Friday, May 30, 2025

ಪ್ರಭಾರ ಪೌರಾಯುಕ್ತರಾಗಿ ಎಂ. ಸುನಿತಾಕುಮಾರಿ ಅಧಿಕಾರ ಸ್ವೀಕಾರ

ಎಂ. ಸುನಿತಾಕುಮಾರಿ 
ಭದ್ರಾವತಿ : ನಗರಸಭೆ ಪೌರಾಯುಕ್ತರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಪ್ರಕಾಶ್ ಎಂ. ಚನ್ನಪ್ಪನವರ್ ೬ ದಿನಗಳ ಕಾಲ ರಜೆ ಮೇಲೆ ತೆರಳಿದ್ದು, ವ್ಯವಸ್ಥಾಪಕಿ ಎಂ. ಸುನಿತಾಕುಮಾರಿಯವರು ಶುಕ್ರವಾರ ಪ್ರಭಾರ ಅಧಿಕಾರ ವಹಿಸಿಕೊಂಡರು. 
ಸುಮಾರು ೧೮ ತಿಂಗಳು ನಗರಸಭೆ ಪೌರಾಯುಕ್ತರಾಗಿ ಕರ್ತವ್ಯ ನಿರ್ವಹಿಸಿರುವ ಪ್ರಕಾಶ್ ಎಂ. ಚನ್ನಪ್ಪನವರ್ ಮುಂಬಡ್ತಿ ಪಡೆದು ಬೇರೆಡೆಗೆ ವರ್ಗಾವಣೆಗೊಳ್ಳಲಿದ್ದಾರೆಂಬ ಎಂಬ ಮಾಹಿತಿ ಒಂದೆಡೆ ಹರಿದಾಡುತ್ತಿದ್ದು, ಮತ್ತೊಂದೆಡೆ ೬ ದಿನಗಳ ಕಾಲ ರಜೆ ಮೇಲೆ ತೆರಳಿದ್ದಾರೆ ಎನ್ನಲಾಗಿದೆ. 
ಈ ನಡುವೆ ನಗರಸಭೆಯಲ್ಲಿ ಕಳೆದ ಸುಮಾರು ೨ ವರ್ಷಗಳಿಂದ ಪುರಸಭೆ ಮುಖ್ಯಾಧಿಕಾರಿ ಗ್ರೇಡ್ ಹುದ್ದೆಯಲ್ಲಿಯೇ ಮೂಲ ವೇತನದೊಂದಿಗೆ ವ್ಯವಸ್ಥಾಪಕಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ಸುನಿತಾಕುಮಾರಿಯವರು ಪ್ರಭಾರ ಅಧಿಕಾರವಹಿಸಿಕೊಂಡಿದ್ದಾರೆ. 
ಸುನಿತಾಕುಮಾರಿಯವರು ಮೂಲತಃ ಕೆಎಂಎಸ್ ಶ್ರೇಣಿಯ ಅಧಿಕಾರಿಯಾಗಿದ್ದು, ಈ ಹಿಂದೆ ೨ ವರ್ಷ ಕಂದಾಯಾಧಿಕಾರಿ, ೬ ವರ್ಷ ವ್ಯವಸ್ಥಾಪಕಿಯಾಗಿ ಕರ್ತವ್ಯ ನಿರ್ವಹಿಸಿ ಪುರಸಭೆ ಮುಖ್ಯಾಧಿಕಾರಿಯಾಗಿ ಮುಂಬಡ್ತಿ ಪಡೆದಿದ್ದರು. ಆದರೆ ಬೇರೆಡೆ ವರ್ಗಾವಣೆ ಬಯಸದೆ ವ್ಯವಸ್ಥಾಪಕಿ ಹುದ್ದೆಯಲ್ಲಿಯೇ ಕರ್ತವ್ಯ ನಿರ್ವಹಿಸುತ್ತಿದ್ದಾರೆ.  ಪ್ರಸ್ತುತ ಸುನಿತಾಕುಮಾರಿಯವರಿಗೂ ಸಹ ಪೌರಾಯುಕ್ತ ಗ್ರೇಡ್-೨ ಹುದ್ದೆ ಅಧಿಕಾರಿಯಾಗಿ ಮುಂಬಡ್ತಿ ಲಭಿಸಲಿದೆ ಎನ್ನಲಾಗಿದೆ.

