ಕಾರ್ಮಿಕ ಇಲಾಖೆ ವತಿಯಿಂದ ಭದ್ರಾವತಿ ನಗರದ ಉಜ್ಜನಿಪುರ, ಬೈಪಾಸ್ ರಸ್ತೆ, ಶ್ರೀ ವೀರಾಂಜನೇಯ ಸ್ವಾಮಿ ದೇವಸ್ಥಾನದ ಸಮೀಪ ನೂತನವಾಗಿ ನಿರ್ಮಾಣಗೊಂಡಿರುವ ಕಾರ್ಮಿಕ ಸಮುದಾಯ ಭವನ ಸೋಮವಾರ ಕಾರ್ಮಿಕ ಸಚಿವ ಸಂತೋಷ್ ಎಸ್ ಲಾಡ್ ಲೋಕಾರ್ಪಣೆಗೊಳಿಸಿದರು.
ಭದ್ರಾವತಿ : ಕಾರ್ಮಿಕ ಇಲಾಖೆ ವತಿಯಿಂದ ನಗರದ ಉಜ್ಜನಿಪುರ, ಬೈಪಾಸ್ ರಸ್ತೆ, ಶ್ರೀ ವೀರಾಂಜನೇಯ ಸ್ವಾಮಿ ದೇವಸ್ಥಾನದ ಸಮೀಪ ನೂತನವಾಗಿ ನಿರ್ಮಾಣಗೊಂಡಿರುವ ಕಾರ್ಮಿಕ ಸಮುದಾಯ ಭವನ ಸೋಮವಾರ ಕಾರ್ಮಿಕ ಸಚಿವ ಸಂತೋಷ್ ಎಸ್ ಲಾಡ್ ಲೋಕಾರ್ಪಣೆಗೊಳಿಸಿದರು.
ಕರ್ನಾಟಕ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶಾಸಕ ಬಿ.ಕೆ ಸಂಗಮೇಶ್ವರ್ ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದರು.
ಕರ್ನಾಟಕ ರಾಜ್ಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗ ಅಲೆಮಾರಿಗಳ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಜಿ. ಪಲ್ಲವಿ, ಕರ್ನಾಟಕ ಭೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಸ್. ರವಿಕುಮಾರ್, ನಗರಸಭೆ ಅಧ್ಯಕ್ಷೆ ಜೆ.ಸಿ ಗೀತಾ ರಾಜ್‌ಕುಮಾರ್, ಕಾರ್ಮಿಕ ಇಲಾಖೆ ಆಯುಕ್ತ ಡಾ. ಎಚ್.ಎನ್ ಗೋಪಾಲಕೃಷ್ಣ, ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಿ. ಭಾರತಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎನ್. ಹೇಮಂತ, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಬಿ.ಕೆ ಶಿವಕುಮಾರ್, ಕಾರ್ಮಿಕ ನಿರೀಕ್ಷಕರಾದ ಬಿ.ಎಂ ರಕ್ಷಿತ್ ಮತ್ತು ಜೆ.ವಿ ಸುಪ್ರಿತ ಸೇರಿದಂತೆ ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳು, ಜಿಲ್ಲಾ ಕಾರ್ಮಿಕ ಇಲಾಖೆಯ ಅಧಿಕಾರಿಗಳು, ವಿವಿಧ ಕಾರ್ಮಿಕ ಸಂಘಟನೆಗಳ ಅಧ್ಯಕ್ಷರು, ಪದಾಧಿಕಾರಿಗಳು, ಕಾರ್ಮಿಕ ಮುಖಂಡರು ಉಪಸ್ಥಿತರಿದ್ದರು.
