Tuesday, June 3, 2025

ಜೂ.೪ರಂದು ಮೆಸ್ಕಾಂ ಜನ ಸಂಪರ್ಕ ಸಭೆ



    ಭದ್ರಾವತಿ : ಮೆಸ್ಕಾಂ ಗ್ರಾಮೀಣ ಉಪ ವಿಭಾಗದ ವತಿಯಿಂದ ಜೂ.೪ರಂದು ಬೆಳಿಗ್ಗೆ ೧೧ ಗಂಟೆಯಿಂದ ಮಧ್ಯಾಹ್ನ ೧ ಗಂಟೆಯವರೆಗೆ ಜನ ಸಂಪರ್ಕ ಸಭೆ ಆಯೋಜಿಸಲಾಗಿದೆ. 
    ಗ್ರಾಮೀಣ ಉಪ ವಿಭಾಗದ ಕಛೇರಿಯಲ್ಲಿ ನಡೆಯಲಿರುವ ಸಭೆ ಅಧ್ಯಕ್ಷತೆಯನ್ನು ಅಧೀಕ್ಷಕ ಇಂಜಿನಿಯರ್‌ರವರು ವಹಿಸಲಿದ್ದು, ತಾಲೂಕಿನ ಕಾರೇಹಳ್ಳಿ, ಬಾರಂದೂರು, ಅಂತರಗಂಗೆ, ದೊಡ್ಡೇರಿ, ಬಿ.ಆರ್‌ಪಿ, ದೊಣಬಘಟ್ಟ, ತಡಸ, ಬಿಳಿಕಿ, ಅರಳಿಕೊಪ್ಪ, ಕಂಬದಾಳ್, ಹೊಸೂರು, ಅರಳಿಹಳ್ಳಿ, ಕೂಡ್ಲಿಗೆರೆ, ಅತ್ತಿಗುಂದ, ವೀರಾಪುರ, ಕಲ್ಲಹಳ್ಳಿ ಸುತಮುತ್ತಲಿನ ಪ್ರದೇಶಗಳ ವ್ಯಾಪ್ತಿಯ ಗ್ರಾಹಕರು ಸಭೆಯಲ್ಲಿ ಭಾಗವಹಿಸಿ ಕುಂದುಕೊರತೆ, ಅಹವಾಲುಗಳನ್ನು ಬಗೆಹರಿಸಿಕೊಳ್ಳಬಹುದಾಗಿದೆ. ಇದರ ಸದುಪಯೋಗ ಪಡಿಸಿಕೊಳ್ಳಲು ಕೋರಲಾಗಿದೆ.

ಲ್ಯಾಟರಲ್ ಎಂಟ್ರಿ ಮುಖಾಂತರ ೨ನೇ/೩ನೇ ವರ್ಷದ ಸೆಮಿಸ್ಟರ್ ಡಿಪ್ಲೋಮಾ ಕೋರ್ಸುಗಳಿಗೆ ಅರ್ಜಿ ಆಹ್ವಾನ


