ಬುಧವಾರ, ಜುಲೈ 16, 2025

ಭದ್ರಾ ನದಿ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ತಡೆಗೋಡೆ ನಿರ್ಮಾಣಕ್ಕೆ ೫೦ ಕೋ. ರು. ಅನುದಾನ

ಜಲಸಂಪನ್ಮೂಲ ಇಲಾಖೆಯಿಂದ ಆಡಳಿತಾತ್ಮಕ ಅನುಮೋದನೆ 

ಭದ್ರಾವತಿ ನಗರದ ಹೃದಯ ಭಾಗದಲ್ಲಿ ಹರಿಯುತ್ತಿರುವ ಭದ್ರಾ ನದಿ
    ಭದ್ರಾವತಿ: ನಗರದ ಹೃದಯ ಭಾಗದಲ್ಲಿ ಹರಿಯುತ್ತಿರುವ ಭದ್ರಾ ನದಿಯ ಎಡ ಮತ್ತು ಬಲ ದಂಡೆಗಳಲ್ಲಿ ಪ್ರವಾಹ ಪೀಡಿತ ಪ್ರದೇಶಗಳನ್ನು ರಕ್ಷಿಸಲು ತಡೆಗೋಡೆ ನಿರ್ಮಿಸಲು ೫೦ ಕೋ. ರು. ಅನುದಾನ ಬಿಡುಗಡೆಗೊಳಿಸಲಾಗಿದ್ದು, ಈ ಸಂಬಂಧ ಜಲಸಂಪನ್ಮೂಲ ಇಲಾಖೆ ವಿಶೇಷ ಕರ್ತವ್ಯಾಧಿಕಾರಿ ಕೆ. ಶುಭಾ ಆಡಳಿತಾತ್ಮಕ ಅನುಮೋದನೆ ನೀಡಿ ಆದೇಶ ಹೊರಡಿಸಿದ್ದಾರೆ. 
ಜು.೨ರ ಸಚಿವ ಸಂಪುಟ ಸಭೆಯ ನಿರ್ಣಯದಂತೆ ೫೦ ಕೋ.ರು. ಅಂದಾಜು ಮೊತ್ತದಲ್ಲಿ (೨೦೨೩-೨೪ನೇ ಸಾಲಿನ ಏಕರೂಪ ದರಪಟ್ಟಿಯನ್ವಯ) ತಡೆಗೋಡೆ ಕಾಮಗಾರಿ ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ.
    ನಗರದ ಹೃದಯ ಭಾಗದಲ್ಲಿ ಭದ್ರಾ ನದಿ ೩ ಕಿ.ಮೀ ಹರಿಯುತ್ತಿದ್ದು, ಭದ್ರಾ ಜಲಾಶಯದಿಂದ ಹೆಚ್ಚುವರಿ ನೀರನ್ನು ನದಿಗೆ ಬಿಟ್ಟಾಗ ಹಲವಾರು ವರ್ಷಗಳಿಂದ ನದಿಯ ಎಡ ಮತ್ತು ಬಲ ಭಾಗದಲ್ಲಿರುವ ಅಂಬೇಡ್ಕರ್ ಕಾಲೋನಿ, ಗೌಳಿಗರ ಬೀದಿ, ಚಾಮೇಗೌಡ ಏರಿಯಾ, ಗುಂಡೂರಾವ್ ಶೆಡ್ ಮತ್ತು ಯಕಿನ್ಸಾ ಕಾಲೋನಿಗಳಲ್ಲಿ ವಾಸಿಸುತ್ತಿರುವ ಮನೆಗಳಿಗೆ ನೀರು ನುಗ್ಗಿ ಮನೆಗಳಿಗೆ ಹಾನಿ ಉಂಟಾಗುತ್ತಿದೆ. ಈ ಹಿನ್ನಲೆಯಲ್ಲಿ ನದಿಯ ಎರಡು ಬದಿಯಲ್ಲಿ ತಡೆಗೋಡೆ ನಿರ್ಮಿಸುವಂತೆ ಬಹಳ ವರ್ಷಗಳಿಂದ ಸರ್ಕಾರಕ್ಕೆ ಒತ್ತಾಯಿಸಲಾಗುತ್ತಿದೆ. ಕರ್ನಾಟಕ ರಾಜ್ಯ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶಾಸಕ ಬಿ.ಕೆ ಸಂಗಮೇಶ್ವರ್‌ರವರ ನಿರಂತರ ಪ್ರಯತ್ನದ ಫಲವಾಗಿ ಇದೀಗ ಬೇಡಿಕೆ ಈಡೇರಿದ್ದು, ಮಳೆಗಾಲ ಮುಕ್ತಾಯಗೊಂಡ ನಂತರ ಕಾಮಗಾರಿ ಆರಂಭಗೊಳ್ಳುವ ನಿರೀಕ್ಷೆ ಇದೆ. 
    ಗೌಳಿಗರ ಬೀದಿಯಲ್ಲಿ ೪೦೦ ಮೀ., ಚಾಮೇಗೌಡ ಏರಿಯಾದಲ್ಲಿ ೪೦೦ ಮೀ., ಯಕಿನ್ಸಾ ಕಾಲೋನಿಯಲ್ಲಿ ೧೨೫ ಮೀ. ಮತ್ತು ಗುಂಡೂರಾವ್ ಶೆಡ್‌ನಲ್ಲಿ ೧೯೦ ಮೀ. ಸೇರಿದಂತೆ ಒಟ್ಟು ೧೧೧೫ ಮೀ. ತಡೆಗೋಡೆ ನಿರ್ಮಿಸಲಾಗುತ್ತಿದೆ.  

