Tuesday, June 10, 2025

ಜೂ.೧೧ರಿಂದ ವಿದ್ಯುತ್ ವ್ಯತ್ಯಯ

    

ಭದ್ರಾವತಿ : ಮೆಸ್ಕಾಂ ಘಟಕ-೨ ನಗರ ಉಪವಿಭಾಗ ವ್ಯಾಪ್ತಿಯಲ್ಲಿ ಶಿಥಿಲಗೊಂಡಿರುವ ವಿದ್ಯುತ್ ತಂತಿ ಬದಲಾವಣೆ ಮಾಡುವ ಕಾರ್ಯ ಹಮ್ಮಿಕೊಂಡಿರುವುದರಿಂದ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. 
    ಜೂ.೧೧ರ ಬುಧವಾರ, ೧೩ರ ಶುಕ್ರವಾರ ಮತ್ತು ೧೫ರ ಭಾನುವಾರ ಬೆಳಿಗ್ಗೆ ೯ ಗಂಟೆಯಿಂದ ಸಂಜೆ ೫ ಗಂಟೆವರೆಗೆ ಭೂತನಗುಡಿ, ಮಾಧವನಗರ, ಗಾಂಧಿನಗರ, ಎನ್‌ಎಂಸಿ ರೋಡ್, ಗಾಂಧಿ ವೃತ್ತ ಸೇರಿದಂತೆ ಇತ್ಯಾದಿ ಪ್ರದೇಶಗಳಲ್ಲಿ ಹಾಗು ಜೂ.೧೨ರ ಗುರುವಾರ, ೧೪ರ ಶನಿವಾರ ಮತ್ತು ೧೬ರ ಸೋಮವಾರ ಬೆಳಿಗ್ಗೆ ೯ ಗಂಟೆಯಿಂದ ಸಂಜೆ ೫ ಗಂಟೆವರೆಗೆ ಸಾದತ್ ಕಾಲೋನಿ, ನೆಹರು ನಗರ, ಪಿಡಬ್ಲ್ಯೂಡಿ ಕಚೇರಿ ಮುಂಭಾಗ ಮತ್ತು ಎಂ.ಎಂ ಕಾಂಪೌಂಡ್ ಸೇರಿದಂತೆ ಇತ್ಯಾದಿ ಪ್ರದೇಶಗಳಲ್ಲಿ ವಿದ್ಯುತ್ ಉಂಟಾಗಲಿದೆ. ಗ್ರಾಹಕರು ಸಹಕರಿಸುವಂತೆ ಮೆಸ್ಕಾಂ ನಗರ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಕೋರಿದ್ದಾರೆ. 