    ಭದ್ರಾವತಿ  ೨೦೨೫-೨೬ನೇ ಸಾಲಿನಲ್ಲಿ ೨ ವರ್ಷಗಳ ಐ.ಟಿ.ಐ/ ದ್ವಿತೀಯ ಪಿ.ಯು.ಸಿ.(ವಿಜ್ಞಾನ)/ದ್ವಿತೀಯ ಪಿ.ಯು.ಸಿ(ತಾಂತ್ರಿಕ ವಿಷಯಗಳಲ್ಲಿ) ಉತ್ತೀರ್ಣರಾಗಿರುವ ಅರ್ಹ ಅಭ್ಯರ್ಥಿಗಳಿಗೆ ಲ್ಯಾಟರಲ್ ಎಂಟ್ರಿ ಮುಖಾಂತರ ೨ನೇ /೩ನೇ ವರ್ಷದ ಸೆಮಿಸ್ಟರ್ ಡಿಪ್ಲೋಮಾ ಕೋರ್ಸುಗಳಿಗೆ ನಗರದ ನ್ಯೂಟೌನ್ ವಿ.ಐ.ಎಸ್.ಎಸ್.ಜೆ ಸರ್ಕಾರಿ ಪಾಲಿಟೆಕ್ನಿಕ್ ವತಿಯಿಂದ ಆಫ್-ಲೈನ್ ಮೂಲಕ ಪ್ರವೇಶ ಅರ್ಜಿ ಆಹ್ವಾನಿಸಲಾಗಿದೆ. 
    (೧) ಸಿವಿಲ್ ಇಂಜಿನಿಯರಿಂಗ್, (೨) ಎಲೆಕ್ನಿಕಲ್ ಆಂಡ್ ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್, (೩)ಮೆಕ್ಯಾನಿಕಲ್ ಇಂಜಿನಿಯರಿಂಗ್ ಮತ್ತು (೪)ಮೆಟಲರ್ಜಿ ಇಂಜಿನಿಯರಿಂಗ್ ವಿಭಾಗಗಳು ಲಭ್ಯವಿರುತ್ತವೆ. ೨ ವರ್ಷಗಳ ಐ.ಟಿ.ಐ. / ದ್ವಿತೀಯ ಪಿ.ಯು.ಸಿ.(ವಿಜ್ಞಾನ)/ದ್ವಿತೀಯ ಪಿ.ಯು.ಸಿ.(ತಾಂತ್ರಿಕ ವಿಷಯಗಳಲ್ಲಿ) ಉತ್ತೀರ್ಣರಾಗಿರುವ ಅರ್ಹ ಅಭ್ಯರ್ಥಿಗಳಿಗೆ ಲ್ಯಾಟರಲ್ ಎಂಟ್ರಿ ಮುಖಾಂತರ ೨ನೇ ವರ್ಷದ/೩ನೇ ಸೆಮಿಸ್ಟರ್ ಡಿಪ್ಲೋಮಾ ಕೋರ್ಸುಗಳಿಗೆ ಆಫ್-ಲೈನ್ ಮೂಲಕ ಪ್ರವೇಶ ಪಡೆಯಲು ಆಹ್ವಾನಿಸಲಾಗಿದೆ. ಮೇ.೨೯ ರಿಂದ ಪ್ರವೇಶ ಪ್ರಕ್ರಿಯೆಗಳು ನಡೆಯುತ್ತಿದ್ದು, ಇಚ್ಛೆಯುಳ್ಳ ವಿದ್ಯಾರ್ಥಿಗಳು ಪಾಲಿಟೆಕ್ನಿಕ್‌ಗೆ ಸಂಸ್ಥೆಗೆ ಖುದ್ದಾಗಿ ಬಂದು ಪ್ರವೇಶ ಅರ್ಜಿಯನ್ನು ಪಡೆದು ಜೂ. ೧೪ರೊಳಗೆ ಸಲ್ಲಿಸಲು ತಿಳಿಸಲಾಗಿದೆ.  
    ಭರ್ತಿ ಮಾಡಿದ ಅರ್ಜಿಯನ್ನು ಅಭ್ಯರ್ಥಿಗಳು ಖುದ್ದಾಗಿ ಪ್ರಾಂಶುಪಾಲರಿಗೆ ಸಲ್ಲಿಸಲು ಅಂತಿಮ ದಿನಾಂಕ ಜೂ.೧೪ರ ಸಂಜೆ ೫ ಗಂಟೆಯೊಳಗೆ ಕಾಲವಕಾಶವಿದ್ದು, ದಿನಾಂಕ ಜೂ.೧೬ ಸಂಜೆ ೫:೩೦ರ ನಂತರ ಅಂತಿಮ ಮೆರಿಟ್ ಪಟ್ಟಿ ಪ್ರಕಟಣೆಯಾಗಲಿದೆ. ಆಫ್‌ಲೈನ್ ಮೂಲಕ ಮೆರಿಟ್ ಆಧಾರದ ಮೇರೆಗೆ ನಿಯಮಗಳ ಅನುಸಾರ ಸೀಟು ಹಂಚಿಕೆ ಮಾಡಲಾಗುವುದರಿಂದ ಅಭ್ಯರ್ಥಿಗಳು ಅರ್ಹ ಮೂಲ ದಾಖಲಾತಿಗಳು ಹಾಗೂ ನಿಗದಿತ ಶುಲ್ಕದೊಂದಿಗೆ ಖುದ್ದಾಗಿ ಹಾಜರಿದ್ದು,  ಜೂ.೧೭ ಅಥವಾ ೧೮ರಂದು ಪ್ರವೇಶ ಪಡೆಯಬಹುದಾಗಿದೆ. 
    ಹೆಚ್ಚಿನ ಮಾಹಿತಿಯನ್ನು ಪಾಲಿಟೆಕ್ನಿಕ್ ಕಛೇರಿ ವೇಳೆಯಲ್ಲಿ ಪಡೆಯಬಹುದಾಗಿದೆ. ಪ್ರಾಂಶುಪಾಲರು/ಕಛೇರಿ ಮೊ: ೮೭೬೨೭೧೭೧೯೬, ೮೮೬೧೯೩೧೫೩೯, ೭೯೭೫೦೪೧೧೩೪, ೯೯೮೬೪೦೬೯೪೧, ೭೨೫೯೩೪೪೨೦೩, ೯೪೮೧೫೦೧೦೦೧, ೯೭೩೧೨೮೩೮೬೮ ಇವರನ್ನು ಸಂಪರ್ಕಿಸಬಹುದಾಗಿದೆ. 