ಹಳೇನಗರ ಪೊಲೀಸರಿಂದ ೧ ಕೆ.ಜಿ ೧೪೦ ಗ್ರಾಂ ಗಾಂಜಾ ವಶ

ಭದ್ರಾವತಿ ಹೊಳೆಹೊನ್ನೂರು ರಸ್ತೆ ಸೀಗೇಬಾಗಿ ಕ್ರಾಸ್ ಬಸ್ ನಿಲ್ದಾಣದ ಸಮೀಪ ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರನ್ನು ಬಂಧಿಸಿ ೧ ಕೆ.ಜಿ ೧೪೦ ಗ್ರಾಂ. ತೂಕದ ಗಾಂಜಾ ವಶಪಡಿಸಿಕೊಂಡು ಪ್ರಕರಣ ದಾಖಲಿಸಿಕೊಳ್ಳುವಲ್ಲಿ ಹಳೇನಗರ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ. 
    ಭದ್ರಾವತಿ : ಬಸ್ ನಿಲ್ದಾಣದ ಸಮೀಪ ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರನ್ನು ಬಂಧಿಸಿ ೧ ಕೆ.ಜಿ ೧೪೦ ಗ್ರಾಂ. ತೂಕದ ಗಾಂಜಾ ವಶಪಡಿಸಿಕೊಂಡು ಪ್ರಕರಣ ದಾಖಲಿಸಿಕೊಳ್ಳುವಲ್ಲಿ ಹಳೇನಗರ ಠಾಣೆ ಪೊಲೀಸರು ಯಶಸ್ವಿಯಾಗಿರುವ ಘಟನೆ ನಡೆದಿದೆ. 
    ಹೊಳೆಹೊನ್ನೂರು ರಸ್ತೆ ಸೀಗೇಬಾಗಿ ಕ್ರಾಸ್ ಬಸ್ ನಿಲ್ದಾಣದ ಬಳಿ ಇಬ್ಬರು ಅಪರಿಚಿತ ವ್ಯಕ್ತಿಗಳು ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದಾರೆಂಬ ಖಚಿತ ಮಾಹಿತಿ ಮೇರೆಗೆ ಠಾಣಾ ಉಪ ನಿರೀಕ್ಷಕ ಸುನೀಲ್ ಬಿ ತೇಲಿಯವರ ನೇತೃತ್ವದಲ್ಲಿ ಜು.೧೨ರಂದು ಮಧ್ಯಾಹ್ನ ದಾಳಿ ನಡೆಸಲಾಗಿದ್ದು, ಅಕ್ರಮವಾಗಿ ಗಾಂಜಾ ಮಾರಾಟದಲ್ಲಿ ತೊಡಗಿದ್ದ ನಾಗರಾಜ್ ಮತ್ತು ಕಾರ್ತಿಕ್‌ರನ್ನು ಬಂಧಿಸಿ ಇವರಿಂದ ಸುಮಾರು ೨೦ ಸಾವಿರ ರು. ಮೌಲ್ಯದ ೧ ಕೆ.ಜಿ ೧೪೦ ಗ್ರಾಂ. ತೂಕದ ಗಾಂಜಾ ಮತ್ತು ಗಾಂಜಾ ಮಾರಾಟದಿಂದ ಬಂದ ರು.೧,೫೦೦ ನಗದು ಹಾಗು ಸುಮಾರು ೬೦ ಸಾವಿರ ರು. ಮೌಲ್ಯದ ದ್ವಿಚಕ್ರ ವಾಹನ ವಶಪಡಿಸಿಕೊಂಡು ಪ್ರಕರಣ ದಾಖಲಿಸಿಕೊಳ್ಳಲಾಗಿದೆ. 
    ಕಾರ್ಯಾಚರಣೆಯಲ್ಲಿ ನಗರಸಭೆ ಸಿಬ್ಬಂದಿಗಳಾದ ಆಶಾಲತಾ, ರವಿ, ಜಿಲ್ಲಾ ಸಹಾಯಕ ಡ್ರಗ್ ಕಂಟ್ರೋಲರ್ ಡಾ. ವೀರೇಶ್ ಬಾಬು,  ಪೊಲೀಸ್ ಸಿಬ್ಬಂದಿಗಳಾದ ಹಾಲಪ್ಪ, ಚಿನ್ನನಾಯ್ಕ, ಚಿಕ್ಕಪ್ಪ, ಮೌನೇಶ, ಪ್ರಪ್ಪೂಲ್, ರಾಘವೇಂದ್ರ, ಚಂದ್ರು, ವೀರನಗೌಡ, ಮಂಜುನಾಥ ಮತ್ತು ಶಬ್ಬಿರ್ ಪಾಲ್ಗೊಂಡ್ಡಿದ್ದರು. 