ವಿಐಎಸ್‌ಎಲ್ ಕಾರ್ಖಾನೆ ಯಾವುದೇ ಕಾರಣಕ್ಕೂ ಮುಚ್ಚುವುದಿಲ್ಲ : ಪೇಜಾವರ ಶ್ರೀ

ಶಿವಮೊಗ್ಗಕ್ಕೆ ಆಗಮಿಸಿದ್ದ ಪೇಜಾವರ ಮಠದ ಶ್ರೀ ವಿಶ್ವತೀರ್ಥ ಪ್ರಸನ್ನ ಸ್ವಾಮೀಜಿಯವರಿಗೆ ಭದ್ರಾವತಿ ವಿಐಎಸ್‌ಎಲ್ ಕಾರ್ಖಾನೆಯ ಗುತ್ತಿಗೆ ಕಾರ್ಮಿಕರ ಸಂಘದ ಪದಾಧಿಕಾರಿಗಳು ಭೇಟಿ ಮಾಡಿ ಕಾರ್ಖಾನೆಯಲ್ಲಿನ ವಿದ್ಯಮಾನಗಳನ್ನು ವಿವರಿಸಿದರು.  
    ಭದ್ರಾವತಿ : ಕೇಂದ್ರ ಉಕ್ಕು ಪ್ರಾಧಿಕಾರದ ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಯಾವುದೇ ಕಾರಣಕ್ಕೂ ಮುಚ್ಚುವುದಿಲ್ಲ. ಸುಮಾರು ೨ ವರ್ಷಗಳ ಹಿಂದೆ ಕಾರ್ಖಾನೆ ಮುಂಭಾಗ ಹೋರಾಟ ಬೆಂಬಲಿಸಿದ ಸಂದರ್ಭದಲ್ಲಿ ಹೇಳಿದ ಮಾತಿಗೆ ಈಗಲೂ ಬದ್ಧವಾಗಿದ್ದೇನೆ. ಮುಂದಿನ ದಿನಗಳಲ್ಲಿ ಕಾರ್ಖಾನೆಯ ಗುತ್ತಿಗೆ ಕಾರ್ಮಿಕರ ಎಲ್ಲಾ ಸಮಸ್ಯೆಗಳು ಸಹ ಬಗೆಹರಿಯಲಿವೆ ಎಂದು ಪೇಜಾವರ ಮಠದ ಶ್ರೀ ವಿಶ್ವತೀರ್ಥ ಪ್ರಸನ್ನ ಸ್ವಾಮೀಜಿಯವರು ಹೇಳಿದರು. 
    ಶ್ರೀಗಳು ಮಂಗಳವಾರ ಶಿವಮೊಗ್ಗದಲ್ಲಿ ತಮ್ಮನ್ನು ಭೇಟಿ ಮಾಡಿದ ಕಾರ್ಖಾನೆಯ ಗುತ್ತಿಗೆ ಕಾರ್ಮಿಕರ ಸಂಘದ ಪದಾಧಿಕಾರಿಗಳ ನಿಯೋಗಕ್ಕೆ ಆಶೀರ್ವದಿಸಿ, ಪ್ರಸ್ತುತ ಕಾರ್ಖಾನೆಯ ವಿದ್ಯಾಮಾನಗಳ ಕುರಿತು ಮಾಹಿತಿ ಪಡೆದು ಮಾತನಾಡಿದರು. 
    ಕಾರ್ಖಾನೆಗೆ ತನ್ನದೇ ಆದ ಇತಿಹಾಸವಿದೆ, ನಾಲ್ವಡಿ ಕೃಷ್ಣರಾಜ ಒಡೆಯರ್ ಮತ್ತು ಭಾರತ ರತ್ನ ಸರ್.ಎಂ ವಿಶ್ವೇಶ್ವರಾಯ ಅವರ ಪರಿಶ್ರಮದಿಂದ ಸ್ಥಾಪನೆಗೊಂಡ ಕಾರ್ಖಾನೆ ಯಾವುದೇ ಕಾರಣಕ್ಕೂ ಮುಚ್ಚುವುದಿಲ್ಲ. ಪ್ರಸ್ತುತ ಆಶಾದಾಯಕ ಬೆಳವಣಿಗೆಗಳು ಕಂಡು ಬರುತ್ತಿವೆ. ಮುಂದಿನ ದಿನಗಳಲ್ಲಿ ಕಾರ್ಖಾನೆಯ ಎಲ್ಲಾ ಸಮಸ್ಯೆಗಳು ದೂರವಾಗಲಿದ್ದು, ಗುತ್ತಿಗೆ ಕಾರ್ಮಿಕರು ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ. ಗುತ್ತಿಗೆ ಕಾರ್ಮಿಕರ ಸಮಸ್ಯೆಗಳ ಕುರಿತು ಉಕ್ಕು ಸಚಿವರು ಹಾಗು ಸಂಸದರೊಂದಿಗೆ ಚರ್ಚಿಸುವುದಾಗಿ ಶ್ರೀಗಳು ಭರವಸೆ ವ್ಯಕ್ತಪಡಿಸದರು.   
    ಗುತ್ತಿಗೆ ಕಾರ್ಮಿಕರ ಸಂಘದ ಅಧ್ಯಕ್ಷ ಸುರೇಶ್, ಉಪಾಧ್ಯಕ್ಷ ಮಂಜುನಾಥ್, ಪ್ರಧಾನ ಕಾರ್ಯದರ್ಶಿ ರಾಕೇಶ್, ಕಾರ್ಯದರ್ಶಿ ಮಂಜುನಾಥ್, ಖಜಾಂಚಿ ಆನಂದ್, ನಿವೃತ್ತ ಕಾರ್ಮಿಕ ನರಸಿಂಹಾಚಾರ್ ಸೇರಿದಂತೆ ಇನ್ನಿತರರು ನಿಯೋಗದಲ್ಲಿದ್ದರು. 

