ಭಾನುವಾರ, ಏಪ್ರಿಲ್ 13, 2025

ವೇಳಾಂಗಣಿ ಆರೋಗ್ಯ ಮಾತೆ ದೇವಾಲಯದಲ್ಲಿ `ಗರಿಗಳ ಭಾನುವಾರ'

ಭದ್ರಾವತಿ ಹಳೇನಗರ ವ್ಯಾಪ್ತಿಯ ಗಾಂಧಿನಗರದ ವೇಳಾಂಗಣಿ ಆರೋಗ್ಯ ಮಾತೆ ದೇವಾಲಯದಲ್ಲಿ ಭಾನುವಾರ `ಗರಿಗಳ ಭಾನುವಾರ' ಆಚರಿಸಲಾಯಿತು. 
    ಭದ್ರಾವತಿ :  ಹಳೇನಗರ ವ್ಯಾಪ್ತಿಯ ಗಾಂಧಿನಗರದ ವೇಳಾಂಗಣಿ ಆರೋಗ್ಯ ಮಾತೆ ದೇವಾಲಯದಲ್ಲಿ ಭಾನುವಾರ `ಗರಿಗಳ ಭಾನುವಾರ' ಆಚರಿಸಲಾಯಿತು. 
    ಭಕ್ತಾದಿಗಳು ಗರಿಗಳನ್ನು ಹಿಡಿದು ಯೇಸುವಿಗೆ `ಹೊಸಾನ್ನ' ಎಂದು ಘೋಷಣೆ ಕೂಗುತ್ತಾ, ಜೈಕಾರ ಹಾಕುತ್ತಾ ದೇವಾಲಯದ ಸುತ್ತಲೂ ಮೆರವಣಿಗೆ ನಡೆಸಿದರು. 
    ಕ್ರೈಸ್ತ ಸಮುದಾಯದವರಿಗೆ ಪವಿತ್ರ ವಾರದ ಸಂಪ್ರದಾಯಿಕ ಆಚರಣೆಯ ವಿಧಿವಿಧಾನಗಳು ಇಂದಿನಿಂದ ಪ್ರಾರಂಭವಾಗಿದ್ದು, ಯೇಸುಕ್ರಿಸ್ತರು ತಮ್ಮ ಶಿಷ್ಯರಿಗೆ ಪಾದ ತೊಳೆದು ಎಲ್ಲರೂ ಸಮಾನರು ಎಂದು ತೋರಿಸಿಕೊಟ್ಟಿದ್ದರು. ಅದರ ಆಚರಣೆಯನ್ನು ಗುರುವಾರ ಗುರುಗಳು ಕೆಲವು ಆಯ್ದ ಭಕ್ತರ ಪಾದಗಳನ್ನು ತೊಳೆಯುವುದರ ಮೂಲಕ ಆಚರಿಸಲಾಗುವುದು. 
    ಶುಕ್ರವಾರ ಏಸುಕ್ರಿಸ್ತರ ಶಿಲುಬೆ ಯಾತನೆ ಮರಣದ ದಿನವಾಗಿದ್ದು, ಅಂದು ಕ್ರೈಸ್ತ ಭಕ್ತರು (ಗುಡ್ ಫ್ರೈಡೆ), ಉಪವಾಸ ಮತ್ತು ಪ್ರಾರ್ಥನಾ ದಿನವನ್ನಾಗಿ ಆಚರಿಸಲಾಗುವುದು. 
    ಶನಿವಾರ ಮಧ್ಯರಾತ್ರಿಯ ಜಾಗರಣ ಪೂಜಾ ವಿಧಿ-ವಿಧಾನಗಳು ದೇವಾಲಯಗಳಲ್ಲಿ ನೆರವೇರಲಿದ್ದು, ಅಂದು ಯೇಸು ಕ್ರಿಸ್ತನ ಪುನರುತ್ಥಾನದ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲಾಗುವುದು. ಹೀಗೆ ಈ ಭಾನುವಾರದಿಂದ ಮುಂದಿನ ಭಾನುವಾರದವರೆಗೂ ಪವಿತ್ರ ದಿನಗಳನ್ನಾಗಿ ಕ್ರೈಸ್ತ ಭಕ್ತರು ಆಚರಿಸಲಿದ್ದಾರೆ. 
    ಗರಿಗಳ ಭಾನುವಾರದಂದು ಧರ್ಮ ಕೇಂದ್ರದ ಗುರುಗಳಾದ ಫಾದರ್ ಸ್ಟೀವನ್ ಡೇಸಾ, ಧರ್ಮ ಭಗಿನಿಯರು ಮತ್ತು ಭಕ್ತರು ಪಾಲ್ಗೊಂಡಿದ್ದರು.