Thursday, May 29, 2025

ಗೃಹಿಣಿ ಅನುಮಾನಸ್ಪದ ಸಾವು : ಅತ್ತೆ, ಮಾವನ ವಿರುದ್ಧ ಪ್ರಕರಣ ದಾಖಲು


    ಭದ್ರಾವತಿ: ಅತ್ತೆ ಮತ್ತು ಮಾವನ ಕಿರುಕುಳದಿಂದ ಗೃಹಿಣಿಯೋರ್ವಳು ಸಾವನ್ನಪ್ಪಿರುವುದಾಗಿ ಆರೋಪಿಸಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. 
    ತಾಲೂಕಿನ ಕಾಗೆಕೋಡಮಗ್ಗಿಯ ನಿವಾಸಿ ಶಾಜಿಯಾ ಬಾನು(೨೪) ವಿವಾಹಿತ ಮಹಿಳೆ ಅನುಮಾನಸ್ಪದವಾಗಿ ಸಾವನ್ನಪ್ಪಿದ್ದು, ಆಕೆಯ ಅತ್ತೆ ಗುಲಾಬ್ ಮತ್ತು ಮಾವ ನಜೀರ್ ಇಬ್ಬರು ಸೇರಿ ನೀನು ಕೆಲಸಕ್ಕೆ ಹೋಗು, ಇಲ್ಲ ಹಣ ಕೊಡು ಎಂದು ಪೀಡಿಸುತ್ತಿದ್ದ ಕಾರಣ ಆಕೆ ಸಾವನ್ನಪ್ಪಿರುವುದಾಗಿ ಮೃತಳ ಕುಟುಂಬ ದೂರಿನಲ್ಲಿ ಉಲ್ಲೇಖಿಸಿದೆ. 
    ಶಾಜಿಯಾ ಬಾನು ತಿಪ್ಲಾಪುರ ಕ್ಯಾಂಪ್ ನಿವಾಸಿ ಸಮೀರ್ ಯಾನೆ ಜಮೀರ್ ಎಂಬುವರೊಂದಿಗೆ ನಾಲ್ಕು ವರ್ಷದ ಹಿಂದೆ ಮದುವೆಯಾಗಿದ್ದರು. ಮೇ.೨೭ರಂದು ತಿಪ್ಲಾಪುರದ ನಿವಾಸಿ ಸಲೀಂ ಶಾಜಿಯಾ ಬಾನು ಅವರ ಕುಟುಂಬಕ್ಕೆ ನಿಮ್ಮ ಮಗಳು ಸಾವನ್ನಪ್ಪಿದ್ದಾರೆ ಎಂದು ವಿಷಯ ಮುಟ್ಟಿಸಿದ್ದರು. ಶಾಜಿಯಾಳ ತವರು ಕುಟುಂಬ ತಿಪ್ಲಾಪುರಕ್ಕೆ ಧಾವಿಸಿದಾಗ ದಿವಾನ್ ಕಾಟ್ ಮೇಲೆ ಶಾಜಿಯಾಳ ಮೃತ ದೇಹ ಮಲಗಿಸಲಾಗಿತ್ತು.  ಎಲ್ಲರ ಸಮ್ಮುಖದಲ್ಲಿ ಅತ್ತೆ ಗುಲಾಬ್ ಮತ್ತು ಮಾವ ನಜೀರ್ ಅವರನ್ನು ಪ್ರಶ್ನಿಸಿದ ಶಾಜಿಯಾಳ ಕುಟುಂಬ ಆಕೆಯಸಾವಿನ ಬಗ್ಗೆ ತಿಳಿಯಲು ಮುಂದಾಗಿದೆ. 
    ಆಗ ಅತ್ತೆ ಗುಲಾಬ್ ಮತ್ತು ಮಾವ ನಜೀರ್ ಆಕೆಯ ಸಾವು ಲೋ ಬಿಪಿಯಿಂದಾಗಿದೆ ಎಂದು ಒಮ್ನೆ ಉತ್ತರಿಸಿದರೆ, ಮತ್ತೊಮ್ಮೆ ಆಕೆ ನೇಣುಬಿಗಿದು ಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದಿದ್ದಾರೆ. ಇದೇ ವೇಳೆ ಕುಟುಂಬಕ್ಕೆ ಶಾಜಿಯಾಳ ಕುತ್ತಿಗೆ ಭಾಗದಲ್ಲಿ ಕಲೆ ಕಂಡಿದೆ. ಶಾಜಿಯಾಳ ಕುತ್ತಿಗೆ ಮೇಲಿನ ಕಲೆಯನ್ನ ಪ್ರಶ್ನಿಸಿದಾಗ ಇಲ್ಲ ಆಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಉತ್ತರ ನೀಡಿದ್ದಾರೆ. ಈ ಗೊಂದಲದ ಹೇಳಿಕೆಗಳು ಮೃತಳ ಸಾವಿನ ಬಗ್ಗೆ ಅನುಮಾನ ಮೂಡಿಸಿದೆ. ಈ ಹಿನ್ನಲೆಯಲ್ಲಿ ಅತ್ತೆ ಗುಲಾಬ್ ಮತ್ತು ಮಾವ ನಜೀರ್ ವಿರುದ್ಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಎನ್‌ಟಿಬಿ ಕಛೇರಿಯಲ್ಲಿ ಬಿಲ್ ಪಾವತಿಸುವ ಕೌಂಟರ್, ಗ್ರಾಮೀಣ ಭಾಗದಲ್ಲಿ ಸರ್ವೀಸ್ ಸ್ಟೇಷನ್ ಪ್ರಾರಂಭಿಸಿ

