Thursday, April 10, 2025

ಏ.೧೧ರಂದು ನಟನಾ ಶಾಲೆ, ಫಿಲಂ ಇನ್‌ಸ್ಟಿಟ್ಯೂಟ್ ಉದ್ಘಾಟನೆ


    ಭದ್ರಾವತಿ : ಹಳೇನಗರದ ತಾಲೂಕು ಕಛೇರಿ ಮುಂಭಾಗದ ಎದುರು ರಸ್ತೆಯಲ್ಲಿ ನೂತನವಾಗಿ ಆರಂಭಗೊಳ್ಳುತ್ತಿರುವ ಪಾಂಚಜನ್ಯ ನಟನಾ ಶಾಲೆ ಮತ್ತು ಫಿಲಂ ಇನ್‌ಸ್ಟಿಟ್ಯೂಟ್ ಏ.೧೧ರಂದು ಬೆಳಿಗ್ಗೆ ೯.೩೦ಕ್ಕೆ ಶಾಸಕ ಬಿ.ಕೆ ಸಂಗಮೇಶ್ವರ್ ಉದ್ಘಾಟಿಸಲಿದ್ದಾರೆ. 
    ಜಾನಪದ ಮತ್ತು ಚಲನಚಿತ್ರ ಕಲಾವಿದ ಗುರುರಾಜ್ ಹೊಸಕೋಟೆ, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾದ ಜೋಗತಿ ಮಂಜಮ್ಮ, ನ್ಯೂಟೌನ್ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರಾಚಾರ್ಯ ಜಿ.ಎಫ್ ಕುಟ್ರಿ, ಚಲನಚಿತ್ರ ಸಂಗೀತ ನಿರ್ದೇಶಕ ಲಯ ಕೋಕಿಲ, ಚಲನಚಿತ್ರ ನಟ ಕುಮಾರ್, ಕಂಚಿನಬಾಗಿಲು ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದ ಪ್ರಧಾನ ಅರ್ಚಕ ಪವನ್ ಕುಮಾರ್ ಉಡುಪ, ಅರಳಿಹಳ್ಳಿ ಸರ್ಕಾರಿ ಪ್ರೌಢಶಾಲೆ ಪ್ರಭಾರ ಮುಖ್ಯೋಪಾಧ್ಯಾಯ ದಿವಾಕರ್, ಗಂಗಾವತಿ ಸರ್ಕಾರಿ ಆಸ್ಪತ್ರೆ ಮುಖ್ಯ ವೈದ್ಯಾಧಿಕಾರಿ ಡಾ. ಈಶ್ವರ್ ಎಸ್. ಸವಡಿ, ಬಸವರಾಜ್ ಮೇಟಿ, ಡಾ. ವರ್ಷ, ಬಿ.ಎಚ್. ಗಿರಿಧರ ಮೂರ್ತಿ, ಶಂಕರ್ ಸೂಗತಿ, ಡಾ. ಸಿ. ರಾಮಚಾರಿ, ಬಸವರಾಜ್ ಸೋದರ್, ಚಂದ್ರಶೇಖರ್ ನಾಯ್ಕ್ ಮತ್ತು ರಾಜೇಶ್ ಸಂಗೊಳ್ಳಿ ಸೇರಿದಂತೆ ಇನ್ನಿತರರು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ. 
    ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಚಲನಚಿತ್ರ ನಟಿ, ಇನ್‌ಸ್ಟಿಟ್ಯೂಟ್ ಮುಖ್ಯಸ್ಥೆ ಪೂರ್ಣಿಮ ಪಾಟೀಲ್ ಕೋರಿದ್ದಾರೆ. 