ಸಿದ್ದಾರ್ಥ ಅಂಧರ ಕೇಂದ್ರದ ಅಧ್ಯಕ್ಷ ಶಿವಬಸಪ್ಪರಿಗೆ ಜಿಲ್ಲಾಡಳಿತ ಸನ್ಮಾನ

ಭದ್ರಾವತಿ ನಗರದ ನ್ಯೂಟೌನ್ ಸಿದ್ದಾರ್ಥ ಅಂಧರ ಕೇಂದ್ರ ಅಧ್ಯಕ್ಷರಾದ ನಿವೃತ್ತ ಪ್ರಾಂಶುಪಾಲ ಶಿವಬಸಪ್ಪ ಅವರ ಸಾಮಾಜಿಕ ಸೇವೆಯನ್ನು ಗುರುತಿಸಿ ಜಿಲ್ಲಾಡಳಿತ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. 
    ಭದ್ರಾವತಿ: ನಗರದ ನ್ಯೂಟೌನ್ ಸಿದ್ದಾರ್ಥ ಅಂಧರ ಕೇಂದ್ರ ಅಧ್ಯಕ್ಷರಾದ ನಿವೃತ್ತ ಪ್ರಾಂಶುಪಾಲ ಶಿವಬಸಪ್ಪ ಅವರ ಸಾಮಾಜಿಕ ಸೇವೆಯನ್ನು ಗುರುತಿಸಿ ಜಿಲ್ಲಾಡಳಿತ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. 
    ಶಿವಮೊಗ್ಗ ಕುವೆಂಪು ರಂಗಮಂದಿರದಲ್ಲಿ ಜರುಗಿದ ಡಾ.ಬಾಬು ಜಗಜೀವನ ರಾಮ್ ೧೧೮ನೇ ಜನ್ಮದಿನಾಚರಣೆ ಸಮಾರಂಭದಲ್ಲಿ ಶಿವಬಸಪ್ಪರವರನ್ನು ಸನ್ಮಾನಿಸಿ ಗೌರವಿಸಲಾಯಿತು. ಸುಮಾರು ೩ ದಶಕಗಳಿಂದಲೂ ಶಿವಬಸಪ್ಪರವರು ಸಿದ್ದಾರ್ಥ ಅಂಧರ ಕೇಂದ್ರ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದು, ಅಲ್ಲದೆ ಪ್ರಾಧ್ಯಾಪಕರಾಗಿ, ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿದ್ದಾರೆ. ಈ ನಡುವೆ ದಲಿತ ಸಂಘರ್ಷ ಸಮಿತಿ ನೌಕರರ ಒಕ್ಕೂಟದಲ್ಲೂ ಸಕ್ರಿಯವಾಗಿ ತೊಡಗಿಸಿಕೊಂಡು ಸೇವೆ ಸಲ್ಲಿಸಿದ್ದು, ಪ್ರಸ್ತುತ ರಾಜ್ಯ ಸಮಿತಿ ಸದಸ್ಯರಾಗಿದ್ದಾರೆ. 
    ಇವರ ಸಾಮಾಜಿಕ ಸೇವೆಯನ್ನು ಪರಿಗಣಿಸಿ ೨೦೦೭ರಲ್ಲಿ ಡಾ. ಬಾಬು ಜಗಜೀವನ ರಾಮ್ ಶತಮಾನೋತ್ಸವ ಪ್ರಶಸ್ತಿ ಹಾಗು ೨೦೦೬ರಲ್ಲಿ ನವದೆಹಲಿ ದಲಿತ ಸಾಹಿತ್ಯ ಅಕಾಡೆಮಿ ವತಿಯಿಂದ ಡಾ. ಅಂಬೇಡ್ಕರ್ ರಾಷ್ಟ್ರೀಯ ಫೆಲೋಶಿಪ್ ಪ್ರಶಸ್ತಿ ನೀಡಲಾಗಿದೆ. ಇದೀಗ ಜಿಲ್ಲಾಡಳಿತ ವತಿಯಿಂದ ಸನ್ಮಾನಿಸಿ ಗೌರವಿಸಲಾಗಿದೆ. ಪಡೆದಿರುವ ಭದ್ರಾವತಿಯ ನಿವೃತ್ತ ಪ್ರಾಚಾರ್ಯರು ಹಾಗೂ ಸಿದ್ಧಾರ್ಥ ಅಂಧರ ಕೇಂದ್ರದ ಅಧ್ಯಕ್ಷರಾದ ಶ್ರೀ ಶಿವಬಸಪ್ಪ ಅವರನ್ನು ಶಿವಮೊಗ್ಗ ಜಿಲ್ಲಾ ಆಡಳಿತದ 
    ಶಾಲಾ ಶಿಕ್ಷಣ ಹಾಗು ಜಿಲ್ಲಾ ಉಸ್ತುವಾರಿ ಸಚಿವ ಎಸ್. ಮಧು ಬಂಗಾರಪ್ಪ, ವಿಧಾನ ಪರಿಷತ್ ಸದಸ್ಯೆ ಬಲ್ಕೀಶ್ ಬಾನು, ಜಿಲ್ಲಾಧಿಕಾರಿ ಗುರುದತ್ ಹೆಗಡೆ, ಜಿಲ್ಲಾ ಪೊಲೀಸ್ ರಕ್ಷಣಾಧಿಕಾರಿ ಜಿ.ಕೆ ಮಿಥುನ್ ಕುಮಾರ್, ಶಿವಮೊಗ್ಗ ನಗರ ಶಾಸಕ  ಚನ್ನಬಸಪ್ಪ, ಜಿಲ್ಲಾ ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಎನ್ ಹೇಮಂತ್,  ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಮಲ್ಲೇಶಪ್ಪ, ಮಲೆನಾಡು ಪ್ರದೇಶ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಆರ್.ಎಂ ಮಂಜುನಾಥ ಗೌಡ, ಕರ್ನಾಟಕ ಸರ್ಕಾರದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಜಿಲ್ಲಾಧ್ಯಕ್ಷ ಸಿ.ಎಸ್ ಚಂದ್ರಭೂಪಾಲ, ಮೈಸೂರಿನ ದಾಸನೂರು ಕೋಸಣ್ಣ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.  