ಆರ್. ವೇಣುಗೋಪಾಲ್ 
    ಭದ್ರಾವತಿ: ನಗರದ ಜನ್ನಾಪುರ ನಗರಸಭೆ ಎನ್‌ಟಿಬಿ ಶಾಖಾ ಕಛೇರಿ ಆವರಣದಲ್ಲಿ ಮೆಸ್ಕಾಂ ವಿದ್ಯುತ್ ಬಿಲ್ ಪಾವತಿಸುವ ಕೌಂಟರ್ ಪುನಃ ಪ್ರಾರಂಭಿಸುವಂತೆ ಹಾಗು ತಾಲೂಕಿನ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗ್ರಾಮೀಣ ಭಾಗದಲ್ಲಿ ಉಂಟಾಗುತ್ತಿರುವ ವಿದ್ಯುತ್ ವ್ಯತ್ಯಯ ಸರಿಪಡಿಸುವಂತೆ ಆಗ್ರಹಿಸಿ ಡಿ. ದೇವರಾಜ ಅರಸು ಜನಸ್ಪಂದನ ಸೇವಾ ಟ್ರಸ್ಟ್ ವತಿಯಿಂದ ಮೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರಿಗೆ ಮನವಿ ಸಲ್ಲಿಸಲಾಗಿದೆ. 
    ಟ್ರಸ್ಟ್ ಛೇರ್ಮನ್, ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಆರ್. ವೇಣುಗೋಪಾಲ್ ಮನವಿ ಸಲ್ಲಿಸಿದ್ದು,  ನಗರಸಭಾ ವ್ಯಾಪ್ತಿಯ ಜನ್ನಾಪುರ, ಎನ್.ಟಿ.ಬಿ ಕಛೇರಿ ಆವರಣದಲ್ಲಿ ಸುಮಾರು ೪೦ ವರ್ಷದಿಂದ ವಿದ್ಯುತ್ ಬಿಲ್ ಪಾವತಿಸುವ ಕೌಂಟರ್ ಕಾರ್ಯ ನಿರ್ವಹಿಸುತ್ತಿದೆ. ಈ ಕೌಂಟರಿನಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಸಿಬ್ಬಂದಿ ವರ್ಗದವರು ನಿವೃತ್ತಿಗೊಂಡ ಮೇಲೆ ಕೌಂಟರ್ ಸ್ಥಗಿತಗೊಂಡಿದೆ. ಈ ಭಾಗದಲ್ಲಿ ಅನೇಕ ಕೊಳಚೆ ಪ್ರದೇಶಗಳು ಬರುತ್ತಿದ್ದು, ಇವರಲ್ಲಿ ಬಹುತೇಕ ಆನಕ್ಷರಸ್ಥರಾಗಿರುವುದರಿಂದ ಇವರುಗಳಿಗೆ ಮೊಬೈಲ್‌ನಲ್ಲಿ ವಿದ್ಯುತ್ ಬಿಲ್ ಪಾವತಿಸುವ ಬಗ್ಗೆ ತಿಳುವಳಿಕೆ ಇರುವುದಿಲ್ಲ.  ನಿವಾಸಿಗಳು ವಿದ್ಯುತ್ ಬಿಲ್ ಕಟ್ಟಲು ತುಂಬಾ ದೂರ ಹೋಗಬೇಕಾಗಿದೆ. ಇವರೆಲ್ಲರೂ ಬಡತನ ರೇಖೆಗಿಂತ ಕೆಳಮಟ್ಟದಲ್ಲಿ ಜೀವನ ನಡೆಸುತ್ತಿದ್ದು, ಇವರುಗಳಿಗೆ ಮಳೆಗಾಲದಲ್ಲಿ ಹಾಗೂ ಬೇಸಿಗೆ ಕಾಲದಲ್ಲಿ ವಿದ್ಯುತ್ ಬಿಲ್ ಕಟ್ಟಲು ತುಂಬಾ ತೊಂದರೆಯಾಗುತ್ತಿದೆ ಎಂದು ಅಳಲು ತೋರ್ಪಡಿಸಿಕೊಳ್ಳಲಾಗಿದೆ. 
    ಈ ಭಾಗದ ನಿವಾಸಿಗಳಿಗೆ ಅನುಕೂಲ ಕಲ್ಪಿಸುವ ದೃಷ್ಟಿಯಿಂದ ಈ ಹಿಂದೆ ಕಾರ್ಯ ನಿರ್ವಹಿಸುತ್ತಿದ್ದ ಕೌಂಟರ್ ಪುನಃ ಪ್ರಾರಂಭಿಸುವುದರ ಬಗ್ಗೆ ಅಗತ್ಯ ಕ್ರಮ ತೆಗೆದುಕೊಳ್ಳುವಂತೆ ಒತ್ತಾಯಿಸಲಾಗಿದೆ. 
     ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಸಿಂಗನಮನೆ, ತಾವರಘಟ್ಟ ಮತ್ತು ಕಂಬದಾಳು ಹೊಸೂರು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಹಳ್ಳಿಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗುತ್ತಿದೆ. ಇದರಿಂದ ಗ್ರಾಮಸ್ಥರಿಗೆ, ರೈತರಿಗೆ, ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ತುಂಬಾ ತೊಂದರೆಯಾಗುತ್ತಿದೆ.  ಈ ಹಿನ್ನಲೆಯಲ್ಲಿ ಈ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯ  ಸೂಕ್ತವಾದ ಜಾಗದಲ್ಲಿ ತುರ್ತಾಗಿ ಸರ್ವೀಸ್ ಸ್ಟೇಷನ್ ಕಾರ್ಯಾರಂಭ ಮಾಡುವುದರ ಬಗ್ಗೆ ಅಗತ್ಯ ಕ್ರಮ ತೆಗೆದುಕೊಳ್ಳುವಂತೆ ಮನವಿ ಮಾಡಲಾಗಿದೆ.   
 

