ಕಾರ್ಯ ಚಟುವಟಿಕೆಗಳನ್ನು ಗುರುತಿಸಿ ಅತ್ಯುತ್ತಮ ಶಾಲೆ ರಾಜ್ಯ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ. 
    ವಾರ್ತೆ, ಸುಭಾಷಿತ, ಗಾದೆ, ಒಗಟು, ದಿನಕ್ಕೊಂದು ಪ್ರಶ್ನೆ, ದಿನಕೊಂದು ಪುಸ್ತಕ ಪರಿಚಯ, ಪ್ರಾರ್ಥನೆ ಸಂದರ್ಭ ಕಡ್ಡಾಯವಾಗಿ ಎಲ್ಲಾ ಮಕ್ಕಳನ್ನು ಬಳಸಿಕೊಂಡು ಪ್ರತಿ ವಾರ ರಸಪ್ರಶ್ನೆ ಕಾರ್ಯಕ್ರಮ, ಗುಂಪು ಕಲಿಕೆ,  ಸರ್ಕಾರದ ಶಾಲಾ ಯೋಜನೆಗಳ ಸದ್ಬಳಕೆಯಲ್ಲಿ ಕ್ರಿಯಾಶೀಲತೆ, ಪ್ರೇರಣಾ ಕ್ಲಬ್ ಸೇರಿದಂತೆ ವಿವಿಧ ಸಂಘಗಳ ನಿರ್ವಹಣೆ, ಕಂಪ್ಯೂಟರ್ ಕಲಿಕೆ, ಎಲ್‌ಕೆಜಿ ಮತ್ತು ಯುಕೆಜಿ ಮಕ್ಕಳಿಗೆ ವಿಶೇಷ ತರಗತಿಗಳು, ಶಾಲಾ ಅಮೃತ ಮಹೋತ್ಸವ ಹಾಗೂ ಹಳೆಯ ವಿದ್ಯಾರ್ಥಿಗಳ ಯಶಸ್ವಿ ಸಮಾವೇಶ, ಶಾರದಾ ಮೂರ್ತಿ ಪ್ರತಿಷ್ಠಾಪನೆ, ಭೋಜನ ಕೊಠಡಿ ಸುಣ್ಣ ಬಣ್ಣ, ಟೈಲ್ಸ್ ಅಳವಡಿಕೆ, ಪ್ರತಿಭಾ ಕಾರಂಜಿ ಮತ್ತು ಕ್ರೀಡಾ ಕೂಟಗಳಲ್ಲಿ ಬಹುಮಾನ ಹಾಗು ಇಲಾಖೆ ಕಾರ್ಯಕ್ರಮಗಳ ಯಶಸ್ವಿ ಅನುಷ್ಠಾನ ಸೇರಿದಂತೆ ಇನ್ನಿತರ ಕಾರ್ಯ ಚಟುವಟಿಕೆಗಳನ್ನು ಗುರುತಿಸಿ ಈ ಪ್ರಶಸ್ತಿಯನ್ನು ನೀಡಲಾಗುತ್ತಿದೆ. 
    ಫೆ.೨೨ರ ಮಧ್ಯಾಹ್ನ ೨.೩೦ಕ್ಕೆ ಧಾರವಾಡ ಕರ್ನಾಟಕ ವಿದ್ಯಾವರ್ಧಕ ಸಂಘದ ನಾಡೋಜ ಡಾ. ಪಾಟೀಲ ಪುಟ್ಟಪ್ಪ ಸಭಾಂಗಣದಲ್ಲಿ ನಡೆಯಲಿರುವ ಅಖಿಲ ಕರ್ನಾಟಕ ಶಿಕ್ಷಕರ ಸಮ್ಮೇಳನದಲ್ಲಿ ಪ್ರಶಸ್ತಿ ವಿತರಣೆ ನಡೆಯಲಿದೆ. 
    ಶಾಲೆಯ ಬಡ್ತಿ ಮುಖ್ಯ ಶಿಕ್ಷಕ ಕೋಗಲೂರು ತಿಪ್ಪೇಸ್ವಾಮಿ, ಶಿಕ್ಷಕ ವೃಂದ, ಸಿಬ್ಬಂದಿ ವರ್ಗದವರು, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರು, ಸದಸ್ಯರು, ಗ್ರಾಮ ಪಂಚಾಯಿತಿ ಅಧ್ಯಕ್ಷರು, ಸದಸ್ಯರು, ಗ್ರಾಮದ ಮುಖಂಡರು, ಗ್ರಾಮಸ್ಥರು ಈ ಶಾಲೆಯನ್ನು ಅಭಿನಂದಿಸಿದ್ದಾರೆ.