ಶನಿವಾರ, ಏಪ್ರಿಲ್ 12, 2025

ಅಂಬೇಡ್ಕರ್ ಜಯಂತಿ : ಏ.೧೪ರಂದು ಉಚಿತ ಸಸಿಗಳ ವಿತರಣೆ

ಭದ್ರಾವತಿ: ಕೇಂದ್ರ ಉಕ್ಕು ಪ್ರಾಧಿಕಾರದ ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ವತಿಯಿಂದ ಈ ಬಾರಿ ಭಾರತರತ್ನ, ಸಂವಿಧಾನ ಶಿಲ್ಪಿ ಡಾ. ಬಿ.ಆರ್ ಅಂಬೇಡ್ಕರ್‌ರವರ ೧೩೪ನೇ ಜನ್ಮದಿನಾಚರಣೆ ಅಂಗವಾಗಿ ವಿಶೇಷವಾಗಿ ಸಾರ್ವಜನಿಕರಿಗೆ ಉಚಿತ ಸಸಿಗಳನ್ನು ವಿತರಿಸುತ್ತಿದೆ. 
೭೫೦ ಹೈಬ್ರೀಡ್ ನುಗ್ಗೆ, ಪಪ್ಪಾಯಿ, ತುಳಸಿ ಮತ್ತು ಹೊಂಗೆ ಸಸಿಗಳನ್ನು ಸಾರ್ವಜನಿಕರಿಗೆ ಏ.೧೪ರಂದು ಕಾರ್ಖಾನೆಯ ಮುಖ್ಯದ್ವಾರದ ಬಳಿ ಮಧ್ಯಾಹ್ನ ೨ ಗಂಟೆಯಿಂದ ಸಂಜೆ ೫ ಗಂಟೆವರೆಗೆ ವಿತರಿಸಲಾಗುತ್ತಿದೆ. 
ಪ್ರತಿಯೊಬ್ಬರಿಗೂ ೨ ಸಸಿಗಳನ್ನು ಮಾತ್ರ ವಿತರಿಸಲಾಗುವುದು. ಸಾರ್ವಜನಿಕರು ಇದರ ಸದುಪಯೋಗಪಡೆದುಕೊಳ್ಳುವಂತೆ ಕಾರ್ಖಾನೆ ಸಾರ್ವಜನಿಕ ಸಂಪರ್ಕಾಧಿಕಾರಿ ಎಲ್ ಪ್ರವೀಣ್ ಕುಮಾರ್ ಕೋರಿದ್ದಾರೆ. 