Wednesday, May 28, 2025

ಕೌಶಲ್ಯ ತರಬೇತಿ ಶಿಕ್ಷಕಿ ಫಾತೀಮಾ ನಿಧನ

ಫಾತೀಮಾ 
    ಭದ್ರಾವತಿ: ಕಾಗದನಗರ, ಉಜ್ಜನಿಪುರ ನಿವಾಸಿ, ನ್ಯೂಟೌನ್ ತರಂಗ ಕಿವುಡು ಮಕ್ಕಳ ಶಾಲೆಯ ಕೌಶಲ್ಯ ತರಬೇತಿ ಶಿಕ್ಷಕಿ ಫಾತೀಮಾ(೬೭) ಅವರ ನಿವಾಸದಲ್ಲಿ ನಿಧನ ಹೊಂದಿದರು. 
    ಇವರಿಗೆ ಓರ್ವ ಪುತ್ರ, ಇಬ್ಬರು ಪುತ್ರಿಯರಿದ್ದಾರೆ. ಕಳೆದ ಸುಮಾರು ೨೦ ವರ್ಷಗಳಿಂದ ತರಂಗ ಕಿವುಡು ಮಕ್ಕಳ ಶಾಲೆಯಲ್ಲಿ ವಿಶೇಷ ವಿಕಲಚೇತನ ಮಕ್ಕಳಿಗೆ ಕರಕುಶಲ ಹಾಗು ಅಲಂಕಾರಿಕಾ ವಸ್ತುಗಳನ್ನು ತಯಾರಿಸುವ ಕೌಶಲ್ಯ ಉಚಿತವಾಗಿ ಹೇಳಿ ಕೊಡುವ ಮೂಲಕ ಸೇವೆಯಲ್ಲಿ ತೊಡಗಿಸಿಕೊಂಡಿದ್ದರು.  ಶಾಲೆಯಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ  ವಸಂತ ಶಿಬಿರದ ಸಂಪನ್ಮೂಲ ವ್ಯಕ್ತಿಯಾಗಿ ವಿದ್ಯಾರ್ಥಿಗಳಿಗೆ ಕಲಿಕಾ ಮಾದರಿಗಳನ್ನು ಕಲಿಸಿಕೊಟ್ಟಿದ್ದರು.
    ಫಾತೀಮಾರವರ ನಿಧನಕ್ಕೆ ಶುಗರ್‌ಟೌನ್ ಲಯನ್ಸ್ ಕ್ಲಬ್ ಪದಾಧಿಕಾರಿಗಳು ಹಾಗು ತರಂಗ ಶಾಲೆಯ ಆಡಳಿತ ಮಂಡಳಿ ಮತ್ತು ಶಿಕ್ಷಕ ವೃಂದ ಸಂತಾಪ ಸೂಚಿಸಿದೆ. 