ವೀರಶೈವ ಲಿಂಗಾಯತ ಮಹಿಳಾ ಸಮಾಜದಿಂದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ

ಭದ್ರಾವತಿ ತಾಲೂಕು ವೀರಶೈವ ಲಿಂಗಾಯತ ಮಹಿಳಾ ಸಮಾಜದ ವತಿಯಿಂದ ಈ ಬಾರಿ ದ್ವಿತೀಯ ಪಿಯುಸಿ ಮತ್ತು ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅತಿಹೆಚ್ಚು ಅಂಕ ಪಡೆದ ಸಮಾಜದ ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಿ ಅಭಿನಂದಿಸಲಾಯಿತು. 
    ಭದ್ರಾವತಿ :  ತಾಲೂಕು ವೀರಶೈವ ಲಿಂಗಾಯತ ಮಹಿಳಾ ಸಮಾಜದ ವತಿಯಿಂದ ಈ ಬಾರಿ ದ್ವಿತೀಯ ಪಿಯುಸಿ ಮತ್ತು ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅತಿಹೆಚ್ಚು ಅಂಕ ಪಡೆದ ಸಮಾಜದ ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಿ ಅಭಿನಂದಿಸಲಾಯಿತು. 
    ಹಳೇನಗರದ ಶ್ರೀ ವೀರಭದ್ರೇಶ್ವರ ಸಮುದಾಯ ಭವನದ ಶ್ರೀ ಬನಶಂಕರಿ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಸಮಾಜದ ಸರ್ವ ಸದಸ್ಯರ ಸಭೆ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮಲ್ಲಿ ವಿದ್ಯಾರ್ಥಿಗಳನ್ನು ಅಭಿನಂದಿಸಿ ಭವಿಷ್ಯದಲ್ಲಿ ಮತ್ತಷ್ಟು ಸಾಧನೆ ಮಾಡುವಂತೆ ಪ್ರೇರೇಪಿಸಲಾಯಿತು. 
    ಸಮಾಜದ ಗೌರವ ಸಲಹೆಗಾರರಾದ ಎಮೆರಿಟಸ್ ಪ್ರಾಧ್ಯಾಪಕಿ ಡಾ. ವಿಜಯದೇವಿ ಪ್ರತಿಭಾ ಪುರಸ್ಕಾರದ ಉದ್ದೇಶ ಹಾಗು ವಿದ್ಯಾರ್ಥಿಗಳ ಮುಂದಿನ ಭವಿಷ್ಯ ಕುರಿತು ಪ್ರಾಸ್ತಾವಿಕ ನುಡಿಗಳನ್ನಾಡಿದರು. 
    ಸಮಾಜದ ಅಧ್ಯಕ್ಷರಾದ ಶ್ರೀಮತಿ ನಾಗರತ್ನ ವಾಗೀಶ್ ಕೋಠಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸಮಾಜದ ಪ್ರಧಾನ ಕಾರ್ಯದರ್ಶಿ ಕುಸುಮಾ ತೀರ್ಥಯ್ಯ ವಾರ್ಷಿಕ ವರದಿ ಹಾಗು ಖಜಾಂಚಿಯಾದ ಪರಿಮಳ ರೋಹಿತ್ ವಾರ್ಷಿಕ ಲೆಕ್ಕಪತ್ರ ಮಂಡಿಸಿದರು. 
    ಸಮಾಜದ ಗೌರವಾಧ್ಯಕ್ಷೆ ಆರ್ ಎಸ್ ಶೋಭಾ, ಉಪಾಧ್ಯಕ್ಷೆ ನಾಗರತ್ನ ಮಲ್ಲಿಕಾರ್ಜುನ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ಕವಿತಾ ಅಶೋಕ್ ಮತ್ತು ಮಮತ ಪ್ರಕಾಶ್ ಪ್ರಾರ್ಥಿಸಿದರು. ನಗರಸಭೆ ಸದಸ್ಯೆ ಅನುಪಮಾ ಚನ್ನೇಶ್ ಕಾರ್ಯಕ್ರಮ ನಿರೂಪಿಸಿ, ಶಶಿಕಲಾ ಉದಯಕುಮಾರ್ ವಂದಿಸಿದರು.  