ಏ.೧೨ರಂದು ಶ್ರೀ ಅಕ್ಕಮಹಾದೇವಿ ಜಯಂತಿ

    ಭದ್ರಾವತಿ : ಹಳೇನಗರದ ಶ್ರೀ ಬಸವೇಶ್ವರ ವೃತ್ತದ ಶ್ರೀ ಅಕ್ಕಮಹಾದೇವಿ ಬಳಗದಿಂದ ಏ.೧೨ರಂದು ಕನ್ನಡದ ಪ್ರಪ್ರಥಮ ಮಹಿಳಾ ಕವಯಿತ್ರಿ ಶ್ರೀ ಅಕ್ಕಮಹಾದೇವಿಯವರ ಜಯಂತ್ಯೋತ್ಸವ ಸಮಾರಂಭ ಬೆಳಿಗ್ಗೆ ೧೦.೩೦ಕ್ಕೆ ಹಮ್ಮಿಕೊಳ್ಳಲಾಗಿದೆ. 
    ಶಿವಮೊಗ್ಗ ಬಸವಕೇಂದ್ರ ಹಾಗು ಚಿಕ್ಕಮಗಳೂರು ಬಸವತತ್ವ ಪೀಠದ ಶ್ರೀ ಡಾ. ಬಸವಮರುಳಸಿದ್ದ ಸ್ವಾಮೀಜಿಯವರು ಸಮಾರಂಭದ ದಿವ್ಯ ಸಾನಿಧ್ಯವಹಿಸಲಿದ್ದು, ಶಾಸಕ ಬಿ.ಕೆ ಸಂಗಮೇಶ್ವರ್ ಉದ್ಘಾಟಿಸಲಿದ್ದಾರೆ. 
    ಶ್ರೀ ಅಕ್ಕಮಹಾದೇವಿ ಬಳಗದ ಅಧ್ಯಕ್ಷೆ ಸುವರ್ಣಮ್ಮ ಹಿರೇಮಠ್ ಅಧ್ಯಕ್ಷತೆ ವಹಿಸಲಿದ್ದು, ನಗರಸಭೆ ಅಧ್ಯಕ್ಷೆ ಗೀತಾ ರಾಜ್‌ಕುಮಾರ್, ಸದಸ್ಯೆ ಅನುಪಮ ಚನ್ನೇಶ್, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಬಿ.ಕೆ ಶಿವಕುಮಾರ್, ಬಸವ ಕೇಂದ್ರದ ಅಧ್ಯಕ್ಷ ಜಗದೀಶ್ ಕವಿ ಸೇರಿದಂತೆ ಇನ್ನಿತರರು ಉಪಸ್ಥಿತರಿರುವರು. ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಪ್ರಮುಖರಾದ ಬಾರಂದೂರು ಪ್ರಕಾಶ್ ಅಕ್ಕಮಹಾದೇವಿಯವರ ಜೀವನ ಸಾಧನೆ ಸಂದೇಶ ಕುರಿತು ಉಪನ್ಯಾಸ ನೀಡಲಿದ್ದಾರೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಕೋರಲಾಗಿದೆ. 

Wednesday, April 9, 2025

`ಶಿಮುಲ್ ಶಿವಮೊಗ್ಗ'ಕ್ಕೆ ಒಂದು ದಿನದ ಕೈಗಾರಿಕಾ ಭೇಟಿ