ಧರ್ಮಸ್ಥಳ ವ್ಯಾಪ್ತಿಯಲ್ಲಿ ಕಳೆದ ೨೦-೨೫ ವರ್ಷಗಳಿಂದ ಕಾಣೆಯಾದ ಮಹಿಳೆಯರ ಮಾಹಿತಿ ನೀಡಿ : ಎಸ್. ಮಂಜುನಾಥ್

ಎಸ್. ಮಂಜುನಾಥ್   
    ಭದ್ರಾವತಿ : ನಗರದ ಜನ್ನಾಪುರ ನಿವಾಸಿ, ಕೆಪಿಸಿಸಿ ರಾಜ್ಯ ಸಂಚಾಲಕ ಎಸ್. ಮಂಜುನಾಥ್‌ರವರು ಧರ್ಮಸ್ಥಳ ವ್ಯಾಪ್ತಿಯಲ್ಲಿ ಕಳೆದ ೨೦-೨೫ ವರ್ಷಗಳಿಂದ ಕಾಣೆಯಾಗಿರುವ ಒಟ್ಟು ಮಹಿಳೆಯರು ಹಾಗು ಪರಿಶಿಷ್ಟ ಜಾತಿಗೆ ಸೇರಿದ ಮಹಿಳೆಯರ ಅಂಕಿ-ಅಂಶ ಮಾಹಿತಿ ನೀಡುವಂತೆ ದಕ್ಷಿಣ ಕನ್ನಡ ಜಿಲ್ಲಾ ರಕ್ಷಣಾಧಿಕಾರಿಗಳಿಗೆ ಮನವಿ ಮಾಡಿದ್ದಾರೆ. 
    ಧರ್ಮಸ್ಥಳ ಭಾಗದಲ್ಲಿ ನೂರಾರು ಶವಗಳನ್ನು ಹೂತಿರುವುದಾಗಿ ವ್ಯಕ್ತಿಯೊಬ್ಬರು ನ್ಯಾಯಾಲಯದಲ್ಲಿ ಹೇಳಿಕೆಯನ್ನು ದಾಖಲಿಸಿರುತ್ತಾರೆ. ಅಲ್ಲದೆ ಜು.೧೨ರಂದು ಮನುಷ್ಯರೊಬ್ಬರ ತಲೆ ಬುರುಡೆ ಕೊರಕಿದ ಬಗ್ಗೆ ಹಾಗು ನಾಪತ್ತೆಯಾಗಿರುವ ವೈದ್ಯಕೀಯ ವಿದ್ಯಾರ್ಥಿನಿಯೊಬ್ಬರ ಕುಟುಂಬದವರ ಹೇಳಿಕೆ ಮಾಧ್ಯಮಗಳಲ್ಲಿ ಪ್ರಸಾರವಾಗಿರುವುದು ಗಮನಕ್ಕೆ ಬಂದಿರುತ್ತದೆ.
    ಈ ಹಿನ್ನಲೆಯಲ್ಲಿ ಕಳೆದ ೨೦-೨೫ ವರ್ಷಗಳಿಂದ ಈ ವ್ಯಾಪ್ತಿಯಲ್ಲಿ ಕಾಣೆಯಾಗಿರುವ ಒಟ್ಟು ಮಹಿಳೆಯರ ಹಾಗು ಪರಿಶಿಷ್ಟ ಜಾತಿಗೆ ಸೇರಿದ ಮಹಿಳೆಯರು ಮತ್ತು ವಿದ್ಯಾರ್ಥಿನಿಯರ ಅಂಕಿ-ಅಂಶಗಳು  ಹಾಗು ಕೈಗೊಂಡ ಕ್ರಮಗಳು, ಪತ್ತೆ ಮಾಡಲಾದ ಮತ್ತು ಪತ್ತೆ ಮಾಡಲಾಗದ ಹಾಗು ಅತ್ಯಾಚಾರ ಪ್ರಕರಣಗಳ ಮಾಹಿತಿ ನೀಡುವಂತೆ ಎಸ್. ಮಂಜುನಾಥ್ ಕೋರಿದ್ದಾರೆ.