ಶಿವಮೊಗ್ಗ ಪ್ರಸೂತಿ ಹಾಗು ಸ್ತ್ರೀರೋಗ ತಜ್ಞರ ಸಂಘದ ಅಧ್ಯಕ್ಷರಾಗಿ ಡಾ. ವೀಣಾ ಭಟ್

ಡಾ. ವೀಣಾ ಭಟ್ 
    ಭದ್ರಾವತಿ: ನಗರದ ಮಹಾತ್ಮಗಾಂಧಿ ರಸ್ತೆ(ಟಿ.ಕೆ ರಸ್ತೆ), ನಯನ ಆಸ್ಪತ್ರೆ, ಸ್ತ್ರೀ ರೋಗ ತಜ್ಞೆ ಡಾ. ವೀಣಾ ಭಟ್ ೨೫ರ ರಜತ ಮಹೋತ್ಸವ ಸಂಭ್ರಮಾಚರಣೆಯಲ್ಲಿರುವ ಶಿವಮೊಗ್ಗ ಪ್ರಸೂತಿ ಹಾಗು ಸ್ತ್ರೀರೋಗ ತಜ್ಞರ ಸಂಘದ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. 
    ಪ್ರಸೂತಿ ವೈದ್ಯರು ಹಾಗು ಯೋಗ ಶಿಕ್ಷಕಿಯಾಗಿರುವ ಡಾ. ವೀಣಾ ಭಟ್‌ರವರು ಕಳೆದ ೨-೩ ದಶಕಗಳಿಂದ ಮಹಿಳೆಯರ ಆರೋಗ್ಯ ಕಾಳಜಿ ಹಾಗು ಸಬಲೀಕರಣದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ನೂರಾರು ಉಚಿತ ಆರೋಗ್ಯ ಹಾಗು ಯೋಗ ಶಿಬಿರಗಳಲ್ಲಿ ಮತ್ತು ಮದ್ಯವ್ಯರ್ಜನ ಶಿಬಿರಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡು ಆರೋಗ್ಯ ಕುರಿತು ಜಾಗೃತಿ ಮೂಡಿಸಿದ್ದು, ಇಂದಿಗೂ ಮುಂದುವರೆಸಿಕೊಂಡು ಬಂದಿದ್ದಾರೆ. ಅಲ್ಲದೆ ವೈದ್ಯ ಸಾಹಿತಿಯಾಗಿ ಸಹ ತಮ್ಮನ್ನು ತೊಡಗಿಸಿಕೊಂಡು ಆರೋಗ್ಯಕ್ಕೆ ಸಂಬಂಧಿಸಿದ ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ರಾಜ್ಯ ಹಾಗು ಜಿಲ್ಲಾ ಮಟ್ಟದ ಪತ್ರಿಕೆಗಳಲ್ಲಿ ಆರೋಗ್ಯ ಸಂಬಂಧ ಲೇಖನಗಳನ್ನು ಪ್ರಕಟಿಸಿದ್ದಾರೆ. ಈಗಾಗಲೇ ಭಾರತೀಯ ವೈದ್ಯಕೀಯ ಸಂಘ ತಾಲೂಕು ಶಾಖೆ ಮಹಿಳಾ ವಿಭಾಗದ ಅಧ್ಯಕ್ಷರಾಗಿ, ಸ್ತ್ರೀ ರೋಗ ತಜ್ಞರ ಸಂಘದ ಸಾರ್ವಜನಿಕ ಅರಿವು ಸಮಿತಿ ರಾಜ್ಯಾಧ್ಯಕ್ಷರಾಗಿ ಸಹ ಸೇವೆ ಸಲ್ಲಿಸುತ್ತಿದ್ದಾರೆ. ಇದೀಗ ಶಿವಮೊಗ್ಗ  ಪ್ರಸೂತಿ ಹಾಗು ಸ್ತ್ರೀರೋಗ ತಜ್ಞರ ಸಂಘದ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. 