ಏ.೨೩ರಂದು ಬೆಂಗಳೂರಿನಲ್ಲಿ `ಜನಕ್ರಾಂತಿ ಸಮಾವೇಶ' : ಡಿಎಸ್‌ಎಸ್ ಆಯೋಜನೆ

ಭದ್ರಾವತಿಯಲ್ಲಿ ಶನಿವಾರ ಏರ್ಪಡಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಪ್ರೊ. ಬಿ. ಕೃಷ್ಣಪ್ಪ ಸ್ಥಾಪಿತ ಕರ್ನಾಟಕ ದಲಿತ ಸಂಘರ್ಷ ಸಮಿತಿ ವತಿಯಿಂದ ಬೆಂಗಳೂರಿನಲ್ಲಿ ಆಯೋಜಿಸಲಾಗಿರುವ ಜನಕ್ರಾಂತಿ ಸಮಾವೇಶದ ಆಹ್ವಾನ ಪತ್ರಿಕೆ ಬಿಡುಗಡೆಗೊಳಿಸಲಾಯಿತು. 
    ಭದ್ರಾವತಿ: ದೇಶದಲ್ಲಿ ಹಿಂದೂ ರಾಷ್ಟ್ರ ರಕ್ಷಣೆಯ ಹೆಸರಿನಲ್ಲಿ ಪುನಃ ಮನುಧರ್ಮ ಮರುಸ್ಥಾಪಿಸುವ ಹುನ್ನಾರ ನಡೆಸಲಾಗುತ್ತಿದ್ದು, ಇದರ ಕುರಿತು ಜಾಗೃತಿ ಮೂಡಿಸುವ ಹಾಗು ದಲಿತರ ಅಭಿವೃದ್ಧಿಗಾಗಿ ಕೆಲವು ಹಕ್ಕೊತ್ತಾಯ ಮಾಡುವ ಉದ್ದೇಶದಿಂದ ಸಂವಿಧಾನ ಶಿಲ್ಪಿ ಡಾ. ಬಿ.ಆರ್ ಅಂಬೇಡ್ಕರ್‌ರವರ ೧೩೪ನೇ ಜನ್ಮದಿನದ ಅಂಗವಾಗಿ ಏ.೨೩ರಂದು `ಜನಕ್ರಾಂತಿ ಸಮಾವೇಶ' ಹಮ್ಮಿಕೊಳ್ಳಲಾಗಿದೆ ಎಂದು ಪ್ರೊ. ಬಿ. ಕೃಷ್ಣಪ್ಪ ಸ್ಥಾಪಿತ ಕರ್ನಾಟಕ ದಲಿತ ಸಂಘರ್ಷ ಸಮಿತಿ ರಾಜ್ಯ ಸಮಿತಿ ಮುಖಂಡ ಶಿವಬಸಪ್ಪ ಹೇಳಿದರು. 
    ಅವರು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕಳೆದ ೭೫ ವರ್ಷಗಳಿಂದ ಸಂವಿಧಾನ ಹಾಗು ಅಂಬೇಡ್ಕರ್‌ರವರನ್ನು ವಿರೋಧಿಸುತ್ತಿರುವ ಸಂಘ ಪರಿವಾರದವರು ಪ್ರಸ್ತುತ ಸಂವಿಧಾನ ಹಾಗು ಅಂಬೇಡ್ಕರ್‌ರವರನ್ನು ಗೌರವಿಸುವ ನಾಟಕವಾಡುತ್ತಿದ್ದಾರೆಂದು ಆರೋಪಿಸಿದರು. 
    ಇತ್ತೀಚೆಗೆ ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ಜರುಗಿದ ಕುಂಭಮೇಳದಲ್ಲಿ ಮಠಾಧೀಶರು ಎಂದು ಕರೆದುಕೊಂಡ ಗುಂಪು ಧಾರ್ಮಿಕ ಸಭೆ ನಡೆಸಿ ಆ ಮೂಲಕ ಹಿಂದೂ ರಾಷ್ಟ್ರಕ್ಕಾಗಿ ೫೦೧ ಪುಟಗಳ ಸಂವಿಧಾನವನ್ನು ಸಿದ್ದಪಡಿಸಿದೆ. ಅದನ್ನು ಶೀಘ್ರವಾಗಿ ಬಿಡುಗಡೆಗೊಳಿಸುವುದಾಗಿ ಹೇಳಿಕೊಂಡಿದೆ. ಈ ಸಂವಿಧಾನವನ್ನು ನೋಡಿದರೆ ಮತ್ತೆ ಪುನಃ ವೈದಿಕ ಧರ್ಮ, ಮನು ಧರ್ಮ ಸ್ಥಾಪಿಸುವ ಹುನ್ನಾರದಂತೆ ಕಂಡು ಬರುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. 
    ದೇಶದಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್‌ರವರು ಸುಮಾರು ೨ ವರ್ಷ, ೧೧ ತಿಂಗಳು, ೧೭ ದಿನ ಅವಿರತ ಶ್ರಮದಿಂದ ಬರೆದ ಬಲಿಷ್ಠ ಮತ್ತು ಶ್ರೇಷ್ಠ ಸಂವಿಧಾನ ಇರುವಾಗ ಪ್ರತ್ಯೇಕ ಸಂವಿಧಾನ ರಚಿಸುವುದು, ಅದನ್ನು ಬಿಡುಗಡೆ ಮಾಡುವುದು ದೇಶದ್ರೋಹದ ಕೃತ್ಯ. ಇದಕ್ಕೆ ಕೋಮುವಾದಿ ಪಕ್ಷಗಳ ರಕ್ಷಣೆಯೂ ಇರುವಂತೆ ಕಂಡು ಬರುತ್ತಿದೆ ಎಂದು ದೂರಿದರು. 
    ಇದೀಗ ಪ್ರಧಾನಿ ನರೇಂದ್ರ ಮೋದಿ ಹಾಗು ಕೇಂದ್ರ ಸಚಿವರು ಮತ್ತು ಸಂಘ ಪರಿವಾರದವರು ಮೇಲ್ನೋಟಕ್ಕೆ ಅಂಬೇಡ್ಕರ್ ಹಾಗು ಸಂವಿಧಾನ ಗೌರವಿಸುವ ನಾಟಕವಾಡುತ್ತಿದ್ದಾರೆ. ಮತ್ತೊಂದೆಡೆ ಅಂಬೇಡ್ಕರ್‌ರವರ ಸಂವಿಧಾನ ಬದಲಿಸುವ ಹೇಳಿಕೆಗಳು, ಸಂವಿಧಾನ ವಿರೋಧಿ ಕೃತ್ಯಗಳು ನಡೆಯುತ್ತಿವೆ. ಇದನ್ನು ವಿರೋಧಿಸುವ ಮೂಲಕ ಜನರಲ್ಲಿ ಜಾಗೃತಿ ಮೂಡಿಸುವ ಅಗತ್ಯವಿದೆ. ಈ ಹಿನ್ನಲೆಯಲ್ಲಿ ಬೆಂಗಳೂರು, ಮಾಗಡಿ ರಸ್ತೆ, ಸುಮನಹಳ್ಳಿಯಲ್ಲಿರುವ ಡಾ. ಬಾಬು ಜಗಜೀವನ್ ರಾಂ ಸಂಶೋಧನಾ ಕೇಂದ್ರದಲ್ಲಿ ಏ.೨೩ರಂದು ಬೆಳಿಗ್ಗೆ ೧೧ ಗಂಟೆಗೆ ಜನಕ್ರಾಂತಿ ಸಮಾವೇಶ ನಡೆಯಲಿದ್ದು, ಇದಕ್ಕೂ ಮೊದಲು ಬೆಂಗಳೂರು ಚಲೋ ನಡೆಯಲಿದೆ ಎಂದರು.
    ರಾಜ್ಯ ಸಮಿತಿ ಸದಸ್ಯ, ನ್ಯಾಯವಾದಿ ಎಂ. ಶಿವಕುಮಾರ್ ಸಮಾವೇಶ ಕುರಿತು ಮಾತನಾಡಿದರು. ಜಿಲ್ಲಾ ಸಂಚಾಲಕ ಏಳುಕೋಟಿ, ತಾಲೂಕು ಸಂಚಾಲಕ ನಾಗರಾಜ್ ಕಾಚಗೊಂಡನಹಳ್ಳಿ, ಮುಖಂಡರಾದ ಶ್ರೀನಿವಾಸ್, ರಾಜಶೇಖರ್, ಬಾಷಾ ಸಾಬ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. 