ಮಂಗಳವಾರ, ಜುಲೈ 15, 2025

ಶ್ರೀ ರಾಘವೇಂದ್ರ ಸ್ವಾಮಿ ಮಠದಲ್ಲಿ ಜಯತೀರ್ಥರ ಆರಾಧನೆ

ಶ್ರೀ ಜಯತೀರ್ಥರ ಆರಾಧನೆ ಮೊಹೋತ್ಸವದ ಅಂಗವಾಗಿ ಮಂಗಳವಾರ ಭದ್ರಾವತಿ ಹಳೇನಗರದ ಶ್ರೀ ರಾಘವೇಂದ್ರಸ್ವಾಮಿಗಳವರ ಮಠದಲ್ಲಿ ಆರಾಧನೆ ಮೊಹೋತ್ಸವ ವಿಜೃಂಭಣೆಯಿಂದ ನಡೆಯಿತು.
    ಭದ್ರಾವತಿ : ಶ್ರೀ ಜಯತೀರ್ಥರ ಆರಾಧನೆ ಮೊಹೋತ್ಸವದ ಅಂಗವಾಗಿ ಮಂಗಳವಾರ ಹಳೇನಗರದ ಶ್ರೀ ರಾಘವೇಂದ್ರಸ್ವಾಮಿಗಳವರ ಮಠದಲ್ಲಿ ಆರಾಧನೆ ಮೊಹೋತ್ಸವ ವಿಜೃಂಭಣೆಯಿಂದ ನಡೆಯಿತು.
    ಬೆಳಗ್ಗೆ ಪಂಚಾಮೃತ ಅಭಿಷೇಕ, ಮೃತ್ಯುಕ ಗುರುರಾಜ ಅವರಿಂದ ಉಪನ್ಯಾಸ, ನಂತರ ಮಠದ ಪ್ರಕಾರದಲ್ಲಿಯೇ ರಥೋತ್ಸವ ಜರಗಿತು. ಮಧ್ಯಾಹ್ನ ಮಹಾಮಂಗಳಾರತಿ, ತೀರ್ಥಪ್ರಸಾದ ವಿನಿಯೋಗ ಮತ್ತು ಬ್ರಾಹ್ಮಣರ ಪಾದ ತೊಳೆಯುವ ಕಾರ್ಯಕ್ರಮ ಹಾಗು ವಿವಿಧ ಭಜನಾ ಮಂಡಳಿಗಳಿಂದ ಜಯತೀರ್ಥರ ಸಂಕೀರ್ತನೆ ನಡೆಯಿತು. ಶ್ರೀ ಕೃಷ್ಣ ಚಂಡಿ ಬಳಗದಿಂದ ಚಂಡೆ ಉತ್ಸವ ವಿಜೃಂಭಣೆಯಿಂದ ಜರಗಿತು
    ವೇದಬ್ರಹ್ಮ ಶ್ರೀ ಗೋಪಾಲಕೃಷ್ಣ ಆಚಾರ್, ಸತ್ಯನಾರಾಯಣಚಾರ್, ಸಮೀರಾಚಾರ್ ಹಾಗೂ ಗುರುರಾಜ ಸೇವಾ ಸಮಿತಿ ಅಧ್ಯಕ್ಷ ಮುರಳಿಧರ ತಂತ್ರಿ, ಉಪಾಧ್ಯಕ್ಷ ಸುಮಾರ ರಾಘವೇಂದ್ರ, ಪ್ರಧಾನ ಕಾರ್ಯದರ್ಶಿ ರಮಾಕಾಂತ, ಖಜಾಂಚಿ ನಿರಂಜನಾಚಾರ್ಯ ಮತ್ತು ಶುಭ ಗುರುರಾಜ್ ವಿದ್ಯಾನಂದ ನಾಯಕ, ಮಾಧುರಾವ್, ಗೋಪಾಲಕೃಷ್ಣ, ಸುಪ್ರೀತ ತಂತ್ರಿ ಸೇರಿದಂತೆ ಭಕ್ತ ವೃಂದದವರು ಪಾಲ್ಗೊಂಡಿದ್ದರು.