ಭದ್ರಾವತಿ ನ್ಯೂಟೌನ್ ಸರ್.ಎಂ.ವಿ ಸರ್ಕಾರಿ ಕಲಾ ಮತ್ತು ವಾಣಿಜ್ಯ ಕಾಲೇಜಿನ ವಾಣಿಜ್ಯ ಮತ್ತು ನಿರ್ವಹಣಾ ವಿಭಾಗ ವಿದ್ಯಾರ್ಥಿಗಳಿಗೆ ಅರಿವು ಮೂಡಿಸಲು ಮಂಗಳವಾರ `ಶಿಮುಲ್ ಶಿವಮೊಗ್ಗ'ಕ್ಕೆ ಒಂದು ದಿನದ ಕೈಗಾರಿಕಾ ಭೇಟಿ ಹಮ್ಮಿಕೊಂಡಿತ್ತು. 
    ಭದ್ರಾವತಿ: ನಗರದ ನ್ಯೂಟೌನ್ ಸರ್.ಎಂ.ವಿ ಸರ್ಕಾರಿ ಕಲಾ ಮತ್ತು ವಾಣಿಜ್ಯ ಕಾಲೇಜಿನ ವಾಣಿಜ್ಯ ಮತ್ತು ನಿರ್ವಹಣಾ ವಿಭಾಗ ವಿದ್ಯಾರ್ಥಿಗಳಿಗೆ ಅರಿವು ಮೂಡಿಸಲು ಮಂಗಳವಾರ ಮಾಚೇನಹಳ್ಳಿಯಲ್ಲಿರುವ ಶಿವಮೊಗ್ಗ, ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಒಕ್ಕೂಟಕ್ಕೆ `ಶಿಮುಲ್ ಶಿವಮೊಗ್ಗ'ಕ್ಕೆ ಒಂದು ದಿನದ ಕೈಗಾರಿಕಾ ಭೇಟಿ ಹಮ್ಮಿಕೊಂಡಿತ್ತು. 
    ವಾಣಿಜ್ಯ ಮತ್ತು ನಿರ್ವಹಣಾ ವಿದ್ಯಾರ್ಥಿಗಳ ವೇದಿಕೆ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ಸುಮಾರು ೭೪ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಶಿಮುಲ್ ರಚನೆ, ಕಾರ್ಯ ನಿರ್ವಹಣೆ ಸೇರಿದಂತೆ ಇನ್ನಿತರ ವಿಷಯಗಳ ಕುರಿತು ಮಾಹಿತಿ ಪಡೆದುಕೊಂಡರು. . 
    ಕಾಲೇಜಿನ ಪ್ರಭಾರ ಪ್ರಾಂಶುಪಾಲ ಪ್ರೊ. ಆರ್. ಮಂಜಪ್ಪ ಮತ್ತು ನಿರ್ವಹಣಾ ವಿಭಾಗದ ಮುಖ್ಯಸ್ಥೆ ಡಾ. ಟಿ.ಜಿ ಉಮಾ, ವಾಣಿಜ್ಯ ಮತ್ತು ನಿರ್ವಹಣಾ ವಿಭಾಗದ   
    ಪ್ರೊ. ಆರ್. ವೆಂಕಟೇಶ್, ಪ್ರೊ. ವಿ.ಬಿ ಚಿರಂಜೀವಿ, ಡಾ. ಅಕ್ಷತಾ, ಶಂಕರ್ ಯಾದವ್ ,ಶಾಂತಿ, ಸುಷ್ಮಾ, ವಾಣಿ, ನಂದಿತಾ ಮತ್ತು ನಾಗಮ್ಮ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. 