ಶುಕ್ರವಾರ, ಏಪ್ರಿಲ್ 11, 2025

ಪೇಪರ್‌ಟೌನ್ ಹೈ ಸ್ಕೂಲ್ ಮಾನ್ಯತೆ ರದ್ದು, ನೆನಪಿನಲ್ಲಿ ಉಳಿದ ಪ್ರತಿಷ್ಠಿತ ಶಾಲೆ

ಭದ್ರಾವತಿ ಕಾಗದನಗರದ ಪೇಪರ್‌ಟೌನ್ ಹೈ ಸ್ಕೂಲ್.

   ಭದ್ರಾವತಿ: ಒಂದು ಕಾಲದಲ್ಲಿ ಜಿಲ್ಲೆಯಲ್ಲಿಯೇ ಪ್ರತಿಷ್ಠಿತ ಶಾಲೆಗಳಲ್ಲಿ ಒಂದಾಗಿ ಗುರುತಿಸಿಕೊಂಡಿದ್ದ ಸಾವಿರಾರು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದ ಕಾಗದನಗರ ಪ್ರೌಢಶಾಲೆ(ಪೇಪರ್‌ಟೌನ್ ಹೈ ಸ್ಕೂಲ್) ಮಾನ್ಯತೆ ಹಿಂಪಡೆಯಲಾಗಿದೆ. ಇದರಿಂದಾಗಿ ಪ್ರತಿಷ್ಠಿತ ಶಾಲೆ ಇದೀಗ ಕೇವಲ ನೆನಪಾಗಿ ಉಳಿದುಕೊಂಡಿದೆ. 
     ಸುಮಾರು ೭ ದಶಕಗಳ ಇತಿಹಾಸ ಹೊಂದಿರುವ ಶಾಲೆ ಇದೀಗ ವಿದ್ಯಾರ್ಥಿಗಳ ಕೊರತೆಯಿಂದಾಗಿ ಮಾನ್ಯತೆ ಕಳೆದುಕೊಂಡಿದೆ. ರಾಜ್ಯ ಸರ್ಕಾರಿ ಸ್ವಾಮ್ಯದ ಮೈಸೂರು ಕಾಗದ ಕಾರ್ಖಾನೆ ಆರಂಭದೊಂದಿಗೆ ಕಾರ್ಮಿಕರು ಹಾಗು ಸುತ್ತಮುತ್ತಲ ಪ್ರದೇಶಗಳ ನಿವಾಸಿಗಳ ಮಕ್ಕಳ ಶಿಕ್ಷಣಕ್ಕೆ ನೆರವಾಗುವ ನಿಟ್ಟಿನಲ್ಲಿ ಸ್ಥಾಪನೆಗೊಂಡ ಶಾಲೆಯಲ್ಲಿ ಪ್ರತಿ ವರ್ಷ ಸಾವಿರಾರು ಮಕ್ಕಳು ಶಿಕ್ಷಣ ಪಡೆಯುತ್ತಿದ್ದರು. ಅಲ್ಲದೆ ಈ ಶಾಲೆ ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದು, ಪರಿಣಿತ ಶಿಕ್ಷಕರ ತಂಡವನ್ನು ಈ ಶಾಲೆ ಹೊಂದಿತ್ತು. 
    ಈ ಶಾಲೆಯ ವಿದ್ಯಾರ್ಥಿಗಳು ಶಿಕ್ಷಣ, ಕ್ರೀಡೆ ಹಾಗು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಹಲವು ಸಾಧನೆಗಳನ್ನು ಮಾಡುವ ಮೂಲಕ ರಾಜ್ಯಮಟ್ಟದಲ್ಲಿ ಗಮನ ಸೆಳೆಯುತ್ತಿದ್ದರು. ಅಲ್ಲದೆ ಈ ಶಾಲೆಯಲ್ಲಿ ವ್ಯಾಸಂಗ ಮಾಡಿರುವ ಸಾವಿರಾರು ವಿದ್ಯಾರ್ಥಿಗಳು ಉನ್ನತ ಹುದ್ದೆಗಳನ್ನು ಅಲಂಕರಿಸಿದ್ದಾರೆ. ಈ ಶಾಲೆಯಲ್ಲಿ ಪ್ರವೇಶ ಪಡೆಯಲು ವಿದ್ಯಾರ್ಥಿಗಳು ಪೈಪೋಟಿ ನಡೆಸುತ್ತಿದ್ದರು. ನೂರಾರು ಉತ್ತಮ ಶಿಕ್ಷಕರು ಇಂದಿಗೂ ವಿದ್ಯಾರ್ಥಿಗಳ ನೆನಪಿನಲ್ಲಿ ಉಳಿದುಕೊಂಡಿದ್ದಾರೆ. 
  ಕಾರ್ಖಾನೆ ಅವನತಿಯೊಂದಿಗೆ ಶಾಲೆ ಸಹ ಹಂತ ಹಂತವಾಗಿ ತನ್ನ ವೈಭವ ಕಳೆದುಕೊಳ್ಳುತ್ತಾ ಬಂದಿದ್ದು, ಇದೀಗ ವಿದ್ಯಾರ್ಥಿಗಳ ಕೊರತೆಯಿಂದಾಗಿ ಮಾನ್ಯತೆ ಕಳೆದುಕೊಂಡಿದೆ. ಈ ಹಿನ್ನಲೆಯಲ್ಲಿ ಮಾ.೧೫ರಂದು ಬೆಂಗಳೂರಿನ ಶಾಲಾ ಶಿಕ್ಷಣ ಇಲಾಖೆ ಆಯುಕ್ತರು ಆದೇಶದ ಜ್ಞಾಪನ ಪತ್ರ ಹೊರಡಿಸಿದ್ದು, ಈಗಾಗಲೇ ಮಾನ್ಯತೆ ರದ್ದುಪಡಿಸುವ ನಿಟ್ಟಿನಲ್ಲಿ ಅನುಸರಿಸಬೇಕಾದ ಎಲ್ಲಾ ಕ್ರಮಗಳನ್ನು ಸಹ ಹಂತ ಹಂತವಾಗಿ ಪೂರೈಸಲಾಗಿದೆ.  ವಿದ್ಯಾರ್ಥಿಗಳು ಹಾಗು ಶಿಕ್ಷಕರಿಗೆ ಪರ್ಯಾಯ ವ್ಯವಸ್ಥೆ ಕೈಗೊಳ್ಳಲಾಗಿದೆ.  
 