ಟೀಚರ್ ಎಲಿಸಬೆತ್ ಸಿಗಾಮಣಿ ನಿಧನ

ಎಲಿಸಬೆತ್ ಸಿಗಾಮಣಿ 
    ಭದ್ರಾವತಿ : ನಗರದ ಹೊಸಮನೆ ನಿವಾಸಿ ಸೈಂಟ್ ಚಾರ್ಲ್ಸ್ ಕನ್ನಡ ಶಾಲೆಯ ನಿವೃತ್ತ ಶಿಕ್ಷಕಿ ಎಲಿಸಬೆತ್ ಸಿಗಾಮಣಿ(೭೪)  ಸೋಮವಾರ ರಾತ್ರಿ ನಿಧನ ಹೊಂದಿದರು. 
    ಇವರಿಗೆ ಪತಿ, ಪುತ್ರ, ಪುತ್ರಿ ಮತ್ತು ಮೊಮ್ಮಕ್ಕಳು ಇದ್ದಾರೆ. ನ್ಯೂಟೌನ್ ಬೈಪಾಸ್ ರಸ್ತೆಯಲ್ಲಿರುವ ಕ್ರೈಸ್ತ ಸಮಾಧಿಯಲ್ಲಿ ಮಂಗಳವಾರ ಅಂತ್ಯಸಂಸ್ಕಾರ ನೆರವೇರಿತು. ಸಿಗಾಮಣಿಯವರು ಸುಮಾರು ೪೦ ವರ್ಷ ಸೈಂಟ್ ಚಾರ್ಲ್ಸ್ ಕನ್ನಡ ಶಾಲೆಯಲ್ಲಿ ಶಿಕ್ಷಕಿಯಾಗಿ ಸೇವೆ ಸಲ್ಲಿಸಿದ್ದರು. ಎಲಿಸಬೆತ್ ಟೀಚರ್ ಎಂದೆ ಖ್ಯಾತಿ ಪಡೆದಿದ್ದರು. ಅವರ ಬಳಿ  ಶಿಕ್ಷಣ ಪಡೆದ ನೂರಾರು ವಿದ್ಯಾರ್ಥಿಗಳು ವಿಷಯ ತಿಳಿದು ದೂರದ ಊರುಗಳಿಂದ ಬಂದು ಅಂತ್ಯಸಂಸ್ಕಾರದಲ್ಲಿ ಪಾಲ್ಗೊಂಡರು.