Monday, June 2, 2025

ಪುರಾಣ ಪ್ರಸಿದ್ದ ಲಕ್ಷ್ಮೀನರಸಿಂಹಸ್ವಾಮಿ ದೇವಸ್ಥಾನದಲ್ಲಿ ಸ್ವಚ್ಛದ ಕಾರ್ಯ

ಮೇಲ್ಭಾಗದಲ್ಲಿ ಬೆಳೆದು ನಿಂತಿದ್ದ ಗಿಡಗಂಟಿಗಳ ತೆರವು 

ಭದ್ರಾವತಿ ಹಳೇನಗರದ ಪುರಾಣ ಪ್ರಸಿದ್ದ, ಕ್ಷೇತ್ರ ಪಾಲಕ ಮುಜರಾಯಿ ಇಲಾಖೆಗೆ ಒಳಪಟ್ಟಿರುವ ಸಂಪೂರ್ಣ ಶಿಲಾಮಯವಾಗಿರುವ ವೆಂಕಿಪುರ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ದೇವಸ್ಥಾನದ ಮೇಲ್ಭಾಗದಲ್ಲಿ ಬೆಳೆದು ನಿಂತಿದ್ದ ಗಿಡಗಂಟಿಗಳನ್ನು ಪುರಾತತ್ವ ಇಲಾಖೆ ಅಧಿಕಾರಿಗಳು, ಸಿಬ್ಬಂದಿಗಳಿಂದ ಸ್ವಚ್ಛತಾ ಕಾರ್ಯ ಕೈಗೊಳ್ಳುವ ಮೂಲಕ ತೆರವುಗೊಳಿಸಲಾಯಿತು. 
    ಭದ್ರಾವತಿ : ಹಳೇನಗರದ ಪುರಾಣ ಪ್ರಸಿದ್ದ, ಕ್ಷೇತ್ರ ಪಾಲಕ ಮುಜರಾಯಿ ಇಲಾಖೆಗೆ ಒಳಪಟ್ಟಿರುವ ಸಂಪೂರ್ಣ ಶಿಲಾಮಯವಾಗಿರುವ ವೆಂಕಿಪುರ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ದೇವಸ್ಥಾನದ ಮೇಲ್ಭಾಗದಲ್ಲಿ ಬೆಳೆದು ನಿಂತಿದ್ದ ಗಿಡಗಂಟಿಗಳನ್ನು ಪುರಾತತ್ವ ಇಲಾಖೆ ಅಧಿಕಾರಿಗಳು, ಸಿಬ್ಬಂದಿಗಳಿಂದ ಸ್ವಚ್ಛತಾ ಕಾರ್ಯ ಕೈಗೊಳ್ಳುವ ಮೂಲಕ ತೆರವುಗೊಳಿಸಲಾಯಿತು. 
    ಹಲವಾರು ವರ್ಷಗಳಿಂದ ದೇವಸ್ಥಾನದ ಮೇಲ್ಭಾಗದಲ್ಲಿ ಗಿಡಗಂಟಿ ಬೆಳೆದು ಬೇರುಗಳು ಬಿಟ್ಟಿದ್ದು, ಇದರಿಂದಾಗಿ ದೇವಸ್ಥಾನ ಶಿಥಿಲಗೊಳ್ಳುವ ಆತಂಕ ಎದುರಾಗಿದ್ದು, ಈ ಸಂಬಂಧ ಹಲವಾರು ಬಾರಿ ಮುಜರಾಯಿ ಇಲಾಖೆ ಅಧಿಕಾರಿಗಳಿಗೆ ದೇವಸ್ಥಾನದ ಅರ್ಚಕರು, ಭಕ್ತರು ಸಂರಕ್ಷಣಾ ಕಾರ್ಯ ಕೈಗೊಳ್ಳುವಂತೆ ಮನವಿ ಮಾಡಿದ್ದರು. 
    ಈ ನಡುವೆ ಇದೀಗ ಸ್ವಚ್ಛತಾ ಕಾರ್ಯ ಕೈಗೊಳ್ಳುವ ಮೂಲಕ ಗಿಡಗಂಟಿಗಳನ್ನು ತೆರವುಗೊಳಿಸಲಾಗಿದೆ. ಪುರಾತತ್ವ ಇಲಾಖೆ ಅಧಿಕಾರಿಗಳು, ಸಿಬ್ಬಿಂದಿಗಳ ಕಾರ್ಯಕ್ಕೆ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ಮಾರುತಿ, ಮಾಜಿ ಸದಸ್ಯ ವಿಶ್ವನಾಥ್, ನರಸೇಗೌಡ, ಸುಬ್ರಹ್ಮಣ್ಯ, ವೈಶಾಖ್, ನಿಖಿಲ್, ಹರ್ಷ, ಪ್ರವೀಣ್ ಸೇರಿದಂತೆ ಸ್ಥಳೀಯ ಭಕ್ತರು ಸಹ ಕೈಜೋಡಿಸುವ ಮೂಲಕ ಯಶಸ್ವಿಗೊಳಿಸಿದ್ದಾರೆ. 

ಸಿಂಗನಮನೆ ಗ್ರಾಮ ಪಂಚಾಯಿತಿ ಅಕ್ರಮ : ಕರವೇ ಹೋರಾಟ ೧೦ನೇ ದಿನಕ್ಕೆ ಅಂತ್ಯ

ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಎಂ. ಗಂಗಣ್ಣ ಸೂಕ್ತ ಕ್ರಮ ಕೈಗೊಳ್ಳುವ ಭರವಸೆ 