ಕಲಾವಿದನಿಗೆ ನಾನೆಂಬ ಅಹಂ ಇಲ್ಲದಿದ್ದರೆ ಕಲಾದೇವಿ ಎತ್ತರಕ್ಕೆ ಬೆಳೆಸುತ್ತದೆ: ಗುರುರಾಜ್ ಹೊಸಕೋಟೆ

ಭದ್ರಾವತಿ ಶುಕ್ರವಾರ ತಾಲೂಕು ಕಚೇರಿ ಮುಂಭಾಗದ ಎದುರಿನ ರಸ್ತೆಯಲ್ಲಿ ನೂತನವಾಗಿ ಆರಂಭಿಸಲಾಗಿರುವ ಪಾಂಚಜನ್ಯ ನಟನಾ ಶಾಲೆ ಮತ್ತು ಫಿಲ್ಮ್ ಇನ್‌ಸ್ಟಿಟ್ಯೂಟ್ ರಾಜ್ಯ ಪ್ರಶಸ್ತಿ ಪುರಸ್ಕೃತ, ಜಾನಪದ ಗಾಯಕ ಹಾಗು ಚಲನಚಿತ್ರ ನಟ ಗುರುರಾಜ್ ಹೊಸಕೋಟೆ , ನಗರಸಭೆ ಹಿರಿಯ ಸದಸ್ಯ ಬಿ.ಕೆ ಮೋಹನ್ ಸೇರಿದಂತೆ ಇನ್ನಿತರರು ಉದ್ಘಾಟಿಸಿದರು. 