    ಶಿವಮೊಗ್ಗ ಪ್ರಸೂತಿ ಹಾಗು ಸ್ತ್ರೀರೋಗ ತಜ್ಞರ ಸಂಘಕ್ಕೆ ಇದೀಗ ೨೫ರ ರಜತ ಮಹೋತ್ಸವ ಸಂsಮ. ಹಿರಿಯ ಸ್ತ್ರೀ ರೋಗ ತಜ್ಞ ಡಾ. ನಾಗರಾಜ್‌ರವರ ನೇತೃತ್ವದಲ್ಲಿ ೨೦೦೦ ಇಸವಿಯಲ್ಲಿ ಆರಂಭಗೊಂಡ ಸಂಘದಲ್ಲಿ ಹಿರಿಯ ಸ್ತ್ರೀ ರೋಗ ತಜ್ಞರಾದ ಡಾ. ಮುರಳಿಧರ ಪೈ, ಡಾ. ಮಲ್ಲೇಶ್ ಹುಲಿಮನಿ, ಡಾ. ಗೀತಾ ಇಸ್ಲೂರ್, ಡಾ. ಅರುಂಧತಿ, ಡಾ. ನಿರ್ಮಲ, ಡಾ. ಶಶಿಕಲಾ ಮಲ್ಲೇಶ್, ಡಾ. ವಿಮಲಾಬಾಯಿ, ಡಾ. ಚಿv ಶ್ರೀನಿವಾಸ್, ಡಾ. ಲತಾ ಶಶಿಧರ್ ರಮೇಶ್, ಡಾ. ಅನಸೂಯ, ಡಾ. ನಾರಾಯಣ ಬಾಬು, ಡಾ.ಚಿನ್ನಯ್ಯ, ಡಾ. ನಂದ ಕೋಟಿ, ಡಾ. ನಂದಾ ಶಿಂಗೆ, ಡಾ. ನರೇಂದ್ರ ಭಟ್, ಡಾ. ಮಹಾಬಲ, ಡಾ. ವಾಣಿಕೋರಿ ಸೇರಿದಂತೆ ಇನ್ನೂ ಹಲವು ಹಿರಿಯರ ವೈದ್ಯರು ತಮ್ಮದೇ ಆದ ಕೊಡುಗೆಗಳನ್ನು ನೀಡಿದ್ದಾರೆ.  
    ಇದೀಗ ಅಧ್ಯಕ್ಷರಾಗಿ ಅಧಿಕಾರವಹಿಸಿಕೊಂಡಿರುವ ಡಾ. ವೀಣಾ ಭಟ್‌ರವರು ಆರಂಭದಲ್ಲೇ ಕ್ರಿಯಾಶೀಲತೆಯಿಂದ ಸಂಘದ ಕಾರ್ಯ ಚಟುವಟಿಕೆಗಳನ್ನು ಮತ್ತಷ್ಟು ಹೆಚ್ಚಿಸುವ ಮೂಲಕ ಪ್ರಸ್ತುತ ʻಮಹಿಳಾ ಆರೋಗ್ಯ ದೇಶದ ಸೌಭಾಗ್ಯʼ ಎಂಬ ಧ್ಯೇಯ ವಾಕ್ಯದೊಂದಿಗೆ ತಮ್ಮ ಅಧಿಕಾರದ ೧ ವರ್ಷದವರೆಗೆ ನಿರಂತರವಾಗಿ ಮಹಿಳೆಯರಿಗೆ ಅರಿವು ಮೂಡಿಸುವ ವಿವಿಧ  ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಮಹಿಳಾ ಆರೋಗ್ಯ ಮತ್ತು ಆ ಮೂಲಕ ಸಮಗ್ರ  ಅಭಿವೃದ್ಧಿಗೆ ಮುಂದಾಗಿದ್ದಾರೆ. 
    ಇವರ ಜೊತೆಗೆ ಸಂಘದ ಕಾರ್ಯದರ್ಶಿಯಾಗಿ ಡಾ. ಸ್ವಾತಿ ಕಿಶೋರ್, ಉಪಾಧ್ಯಕ್ಷರಾಗಿ ಡಾ. ವಿಜಯಲಕ್ಷ್ಮಿ ರವೀಶ್ ಹಾಗೂ ಖಜಾಂಚಿಯಾಗಿ ಡಾ. ಶಶಿಕುಮಾರ್‌ರವರು ಅಧಿಕಾರವಹಿಸಿಕೊಂಡು ಸಂಘದ ಕಾರ್ಯ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ.