ಆನ್‌ಲೈನ್‌ನಲ್ಲಿ ಸಾಲ ನೀಡುವ ಕಂಪನಿಗಳ ವಿರುದ್ಧ ಕ್ರಮ ಕೈಗೊಳ್ಳಿ : ಮನವಿ

ಆನ್‌ಲೈನ್‌ನಲ್ಲಿ ಸಾಲ ನೀಡುವ ಕಂಪನಿಗಳಿಂದ ರಾಜ್ಯದಲ್ಲಿ ಬಡಕುಟುಂಬಗಳಿಗೆ ತೊಂದರೆಯಾಗುತ್ತಿದ್ದು, ಈ ಹಿನ್ನಲೆಯಲ್ಲಿ ಅಗತ್ಯ ಕೈಗೊಳ್ಳುವಂತೆ ಭದ್ರಾವತಿ ಜನ್ನಾಪುರ, ಫಿಲ್ಟರ್ ಶೆಡ್ ನಿವಾಸಿ, ಸಾಮಾಜಿಕ ಹೋರಾಟಗಾರ ಶಶಿಕುಮಾರ್ ಗೌಡ ಗೃಹ ಸಚಿವರಿಗೆ ತಹಸೀಲ್ದಾರ್ ಪರುಸಪ್ಪ ಕುರುಬರ ಅವರ ಮೂಲಕ ಮಂಗಳವಾರ ಮನವಿ ಸಲ್ಲಿಸಿ ಒತ್ತಾಯಿಸಿದ್ದಾರೆ. 
    ಭದ್ರಾವತಿ : ಆನ್‌ಲೈನ್‌ನಲ್ಲಿ ಸಾಲ ನೀಡುವ ಕಂಪನಿಗಳಿಂದ ರಾಜ್ಯದಲ್ಲಿ ಬಡಕುಟುಂಬಗಳಿಗೆ ತೊಂದರೆಯಾಗುತ್ತಿದ್ದು, ಈ ಹಿನ್ನಲೆಯಲ್ಲಿ ಅಗತ್ಯ ಕೈಗೊಳ್ಳುವಂತೆ ಸಾಮಾಜಿಕ ಹೋರಾಟಗಾರ ಶಶಿಕುಮಾರ್ ಗೌಡ ಗೃಹ ಸಚಿವರಿಗೆ ತಹಸೀಲ್ದಾರ್ ಪರುಸಪ್ಪ ಕುರುಬರ ಅವರ ಮೂಲಕ ಮಂಗಳವಾರ ಮನವಿ ಸಲ್ಲಿಸಿ ಒತ್ತಾಯಿಸಿದ್ದಾರೆ. 
    ಆನ್‌ಲೈನ್‌ನಲ್ಲಿ ಸಾಲ ನೀಡುವ ಕಂಪನಿಗಳು ನಾಯಿ ಕೊಡೆಗಳಂತೆ ಹುಟ್ಟಿಕೊಂಡಿವೆ. ಈ ಕಂಪನಿಗಳಿಂದ ಸಾಲ ಪಡೆದ ಬಡ ಗ್ರಾಹಕರು ಸಂಪೂರ್ಣವಾಗಿ ಸಾಲ ಮರು ಪಾವತಿ ಮಾಡಿದರೂ ಸಹ ಗ್ರಾಹಕರ ಖಾತೆಗಳಿಂದ ಗೊತ್ತಿಲ್ಲದಂತೆ ಹಣ ಕಡಿತಗೊಳ್ಳುತ್ತಿದೆ. ಇದರಿಂದಾಗಿ ಬಡಕುಟುಂಬಗಳು ತೊಂದರೆ ಅನುಭವಿಸುವಂತಾಗಿದೆ. 
    ಈ ಹಿನ್ನಲೆಯಲ್ಲಿ ಆನ್‌ಲೈನ್‌ನಲ್ಲಿ ಸಾಲ ನೀಡುವ ಕಂಪನಿಗಳ ವಿರುದ್ಧ ಕ್ರಮ ಕೈಗೊಂಡು ಪ್ರತಿ ಜಿಲ್ಲೆಯಲ್ಲಿ ಪೊಲೀಸ್ ಇಲಾಖೆ ವತಿಯಿಂದ ಆನ್‌ಲೈನ್‌ನಲ್ಲಿ ಸಾಲ ನೀಡುವ ಕಂಪನಿಗಳಿಂದ ಸಾಲ ಪಡೆಯದಂತೆ ಜಾಗೃತಿ ಮೂಡಿಸಬೇಕೆಂದು ಶಶಿಕುಮಾರ್ ಗೌಡ ಮನವಿಯಲ್ಲಿ ಆಗ್ರಹಿಸಿದ್ದಾರೆ.