ಭದ್ರಾವತಿ ಸಿಂಗನಮನೆ ಗ್ರಾಮ ಪಂಚಾಯಿತಿಯಲ್ಲಿ ನಡೆದಿರುವ ಹಲವು ಅಕ್ರಮಗಳನ್ನು ವಿರೋಧಿಸಿ ಕರ್ನಾಟಕ ರಕ್ಷಣಾ ವೇದಿಕೆ(ಶಿವರಾಮೇಗೌಡ ಬಣ) ವತಿಯಿಂದ ಕಳೆದ ೧೦ ದಿನಗಳಿಂದ ನಡೆಸುತ್ತಿರುವ ಹೋರಾಟ ಸ್ಥಳಕ್ಕೆ ಸೋಮವಾರ ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಎಂ. ಗಂಗಣ್ಣ ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದರು ಈ ಹಿನ್ನಲೆಯಲ್ಲಿ ಹೋರಾಟ ಅಂತ್ಯಗೊಂಡಿದೆ. 
    ಭದ್ರಾವತಿ : ಸಿಂಗನಮನೆ ಗ್ರಾಮ ಪಂಚಾಯಿತಿಯಲ್ಲಿ ನಡೆದಿರುವ ಹಲವು ಅಕ್ರಮಗಳನ್ನು ವಿರೋಧಿಸಿ ಕರ್ನಾಟಕ ರಕ್ಷಣಾ ವೇದಿಕೆ(ಶಿವರಾಮೇಗೌಡ ಬಣ) ವತಿಯಿಂದ ಕಳೆದ ೧೦ ದಿನಗಳಿಂದ ನಡೆಸುತ್ತಿರುವ ಹೋರಾಟ ಸೋಮವಾರ ಅಂತ್ಯಗೊಂಡಿದೆ. 
    ಸಿಂಗನಮನೆ ಗ್ರಾಮ ಪಂಚಾಯಿತಿಯಲ್ಲಿ ಈ ಹಿಂದೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಸೋಮಶೇಖರ್ ಹಾಗೂ ಶೇಖರ್‌ನಾಯ್ಕ್‌ರವರ ಅವಧಿಯಲ್ಲಿ ಹೆಚ್ಚುವರಿ ಸಿಬ್ಬಂದಿಗಳು ಹಾಗು ಅಧಿಕಾರಿಗಳು ಮಾಸಿಕ ಸಾಮಾನ್ಯ ಸಭಾ ನಡವಳಿಕೆಗೆ ಸಂಬಂಧಿಸಿದಂತೆ ನಕಲಿ ದಾಖಲೆ ಸೃಷ್ಟಿಸಿರುವುದು ಸೇರಿದಂತೆ ಹಲವು ಅಕ್ರಮಗಳನ್ನು ನಡೆಸಿದ್ದು, ಇದನ್ನು ವಿರೋಧಿಸಿ ತಕ್ಷಣ ತಪ್ಪಿತಸ್ಥ ಹೆಚ್ಚುವರಿ ಸಿಬ್ಬಂದಿಗಳು ಹಾಗು ಅಧಿಕಾರಿಗಳನ್ನು ಸೇವೆಯಿಂದ ವಜಾಗೊಳಿಸುವಂತೆ ಆಗ್ರಹಿಸಿ ಪಂಚಾಯಿತಿ ಮುಂಭಾಗ ಮೇ.೨೦ರಿಂದ ಅಮರಣಾಂತ ಉಪವಾಸ ಸತ್ಯಾಗ್ರಹ ನಡೆಸಲಾಗುತ್ತಿತ್ತು.