  ಭದ್ರಾವತಿ: ಕಲಾವಿದರಿಗೆ ನಾನೆಂಬ ಅಹಂ ಇರಬಾರದು. ಕಲಾವಿದ ಮೊದಲು ತನ್ನನ್ನು ತಾನು ಕಂಡುಕೊಳ್ಳಬೇಕು. ನಂತರ ಬೇರೆಯವರಂತಾಗಲು ಆಸೆ ಪಡಬೇಕು. ಇಲ್ಲದಿದ್ದಲ್ಲಿ ದುರಂತವಾಗುತ್ತದೆ ಎಂದು ರಾಜ್ಯ ಪ್ರಶಸ್ತಿ ಪುರಸ್ಕೃತ, ಜಾನಪದ ಗಾಯಕ ಹಾಗು ಚಲನಚಿತ್ರ ನಟ ಗುರುರಾಜ್ ಹೊಸಕೋಟೆ ಹೇಳಿದರು.
    ಅವರು ಶುಕ್ರವಾರ ತಾಲೂಕು ಕಚೇರಿ ಮುಂಭಾಗದ ಎದುರಿನ ರಸ್ತೆಯಲ್ಲಿ ನೂತನವಾಗಿ ಆರಂಭಿಸಲಾಗಿರುವ ಪಾಂಚಜನ್ಯ ನಟನಾ ಶಾಲೆ ಮತ್ತು ಫಿಲ್ಮ್ ಇನ್‌ಸ್ಟಿಟ್ಯೂಟ್ ಉದ್ಘಾಟಿಸಿ ಮಾತನಾಡಿದರು. 
   ಇಂದಿನ ಕಲಾವಿದರಿಗೆ ರಾಜ್‌ಕುಮಾರ್, ವಿಷ್ಣುವರ್ಧನ್, ಶಂಕರ್‌ನಾಗ್, ಪುನೀತ್ ರಾಜ್‌ಕುಮಾರ್ ಆಗಬೇಕೆಂಬ ದುರಾಸೆ ಇದ್ದರೆ ಅವರಂತೆ ಅಗಲು ಸಾಧ್ಯವಿಲ್ಲ. ಅವರಂತೆ ತಪಸ್ಸು ಮಾಡಬೇಕು. ಕಲಾವಿದನಿಗೆ ನಾನೆಂಬುದು ಇರಬಾರದು, ಪರರನ್ನು ನೋಡಿ ಅಸೂಯೆ ಪಡಬಾರದು. ಅಹಂ ಇಲ್ಲದಿದ್ದರೆ ಕಲಾದೇವಿ ಉತ್ತಮ ಭವಿಷ್ಯ ತೋರುವ ಹಾದಿ ತೋರುತ್ತದೆ ಎಂದರು. 
 ಬೆಂಗಳೂರಲ್ಲಿ ಇಂತಹ ಸಂಸ್ಥೆಗಳು ಹಣ ಮಾಡಲು ಹುಟ್ಟಿಕೊಂಡಿವೆ. ಅವುಗಳಂತಾಗದೆ ಇಂದು ಹುಟ್ಟಿಕೊಂಡ ಈ ಸಂಸ್ಥೆ ಅಜರಾಮರವಾಗಿ ಉಳಿದು ಕಲಾವಿದರಿಗೆ ನೆರಳಾಗಿ ಕಲಾ ಸೇವೆಗೆ ಮುಡಿಪಾಗಿರಲಿ. ಈ ನಟನಾ ಶಾಲೆ ಕೇವಲ ಹೆಸರಿಗೆ ಮಾತ್ರ ನಟನಾ ಶಾಲೆ ಆಗಿರದೆ ಸ್ಥಳಿಯ ಪ್ರತಿಭೆಗಳನ್ನು ಗುರುತಿಸಿ ನಟನೆ, ಸಿನಿಮಾ, ಕಲಾ ಸೇವೆ ಮಾಡುವ ವೇದಿಕೆ ಹತ್ತುವಂತಾಗಲಿ ಎಂದರು. 
    ನಗರಸಭೆ ಹಿರಿಯ ಸದಸ್ಯ ಬಿ.ಕೆ.ಮೋಹನ್ ಮಾತನಾಡಿ, ಕಲಾವಿದರು ಸದಾಕಾಲ ಸಂಕಷ್ಟದಲ್ಲಿರುತ್ತಾರೆ. ಸ್ವಾಭಿಮಾನಿಗಳಾಗಿ ತಮ್ಮಲ್ಲಿನ ಕಲೆಯನ್ನು ಸಮಾಜಕ್ಕೆ ಉಣಬಡಿಸುವ ಶ್ರಮ ಜೀವಿಗಳು. ಕಲಾವಿದರು ಸಮಸ್ಯೆಗಳನ್ನು ಹೇಳಿಕೊಂಡಾಗ ಮಾತ್ರ ಅವುಗಳನ್ನು ಬಗೆಹರಿಸಲು ಸಾಧ್ಯ. ನೂತನವಾಗಿ ಆರಂಭಗೊಂಡಿರುವ ಈ ಸಂಸ್ಥೆ ಬೆಳೆಯಲು ಶಾಸಕರು ಎಲ್ಲಾ ರೀತಿಯ ಸಹಕಾರ ನೀಡಲಿದ್ದಾರೆ. ಜೊತೆಗೆ ನಮ್ಮ ಇಡೀ ಕುಟುಂಬ ಸದಾ ಕಾಲ ನೆರವಿಗೆ ಬರಲಿದೆ ಎಂದು ಭರವಸೆ ನೀಡಿದರು.
   ನಗರದ ತಾಲೂಕು ಸರ್ಕಾರಿ ಆಸ್ಪತ್ರೆ ವೈದ್ಯೆ ಡಾ. ವರ್ಷ ಮಾತನಾಡಿ, ಭೂಮಿಯೇ ಒಂದು ರಂಗ ಮಂದಿರವಾಗಿದೆ. ಅದರಲ್ಲಿ ನಾವೆಲ್ಲಾ ಪಾತ್ರದಾರಿಗಳಾಗಿದ್ದೇವೆ. ಈ ಸಂಸ್ಥೆ ದೊಡ್ಡ ಮಟ್ಟದಲ್ಲಿ ಬೆಳೆದು ಕಲಾವಿದರಿಗೆ ನೆರಳಾಗಿರಲಿ ಎಂದರು. 
   ಕಲ್ಲಿಹಾಳ್ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ, ನೀನಾಸಂ ಕಲಾವಿದ ಗಿರಿಧರ್‌ಮೂರ್ತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಕಲಾವಿದರ ಬೀಡಲ್ಲಿ ರಂಗ ಕಲೆಯ ಬೆಳವಣಿಗೆಗಾಗಿ ರಂಗ ಮಂದಿರವಿಲ್ಲವಾಗಿದೆ. ಪ್ರಸ್ತುತ ನಗರದಲ್ಲಿ ನಿರ್ಮಾಣಗೊಳ್ಳುತ್ತಿರುವ  ಕನ್ನಡ ಸಾಹಿತ್ಯ ಭವನದಲ್ಲಿ ರಂಗ ಮಂದಿರವೂ ನಿರ್ಮಾಣವಾಗಲಿ ಎಂದು ಮನವಿ ಮಾಡಿದರು. 
    ಪ್ರಾಸ್ತಾವಿಕವಾಗಿ ಮಾತನಾಡಿದ ಸಂಸ್ಥೆ ಮುಖ್ಯಸ್ಥೆ, ಚಲನಚಿತ್ರ ನಟಿ ಪೂರ್ಣಿಮಾ ಪಾಟೀಲ್, ಭದ್ರಾವತಿ ರಂಗ ಕಲೆಯ ಬೀಡಾಗಿದೆ. ರಂಗಕಲೆ ಉಳಿಸಲು ಹಾಗೂ ಅನ್ನದ ರುಣ ತೀರಿಸಲು ಕಲಾ ಸೇವೆಗಾಗಿ ಇಂತಹ ಸಾಹಸಕ್ಕೆ ಕೈಹಾಕಿದ್ದೇನೆ. ಎಲ್ಲರ ಸಹಕಾರ ಬೇಕೆಂದು ಮನವಿ ಮಾಡಿದರು. 
   ಕಲಾವಿದ ರವಿಶಂಕರಚಾರ್, ವಿಶ್ವಕರ್ಮ ಸಮಾಜದ ಕಾರ್ಯಾಧ್ಯಕ್ಷ ಡಾ. ಸಿ. ರಾಮಾಚಾರಿ, ಸಂಗೀತ ವಿದ್ವಾಂಸ ಶಿವರಾಜ್, ಸಂಜೀವಿನ ವೃದ್ದಾಶ್ರಮದ ಸವಿತಾ,  ಶ್ರೀನಿವಾಸ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ಭುವನ್ ಪ್ರಾರ್ಥಿಸಿ, ದಿವಾಕರ್ ಸ್ವಾಗತಿಸಿದರು. . ಭವ್ಯ ರಮೇಶ್ ನಿರೂಪಿಸಿ, ಬಿ.ಆರ್ ಹರೀಶ್ ವಂದಿಸಿದರು.
 