೯.೫ ಕೋ.ರು ವೆಚ್ಚದ ಸುಸ್ಸಜಿತ ಕಾರ್ಮಿಕ ಸಮುದಾಯ ಭವನ :
ಕಸಬಾ ಹೋಬಳಿ, ಉಜ್ಜಯಿನಿಪುರ ಗ್ರಾಮದ ಸರ್ವೇ ನಂ. ೨೦ರಲ್ಲಿ ಸುಸ್ಸಜಿತ ಕಾರ್ಮಿಕ ಸಮುದಾಯ ಭವನ ನಿರ್ಮಿಸಲಾಗಿದೆ. ಮುಖ್ಯ ಆಡಳಿತಾಧಿಕಾರಿಗಳು, ದಿ ಮೈಸೂರ್ ಪೇಪರ್ ಮಿಲ್ಸ್ ಲಿಮಿಟೆಡ್ ರವರು ತಾಲೂಕಿನಲ್ಲಿರುವ ಕಾರ್ಮಿಕರು ಮತ್ತು ಅವರ ಅವಲಂಬಿತರ ಉಪಯೋಗಕ್ಕೆ ಸರ್ವೇ ನಂ. ೨೦. ಕಸಬಾ ಹೋಬಳಿ, ಉಜ್ಜಯಿನಿಪುರ ಗ್ರಾಮ, ಭದ್ರಾವತಿ ತಾಲ್ಲೂಕಿನಲ್ಲಿ ಕಾರ್ಖಾನೆಗೆ ಸೇರಿದ ೬೭ ಎಕರೆ ೧೨ ಗುಂಟೆ ಭೂ ಭಾಗದಲ್ಲಿ ೨ ಎಕರೆ ಜಮೀನನ್ನು ಸಮುದಾಯ ಭವನ ನಿರ್ಮಿಸಲು ಕರ್ನಾಟಕ ಕಾರ್ಮಿಕ ಕಲ್ಯಾಣ ಮಂಡಳಿಗೆ ನೀಡಿರುತ್ತಾರೆ.
ಜಿಲ್ಲೆಯಲ್ಲಿ ೨೦೨೪-೨೫ನೇ ಸಾಲಿನಲ್ಲಿ ೧೮೭ ಸಂಸ್ಥೆಗಳಿಂದ ೩೯೯೬೯ ಕಾರ್ಮಿಕರು ಮಂಡಳಿಗೆ ರು..೨೪,೧೬,೩೪೯ ವಂತಿಕೆ ಪಾವತಿಸಿರುತ್ತಾರೆ. ತಾಲೂಕಿನಲ್ಲಿ ೩೬ ಸಂಸ್ಥೆಗಳ ೩೫೨೧ ಕಾರ್ಮಿಕರು ಕೆಲಸ ನಿರ್ವಹಿಸುತ್ತಿದ್ದು, ಮಂಡಳಿಗೆ ರೂ. ೨,೧೨,೦೮೧ ಗಳನ್ನು ವಂತಿಕೆಯನ್ನು ಕರ್ನಾಟಕ ಕಾರ್ಮಿಕ ಕಲ್ಯಾಣ ಮಂಡಳಿಗೆ ಪಾವತಿಸಿರುತ್ತಾರೆ. ತಾಲೂಕಿನಲ್ಲಿ ಮಂಡಳಿಗೆ ವಂತಿಕೆ ಪಾವತಿಸುವ ಹಾಗು ಸುತ್ತಮುತ್ತಲಿನ ಸಂಘಟಿತ ಕಾರ್ಮಿಕರು ಹಾಗೂ ಅವರ ಅವಲಂಬಿತರ ಉಪಯೋಗಕ್ಕೆ ಮತ್ತು ಸಾರ್ವಜನಿಕರ ಉಪಯೋಗಕ್ಕಾಗಿ ಸಮುದಾಯ ಭವನದ ಅವಶ್ಯಕತೆ ಇರುವುದನ್ನು ಮನಗಂಡು ೯.೫ ಕೋ. ರು. ಮೊತ್ತದಲ್ಲಿ ಸಮುದಾಯ ಭವನ ನಿರ್ಮಿಸಲು ದಿನಾಂಕ: ೦೪-೧೧-೨೦೨೨ ರಂದು ನಡೆದ ೯೪ನೇ ಮಂಡಳಿ ಸಭೆಯಲ್ಲಿ ನಿರ್ಣಯಿಸಿ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ವತಿಯಿಂದ ಟೆಂಡರ್ ಕರೆದು ಸುಸಜ್ಜಿತವಾದ ಸಮುದಾಯ ಭವನವನ್ನು ನಿರ್ಮಿಸಲಾಗಿದೆ. ಸಮುದಾಯ ಭವನದಲ್ಲಿ ಪಾಕೋಪಕರಣ ಹಾಗೂ ಪೀಠೋಪಕರಣಗಳ ಸೌಲಭ್ಯವನ್ನು ಒದಗಿಸಲು ಕಾರ್ಮಿಕ ಕಲ್ಯಾಣ ಮಂಡಳಿಯಿಂದ ಕೋರಲಾಗಿರುತ್ತದೆ, ಅದರಂತೆ ರು. ೯೪ ಲಕ್ಷ ಮೊತ್ತದಲ್ಲಿ ಖರೀದಿಸಿ ಪೂರೈಕೆ ಮಾಡಿರುತ್ತಾರೆ.