ರಾಜ್ಯಮಟ್ಟದ ನಾಲ್ವಡಿ ಕೃಷ್ಣರಾಜ ಒಡೆಯರ್ ಸದ್ಭಾವನಾ ಪ್ರಶಸ್ತಿಗೆ ಭಾಜನರಾದ ಎಂ.ಆರ್ ರೇವಣಪ್ಪ

ಎಂ.ಆರ್ ರೇವಣಪ್ಪ 
    ಭದ್ರಾವತಿ: ತಾಲೂಕಿನ ಸುಲ್ತಾನ್‌ಮಟ್ಟಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಶಿಕ್ಷಕ, ಕರ್ನಾಟಕ ಜಾನಪದ ಪರಿಷತ್ ತಾಲೂಕು ಅಧ್ಯಕ್ಷ ಎಂ.ಆರ್ ರೇವಣಪ್ಪರವರು ರಾಜ್ಯಮಟ್ಟದ ನಾಲ್ವಡಿ ಕೃಷ್ಣರಾಜ ಒಡೆಯರ್ ಸದ್ಭಾವನಾ ಪ್ರಶಸ್ತಿಗೆ ಭಾಜನರಾಗಿದ್ದಾರೆ.  
ರೇವಣಪ್ಪರವರು ಸಾಹತ್ಯ ಕ್ಷೇತ್ರದಲ್ಲಿ ಸಲ್ಲಿಸಿರುವ ಸೇವೆಯನ್ನು ಗುರುತಿಸಿ ಬೆಂಗಳೂರು ಕೊಡಿಗೆಹಳ್ಳಿಯ ಕಾವ್ಯಶ್ರೀ ಚಾರಿಟಬಲ್ ಟ್ರಸ್ಟ್ ಕರ್ನಾಟಕ ವತಿಯಿಂದ  ಪ್ರಶಸ್ತಿ ನೀಡಲಾಗುತ್ತಿದೆ. 
    ರೇವಣಪ್ಪರವರು ಉತ್ತಮ ಶಿಕ್ಷಕರಾಗಿದ್ದು, ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ. ಶಿಕ್ಷಕ ವೃತ್ತಿ ಜೊತೆಗೆ ಕಳೆದ ಸುಮಾರು ೩೦ ವರ್ಷಗಳಿಂದ ಜಾನಪದ, ನಾಟಕ ಸೇರಿದಂತೆ ಹಲವು ಕಲೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಸಂಗ್ಯಾಬಾಳ್ಯ, ರಾಜಾವಿಕ್ರಮ, ಸತ್ಯಹರಿಶ್ಚಂದ್ರ ಸೇರಿದಂತೆ ಸುಮಾರು ೩೦ ರಿಂದ ೪೦ ಪೌರಾಣಿಕ ಹಾಗು ಸಾಮಾಜಿಕ ನಾಟಕಗಳನ್ನು ನಿರ್ದೇಶಿಸಿ ಪ್ರದರ್ಶನಗೊಳಿಸಿದ್ದಾರೆ. ಅಲ್ಲದೆ ಕರ್ನಾಟಕ ನಾಟ್ಯ ವೈಭವ ಮಂಡಳಿಯ ಹಲವು ನಾಟಕದಲ್ಲಿ ಅಭಿನಯಿಸಿದ್ದಾರೆ. 
    ರೇವಣಪ್ಪರವರು ಡೊಳ್ಳು ಕುಣಿತ, ಕೋಲಾಟ, ಸುಗ್ಗಿ ಕುಣಿತ ಕಲಾವಿದರೂ ಸಹ ಆಗಿದ್ದು, ರಾಜ್ಯ ಹಾಗು ರಾಷ್ಟ್ರಮಟ್ಟದ ಪ್ರದರ್ಶನಗಳಲ್ಲಿ ಭಾಗವಹಿಸಿ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ತಮ್ಮ ಕಲೆಗಳನ್ನು ತಿಳಿಸಿಕೊಡುವ ಕಾರ್ಯದಲ್ಲೂ ಯಶಸ್ವಿಯಾಗಿದ್ದಾರೆ. ವಿಶೇಷವಾಗಿ ಕಾರಾಗೃಹದಲ್ಲೂ ಶಿಬಿರಗಳನ್ನು ಆಯೋಜಿಸಿ ಕೈದಿಗಳಿಗೂ ತಮ್ಮ ಕಲೆಗಳನ್ನು ಕಲಿಸಿಕೊಡುವಲ್ಲಿ ಯಶಸ್ವಿಯಾಗಿದ್ದಾರೆ. 
    ರೇವಣಪ್ಪರವರು ಏ.೧೦ರಂದು ಮೈಸೂರಿನ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಸಭಾಂಗಣದಲ್ಲಿ ನಡೆಯಲಿರುವ `ಕರ್ನಾಟಕ ಸಾಂಸ್ಕೃತಿಕ ವೈಭವ-೨೦೨೫' ಕಾರ್ಯಕ್ರಮದಲ್ಲಿ ಪ್ರಶಸ್ತಿ ಸ್ವೀಕರಿಸಲಿದ್ದಾರೆ. 