ಗುರುವಾರ, ಏಪ್ರಿಲ್ 10, 2025

ಏ.೧೧ರಂದು `ಪಂಗುಣಿ-ಉತ್ತಿರ' ತೀರ್ಥ ಕಾವಡಿ ಜಾತ್ರಾ ಮಹೋತ್ಸವ


    ಭದ್ರಾವತಿ: ಇಲ್ಲಿಗೆ ಸಮೀಪದ ಎಂ.ಸಿ ಹಳ್ಳಿ ಶ್ರೀ ಕ್ಷೇತ್ರ ಭದ್ರಗಿರಿ ಶ್ರೀ ಶಿವಸುಬ್ರಮಣ್ಯ ಸ್ವಾಮಿ ದೇವಸ್ಥಾನದಲ್ಲಿ ಏ.೧೧ರ ಶುಕ್ರವಾರ `ಪಂಗುಣಿ-ಉತ್ತಿರ' ತೀರ್ಥ ಕಾವಡಿ ಜಾತ್ರಾ ಮಹೋತ್ಸವ ವಿಜೃಂಭಣೆಯಿಂದ ಜರುಗಲಿದೆ. 
    ಜಾತ್ರಾ ಮಹೋತ್ಸವದ ಅಂಗವಾಗಿ ಬೆಳಿಗ್ಗೆ ೪ ಗಂಟೆಗೆ ಮೂಲಸ್ಥಾನದಲ್ಲಿ ಅಭಿಷೇಕ ಪ್ರಾರಂಭ, ೫ ಗಂಟೆಗೆ ಮಹಾಮಂಗಳಾರತಿ, ೮ ಗಂಟೆಗೆ ಬೆಳಗಿನ ಸಂಧಿಪೂಜೆ ಹಾಗು ಪುಣ್ಯತೀರ್ಥ ಅಭಿಷೇಕ, ಬೆಳಿಗ್ಗೆ ೬.೩೦ ರಿಂದ ಮಧ್ಯಾಹ್ನ ೧೨ರವರೆಗೆ ಭಕ್ತರು ಹರಕೆ ಹೊತ್ತು ತರುವ ಪುಣ್ಯತೀರ್ಥ ಮತ್ತು ಕಾವಡಿ ಸಮರ್ಪಣೆ ನಂತರ ಮಧ್ಯಾಹ್ನ ೧೨.೩೦ಕ್ಕೆ ಮಹಾಮಂಗಳಾರತಿ, ಸಂಜೆ ೫.೩೦ಕ್ಕೆ ದೀಪಾರಾಧನೆ ಮತ್ತು ರಾತ್ರಿ ೧೦ಕ್ಕೆ ಅರ್ಧಜಾಮ ಪೂಜೆ ಜರುಗಲಿದೆ. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಸ್ವಾಮಿಯ ಕೃಪೆಗೆ ಪಾತ್ರರಾಗುವಂತೆ ದೇವಾಲಯ ಸಮಿತಿ ಕೋರಿದೆ.