ಮೇ.೩೦ರಂದು ವಿಶ್ವ ಗುರು ಬಸವಣ್ಣನವರ ಜಯಂತ್ಯೋತ್ಸವ



    ಭದ್ರಾವತಿ : ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ವತಿಯಿಂದ ಸಿದ್ದಾರೂಢ ನಗರದ ಶ್ರೀ ಬಸವೇಶ್ವರ ಧರ್ಮಸಂಸ್ಥೆ ಹಾಗು ತಾಲೂಕಿನ ವಿವಿಧ ಸಂಘ-ಸಂಸ್ಥೆಗಳು ಮತ್ತು ಬಸವಾಭಿಮಾನಿಗಳ ಸಹಕಾರದೊಂದಿಗೆ ಮೇ.೩೦ರ ಶನಿವಾರ ಸಂಜೆ ೫.೩೦ಕ್ಕೆ ಶ್ರೀ ಬಸವೇಶ್ವರ ಸಭಾಭವನದಲ್ಲಿ ವಿಶ್ವ ಗುರು ಬಸವಣ್ಣನವರ ಜಯಂತ್ಯೋತ್ಸವ ಏರ್ಪಡಿಸಲಾಗಿದೆ. 
    ಸರ್ವಜ್ಞನ ಮಾಸೂರು ತಿಪ್ಪಾಯಿಕೊಪ್ಪದ ಶ್ರೀ ಗುರು ಮೂಕಪ್ಪ ಶಿವಯೋಗಿಗಳ ಮಠದ ಶ್ರೀ ಮ.ನಿ.ಪ್ರ ಮಹಾಂತಸ್ವಾಮಿಗಳವರು ಸಮಾರಂಭದ ದಿವ್ಯ ಸಾನಿಧ್ಯವಹಿಸಲಿದ್ದಾರೆ. ಶಾಸಕ ಬಿ.ಕೆ ಸಂಗಮೇಶ್ವರ್ ಉಪಸ್ಥಿತರಿದ್ದು, ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಎನ್.ಎಸ್ ಮಲ್ಲಿಕಾರ್ಜುನಯ್ಯ ಅಧ್ಯಕ್ಷತೆ ವಹಿಸಲಿದ್ದಾರೆ. ಕು.ವಿ.ವಿ ರಾಷ್ಟ್ರೀಯ ಸೇವಾ ಯೋಜನೆ(ಎನ್‌ಎಸ್‌ಎಸ್) ಸಂಯೋಜನಾಧಿಕಾರಿ ಡಾ.ಶುಭಾ ಮರವಂತೆ ಉದ್ಘಾಟಿಸಲಿದ್ದು, ಹೊನ್ನಾವರ ಕವಲಕ್ಕಿ ವೈದ್ಯೆ ಹಾಗು ಲೇಖಕಿ ಡಾ.ಎಚ್.ಎಸ್ ಅನುಪಮ ಉಪನ್ಯಾಸ ನೀಡಲಿದ್ದಾರೆ.
    ನಗರಸಭೆ ಅಧ್ಯಕ್ಷೆ ಜೆ.ಸಿ ಗೀತಾ ರಾಜ್‌ಕುಮಾರ್, ಶರಣ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಎಚ್.ಎನ್ ಮಹಾರುದ್ರ, ಶ್ರೀ ಬಸವೇಶ್ವರ ಧರ್ಮ ಸಂಸ್ಥೆ ಅಧ್ಯಕ್ಷ ಶಿವಕುಮಾರ್ ಸೇರಿದಂತೆ ಇನ್ನಿತರರು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.
    ಶಿವಮೊಗ್ಗ ಅಲ್ಲಮಪ್ರಭು ಬಯಲು ಮೈದಾನದಲ್ಲಿ ಮೇ ೯ ರಂದು (ಹಳೇ ಜೈಲು ಆವರಣದಲ್ಲಿ ) ನಡೆದ ಸಾವಿರ ವಚನ ಕಾರ್ಯಕ್ರಮದಲ್ಲಿ ಗಾಯನ ಮಾಡಿದ ತಾಲೂಕಿನ ೧೦೮ ಗಾಯಕರಿಂದ ಸಾಮೂಹಿಕ ವಚನ ಗಾಯನ ಸಂಜೆ ೫.೩೦ಕ್ಕೆ ಟಿ.ಜೆ ನಾಗರತ್ನರವರ ಸಾರಥ್ಯದಲ್ಲಿ ನಡೆಯಲಿದೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಅಗಮಿಸುವಂತೆ ಕೋರಲಾಗಿದೆ. 