ಪರಿಶಿಷ್ಟ ಜಾತಿ, ಪಂಗಡಕ್ಕೆ ಸೇರಿದ ನಿವಾಸಿಗಳಿಗೆ ಮೂಲ ಸೌಕರ್ಯಗಳ ನಿರಾಕರಣೆ

ಕಂಬದಾಳು ಹೊಸೂರು ಗ್ರಾಮ ಪಂಚಾಯಿತಿ ಸೂಪರ್ ಸೀಡ್‌ಗೆ ಡಿಎಸ್‌ಎಸ್ ಆಗ್ರಹ 

ಭದ್ರಾವತಿ ತಾಲೂಕಿನ ಕಂಬದಾಳು ಹೊಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹುಣಸೇಕಟ್ಟೆ ಗ್ರಾಮದ ಗ್ರಾಮಠಾಣಾ ಜಾಗದಲ್ಲಿ ವಾಸಿಸುತ್ತಿರುವ ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಸೇರಿದ ನಿವಾಸಿಗಳಿಗೆ ಮೂಲ ಸೌಕರ್ಯಗಳನ್ನು ಕಲ್ಪಿಸಿಕೊಡದೆ ಒಕ್ಕಲೆಬ್ಬಿಸಲು ಪ್ರಯತ್ನಿಸುತ್ತಿರುವುದು ಖಂಡನೀಯ. ತಕ್ಷಣ ಗ್ರಾಮ ಪಂಚಾಯಿತಿ ಆಡಳಿತ ಸೂಪರ್ ಸೀಡ್ ಮಾಡುವ ಮೂಲಕ ಕ್ರಿಮಿನಲ್ ಪ್ರಕರಣ ದಾಖಲಿಸಿಕೊಳ್ಳಬೇಕೆಂದು ಡಿಎಸ್‌ಎಸ್ ಮುಖಂಡರು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಆಗ್ರಹಿಸಿದ್ದಾರೆ. 
    ಭದ್ರಾವತಿ : ತಾಲೂಕಿನ ಕಂಬದಾಳು ಹೊಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹುಣಸೇಕಟ್ಟೆ ಗ್ರಾಮದ ಗ್ರಾಮಠಾಣಾ ಜಾಗದಲ್ಲಿ ವಾಸಿಸುತ್ತಿರುವ ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಸೇರಿದ ನಿವಾಸಿಗಳಿಗೆ ಮೂಲ ಸೌಕರ್ಯಗಳನ್ನು ಕಲ್ಪಿಸಿಕೊಡದೆ ಒಕ್ಕಲೆಬ್ಬಿಸಲು ಪ್ರಯತ್ನಿಸುತ್ತಿರುವುದು ಖಂಡನೀಯ. ತಕ್ಷಣ ಗ್ರಾಮ ಪಂಚಾಯಿತಿ ಆಡಳಿತ ಸೂಪರ್ ಸೀಡ್ ಮಾಡುವ ಮೂಲಕ ಕ್ರಿಮಿನಲ್ ಪ್ರಕರಣ ದಾಖಲಿಸಿಕೊಳ್ಳಬೇಕೆಂದು ಡಿಎಸ್‌ಎಸ್ ಮುಖಂಡರು ಆಗ್ರಹಿಸಿದ್ದಾರೆ. 
 ಈ ಕುರಿತು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕರ್ನಾಟಕ ದಲಿತ ಸಂಘರ್ಷ ಸಮಿತಿ ರಾಜ್ಯ ಖಜಾಂಚಿ ಸತ್ಯ  ಭದ್ರಾವತಿ ಹಾಗೂ ಜಿಲ್ಲಾ ಸಂಚಾಲಕ ಚಿನ್ನಯ್ಯರವರು, ಹುಣಸೆಕಟ್ಟೆ ಗ್ರಾಮದ ಗ್ರಾಮಠಾಣಾ ಜಾಗದಲ್ಲಿ ೨೦೧೧ರಿಂದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಸೇರಿದಂತೆ ವಿವಿಧ ಜಾತಿ ಸಮುದಾಯಗಳ ಸುಮಾರು ೩೦ಕ್ಕೂ ಹೆಚ್ಚು ಕುಟುಂಬಗಳು ವಾಸಿಸುತ್ತಿದ್ದು, ಮೂಲ ಸೌಕರ್ಯಗಳಾದ ವಿದ್ಯುತ್ ದೀಪ ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಿ ಕೊಡುವಂತೆ ಕಂಬದಾಳು ಹೊಸೂರು ಗ್ರಾಮ ಪಂಚಾಯಿತಿ, ತಾಲೂಕು ಆಡಳಿತ, ಜಿಲ್ಲಾಡಳಿತ ಹಾಗೂ ಸಂಬಂಧ ಪಟ್ಟ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಸಲ್ಲಿಸಿದ್ದರು. ಆದರೆ ಯಾವುದೇ ಪ್ರಯೋಜನವಾಗಿರಲಿಲ್ಲ. ನಮ್ಮ ಹೋರಾಟದ ಫಲವಾಗಿ ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದರು ಎಂದರು.  
    ಭಾರತರತ್ನ ಡಾ. ಬಿ.ಆರ್ ಅಂಬೇಡ್ಕರ್ ಅವರು ರಚಿಸಿರುವ ಸಂವಿಧಾನದಲ್ಲಿ ಹೇಳಿರುವಂತೆ "ದೇಶದ ಕಟ್ಟ ಕಡೆಯ ವ್ಯಕ್ತಿಗೂ ಸಹ ಜೀವಿಸಲು ಅತ್ಯವಶ್ಯಕವಾದ ಕುಡಿಯುವ ನೀರು ಹಾಗೂ ಬೆಳಕು ಅಂದರೆ ವಿದ್ಯುತ್ ದೀಪದ ವ್ಯವಸ್ಥೆ  ಕಲ್ಪಿಸಬೇಕಾಗಿರುವುದು ಆಡಳಿತ ವ್ಯವಸ್ಥೆಯಲ್ಲಿರುವ ನಮ್ಮ ಜವಾಬ್ದಾರಿ" ಎಂಬುದನ್ನು ಅರಿತಿರುವ ಜಿಲ್ಲಾಧಿಕಾರಿಗಳು ತಕ್ಷಣ ನಿವಾಸಿಗಳಿಗೆ ಅಗತ್ಯ ಕುಡಿಯುವ ನೀರಿನ ವ್ಯವಸ್ಥೆ ಹಾಗೂ ವಿದ್ಯುತ್ ದೀಪದ ವ್ಯವಸ್ಥೆ ಕಲ್ಪಿಸಬೇಕೆಂದು ಅಧಿಕಾರಿಗಳಿಗೆ ಕಟ್ಟುನಿಟ್ಟಾಗಿ ಆದೇಶಿಸಿದರು. ಇದರ ಫಲವಾಗಿ ಜಲಜೀವನ್ ಮಿಷನ್ ಯೋಜನೆಯಡಿ ಕುಡಿಯಲು ಬೀದಿ ನಲ್ಲಿ ನೀರಿನ ವ್ಯವಸ್ಥೆ ಹಾಗೂ ಬೀದಿ ದೀಪಗಳ ವ್ಯವಸ್ಥೆ ಕಲ್ಪಿಸಲಾಗಿದೆ ಎಂದರು. 
    ಆದರೆ ಸಂವಿಧಾನದ ಆಶಯದಂತೆ ಜನರು ಬದುಕಲು ಅತ್ಯಂತ ಅವಶ್ಯಕವಾಗಿರುವ ಕುಡಿಯುವ ನೀರು ಹಾಗೂ ವಿದ್ಯುತ್ ದೀಪದ ವ್ಯವಸ್ಥೆ ಕಲ್ಪಿಸಲು ನಿರಾಕರಿಸಿರುವ ಕಂಬದಾಳ್ ಹೊಸೂರು ಗ್ರಾಮ ಪಂಚಾಯಿತಿಯ ಅಧ್ಯಕ್ಷರು ಮತ್ತು ಸದಸ್ಯರ ಸದಸ್ಯತ್ವ ರದ್ದುಪಡಿಸಿ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು ಹಾಗೂ ಗ್ರಾಮ ಪಂಚಾಯಿತಿ ಆಡಳಿತ ಸೂಪರ್ ಸೀಡ್ ಮಾಡಬೇಕೆಂದು ಆಗ್ರಹಿಸಿದರು. 
ಪತ್ರಿಕಾಗೋಷ್ಠಿಯಲ್ಲಿ ದಲಿತ ಸಂಘರ್ಷ ಸಮಿತಿ ಪ್ರಮುಖರಾದ ಸಿ. ಜಯಪ್ಪ, ರಂಗನಾಥ್, ಕಾಣಿಕ್‌ರಾಜ್, ಜಿಂಕ್‌ಲೈನ್ ಮಣಿ, ಪರಮೇಶ್ವರಪ್ಪ, ಸಂದೀಪ್, ನರಸಿಂಹ, ಮಂಜು, ಸುರೇಶ್, ಶಾಂತ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು. 