ಕುಡಿಯುವ ನೀರಿನ ಸಮಸ್ಯೆ ಉಲ್ಬಣ, ಯುಜಿಡಿ ಕಾಮಗಾರಿ ನಿರ್ಲಕ್ಷ್ಯ ; ಅಧಿಕಾರಿಗಳ ವಿರುದ್ಧ ಆಕ್ರೋಶ

ನಗರಸಭೆ ಸಾಮಾನ್ಯಸಭೆಯಲ್ಲಿ ಆಡಳಿತ ರೂಢ ಪಕ್ಷದ ಸದಸ್ಯರಿಂದಲೇ ಪ್ರತಿಭಟನೆ 

ಕುಡಿಯುವ ನೀರಿನ ಸಮಸ್ಯೆ ಉಲ್ಬಣ, ಯುಜಿಡಿ ಕಾಮಗಾರಿ ನಿರ್ಲಕ್ಷ್ಯದ ಹಿನ್ನಲೆಯಲ್ಲಿ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಬುಧವಾರ ಭದ್ರಾವತಿ ನಗರಸಭೆಯಲ್ಲಿ ನಡೆದ ಸಭೆಯಲ್ಲಿ ಆಡಳಿತ ರೂಢ ಪಕ್ಷದ ಸದಸ್ಯರೇ ಬಾವಿಗಿಳಿದು ಪ್ರತಿಭಟನೆ ನಡೆಸಿದರು. ಅದರಲ್ಲೂ ಸದಸ್ಯೆ ಲತಾ ಚಂದ್ರಶೇಖರ್ ಬಳೆ ತೋರಿಸಿ ಆಕ್ರೋಶ ಹೊರ ಹಾಕಿದರು. 
    ಭದ್ರಾವತಿ: ನಗರಸಭೆ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಬಣಿಸಿದ್ದು, ಅಲ್ಲದೆ ವಾರ್ಡ್‌ಗಳಲ್ಲಿ ಚರಂಡಿ, ರಸ್ತೆ ಸೇರಿದಂತೆ ಯುಜಿಡಿ ಕಾಮಗಾರಿಗಳು ಪೂರ್ಣಗೊಂಡಿಲ್ಲ. ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸದೆ ಅಧಿಕಾರಿಗಳು ಬೇಜವಾಬ್ದಾರಿತನದಿಂದ ವರ್ತಿಸುತ್ತಿದ್ದಾರೆಂದು ಆಡಳಿತ ರೂಢ ಪಕ್ಷದ ಸದಸ್ಯರೇ ಬುಧವಾರ ನಡೆದ ಸಾಮಾನ್ಯಸಭೆಯಲ್ಲಿ ಸಭೆಯ ಬಾವಿಗಿಳಿದು ಪ್ರತಿಭಟನೆ ನಡೆಸುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು.
    ನಗರಸಭೆ ಅಧ್ಯಕ್ಷೆ ಗೀತಾರಾಜ್‌ಕುಮಾರ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯ ಆರಂಭದಲ್ಲಿ ಆಡಳಿತ ರೂಢ ಪಕ್ಷದ ವಾರ್ಡ್ ನಂ.೬ರ ಸದಸ್ಯ ಆರ್. ಶ್ರೇಯಸ್ ವಾರ್ಡ್ ನಂ.೩ರ ಸದಸ್ಯ ಜಾರ್ಜ್ ಮತ್ತು ವಾರ್ಡ್ ನಂ.೩೩ರ ಪಕ್ಷೇತರ ಸದಸ್ಯ ಆರ್. ಮೋಹನ್ ಕುಮಾರ್ ಸಭೆಯ ಬಾವಿಗಿಳಿದು ಪ್ರತಿಭಟಿಸುವ ಮೂಲಕ ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರಹಾಕಿದರು. 
    ಅಭಿಯಂತರರಾದ ಶಿವಪ್ರಸಾದ್ ಹಾಗು ಪ್ರಸಾದ್ ಮತ್ತು ಸಂತೋಷ್ ಪಾಟೀಲ್ ಸೇರಿದಂತೆ ಇನ್ನಿತರ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡು ವಾರ್ಡ್‌ಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಬಣಿಸಿರುವ ಕುರಿತು ಮಾಹಿತಿ ನೀಡಿದರೂ ಸಹ ಯಾರು ಗಮನ ಹರಿಸುತ್ತಿಲ್ಲ. ಇದರಿಂದಾಗಿ ನಿವಾಸಿಗಳು ಸಂಕಷ್ಟಕ್ಕೆ ಒಳಗಾಗಿದ್ದಾರೆ. ತಕ್ಷಣ ನೀರಿನ ಸಮಸ್ಯೆ ಬಗೆಹರಿಸಬೇಕೆಂದು ಆಗ್ರಹಿಸಿದರು. 
    ಈ ನಡುವೆ ಅಧಿಕಾರಿಗಳು ಸಮಜಾಯಿಷಿ ನೀಡಲು ಪ್ರಯತ್ನಿಸಿದರೂ ಸಹ ಸಾಧ್ಯವಾಗಲಿಲ್ಲ. ಸದಸ್ಯರಾದ ಬಿ.ಕೆ ಮೋಹನ್, ಬಿ.ಟಿ ನಾಗರಾಜ್, ಚನ್ನಪ್ಪ, ವಿ. ಕದಿರೇಶ್, ಟಿಪ್ಪುಸುಲ್ತಾನ್, ಕೆ. ಸುದೀಪ್ ಕುಮಾರ್ ಸೇರಿದಂತೆ ಇನ್ನಿತರ ಸದಸ್ಯರು ಸುಮಾರು ಅರ್ಧ ತಾಸು ಅಧಿಕಾರಿಗಳ ವರ್ತನೆ ಹಾಗು ವಾರ್ಡ್‌ಗಳಲ್ಲಿ ಎದುರಾಗಿರುವ ಸಮಸ್ಯೆಗಳನ್ನು ಸಭೆಯ ಗಮನಕ್ಕೆ ತಂದರು. ಈ ನಡುವೆ ಪೌರಾಯುಕ್ತ ಪ್ರಕಾಶ್ ಎಂ. ಚನ್ನಪ್ಪನವರ್ ಮಾತನಾಡಿ, ೧ ವಾರದಲ್ಲಿ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದರು. 
    ಈ ನಡುವೆ ವಿದ್ಯುತ್ ಸಮಸ್ಯೆಯಿಂದ ಸಮರ್ಪಕವಾಗಿ ಕುಡಿಯುವ ನೀರು ಪೂರೈಸಲು ಸಾಧ್ಯವಾಗುತ್ತಿಲ್ಲ ಎಂಬ ಆರೋಪದ ಹಿನ್ನಲೆಯಲ್ಲಿ ಮೆಸ್ಕಾಂ ಅಧಿಕಾರಿಗಳಿಂದ ವಿದ್ಯುತ್ ಸಮಸ್ಯೆ ಕುರಿತು ಮಾಹಿತಿ ಪಡೆಯಲಾಯಿತು.  
    ಕುಡಿಯುವ ನೀರಿನ ಸಮಸ್ಯೆ ಜೊತೆಗೆ ವಾರ್ಡ್‌ಗಳಲ್ಲಿ ಚರಂಡಿ, ರಸ್ತೆ ಸೇರಿದಂತೆ ಯುಜಿಡಿ ಕಾಮಗಾರಿಗಳು ಸ್ಥಗಿತಗೊಂಡಿವೆ. ಅಧಿಕಾರಿಗಳು ಹಾಗು ಗುತ್ತಿಗೆದಾರರು ಕಾಮಗಾರಿ ಪೂರ್ಣಗೊಳಿಸುವಲ್ಲಿ ನಿರ್ಲಕ್ಷ್ಯತನವಹಿಸಿದ್ದಾರೆ. ಅವರಿಗೆ ಕಾಮಗಾರಿ ನಡೆಸಲು ಸಾಧ್ಯವಾಗದಿದ್ದರೆ ಕೈಗಳಿಗೆ ಬಳೆ ಧರಿಸಿಕೊಂಡು ಇರಲಿ ಎಂದು ವಾರ್ಡ್ ನಂ. ೩೪ರ ಸದಸ್ಯೆ ಲತಾ ಚಂದ್ರಶೇಖರ್ ಬಳೆ ಪ್ರದರ್ಶಿಸುವ ಮೂಲಕ ಆಕ್ರೋಶ ಹೊರ ಹಾಕಿದರು. ಸುಮಾರು ೬ ತಿಂಗಳಿಂದ ಕಾಮಗಾರಿ ಸ್ಥಗಿತಗೊಂಡಿದೆ. ವಾರ್ಡ್‌ಗಳ ನಿವಾಸಿಗಳು ನಮ್ಮನ್ನು ಪ್ರಶ್ನಿಸುತ್ತಿದ್ದಾರೆ. ಕಾಮಗಾರಿ ತಕ್ಷಣ ಪೂರ್ಣಗೊಳಿಸುವಂತೆ ಅಧಿಕಾರಿಗಳು ಹಾಗು ಗುತ್ತಿಗೆದಾರರಿಗೆ ಹಲವು ಬಾರಿ ಮನವಿ ಮಾಡಿದರೂ ಸಹ ಏನೂ ಪ್ರಯೋಜನವಾಗಿಲ್ಲ ಎಂದು  ಅಳಲು ತೋರ್ಪಡಿಸಿಕೊಂಡರು. 
    ಗುತ್ತಿಗೆದಾರ ಸತೀಶ್ ಪರವಾಗಿ ಜಿಪಿಎ ಹೋಲ್ಡರ್ ಪಡೆದಿರುವ ಅಭಿಲಾಷ್ ಸಭೆಗೆ ಹಣದ ಸಮಸ್ಯೆ ಎದುರಾಗಿರುವ ಕುರಿತು ಮಾಹಿತಿ ನೀಡಿದರು. ಈಗಾಗಲೇ ನಡೆಸಿರುವ ಕಾಮಗಾರಿಗೆ ಇನ್ನೂ ಹಣ ಬಂದಿಲ್ಲ. ಈ ಹಿನ್ನಲೆಯಲ್ಲಿ ವಿಳಂಬವಾಗಿದೆ. ಆದರೂ ಸಹ ಕಾಮಗಾರಿ ಪೂರ್ಣಗೊಳಿಸಲಾಗುವುದು. ಕಾಲಾವಕಾಶ ನೀಡುವಂತೆ ಮನವಿ ಮಾಡಿದರು. ಈ ನಡುವೆ ಸದಸ್ಯ ಚನ್ನಪ್ಪ ಮಾತನಾಡಿ, ಕಾಮಗಾರಿ ಮುಕ್ತಾಯಗೊಳಿಸುವುದು ಗುತ್ತಿಗೆದಾರರ ಜವಾಬ್ದಾರಿಯಾಗಿದೆ. ಈಗಾಗಲೇ ಮುಂಗಡ ಹಣ ಸಹ ಪಾವತಿಸಲಾಗಿದೆ. ಆದರೂ ಸಹ ಕಾಮಗಾರಿ ಪೂರ್ಣಗೊಳಿಸದಿರುವುದು ಸರಿಯಲ್ಲ ಎಂದರು. 
    ಈ ನಡುವೆ ಪೌರಾಯುಕ್ತ ಪ್ರಕಾಶ್ ಎಂ. ಚನ್ನಪ್ಪನವರ್ ಮಾತನಾಡಿ, ಚರಂಡಿ, ರಸ್ತೆ ಸೇರಿದಂತೆ ಯುಜಿಡಿ ಕಾಮಗಾರಿಗಳನ್ನು ಮುಂದಿನ ೧೫ ದಿನಗಳಲ್ಲಿ ಬಗೆಹರಿಸುವುದಾಗಿ ಭರವಸೆ ನೀಡಿದರು. 
    ಸದಸ್ಯರಾದ ಟಿಪ್ಪು ಸುಲ್ತಾನ್, ಬಿ.ಟಿ ನಾಗರಾಜ್ ಸೇರಿದಂತೆ ಇನ್ನಿತರರು ಮಾತನಾಡಿ, ನಗರಸಭೆ ವ್ಯಾಪ್ತಿಯಲ್ಲಿ ಸರ್ಕಾರಿ ಜಾಗಗಳನ್ನು ಕಬಳಿಸಲಾಗುತ್ತಿದೆ. ಈ ಕುರಿತು ಅಧಿಕಾರಿಗಳಿಗೆ ಮಾಹಿತಿ ನೀಡಿದರೂ ಸಹ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಅಸಮಾಧಾನ ಹೊರಹಾಕಿದರು. 
    ಸಭೆ ಆರಂಭವಾಗಿ ೨ ತಾಸು ಕಳೆದರೂ ಸಹ ಅಜೆಂಡಾದಲ್ಲಿನ ಪ್ರಸ್ತಾವನೆಗಳ ಕುರಿತು ಚರ್ಚೆ ನಡೆಯಲಿಲ್ಲ. ನಗರಸಭೆ ಉಪಾಧ್ಯಕ್ಷ ಎಂ. ಮಣಿ ಎಎನ್‌ಎಸ್ ಮತ್ತು ಸ್ಥಾಯಿ ಸಮಿತಿ ಅಧ್ಯಕ್ಷ ಸೈಯದ್ ರಿಯಾಜ್ ಉಪಸ್ಥಿತರಿದ್ದರು. 
 