    ಹೋರಾಟ ಸ್ಥಳಕ್ಕೆ ಭೇಟಿ ನೀಡಿದ ತಾಲೂಕು ಪಂಚಾಯಿತಿ ಕಾರ್ಯನಿರ್ವಣಾಧಿಕಾರಿ ಎಂ. ಗಂಗಣ್ಣರವರು ಹೋರಾಟಗಾರರ ಮನವೊಲಿಸಿ ಅವರಿಂದ ಮನವಿ ಸ್ವೀಕರಿಸಿ, ಈಗಾಗಲೇ ಬೇಡಿಕೆಯಂತೆ ಹೆಚ್ಚುವರಿ ಸಿಬಂದಿಗಳನ್ನು ಸೇವೆಯಿಂದ ವಜಾ ಮಾಡಲಾಗಿದೆ. ಇನ್ನುಳಿದ ಸರ್ಕಾರಿ ನಿವೇಶನ ಮಾರಾಟದ ಬಗ್ಗೆ ತನಿಖೆ ನಡೆಸುವುದಾಗಿ ಹಾಗೂ ಖಾಸಗಿ ಬಡಾವಣೆಗಳಲ್ಲಿ ಸಾರ್ವಜನಿಕರ ಉಪಯೋಗಕ್ಕೆ ಪಂಚಾಯಿತಿ ಕಛೇರಿಗೆ ಬಿಡಬೇಕಾದ ಖಾಲಿ ನಿವೇಶನವನ್ನು ಬಿಡದೆ ಇರುವ ಬಗ್ಗೆ ಹಾಗೂ ಸರ್ಕಾರಿ ಗ್ರಾಮಠಾಣ ಒತ್ತುವರಿಮಾಡಿ ಬಡಾವಣೆ ನಿರ್ಮಿಸಿರುವ ಸಂಬಂಧ ತಹಸೀಲ್ದಾರ್ ಹಾಗೂ ಎಡಿಎಲ್‌ಆರ್ ಅವರಿಂದ ಅಳತೆ ನಡೆಸಿ ಜಾಗವನ್ನು ಹಿಂದಕ್ಕೆ ಪಡೆಯಲಾಗುವುದು ಎಂದು ಭರವಸೆ ನೀಡಿದರು. ಈ ಹಿನ್ನಲೆಯಲ್ಲಿ ಹೋರಾಟವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. 
ತಿಳಿಸಿದ್ದಾರೆ.
    ಒಂದು ವೇಳೆ ಹೋರಾಟಕ್ಕೆ ನ್ಯಾಯ ಸಿಗದಿದ್ದರೆ ಜು.೧೦ರಂದು ಜಿಲ್ಲಾಧಿಕಾರಿಗಳ ಕಛೇರಿ ಮುಂದೆ ಪ್ರತಿಭಟನೆ ನಡೆಸಿ, ಪಿಡಿಒ ಹಾಗೂ ತಾಲ್ಲೂಕು ಪಂಚಾಯತಿ ಮತ್ತು ಜಿಲ್ಲಾ ಪಂಚಾಯತಿ ಅಧಿಕಾರಿಗಳ ವಿರುದ್ದ ಲೋಕಾಯುಕ್ತರಿಗೆ ದೂರು ನೀಡಲಾಗುವುದು ಎಂದು ಹೋರಾಟಗಾರರು ಎಚ್ಚರಿಕೆ ನೀಡಿದರು. 