ಗಣೇಶ್‌ಗೆ ಸರ್ಕಾರಿ ನೌಕರರಿಂದ ಅಭಿನಂದನೆ

ಕರ್ನಾಟಕ ಸರ್ಕಾರದ ೫ ಗ್ಯಾರೆಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಭದ್ರಾವತಿ ತಾಲೂಕು ಅಧ್ಯಕ್ಷರಾಗಿ ನೂತನವಾಗಿ ನೇಮಕಗೊಂಡಿರುವ ಬಿ.ಎಸ್ ಗಣೇಶ್‌ರವರನ್ನು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಮತ್ತು ವಿಶ್ವೇಶ್ವರಾಯ ವಿದ್ಯಾಸಂಸ್ಥೆ ವತಿಯಿಂದ ಸನ್ಮಾನಿಸಿ ಅಭಿನಂದಿಸಲಾಯಿತು. 
    ಭದ್ರಾವತಿ: ಕರ್ನಾಟಕ ಸರ್ಕಾರದ ೫ ಗ್ಯಾರೆಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ತಾಲೂಕು ಅಧ್ಯಕ್ಷರಾಗಿ ನೂತನವಾಗಿ ನೇಮಕಗೊಂಡಿರುವ ಬಿ.ಎಸ್ ಗಣೇಶ್‌ರವರನ್ನು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಮತ್ತು ವಿಶ್ವೇಶ್ವರಾಯ ವಿದ್ಯಾಸಂಸ್ಥೆ ವತಿಯಿಂದ ಸನ್ಮಾನಿಸಿ ಅಭಿನಂದಿಸಲಾಯಿತು. 
    ಸಂಘದ ಅಧ್ಯಕ್ಷ ಬಿ. ಸಿದ್ದಬಸಪ್ಪರವರ ನೇತೃತ್ವದಲ್ಲಿ ಗಣೇಶ್‌ರವರನ್ನು ಸನ್ಮಾನಿಸಿ ಅಭಿನಂದಿಸಲಾಯಿತು. ಸಂಘದ ಕಾರ್ಯಾಧ್ಯಕ್ಷ ವೆಂಕಟೇಶ್, ಪ್ರಧಾನ ಕಾರ್ಯದರ್ಶಿ ಎಸ್.ಕೆ ಮೋಹನ್, ಖಚಾಂಚಿ ಪ್ರಶಾಂತ್, ಪ್ರಮುಖರಾದ ಟಿ. ಪೃಥ್ವಿರಾಜ್ ರಂಗನಾಥ್, ರಾಜಕುಮಾರ್, ರಮೇಶ್, ಪ್ರಕಾಶ್, ವಿಶ್ವೇಶ್ವರಾಯ ವಿದ್ಯಾಸಂಸ್ಥೆ ಆಡಳಿತಾಧಿಕಾರಿ ಡಾ. ಎಸ್.ಪಿ ರಾಕೇಶ್, ದೈಹಿಕ ಶಿಕ್ಷಣ ನಿರ್ದೇಶಕ ಶಿವಲಿಂಗೇಗೌಡ. ಮತ್ತು ಶ್ರೀಧರ್ ಗೌಡ, ರಾಜನಾಯ್ಕ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.