ನಿವೃತ್ತ ಪೊಲೀಸ್ ಸಿಬ್ಬಂದಿ ನಿಟ್ಟೂರು ರಾಜಶೇಖರ್ ನಿಧನ

ನಿಟ್ಟೂರು ರಾಜಶೇಖರ್ 
    ಭದ್ರಾವತಿ : ನಗರದ ಲೋಯರ್ ಹುತ್ತಾ ನಿವಾಸಿ, ನಿವೃತ್ತ ಪೊಲೀಸ್ ಸಿಬ್ಬಂದಿ ನಿಟ್ಟೂರು ರಾಜಶೇಖರ್(೭೨) ಮಂಗಳವಾರ ನಿಧನ ಹೊಂದಿದರು. 
    ಪತ್ನಿ, ಪುತ್ರ ಹಾಗು ಪುತ್ರಿ ಇದ್ದಾರೆ. ಹಿರಿಯ ಪತ್ರಕರ್ತ ದಿವಂಗತ ನಿಟ್ಟೂರು ಶ್ರೀರಾಮ್‌ರವರ ಸಹೋದರರಾದ ರಾಜಶೇಖರ್‌ರವರು ಮಾಚೇನಹಳ್ಳಿ ಸಶಸ್ತ್ರ ಮೀಸಲು ಪಡೆ (ಕೆಎಸ್‌ಆರ್‌ಪಿ)ಯಲ್ಲಿ ಕರ್ತವ್ಯ ನಿರ್ವಹಿಸಿದ್ದರು. ನಂತರ ನಗರದ ಪೊಲೀಸ್ ಉಪಾಧೀಕ್ಷಕರ ಕಛೇರಿಯಲ್ಲಿ ಸ್ಟೆನೋಗ್ರಾಫರ್ ಹುದ್ದೆಯಲ್ಲಿ ಕರ್ತವ್ಯ ನಿರ್ವಹಿಸಿ ನಿವೃತ್ತಿ ಹೊಂದಿದ್ದರು. 
    ರಾಜಶೇಖರ್ ಹಲವಾರು ವರ್ಷಗಳವರೆಗೆ ಪತ್ರಿಕಾ ವಿತರಕರಾಗಿ ಸಹ ಕಾರ್ಯ ನಿರ್ವಹಿಸಿದ್ದು,  ಇವರ ನಿಧನಕ್ಕೆ ನಗರದ ಗಣ್ಯರು ಸಂತಾಪ ಸೂಚಿಸಿದ್ದಾರೆ. 