Sunday, June 1, 2025

ವಿಜೃಂಭಣೆಯಿಂದ ಜರುಗಿದ ಗಂಗಮ್ಮ ಕರಗ ಮಹೋತ್ಸವ

ಭದ್ರಾವತಿ ಜನ್ನಾಪುರ ಹಾಲಪ್ಪ ಶೆಡ್ ಶ್ರೀ ಗಂಗಮ್ಮ ದೇವಸ್ಥಾನ ಸೇವಾ ಸಮಿತಿ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ೧೫ ವರ್ಷದ ಕರಗ ಮಹೋತ್ಸವ ವಿಜೃಂಭಣೆಯಿಂದ ಜರುಗಿತು. 
    ಭದ್ರಾವತಿ: ಜನ್ನಾಪುರ ಹಾಲಪ್ಪ ಶೆಡ್ ಶ್ರೀ ಗಂಗಮ್ಮ ದೇವಸ್ಥಾನ ಸೇವಾ ಸಮಿತಿ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ೧೫ ವರ್ಷದ ಕರಗ ಮಹೋತ್ಸವ ವಿಜೃಂಭಣೆಯಿಂದ ಜರುಗಿತು. 
    ಶನಿವಾರ ಬೆಳಿಗ್ಗೆ ಅಮ್ಮನವರಿಗೆ ವಿಶೇಷ ಪೂಜೆ ಹಾಗು ಹೋಮ ನೆರವೇರಿತು. ಭಾನುವಾರ ಮಧ್ಯಾಹ್ನ  ಭಕ್ತರಿಗೆ ಅನ್ನದಾನ ಏರ್ಪಡಿಸಲಾಗಿತ್ತು. ರಾತ್ರಿ ರಾಜಬೀದಿಯಲ್ಲಿ ಕರಗ ಉತ್ಸವ ವಿಜೃಂಭಣೆಯಿಂದ ಜರುಗಿತು. 