ಮಹಿಳಾ ಘಟಕದ ಜಿಲ್ಲಾ ಕಾರ್ಯದರ್ಶಿಯಾಗಿ ವಾಣಿಶ್ರೀ ನಾಗರಾಜ್ ನೇಮಕ

ವಾಣಿಶ್ರೀ ನಾಗರಾಜ್ 
    ಭದ್ರಾವತಿ : ಅಖಿಲ ಭಾರತ ವೀರಶೈವ ಲಿಂಗಾಯಿತ ಮಹಾಸಭಾ ಜಿಲ್ಲಾಧ್ಯಕ್ಷ ರುದ್ರಮುನಿ ಸಜ್ಜನ್‌ರವರ ನಿರ್ದೇಶನದ ಮೇರೆಗೆ ಜಿಲ್ಲಾ ಮಹಿಳಾ ಘಟಕದ ಕಾರ್ಯದರ್ಶಿಯಾಗಿ ಹಳೇನಗರ ಕೋಟೆ ಏರಿಯಾ ನಿವಾಸಿ ವಾಣಿಶ್ರೀ ನಾಗರಾಜ್‌ರವರನ್ನು ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ವಾಗ್ದೇವಿಯವರು ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ.
    ಇವರು ತಾಲೂಕು ವೀರಶೈವ ಲಿಂಗಾಯಿತ ಮಹಿಳಾ ಸಮಾಜದ ನಿರ್ದೇಶಕಿಯಾಗಿ, ಪತಂಜಲಿ ಯೋಗ ಸಮಿತಿ ಶಿಕ್ಷಕಿಯಾಗಿ ಹಾಗು ರಾಜ್ಯಮಟ್ಟದ ಯೋಗ ತೀರ್ಪುಗಾರರಾಗಿ, ಹಳೇನಗರ ಮಹಿಳಾ ಸೇವಾ ಸಮಾಜದ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ. 
    ವಾಣಿಶ್ರೀಯವರು ತಮ್ಮನ್ನು ಜಿಲ್ಲಾ ಕಾರ್ಯದರ್ಶಿಯಾಗಿ ನೇಮಕಗೊಳಿಸಿರುವ ಹಿನ್ನಲೆಯಲ್ಲಿ ಜಿಲ್ಲಾ ಮತ್ತು ತಾಲೂಕು ಸಮಿತಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.