Monday, June 9, 2025

ತೀರ್ಥಹಳ್ಳಿ ನ್ಯಾಯವಾದಿ ಮೇಲೆ ಹಲ್ಲೆ ಪ್ರಕರಣ ಖಂಡಿಸಿ ಪ್ರತಿಭಟನೆ

ತೀರ್ಥಹಳ್ಳಿ ನ್ಯಾಯವಾದಿ ಮಧುಕರ್ .ಆರ್ ಮಯ್ಯ ಅವರನ್ನು ಅಪರಿಚಿತರು ಅಡ್ಡಗಟ್ಟಿ ಮಾರಣಾಂತಿಕ ಹಲ್ಲೆ ನಡೆಸಿರುವುದನ್ನು ಖಂಡಿಸಿ ಭದ್ರಾವತಿ ತಾಲೂಕು ವಕೀಲರ ಸಂಘದಿಂದ ಸೋಮವಾರ ಪ್ರತಿಭಟನಾ ಮೆರವಣಿಗೆ ನಡೆಸಿ ತಹಶೀಲ್ದಾರ್‌ಗೆ ಮನವಿ ಸಲ್ಲಿಸಲಾಯಿತು.
    ಭದ್ರಾವತಿ :  ತೀರ್ಥಹಳ್ಳಿ ನ್ಯಾಯವಾದಿ ಮಧುಕರ್ .ಆರ್ ಮಯ್ಯ ಅವರನ್ನು ಅಪರಿಚಿತರು ಅಡ್ಡಗಟ್ಟಿ ಮಾರಣಾಂತಿಕ ಹಲ್ಲೆ ನಡೆಸಿರುವುದನ್ನು ಖಂಡಿಸಿ ತಾಲೂಕು ವಕೀಲರ ಸಂಘದಿಂದ ಸೋಮವಾರ ಪ್ರತಿಭಟನಾ ಮೆರವಣಿಗೆ ನಡೆಸಿ ತಹಶೀಲ್ದಾರ್‌ಗೆ ಮನವಿ ಸಲ್ಲಿಸಲಾಯಿತು.
    ಇದಕ್ಕೂ ಮೊದಲು ಸಂಘದ ಅಧ್ಯಕ್ಷ ಉಮೇಶ್‌ರವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ನ್ಯಾಯವಾದಿಗಳಾದ ಕೆ.ಎನ್ ಶ್ರೀಹರ್ಷ, ವೆಂಕಟೇಶ್, ಕೇಶವಮೂರ್ತಿ, ಟಿ. ಚಂದ್ರೇಗೌಡ, ಜಯರಾಂ, ಪ್ರಶಾಂತ್ ಸೇರಿದಂತೆ ಇನ್ನಿತರರು ಮಾತನಾಡಿ, ಸಮಾಜ ಘಾತಕ ಶಕ್ತಿಗಳಿಂದ ಇತ್ತೀಚೆಗೆ ನ್ಯಾಯವಾದಿಗಳ ಮೇಲೆ ಹಲ್ಲೆ, ದಬ್ಬಾಳಿಕೆಗಳು ಹೆಚ್ಚಾಗುತ್ತಿವೆ. ಸರ್ಕಾರ ವಕೀಲರ ಹಿತರಕ್ಷಣಾ ಕಾಯಿದೆ ಸಮರ್ಪಕವಾಗಿ ಜಾರಿಗೆ ತರಬೇಕು. ನ್ಯಾಯವಾದಿಗಳಿಗೆ ಸೂಕ್ತ ರಕ್ಷಣೆ ಒದಗಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕೆಂದು ಹಲವು ಬಾರಿ ಸರ್ಕಾರಕ್ಕೆ ಒತ್ತಾಯಿಸುತ್ತಾ ಬಂದಿದ್ದರೂ ಸಹ ಇದುವರೆಗೂ ಯಾವುದೇ ಕ್ರಮ ಕೈಗೊಳ್ಳದಿರುವುದು ನ್ಯಾಯವಾದಿಗಳ ಮೇಲಿನ ಹಲ್ಲೆ ಪ್ರಕರಣಗಳು ಹೆಚ್ಚಾಗಲು ಕಾರಣವಾಗಿದೆ ಎಂದು ಆರೋಪಿಸಲಾಯಿತು. 
ಜೂ:೬ರಂದು ತೀರ್ಥಹಳ್ಳಿ ನ್ಯಾಯವಾದಿ ಮಧುಕರ್ .ಆರ್ ಮಯ್ಯರವರ ಮೇಲೆ ಅಪರಿಚಿತ ವ್ಯಕ್ತಿಗಳು ರಸ್ತೆಯಲ್ಲಿ ಅಡ್ಡಗಟ್ಟಿ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ತಪ್ಪಿತಸ್ಥರನ್ನು ಪೊಲೀಸರು ತಕ್ಷಣ ಪತ್ತೆಹಚ್ಚಿ ಬಂಧಿಸಬೇಕೆಂದು ಗೃಹ ಸಚಿವರಿಗೆ ಒತ್ತಾಯಿಸಲಾಯಿತು. 
    ಪ್ರತಿಭಟನಾ ಮೆರವಣಿಗೆ.-ಮನವಿ.
    ನ್ಯಾಯಾಲಯದ ಆವರಣದಿಂದ ತಾಲೂಕು ಕಚೇರಿವರೆಗೂ ಘೋಷಣೆಗಳನ್ನು ಕೂಗುತ್ತಾ ಸಾಗಿದ ನ್ಯಾಯವಾದಿಗಳು ಉಪತಹಸೀಲ್ದಾರ್ ಮಂಜಾನಾಯ್ಕರವರ ಮೂಲಕ ಗೃಹ ಸಚಿವರಿಗೆ ಮನವಿ ಸಲ್ಲಿಸಿದರು.  
    ಸಂಘದ ಉಪಾಧ್ಯಕ್ಷ ಬಿ.ಎಸ್ ನಾಗರಾಜ್, ಕಾರ್ಯದರ್ಶಿ ರಾಜೇಶ್, ಖಜಾಂಚಿ ಆಶಾ, ಪಾಧಿಕಾರಿಗಳಾದ ಆದರ್ಶ, ಪವನ್, ಹರೀಶ್‌ಬರ್ಗೆ, ರೇಖಾ, ಉಮಾಪತಿ, ಉದಯಕುಮಾರ್, ಪ್ರಕಾಶ್, ಕಾಂತರಾಜ್, ಪುಟ್ಟಸ್ವಾಮಿ, ಭರತ್, ರಾಜು, ಶ್ರೀನಿವಾಸ, ಉಮಾಶಂಕರ್, ಪಂಡರಿನಾಥ್, ಆಂಥೋಣಿ, ಕೃಷ್ಣೇಗೌಡ, ವಿನಾಯಕ್, ಲೋಕೇಶ್, ಸೋಮಶೇಖರ್, ಶಿವಕುಮಾರ್, ಎ.ಟಿ ರವಿ, ಮಹೆಶ್, ಕೂಡ್ಲಿಗೆರೆಮಂಜುನಾಥ್, ಮಹೆಶ್‌ಕುಮಾರ್, ಅನಿತ, ಮುಖ್ತಾಬಾಯಿ, ನರಸಿಂಹಮೂರ್ತಿ, ನಾರಾಯಣಸ್ವಾಮಿ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು. 