Tuesday, April 8, 2025

ಸರ್ಕಾರಿ ಸಂಚಿಯ ಹೊನ್ನಮ್ಮ ಪದವಿ ಪೂರ್ವ ಕಾಲೇಜಿಗೆ ಶೇ.೬೯ ಫಲಿತಾಂಶ


ಭದ್ರಾವತಿ ಹಳೇನಗರದ ಸರ್ಕಾರಿ ಸಂಚಿಯ ಹೊನ್ನಮ್ಮ ಪದವಿ ಪೂರ್ವ ಕಾಲೇಜು. 
    ಭದ್ರಾವತಿ: ಹಳೆನಗರದ ಸರ್ಕಾರಿ ಸಂಚಿಯ ಹೊನ್ನಮ್ಮ ಪದವಿ ಪೂರ್ವ ಕಾಲೇಜು ಈ ಬಾರಿ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇ.೬೯ರಷ್ಟು ಫಲಿತಾಂಶ ಪಡೆದುಕೊಂಡಿದ್ದು, ಕಾಲೇಜಿನ ೫ ವಿದ್ಯಾರ್ಥಿನಿಯರು ಅತ್ಯುನ್ನತ ಶ್ರೇಣಿ(ಡಿಸ್ಟಿಂಕ್ಷನ್)ಯಲ್ಲಿ ಉತ್ತೀರ್ಣರಾಗುವ ಮೂಲಕ ಕಾಲೇಜಿಗೆ ಕೀರ್ತಿ ತಂದಿದ್ದಾರೆ. .
    ವಿಜ್ಞಾನ ವಿಭಾಗದ ತಹೀರಾ ಅಂಜುಮ್-೫೩೦ ಮತ್ತು ಮಾಯಾವತಿ-೫೨೨, ವಾಣಿಜ್ಯ ವಿಭಾಗದ ಡಿ. ಶೀಫಾ-೫೨೩ ಮತ್ತು ಎಂ. ಗಗನಶ್ರೀ-೫೨೧ ಹಾಗು ಕಲಾ ವಿಭಾಗದ ಪ್ರಿಯಾಂಕ-೫೧೦ ಅತಿಹೆಚ್ಚು ಅಂಕ ವಿದ್ಯಾರ್ಥಿನಿಯರಾಗಿದ್ದಾರೆ. 
    ಈ ಬಾರಿ ಕಾಲೇಜಿನಲ್ಲಿ ಪರೀಕ್ಷೆಗೆ ಹಾಜರಾದ ೨೫೦ ವಿದ್ಯಾರ್ಥಿನಿಯರ ಪೈಕಿ ೧೦೪ ವಿದ್ಯಾರ್ಥಿನಿಯರು ಪ್ರಥಮ ಹಾಗೂ ೬೦ ವಿದ್ಯಾರ್ಥಿನಿಯರು ದ್ವಿತೀಯ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ. ಒಟ್ಟಾರೆ ಕಾಲೇಜಿಗೆ ಶೇ. ೬೯ ಫಲಿತಾಂಶ ಲಭಿಸಿದೆ. 
    ಶಾಸಕ ಬಿ.ಕೆ ಸಂಗಮೇಶ್ವರ್ ಹಾಗೂ ಕಾಲೇಜಿನ ಅಭಿವೃದ್ಧಿ ಸಮಿತಿ ಸದಸ್ಯರು, ಪ್ರಾಂಶುಪಾಲರು ಉಪನ್ಯಾಸಕರು ಹಾಗೂ ಸಿಬ್ಬಂದಿ ವರ್ಗದವರು ಉತ್ತೀರ್ಣರಾದ ವಿದ್ಯಾರ್ಥಿಗಳನ್ನು ಅಭಿನಂದಿಸಿದ್ದಾರೆ. 

ಏ.೯ರಂದು ವಿದ್ಯುತ್ ವ್ಯತ್ಯಯ

    ಭದ್ರಾವತಿ: ಮೆಸ್ಕಾಂ ಘಟಕ-೧, ೨, ೩ ಮತ್ತು ೪ರ ಶಾಖಾ ವ್ಯಾಪ್ತಿಯಲ್ಲಿ ವಿದ್ಯುತ್ ಮಾರ್ಗಗಳ ತುರ್ತು ನಿರ್ವಹಣಾ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಏ.೯ರಂದು ಬೆಳಿಗ್ಗೆ ೯.೩೦ ರಿಂದ ಸಂಜೆ ೫.೩೦ರವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. 
    ರಬ್ಬರ್ ಕಾಡು, ಬಾಳೇಮಾರನಹಳ್ಳಿ, ಸುಲ್ತಾನ್‌ಮಟ್ಟಿ, ತಾರೀಕಟ್ಟೆ, ಹೊಳೆಗಂಗೂರು, ಚಿಕ್ಕಗೊಪ್ಪೇನಹಳ್ಳಿ, ಗೊಂದಿ, ಕಾಳನಕಟ್ಟೆ, ಕಂಬದಾಳ್‌ಹೊಸೂರು, ಹೊನ್ನಟ್ಟಿಹೊಸೂರು, ಹೊನ್ನಟ್ಟಿಹೊಸೂರು ಕ್ಯಾಂಪ್, ಸಿದ್ದರಹಳ್ಳಿ, ತಮ್ಮಡಿಹಳ್ಳಿ, ಕಲ್ಪನಹಳ್ಳಿ, ಹೊಸಳ್ಳಿ, ಕುಮರಿನಾರಾಯಣಪುರ, ಬಾರಂದೂರು, ಹಳ್ಳಿಕೆರೆ, ಬೊಮ್ಮೇನಹಳ್ಳಿ, ಕೆಂಪೇಗೌಡನಗರ, ಕಾರೇಹಳ್ಳಿ, ಕಾಳಿಂಗನಹಳ್ಳಿ ಸೇರಿದಂತೆ ಇತ್ಯಾದಿ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ಗ್ರಾಹಕರು ಸಹಕರಿಸುವಂತೆ ಗ್ರಾಮೀಣ ಉಪವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರರು ಕೋರಿದ್ದಾರೆ.