    ಹಾಲಪ್ಪ ಶೆಡ್, ಜನ್ನಾಪುರ, ಗಣೇಶ್ ಕಾಲೋನಿ, ವಿದ್ಯಾಮಂದಿರ, ನ್ಯೂಟೌನ್, ಆಂಜನೇಯ ಅಗ್ರಹಾರ ಸೇರಿದಂತೆ ಸುತ್ತಮುತ್ತಲಿನ ಭಕ್ತರು ಕರಗ ಉತ್ಸವದಲ್ಲಿ ಪಾಲ್ಗೊಂಡಿದ್ದರು. 

ಶಾಲಾ ಮಕ್ಕಳಿಗೆ, ಶಿಕ್ಷಕರಿಗೆ ಹೂವು, ಸಿಹಿ ನೀಡಿ ಆರತಿ ಬೆಳಗಿ ಅದ್ದೂರಿ ಸ್ವಾಗತ

ದಿ ಶಿವಮೊಗ್ಗ ಮಲ್ಟಿಪರ್ಪಸ್ ಸೋಷಿಯಲ್ ಸರ್ವಿಸ್ ಸೊಸೈಟಿ ವತಿಯಿಂದ ಸ್ತ್ರೀ ಬಂಧು ಸ್ವಸಹಾಯ ಸಂಘಗಳ ಒಕ್ಕೂಟದ ಸಹಕಾರದೊಂದಿಗೆ ಭದ್ರಾವತಿ ನಗರದ ನ್ಯೂಟೌನ್ ಸೈಂಟ್ ಚಾರ್ಲ್ಸ್ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲಾ ಪ್ರಾರಂಭೋತ್ಸವ ನಡೆಸಲಾಯಿತು. 
    ಭದ್ರಾವತಿ: ದಿ ಶಿವಮೊಗ್ಗ ಮಲ್ಟಿಪರ್ಪಸ್ ಸೋಷಿಯಲ್ ಸರ್ವಿಸ್ ಸೊಸೈಟಿ ವತಿಯಿಂದ ಸ್ತ್ರೀ ಬಂಧು ಸ್ವಸಹಾಯ ಸಂಘಗಳ ಒಕ್ಕೂಟದ ಸಹಕಾರದೊಂದಿಗೆ ನಗರದ ನ್ಯೂಟೌನ್ ಸೈಂಟ್ ಚಾರ್ಲ್ಸ್ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲಾ ಪ್ರಾರಂಭೋತ್ಸವ ನಡೆಸಲಾಯಿತು. 
    ಶಾಲಾ ಮಕ್ಕಳಿಗೆ ಹೂವು ಮತ್ತು ಸಿಹಿ ನೀಡುವ ಮೂಲಕ ಅದ್ದೂರಿಯಾಗಿ ಸ್ವಾಗತಿಸಲಾಯಿತು. ವಿಶೇಷ ಎಂದರೆ ಶಾಲಾ ಮಕ್ಕಳ ಜೊತೆಗೆ ಶಿಕ್ಷಕ ವೃಂದದವರಿಗೂ ಕಿರುಕಾಣಿಕೆ ನೀಡುವ ಮೂಲಕ ಆರತಿ ಬೆಳಗಿ ವಿನೂತನವಾಗಿ ಬರಮಾಡಿಕೊಳ್ಳಲಾಯಿತು.   
    ಮೊದಲ ದಿನ ಮಕ್ಕಳಿಗೆ ಪೆನ್ನು, ಪೆನ್ಸಿಲ್, ರಬ್ಬರ್, ನೋಟ್ ಪುಸ್ತಕ ಸೇರಿದಂತೆ ಲೇಖನ ಸಾಮಗ್ರಿಗಳನ್ನು ವಿತರಿಸಲಾಯಿತು. ಶಾಲಾ ಆಡಳಿತ ಮಂಡಳಿಯವರು, ಒಕ್ಕೂಟದ ಸದಸ್ಯೆಯರು ಉಪಸ್ಥಿತರಿದ್ದರು.