ಬಿಳಿಕಿ ಗ್ರಾಮ ಪಂಚಾಯಿತಿ ನ್ಯೂನ್ಯತೆ ಖಂಡಿಸಿ ಧರಣಿ ಸತ್ಯಾಗ್ರಹ


ಭದ್ರಾವತಿ ತಾಲೂಕಿನ ಬಿಳಿಕಿ ಗ್ರಾಮ ಪಂಚಾಯಿತಿಯ ಹಲವು ನ್ಯೂನ್ಯತೆಗಳನ್ನು ಖಂಡಿಸಿ ಮಾನವ ಹಕ್ಕುಗಳ ಹೋರಾಟ ಸಮಿತಿ ವತಿಯಿಂದ ಸೋಮವಾರ ಪಂಚಾಯಿತಿ ಮುಂಭಾಗ ಧರಣಿ ಸತ್ಯಾಗ್ರಹ ನಡೆಸುವ ಮೂಲಕ ಪ್ರತಿಭಟಿಸಲಾಯಿತು. 
    ಭದ್ರಾವತಿ: ತಾಲೂಕಿನ ಬಿಳಿಕಿ ಗ್ರಾಮ ಪಂಚಾಯಿತಿಯ ಹಲವು ನ್ಯೂನ್ಯತೆಗಳನ್ನು ಖಂಡಿಸಿ ಮಾನವ ಹಕ್ಕುಗಳ ಹೋರಾಟ ಸಮಿತಿ ವತಿಯಿಂದ ಸೋಮವಾರ ಪಂಚಾಯಿತಿ ಮುಂಭಾಗ ಧರಣಿ ಸತ್ಯಾಗ್ರಹ ನಡೆಸುವ ಮೂಲಕ ಪ್ರತಿಭಟಿಸಲಾಯಿತು. 
    ಗ್ರಾಮ ಪಂಚಾಯಿತಿಯಲ್ಲಿ ಹಲವು ವರ್ಷಗಳಿಂದ ಇ-ಸ್ವತ್ತು ಖಾತೆ ಮಾಡಿಕೊಡಲು ನಿರ್ಲಕ್ಷ್ಯವಹಿಸಿದ್ದು, ಗ್ರಾಮ ಸಭೆ ಮತ್ತು ವಾರ್ಡ್ ಸಭೆಗಳನ್ನು ಕಾನೂನಿನ ಪ್ರಕಾರ ನಡೆಸದೆ ಗ್ರಾಮಸ್ಥರಿಗೆ ಭಿತ್ತಿ ಪತ್ರದ ಮೂಲಕ ಪ್ರಚಾರಪಡಿಸಿ ತಿಳಿಸದೆ ಕೆಲವು ಗ್ರಾಮಸ್ಥರು ಮತ್ತು ಸದಸ್ಯರು ಹಾಗು ಅಧಿಕಾರಿಗಳು ತಮ್ಮಿಷ್ಟಕ್ಕನುಸಾರ ಸಭೆ ನಡೆಸಿದ್ದಾರೆಂದು ದೂರಲಾಯಿತು. 
    ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಪ್ರತಿ ಕುಟುಂಬಕ್ಕೆ ನೂರು ದಿನಗಳು ಕೆಲಸ ನೀಡಬೇಕೆಂಬ ಆದೇಶವಿದ್ದರು ಹಲವು ವರ್ಷಗಳಿಂದ ೧೦ ರಿಂದ ೨೦ ದಿನಗಳು ಮಾತ್ರ ಕೆಲಸ ನೀಡಲಾಗುತ್ತಿದೆ. ಈ ಮೂಲಕ ಬಡವರ್ಗದವರಿಗೆ ಅನ್ಯಾಯವೆಸಲಾಗುತ್ತಿದೆ ಎಂದು ಆರೋಪಿಸಲಾಯಿತು. 
    ಬಿಳಿಕಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಅತಿ ಹೆಚ್ಚು ಬಡಕುಟುಂಬದವರು ವಾಸವಿದ್ದು, ಮನೆ ಇಲ್ಲದೆ ಕುಟುಂಬಗಳು ಹಲವು ವರ್ಷಗಳಿಂದ ಸಮಸ್ಯೆಗಳನ್ನು ಅನುಭವಿಸುತ್ತಿದ್ದಾರೆ. ಪಂಚಾಯಿತಿ ವ್ಯಾಪ್ತಿಯ ಬಿಳಿಕಿ, ಮಜ್ಜಿಗೇನಹಳ್ಳಿ, ಬಿಳಿಕಿ ತಾಂಡ್ಯ, ಪದ್ಮೇನಹಳ್ಳಿ, ನವಲೆ ಬಸಾಪುರ, ನೇರಲೇಕೆರೆ ಸೇರಿದಂತೆ ಇತ್ಯಾದಿ ಗ್ರಾಮಗಳಲ್ಲಿ ವಾಸವಿರುವ ನಿವೇಶನ ರಹಿತರನ್ನು ಇದುವರೆಗೂ ಗುರುತಿಸದೆ, ರಾಜೀವ್ ಗಾಂಧಿ ವಸತಿ ನಿಗಮಕ್ಕೆ ನಿವೇಶನ ರಹಿತರ ಹೆಸರನ್ನು ಕಳುಹಿಸದೆ ನಿರ್ಲಕ್ಷ್ಯ ವಹಿಸಲಾಗಿದೆ ಎಂದು ದೂರಲಾಯಿತು. 
    ಪಂಚಾಯಿತಿ ಪಕ್ಕದಲ್ಲಿಯೇ ಇರುವ ಸರ್ಕಾರಿ ಪ್ರಾಥಮಿಕ ಶಾಲೆ ಕಟ್ಟಡ ಹಲವು ವರ್ಷಗಳಿಂದ ಶಿಥಿಲಗೊಂಡ ದುಸ್ಥಿತಿಗೆ ತಲುಪಿದೆ. ಈ ಸಂಬಂಧ ಹಲವಾರು ಮನವಿ ಸಲ್ಲಿಸಲಾಗಿದೆ. ಅಲ್ಲದೆ ಶಾಸಕ ಬಿ.ಕೆ ಸಂಗಮೇಶ್ವರ್ ಸಹ ಖುದ್ದಾಗಿ ಪರಿಶೀಲನೆ ನಡೆಸಿದ್ದಾರೆ. ಆದರೂ ಸಹ ಇದುವರೆಗೂ ಶಾಲಾ ಕಟ್ಟಡ ದುರಸ್ತಿಗೊಳಿಸದೆ ನಿರ್ಲಕ್ಷ್ಯವಹಿಸಿರುವುದು ವಿಪರ್ಯಾಸದ ಸಂಗತಿಯಾಗಿದೆ. 
    ಗ್ರಾಮ ಪಂಚಾಯಿತಿ ತಕ್ಷಣ ಎಲ್ಲಾ ನ್ಯೂನ್ಯತೆಗಳನ್ನು ಸರಿಪಡಿಸಿಕೊಳ್ಳಬೇಕು. ಸಂವಿಧಾನ ಬದ್ಧವಾಗಿ ಕಾರ್ಯನಿರ್ವಹಿಸುವ ಮೂಲಕ ಮಾನವ ಹಕ್ಕುಗಳು ಉಲ್ಲಂಘನೆಯಾಗದಂತೆ ಜಾಗೃತಿವಹಿಸಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಮನವಿ ಸಲ್ಲಿಸುವ ಮೂಲಕ ಎಚ್ಚರಿಸಲಾಯಿತು. 
    ಸಮಿತಿ ಅಧ್ಯಕ್ಷ ಬಿ.ಎನ್ ರಾಜು ಧರಣಿ ಸತ್ಯಾಗ್ರಹ ನೇತೃತ್ವವಹಿಸಿದ್ದರು. ಎನ್. ಮಂಜುನಾಥ್, ಬಿ.ಜೆ ಪಾಲಾಕ್ಷ, ಶಂಕ್ರಪ್ಪ, ಆರ್. ಗಣೇಶ್, ವಿ. ಈರೇಶ್, ಜಯಮ್ಮ, ಲಕ್ಷ್ಮೀವೇಲು, ಸರೋಜ, ಲೋಕೇಶ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. 

ಪೊಲೀಸರ ನಿರ್ಲಕ್ಷ್ಯದಿಂದ ಗೋ ಹತ್ಯೆ : ದೇವರಾಜ್ ಹರಳಿಹಳ್ಳಿ ಆರೋಪ

ಗೋಹತ್ಯೆ ತಡೆಯುವಂತೆ ದೂರು ವಾಟ್ಸಫ್‌ನಲ್ಲಿ ಮಾಹಿತಿ ನೀಡಿರುವುದು. 
    ಭದ್ರಾವತಿ : ತಾಲೂಕಿನಲ್ಲಿ ಪ್ರತಿ ವರ್ಷ ಬಕ್ರೀದ್ ಹಬ್ಬದಂದು ಗೋ ಹತ್ಯೆ ನಡೆಯುತ್ತಿದ್ದು, ಈ ಬಾರಿ ಸಹ ಗೋ ಹತ್ಯೆ ನಡೆಸಲಾಗಿದೆ. ಗೋ ಹತ್ಯೆ ಕುರಿತು ಪೊಲೀಸರಿಗೆ ಮುಂಚಿತವಾಗಿ ಮಾಹಿತಿ ನೀಡಿದರೂ ಸಹ ರಾಜಕೀಯ ಒತ್ತಡಕ್ಕೆ ಮಣಿದು ಪೊಲೀಸರು ಯಾವುದೇ ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯತನ ವಹಿಸಿದ್ದಾರೆಂದು ಹಿಂದೂ ಜಾಗರಣ ವೇದಿಕೆ ಮುಖಂಡ, ಸಾಮಾಜಿಕ ಕಾರ್ಯಕರ್ತ ದೇವರಾಜ್ ಅರಳಿಹಳ್ಳಿ ಆರೋಪಿಸಿದ್ದಾರೆ. 
    ಯಾವುದೇ ಪರವಾನಗಿ ಇಲ್ಲದೆ, ರೈತರಲ್ಲದವರು ಹಬ್ಬದ ಹಿಂದಿನ ದಿನ ಹತ್ಯೆ ಮಾಡಲು ತಂದಿರುವ ಗೋವುಗಳನ್ನು ರಕ್ಷಿಸುವಂತೆ ಸಾಕ್ಷಿ ಸಮೇತ ದಾವಣಗೆರೆ ಪೂರ್ವ ವಲಯ ಪೊಲೀಸ್ ಮಹಾನಿರ್ದೇಶಕರಿಗೆ, ಜಿಲ್ಲಾ ರಕ್ಷಣಾಧಿಕಾರಿಗಳಿಗೆ ಹಾಗು ನಗರದ ಪೊಲೀಸ್ ಉಪಾಧೀಕ್ಷಕರಿಗೆ ಮೊಬೈಲ್ ವಾಟ್ಸಫ್ ಮೂಲಕ ಮಾಹಿತಿ ನೀಡಲಾಗಿದೆ. ಆದರೆ ಪೊಲೀಸರು ರಾಜಕೀಯ ಒತ್ತಡಕ್ಕೆ ಮಣಿದು ಯಾವುದೇ ಕ್ರಮ ಕೈಗೊಂಡಿಲ್ಲ. ಪ್ರತಿ ವರ್ಷ ಬಕ್ರೀದ್ ಹಬ್ಬದಂದು ಗೋವುಗಳ ಹತ್ಯೆ ನಿರಂತರವಾಗಿ ನಡೆಯುತ್ತಿದ್ದು, ಈ ಸಂಬಂಧ ಮುಂದಿನ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.
    ಕಾಗೇಹಳ್ಳದಲ್ಲಿ ತ್ಯಾಜ್ಯ ಪತ್ತೆ : 
    ಗೋವುಗಳನ್ನು ಹತ್ಯೆ ಮಾಡಿ ಅವುಗಳ ತ್ಯಾಜ್ಯ ಕಾಗೇಹಳ್ಳ ಭದ್ರಾ ನದಿ ಸೇತುವೆಗೆ ಎಸೆಯುತ್ತಿದ್ದು, ಈ ಬಾರಿ ಸಹ ತ್ಯಾಜ್ಯ ಪತ್ತೆಯಾಗಿದೆ. ಗೋವಿನ ತ್ಯಾಜ್ಯ ನದಿಗೆ ತಂದು ಎಸೆಯುವುದರಿಂದ ಪರಿಸರ ಹಾಳಾಗುತ್ತಿದೆ. ಅಲ್ಲದೆ ಭದ್ರಾ ನದಿ ನೀರು ಕಲುಷಿತಗೊಳ್ಳುತ್ತಿದ್ದು, ಈ ಹಿನ್ನಲೆಯಲ್ಲಿ ಗೋವಿನ ತ್ಯಾಜ್ಯ ನದಿಗೆ ಎಸೆಯದಂತೆ ಕ್ರಮ ಗೊಳ್ಳಬೇಕೆಂದು ದೇವರಾಜ್ ಆಗ್ರಹಿಸಿದ್ದಾರೆ.